ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಭ್ಯಾಸದಿಂದ ಸತ್ವವಿಕಾಸ

Last Updated 13 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ |ಆಯವದರಿಂ ಭಟನ ಸತ್ತ್ವ ಶಿಕ್ಷಣಕ್ಕೆ||
ಸ್ಪೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ |
ಶ್ರೇಯಸಿಗೆ ಸೋಪಾನ- ಮಂಕುತಿಮ್ಮ || 735 |

ಪದ-ಅರ್ಥ: ರಣವಿಜಯ=ಯುದ್ಧದಲ್ಲಿ ಜಯ, ಪರಿಭವ=ಸೋಲು, ಗಣನೆ=ಲೆಕ್ಕಾಚಾರ, ಆಯವದರಿಂ=ಆಯವು(ಅವಕಾಶ)+ಅದರಿಂ (ಅದರಿಂದ), ಭಟನ=ಸೈನಿಕನ, ಸ್ಪೀಯ=ಸ್ವಂತದ, ನಿಜಶಕ್ತಿಯಭ್ಯಾಸ=ನಿಜಶಕ್ತಿಯ (ಸ್ವಂತಶಕ್ತಿಯ)+ಅಭ್ಯಾಸ, ಸೋಪಾನ=ಮೆಟ್ಟಿಲು.

ವಾಚ್ಯಾರ್ಥ: ಯುದ್ಧದಲ್ಲಿ ಜಯ-ಅಪಜಯಗಳ ಲೆಕ್ಕ ನಾಯಕನಿಗೆ ಇರಲಿ. ಅದು ಸೈನಿಕನ ಸತ್ವದ ಶಿಕ್ಷಣಕ್ಕೆ ಒಂದು ಅವಕಾಶ. ಇರುವ ಶಕ್ತಿಯ ಅಭ್ಯಾಸವೇ ಸ್ವಂತದ ಶಕ್ತಿಯ ವಿಕಾಸ. ಅದೇ ಶ್ರೇಯಸ್ಸಿನ ಮೆಟ್ಟಿಲು.

ವಿವರಣೆ: ಅವನೊಬ್ಬ ಸೊಣಕಲ ಯುವಕ. ಯಾವಾಗಲೂ ನೆಗಡಿ, ಕೆಮ್ಮು, ಜ್ವರ. ಚಿಕ್ಕ ಕೆಲಸ ಮಾಡಿದರೂ ಏದುಸಿರು ಬರುತ್ತಿತ್ತು. ಅವನಿದ್ದ ಊರು ಕಾಡಿನ ಪಕ್ಕದ್ದು. ಅವನ ರಾಜ್ಯದ ಕಡೆಯ ಊರು. ವೈರಿ ಸೈನಿಕರ ದಾಳಿಯಾದರೆ ಈ ಊರೇ ಮೊದಲು ಬಲಿ. ಇವನ ರಾಜ್ಯದ ಸೈನ್ಯದ ನಾಯಕ, ಇವನೂರಿನವನೇ. ಈ ಯುವಕನ ಕಷ್ಟ ನೋಡಲಾಗದೆ, ಅವನನ್ನು ಸೈನ್ಯಕ್ಕೆ ಸೇರಿಸಿಕೊಂಡ.
ಅವನಿಗೊಂದು ಕೆಲಸ. ದಿನನಿತ್ಯ ಬೆಟ್ಟದ ಮೇಲೇರಿ ಹೋಗಿ, ಅಲ್ಲಿದ್ದ ಒಂದು ಎತ್ತರದ ಮರವನ್ನು ಹತ್ತಿ, ತಮ್ಮ ರಾಜ್ಯದ ಧ್ವಜವನ್ನು ಕೊಂಬೆಗೆ ಕಟ್ಟಿ, ಜೋರಾಗಿ ಕಹಳೆ ಊದಿ ಬರುವುದು. ಸಂಜೆ ಮತ್ತೆ ಹೋಗಿ ಧ್ವಜ ಇಳಿಸಿಕೊಂಡು, ಕಹಳೆ ಊದಿ ಬರುವುದು. ಅವನಿಗೆ ಯುದ್ಧದ ಯಾವ ಶಿಕ್ಷಣವೂ ಇಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಯುವಕ ಒಪ್ಪಿದ. ಮೊದಲನೆಯ ದಿನ ಬೆಟ್ಟ ಹತ್ತುವುದು ಅಸಾಧ್ಯವೆಂದು ತೋರಿತು. ನಿಂತು, ನಿಂತು, ಉಸಿರು ಹಿಡಿದುಕೊಂಡು ಹತ್ತಿದ. ಮರ ಹತ್ತುವುದು ಮತ್ತೂ ಕಷ್ಟ. ಹೇಗೋ ಹತ್ತಿದ. ಕಹಳೆ ಊದಲು ಉಸಿರೇ ಇಲ್ಲ. ಮರದಮೇಲೇ ಕುಳಿತು ಸುಧಾರಿಸಿಕೊಂಡು ಊದಿದ. ಮತ್ತೆ ಸಂಜೆ ಅಲ್ಲಿಗೆ ಹೋಗುವುದು ಅಸಾಧ್ಯವೆಂದೇ ಕಂಡಿತು. ಆದರೇನು ಮಾಡು ವುದು, ನಾಯಕನ ಆಜ್ಞೆ ಇದೆಯಲ್ಲ. ಕಷ್ಟಪಟ್ಟು ಹತ್ತಿದ. ಹೀಗೆ ಒದ್ದಾಡಿಕೊಂಡೇ ಒಂದು ವರ್ಷ ಕೆಲಸ ಮಾಡಿದ. ಯುದ್ಧವಾಗಲೇ ಇಲ್ಲ. ನಾಯಕನ ಬಳಿ ಹೋಗಿ ಗೋಳು ಹೇಳಿಕೊಂಡ. ನನ್ನಿಂದ ಸೈನ್ಯಕ್ಕೆ, ರಾಜ್ಯಕ್ಕೆ ಏನು ಪ್ರಯೋಜನ? ಯುದ್ಧದ ತರಬೇತಿಯಾಗಿದ್ದರೆ ಏನಾದರೂ ಸೇವೆಯಾಗುತ್ತಿತ್ತು ಎಂದ. ನಾಯಕ ನಕ್ಕು ಹೇಳಿದ, “ಈಗ ನಿನ್ನ ಆರೋಗ್ಯ ಸುಧಾರಿಸಿದೆ, ದೇಹ ಬಲವಾಗಿದೆ, ಯಾವ ರೋಗವೂ ಕಾಡುತ್ತಿಲ್ಲ. ನಾನು ಹೇಳಿದ ಕೆಲಸ, ಯುದ್ಧಕ್ಕೆ ಯಾವ ಪ್ರಯೋಜನವಿಲ್ಲದೆ ಹೋದರೂ, ನಿನ್ನ ದೇಹ ಪಟುವಾಗಲು ಸಾಧನವಾಯಿತು”. ಈ ಕಗ್ಗದ ಆಂತರ್ಯದ ಅರ್ಥ ಇದೇ.

ಯುದ್ಧದಲ್ಲಿ ಜಯವಾಯಿತೋ, ಅಪಜಯವಾಯಿತೋ ಎನ್ನುವುದು ನಾಯಕ ಮಾಡುವ ಲೆಕ್ಕ. ಯುದ್ಧಕ್ಕೆ ಸಿದ್ಧನಾಗುವುದು, ಸೈನಿಕನಿಗೊಂದು ಶಿಸ್ತು. ಆ ಶಿಸ್ತು ಅವನನ್ನು ಗಟ್ಟಿಮಾಡುತ್ತದೆ, ಮನಸ್ಸನ್ನು ಹುರಿಗೊಳಿಸಿ ಸತ್ವವನ್ನು ಬೆಳೆಸುತ್ತದೆ. ನಿತ್ಯದ ಅಭ್ಯಾಸ, ಪರಿಶ್ರಮ ಅವನ ಸ್ವಂತ ಶಕ್ತಿಯ ವಿಕಾಸವನ್ನುಂಟುಮಾಡುತ್ತದೆ. ಸ್ವಶಕ್ತಿಯ ವಿಕಾಸ, ಆತ್ಮವಿಕಾಸವನ್ನು ಕುದುರಿಸುತ್ತದೆ. ಆತ್ಮವಿಕಾಸ ಬಲಿತಾಗ, ಯಶಸ್ಸು ಹಿಂಬಾಲಿಸಿ ಬರುತ್ತದೆ. ಹಾಗೆಯೇ ನಿತ್ಯಜೀವನವೆಂಬ ಯುದ್ಧದಲ್ಲಿ ಸೈನಿಕರಾದ ನಮ್ಮೆಲ್ಲರಿಗೂ ಒಂದು ಶಿಸ್ತು, ವ್ಯವಸ್ಥೆ ಇದ್ದರೆ, ವ್ಯಕ್ತಿಯಾಗಿ, ದೇಶವಾಗಿ ಯಶಸ್ಸು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT