ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಸಾಮಾನ್ಯ ಜನರ ಬದುಕಿಗೆ ಸಲಹೆ

Last Updated 6 ಮಾರ್ಚ್ 2020, 20:35 IST
ಅಕ್ಷರ ಗಾತ್ರ

ಕಡಲ ಕಡೆದರು ಸುರಾಸುರರು ನಿಜಬಲದಿಂದ |

ಕುಡಿದನದನು ತಪಸ್ಸಿನಿಂದ ಕುಂಭಜನು ||

ಕಡಮೆಜನ ಪಾರಗಾಂಬರೆ ಗಾಸಿಯನು ಪಡದೆ ?|

ಪೊಡವಿ ಬಾಳ್ವೆಯುಮಂತು – ಮಂಕುತಿಮ್ಮ
⇒|| 259 ||

ಪದ-ಅರ್ಥ: ಕುಂಭಜ=ಅಗಸ್ತ್ಯಋಷಿ, ಕಡಮೆಜನ=ಅಲ್ಪಶಕ್ತಿಯ ಜನರು, ಪಾರಗಾಂಬರೆ=ದಾಟುವರೆ, ದಡವನ್ನು ತಲುಪುವರೆ, ಪೊಡವಿ=ಭೂಮಿ, ಬಾಳ್ಪೆಯುಮಂತು=ಬಾಳ್ಪೆಯು(ಬಾಳು)+ಅಂತು.

ವಾಚ್ಯಾರ್ಥ: ಸುರ, ಅಸುರರು ತಮ್ಮ ಪರಾಕ್ರಮದಿಂದ ಸಮುದ್ರವನ್ನು ಕಡೆದರು, ಅಗಸ್ತ್ಯಮುನಿ ಆ ಸಮುದ್ರವನ್ನು ತನ್ನ ತಪಶ್ಯಕ್ತಿಯಿಂದ ಕುಡಿದುಬಿಟ್ಟ. ಆ ಪರಿಯ ಶಕ್ತಿ ಇಲ್ಲದ ಜನ ಪೆಟ್ಟು ತಿನ್ನದೆ ಬದುಕನ್ನು ದಾಟಬಲ್ಲರೆ?

ವಿವರಣೆ: ಕಗ್ಗದ ಮೊದಲ ಎರಡು ಸಾಲುಗಳು ಪುರಾಣಗಳ ಎರಡು ಸಂದರ್ಭಗಳ ಸಂಕ್ಷಿಪ್ತ ಕಥೆಯನ್ನು ಹೇಳುತ್ತವೆ. ಮೊದಲನೆಯದು ಸಮುದ್ರಮಥನದ ಕಥೆ ಅಮೃತಕ್ಕಾಗಿ ಸುರರು ಮತ್ತು ಅಸುರರು ಸಮುದ್ರವನ್ನು ಕಡೆಯಲು ತೀರ್ಮಾನಿಸಿದರು. ಅದಕ್ಕೆ ಕಡೆಗೋಲು ಬೇಕಲ್ಲ! ಮಂದರಪರ್ವತವೇ ಕಡೆಗೋಲಾಯಿತು, ವಾಸುಕಿಯೇ ಹಗ್ಗವಾಯಿತು, ವಿಷ್ಣುವೇ ಆಮೆಯ ರೂಪದಿಂದ ಮಂದಾರಪರ್ವತಕ್ಕೆ ಅಡಿಪಾಯವಾಗಿ ನಿಂತ. ಸಮುದ್ರವನ್ನು ಕಡೆದಾಗ ಕೊನೆಗೆ ಬಂದ ಅಮೃತವನ್ನು ವಿಷ್ಣು ಮೋಹಿನಿಯ ರೂಪದಿಂದ ದೇವತೆಗಳಿಗೆ ಮಾತ್ರ ದೊರಕುವಂತೆ ಮಾಡಿದ. ಇದೊಂದು ಅಸಾಮಾನ್ಯವಾದ ಘಟನೆ. ಇದು ಅಸಾಧ್ಯ ಪರಾಕ್ರಮದ ಕಥೆ. ಸುರರು ಮತ್ತು ಅಸುರರು ಒಂದಾಗಿ ತಮ್ಮ ಶಕ್ತಿಗಳನ್ನೆಲ್ಲ ಬಳಸಿ ಸಾಧಿಸಿದ ಕಾರ್ಯವಿದು. ಪರಾಕ್ರಮದ, ಶೌರ್ಯದ ಗಾಥೆ ಈ ಕಥೆ.

ಕಡಲನ್ನು ಕಡೆಯಲು ಇಷ್ಟೊಂದು ಪರಾಕ್ರಮದ ಬಳಕೆಯಾದರೆ ಕುಂಭಜ ಎಂದರೆ ಅಗಸ್ತ್ಯಋಷಿ ಇಡೀ ಸಮುದ್ರವನ್ನು ಒಂದೇ ಆಪೋಶನದಲ್ಲಿ ಕುಡಿದುಬಿಟ್ಟಿದ್ದು ಮತ್ತೊಂದು ಪುರಾಣ ಕಥೆ. ಇದು ವ್ಯಾಸರು ರಚಿಸಿದ ಮಹಾಭಾರತದ ವನಪರ್ವದಲ್ಲಿ ಬರುವ ಕಥೆ. ಕೃತಯುಗದಲ್ಲಿ ಕಾಲೇಯರೆಂಬ ಅತ್ಯಂತ ಕ್ರೂರರಾದ, ಪರಾಕ್ರಮಿಗಳಾದ ರಾಕ್ಷಸರಿದ್ದರು. ಅವರು ಸಮುದ್ರದ ತಳದಲ್ಲಿ ನೆಲೆಸಿ ಪ್ರತಿರಾತ್ರಿ ಹೊರಬಂದು ಋಷಿಗಳನ್ನು ನಾಗರಿಕರನ್ನು ಕೊಂದು ಮರಳಿ ಸಮುದ್ರ ಸೇರುತ್ತಿದ್ದರು. ದೇವತೆಗಳಿಗೆ ಏನು ಮಾಡಬೇಕೆಂಬುದು ತಿಳಿಯದಾಯಿತು. ಆಗ ವಿಷ್ಣುವಿನ ಸಲಹೆಯಂತೆ ದೇವತೆಗಳು ಅಗಸ್ತ್ಯಮುನಿಯ ಆಶ್ರಮಕ್ಕೆ ಬಂದು ಬೇಡಿಕೊಂಡರು. ಎಲ್ಲ ವಿಷಯವನ್ನು ತಿಳಿದ ಮುನಿ, ‘ಲೋಕಹಿತಕ್ಕಾಗಿ ನಾನು ಸಮುದ್ರವನ್ನು ಕುಡಿದು ಬರಿದು ಮಾಡುತ್ತೇನೆ. ಆಗ ನೀವೆಲ್ಲ ನುಗ್ಗಿ ರಾಕ್ಷಸರನ್ನೆಲ್ಲ ಸಂಹರಿಸಿಬಿಡಿ’ ಎಂದು ಹೇಳಿ ಸಮುದ್ರತೀರದಲ್ಲಿ ಕುಳಿತು ಎಲ್ಲರೂ ನೋಡುತ್ತಿರುವಂತೆ ಇಡೀ ಸಮುದ್ರವನ್ನು ಒಂದೇ ಆಪೋಶನದಲ್ಲಿ ಕುಡಿದುಬಿಟ್ಟ. ಕಂಗಾಲಾಗಿ ನಿಂತ ರಾಕ್ಷಸರನ್ನು ತಮ್ಮ ದಿವ್ಯಾಯುಧಗಳಿಂದ ದೇವತೆಗಳು ಕೊಂದುಹಾಕಿ ಭೂಮಿಯನ್ನು ರಕ್ಷಿಸಿದರು. ಈ ಕ್ರಿಯೆ ಅಗಸ್ತ್ಯ ಮುನಿಯ ಆಧ್ಯಾತ್ಮಿಕ ಶಕ್ತಿಯ ಫಲ.

ಮೊದಲನೆಯ ಸಾಧನೆ ಪರಾಕ್ರಮದ ಫಲ, ಎರಡನೆಯದು ಋಷಿಯ ತಪಸ್ಸಿನ ಹಾಗೂ ಆಧ್ಯಾತ್ಮಿಕ ಶಕ್ತಿಯ ಫಲ.

ಈ ಕಗ್ಗದ ಕಾಳಜಿಯೆಂದರೆ ದೇಹದ ಪರಾಕ್ರಮ ಹಾಗೂ ತಪಸ್ಸಿನ ಸಾಧನೆ ಇದ್ದವರು ಹೇಗೋ ಜಯಗಳಿಸುತ್ತಾರೆ. ಆದರೆ ಸಾಮಾನ್ಯಜನ, ಇಂತಹ ಶಕ್ತಿ ಇಲ್ಲದ ಜನ ಸಾಧನೆಯ ದಾರಿಯಲ್ಲಿ ಪೆಟ್ಟು ತಿನ್ನುತ್ತಾರಲ್ಲ! ಭೂಮಿಯಲ್ಲಿ ಹುಟ್ಟಿದ ಸಾಮಾನ್ಯ ಜನರ ಬದುಕೇಹೀಗೆಯೇ? ಅವರ ಬದುಕೂ ಸುಂದರವಾಗಬೇಕಾದರೆ ಅವೆರಡೂ ಶಕ್ತಿಗಳನ್ನು ಕೊಂಚಮಟ್ಟಿಗಾದರೂ ಸಂಪಾದಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT