ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸ್ವರ್ಗದಾಸೆ

Last Updated 6 ಜನವರಿ 2021, 19:30 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯನ್ನು ಏಕರಾಜ ಎನ್ನುವವನು ಆಳುತ್ತಿದ್ದ. ಅವನ ಮಗನಾಗಿ ಬೋಧಿಸತ್ವ ಜನಿಸಿದ್ದ. ಅವನ ಹೆಸರು ಚಂದ್ರಕುಮಾರ. ಅವನು ಉಪರಾಜನಾಗಿದ್ದ. ಖಂಡಹಾಲ ಎಂಬ ಬ್ರಾಹ್ಮಣ ರಾಜಪುರೋಹಿತನಾಗಿದ್ದ. ರಾಜನಿಗೆ ಅವನ ಮೇಲೆ ತುಂಬ ನಂಬಿಕೆ. ಆದರೆ ಆತ ದುರಾಸೆಯುಳ್ಳವನು. ತಾನೇ ನ್ಯಾಯಾಧೀಶನಾಗಿ ಅನ್ಯಾಯಗಳನ್ನು ಮಾಡುತ್ತಿದ್ದ. ಲಂಚ ಪಡೆದು ಅನ್ಯಾಯಿಗಳ ಪರವಾಗಿ ನ್ಯಾಯ ನೀಡುತ್ತಿದ್ದ. ಒಮ್ಮೆ ಅತ್ಯಂತ ಧರ್ಮಿಷ್ಠನಾದ ವ್ಯಕ್ತಿಗೆ ಶಿಕ್ಷೆ ನೀಡಿ ಜೈಲಿಗೆ ಹಾಕಿಸುವುದನ್ನು ಕಂಡು ಚಂದ್ರಕುಮಾರ ತಾನೇ ಸರಿಯಾದ ತೀರ್ಮಾನ ನೀಡಿ, ತಪ್ಪಿತಸ್ಥನಿಗೆ ಶಿಕ್ಷೆ ನೀಡಿದ. ಪ್ರಜೆಗಳೆಲ್ಲ ಜೈಕಾರ ಮಾಡಿದರು. ರಾಜ ಅದನ್ನು ಮೆಚ್ಚಿ ನ್ಯಾಯಾಧೀಶನ ಪದವಿಯನ್ನು ಚಂದ್ರಕುಮಾರನಿಗೇ ಕೊಟ್ಟ. ಇದರಿಂದಾಗಿ ಖಂಡಹಾಲನ ಆದಾಯ ನಿಂತುಹೋಯಿತು. ಆತ ಹೇಗಾದರೂ ಚಂದ್ರಕುಮಾರನನ್ನು ಕೊಲ್ಲಿಸಬೇಕೆಂದು ಯೋಜನೆ ಮಾಡತೊಡಗಿದ.

ಒಂದು ದಿನ ರಾಜ ಬ್ರಾಹ್ಮೀಮುಹೂರ್ತದಲ್ಲಿ ಕನಸೊಂದನ್ನು ಕಂಡ. ಅದರಲ್ಲಿ ತ್ರಯೋತಿಂಶ ಸ್ವರ್ಗವನ್ನು ಕಂಡ. ಅಲ್ಲಿಯ ವೈಭವ, ಭೋಗಭಾಗ್ಯಗಳಿಗೆ ಮನಸೋತ. ಮರುದಿನ ಪುರೋಹಿತ ಖಂಡಹಾಲನನ್ನು ಕರೆದು ಆ ಸ್ವರ್ಗವನ್ನು ಪಡೆಯುವುದು ಹೇಗೆ ಎಂದು ಕೇಳಿದ. ಇಂಥ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಪುರೋಹಿತ ಯೋಚನೆ ಮಾಡಿ ಹೇಳಿದ, ‘ಮಹಾರಾಜಾ, ನಿಮಗೆ ಈ ಸ್ವರ್ಗಪ್ರಾಪ್ತಿ ಖಂಡಿತ. ಆದರೆ ಅದಕ್ಕಾಗಿ ತಾವು ಬಹುದೊಡ್ಡ ಬಲಿಗಳನ್ನು ಕೊಡಬೇಕಾಗುತ್ತದೆ’. ‘ಯಾವ ಬಲಿಯಾದರೂ ಸರಿ, ನನಗೆ ಆ ಸ್ವರ್ಗ ಬೇಕು’ ಎಂದ ರಾಜ. ಪುರೋಹಿತ ಹೇಳಿದ, ‘ಸ್ವಾಮೀ, ಇದಕ್ಕೆ ತಮ್ಮ ನಾಲ್ಕು ಜನ ರಾಜಪುತ್ರರನ್ನು, ನಾಲ್ಕು ರಾಜಪುತ್ರಿಯರನ್ನು, ಎಲ್ಲ ವರ್ಣಗಳ ನಾಲ್ಕು, ನಾಲ್ಕು ಹಿರಿಯರನ್ನು, ನಾಲ್ಕು ಶ್ರೇಷ್ಠ ಆನೆಗಳನ್ನು ನಾಲ್ಕು ಶ್ರೇಷ್ಠ ಕುದುರೆಗಳನ್ನು ಬಲಿಕೊಡಬೇಕು. ನೀವು ಹೇಳಿದರೆ ನಾನೇ ಯಜ್ಞದ ವ್ಯವಸ್ಥೆ ಮಾಡುತ್ತೇನೆ’. ಸ್ವರ್ಗದ ಆಸೆಗೆ ಕುರುಡಾಗಿದ್ದ ರಾಜ ಒಪ್ಪಿಗೆ ಕೊಟ್ಟ.

ಸಮಾಜದಲ್ಲಿ ಕೋಲಾಹಲವಾಯಿತು. ರಾಜನ ವೃದ್ಧ ತಂದೆ-ತಾಯಿಯರು ರಾಜನನ್ನು ಪರಿಪರಿಯಾಗಿ ಬೇಡಿಕೊಂಡರು. ರಾಜನ ಪಟ್ಟಮಹಿಷಿ, ‘ನಿಮಗೆ ಸರಿ ಎನಿಸಿದರೆ ನನ್ನನ್ನು ತುಂಡು ತುಂಡು ಮಾಡಿ, ಏಳು ಬಾರಿ ಯಜ್ಞ ಮಾಡಿಸಿ, ಆದರೆ ನನ್ನ ಮಕ್ಕಳನ್ನು, ಪ್ರಜೆಗಳನ್ನು, ಪ್ರಾಣಿಗಳನ್ನು ಕೊಲ್ಲಬೇಡಿ. ಯಾವ ಪ್ರಾಣಿಯ ಹತ್ಯೆಯಿಂದಲೂ ಸ್ವರ್ಗಪ್ರಾಪ್ತಿಯಾಗಲಾರದು’ ಎಂದು ರಾಜನ ಕಾಲಿಗೆ ಬಿದ್ದಳು. ರಾಜನ ಮನಸ್ಸು ಕರಗಲಿಲ್ಲ. ಚಂದ್ರಕುಮಾರನ ತಮ್ಮಂದಿರು ಬಂದು ಬೇಡಿದರು, ‘ಅಪ್ಪಾ, ನಮ್ಮನ್ನು ಕೊಲ್ಲುವುದು ಬೇಡ. ನಮ್ಮನ್ನು ತಮ್ಮ ಕುದುರೆಯ ಲಾಯದಲ್ಲಿ ಸೇವಕರನ್ನಾಗಿ ಇಟ್ಟುಬಿಡಿ. ನಾವು ಸೇವೆ ಮಾಡಿಕೊಂಡಿರುತ್ತೇವೆ’. ಮಕ್ಕಳು ಬೇಡಿಕೊಂಡಾಗ ರಾಜನ ಮನಸ್ಸು ಕರಗಿದಂತೆ ತೋರಿತು. ತಕ್ಷಣ ಖಂಡಹಾಲ, ಈ ರಾಜ ಮನಸ್ಸನ್ನು ಬದಲಿಸುವಂತೆ ಕಾಣುತ್ತಾನೆ ಎಂದುಕೊಂಡು, ‘ರಾಜಾ, ಮುಹೂರ್ತ ಸಮೀಪಿಸುತ್ತಿದೆ. ತಡಮಾಡಿದರೆ ಸ್ವರ್ಗ ತಪ್ಪಿಹೋಗುತ್ತದೆ’ ಎಂದು ಅವನ ಮನವನ್ನು ಬಲಿಸಿದ.

ಕೊನೆಗೆ ಚಂದ್ರಕುಮಾರ ರಾಜನ ಮುಂದೆ ಬಂದು, ‘ರಾಜಾ, ನಾವು ಪ್ರಾಣ ಕಳೆದುಕೊಳ್ಳಲು ಸಿದ್ಧರಾಗಿದ್ದೇವೆ. ಆದರೆ ಅದರಿಂದ ಸ್ವರ್ಗ ಸಿಕ್ಕೇ ಸಿಗುತ್ತದೆಂಬ ಖಾತ್ರಿ ಏನು? ಅದಕ್ಕೆ ಮೊದಲಿಗೆ ಖಂಡಹಾಲ, ತನ್ನ ನಾಲ್ಕು ಮಕ್ಕಳನ್ನು ಬಲಿಕೊಟ್ಟು ಸ್ವರ್ಗಕ್ಕೆ ಹೋಗಲಿ. ಅವನಿಗೆ ಅದು ದೊರಕಿದ ಮೇಲೆ ತಾವೂ ಸಂತೋಷವಾಗಿ ನಮ್ಮನ್ನೆಲ್ಲ ಕೊಂದು ಹೋಗಬಹುದು’ ಎಂದ. ಮೂರ್ಖ ರಾಜ ಒಪ್ಪಿ ಅಂತೆಯೇ ಖಂಡಹಾಲನಿಗೆ ಆಜ್ಞೆ ಮಾಡಿದ. ಆತ ಗಾಬರಿಯಾಗಿ ಓಡಲು ಹೊರಟಾಗ ಜನ ಅವನಿಗೆ ಕಲ್ಲು ಹೊಡೆದು ಕೊಂದು ಹಾಕಿದರು. ಚಂದ್ರಕುಮಾರನನ್ನೇ ರಾಜನನ್ನಾಗಿ ಮಾಡಿದರು.

ರಾಜ ಮೂರ್ಖನಾದರೆ ಮೋಸ ಮಾಡುವವರು ನೂರೆಂಟು ಜನ ಹುಟ್ಟಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT