ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಣ| ಕನ್ನಡ–ಮರಾಠಿ ಕಳ್ಳುಬಳ್ಳಿ ಬಾಂಧವ್ಯ

ಭಾಷೆಯ ಹೆಸರಿನಲ್ಲಿ ಕದನಕ್ಕೆ ಇಳಿಯುವವರಿಗೆ ಸಂತ ತುಕಾರಾಮ ಸೂತ್ರವೇ ಮದ್ದು
Last Updated 6 ನವೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಕನ್ನಡ ಸತಿಗೆ ಮರಾಠಿ ಪತಿ
ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥವಾಗದು
ಹಾಗೆ ಮಾಡದಿರು ಕಮಲಾಪತಿ ಎನ್ನನು,

ನೀಡೆನಗೆ ಸಜ್ಜನರ ಸಹವಾಸವನು
ಅವಳು ಕರೆದಳು ‘ಬಾ ಇಲ್ಲಿ’ ಎಂದು
ಅವನು ನೀಡಿದನು ಸವಟು ತಂದು
ತುಕಾರಾಮನೆಂಬ ಪರಸ್ಪರ ಭೇದವಿದ್ದಲ್ಲಿ
ಸುಖದ ಬದಲಿಗೆ ದುಃಖವೇ ಬೆಳೆಯುವುದಲ್ಲಿ

ಡಿ.ಎಸ್.ಚೌಗಲೆ

ಇದು ಸಂತ ತುಕಾರಾಮರ ಅಭಂಗ. ಕನ್ನಡ ಮಾತನಾಡುವ ಹೆಣ್ಣು, ಮರಾಠಿ ಭಾಷಿಕ ಗಂಡು. ಇವರಿಬ್ಬರ ಮದುವೆ ನಡೆದಿರಲು ಅವರ ದಾಂಪತ್ಯ ಹೇಗಿರಬಹುದು? ಪರಸ್ಪರ ಭಾಷೆಗಳು ಅರ್ಥವಾಗುವುದಿಲ್ಲ. ಆದರೂ ಸಂಸಾರ ಸಾಗಬೇಕಲ್ಲ! ಅನ್ಯೋನ್ಯತೆ, ಒಲವು ಸ್ಫುರಿಸಬೇಕಲ್ಲ!

ತುಕಾರಾಮರು ಎಂಥ ಭಾಷಿಕ ಏಕತೆ ಮೆರೆ ಯುತ್ತಾರೆಂದರೆ, ಆ ಅಭಂಗದಲ್ಲಿ ಅವರು ವಿಶ್ಲೇಷಿಸುತ್ತ- ಪತ್ನಿಯು ‘ಬಾ ಇಲ್ಲಿ’ ಎಂದು ಕರೆದಾಗ ಪತಿಯಾದವನು ಪ್ರೀತಿಯಿಂದ ‘ಸವಟು ತಂದು ಬಡಿಸುವುದು’ ಇದೆಯಲ್ಲ, ಇದೊಂದು ನವಿರು ಪ್ರೇಮದ ರೂಪಕ ಅಲ್ಲದೆ ಬೇರೇನೂ ಅಲ್ಲ. ಭಾಷೆಯನ್ನು ಮೀರಿ ಒಲವು ಗೆಲುವು ಪಡೆಯುವುದು ಇದೇ. ತುಕಾರಾಮರು ‘ಒಂದುಪಕ್ಷ ಭೇದವು ಇದ್ದಲ್ಲಿ ಸುಖವು ಮರೀಚಿಕೆಯಾದೀತು, ದುಃಖವೇ ತುಂಬೀತು’ ಎಂದು ಎಚ್ಚರಿಸುವರು. ತುಕಾರಾಮರ ಚಿಂತನೆಯ ಈ ಬದುಕು ಮತ್ತು ಸಾಮಾಜಿಕ ನಡಾವಳಿಯು ವರ್ತಮಾನದ ಸಂದರ್ಭದಲ್ಲಿ ಕನ್ನಡಿಗರದು ಮತ್ತು ಮರಾಠಿಗರದು ಆಗಬೇಕಾದ ಜರೂರಿದೆ.

ಈ ವಿದ್ರೋಹಿ (ಬಂಡಾಯ) ಕವಿಯ ಅಭಂಗ ನೆನಪಾದುದು ಮೊನ್ನೆಯ ಕರ್ನಾಟಕ ರಾಜ್ಯೋತ್ಸವ ದಿನದಂದು. ಅದು ಸಹ ಮರಾಠಿಗರ ಪ್ರತಿಭಟನೆಯ ಸಂದರ್ಭದಲ್ಲಿ! ಅವರು ಪ್ರತಿವರ್ಷದಂತೆ ‘ಕರಾಳ ದಿನ’ ಆಚರಿಸುವಾಗ ಕರ್ನಾಟಕ ಮತ್ತು ಮಹಾರಾಷ್ಟ್ರದ ಧುರೀಣರ ನಡುವೆ ನಡೆದ ಮಾತಿನ ಚಕಮಕಿಯ ಕಿಡಿ ನೆನಪಾಯಿತು. ಮಹಾರಾಷ್ಟ್ರ ಸರ್ಕಾರವು ಎಂಇಎಸ್‍ನ ಕರಾಳ ದಿನಾಚರಣೆಗೆ ಬೆಂಬಲ ನೀಡುತ್ತ ಬಂದಿದೆ. ಅಲ್ಲಿನ ನಾಯಕರ ಮಾತಿಗೆ ನಮ್ಮ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪ್ರತ್ಯುತ್ತರ ನೀಡಿದರು- ‘ಸೂರ್ಯ ಚಂದ್ರರಿರುವವರೆಗೂ ಬೆಳಗಾವಿ ಅಖಂಡ ಕರ್ನಾಟಕದ ಅವಿಭಾಜ್ಯ ಅಂಗ. ಅದನ್ನು ಯಾರಿಂದಲೂ ತಪ್ಪಿಸಲಾಗದು. ಆನೆ ನಡೆಯುವಾಗ ನಾಯಿ ಬೊಗಳಿದರೆ ತಲೆಕೆಡಿಸಿಕೊಳ್ಳಬೇಕಿಲ್ಲ... ಮಹಾರಾಷ್ಟ್ರದಲ್ಲಿ ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಸರ್ಕಾರವಿದ್ದರೂ ನಮ್ಮ ನಿಲುವು ರಾಜ್ಯದ ಹಿತವನ್ನು ದೃಷ್ಟಿಯಲ್ಲಿ ಇಟ್ಟಿರುತ್ತದೆ’. ಇದರಿಂದ ಭಾಷಾ ರಾಜಕಾರಣಕ್ಕೆ ಮತ್ತೆ ಕಾವು ಬಂದಿತ್ತು. ಆಗ ತುಕಾರಾಮರ ಅಭಂಗ ಹೆಚ್ಚು ಪ್ರಸ್ತುತ ಅನಿಸಿತು.

ಒಕ್ಕೂಟ ವ್ಯವಸ್ಥೆಯಲ್ಲಿ ಕಿಡಿ, ಬೆಳಕು ನೀಡಬೇಕೇ ಹೊರತು ಬೆಂಕಿಯನ್ನಲ್ಲ. ಈ ನೆಲದ ಮೂಲವಾದ ಬಹುತ್ವವು ಬದುಕಿದರೆ ಮಾತ್ರ ಸಕಲರಿಗೂ ಲೇಸುಂಟು ಎಂಬುದನ್ನು ಭಾಷಾ ರಾಜಕಾರಣ ಮಾಡುವವರು ಅರಿಯಬೇಕು. ಅದಕ್ಕೆಂದೇ ಈ ವಿಚಾರಗಳು ಮುನ್ನೆಲೆಗೆ ಬಂದವು.

ಗೋದಾವರಿ ನದಿ ತಟದವರೆಗಿತ್ತು ಕರುನಾಡು. ಸಹಜವಾಗಿ ತುಕಾರಾಮ ಅವರಿಗೆ ಕನ್ನಡವೂ ಗೊತ್ತಿರ ಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಬಸವಣ್ಣನ ಕಾರ್ಯಕ್ಷೇತ್ರ ಸಹ ಮಂಗಳವೇಢೆ ತನಕ ಇತ್ತು. ಅವರ ವಚನಗಳಲ್ಲಿ ‘ಬತ್ತೀಸರಾಗ’ ಮತ್ತು ವಿಶೇಷ
ರೂಪದಲ್ಲಿ ‘ಛಪ್ಪನ್ನಐವತ್ತಾರು’ ದ್ವಿರುಕ್ತಿಯ ಮರಾಠಿ ಸಂಖ್ಯಾವಾಚಿ ಪದಗಳು ಬಳಕೆಯಾಗಿವೆ. ಅವು ಭಾಷೆಯ ಭ್ರಾತೃತ್ವವನ್ನೇ ಸಾರುತ್ತವೆ. ಛಪ್ಪನ್ ಅಂದರೇನೆ ಐವತ್ತಾರು! ಇಬ್ಬರೂ ಜನೋದ್ಧಾರಕರು. ಬಂಡಾಯ ಅಥವಾ ವಿದ್ರೋಹಿ ಅಭಂಗ ಮತ್ತು ವಚನದ ಸೃಷ್ಟಿಕರ್ತರು. ಈ ಸಮಾಜೋಧಾರ್ಮಿಕ ನಡೆ ನುಡಿಯ, ಭಾಷೆಯ ಮಾಧುರ್ಯದ ಚಲನೆಯನ್ನು ಎರಡೂ ಕಡೆಯ ಜನ
ಅರ್ಥೈಸಿಕೊಳ್ಳಬೇಕು. ಮಹಾರಾಷ್ಟ್ರದ ಮನೆಮಾತಾಗಿ ರುವ ತುಕಾರಾಮರನ್ನು ವಿದ್ರೋಹಿ ಕವಿಯೆಂದು ವಿದ್ವಾಂಸರು ಕರೆಯುವರು. ಕನಕದಾಸ, ಬಸವಣ್ಣನಿದ್ದಂತೆ ಮರಾಠಿಯಲ್ಲಿ ಸಂತ ತುಕಾರಾಮ. ತುಕಾರಾಮರು ಜನರ ಬದುಕು ಹಸನಾಗಿಸಲು, ಸಾಮಾಜಿಕ ಓರೆಕೋರೆಗಳನ್ನು ತಿದ್ದಿ ಶುಚಿಗೊಳಿಸಲು ಯತ್ನಿಸಿದ ದಾರ್ಶನಿಕರು. ಅವರು ಧರ್ಮ, ಜಾತಿ, ಲಿಂಗ, ಭಾಷೆ ಕುರಿತು ಸಮರಸ ಬದುಕಿನ ಮೌಲ್ಯ ಸಾರಿದವರು. ಮರಾಠಿ ಬಂಧುಗಳಿಗೆ ಅವರೊಬ್ಬ ಮಾರ್ಗದರ್ಶಿಯೇ ಸೈ!

ಜ್ಞಾನೇಶ್ವರರಿಗೆ ಕೇಶಿರಾಜನ ಶಬ್ದಮಣಿ ದರ್ಪಣವು ಗೊತ್ತಿತ್ತು ಎಂದು ಹಿರಿಯ ವಿದ್ವಾಂಸ ರಂಶಾ ಲೋಕಾಪುರ ಹೇಳುತ್ತಾರೆ. ಅದಕ್ಕೆ ಧರ್ಮ ಪ್ರಸರಣದ ನೆಲೆಯಲ್ಲಿ ಜ್ಞಾನೇಶ್ವರಿಯ ಕನ್ನಡ ಅನುವಾದಗಳು ಬಂದವು. ಅವು ಮತ್ತು ಪಂಢರಾಪುರದ ವಿಠಲನ ವಾರಕರಿ ಸಂಪ್ರದಾಯವು ಭಾಷಿಕ ಬಂಧುತ್ವದ ಬಹುದೊಡ್ಡ ಕೊಂಡಿ ಆಗಿವೆ.

ಕನ್ನಡ- ಮರಾಠಿ ಭಾಷೆಯ ಕೊಡುಕೊಳುವ ನಿಲುವನ್ನು ಮರಾಠಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಡಾ. ಭಾಲಚಂದ್ರ ನೇಮಾಡೆ ಅವರು ತಮ್ಮದೇ ಆಲೋಚನಾ ಕ್ರಮದಲ್ಲಿ ಹೇಳುತ್ತಾರೆ. ಅವರಿಗೆ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಪ್ರಥಮ ರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡಲು ತೀರ್ಮಾನಿಸಿತು. ಭಾರತೀಯ ಭಾಷೆಗಳಲ್ಲಿ ಮೊದಲು ಮರಾಠಿಗೇ ನೀಡಬೇಕೆಂಬ ಅಭಿಲಾಷೆ ಪ್ರತಿಷ್ಠಾನದ ಅಂದಿನ ಅಧ್ಯಕ್ಷ ಡಾ. ಎಂ.ಎಂ.ಕಲಬುರ್ಗಿ ಅವರದ್ದಾಗಿತ್ತು. ಅದಕ್ಕೆ ಕಾರಣ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಮಹಾರಾಷ್ಟ್ರದೊಂದಿಗೆ ಕರುಳುಬಳ್ಳಿ ಸಂಬಂಧ ಹೊಂದಿದ್ದೇವೆ ಎನ್ನುವುದು. ಈ ಧೋರಣೆ ತಳೆದಾಗ ‘ಮಹಾರಾಷ್ಟ್ರ ರಾಜ್ಯ’ವೆಂಬ ಮರಾಠಿ ನಾಮಫಲಕ ಅನಾವರಣಗೊಳಿಸಿದ್ದ ಯಳ್ಳೂರು ಪ್ರಕರಣ ಹೊತ್ತಿ ಉರಿಯುತ್ತಿತ್ತು. ಭಾಷಿಕ ವೈಮನಸ್ಯ ಗರಿಗೆದರಿತ್ತು. ಅಂಥದ್ದರ ನಡುವೆ ವಿವೇಕಪೂರ್ಣ ನಡೆ ಪ್ರತಿಷ್ಠಾನದ ಅಧ್ಯಕ್ಷರದ್ದು. ಭಾಷೆಯನ್ನು ರಾಜಕಾರಣದ ದಾಳವನ್ನಾಗಿ ಮಾಡುವವರಿಗೆ ಜವಾಬು ದೊರೆತಿತ್ತು.

ಈ ಪ್ರಶಸ್ತಿಯನ್ನು ಸ್ವೀಕರಿಸಿ ಮಾತಾಡಿದ ನೇಮಾಡೆ ಅವರ ನುಡಿಗಳು ಕಣ್ತೆರೆಸುವಂತಿದ್ದವು. ‘ನಮ್ಮ ನಡುವಿನ ಭಾಷೆ, ಗಡಿ ಕದನಗಳು ಹೇಗೆಂದರೆ, ಒಂದು ನದಿಗೆ ಪ್ರವಾಹ ಉಕ್ಕಿ ಬಂದಂತೆ. ಪ್ರವಾಹ ಅಪಾಯಕಾರಿ ನಿಜ. ಆದರೆ ಅದು ಇಳಿಯುವುದು ಸಹ ನೈಸರ್ಗಿಕ. ಇಳಿದಾಗ ಮತ್ತದೇ ನದಿ ತಣ್ಣಗೆ ಹರಿಯುವುದು, ನದಿಯಂತೆಯೇ ಮನುಷ್ಯ ಸ್ವಭಾವಗಳು...’ ನೇಮಾಡೆಯವರು ಮುಂದುವರಿದು- ‘ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿನ ಬದುಕು ಮತ್ತು ಸಂಸ್ಕೃತಿಗಳಲ್ಲಿ, ಸಾಮಾಜಿಕ ನಡವಳಿಕೆಗಳಲ್ಲಿ ಸಾಮ್ಯವಿದೆ. ಅದು ಹೆಚ್ಚುಕಡಿಮೆ ಏಕೀಭವಿಸಿದೆ’ ಎಂದರು. ಈ ಪರಂಪರೆಯ ಚಿಂತನೆಗಳನ್ನು ನಾವು ಭಾಷೆ, ಗಡಿ ವಿಷಯದಲ್ಲಷ್ಟೇ ಅಲ್ಲ, ಧಾರ್ಮಿಕ ಸೌಹಾರ್ದದ ನೆಲೆಯಲ್ಲೂ ಗುರುತಿಸಿ ಮುನ್ನಡೆಯಬೇಕಿದೆ.

ರಂಗಭೂಮಿ ಮತ್ತು ಸಂಗೀತ ನಮ್ಮನ್ನು ಅದೆಷ್ಟು ಬೆಸೆದಿದ್ದವು. ಅಷ್ಟೇ ಯಾಕೆ ಕಲೆಗಳ ಪಟ್ಟುಗಳ ಕೊಡುಕೊಳುವಿಕೆಯೂ ಮಹತ್ವದ್ದು. 1843ರ ನವೆಂಬರ್ 5ರಂದು ಮರಾಠಿಯ ಮೊದಲ ನಾಟಕವು ಪ್ರಯೋಗ ಕಂಡಿತು. ಸಾಂಗಲಿಯ ಸಾಮಂತರಸ ಪಟವರ್ಧನರ ಪ್ರೋತ್ಸಾಹದಿಂದ ವಿಷ್ಣುದಾಸ ಭಾವೆ ಅವರು ‘ಸೀತಾ ಸ್ವಯಂವರ’ ರಚಿಸಿ ಪ್ರಯೋಗಿಸಿದರು. ಈ ನಾಟಕಕ್ಕೆ ಪ್ರೇರಣೆಯು ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಮೇಳದ ಯಕ್ಷಗಾನ. ಅಂದಿನಿಂದ ನವೆಂಬರ್ 5 ಅನ್ನು ‘ಮರಾಠಿ ರಂಗಭೂಮಿ ದಿನ’ವೆಂದು ಆಚರಿಸಲಾಗುತ್ತದೆ. 1880ರ ಆಸುಪಾಸಿನಲ್ಲಿ ‘ಸಂಗೀತ ಸೌಭದ್ರ’, ‘ಸಂಗೀತ ಶಾಕುಂತಲ’ ನಾಟಕಗಳಿಗೆ ಬೆಳಗಾವಿ ಜಿಲ್ಲೆಯ ‘ಶ್ರೀಕೃಷ್ಣ ಪಾರಿಜಾತ’ದ ಸಂಗೀತದ ಅಳವಡಿಕೆ. ಅದರ ಕರ್ತೃ ಅಣ್ಣಾಸಾಹೇಬ ಕಿರ್ಲೋಸ್ಕರರು ಮರಾಠಿ ಸಂಗೀತ ನಾಟಕದ ಪಿತಾಮಹ. ಅವರು ಹುಟ್ಟಿದ್ದು ಕರ್ನಾಟಕದ ಗುರ್ಲಹೊಸೂರಲ್ಲಿ. ಹಿಂದೂಸ್ತಾನಿ ಸಂಗೀತದ ಮೇರು ಗಾಯಕರಾದ ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ, ಭೀಮಸೇನ ಜೋಶಿ ಅವರನ್ನು ಮರಾಠಿ ಜನ ತಲೆ ಮೇಲೆ ಹೊತ್ತು ಮೆರೆಸಿದವರು. ಇಂಥ ಮಧುರ ಬಾಂಧವ್ಯ ನಮ್ಮಲ್ಲಿ ಹಾಸುಹೊಕ್ಕಾಗಿರುವಾಗ ಯಾವ ರಾಜಕೀಯ ಹುನ್ನಾರಗಳೂ ಕಳ್ಳುಬಳ್ಳಿಯ ಸಂಬಂಧವನ್ನು ಕೆಡಿಸಲಾರವು. ಈ ಚಿಂತನೆಯನ್ನು ಜನಮಾನಸದಲ್ಲಿ ಹೆಚ್ಚಾಗಿ ಬಿತ್ತಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT