ಶನಿವಾರ, ಜೂನ್ 6, 2020
27 °C
ಜಾಗತೀಕರಣಪೂರ್ವ ಮತ್ತು ಉತ್ತರದ ಬೆಳವಣಿಗೆಗಳನ್ನು ತಿರುಗಿ ನೋಡುವ ಕಾಲ...

ವಿಶ್ಲೇಷಣೆ | ಏಕಾಂತ ಕಾಣಿಸೀತೇ ಲೋಕಾಂತದ ದಾರಿ?

ಡಾ. ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

Prajavani

ಮನಸ್ಸು ಅತ್ಯಂತ ವೇಗವಾಗಿ ಓಡುತ್ತಿರುವ ಈ ಹೊತ್ತಿನಲ್ಲಿ, ಕೈಕಾಲುಗಳು ಲಾಕ್‍ಡೌನ್‍ಗೆ ಒಗ್ಗಿಕೊಳ್ಳದ ಸ್ಥಿತಿಯೊಂದು ನಿರ್ಮಾಣವಾಗಿದೆ. ಈ ಕೆಲವು ದಿನಗಳಲ್ಲೇ ಎಷ್ಟೊಂದು ಸಂಗತಿಗಳು ಮುನ್ನೆಲೆಗೆ ಬಂದು ಹಿನ್ನೆಲೆಗೆ ಸರಿಯುತ್ತಿವೆಯೆಂದರೆ, ಅಭದ್ರತೆ ಮತ್ತು ಭೀತಿಯಲ್ಲಿ ಚಿತ್ರ ವಿಚಿತ್ರ ಪ್ರತಿಕ್ರಿಯೆಗಳು ಹುಟ್ಟುತ್ತಿವೆ, ಸಾಯುತ್ತಿವೆ. ಒಂದೆಡೆ ಕುಟುಂಬಗಳು ಒಗ್ಗೂಡುತ್ತಿದ್ದರೆ, ಇನ್ನೊಂದೆಡೆ ಕೌಟುಂಬಿಕ ಹಿಂಸೆಗಳು ಎಗ್ಗಿಲ್ಲದೇ ಹೆಚ್ಚುತ್ತಿವೆ. ಹೌದು, ಎಂಥ ಅನೂಹ್ಯ ಜಗತ್ತಿನಲ್ಲಿ ನಾವು ಬಾಳುತ್ತಿದ್ದೇವಲ್ಲ. ಯಾರು ಎಂದಾದರೂ ಕಲ್ಪನೆಯಲ್ಲೂ ಇದನ್ನು ಕಂಡಿರಲಾರರು. ಇಡೀ ಜಗತ್ತು ಒಂದೇ ಅವಧಿಯಲ್ಲಿ ಮನೆಯೊಳಗೆ ಅಡಗಿಕೊಳ್ಳುವುದೆಂದರೆ!

ಎಲ್ಲ ಬಲ್ಲವರೆಂಬ ಅಹಮ್ಮಿನಲ್ಲಿ, ಅವಮಾನಿತರ, ಅಲಕ್ಷಿತರ ಬಗ್ಗೆ ಸದಾ ಯೋಚಿಸುವವರು ನಾವು, ಅವರಿಗಾಗಿ ಕೆಲಸ ಮಾಡುತ್ತಿರುವವರು ನಾವು ಎಂಬುವರೂ ಊಹಿಸಲಾಗದ ಒಂದು ಸಂಗತಿ ನಮ್ಮ ದೇಶದೊಳಗೆ ನಡೆದುಹೋಯಿತು. ನಮ್ಮ ವಲಸಿಗರು ತಮ್ಮ ಬೇರುಗಳನ್ನು ಸೇರಿಕೊಳ್ಳಲು ಮಕ್ಕಳು ಮರಿಗಳೊಂದಿಗೆ ಕಾಲ್ನಡಿಗೆಯಲ್ಲಿ ರಸ್ತೆಗೆ ಬಿದ್ದಾಗ, ‘ಛೇ!’ ಎಂಬ ಉದ್ಗಾರ ಎಷ್ಟು ಜನರಲ್ಲಿ ಹುಟ್ಟಿತೋ ಲೆಕ್ಕ ಇಲ್ಲ. ವಲಸೆಯ ಬಗ್ಗೆ ಎಷ್ಟೊಂದು ಅಧ್ಯಯನಗಳು ಈ ಮೊದಲೇ ಪ್ರಕಟವಾಗಿವೆ. ಲಾಕ್‍ಡೌನ್ ಎಂಬುದು ಅವರನ್ನು ಉಪವಾಸ ಬೀಳಿಸುತ್ತದೆ ಎಂಬ ಮುನ್ನೋಟವೇನೋ ಇತ್ತು. ಆದರೆ ಅವರು ಸಾವಿರಾರು ಕಿಲೊಮೀಟರ್ ನಡೆದಾರು ಎಂದು ಅಂದುಕೊಂಡಿರಲೇ ಇಲ್ಲ. ಮಾತೆತ್ತಿದರೆ ಯುದ್ಧದ ಪರಿಭಾಷೆಯನ್ನು ಬಳಸುವ ನಮಗೆ, ಈ ವಲಸಿಗರು ಮಾತ್ರ ‘ಯೋಧ’ರೆನಿಸಲೇ ಇಲ್ಲ.

ಸರಿಯಾಗಿ ಯೋಚಿಸಿದರೆ, ಸುರಕ್ಷಿತ ಮನೆಗಳಲ್ಲಿ ವಾಸಿಸುತ್ತಿರುವ ನಾವೆಲ್ಲರೂ ಅವರಿಗಿಂತ ಎಷ್ಟೊಂದು ದುರ್ಬಲರು ಎನ್ನುವುದು ಗೋಚರವಾಗುತ್ತದೆ. ನಮಗಾಗಿ ದುಡಿವ ಅವರು ತಮ್ಮ ಸಾವನ್ನೂ ಲೆಕ್ಕಿಸದೆ ಮಕ್ಕಳು ಮರಿಗಳೊಂದಿಗೆ ಹೊರಟೇಬಿಟ್ಟರು. ತಾವು ಕಟ್ಟಿದ ಮಹಲುಗಳಲ್ಲಿ ತಣ್ಣಗೆ ಕುಳಿತವರ ಯಾವ ಸಹಾಯವನ್ನೂ ಯಾಚಿಸದೆ, ಅವರ ಸಾಕ್ಷಿಪ್ರಜ್ಞೆಯನ್ನು ಕೆಣಕುವಂತೆ 400-500 ಕಿಲೊಮೀಟರುಗಳನ್ನು ಕ್ರಮಿಸಿಯೇಬಿಟ್ಟರು. ಆಗಲೂ ಅವರನ್ನು ನಡೆಸಿಕೊಂಡ, ನಡೆಸಿಕೊಳ್ಳುತ್ತಿರುವ ರೀತಿ ಮತ್ತೆ ನಮ್ಮನ್ನು ಕೆಣಕಬೇಕಾಗಿತ್ತು. ಇಲ್ಲ, ಹಾಗೇನೂ ಆಗಲೇ ಇಲ್ಲ. ಅದರಾಚೆಯ ವಿಕೃತಿಗಳೆಲ್ಲ ತಿಳಿನೀರಿನ ಸರೋವರದೊಳಗಿಂದ ಬಗ್ಗಡದಂತೆ ಎದ್ದು ಬಂತು. ಬಹಳ ವಿಚಿತ್ರವೆಂದರೆ, ಇದು ನಮ್ಮೊಳಗನ್ನೆಲ್ಲಾ ಕೆದಕಿ ಚೊಕ್ಕ ಮಾಡಬೇಕಿತ್ತು. ಆದರೆ ಇದನ್ನು ಮರೆಮಾಚಲು ಎಂಥೆಂಥ ನಾಟಕಗಳು ನಡೆದವು. ನಾಲ್ಕಾರು ದಿನಗಳಲ್ಲಿ ಧಾರ್ಮಿಕ ಬಣ್ಣ ಬಳಿದ ಸುದ್ದಿ ಎಷ್ಟೊಂದು ಮುನ್ನೆಲೆಗೆ ಬಂತು. ಮನೆ ಮನೆಗೂ ಇದು ಎಷ್ಟು ಬೇಗ ತಲುಪಿತು ಅಂದರೆ, ತಕ್ಷಣವೇ ಜನರಲ್ಲಿ ಧರ್ಮರಕ್ಷಣೆಯ ಪ್ರಜ್ಞೆ ಜಾಗೃತವಾಗಿ, ವೀರಾವೇಶದ ಹುಲಿವೇಷದ ಅಟ್ಟಹಾಸ ಮೊರೆಯತೊಡಗಿತು. ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ಒತ್ತಾಯಿಸುವ ನೇರದಾರಿಯಾಚೆಗೆ, ಆ ನೆಪದಲ್ಲಿ ತಮ್ಮೊಳಗೆ ಅಡಗಿರುವ ದ್ವೇಷದ ವೈರಾಣುವನ್ನು ಅಧಿಕೃತಗೊಳಿಸುವ ಹಪಹಪಿಗೆ ಕೊರೊನಾ ಕೂಡ ನಾಚಿಕೊಂಡಿರಬಹುದು. ಇದೆಲ್ಲಾ ಬಿಟ್ಟು ನಮ್ಮ ಬದುಕುಗಳ ಪರಿ ಮತ್ತದರ ದೋಷಗಳ ಬಗ್ಗೆ, ಭೂಮಿಯನ್ನು ಕೆಣಕುತ್ತಿರುವ ಬಗ್ಗೆ ನಮ್ಮ ಮಾಧ್ಯಮಗಳ್ಯಾಕೆ ಮಾತಾಡುತ್ತಿಲ್ಲ?

ಭೂಮಿ ಈ ಉಪಾಯ ಮಾಡಿ ಮನುಷ್ಯರನ್ನು ಕಟ್ಟಿಹಾಕಿರಬಹುದೇ? ಈ ವರ್ಷದ ಆರಂಭದಲ್ಲೇ ಸ್ವೀಡನ್‍ನ ಹದಿನಾರರ ಹುಡುಗಿ ಗ್ರೇತಾ ಥನ್‍ಬರ್ಗ್, ‘ಇನ್ನು ಸಮಯವಿಲ್ಲ, ಈಗಲೇ, ಈ ವರ್ಷವೇ ಭೂಮಿಯ ತಾಪಮಾನ ತಗ್ಗಿಸಲು ಏನು ಮಾಡುತ್ತೀರಿ? 2030, 2050 ಎಂದೆಲ್ಲಾ ಕತೆ ಹೇಳಬೇಡಿ’ ಎಂದಿದ್ದಳು. ದೊಡ್ಡ ದೊಡ್ಡ ರಾಷ್ಟ್ರಗಳ ಅಧ್ಯಕ್ಷರು ಅವಳನ್ನು ಲೇವಡಿ ಮಾಡಿದ್ದರು. ಭಾರತೀಯರೂ ಅವಳನ್ನು ಟ್ರೋಲ್ ಮಾಡಿದ್ದರು. ಈಗ ಕೆಲವರು, ಜ್ಯೋತಿಷಿಗಳು ಏನು ಹೇಳಿದ್ದರು ಎಂದು ಮರುಳು ಮಾಡಲು ಶತಸಾಹಸ ಮಾಡುತ್ತಿದ್ದಾರೆ. ಅವರ ಮಡ್ಡ ತಲೆಗೆ ಗ್ರೇತಾ ಆಗಲಿ, ಹಲವು ನಿಜವಿಜ್ಞಾನಿಗಳು ಕೊಟ್ಟ ಎಚ್ಚರಿಕೆಯಾಗಲಿ ಭವಿಷ್ಯವಾಣಿ ಎಂದು ಅನ್ನಿಸುವುದೇ ಇಲ್ಲ. ಅದು ಪ್ಯಾನಿಕ್ ಆದ ವರ್ತನೆಯಂತೆ ಕಾಣುತ್ತದೆ. ಕಾರ್ಪೊರೇಟ್ ವಲಯದ ಹಿಡಿತದಡಿಯಿರುವ ವಿಜ್ಞಾನವೂ ಮೂಲಭೂತವಾದಿಯಾಗಿ ಇರುತ್ತದೆ ಎಂದು ವಂದನಾ ಶಿವ ಹೇಳುತ್ತಾರೆ. ಯಾಕೆಂದರೆ, ಆಗ ವಿಜ್ಞಾನಕ್ಕೆ ಸತ್ಯ ಹೇಳುವುದಕ್ಕಿಂತಲೂ ಅಧಿಕಾರದ ಹಿಡಿತವನ್ನು ಬಿಗಿಗೊಳಿಸುವುದೇ ಮಹತ್ವದ್ದಾಗಿರುತ್ತದೆ. ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂದರೆ, ಅವರು ಬೇಕಿದ್ದರೆ ಜ್ಞಾನವನ್ನು ಬಿಡುತ್ತಾರೆಯೇ ಹೊರತು ಅಧಿಕಾರವನ್ನಲ್ಲ. ಅಭಿವೃದ್ಧಿ ಎಂಬುದೊಂದು ದೊಡ್ಡ ಪರಿಕಲ್ಪನಾತ್ಮಕ ಬೌದ್ಧಿಕ ಭ್ರಷ್ಟಾಚಾರವಾಗಿದ್ದು, ಇದನ್ನು ಬದಲಿಸಲು ಜನಸಾಮಾನ್ಯರ ಜ್ಞಾನದ ಸಾಮೂಹಿಕ ಜವಾಬ್ದಾರಿಯನ್ನು ಗಾಂಧಿ ಮಾದರಿಯಲ್ಲಿ ಮುನ್ನೆಲೆಗೆ ತರುವುದೊಂದೇ ದಾರಿ ಎಂದು ಆಕೆ ಹೇಳುತ್ತಾರೆ. ಈ ಕಠಿಣ ಹಾದಿ ಕೈಗೂಡದಂತೆ ಜಾಗತೀಕರಣ ನಂತರದ ಕಾರ್ಪೊರೇಟ್ ಜಗತ್ತು ಸರ್ಕಾರಗಳನ್ನೇ ವಶಕ್ಕೆ ತೆಗೆದುಕೊಂಡು, ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಮಿದುಳುಗಳಿಗೇ ಲಗ್ಗೆ ಇಡುತ್ತಿದೆ. ಕೊರೊನಾ ಇದನ್ನೂ ತೆರೆದು ತೋರಿಸಿದೆ– ಕಾಣಿಸುವವರಿಗೆ.

ಭಾರತ ಎಂತಹ ಸದವಕಾಶವನ್ನು ಕೈಚೆಲ್ಲಿತಲ್ಲಾ ಅಂತ ಅನ್ನಿಸದೇ ಇರದು. ಗಾಂಧಿ ಹೇಳಿದ ಗ್ರಾಮ ಸ್ವರಾಜ್ಯ, ಆ ಸ್ವರಾಜ್ಯದಲ್ಲಿ ಅಂಬೇಡ್ಕರ್ ಹೇಳಿದ ಸಂಪೂರ್ಣ ಸಾಮಾಜಿಕ ನ್ಯಾಯ, ಬುದ್ಧನ ಸಾವಧಾನ, ಗಂಡು– ಹೆಣ್ಣೆಂಬ ಭೇದವಿಲ್ಲದೆ ಎಲ್ಲರನ್ನೂ ಒಳಗೊಂಡ ಭಕ್ತಿ ಚಳವಳಿಗಳು ಹೇಳುವ ತಿಳಿವಿನ ವಿವೇಕ, ಎಲ್ಲ ಧರ್ಮದ ಚಿಂತಕರ ಗೂಡಾದ ತತ್ವಪದಕಾರರ ಅನನ್ಯ ಜೀವನದೃಷ್ಟಿ ಎಲ್ಲ, ಎಲ್ಲವನ್ನೂ ಒಳಗೊಂಡ ನಾವು, ಅದನ್ನು ನಮ್ಮ ಆಡಳಿತದ ತಿರುಳಾಗಿಸದೇ ಹೋದೆವಲ್ಲಾ, ಇದೇನು ‘ನಿಂದ ನೆಲದ ಕೇಡೋ, ಬಂದ ಕಾಲದ ಕೇಡೋ’ ವಿವರಿಸಲಾಗುವುದಿಲ್ಲ. ಹೌದು, ಈಗ ಕೊರೊನಾಪೂರ್ವ ಮತ್ತು ಕೊರೊನಾನಂತರದ ಜಗತ್ತು ಎಂದು ವಿಭಜಿಸಿ ನೋಡುವ ಕಾಲ ಬಂದಿದೆ. ಆದರೆ ನಿಸ್ಸಂಶಯವಾಗಿ ಇದು ಜಾಗತೀಕರಣಪೂರ್ವ ಮತ್ತು ಜಾಗತೀಕರಣ ನಂತರದ ಬೆಳವಣಿಗೆಗಳನ್ನು ಮತ್ತೊಮ್ಮೆ ತಿರುಗಿ ನೋಡುವಂತೆ ಒತ್ತಾಯಿಸುತ್ತದೆ. ಯುದ್ಧ ಮತ್ತು ಜನಾಂಗವಾದದ ನಿಸ್ಸಾರವನ್ನು ಮನಗಾಣಿಸಿ ಒಂದು ಸುಸ್ಥಿರತೆಯತ್ತ ಪಯಣ ಹೊರಟಿದ್ದ ಜಗತ್ತನ್ನು ಭೌತಿಕ ಯುದ್ಧವಿಲ್ಲದೇ ಯುದ್ಧ ಸ್ಥಿತಿಗೆ ಜಾಗತೀಕರಣ ನಂತರದ ವ್ಯಾಪಾರೀ ಜಗತ್ತು ನೂಕಿದೆ. ಈಗ ಈ ಇಸ್ಪೀಟೆಲೆಯ ಕೋಟೆಯು ಕುಸಿಯುತ್ತಿದ್ದರೂ ಅದನ್ನು ನಂಬಲು ಮತ್ತು ಒಪ್ಪಲು ಇವರು ತಯಾರಿರುವುದಿಲ್ಲ.

ಒಂದೆಡೆ, ತಮ್ಮ ಪ್ರಜೆಗಳು ಚೀನಾವನ್ನು ದ್ವೇಷಿಸುವಂತೆ ಡೊನಾಲ್ಡ್‌ ಟ್ರಂಪ್ ಮೊದಲಾದ ನಾಯಕರು ಮಾತಾಡುತ್ತಾರೆ. ಇನ್ನೊಂದೆಡೆ, ತಮ್ಮ ಸಂಪೂರ್ಣ ಆರ್ಥಿಕತೆಯೇ ಚೀನಾವನ್ನು ಅವಲಂಬಿಸಿರುವುದನ್ನು ಮುಚ್ಚಿಡುತ್ತಾರೆ. ಚೀನಾ ಕೇವಲ ಕಮ್ಯುನಿಸ್ಟ್ ದೇಶವಲ್ಲ. ಅದು ಕ್ಯಾಪಿಟಲಿಸ್ಟ್ ಕಮ್ಯುನಿಸ್ಟ್ ದೇಶ. ಈ ಹೇಟ್ ಅಂಡ್ ಲವ್ ಸ್ಟೋರಿಗಳ ಮೂಲ ಇಲ್ಲಿದೆ.

‘ಕಾಸ್ಟ್ ಅವೇ ಆನ್ ದ ಮೂನ್’ ಎಂಬ ಕೊರಿಯನ್ ಸಿನಿಮಾದಲ್ಲಿ, ಮೆಟ್ರೊಪಾಲಿಟನ್ ನಗರದಲ್ಲಿ ವಾಸಿಸುವ ಹೈ ಪ್ರೊಫೈಲ್ ಉದ್ಯೋಗಸ್ಥ, ಹಲವು ಕಾರ್ಡುಗಳ ಮಾಲೀಕನಾದ ನಾಯಕ, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಹೋದರೂ ಸಾಯದೆ, ದ್ವೀಪದಂತಹ ಕಾಡಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಎಲ್ಲ ಸವಲತ್ತುಗಳ ನಗರ ಅವನನ್ನು ಸಾವಿನೆಡೆಗೆ ನೂಕಿದರೆ, ಏನೂ ಇಲ್ಲದ ಕಾಡು ಅವನಿಗೆ ಬದುಕುವ ಪ್ರೇರಣೆ ನೀಡುತ್ತದೆ. ತಾನೇ ಬೆಳೆದು ತಿನ್ನುವ ಸುಖದೆದುರು, ಆರ್ಡರ್‌ ಕೊಟ್ಟು ಕ್ಷಣಾರ್ಧದಲ್ಲಿ ತರಿಸಿಕೊಂಡು ತಿನ್ನುವ ಬದುಕು ಕ್ಷುಲ್ಲಕವೆನಿಸುತ್ತದೆ. ಮುಖವಿಲ್ಲದ ನಗರದ ಕರಾಳತೆ ಏಕಾಂತದ ಕಾಡಿನಲ್ಲಿ ತೆರೆದುಕೊಳ್ಳುತ್ತದೆ. ಇಂದಿನ ಲಾಕ್‍ಡೌನ್ ಸ್ಥಿತಿ ಅತ್ಯಾಧುನಿಕ ಅಹಮ್ಮಿಕೆಯ ಮನುಷ್ಯನಿಗೆ ಈ ತಿಳಿವನ್ನು ತಂದುಕೊಟ್ಟೀತೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು