ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಾಂತ್ವನ| ಆಪತ್ತು ತರುವ ಕೊರೊನಾ ನ್ಯುಮೋನಿಯಾ: ಎಚ್ಚರ

Last Updated 22 ಏಪ್ರಿಲ್ 2021, 22:15 IST
ಅಕ್ಷರ ಗಾತ್ರ

ಬೆಂ ಗಳೂರು: ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ‍ಪಡೆದುಕೊಂಡಿದೆ. ಉಸಿರಾಟದ ಸಮಸ್ಯೆಯಿಂದ ರೋಗಿಗಳು ಪ್ರತಿನಿತ್ಯ ಪ್ರಾಣ ಬಿಡುತ್ತಿದ್ದಾರೆ. ಹಿಂದಿಗಿಂತಲೂ ಈಗ ಜನರಲ್ಲಿ ಭೀತಿ ಹೆಚ್ಚಿದೆ. ಇದಕ್ಕೆ ಕಾರಣ ಕೊರೊನಾ ನ್ಯುಮೋನಿಯಾ!

‘ರೂಪಾಂತರಿ ಕೊರೊನಾ ವೈರಾಣು ಹಳೆಯದಕ್ಕಿಂತಲೂ ಹೆಚ್ಚು ಮಾರಣಾಂತಿಕ. ಹೋದ ವರ್ಷ ಕೋವಿಡ್‌ ಪೀಡಿತರಲ್ಲಿ ‘ವೀನಸ್‌ ಟ್ರಾಂಬೊಮ್‌ಬಾಲಿಸಂ’ ಸಮಸ್ಯೆ ಕಂಡುಬರುತ್ತಿತ್ತು. ಶ್ವಾಸಕೋಶ, ಕಾಲು, ತೊಡೆಸಂಧು ಹಾಗೂ ತೋಳಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಸಾಮಾನ್ಯವಾಗಿತ್ತು. ಹೋದ ವರ್ಷ ಹಿರಿಯ ನಾಗರಿಕರು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದರು. ಆದರೆ, ಈಗ ಕೊರೊನಾ ನ್ಯುಮೋನಿಯಾ ಕಾಣಿಸಿಕೊಂಡಿದೆ. ಇದರಿಂದಾಗಿ ಯುವಕರು ಹೆಚ್ಚು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇದು ಆತಂಕಕಾರಿ’ ಎಂದು ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯ ವೈದ್ಯ ಡಾ.ಫಾರೂಕ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ನ್ಯುಮೋನಿಯಾದಿಂದ ಉಭಯ ಶ್ವಾಸಕೋಶಗಳಿಗೂ ಹಾನಿಯುಂಟಾಗುತ್ತದೆ. ಈ ಕಾರಣದಿಂದಾಗಿಯೇ ರೋಗಿಗಳು ತೀವ್ರತರನಾದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುವವರ ಸಂಖ್ಯೆ ಏರಿದೆ. ಹೀಗಾಗಿ ವೈದ್ಯಕೀಯ ಆಮ್ಲಜನಕದ ಅಭಾವ ಸೃಷ್ಟಿಯಾಗಿದೆ. ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಹಾಸಿಗೆ ಸಮಸ್ಯೆಯೂ ತಲೆದೋರಿದೆ’ ಎಂದರು.

‘ರೆಮ್‌ಡಿಸಿವಿರ್‌ ಚುಚ್ಚುಮದ್ದು ಕೋವಿಡ್‌ಗೆ ರಾಮಬಾಣವಲ್ಲ. ಇದು ‘ಮ್ಯಾಜಿಕ್‌ ಬುಲೆಟ್‌’ ಕೂಡ ಅಲ್ಲ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ರೋಗದ ತೀವ್ರತೆಗೆ ಕಡಿವಾಣ ಹಾಕಲು ಹಾಗೂ ರೋಗಿಗಳಿಗೆ ಆಮ್ಲಜನಕದ ಅಗತ್ಯ ಕಡಿಮೆ ಮಾಡಲು ಇದು ಸಹಕಾರಿಯಷ್ಟೇ. ಇದನ್ನು ಗಂಭೀರ ಸಮಸ್ಯೆ ಎದುರಿಸುತ್ತಿರುವವರಿಗಷ್ಟೇ ಕೊಡಬೇಕು’ ಎಂದು ತಿಳಿಸಿದರು.

‘ಲಸಿಕೆ ಹಾಕಿಸಿಕೊಂಡರೆ ಅಡ್ಡಪರಿಣಾಮಗಳಾಗುತ್ತದೆ ಎಂದು ಅನೇಕರು ಗಾಳಿಸುದ್ದಿ ಹರಡುತ್ತಿದ್ದಾರೆ. ಇದಕ್ಕೆಲ್ಲಾ ಜನ ಕಿವಿಗೊಡಬಾರದು. ಲಸಿಕೆ ಪಡೆದರೆ ದೇಹದೊಳಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು. ಗಂಭೀರ ಸಮಸ್ಯೆಯಿಂದಲೂ ಪಾರಾಗಬಹುದು. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಂಡು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT