ಗುರುವಾರ , ಮಾರ್ಚ್ 4, 2021
26 °C
‘ಸಾಂವಿಧಾನಿಕ ನೈತಿಕತೆಯ ಮುಂದೆ ಸಾಮಾಜಿಕ ಮತ್ತು ಜನಪ್ರಿಯ ನೈತಿಕತೆ ಶರಣಾಗಲೇಬೇಕು’

‘ಸೊಗಸೇ ಹೊಲಸು, ಹೊಲಸೇ ಸೊಗಸು!’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸಮ್ಮತಿಯ ಸಲಿಂಗಕಾಮ ಅಪರಾಧ ಅಲ್ಲ ಎಂದು ಸಾರಿ 157 ವರ್ಷಗಳಷ್ಟು ಹಳೆಯ ವಸಾಹತುಶಾಹಿ ಯುಗದ ಅಮಾನುಷ ಕಾನೂನನ್ನು ಸುಪ್ರೀಂ ಕೋರ್ಟ್ ತೀರ್ಪು ಕಳೆದ ಗುರುವಾರ ಅಳಿಸಿಹಾಕಿತು. ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಈ ತೀರ್ಪು ಮಹೋನ್ನತ ಮತ್ತು ಐತಿಹಾಸಿಕ. ಯಾಕೆಂದರೆ ಈ ತೀರ್ಪಿನ ಸಂಕೀರ್ಣ ಪರಿಣಾಮಗಳು ಸಲಿಂಗಕಾಮದ ಆಚೆಗೆ ಬಹುದೂರದ ರಾಜಕೀಯ- ಸಾಮಾಜಿಕ ಉದ್ದಗಲಗಳನ್ನು ವ್ಯಾಪಿಸುವ ಶಕ್ತಿ ಹೊಂದಿವೆ.

ಬಹುಮುಖ್ಯವಾಗಿ ಸಮಾನತೆ, ಸೋದರತೆ, ಜಾತ್ಯತೀತತೆ, ಸಮಾಜವಾದದ ಆಶಯ ಉಳ್ಳ ಸಂವಿಧಾನವೊಂದೇ ಇಂದಿನ ದಿನಮಾನಗಳಲ್ಲಿ ಈ ದೇಶವನ್ನು ಹಿಡಿದಿಟ್ಟಿರುವ ಏಕೈಕ ಶಕ್ತಿಯಾಗಿ ತೋರತೊಡಗಿದೆ. ಈ ಬೆಳಕಿನ ಭರವ
ಸೆಯ ಬೆಸುಗೆಗೆ ಸವಾಲು ಎಸೆಯುವ ಪ್ರವೃತ್ತಿ ದಿನದಿಂದ ದಿನಕ್ಕೆ ಬಲಿಯುತ್ತಿರುವ ಕಾಲಘಟ್ಟದಲ್ಲಿ ಈ ತೀರ್ಪು ಪ್ರಕಟವಾಗಿದೆ ಎಂಬುದು ತಪ್ಪದೇ ಗಮನಿಸಬೇಕಾದ ಅಂಶ. ಬಹುಸಂಖ್ಯಾತವಾದದ ಮಹಾಮೆರವಣಿಗೆಯ ದೈತ್ಯ ರಥಚಕ್ರಗಳು ದುರ್ಬಲರು, ವಂಚಿತರ ಮೇಲೆ ಉರುಳಿ ಚಲಿಸತೊಡಗಿವೆ. ಬಹುಸಂಖ್ಯಾತವಾದ ಮತ್ತು ಜನಪ್ರಿಯ ನೈತಿಕತೆಯ ಮೇಲೆ ಸಾರ್ವಜನಿಕ ಸಂವಾದವನ್ನು ಕಟ್ಟಲಾಗುತ್ತಿದೆ. ಅದನ್ನೇ ಅಂತಿಮ ಸತ್ಯವೆಂದು ಸಾರಲಾಗಿದೆ. ಇತಿಹಾಸದ ಮರುಸೃಷ್ಟಿಯನ್ನು ಗೆದ್ದವರ ಮೂಗಿನ ನೇರಕ್ಕೆ ಮರಳಿ ಬರೆಯಲಾಗುತ್ತಿದೆ. ಶಿಕ್ಷಣ, ಸಂಸ್ಕೃತಿ, ಕಾನೂನು, ಅಭಿವ್ಯಕ್ತಿ, ಆಹಾರಪದ್ಧತಿ, ಉಡುಗೆ ತೊಡುಗೆಯಲ್ಲಿ ಏಕರೂಪವನ್ನು ಹೇರಲಾಗುತ್ತಿದೆ. ಭಿನ್ನ ದನಿಯ ಕತ್ತನ್ನು ಹಲವು ಬಗೆಗಳಲ್ಲಿ ಹಿಸುಕಲಾಗುತ್ತಿದೆ. ಬಂಧಿಸಿ ಸೆರೆಮನೆಗೆ ತಳ್ಳಲಾಗುತ್ತಿದೆ. ಅಸಮ್ಮತಿಗೆ ದೇಶದ್ರೋಹದ ಹಣೆಪಟ್ಟಿ ಹಚ್ಚಲಾಗಿದೆ. ಹಂತಕರನ್ನು ಧರ್ಮರಕ್ಷಕರೆಂದು ಕರೆದು ಹೂಮಳೆಗರೆದು ಸನ್ಮಾನಿಸಲಾಗುತ್ತಿದೆ. ಇಸ್ಲಾಮಿನ ಒಂದು ವರ್ಗದಲ್ಲಿ ಚುರುಕಾಗಿದ್ದ ಧರ್ಮಾಂಧತೆ ಇದೀಗ ಎದುರು ಪಾಳೆಯಕ್ಕೆ ನುಸುಳಿ ನೆಲೆ ಕಂಡುಕೊಳ್ಳತೊಡಗಿದೆ. ಸಹಜವು ಅಸಹಜವಾಗಿಯೂ, ಅಸಹಜವು ಸಹಜವಾಗಿಯೂ ಬಣ್ಣ ಬದಲಿಸತೊಡಗಿವೆ. ಷೇಕ್ಸ್‌ಪಿಯರನ ‘ಮ್ಯಾಕ್‌ಬೆತ್’ ನಾಟಕದ ಜೀವನುಡಿಯಾದ ‘ಸೊಗಸೇ ಹೊಲಸು, ಹೊಲಸೇ ಸೊಗಸು’ (Fair is Foul and Foul is Fair) ವಾತಾವರಣದ ಗಾಳಿಗಂಧಕ್ಕೆ ಬೆರೆತು ಹಬ್ಬತೊಡಗಿದೆ.

‘ಸ್ವಾತಂತ್ರ್ಯ ಎಂಬುದು ಚಕ್ರವೊಂದು ಹೊತ್ತು ನಿಂತ/ ದಣಿದ ಮೂರು ರಂಗುಗಳ ನಾಮಧೇಯವೇ/ ಅಥವಾ ಅದಕ್ಕೊಂದು ವಿಶೇಷ ಅರ್ಥ ಇದೆಯೇ’ ಎಂಬುದು ಹಿಂದಿ ಕವಿ ಧೂಮಿಲ್ (ಸುಧಾಮ ಪಾಂಡೆ) ಐದು ದಶಕಗಳ ಹಿಂದೆ ಬರೆದಿದ್ದ ಕವಿತೆ.

ಶಾಸಕಾಂಗದ ಆಡಳಿತಾರೂಢ ಶಕ್ತಿಗಳು ಮತ್ತು ಕಾರ್ಯಾಂಗ ಈ ಪ್ರವೃತ್ತಿಯನ್ನು ಬಹಿರಂಗವಾಗಿಯೇ ಪ್ರೋತ್ಸಾಹಿಸತೊಡಗಿವೆ. ಎದೆಗುಂದಿ ಗೊಂದಲಕ್ಕೆ ಬಿದ್ದಂತೆ ತೋರುತ್ತಿರುವ ಪ್ರತಿಪಕ್ಷಗಳ ದನಿ ಉಡುಗಿದೆ. ಪ್ರಭುತ್ವದ ದಮನಕ್ಕೆ ಸಿಲುಕಿರುವ ಸಜ್ಜನ ಸಮಾಜ (ಸಿವಿಲ್ ಸೊಸೈಟಿ) ಕೈಕಾಲು ಬಡಿಯುತ್ತಿರುವುದೇ ದೊಡ್ಡ ಸಾಧನೆ.

ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಲು ಸಂವಿಧಾನವನ್ನು ಬದಲಾಯಿಸುವ ಬಿಜೆಪಿಯ ಕಾರ್ಯಸೂಚಿ ನಿಜರೂಪ ತಳೆದು ನಿಂತಿರುವ ಗಂಡಾಂತರವೇ ವಿನಾ ಕೇವಲಗಾಳಿ ಮಾತಾಗಿ ಉಳಿದಿಲ್ಲ. ನೆಲಕ್ಕೆ ಬಿದ್ದ ಸಮುದಾಯಗಳು ನ್ಯಾಯಕ್ಕಾಗಿ ಎದುರು ನೋಡುತ್ತಿರುವ ಏಕೈಕ ಭರವಸೆಯಾದ ಸಂವಿಧಾನ ಹಲ್ಲೆಗೆ ಗುರಿಯಾಗತೊಡಗಿದೆ. ಸಂಸತ್ ಭವನಕ್ಕೆ ಅನತಿ ದೂರದ ಜಂತರ್ ಮಂತರ್ ಪ್ರದೇಶದಲ್ಲಿ ಸಂವಿಧಾನದ ಪ್ರತಿಯನ್ನು ಸುಡಲಾಯಿತು. ಎಂದೂ ಇರದಿದ್ದ ಇಂತಹ ಧೈರ್ಯ ಇಂದಿನ ದಿನಗಳಲ್ಲಿ ಪ್ರಕಟವಾಗಿದ್ದರೆ ಅದಕ್ಕೆ ಕಾರ್ಯಕಾರಣಗಳಿವೆ. ಪೂರಕ ವಾತಾವರಣ ಸೃಷ್ಟಿಯಾಗಿದೆ. ಸಂವಿಧಾನದ ಮೂಲಭೂತ ರಚನೆಯನ್ನು ಬದಲಾಯಿಸುವ ಕಸರತ್ತಿಗೆ ಸಂಸತ್ತು ಕೈ ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ‘ಕೇಶವಾನಂದ ಭಾರತಿ ಪ್ರಕರಣದಲ್ಲಿ’ ಸ್ಪಷ್ಟಪಡಿಸಿರುವುದು ಹೌದು. ಆದರೆ ಶೇ 51ರಷ್ಟು ಮತ ಗಳಿಕೆಯ ಮಾತಾಡುತ್ತಿರುವ ಅಮಿತ್ ಶಾ ನೇತೃತ್ವದ ಬಿಜೆಪಿ ಎದುರು ನೋಡುತ್ತಿರುವ ಬಹುಮತಕ್ಕೆ ಸಂವಿಧಾನವನ್ನು ಬದಲಾಯಿಸುವ ನಿಚ್ಚಳ ಉದ್ದೇಶ ಇರುವುದು ನಿರ್ವಿವಾದದ ಸಂಗತಿ.

ಸಮಾಜವಾದ ಮತ್ತು ಜಾತ್ಯತೀತವಾದ ಪದಗಳು ಮೂಲ ಸಂವಿಧಾನದ ಮುನ್ನುಡಿಯಲ್ಲಿ ಇರಲಿಲ್ಲ. ಅವುಗಳನ್ನು1976ರಲ್ಲಿ ಸೇರಿಸಲಾಗಿದ್ದು ಹೌದು. ಆದರೆ ಸಂವಿಧಾನದ ಮೂಲ ಆಶಯದಲ್ಲಿ ಈ ಎರಡೂ ಮೌಲ್ಯಗಳೂ ಅಂತರ್ನಿಹಿತ ಎಂಬುದನ್ನು ಯಾರೂ ಅಲ್ಲಗಳೆಯಲಾರರು. 2015ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಿಜೆಪಿ ನೇತೃ ತ್ವದ ಕೇಂದ್ರ ಸರ್ಕಾರ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಜಾಹೀರಾತುಗಳಲ್ಲಿ ಅಚ್ಚಾಗಿದ್ದ ಸಂವಿಧಾನದ ಮುನ್ನುಡಿ ಯಲ್ಲಿ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳು ಇರಲಿಲ್ಲ. ಪ್ರತಿಪಕ್ಷಗಳ ಪ್ರತಿಭಟನೆಯ ನಂತರ ಸರ್ಕಾರ ನೀಡಿದ ಸಮಜಾಯಿಷಿಯ ಪ್ರಕಾರ ಸದರಿ ಸಂವಿಧಾನದ ಮುನ್ನುಡಿಯು 1976ರ ತಿದ್ದುಪಡಿಗಿಂತ ಮೊದಲಿನದು. ಈ ಎರಡು ಪದಗಳ ಸೇರ್ಪಡೆ ಸರಿಯಲ್ಲವೆಂದ ಬಿಜೆಪಿ ಸರ್ಕಾರದ ಮಂತ್ರಿಯೊಬ್ಬರು ಈ ಸಂಬಂಧ ಸಾರ್ವಜನಿಕ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದ್ದುಂಟು. ಬಿಜೆಪಿ ಸರ್ಕಾರ ಸಂವಿಧಾನವನ್ನು ಬದಲಾಯಿಸಲಿದೆ ಎಂದು ಮತ್ತೊಬ್ಬ ಸಚಿವರು ಸಾರ್ವಜನಿಕ ಹೇಳಿಕೆ ನೀಡುತ್ತಾರೆ.

ಈ ನಿಲುವುಗಳಿಗೆ ಕೂಡ ಇತಿಹಾಸ ಉಂಟು. ಸಂವಿಧಾನ ರಚನಾ ಸಮಿತಿ ತನ್ನ ಕೆಲಸವನ್ನು ಪೂರ್ಣಗೊಳಿಸಿದ ನಾಲ್ಕು ತಿಂಗಳ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ‘ದಿ ಆರ್ಗನೈಸರ್’ನ 1949ರ ನವೆಂಬರ್‌ 30ರ ಸಂಚಿಕೆಯಲ್ಲಿ ಹೀಗೆ ಬರೆಯಲಾಗಿತ್ತು- ‘...ಆದರೆ ನಮ್ಮ ಸಂವಿಧಾನದಲ್ಲಿ ಪ್ರಾಚೀನ ಭಾರತದ ಸಂವಿಧಾನಾತ್ಮಕ ವಿಶಿಷ್ಟ ವಿದ್ಯಮಾನದ ಉಲ್ಲೇಖವೇ ಇಲ್ಲ... ಮನು ರಚಿಸಿದ ಮನುಸ್ಮೃತಿಯ ಕಾನೂನುಗಳು ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿವೆ. ಅವುಗಳನ್ನು ಸಹಜವಾಗಿ ಒಪ್ಪಿ ಅನುಸರಿಸಲಾಗುತ್ತಿದೆ. ಆದರೆ ನಮ್ಮ ಸಾಂವಿಧಾನಿಕ ಪಂಡಿತರ ಪಾಲಿಗೆ ಈ ವಿಶಿಷ್ಟ ವಾಸ್ತವ ಅರ್ಥಹೀನ’.

ಸಂವಿಧಾನವು ಆಂಗ್ಲೀಕರಣಗೊಂಡ ವಕೀಲರು ಬರೆದ ಪಾಶ್ಚಿಮಾತ್ಯ ಆದರ್ಶಗಳೇ ತುಂಬಿರುವ ದಸ್ತಾವೇಜು ಎಂಬುದು ಬಲಪಂಥದ ನಿಲುವು. ಸಂವಿಧಾನದಲ್ಲಿ ಮಾಡಲಾಗಿರುವ ‘ದೇಶ’ದ ವ್ಯಾಖ್ಯೆಯೇ ತಪ್ಪು. ಎಲ್ಲ ಭಾರತೀಯರು ನೆಲೆಸಿರುವ ಭೂಪ್ರದೇಶವೇ ಭಾರತ ಎನ್ನುತ್ತದೆ ಸಂವಿಧಾನ. ಆದರೆ ‘ದೇಶ’ ಎಂಬುದು ಭೂಪ್ರದೇಶ ಅಲ್ಲ. ದೇಶ ಎಂಬುದು ಭಾರತೀಯ ಜನ. ಆ ಜನ ಹಿಂದೂಗಳು. ಹೀಗಾಗಿ ಹಿಂದೂ ರಾಷ್ಟ್ರದ ಸಂವಿಧಾನ ರಚನೆಯಾಗಬೇಕಿದೆ ಎಂಬುದು ಈ ಪಂಥದ ವಾದ. ‘ದೇಶ ಎಂಬುದು ಬರಿ ಮಣ್ಣಲ್ಲ ಕಾಣೋ, ದೇಶ ಎಂದರೆ ಜೀವಂತ ಜನರು’ ಎಂಬುದಾಗಿ ತೆಲುಗಿನ ಮಹಾಕವಿ ಗುರ ಜಾಡ ಅಪ್ಪಾರಾವು ಸ್ವಾತಂತ್ರ್ಯಕ್ಕೆ ಮುನ್ನ ಬರೆದಿದ್ದ ಜನಪರ ಕವಿತೆಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ತಾವು ಬೆಳೆದು ಬಂದ ಚಿಂತನೆಯನ್ನು ಅನ್ವಯಿಸಿ ಹೊಸ ವ್ಯಾಖ್ಯಾನ ನೀಡಿದ್ದರ ಹಿನ್ನೆಲೆಯೂ ಇದೇ ಆಗಿದೆ. ಕೆಂಪು ಕೋಟೆಯ ಮೇಲಿನಿಂದ ಪ್ರಧಾನ ಮಂತ್ರಿಯವರು ಪ್ರಸ್ತಾಪಿಸುವ ‘ಹೊಸ ಭಾರತ’ ಇದೇ ಇದ್ದೀತು.

ಸಂವಿಧಾನವನ್ನು ಬದಲಾಯಿಸಿ ಬರೆಯಲು ಲೋಕಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತ ಬೇಕು, ಅರ್ಧಕ್ಕೂ ಹೆಚ್ಚು ಸಂಖ್ಯೆಯ ರಾಜ್ಯಗಳ ಅನುಮೋದನೆ ಬೇಕು, ರಾಜ್ಯಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತ ಬೇಕು (ಬಹುತೇಕ ರಾಜ್ಯಗಳು ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಆಡಳಿತದಡಿ ಇರುವ ಕಾರಣ ರಾಜ್ಯಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತ ಸಾಧನೆಗೆ ಬಿಜೆಪಿ ಇನ್ನು ಬಹಳ ಕಾಲ ಕಾಯಬೇಕಿಲ್ಲ). 2019ರ ಲೋಕಸಭಾ ಚುನಾವಣೆಗಳ ಪರೀಕ್ಷೆಯಲ್ಲಿ ಪಾರಾದರೆ ‘ಹಿಂದೂ ರಾಷ್ಟ್ರ’ದ ಸಂವಿಧಾನ ರಚನೆಗೆ ಕೈ ಹಾಕುವುದರಿಂದ ಬಿಜೆಪಿಯನ್ನು ಯಾರೂ ತಡೆದು ನಿಲ್ಲಿಸಲಾರರು. ಹೊಸ ಸಂವಿಧಾನ ರಚನೆಗೆ ಹೊಸದೊಂದು ಸಂವಿಧಾನ ರಚನಾ ಸಭೆಯನ್ನು ನೇಮಿಸಬಹುದು.

ಹೀಗಿರುವಾಗ ನ್ಯಾಯಾಂಗವೊಂದೇ ಅಳಿದುಳಿದ ಏಕೈಕ ಭರವಸೆ. ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಸಾರ್ವಜನಿಕರು ಇರಿಸಿರುವ ವಿಶ್ವಾಸಾರ್ಹತೆಗೆ ಕಾಲ ಕಾಲಕ್ಕೆ ಚ್ಯುತಿ ಬಂದು ಶಿಥಿಲಗೊಂಡಿರುವುದು ಉಂಟು. ಆದರೆ ಇತ್ತೀಚಿನ ಹಲವು ಅಪಸವ್ಯಗಳು ಮತ್ತು ಪ್ರಶ್ನಾರ್ಥಕ ಚಿಹ್ನೆಗಳ ನಡುವೆಯೂ ಸುಪ್ರೀಂ ಕೋರ್ಟ್‌ನಲ್ಲಿ ಜನ ಇರಿಸಿರುವ ನಂಬಿಕೆ ದೊಡ್ಡ ರೀತಿಯಲ್ಲಿ ಅಲ್ಲಾಡಿಲ್ಲ ಎಂಬುದು ವಾಸ್ತವ.

ಖಾಸಗಿತನದ ಹಕ್ಕನ್ನು ಎತ್ತಿ ಹಿಡಿದ ತೀರ್ಪು, ತೃತೀಯಲಿಂಗಿಗಳನ್ನು ಸಮಾನ ಮನುಷ್ಯರೆಂದು ಪರಿಗಣಿಸಬೇಕೆಂದು ನೀಡಿದಂತಹ ತೀರ್ಪುಗಳು ಬಹು ಸ್ವಾಗತಾರ್ಹ. ವ್ಯವಸ್ಥೆಯ ಕುರಿತು ಬಾಡುತ್ತಿರುವ ಆಶಾವಾದಕ್ಕೆ ನೀರು ಎರೆಯುವಂತಹ ತೀರ್ಪುಗಳು ಹಲವಾರು. ಈ ಪೈಕಿ ಸಲಿಂಗಕಾಮ ಕುರಿತ ತೀರ್ಪು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದಿರುವ ಮತ್ತೊಂದು ಮಹತ್ವದ ಮೈಲಿಗಲ್ಲು. ಭಾರತದ ಬಹುತ್ವವನ್ನು ನಿಚ್ಚಳ ಶಬ್ದಗಳಲ್ಲಿ, ಸಂದೇಹಕ್ಕೆ ಎಡೆಯಿಲ್ಲದ ಸಮರ್ಥ ವಾದಸರಣಿಯಲ್ಲಿ ಸಾರಿ ಹೇಳಲಾಗಿದೆ.

ಸಂವಿಧಾನದ ಮೇಲೆ ಪ್ರತಿಗಾಮಿ ಶಕ್ತಿಗಳು ಹೊಸ ಹುರುಪಿನಿಂದ ದಾಳಿ ನಡೆಸಿರುವ ಸಂದರ್ಭದಲ್ಲಿ ಅದರ ಮಹತ್ವದ ಮೇಲೆ ಹೊನಲು ಬೆಳಕು ಹರಿಸುವ ಕ್ರಿಯೆ ಇದು. ‘ಜನಪ್ರಿಯ ಭಾವನೆ ಅಥವಾ ಬಹುಸಂಖ್ಯಾತವಾದದ ಪ್ರವೃತ್ತಿಯನ್ನು ನಿಗ್ರಹಿಸುವುದು ಜನತಂತ್ರದ ಮೂರೂ ಅಂಗಗಳ ಹೊಣೆಗಾರಿಕೆ. ಏಕರೂಪೀ ತತ್ವವನ್ನು ಸಮಾಜದ ಉದ್ದಗಲದ ಒಳಕ್ಕೆ ತಳ್ಳಿ ತುರುಕುವ ಯಾವುದೇ ಪ್ರಯತ್ನವು ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆಯಲ್ಲದೆ
ಮತ್ತೇನೂ ಅಲ್ಲ. ಸಮಾಜದಲ್ಲಿನ ಏಕರೂಪಿ ಅಳತೆ ಆಕಾರದ ಹೊರಗೆ ನಿಲ್ಲುವ ಯಾವುದೇ ಒಲವು ನಿಲುವುಗಳನ್ನು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲ, ಸಾಂವಿಧಾನಿಕ ಮತ್ತು ಕಾನೂನಿನ ಚೌಕಟ್ಟನ್ನು ಮೀರದಿರುವ ತನಕ ಅವುಗಳನ್ನು ಪೋಷಿಸುವ ವಾತಾವರಣ ಕಲ್ಪಿಸಬೇಕು. ಆಗಲೇ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಯ್ಕೆಯ ಸ್ವಾತಂತ್ರ್ಯ ಅರಳಿ ಬಾಳುವುದು ಸಾಧ್ಯ’ ಎಂದು ಹೇಳಲಾಗಿದೆ.

‘ಅಭಿವ್ಯಕ್ತಿಯ ನಿರಾಕರಣೆಯು ಮರಣಕ್ಕೆ ನೀಡಿದ ಆಹ್ವಾನ. ಅಸ್ಮಿತೆಯೇ ಬದುಕಿನ ತಿರುಳು. ಅಸ್ಮಿತೆಯಿಲ್ಲದೆ ಅಸ್ತಿತ್ವ ಇಲ್ಲ. ಸಂವಿಧಾನ ಗ್ರಹಿಸಿ ಪರಿಕಲ್ಪಿಸಿದ ವ್ಯಕ್ತಿಯ ಅಸ್ಮಿತೆಗೆ ಒತ್ತು ನೀಡಬೇಕಿದೆ. ಅಸ್ಮಿತೆ ದೈವತ್ವಕ್ಕೆ ಸಮಾನ. ನಿಸರ್ಗ ನೀಡಿದ್ದೇ ನೈಸರ್ಗಿಕ. ಅದುವೇ ವ್ಯಕ್ತಿಯ ಒಳಗಿನ ಪ್ರಕೃತಿ. ಆ ಭಾಗವನ್ನು ಗೌರವಿಸಿ ಅಂಗೀಕರಿಸಬೇಕೇ ವಿನಾ ಬೀಳುಗಳೆಯಬಾರದು. ಸಂವಿಧಾನ ಈಗಾಗಲೆ ಎಲ್ಲ ನಾಗರಿಕರಿಗೂ ನೀಡಿರುವ ಹಕ್ಕುಗಳನ್ನು ನಾವು ಗುರುತಿಸಿ ವ್ಯಾಖ್ಯಾನಿಸಬೇಕಿದೆ. ಸಂವಿಧಾನವು ಅಸ್ಮಿತೆಯನ್ನು ಕೇವಲ ಅಸ್ಮಿತೆ ಎನ್ನುವುದಿಲ್ಲ. ಘನತೆಯ ಅಸ್ಮಿತೆ ಎಂದು ಅದನ್ನು ಎತ್ತಿ ಹಿಡಿದಿದೆ. ಸಾಂವಿಧಾನಿಕ ನೈತಿಕತೆಯ ಮುಂದೆ ಸಾಮಾಜಿಕ ನೈತಿಕತೆ ಶರಣಾಗಬೇಕು’ ಎಂಬುವು ಸಂವಿಧಾನದ ಪಾರಮ್ಯವನ್ನು ಎತ್ತಿ ಹಿಡಿದಿರುವ ಮಾತುಗಳು.

ಮೊನ್ನೆ ಮೊನ್ನೆಯಷ್ಟೇ ಸಾರ್ವಜನಿಕ ಗಮನ ಸೆಳೆಯದೆ ಸರಿದು ಹೋದ ಸುಪ್ರೀಂ ಕೋರ್ಟ್‌ನ ಮತ್ತೊಂದು ಘನವಾದ ತೀರ್ಪು ಇಲ್ಲಿ ಉಲ್ಲೇಖಾರ್ಹ.

ಮಲಯಾಳ ಕಾದಂಬರಿ ‘ಮೀಶ’ವನ್ನು (ಮೀಸೆ) ನಿಷೇಧಿಸಬೇಕು ಎಂಬ ಅಹವಾಲನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಮೂರ್ತಿಗಳಾದ ಎ.ಎಂ.ಖನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಅವರ ನ್ಯಾಯಪೀಠ ತಿರಸ್ಕರಿಸಿತು.

ತಿರಸ್ಕೃತಿಗೆ ನೀಡಿದ ಕಾರಣಗಳು ಮತ್ತು ಸಮರ್ಥನೆ ಆರೋಗ್ಯವಂತ ಸಮಾಜದ ಪಾಲಿಗೆ ಚೇತೋಹಾರಿ- ‘ಪುಸ್ತಕಗಳ ನಿಷೇಧದ ಸಂಸ್ಕೃತಿಯು ವಿಚಾರಗಳ ಮುಕ್ತ ಹರಿವನ್ನು ವ್ಯತಿರಿಕ್ತವಾಗಿ ಪ್ರಭಾವಿಸುತ್ತದೆ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅವಹೇಳನ. ಯಾವುದೇ ಸಮುದಾಯದ ಅಪನಿಂದೆ ಆಗಿಲ್ಲದೆ ಇದ್ದರೂ ಪುಸ್ತಕವೊಂದರ ನಿಷೇಧ ಬೌದ್ಧಿಕ ಸಹಿಷ್ಣುತೆಯ ಹದ್ದುಗಳನ್ನು ಮೀರಿ ಹೋಗಿ ಚಿಂತಕಲೋಕದಲ್ಲಿ ಚಡಪಡಿಕೆಯನ್ನು ಸೃಷ್ಟಿಸುತ್ತದೆ. ಬೌದ್ಧಿಕ ಸ್ವಾತಂತ್ರ್ಯಕ್ಕೆ ಅಪಾಯವೊಡ್ಡಿ ಕಾಲಕ್ರಮೇಣ ‘ಬೌದ್ಧಿಕ ಹೇಡಿತನ’ವನ್ನು ಹುಟ್ಟಿ ಹಾಕುತ್ತದೆ. ಈ ಬೌದ್ಧಿಕ ಹೇಡಿತನ ಎಂಬುದು ಸೃಜನಶೀಲ ಬರೆಹಗಾರನೊಬ್ಬನ ಅತಿ ದೊಡ್ಡ ಶತ್ರು. ಯಾಕೆಂದರೆ ಅದು ಬರೆಯುವವನ ಮುಕ್ತ ಚೈತನ್ಯವನ್ನು ನಾಶ ಮಾಡಿಬಿಡುತ್ತದೆ. ನಾವು ಜೀವಿಸಿರುವುದು ಮುಕ್ತ ವಿಚಾರಗಳ ವಿನಿಮಯ ಮತ್ತು ಆಲೋಚನೆ- ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ಜನತಾಂತ್ರಿಕ ದೇಶದಲ್ಲಿಯೇ ವಿನಾ ಸರ್ವಾಧಿಕಾರಿ ಆಡಳಿತದಲ್ಲಿ ಅಲ್ಲ. ಆಕ್ಷೇಪ ಎತ್ತಲಾಗಿರುವ ಮೀಶ ಕೃತಿಯ ಸಂಭಾಷಣೆಗಳು ಮತ್ತು ಭಾಷೆ ಅಶ್ಲೀಲ ಎಂದು ಹೇಳುವುದು ಅಸಾಧ್ಯ’ ಎಂದು ಇಂದಿನ ಸಂಕ್ರಮಣ ಸ್ಥಿತಿಯಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯ ಆಡಿದ ಈ ಮಾತುಗಳು ಭೂಮಿ ತೂಕದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು