ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರದ ಡಿಜಿಟಲ್ ಡಿವೈಡ್

ಇವಿಎಂ ಚರ್ಚೆಯಲ್ಲಿ ಮರೆಯಾದ ಆಯೋಗದ ದೌರ್ಬಲ್ಯಗಳು
Last Updated 7 ಫೆಬ್ರುವರಿ 2019, 4:46 IST
ಅಕ್ಷರ ಗಾತ್ರ

ಭಾರತದ ಚುನಾವಣೆಗಳಿಗೆ ಮತಯಂತ್ರಗಳು (ಇವಿಎಂ) ಪ್ರವೇಶ ಪಡೆದು ಎರಡು ದಶಕಗಳು ತುಂಬುತ್ತಿವೆ. ಡಿಜಿಟಲ್ ತಂತ್ರಜ್ಞಾನ, ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಬೀರಲು ಆರಂಭಿಸಿದ ಹೊತ್ತಿನಲ್ಲಿ ಇವಿಎಂಗಳೂ ಪ್ರವೇಶ ಪಡೆದವು. ನಮ್ಮ ರಾಜಕೀಯವು ಇವಿಎಂಗಳ ಕುರಿತು ಮಾತನಾಡಿದಷ್ಟು, ಗದ್ದಲವೆಬ್ಬಿಸಿದಷ್ಟು ಚುನಾವಣೆಯನ್ನು ಪ್ರಭಾವಿಸಬಹುದಾದ ಇತರ ತಂತ್ರಜ್ಞಾನಗಳ ಬಗ್ಗೆ ಈ ತನಕ ಮಾತನಾಡಿಯೇ ಇಲ್ಲ. ಇವಿಎಂಗಳ ವಿಶ್ವಾಸಾರ್ಹತೆಯ ಚರ್ಚೆಯೂ ಬಹಳ ಹಳೆಯದೇ. ಇವುಗಳು ಬಂದ ದಿನದಿಂದಲೂ ಅದರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಮೊದಲಿಗೆ ಈ ಪ್ರಶ್ನೆಯನ್ನು ದೊಡ್ಡದಾಗಿ ಎತ್ತಿದ್ದು ಬಿಜೆಪಿ. 2014ರ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಕೂಡಾ ಇದೇ ಪ್ರಶ್ನೆಯನ್ನು ಎತ್ತಿಕೊಂಡು ದೊಡ್ಡ ಧ್ವನಿಯಲ್ಲಿ ಮಾತನಾಡಲು ಆರಂಭಿಸಿತಷ್ಟೇ. ಈಗಂತೂ ಬಿಜೆಪಿಯೇತರ ಪಕ್ಷಗಳೆಲ್ಲವೂ ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿವೆ.

ಇವಿಎಂನ ಸುತ್ತ ಗದ್ದಲವೆಬ್ಬಿಸಿದ ಎಲ್ಲರೂಚುನಾವಣಾ ಪ್ರಕ್ರಿಯೆ ಒಳಗೆ ಪ್ರವೇಶ ಪಡೆದ ಇತರ ತಂತ್ರಜ್ಞಾನಗಳ ಪರಿಣಾಮವನ್ನು ಮರೆತದ್ದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡದ್ದು ಮಾತ್ರ ಬಿಜೆಪಿ. ಭಾರತದಲ್ಲಿ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಮತದಾರರನ್ನು ತಲುಪುವ ಪ್ರಯತ್ನಕ್ಕೆ ಮೊದಲು ಮುಂದಾದದ್ದು ಸಂಘಪರಿವಾರದ ಸಂಘಟನೆಗಳು. ಇಂಟರ್ನೆಟ್‌ನ ಶೈಶವದ ದಿನಗಳಲ್ಲೇ ಅಮೆರಿಕ ಮತ್ತು ಯುರೋಪ್‌ನಲ್ಲಿದ್ದ ಸಂಘಪರಿವಾರದ ಕಾರ್ಯಕರ್ತರು ತಮ್ಮ ಸಿದ್ಧಾಂತಗಳನ್ನು ನಿಜ-ಸುಳ್ಳುಗಳ ಮಿಶ್ರಣದೊಂದಿಗೆ ಬಿತ್ತರಿಸಲು ಆರಂಭಿಸಿದ್ದರು. ಸಾಮಾಜಿಕ ಮಾಧ್ಯಮಗಳ ವ್ಯಾಪಕತೆ ಹೆಚ್ಚಿದಂತೆಯೇ ಈ ಪ್ರಕ್ರಿಯೆ ಹೆಚ್ಚು ಸಾಂಸ್ಥಿಕ ವಾಯಿತು. ಈ ಅವಧಿಯಲ್ಲಿ ಉಳಿದೆಲ್ಲಾ ರಾಜಕೀಯ ಪಕ್ಷಗಳು ಸೋಮಾರಿಗಳಾಗಿದ್ದವು ಎಂಬುದು ವಾಸ್ತವ.

2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿ ಎಲ್ಲಾ ಡಿಜಿಟಲ್ ಪರಿಕರಗಳನ್ನು ಬಳಸಿಕೊಂಡು ತನ್ನ ಚುನಾವಣಾ ಪ್ರಚಾರ ಆರಂಭಿಸಿದಾಗ ಉಳಿದ ಪಕ್ಷಗಳು ಮೈಲುಗಟ್ಟಳೆ ಹಿಂದಿದ್ದವು. ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಇನ್ನೂ ಕೆಲವು ಬೆಳವಣಿಗೆಗಳೂ ಆಗಿದ್ದವು. ಮತದಾರರ ಪಟ್ಟಿ ಡಿಜಿಟೈಜ್ ಆಗಿತ್ತು. ಜನರ ಕೈಗಳಿಗೆ ಮೊಬೈಲ್ ಫೋನುಗಳು ಬಂದು ಅವು ಸ್ಮಾರ್ಟ್ ಆಗಿಯೂ ಬದಲಾಗಿದ್ದವು. ದೊಡ್ಡ ಸಂಖ್ಯೆಯ ಬಳಕೆದಾರರು ವಾಟ್ಸ್ ಆ್ಯಪ್‌ನಂಥ ಕಿರುತಂತ್ರಾಶಗಳಲ್ಲಿರುವಂತೆಯೇ ಫೇಸ್‌ಬುಕ್‌ನಂಥ ವೇದಿಕೆಗಳಲ್ಲಿಯೂ ಇದ್ದರು. ಬಿಜೆಪಿಯ ಚಾಣಾಕ್ಷತನವಿದ್ದದ್ದು ಮತದಾರರ ಪಟ್ಟಿ ಮತ್ತು ಮೊಬೈಲ್‌ ಫೋನುಗಳ ನಡುವೆ ಸಂಪರ್ಕ ಕಲ್ಪಿಸಿದ್ದು. ಬಿಜೆಪಿಯ ‘ಪನ್ನಾ ಪ್ರಮುಖ್’ ಅಥವಾ ‘ಪೇಜ್ ಪ್ರಮುಖ್’ ಪರಿಕಲ್ಪನೆ 2014ರ ಚುನಾವಣೆಗಳ ಸಂದರ್ಭದಲ್ಲಿಯೇ ಜನ್ಮ ತಳೆದಿರಬೇಕು. ಇದು ಬಹಳ ಸರಳವಾದ ಉಪಾಯ. ಮತದಾರರ ಪಟ್ಟಿಯ ಒಂದೊಂದು ಪುಟದ ನಿರ್ವಹಣೆಗೂ ಒಬ್ಬೊಬ್ಬ ಕಾರ್ಯಕರ್ತನನ್ನು ನೇಮಿಸುವ ಪರಿಪಾಟವಿದು. ಸುಮಾರು 60 ಮತದಾರರನ್ನು ಒಬ್ಬ ಕಾರ್ಯಕರ್ತ ನಿರ್ವಹಿಸುತ್ತಾನೆ.

ಈ ‘ಪೇಜ್ ಪ್ರಮುಖ್’ ಪರಿಕಲ್ಪನೆಯನ್ನು ಜಾರಿಗೆ ತಂದ ವಿಧಾನ ಮಾತ್ರ ಬಹಳ ಕುತೂಹಲಕಾರಿಯಾಗಿದೆ. ಕ್ಯಾರವಾನ್ ನಿಯತಕಾಲಿಕದೊಂದಿಗೆ ಮಾತನಾಡಿರುವ ಶಿವಮ್ ಶಂಕರ್ ಸಿಂಗ್ ಈ ತಂತ್ರವನ್ನು ಹೇಗೆ ಬಳಸಲಾಯಿತು ಎಂಬುದನ್ನು ವಿವರಿಸಿದ್ದಾರೆ. 2013ರಿಂದ 2018ರವರೆಗೂ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದ ಶಿವಮ್ ಈಗ ಬಿಹಾರದಲ್ಲಿ ಮಹಾಘಟಬಂಧನ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಹೇಳುವಂತೆ ‘ಪೇಜ್ ಪ್ರಮುಖ್’ಗಳ ಸಹಾಯದಿಂದ ಪ್ರತಿಯೊಬ್ಬ ಮತದಾರನ ದೂರವಾಣಿ ಸಂಖ್ಯೆಯನ್ನೂ ಸಂಗ್ರಹಿಸಿ ಅವರಿಗೆ ವೈಯಕ್ತಿಕ ಸಂದೇಶಗಳನ್ನು ಕಳುಹಿಸುವ ತಂತ್ರ ರೂಪಿಸಲಾಗಿತ್ತು. ಯಾವ ಬಗೆಯ ಮತದಾರರಿಗೆ ಯಾವ ಬಗೆಯ ಸಂದೇಶವನ್ನು ಕಳುಹಿಸಬೇಕು ಎಂಬ ಅರಿವು ಬಿಜೆಪಿಯ ಪ್ರಚಾರ ತಂತ್ರ ರೂಪಿಸಿದವರಿಗೆ ಗೊತ್ತಿತ್ತು. ಒಂದರ್ಥದಲ್ಲಿ ಬಿಜೆಪಿ ‘ಬಿಗ್ ಡೇಟಾ’ ತಂತ್ರಗಳನ್ನು ಬಹಳ ಯಶಸ್ವಿಯಾಗಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತು.

ಶಿವಮ್ ಅವರು ಬಹಿರಂಗಪಡಿಸಿದ ಮತ್ತೊಂದು ವಿಚಾರವಿದೆ. ಬಿಜೆಪಿ ಈ ತಂತ್ರವನ್ನು ರೂಪಿಸುವುದಕ್ಕೆ ಮೊದಲು ಮತಗಟ್ಟೆಗಳ ಮಟ್ಟದಲ್ಲಿ ಹಿಂದಿನ ಚುನಾವಣೆಗಳ ಫಲಿತಾಂಶವನ್ನೂ ವಿಶ್ಲೇಷಿಸಿತ್ತು. ಮತಯಂತ್ರಗಳನ್ನು ಬಳಸಲು ಆರಂಭಿಸಿದ ನಂತರ ಫಲಿತಾಂಶ ಪ್ರತೀ ಮತಗಟ್ಟೆವಾರು ದೊರೆಯುತ್ತದೆ. ಯಾವ ಮತಗಟ್ಟೆಯಲ್ಲಿ ಎಷ್ಟೆಷ್ಟು ಮತಗಳು ಯಾವ ಪಕ್ಷಕ್ಕೆ ಹೋಗಿವೆ ಎನ್ನುವುದು ತಿಳಿಯುತ್ತದೆ. ಇದರ ಜೊತೆಗೆ ‘ಪೇಜ್ ಪ್ರಮುಖ್’ಗಳ ಸ್ಥಳೀಯ ಜ್ಞಾನವೂ ಸೇರಿಕೊಂಡರೆ ಯಾವ ಮತದಾರನ ಒಲವು ಯಾವ ಕಡೆಗೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಇದರ ಆಧಾರದ ಮೇಲೆ ಒಬ್ಬೊಬ್ಬರ ಮೇಲೆ ಹೇಗೆ ಪ್ರಭಾವ ಬೀರಬೇಕು ಎಂಬುದನ್ನು ನಿರ್ಧರಿಸುವುದೂ ಸುಲಭವಾಗುತ್ತದೆ.

ಇದೆಲ್ಲವೂ ಬಿಜೆಪಿಗೆ ಬಹಳ ಸುಲಭವಾಗುವುದಕ್ಕೆ ಕಾರಣವಾದದ್ದು ತಂತ್ರಜ್ಞಾನ. ಜೂನ್ 2016ರವರೆಗೂ ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಬಹಳ ಸುಲಭವಾಗಿ ಮತದಾರರ ಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದಿತ್ತು. ಈ ಪಟ್ಟಿಗಳು ಕಂಪ್ಯೂಟರಿನಲ್ಲಿ ಸಂಸ್ಕರಿಸಲಾಗುವ ಫೈಲ್ ಫಾರ್ಮ್ಯಾಟ್‌ಗಳಲ್ಲಿಯೇ ಇದ್ದವು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಚುನಾವಣಾ ಆಯೋಗ ಒಂದು ಸುತ್ತೋಲೆ ಹೊರಡಿಸಿ ಮತದಾರರ ಪಟ್ಟಿಯನ್ನು ಕಂಪ್ಯೂಟರಿನಲ್ಲಿ ಸಂಸ್ಕರಿಸಲಾಗದ ಪಿಡಿಎಫ್ ಕಡತಗಳಲ್ಲಷ್ಟೇ ಪ್ರಕಟಿಸುವಂತೆ ಹೇಳಿತು. ಅಂದರೆ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ಅದರ ಗಮನಕ್ಕೆ ಬಂದು ಅದನ್ನು ತಡೆಯಲು ಈ ಕ್ರಮ ಅನುಸರಿಸಿತು ಎಂಬಂತೆ ಕಾಣಿಸುತ್ತದೆ.

ಇವಿಎಂನ ವಿಶ್ವಾಸಾರ್ಹತೆಯ ಬಗ್ಗೆ ಮಾತನಾಡುತ್ತಿರುವ ಪಕ್ಷಗಳು ಮತದಾರರ ಪಟ್ಟಿಯ ಪಾವಿತ್ರ್ಯ, ಅದಕ್ಕಿಂತಲೂ ಹೆಚ್ಚಾಗಿ ಮತದಾನದ ರಹಸ್ಯ ಸ್ವರೂಪವನ್ನು ಇಲ್ಲವಾಗಿಸುವ ಮತಗಟ್ಟೆವಾರು ಫಲಿತಾಂಶದ ವಿವರ ಪಡೆಯುವ ಸೌಲಭ್ಯದ ಕುರಿತು ಮಾತನಾಡಲೇ ಇಲ್ಲ. ಶಿವಮ್ ಅವರು ಬಯಲು ಮಾಡಿರುವ ವಿವರಗಳನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಬಿಜೆಪಿ ಅನುಸರಿಸಿದ ತಂತ್ರ ಕೇಂಬ್ರಿಜ್ ಅನಲಿಟಿಕಾ ತಂತ್ರಕ್ಕಿಂತ ಹೆಚ್ಚು ಪ್ರಭಾವಶಾಲಿಯಾದದ್ದು. ಆದರೆ ಇಲ್ಲಿ ಕಾನೂನುಗಳ ಉಲ್ಲಂಘನೆಯಾಗಿಲ್ಲ ಎಂಬುದನ್ನು ಹೊರತುಪಡಿಸಿದರೆ ವೈಯಕ್ತಿಕ ಮಾಹಿತಿಗಳ ಸೋರಿಕೆಯಂತೂ ಸಂಭವಿಸಿದೆ. ಫೇಸ್‌ಬುಕ್‌ನ ದತ್ತಾಂಶವನ್ನು ಬಳಸಿಕೊಂಡು ವ್ಯಕ್ತಿಗಳ ರಾಜಕೀಯ ಆಸಕ್ತಿ ಗುರುತಿಸುವ ಬದಲಿಗೆ ಮತದಾರರ ಪಟ್ಟಿಯನ್ನಿಟ್ಟುಕೊಂಡು ಅದೇ ಕೆಲಸವನ್ನು ಮಾಡಲಾಗಿದೆ.

ಇದು ಸಾಧ್ಯವಾದದ್ದು ತಂತ್ರಜ್ಞಾನದಿಂದ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳಿಗೆ ಮೊಬೈಲ್ ನಂಬರ್‌ಗಳನ್ನು ಜೋಡಿಸುವ ಕೆಲಸವನ್ನು ಮತ್ತೊಂದು ಬಗೆಯಲ್ಲಿಯೂ ಮಾಡಲು ಸಾಧ್ಯವಿದೆ. ಪಟ್ಟಿಯಲ್ಲಿ ಪ್ರತಿಯೊಂದು ಹೆಸರಿನ ಮುಂದೆಯೂ ಅವರ ಮತದಾರರ ಗುರುತಿನ ಚೀಟಿಯ ಸಂಖ್ಯೆಯಿರುತ್ತದೆ. ಖಾಸಗಿ ಮೊಬೈಲ್ ಫೋನ್ ಸೇವಾದಾತರು ಹೆಚ್ಚಿನ ಸಂದರ್ಭಗಳಲ್ಲಿ ಗುರುತಿನ ದಾಖಲೆಯಾಗಿ ಮತದಾರರ ಗುರುತಿನ ಚೀಟಿಯನ್ನೇ ಪಡೆದಿರುತ್ತಾರೆ. ಅವರ ದತ್ತಾಂಶದಲ್ಲಿಯೂ ಗುರುತು ಚೀಟಿಯ ಸಂಖ್ಯೆಯಿರುತ್ತದೆ. ಮತದಾರರ ಪಟ್ಟಿ ಒಂದು ಸಂಸ್ಕರಿಸಬಲ್ಲ ದತ್ತ ಸಂಚಯವಾಗಿ ದೊರೆತರೆ ಅದಕ್ಕೆ ಮೊಬೈಲ್ ಸೇವಾದಾತರ ದತ್ತಸಂಚಯವನ್ನು ಜೋಡಿಸಿದರೆ ಅದೊಂದು ಅತ್ಯುತ್ಕೃಷ್ಟ ಪ್ರಚಾರ ದತ್ತಸಂಚಯವಾಗಿ ಬಿಡುತ್ತದೆ. ಮೊಬೈಲ್ ಸೇವಾದಾತರು ತಮ್ಮ ದತ್ತಾಂಶವನ್ನು ಹಂಚಿಕೊಂಡಿಲ್ಲ ಎಂಬ ಸಂಶಯವಂತೂ ಸದಾ ಇದ್ದದ್ದೇ. ಈತನಕವೂ ಈ ಬಗೆಯ ಮಾಹಿತಿಗಳ ಸಂರಕ್ಷಣೆಗೆ ಭಾರತದಲ್ಲಿ ಕಾನೂನೇ ಇಲ್ಲ.

ವರ್ತಮಾನದ ಚುನಾವಣೆಯಲ್ಲಿ ಬಳಕೆಯಾಗುವ ತಂತ್ರಜ್ಞಾನವೆಂದರೆ ಮತಯಂತ್ರ ಮಾತ್ರ ಅಲ್ಲ ಎಂಬುದು ನಮ್ಮ ರಾಜಕೀಯ ಪಕ್ಷಗಳಿಗೆ ಅರ್ಥವಾಗುವ ತನಕವೂ ಈ ಸಮಸ್ಯೆಗಳು ಮುಂದುವರಿಯುತ್ತವೆ. ಚುನಾವಣಾ ಆಯೋಗ ತನ್ನ ನೈತಿಕ ಅಹಂಕಾರದಲ್ಲಿ ಮತಗಟ್ಟೆವಾರು ಚುನಾವಣಾ ಫಲಿತಾಂಶ ನೀಡುತ್ತಾ ರಹಸ್ಯ ಮತದಾನದ ಉದ್ದೇಶವನ್ನೂ ವಿಫಲಗೊಳಿಸುತ್ತಲೇ ಇರುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT