ಬುಧವಾರ, ಜೂನ್ 3, 2020
27 °C
ಫೇಸ್‌ಬುಕ್‌ಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಡವಿಟ್ಟ ರಾಜಕೀಯ ಪಕ್ಷಗಳು

ಅಭಿವ್ಯಕ್ತಿ ನಿಯಂತ್ರಿಸುವ ಹೊಸ ‘ದೊಡ್ಡಣ್ಣ’

ಎನ್ ಎ ಎಂ ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಫೇಸ್‌ಬುಕ್‌ ಇದೇ ಏಪ್ರಿಲ್ ಒಂದರಂದು ಭಾರತದ ರಾಜಕೀಯ ಪಕ್ಷಗಳು, ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾನ್ಯ ಜನರನ್ನು ಏಕಕಾಲದಲ್ಲಿ ಮೂರ್ಖರನ್ನಾಗಿಸಿತು. ಈ ಮೂರ್ಖತನ ಏನೆಂದು ಅರಿಯುವುದಕ್ಕೆ ಮುನ್ನ ಫೇಸ್‌ಬುಕ್ ಮಾಡಿದ್ದೇನೆಂದು ಸ್ವಲ್ಪ ತಿಳಿದುಕೊಳ್ಳೋಣ.

ಏಪ್ರಿಲ್ ಒಂದರಂದು ಫೇಸ್‌ಬುಕ್‌ನ ‘ನ್ಯೂಸ್ ರೂಂ’ ಬ್ಲಾಗ್‌ನಲ್ಲಿ ಸಂಸ್ಥೆಯ ಸೈಬರ್ ಸೆಕ್ಯುರಿಟಿ ಪಾಲಿಸಿ ವಿಭಾಗದ ನೆಥಾನಿಯಲ್ ಗ್ಲೀಷರ್ ಸುದೀರ್ಘವಾದ ಲೇಖನವೊಂದರ ಮೂಲಕ ಭಾರತ ಮತ್ತು ಪಾಕಿಸ್ತಾನಕ್ಕೆ ಸೇರಿದ ಹಲವು ಫೇಸ್‌ಬುಕ್ ಪುಟ, ಖಾತೆ, ಗುಂಪುಗಳು ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದನ್ನು ವಿವರಿಸಿದ್ದರು. ಅದರಂತೆ ಕಾಂಗ್ರೆಸ್ ಐ.ಟಿ. ಸೆಲ್‌ಗೆ ಸೇರಿದ 138 ಫೇಸ್‌ಬುಕ್ ಪುಟಗಳು ಮತ್ತು 549 ಖಾತೆಗಳು ರದ್ದಾಗಿವೆ. ಹಾಗೆಯೇ  ಬಿಜೆಪಿಯೊಂದಿಗೆ ಸಂಬಂಧವಿದ್ದ ಮಾಹಿತಿ ತಂತ್ರಜ್ಞಾನ ಸಂಸ್ಥೆ ‘ಸಿಲ್ವರ್ ಟಚ್’ಗೆ ಸೇರಿದ್ದ ಒಂದು ಫೇಸ್‌ಬುಕ್ ಪುಟ, 12 ಖಾತೆಗಳು, ಒಂದು ಫೇಸ್‌ಬುಕ್ ಗುಂಪು ಮತ್ತು ಒಂದು ಇನ್‌ಸ್ಟಾಗ್ರಾಂ ಖಾತೆಯನ್ನು ರದ್ದುಪಡಿಸಲಾಗಿದೆ. ಅತ್ತ ಪಾಕಿಸ್ತಾನದಲ್ಲಿ 24 ಫೇಸ್‌ಬುಕ್ ಪುಟಗಳು, 57 ಖಾತೆಗಳು, 7 ಗುಂಪುಗಳು ಮತ್ತು 15 ಇನ್‌ಸ್ಟಾಗ್ರಾಂ ಖಾತೆಗಳೂ ಶಾಶ್ವತವಾಗಿ ಇಲ್ಲವಾಗಿವೆ. ಇವೆಲ್ಲವುಗಳ ಹೊರತಾಗಿ 321 ಪುಟಗಳನ್ನು ಸ್ಪ್ಯಾಮಿಂಗ್ ಕಾರಣಕ್ಕಾಗಿಯೂ ರದ್ದುಪಡಿಸಲಾಗಿದೆ. ಈ ರದ್ದತಿಗೆ ನೆಥಾನಿಯಲ್ ಗ್ಲೀಷರ್ ಕೊಟ್ಟ ಕಾರಣ ಒಂದೇ ‘ವಿಶ್ವಾಸಾರ್ಹವಲ್ಲದ ನಡವಳಿಕೆ’. ವಕೀಲರ ಪರಿಭಾಷೆಯಲ್ಲಿರುವ ಈ ಪದವನ್ನು ಸಾಮಾನ್ಯರ ಭಾಷೆಗೆ ಅನುವಾದಿಸಿದರೆ, ಸುಳ್ಳು ಸುದ್ದಿಯನ್ನು ಉತ್ಪಾದಿಸುವುದು ಇಲ್ಲವೇ ಹರಡುವುದು ಎಂಬ ಅರ್ಥ ಪಡೆಯುತ್ತದೆ.

ಫೇಸ್‌ಬುಕ್ ತನ್ನ ಸಾಮುದಾಯಿಕ ಶಿಷ್ಟಾಚಾರದ ನಿಯಮಗಳಿಗೆ (ಕಮ್ಯುನಿಟಿ ಸ್ಟ್ಯಾಂಡರ್ಡ್) ಅನುಗುಣವಾಗಿ ಕೆಲವು ಪುಟಗಳನ್ನು ತೆಗೆದು ಹಾಕಿದರೆ ಅದು ಜನರನ್ನು ಮೂರ್ಖರನ್ನಾಗಿಸಿದಂತೆಯೇ? ಇಡೀ ಪ್ರಕರಣದ ಸೂಕ್ಷ್ಮವಿರುವುದೇ ಇಲ್ಲಿ. ಫೇಸ್‌ಬುಕ್ ಒಂದು ಮಾಧ್ಯಮ ಸಂಸ್ಥೆಯಲ್ಲ, ಅದೊಂದು ವೇದಿಕೆ. ಅಲ್ಲಿ ಖಾತೆ, ಗುಂಪು ಅಥವಾ ಪುಟ ರಚಿಸಿಕೊಂಡು ನಿರ್ದಿಷ್ಟ ಚೌಕಟ್ಟಿನಲ್ಲಿ ಪರಸ್ಪರ ಸಂವಹನ ನಡೆಸಬಹುದು. ಈ ಚೌಕಟ್ಟಿನ ಉಲ್ಲಂಘನೆಯಾದರೆ ಖಾತೆಗಳನ್ನು ರದ್ದುಪಡಿಸುವುದಕ್ಕೆ ಪಾರದರ್ಶಕ ವಿಧಾನವಿರಬೇಕಾಗುತ್ತದೆ. ಅಂಥ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಏಕಾಏಕಿಯಾಗಿ ಈ ಖಾತೆಗಳನ್ನು ರದ್ದುಪಡಿಸಿದ್ದೇಕೆ ಎಂಬ ಪ್ರಶ್ನೆಯನ್ನು ಯಾರೂ ಎತ್ತಲಿಲ್ಲ ಎಂಬುದೇ ನಮ್ಮೆಲ್ಲರ ಮೂರ್ಖತನಕ್ಕೆ ಸಾಕ್ಷಿ.

ಕಾನೂನು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವರಾದ ರವಿಶಂಕರ್‌ ಪ್ರಸಾದ್ ಅವರಂತೂ ಕಾಂಗ್ರೆಸ್‌ಗೆ ಸೇರಿದ 687 ಖಾತೆಗಳು ರದ್ದಾಗಿವೆ ಎಂಬುದಕ್ಕೆ  ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನ ಐ.ಟಿ. ಸೆಲ್ ಸುಳ್ಳು ಸುದ್ದಿ ಹರಡುತ್ತಿದೆ ಎಂಬ ಧ್ವನಿಯಲ್ಲಿ ಅವರ ಪ್ರತಿಕ್ರಿಯೆ ಇತ್ತು. ಆದರೆ, ಅವರು ಬಿಜೆಪಿಯ ಐ.ಟಿ. ಸೆಲ್‌ನೊಂದಿಗೆ ನಿಕಟ ಸಂಬಂಧವಿರುವ, ಪ್ರಧಾನಿ ನರೇಂದ್ರ ಮೋದಿಯವರ ‘ನಮೋ ಆ್ಯಪ್’ ಅನ್ನು ರೂಪಿಸಿರುವ ‘ಸಿಲ್ವರ್ ಟಚ್’ಗೆ ಸೇರಿದ್ದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳು ರದ್ದಾಗಿರುವ ಬಗ್ಗೆ ಮಾತನಾಡಲೇ ಇಲ್ಲ. ಈ ಪ್ರತಿಕ್ರಿಯೆ ನೀಡುವಾಗ ರವಿಶಂಕರ್ ಪ್ರಸಾದ್ ಅವರು ತಾವು ಕಾನೂನು ಸಚಿವ ಎಂಬುದನ್ನು ಮರೆತಿದ್ದರು! ಅರ್ಥಾತ್ ಏಪ್ರಿಲ್ ಫೂಲ್ ಆಗಿದ್ದರು!

ಅವರೇನೋ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಹಣಿಯಲು ಸಿಕ್ಕ ಅವಕಾಶವೊಂದನ್ನು ಬಳಸಿಕೊಂಡರೆಂದು ಭಾವಿಸೋಣ. ಆದರೆ ಫೇಸ್‌ಬುಕ್‌ನ ಕಾರ್ಯಾಚರಣೆಯಲ್ಲಿ ಹೆಚ್ಚು ನಷ್ಟವನ್ನು ಅನುಭವಿಸಿದ್ದು ಬಿಜೆಪಿಯೇ. ಈ ವಿಷಯವನ್ನು ಗುರುತಿಸುವಲ್ಲಿ ಸೋಲುವುದರ ಮೂಲಕ ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳ ಮೂರ್ಖತೆ ಅನಾವರಣಗೊಂಡಿತು. ‘ಸಿಲ್ವರ್ ಟಚ್’ಗೆ ಸೇರಿದ ಫೇಸ್‌ಬುಕ್ ಪುಟವನ್ನು ಅನುಸರಿಸುತ್ತಿದ್ದವರ ಸಂಖ್ಯೆ 26 ಲಕ್ಷ. ಅದು ನಿರ್ವಹಿಸುತ್ತಿದ್ದ ಗುಂಪಿನಲ್ಲಿದ್ದ ಖಾತೆಗಳ ಸಂಖ್ಯೆ 15 ಸಾವಿರ, ಇನ್‌ಸ್ಟಾಗ್ರಾಂ ಖಾತೆಯನ್ನು ಅನುಸರಿಸುತ್ತಿದ್ದವರ ಸಂಖ್ಯೆ 30 ಸಾವಿರ. ಇದೇ ವೇಳೆ ಕಾಂಗ್ರೆಸ್ ಐ.ಟಿ. ಸೆಲ್‌ನೊಂದಿಗೆ ಸಂಪರ್ಕವಿದ್ದ ಪುಟಗಳನ್ನು ಅನುಸರಿಸುತ್ತಿದ್ದವರ ಒಟ್ಟು ಸಂಖ್ಯೆ ಎರಡು ಲಕ್ಷ. ಇದರ ಆಚೆಗೆ ಸುಮಾರು ಬಿಜೆಪಿಯನ್ನು ಬೆಂಬಲಿಸುವ 200 ಫೇಸ್‌ಬುಕ್ ಪುಟಗಳು ರದ್ದಾಗಿರುವುದರ ಕುರಿತು ‘ದ ಪ್ರಿಂಟ್’ ಜಾಲತಾಣ ವರದಿ ಮಾಡಿದೆ. ಇದರಿಂದ ಬಿಜೆಪಿ ಕಳೆದುಕೊಂಡ ‘ಅಭಿಮಾನಿ’ಗಳ ಸಂಖ್ಯೆ 20 ಕೋಟಿಯಂತೆ. 

ನೆಥಾನಿಯಲ್ ಗ್ಲೀಷರ್ ಅವರ ಬರಹದಲ್ಲೇ ಒಂದು ರಾಜಕಾರಣವಿದೆ. ಕಾಂಗ್ರೆಸ್ ಐ.ಟಿ. ಸೆಲ್‌ಗೆ ಸೇರಿದ್ದು ಎಂದು ಸ್ಪಷ್ಟವಾಗಿ ಹೇಳುವ ಅವರು ಬಿಜೆಪಿಯ ಐ.ಟಿ. ಸೆಲ್ ಅನ್ನು ಪ್ರಸ್ತಾಪಿಸುವುದೇ ಇಲ್ಲ. ಅದರ ಬದಲಿಗೆ ‘ಸಿಲ್ವರ್ ಟಚ್’ ಎಂಬ ಸಂಸ್ಥೆಯ ಹೆಸರನ್ನಷ್ಟೇ ಪ್ರಸ್ತಾಪಿಸುತ್ತಾರೆ. ಈ ‘ಸಿಲ್ವರ್ ಟಚ್’ ಗುಜರಾತ್ ರಾಜ್ಯ ಸರ್ಕಾರಕ್ಕೆ ಐ.ಟಿ. ಸೇವೆಗಳನ್ನು ಒದಗಿಸುವ ಸಂಸ್ಥೆ. ಅಷ್ಟೇ ಅಲ್ಲ, ಇದು ನಮೋ ಆ್ಯಪ್ ಬಳಸುವ ಎಲ್ಲರೂ ಕಡ್ಡಾಯವಾಗಿ ಹಿಂಬಾಲಿಸಬೇಕಾಗಿ ಬರುವ ‘ದ ಇಂಡಿಯಾ ಐ’ ಎಂಬ ಜಾಲತಾಣವನ್ನು ನಡೆಸುತ್ತಿರುವ ಸಂಸ್ಥೆ. ಇದೇ ಹೆಸರಿನ ಫೇಸ್‌ಬುಕ್ ಪುಟವೂ ರದ್ದಾಗಿದೆ. ಈ ಸಂಸ್ಥೆ ಬಿಜೆಪಿಯ ಐ.ಟಿ. ಸೆಲ್‌ನೊಂದಿಗೆ ಇರುವ ಸಂಬಂಧವನ್ನು ‘ಅಲ್ಟ್ ನ್ಯೂಸ್’‌ನ ಪ್ರತೀಕ್ ಸಿನ್ಹಾ ಬಹಳ ಹಿಂದೆಯೇ ಬಯಲು ಮಾಡಿದ್ದಾರೆ.

ಪ್ರಚಾರ, ಸ್ಪ್ಯಾಮ್ (ಜಾಹೀರಾತಿನ ಹೇರಿಕೆ) ಮತ್ತು ವಿಶ್ವಾಸಾರ್ಹ ಮಾಹಿತಿಯ ನಡುವಣ ಗೆರೆ ಬಹಳ ತೆಳುವಾದುದು. ತನ್ನನ್ನು ತಲುಪುತ್ತಿರುವ ಯಾವ ಮಾಹಿತಿ ಸ್ಪ್ಯಾಮ್ ಅಥವಾ ಯಾವುದು ಪ್ರಚಾರ ಸಾಮಗ್ರಿ ಎಂಬುದನ್ನು ನಿರ್ಧರಿಸಬೇಕಾಗಿರುವುದು ಬಳಕೆದಾರ. ಇನ್ನು ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಬೇಕಿರುವುದು ಸ್ವತಂತ್ರ ಮಾಧ್ಯಮಗಳು. ಫೇಸ್‌ಬುಕ್ ಒಂದು ಮಾಧ್ಯಮ ಸಂಸ್ಥೆಯ ಜವಾಬ್ದಾರಿಯನ್ನು ಹೊರಲು ಸಿದ್ಧವಿಲ್ಲ. ಹಾಗಿರುವಾಗ ಅದು ಮಾಹಿತಿಯ ವಿಶ್ವಾಸಾರ್ಹತೆಯನ್ನು ತನಗೆ ತೋಚಿದಂತೆ ನಿರ್ಧರಿಸಕೂಡದು. ಹೆಚ್ಚೆಂದರೆ ಅದೊಂದು ವೇದಿಕೆಯಾಗಿ ತನ್ನ ಬಳಕೆದಾರರ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ನಿರ್ದಿಷ್ಟ ಗ್ರಾಹಕಳಿಗೆ ನೀಡುವ ಮಾಹಿತಿಯನ್ನು ನಿಯಂತ್ರಿಸಬಹುದಷ್ಟೇ. ಈ ಪ್ರಕರಣದಲ್ಲಿ ಫೇಸ್‌ಬುಕ್ ಈ ತತ್ವವನ್ನು ಉಲ್ಲಂಘಿಸಿ ಸ್ವತಃ ಮಾಹಿತಿ ನಿಯಂತ್ರಕನ ಸ್ಥಾನದಲ್ಲಿ ಕುಳಿತುಬಿಟ್ಟಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ ಎಂದು ಯಾರಿಗೂ ಅನ್ನಿಸದೇ ಇರುವುದು ಅದರಲ್ಲೂ ವಿಶೇಷವಾಗಿ ಸ್ವತಃ ಕಾನೂನು ಸಚಿವರಿಗೇ ಅನ್ನಿಸದೇ ಇರುವುದು ನಿಜಕ್ಕೂ ದೊಡ್ಡ ದುರಂತ.

ಫೇಸ್‌ಬುಕ್ ನೀಡಿರುವ ಪಟ್ಟಿಯಲ್ಲಿರುವ ರಾಜಕೀಯ ಪಕ್ಷಗಳ ಪರವಾದ ಖಾತೆಗಳನ್ನು ಬದಿಗಿಟ್ಟು ಆಲೋಚಿಸಿದರೆ ಇದು ಅರ್ಥವಾಗುತ್ತದೆ. ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ 300ಕ್ಕೂ ಹೆಚ್ಚು ಖಾತೆಗಳಲ್ಲಿ ನಿಜಕ್ಕೂ ಏನಿತ್ತು? ಈ ವಿಷಯದಲ್ಲಿ ಫೇಸ್‌ಬುಕ್ ಪಾರದರ್ಶಕತೆ ಪಾಲಿಸಿಲ್ಲ. ಭಾರತದೊಳಗಿನ ಮಾಹಿತಿಯ ಹರಿವಿನ ಮೇಲಿನ ನಿಯಂತ್ರಣವಿರಬೇಕಾದದ್ದು ಭಾರತವೆಂಬ ಸಾರ್ವಭೌಮ ರಾಷ್ಟ್ರಕ್ಕೇ ಹೊರತು ಯಾವುದೋ ಬಹುರಾಷ್ಟ್ರೀಯ ಕಂಪನಿಗಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗಳು ಪರಸ್ಪರರ ಫೇಸ್‌ಬುಕ್ ಪುಟಗಳು ರದ್ದಾದುದಕ್ಕೆ ಸಂತೋಷಪಡುತ್ತಾ ರಾಷ್ಟ್ರೀಯ ಸಾರ್ವಭೌಮತ್ವ ಕಳೆದುಹೋಗಿರುವುದನ್ನು ಮರೆತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು