ಮಂಗಳವಾರ, ಜೂನ್ 22, 2021
27 °C

ಹಣಕಾಸು ಸಾಕ್ಷರತೆ | ಸಂಕಷ್ಟದಲ್ಲಿರುವವರ ‘ಆಪ್ತಮಿತ್ರ’ ಈ ವಿಮೆಗಳು!

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

ಕೋವಿಡ್-19ರ ಎರಡನೆಯ ಅಲೆಯಿಂದಾಗಿ ಸಾವು-ನೋವು ಅಪಾರ ಪ್ರಮಾಣದಲ್ಲಿ ವರದಿಯಾಗುತ್ತಿದೆ. ಕಣ್ಣಿಗೆ ಕಾಣದ ವೈರಾಣುವಿನ ದಾಳಿಯಿಂದ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಕುಟುಂಬಗಳ ಪಾಲಿಗೆ ತುಂಬಲಾರದ ನಷ್ಟ. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೊಂದವರಿಗೆ ಆರ್ಥಿಕ ಬಲ ಸಿಕ್ಕರೆ ಒಂದಿಷ್ಟು ಸಮಸ್ಯೆಗಳು ನೀಗಬಹುದು. ಜನಧನ ಬ್ಯಾಂಕ್ ಖಾತೆ ಹೊಂದಿರುವವರಿಗೆ ಮತ್ತು ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುವವರಿಗೆ ಕೆಲವು ವಿಮೆಗಳು ಸಿಗುತ್ತವೆ. ದುರಿತ ಕಾಲದಲ್ಲಿ ನೆರವಿಗೆ ಬರುವ ಈ ವಿಮೆಗಳ ಬಗ್ಗೆ ಎಲ್ಲರೂ ತಿಳಿಯಬೇಕಾದ ಮಾಹಿತಿ ಇಲ್ಲಿದೆ.

ಜನಧನ ಖಾತೆ ಜತೆ PMJJBY ಯೋಜನೆ ಇದ್ದರೆ ಸಿಗುತ್ತದೆ ₹ 2 ಲಕ್ಷ ವಿಮೆ: 2014ರಲ್ಲಿ ಜನಧನ ಯೋಜನೆ ಜಾರಿಗೊಳಿಸಿದಾಗ 18 ವರ್ಷದಿಂದ 50 ವರ್ಷ ವಯಸ್ಸಿನವರೆಗಿನ ಪ್ರತಿ ಖಾತೆದಾರನಿಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (PMJJBY) ಒದಗಿಸಲಾಗಿತ್ತು.

ಆರಂಭದಲ್ಲಿ ₹ 330 ಪ್ರೀಮಿಯಂ ಕಡಿತ ಮಾಡಿಕೊಂಡು ₹ 2 ಲಕ್ಷಗಳ ಜೀವ ವಿಮೆ ಒದಗಿಸಲಾಗಿತ್ತು. ನಂತರ ಪ್ರತಿ ವರ್ಷ ಜನಧನ ಖಾತೆದಾರನ ಖಾತೆಯಿಂದ ಸ್ವಯಂಚಾಲಿತವಾಗಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ₹ 330 ಪ್ರೀಮಿಯಂ ಕಡಿತಗೊಳಿಸಲಾಗುತ್ತಿತ್ತು. ಸದ್ಯದ ಮಾಹಿತಿಯ ಪ್ರಕಾರ, ಈ ವರ್ಷದ ಮಾರ್ಚ್ 31ರ ವೇಳೆಗೆ 10.27 ಕೋಟಿ ಜನರ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆಗಳು ಚಾಲ್ತಿಯಲ್ಲಿವೆ.

ಹಾಗಾಗಿ ನೆರೆಹೊರೆಯವರು, ಸಂಬಂಧಿಕರು ಅಥವಾ ಪರಿಚಯಸ್ಥರು ಕೋವಿಡ್ ಅಥವಾ ಯಾವುದೇ ರೋಗದಿಂದ ಮರಣ ಹೊಂದಿದಲ್ಲಿ, ಇನ್ಯಾವುದೇ ಕಾರಣದಿಂದ ಮೃತಪಟ್ಟಲ್ಲಿ ಒಮ್ಮೆ ಅವರ ಪಾಸ್‌ಬುಕ್, ಖಾತೆಯ ಜಮಾ–ಖರ್ಚಿನ ವಿವರಗಳನ್ನು ಪರಿಶೀಲಿಸಲು ಹೇಳಿ. ಸರಿಯಾದ ಸಮಯಕ್ಕೆ ವಿಮೆಯ ಪ್ರೀಮಿಯಂ ಮೊತ್ತ ₹ 330 ಕಡಿತಗೊಂಡಿದ್ದಲ್ಲಿ ಅವರಿಗೆ ₹ 2 ಲಕ್ಷ ವಿಮೆ ಪರಿಹಾರ ಸಿಗುತ್ತದೆ. ಸೂಕ್ತ ದಾಖಲೆಗಳನ್ನು ಸಂಬಂಧಪಟ್ಟ ಬ್ಯಾಂಕ್ ಅಥವಾ ವಿಮಾ ಕಂಪನಿಗೆ ಸಲ್ಲಿಸಿ 90 ದಿನಗಳ ಒಳಗಾಗಿ ವಿಮೆ ಕ್ಲೇಮ್ ಪಡೆಯಬಹುದು. ನೆನಪಿಡಿ, 55 ವರ್ಷ ವಯಸ್ಸಿನ ಒಳಗಿನವರಿಗೆ ಮಾತ್ರ ಈ ವಿಮೆ ಅನ್ವಯಿಸುತ್ತದೆ. ಇದು ಅವಧಿ ವಿಮೆ ಇದ್ದಂತೆ.


ಪ್ರಮೋದ್ ಬಿ.ಪಿ.

ಇಪಿಎಫ್ ಖಾತೆದಾರರಿಗೂ ಇದೆ ವಿಮೆ ನೆರವು: ಉದ್ಯೋಗಿಯು ಕಾರ್ಮಿಕರ ಭವಿಷ್ಯ ನಿಧಿಗೆ (ಇಪಿಎಫ್) ಸೇರ್ಪಡೆಗೊಂಡಾಗ ಉದ್ಯೋಗದಾತ ಸಂಸ್ಥೆ ನೀಡುವ ಇಪಿಎಫ್ ಪಾಲಿನಲ್ಲಿ ಒಂದಿಷ್ಟು ಮೊತ್ತ ಉದ್ಯೋಗಿಯ ಠೇವಣಿ ಆಧರಿತ ವಿಮೆಗೆ (Employee Deposit-Linked Insurance Scheme) ಸಂದಾಯವಾಗುತ್ತದೆ. ಈ ವಿಮೆ ₹ 2.5 ಲಕ್ಷದಿಂದ ಗರಿಷ್ಠ ₹ 7 ಲಕ್ಷದವರೆಗೆ ಕವರೇಜ್ ನೀಡುತ್ತದೆ. ಈ ವಿಮೆ ಮೊತ್ತ ಸಿಗಬೇಕು ಅಂದರೆ ಮೃತಪಡುವ ಸಂದರ್ಭದಲ್ಲಿ ಉದ್ಯೋಗಿ ಕೆಲಸದಲ್ಲಿದ್ದು, ಸಕಾಲಕ್ಕೆ ಇಪಿಎಫ್ ಕೊಡುಗೆ ಪಾವತಿಸಿರಬೇಕು. ಈ ಪರಿಹಾರ ಪಡೆಯಲು, ಮೃತ ವ್ಯಕ್ತಿಯ ಕುಟುಂಬ ದವರು ಸಂಬಂಧಪಟ್ಟ ಕಂಪನಿಯ ಮಾನವ ಸಂಪನ್ಮೂಲ ವಿಭಾಗವನ್ನು ಸಂಪರ್ಕಿಸಬೇಕು.

(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು