ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಪ್ರೀಮಿಯಂ ಹೆಚ್ಚಿಸುವ ಸಂಗತಿಗಳು

Last Updated 4 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಜೀವನದ ಒಂದು ಹಂತದಲ್ಲಿ ಜೀವ ವಿಮೆ ಅಥವಾ ಆರೋಗ್ಯ ವಿಮೆಯನ್ನು ಖರೀದಿಸಬೇಕಾಗಿ ಬರುತ್ತದೆ. ಜೀವ ವಿಮೆ ಮತ್ತು ಆರೋಗ್ಯ ವಿಮೆ ಕೊಳ್ಳುವಾಗ ಬಹುತೇಕರು ಪ್ರೀಮಿಯಂ ಯಾವ ಸಂದರ್ಭದಲ್ಲಿ ಜಾಸ್ತಿಯಾಗುತ್ತದೆ, ಅದನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಕೇಳುತ್ತಿರುತ್ತಾರೆ. ಈ ವಿಮೆಗಳಿಗೆ ಪ್ರೀಮಿಯಂ ಮೊತ್ತ ನಿಗದಿಪಡಿಸುವಾಗ ವಯಸ್ಸು, ಪ್ರಸ್ತುತ ಆರೋಗ್ಯ ಸ್ಥಿತಿ,ಈಗಾಗಲೇ ಇರುವ ಕಾಯಿಲೆಗಳು, ಜೀವನಕ್ರಮ, ಶಿಕ್ಷಣ, ಆನುವಂಶಿಕ ಕಾಯಿಲೆ, ಸ್ಥೂಲಕಾಯ, ಉದ್ಯೋಗ ಸೇರಿ ಹಲವು ಅಂಶಗಳನ್ನು ಇನ್ಶೂರೆನ್ಸ್ ಕಂಪನಿಗಳು ಪರಿಗಣಿಸುತ್ತವೆ. ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳ ವಿವರ ಇಲ್ಲಿದೆ.

ವಯಸ್ಸು: ವಯಸ್ಸು ಹೆಚ್ಚಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಇದರಿಂದ ಪರೋಕ್ಷವಾಗಿ ಇನ್ಶೂರೆನ್ಸ್‌ನ ಪ್ರೀಮಿಯಂ ಹೆಚ್ಚಳವಾಗುತ್ತದೆ. 30 ವರ್ಷದ ವ್ಯಕ್ತಿ ₹ 3 ಲಕ್ಷ ಕವರೇಜ್ ಇರುವ ಆರೋಗ್ಯ ವಿಮೆಗೆ ವರ್ಷಕ್ಕೆ ₹ 6 ಸಾವಿರ ಪಾವತಿಸುತ್ತಿದ್ದರೆ ಅದೇ ವಿಮೆಗೆ 50 ವರ್ಷದ ವ್ಯಕ್ತಿ ₹ 16 ರಿಂದ ₹ 18 ಸಾವಿರ ಪಾವತಿಸಬೇಕಾಗುತ್ತದೆ. ತಡವಾಗಿ ಇನ್ಶೂರೆನ್ಸ್ ಪಡೆದುಕೊಂಡರೆ ಪ್ರೀಮಿಯಂ ಹೆಚ್ಚುತ್ತದೆ, ಕವರೇಜ್ ತಗ್ಗುತ್ತದೆ.

ಮಿತಿ ಮೀರಿದ ತೂಕ: ಮಿತಿ ಮೀರಿದ ತೂಕ ಇರುವವರಿಗೆ ಹೃದ್ರೋಗ, ಮಧುಮೇಹ, ರಕ್ತದ ಒತ್ತಡ ಸೇರಿ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಪ್ರೀಮಿಯಂ ದರಕ್ಕಿಂತ ಹೆಚ್ಚಿನ ದರವನ್ನು ಅತಿಯಾದ ತೂಕ ಇರುವ ವ್ಯಕ್ತಿಗಳಿಗೆ ನಿಗದಿಪಡಿಸಲಾಗುತ್ತದೆ.

ಆನುವಂಶಿಕ ಕಾಯಿಲೆ: ಕುಟುಂಬದಲ್ಲಿ ಅನುವಂಶಿಕ ಕಾಯಿಲೆಗಳ ಇತಿಹಾಸ ಕಂಡುಬಂದಲ್ಲಿ ಇನ್ಶೂರೆನ್ಸ್ ಕಂಪನಿಗಳು ಪ್ರೀಮಿಯಂ ಹೆಚ್ಚಿಸುತ್ತವೆ.ಆನುವಂಶಿಕ ಕಾಯಿಲೆಗಳು ವ್ಯಕ್ತಿಯ ಜೀವತಾವಧಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು , ಇನ್ಶೂರೆನ್ಸ್ ಕಂಪನಿಯ ಮೇಲೆ ರಿಸ್ಕ್ ಹೆಚ್ಚಿರುವ ಕಾರಣ ಪ್ರೀಮಿಯಂ ತುಟ್ಟಿಯಾಗುತ್ತದೆ.

ಪುರುಷ/ ಸ್ತ್ರೀ: ಸ್ತ್ರೀಯರಿಗೆ ಪುರುಷರಿಗಿಂತ ಕಡಿಮೆ ಪ್ರೀಮಿಯಂ ನಿಗದಿಪಡಿಸಲಾಗುತ್ತದೆ. ದತ್ತಾಂಶಗಳ ಪ್ರಕಾರ ಸ್ತ್ರೀಯರ ಜೀವಿತಾವಧಿ ಪುರುಷರಿಗಿಂತ ಹೆಚ್ಚಿಗೆ ಇರುವುದೇ ಇದಕ್ಕೆ ಕಾರಣ.

ಹಾನಿಕಾರಕ ಪದಾರ್ಥಗಳ ಸೇವನೆ: ತಂಬಾಕು ಜಗಿಯುವುದು, ಧೂಮಪಾನ ಮಾಡುವುದು ಹಾಗೂ ನಿಷೇಧಿತ ವಸ್ತುಗಳನ್ನು ಬಳಸುವುದರಿಂದ ಇನ್ಶೂರೆನ್ಸ್ ಪ್ರೀಮಿಯಂ ದರ ಹೆಚ್ಚಳವಾಗುತ್ತದೆ.

ಧೂಮಪಾನದಿಂದ ಕ್ಯಾನ್ಸರ್‌ನಂತಕ ಮಾರಕ ಕಾಯಿಲೆ ಬರುವ ಸಾಧ್ಯತೆಯ ಜತೆಗೆ ಅನೇಕ ಅಡ್ಡಪರಿಣಾಮಗಳೂ ಉಂಟಾಗುತ್ತವೆ. ಈ ಹಿನ್ನೆಲೆಯಲ್ಲಿ ಕಂಪನಿಗಳು ಪ್ರೀಮಿಯಂ ದರ ಹೆಚ್ಚಿಸುತ್ತವೆ.

ವೃತ್ತಿ: ಅಪಾಯ ಹೆಚ್ಚಿರುವಂತಹ ಉದ್ಯೋಗದಲ್ಲಿ ನೀವಿದ್ದರೆ ಪ್ರೀಮಿಯಂ ದರ ಹೆಚ್ಚಾಗುತ್ತದೆ. ಉದಾಹರಣೆಗೆ ಗಣಿಗಾರಿಕೆ, ರಸಾಯನಿಕ ಕಾರ್ಖಾನೆಯಂತಹ ಜಾಗಗಳಲ್ಲಿ ವೃತ್ತಿಯಲ್ಲಿದ್ದರೆ ಶೇ 10 ರಿಂದ ಶೇ 15 ರಷ್ಟು ಪ್ರೀಮಿಯಂ ಜಾಸ್ತಿಯಾಗುತ್ತದೆ.

ಪ್ರೀಮಿಯಂ ತಗ್ಗಿಸುವುದು ಹೇಗೆ

* ಇನ್ಶೂರೆನ್ಸ್ ಅನ್ನು ಸಾಧ್ಯವಾದಷ್ಟು ಬೇಗ ಖರೀದಿಸಿ
* ಆರೋಗ್ಯಕರ ಜೀವನಕ್ರಮ ಅನುಸರಿಸಿ
* ಆನುವಂಶಿಕ ಕಾಯಿಲೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ
* ಹಾನಿಕಾರಕ ಪದಾರ್ಥಗಳ ಸೇವನೆಯಿಂದ ದೂರವಿರಿ
* ಪ್ರಪೋಸಲ್ ಫಾರಂನಲ್ಲಿ ಎಲ್ಲ ಮಾಹಿತಿಯನ್ನು ನಿಖರವಾಗಿ ನೀಡಿ
* ಈಗಾಗಲೇ ಇರುವ ಕಾಯಿಲೆಗಳ ಬಗ್ಗೆ ಸ್ಪಷ್ಟವಾಗಿ ನಮೂದಿಸಿ

ಷೇರು ಹೂಡಿಕೆದಾರರ ನಿದ್ದೆಗೆಡಿಸಿದ ಜುಲೈ

ಜುಲೈ ತಿಂಗಳು ಷೇರುಪೇಟೆ ಹೂಡಿಕೆದಾರರ ನಿದ್ದೆಗೆಡಿಸಿದೆ. ಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳಲ್ಲಿನ ಸಾರ್ವಜನಿಕರ ಪಾಲು ಬಂಡವಾಳವನ್ನು ಶೇ 25 ರಿಂದ ಶೇ 35 ಕ್ಕೆ ಹೆಚ್ಚಿಸಿರುವುದು, ಕಂಪನಿಗಳ ಷೇರು ಮರುಖರೀದಿ ಮೇಲೆ ಶೇ 20 ರಷ್ಟು ತೆರಿಗೆ, ವಿದೇಶಿ ಹೂಡಿಕೆದಾರರಿಗೆ ಸರ್ಚಾರ್ಜ್ ಹೆಚ್ಚಳ ಸೇರಿ ಬಜೆಟ್‌ನ ಹಲವು ಘೋಷಣೆಗಳು ಜುಲೈ ತಿಂಗಳಿನಲ್ಲಿ ಸೂಚ್ಯಂಕಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಆರ್ಥಿಕ ಪ್ರಗತಿ ಕುಂಠಿತ ಮತ್ತು ಸಾಧಾರಣ ಎನಿಸುವ ತ್ರೈಮಾಸಿಕ ಫಲಿತಾಂಶಗಳು ಸಹ ಪೇಟೆಯಲ್ಲಿನ ಹಿನ್ನಡೆಗೆ ಕಾರಣವಾಗಿದೆ. ಇವೆಲ್ಲದರ ಪರಿಣಾಮವಾಗಿ ಪೇಟೆಯ ವಹಿವಾಟು ಜುಲೈ ತಿಂಗಳಲ್ಲಿ 17 ವರ್ಷಗಳಲ್ಲಿನ ಕನಿಷ್ಠ ಪ್ರದರ್ಶನ ತೋರಿದೆ.

ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 2 ರಷ್ಟು ಕುಸಿತ ಕಂಡು 37,137 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ್ದರೆ, ನಿಫ್ಟಿ ಶೇ 2.5 ರಷ್ಟು ಕುಸಿದು 10,997 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ವಿದೇಶಿ ಹೂಡಿಕೆದಾರರು ಕೇವಲ ಒಂದು ವಾರದ ಅವಧಿಯಲ್ಲಿ ₹ 6,500 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇಷ್ಟೇ ಅಲ್ಲದೆ ಅಮೆರಿಕ ಮತ್ತು ಚೀನಾ ನಡುವೆ ತಲೆದೋರಿರುವ ವ್ಯಾಪಾರ ಬಿಕ್ಕಟ್ಟು ಸಹ ಪೇಟೆಗೆ ಪೆಟ್ಟು ಕೊಟ್ಟಿದೆ.

ಗಳಿಕೆ: ಟಿಸಿಎಸ್ ಕಂಪನಿಯ ಷೇರುಗಳು ಶೇ 4.6 ರಷ್ಟು ಏರಿಕೆ ಕಂಡಿವೆ. ಬಹುತೇಕ ಬ್ರೋಕರೇಜ್ ಕಂಪನಿಗಳು ಟಿಸಿಎಸ್ ಷೇರುಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿದ ಕಾರಣ ಸದ್ಯ ಷೇರಿನ ಬೆಲೆ ₹ 2,173 ಆಗಿದೆ.

ಅಡಚಣೆಗಳ ಮಧ್ಯೆಯೂ ಏರ್‌ಟೆಲ್ ಶೇ 2.6 ರಷ್ಟು ಏರಿಕೆ ದಾಖಲಿಸಿದೆ. ನಿವ್ವಳ ಲಾಭದಲ್ಲಿ ಶೇ 18 ರಷ್ಟು ಪ್ರಗತಿ ತೋರಿದ್ದರ ಪರಿಣಾಮ ಏಷಿಯನ್ ಪೇಂಟ್ಸ್‌ನ ಷೇರುಗಳು ಶೇ 1.23 ರಷ್ಟು ಏರಿಕೆ ಕಂಡಿವೆ. ಹಿಂದೂಸ್ಥಾನ್ ಯುನಿಲಿವರ್‌ನ ನಿವ್ವಳ ಲಾಭ ಶೇ 15 ರಷ್ಟು ಹೆಚ್ಚಿದ ಪರಿಣಾಮ ಷೇರುಗಳು ಶೇ 0.4 ರಷ್ಟು ಹೆಚ್ಚಳವಾಗಿವೆ.

ಇಳಿಕೆ: ಹಣ ದುರ್ಬಳಕೆ ಮತ್ತು ನಗದು ಪೂರಕೆ ಕೊರತೆ ಹಿನ್ನೆಲೆಯಲ್ಲಿ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್‌ನ ಷೇರುಗಳು ಶೇ 6.17 ರಷ್ಟು ಕುಸಿದಿವೆ.

ಜೀ ಎಂಟರ್ಟೇನ್‌ಮೆಂಟ್‌ ಎಂಟರ್‌ಪ್ರೈಸ್‌ನ ಷೇರುಗಳು ಶೇ 15.5 ರಷ್ಟು ಕುಸಿದಿವೆ. ಗಣಿಗಾರಿಕೆಯ ದೈತ್ಯ ವೇದಾಂತ ಶೇ 12.9 ರಷ್ಟು ಕುಸಿತ ದಾಖಲಿಸಿದೆ. ಟಾಟಾ ಮೋಟರ್ಸ್ ಶೇ 11.18 ರಷ್ಟು ಹಿನ್ನಡೆ ಅನುಭವಿಸಿದ್ದರೆ, ಲೋಹ ವಲಯದ ಗ್ರಾಸಿಮ್ ಶೇ 11.08 ರಷ್ಟು ಕುಸಿದಿದೆ.

ಮುನ್ನೋಟ: ಅದಾನಿ ಪೋರ್ಟ್ಸ್, ಸಿಪ್ಲಾ, ಬ್ರಿಟಾನಿಯಾ, ಎಚ್‌ಸಿಎಲ್ ಟೆಕ್ನಾಲಜಿಸ್ , ಬಿಪಿಸಿಎಲ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೈಟನ್, ಟಾಟಾ ಸ್ಟೀಲ್, ಗೇಲ್, ಹಿಂಡಾಲ್ಕೊ, ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ , ಅಲ್ಟಾಟ್ರೆಕ್‌ ಸಿಮೆಂಟ್ ಸೇರಿ ಪ್ರಮುಖ ಕಂಪನಿಗಳು ಈ ವಾರ ತಮ್ಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಜೂನ್ ತಿಂಗಳ ಕೈಗಾರಿಕಾ ಉತ್ಪಾದನೆ ದತ್ತಾಂಶ ಮತ್ತು ಆರ್‌ಬಿಐ ಹಣಕಾಸು ನೀತಿ ಸಹ ಹೊರಬೀಳಲಿದೆ. ವಿದೇಶಿ ಹೂಡಿಕೆದಾರರಿಗೆ ಸರ್ಜಾರ್ಜ್ ನಿಯಮ ಪರಿಷ್ಕರಿಸುವ ಬಗ್ಗೆಯೂ ಸಹ ಈ ವಾರ ಮಾಹಿತಿ ಸಿಗಲಿದೆ. ಈ ಎಲ್ಲಾ ಸಂಗತಿಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಹಿಡಿತ ಸಾಧಿಸಲಿವೆ.

ಲಾಭಾಂಶ ಘೋಷಣೆ

ಕಂಪನಿ; ಲಾಭಾಂಶ
ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ ಲಿ.; ₹2
ಕೇರ್ ರೇಟಿಂಗ್ಸ್ ಲಿ.; ₹ 3
ನೆಸ್ಟ್ಲೆ ಇಂಡಿಯಾ ಲಿ.,; ₹ 23
ಪಿಸಮ್ ಜಾನ್ಸನ್ ಲಿ.; ₹ 1
ಕ್ಯಾಸ್ಟ್ರಾಲ್ ಇಂಡಿಯಾ ಲಿ.; ₹ 2.50
ಸ್ಟ್ರೈಡ್ ಫಾರ್ಮಾ ಸೈನ್ಸ್ ಲಿ.; ₹ 12


(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT