ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸ್ವಾತಂತ್ರ್ಯಕ್ಕೆ ಗಮನಿಸಬೇಕಾದ ಸಂಗತಿಗಳು

Last Updated 19 ಸೆಪ್ಟೆಂಬರ್ 2022, 6:36 IST
ಅಕ್ಷರ ಗಾತ್ರ

ಆರ್ಥಿಕ ಸ್ವಾತಂತ್ರ್ಯ ಅಥವಾ ಹಣಕಾಸಿನ ಸ್ವಾತಂತ್ರ್ಯ ಯಾರಿಗೆ ಬೇಡ ಹೇಳಿ? ಹಣಕಾಸಿನ ವಿಚಾರದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತರಾಗಲು ಯಾರೂ ಇಷ್ಟಪಡುವುದಿಲ್ಲ. ಆದರೆ ಆರ್ಥಿಕ ಸ್ವಾತಂತ್ರ ಸಾಧಿಸುವಾಗ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಹಣಕಾಸು ಸ್ವಾತಂತ್ರ್ಯವನ್ನು ರಾತ್ರೋರಾತ್ರಿ ಸಾಧಿಸಲು ಸಾಧ್ಯವಿಲ್ಲ, ಅದೊಂದು ವ್ಯವಸ್ಥಿತ ಪ್ರಕ್ರಿಯೆ. ಹಣಕಾಸು ಸ್ವಾತಂತ್ರ್ಯ ಸಾಧಿಸಲು ಎಷ್ಟು ಬೇಗ ಸೂಕ್ತ ಮಾರ್ಗ ರೂಪಿಸಿಕೊಳ್ಳುವಿರೋ ಅಷ್ಟು ಬೇಗ ಗುರಿ ತಲುಪಬಹುದು.

ಹಣಕಾಸು ಸ್ವಾತಂತ್ರ್ಯ ಎಂದರೇನು?: ಕುಟುಂಬದ ಖರ್ಚುವೆಚ್ಚಗಳನ್ನು ನಿಭಾಯಿಸಲು, ಜೀವನ ನಡೆಸಲು ನಿರ್ದಿಷ್ಟ ಉದ್ಯೋಗದಿಂದ ಬರುವ ಆದಾಯವನ್ನು ನೆಚ್ಚಿಕೊಳ್ಳದೇ ಇರುವ ಸ್ಥಿತಿಯನ್ನು ಆರ್ಥಿಕ ಸ್ವಾತಂತ್ರ್ಯ ಎಂದು ಹೇಳಬಹುದು. ಹೆಚ್ಚು ಉಳಿತಾಯ ಮಾಡುವುದು, ಬೇಗ ಹೂಡಿಕೆ ಆರಂಭಿಸುವುದು, ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವುದು, ಪರ್ಯಾಯ ಆದಾಯ ಮೂಲಗಳನ್ನು ಕಂಡುಕೊಳ್ಳುವುದು ಸೇರಿದಂತೆ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳುವ ಮೂಲಕ ಹಣಕಾಸು ಸ್ವಾತಂತ್ರ್ಯ ಸಾಧಿಸಬಹುದು.

ಬೇಗ ಹೂಡಿಕೆ ಆರಂಭಿಸುವುದು ಮುಖ್ಯ: ‘ದುಡ್ಡೇನು ಗಿಡದಲ್ಲಿ ಬೆಳೆಯುತ್ತಾ?’ ಅಂತ ಮನೆಯ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ದುಡ್ಡು ಗಿಡದಲ್ಲಿ ಬೆಳೆಯುವುದಿಲ್ಲ, ನಿಜ. ಆದರೆ ಸಮಯದ ಮೌಲ್ಯವನ್ನು ಅರಿತು ಉಳಿತಾಯ ಮಾಡಿದರೆ ನಾವು ದುಡ್ಡನ್ನು ಬೆಳೆಸಬಹುದು.

ಆಶ್ಚರ್ಯ ಅನ್ನಿಸಿದರೂ ಇದು ಸತ್ಯ. ರಾಮ, ಶಾಮ, ಭಾಮ ಎನ್ನುವ ಮೂವರು ಸ್ನೇಹಿತರಿದ್ದರು (ಇವರು ಕಾಲ್ಪನಿಕ ವ್ಯಕ್ತಿಗಳು). ಈ ಮೂವರು ಒಂದೇ ವರ್ಷ ಪದವಿ ಮುಗಿಸಿ 25ನೇ ವಯಸ್ಸಿಗೆ ದುಡಿಮೆ ಆರಂಭಿಸಿದರು. ರಾಮ ಕೆಲಸಕ್ಕೆ ಸೇರಿದ ಆರಂಭದಿಂದಲೇ ಪ್ರತಿ ತಿಂಗಳಿಗೆ ₹ 5 ಸಾವಿರ ಹೂಡಿಕೆ ಮಾಡಲು ಶುರು ಮಾಡಿದ. ಆದರೆ ಶಾಮ ಕೆಲಸಕ್ಕೆ ಸೇರಿದ ಮೊದಲ 5 ವರ್ಷ ಮೋಜು–ಮಸ್ತಿ ಮಾಡಿ 30ನೇ ವಯಸ್ಸಿಗೆ ಮದುವೆ ಆದ ನಂತರ ಪ್ರತಿ ತಿಂಗಳು ₹ 5 ಸಾವಿರ ಹೂಡಿಕೆ ಮಾಡಲು ಮುಂದಾದ.

ಭಾಮ ಇನ್ನೂ ಸ್ವಲ್ಪ ಸಮಯ ತೆಗೆದುಕೊಂಡ. ಮದುವೆ ಆಗಿ, ಮಕ್ಕಳಾದ ನಂತರ 35ನೇ ವಯಸ್ಸಿನಿಂದ ಪ್ರತಿ ತಿಂಗಳು ₹ 5 ಸಾವಿರ ಹೂಡಿಕೆ ಶುರು ಮಾಡಿದ. ಹೀಗೆ ಮೂವರು ಕೂಡ ತಮ್ಮ 55ನೇ ವಯಸ್ಸಿನ ತನಕ ಹೂಡಿಕೆ ಮುಂದುವರಿಸಿದರು. ಎಲ್ಲರಿಗೂ ಹೂಡಿಕೆಯ ಮೇಲೆ ಸರಾಸರಿ ಶೇ 12ರಷ್ಟು ಲಾಭ ಸಿಕ್ಕಿತು. ಆದರೆ 55ನೆಯ ವಯಸ್ಸಿನಲ್ಲಿ ಎಲ್ಲರಿಗೂ ಸಿಕ್ಕ ಒಟ್ಟು ಮೊತ್ತದಲ್ಲಿ ಭಾರೀ ವ್ಯತ್ಯಾಸವಿತ್ತು (ಪಟ್ಟಿ ಗಮನಿಸಿ).

ರಾಮ ಒಟ್ಟು 30 ವರ್ಷ ಹೂಡಿಕೆ ಮಾಡಿದ ಕಾರಣ ಅವನಿಗೆ ಒಟ್ಟು ₹ 1.74 ಕೋಟಿ ಸಿಕ್ಕಿತು. ಶಾಮ ಕೇವಲ ಐದು ವರ್ಷ ಕಡಿಮೆ, ಅಂದರೆ 25 ವರ್ಷ ಅವಧಿಗೆ ಹೂಡಿಕೆ ಮಾಡಿದ ಕಾರಣ ಅವನಿಗೆ ರಾಮನ ಅರ್ಧದಷ್ಟು ಮೊತ್ತ ಅಂದರೆ ₹ 93.94 ಲಕ್ಷ ಮಾತ್ರ ಲಭಿಸಿತು. 10 ವರ್ಷ ತಡವಾಗಿ ಹೂಡಿಕೆ ಶುರುಮಾಡಿದ ಪರಿಣಾಮ ಭಾಮನಿಗೆ ₹ 49.46 ಲಕ್ಷ ಮಾತ್ರ ದಕ್ಕಿತು. ಬೇಗ ಹೂಡಿಕೆ ಆರಂಭಿಸುವುದು ಎಷ್ಟು ಮುಖ್ಯ ಎನ್ನುವುದು ಈ ಉದಾಹರಣೆಯಿಂದ ಅರಿವಿಗೆ ಬರುತ್ತದೆ.

ನೆನಪಿಡಿ: ಮೇಲಿನ ಪಟ್ಟಿಯಲ್ಲಿ ವಿವರಿಸಿರುವಂತೆ ಬೇಗ ಹೂಡಿಕೆ ಮಾಡಿದಾಗ ಹಣದ ಬೆಳವಣಿಗೆಗೆ ಹೆಚ್ಚು ಸಮಯ ಸಿಗುವ ಜೊತೆಗೆ ಚಕ್ರಬಡ್ಡಿಯ ಲಾಭವೂ ದೊರೆಯುತ್ತದೆ. ಹಣಕಾಸು ಸ್ವಾತಂತ್ರ್ಯ ಸಾಧಿಸಲು ಇರುವ ಅತ್ಯಂತ ಶಕ್ತಿಶಾಲಿ ಮಾರ್ಗ ಬೇಗ ಉಳಿತಾಯ ಶುರುಮಾಡುವುದು.

ಮತ್ತೆ ಮುಗ್ಗರಿಸಿದ ಸೂಚ್ಯಂಕಗಳು
ಸೆಪ್ಟೆಂಬರ್ 16ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಗಣನೀಯ ಕುಸಿತ ಕಂಡಿವೆ. 58,840 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.59ರಷ್ಟು ಇಳಿಕೆಯಾಗಿದೆ. 17,530 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.70ರಷ್ಟು ತಗ್ಗಿದೆ. ಅಮೆರಿಕದಲ್ಲಿ ಏರುಗತಿಯಲ್ಲಿರುವ ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿ ದರ ಹೆಚ್ಚಳದ ಅಸ್ತ್ರ ಪ್ರಯೋಗ ಆಗಬಹುದು ಎಂಬ ಆತಂಕದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ ಕಂಡುಬಂತು. ಇದರ ಪರಿಣಾಮವು ದೇಶಿ ಮಾರುಕಟ್ಟೆಗಳ ಮೇಲೂ ಆಯಿತು.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಪವರ್ ಸೂಚ್ಯಂಕ ಶೇ 1.80ರಷ್ಟು ಗಳಿಸಿದೆ. ಬಿಎಸ್ಇ ಬ್ಯಾಂಕೆಕ್ಸ್ ಸೂಚ್ಯಂಕ ಮತ್ತು ಲೋಹ ಸೂಚ್ಯಂಕ ಸಹ ಸಕಾರಾತ್ಮಕ ಗಳಿಕೆ ಕಂಡಿವೆ. ಬಿಎಸ್ಇ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 6.72ರಷ್ಟು, ರಿಯಲ್ ಎಸ್ಟೇಟ್, ತೈಲ ಮತ್ತು ಅನಿಲ ಸೂಚ್ಯಂಕ ಕ್ರಮವಾಗಿ ಶೇ 3.23ರಷ್ಟು ಮತ್ತು ಶೇ 2.93ರಷ್ಟು ತಗ್ಗಿವೆ. ನಿಫ್ಟಿ ಸೂಚ್ಯಂಕದಲ್ಲಿ 15ಕ್ಕೂ ಹೆಚ್ಚು ಕಂಪನಿಗಳ ಷೇರುಗಳು ಸಕಾರಾತ್ಮಕ ಗಳಿಕೆ ದಾಖಲಿಸಿವೆ. ಇಂಡಸ್ ಇಂಡ್ ಬ್ಯಾಂಕ್ಶೇ 7.93ರಷ್ಟು ಗಳಿಸಿಕೊಂಡಿದೆ. ಪವರ್ ಗ್ರಿಡ್ಶೇ 3.72ರಷ್ಟು, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಜೋನ್ ಶೇ 3.46ರಷ್ಟು, ಮಾರುತಿ ಸುಜುಕಿ ಇಂಡಿಯಾ ಶೇ 2.72ರಷ್ಟು, ಐಷರ್ ಮೋಟರ್ಸ್, ಭಾರ್ತಿ ಏರ್‌ಟೆಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ತಲಾ ಶೇ 1ರಷ್ಟು ಗಳಿಸಿಕೊಂಡಿವೆ.

ಮತ್ತೊಂದೆಡೆ ದೈತ್ಯ ಐ.ಟಿ. ಕಂಪನಿಗಳಾದ ಇನ್ಫೊಸಿಸ್, ಟೆಕ್ ಮಹೀಂದ್ರ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಕ್ರಮವಾಗಿ ಶೇ 8.90ರಷ್ಟು, ಶೇ 8.29ರಷ್ಟು ಮತ್ತು ಶೇ 6.49ರಷ್ಟು ಕುಸಿದಿವೆ.

ಮುನ್ನೋಟ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಹೂಡಿಕೆ ಮುಂದುವರಿಸಲಿದ್ದಾರೆ ಎನ್ನುವ ಅಂಶ ಮತ್ತು ಡೌಲರ್ ಎದುರು ರೂಪಾಯಿ ಮೌಲ್ಯದ ಬೆಳವಣಿಗೆ ಗಳನ್ನೂ ಹೂಡಿಕೆದಾರರು ಗಮನಿಸಲಿದ್ದಾರೆ. ಜಾಗತಿಕ ಮಟ್ಟದಲ್ಲಿ ನೋಡುವುದಾದರೆ, ಅಮೆರಿಕದ ಗೃಹ ಮಾರಾಟ ದತ್ತಾಂಶ, ಅಮೆರಿಕ ಫೆಡರಲ್ ಬ್ಯಾಂಕ್‌ನ ಬಡ್ಡಿ ದರ ತೀರ್ಮಾನ ಸೇರಿದಂತೆ ಇತರ ಬೆಳವಣಿಗೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT