ಗುರುವಾರ , ಜುಲೈ 7, 2022
23 °C
ಭಾಗ 82

ವೇದವ್ಯಾಸರ ಶಿವಪುರಾಣಸಾರ| ಪರಬ್ರಹ್ಮ ಶಕ್ತಿಯೇ ಅಂಬಿಕಾ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಅದ್ವಿತೀಯವೂ ಆದ್ಯಂತರಹಿತವೂ ಸರ್ವಸ್ವರೂಪವೂ ಪ್ರಕಾಶ ಮಯವೂ ಸರ್ವವೂ ಅವಿನಾಶಿಯೂ ಆದ ಆ ಪರಬ್ರಹ್ಮವು ಶುದ್ಧ ಸ್ವರೂಪವುಳ್ಳ ಆ ಈಶ್ವರಮೂರ್ತಿಯನ್ನು ಕಲ್ಪಿಸಿ ಅಂತರ್ಧಾನ ಹೊಂದಿತು – ಎಂದು ನಾರದನಿಗೆ ಶಿವತತ್ವವಿಚಾರವನ್ನು ಬ್ರಹ್ಮ ಹೇಳುತ್ತಾನೆ.

ನಿಷ್ಕ್ರಿಯಾವಸ್ಥೆಯಲ್ಲಿ ಯಾವುದು ಪರಬ್ರಹ್ಮವೆನಿಸಿತೋ ಅದರ ಮೂರ್ತಿಯು ಸದಾಶಿವನೆಂದು ತಿಳಿ. ಆ ಸದಾಶಿವಮೂರ್ತಿಯನ್ನೇ ಈಚಿನ ಮತ್ತು ಹಿಂದಿನ ತಿಳಿದ ವಿದ್ವಾಂಸರು ಈಶ್ವರನೆಂದು ಕರೆಯುವರು. ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಆ ಪರಬ್ರಹ್ಮಮೂರ್ತಿಯು ಒಂಟಿಯಾಗಿದ್ದರೂ ಅದರ ಶರೀರವನ್ನ ಎಡಬಿಡದಂತಿರುವ ಶಕ್ತಿಯು, ಆ ಪರಬ್ರಹ್ಮವಿಗ್ರಹದಿಂದ ತಾನಾಗಿಯೇ ಸೃಷ್ಟಿಸಲ್ಪಟ್ಟಿತು. ಆ ಶಕ್ತಿಯನ್ನೇ ಪ್ರಕೃತಿಯೆಂದು, ಪ್ರಧಾನವೆಂದು, ಮಾಯೆಯೆಂದು, ಸತ್ವ-ರಜಸ್ಸು-ತಮಸ್ಸುಗಳೆಂಬ ಗುಣತ್ರಯಗಳುಳ್ಳವಳೆಂದು, ಬುದ್ಧಿತತ್ವದ ಮಾತೆಯೆಂದು, ವಿಕಾರ ವರ್ಜಿತಳೆಂದು ನಾನಾವಿಧವಾಗಿ ಕರೆಯುವರು ಎಂದು ಬ್ರಹ್ಮ ನಾರದನಿಗೆ ತಿಳಿಸುತ್ತಾನೆ.

ಆ ಪರಬ್ರಹ್ಮಶಕ್ತಿಯೇ ಅಂಬಿಕೆಯೆಂದು ಕರೆಯಲ್ಪಡುವಳು. ಅವಳನ್ನೇ ಪ್ರಕೃತಿಯೆಂತಲೂ ಸಕಲೇಶ್ವರಿಯೆಂದೂ ಹೇಳುವರು. ಆ ಅಂಬಿಕೆಯೇ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳಿಗೆ ತಾಯಿ ಎನಿಸಿದಳು. ಅವಳು ನಿತ್ಯಳೆಂತಲೂ ಮೂಲಕಾರಣವೆಂತಲೂ ಹೇಳಲ್ಪಡುವಳು. ಪ್ರಕೃತಿಮಾತೆಗೆ ಎಂಟು ಕೈಗಳು, ವಿಚಿತ್ರವಾದ ಮುಖಗಳು, ಇದ್ದುವು. ಸಾವಿರಾರು ಚಂದ್ರರು ಒಟ್ಟಿಗೇ ಸೇರಿದರೆ ಉಂಟಾಗುವಷ್ಟರ ಮಟ್ಟಿನ ಪಾವನವಾದ ಕಾಂತಿ ಆಕೆಯ ಮುಖಮಂಡಲದಲ್ಲಿ ಯಾವಾಗಲೂ ನೆಲೆಸಿತ್ತು. ಆ ದೇವಿಯು ನಾನಾವಿಧವಾದ ಒಡವೆಗಳಿಂದ ಅಲಂಕೃತಳಾಗಿದ್ದಳು. ನಾನಾವಿಧವಾದ ಗತಿಗಳಿಂದ ಕೂಡಿದವಳಾಗಿದ್ದಳು. ಆಕೆಯ ಕೈಗಳು ವಿವಿಧವಾದ ಆಯುಧಗಳಿಂದ ಶೋಭಿಸುತ್ತಿದ್ದವು. ಕಂಗಳು ಅರಳಿದ ತಾವರೆಯನ್ನು ಹೋಲುತ್ತಿದ್ದುವು.

ಆಕೆಯ ತೇಜಸ್ಸನ್ನು ಊಹಿಸಲೂ ಅಸಾಧ್ಯವಾಗಿತ್ತು. ಆಕೆ ಸರ್ವಭೂತಗ ಳಿಗೂ ಕಾರಣಿಭೂತಳಾಗಿದ್ದಳು. ಮಾಯರೂಪಿಣಿಯಾದ ಆಕೆ ಒಂಟಿಯಾಗಿ ಇದ್ದರೂ, ವಿವಿಧ ಸಂಯೋಗವಶದಿಂದ ವೈವಿಧ್ಯವನ್ನು ಪಡೆವಳು. ಆ ಈಶ್ವರನನ್ನೇ ಪರಮಪುರುಷನೆಂಬುದಾಗಿ ತಿಳಿ. ಆತನನ್ನು ಶಿವನೆಂದೂ ಶಂಭು ವೆಂತಲೂ ಕರೆಯುವರು. ಬೇರೆ ಯಾರೂ ಆತನಿಗೆ ಪ್ರಭುವಾಗಲಾರರು. ಆತನ ತಲೆಯಲ್ಲಿ ಗಂಗೆಯು ಶೋಭಿಸುತ್ತಿರುವಳು. ಹಣೆಯಂಚಿನಲ್ಲಿ ಬಾಲಚಂದ್ರನು ಮೆರೆಯುತ್ತಿದ್ದ. ಆತನಿಗೆ ಮೂರು ಕಣ್ಣುಗಳು, ಐದು ಮುಖಗಳು, ಹತ್ತು ಕೈಗಳು ಇದ್ದುವು. ಆತ ತ್ರಿಶೂಲವನ್ನು ಧರಿಸಿದ್ದ. ಕರ್ಪೂರದಂತೆ ಬೆಳ್ಳಗೆ ಆತನ ಮೈಬಣ್ಣವಿದ್ದಿತು. ಶರೀರವೆಲ್ಲಾ ಭಸ್ಮದಿಂದ ಉದ್ಧೂಲಿತವಾಗಿತ್ತು.

ಕಾಲಸ್ವರೂಪಿಯಾದ ಆ ಪರಮಪುರುಷನು ಶಕ್ತಿಯೊಡಗೂಡಿ, ಶಿವಲೋಕವೆಂಬ ಕ್ಷೇತ್ರವನ್ನು ಒಟ್ಟಿಗೇ ನಿರ್ಮಿಸಿದ. ಆ ಶಿವಲೋಕವೇ ಉತ್ತಮವಾದ ಕಾಶೀಕ್ಷೇತ್ರವೆನಿಸಿತು. ಶ್ರೇಷ್ಠವಾದ ಮೋಕ್ಷಭೂಮಿ ಎನಿಸಿ, ಎಲ್ಲಕ್ಕಿಂತಲೂ ಮೇಲೆ ಆ ಕ್ಷೇತ್ರ ವಿರಾಜಿಸುತ್ತಿತ್ತು. ಆ ಮನೋಹರವಾದ ಕ್ಷೇತ್ರದಲ್ಲಿ ಪರಮಾನಂದ ಸ್ವರೂಪರಾದ ಶಿವಶಕ್ತಿಯರೊಡನೆ ಕೂಡಿ, ಕಾಶೀ ಕ್ಷೇತ್ರವು ಪರಮಾ ನಂದದಾಯಕವೆನಿಸಿತು. ಪ್ರಳಯಕಾಲದಲ್ಲಿಯೂ ಬಿಡದೆ, ಶಿವಪಾರ್ವತಿ ಯರು ಅಲ್ಲಿಯೇ ಯಾವಾಗಲೂ ನೆಲೆಸಿರುವು ದರಿಂದ ಆ ಕಾಶೀಕ್ಷೇತ್ರವನ್ನು ಅವಿಮುಕ್ತವೆನ್ನುವರು. ಆ ಕ್ಷೇತ್ರವು ಆನಂದದಾಯಕವಾಗಿದ್ದುದರಿಂದ, ಆರಂಭದಲ್ಲಿ ಆ ಕ್ಷೇತ್ರಕ್ಕೆ ಆನಂದವನ ವೆಂದು ಶಿವನೇ ಹೆಸರಿಟ್ಟ. ಆಮೇಲೆ ಅವಿಮುಕ್ತವೆಂಬ ಹೆಸರು ಬಂದಿತು.

ಆ ಆನಂದವನದಲ್ಲಿ ಶಿವಪಾರ್ವತಿಯರು ವಿಹರಿಸುತ್ತಿರುವಾಗ ಅವರಿಗೆ ಮತ್ತೊಬ್ಬನನ್ನು ಸೃಷ್ಟಿಸಬೇಕೆಂಬ ಇಚ್ಛೆಯುಂಟಾಯಿತು. ‘ನಾವು ಸೃಷ್ಟಿಸುವ ಪುರುಷನಿಗೆ, ನಮ್ಮೆಲ್ಲಾ ಹೊಣೆಗಾರಿಕೆ ಭಾರವನ್ನು ಹೊರಿಸಿ, ನಾವಿಬ್ಬರೂ ಈ ಕಾಶಿಯಲ್ಲೇ ವಾಸಿಸುತ್ತಾ, ಸ್ಚಚ್ಛಂದವಾಗಿ ವಿಹರಿಸುತ್ತಿರೋಣ. ನನ್ನ ಅನುಗ್ರಹದಿಂದ ಯಾವಾಗಲೂ ಆ ಪುರುಷನೇ ಎಲ್ಲವನ್ನೂ ಸೃಷ್ಟಿಸಲಿ. ಅವನೇ ಎಲ್ಲವನ್ನೂ ಪಾಲಿಸಲಿ. ಕೊನೆಗೆ ಎಲ್ಲವನ್ನೂ ಆತನೇ ಉಪಸಂಹರಿಸಲಿ’ ಎಂದು ಶಿವ-ಪಾರ್ವತಿ ತೀರ್ಮಾನಿಸಿದರು.

ಯೋಚನೆಗಳೆಂಬ ಅಲೆಗಳಿಂದ, ಸತ್ವಗುಣವೆಂಬ ರತ್ನಗಳಿಂದಲೂ, ರಜೋಗುಣವೆಂಬ ಬಳ್ಳಿಗಳಿಂದಲೂ, ತಮೋಗುಣವೆಂಬ ಮೊಸಳೆ ಗಳಿಂದಲೂ ಕೂಡಿರುವ ಮನಸ್ಸೆಂಬ ಸಮುದ್ರವನ್ನು ಕಡೆದು, ಆ ಶಕ್ತಿಯೊಡನೆ ಆಲೋಚಿಸಿ, ಆ ಸರ್ವೇಶ್ವರನಾದ ಪರಮಪುರುಷನು ತನ್ನ ಎಡಪಾರ್ಶ್ವದ ಅವಯವದಲ್ಲಿ ಅಮೃತಪ್ರವಾಹವನ್ನು ಹರಿಸಿದ. ಬಳಿಕ ಆ ಪರಮ ಪುರುಷನ ಎಡಭಾಗದಿಂದ ಮೂರು ಲೋಕಗಳಲ್ಲೂ ಸಾಟಿಯೇ ಇಲ್ಲ ದಂಥ ಸೌಂದರ್ಯದಿಂದ ಕೂಡಿದ ಪುರುಷನೊಬ್ಬ ಅವಿರ್ಭವಿಸಿದ. ಆತ ಮಹಾಶಾಂತನಾಗಿದ್ದ. ಆತನಲ್ಲಿ ಸತ್ವಗುಣವು ಪ್ರಧಾನವಾಗಿತ್ತು. ಗಾಂಭೀರ್ಯ ದಲ್ಲಿ ಸಾಗರವೂ ಆತನನ್ನು ಹೋಲುತ್ತಿರಲಿಲ್ಲ – ಎಂದು ಬ್ರಹ್ಮ ವಿಶ್ಲೇಷಿಸುತ್ತಾನೆ.

.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು