ಪ್ರಾದೇಶಿಕ ಪಕ್ಷದ ಚಹರೆ, ಕರ್ನಾಟಕ– ಕನ್ನಡದ ಅಸ್ಮಿತೆಯ ವಿಷಯದಲ್ಲಿ ಏಕಮೇವ ಎನ್ನುವಂತಹ ನಾಯಕತ್ವ ಹೊಂದಿದ್ದ ಜನತಾ ಪರಿವಾರ ಅನೇಕ ದಿಗ್ಗಜರನ್ನು ನಾಡಿಗೆ, ದೇಶಕ್ಕೆ ಕೊಟ್ಟಿದೆ. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್ ಅವರು ಜನತಾ ಪರಿವಾರದಿಂದ ಮುಖ್ಯಮಂತ್ರಿಯಾದವರು. ಎಲ್ಲ ಜಾತಿ, ಧರ್ಮಗಳ ಪ್ರಾತಿನಿಧ್ಯವನ್ನು ಒಳಗೊಂಡಿದ್ದ ಜನತಾದಳ ಈಗ ತಬ್ಬಲಿಯಂತಾಗಿದೆ.

ಒಂದು ಕಾಲದಲ್ಲಿ ದೇಶವನ್ನೇ ಮುಷ್ಟಿಯಲ್ಲಿಟ್ಟುಕೊಂಡು ಮೆರೆಯುತ್ತಿದ್ದ ಕಾಂಗ್ರೆಸ್ಗೆ ಪರ್ಯಾಯವಾದ ರಾಜಕಾರಣ ಕಟ್ಟಿದ ಹೆಗ್ಗಳಿಕೆ ಜನತಾ ಪರಿವಾರದ್ದು. ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ಸೇತರ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೂ ಜನತಾ ಪಕ್ಷವೇ. ಒಕ್ಕಲಿಗ ಹಾಗೂ ಲಿಂಗಾಯತರ ಬಲದ ಜತೆಗೆ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯದ (ಅಹಿಂದ) ಬೆಂಬಲವನ್ನೂ ಬೆಸೆದುಕೊಂಡು ಬಲಿಷ್ಠ ಶಕ್ತಿಯಾಗಿದ್ದ ಜನತಾ ಪರಿವಾರ, ನಂತರದಲ್ಲಿ ಕವಲು ಕವಲಾಗಿ ಒಡೆಯಿತು; ಪ್ರಸ್ತುತ, ಇಡೀ ದೇಶವನ್ನೇ ತನ್ನ ವಜ್ರಮುಷ್ಟಿಯಲ್ಲಿ ಇಟ್ಟುಕೊಂಡಿರುವ ಬಿಜೆಪಿಗೆ ಅಂಟಿಕೊಂಡ ಒಂದು ರೆಂಬೆಯಾಗಿದೆ.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯುವಂತೆ, ಬಲಿಷ್ಠ ಪ್ರಾದೇಶಿಕ ಪಕ್ಷವಾಗಿ ಬೆಳೆಯಬಹುದಾದ ಶಕ್ತಿ, ಸಾಮುದಾಯಿಕ ಬೆನ್ನೆಲುಬು, ಕಾರ್ಯಕರ್ತರ ಪಡೆಯನ್ನು ಜೆಡಿಎಸ್ ಹೊಂದಿತ್ತು. ನಾಯಕರ ಹೊರತಳ್ಳುವಿಕೆ, ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡಿದ್ದು ಪಕ್ಷಕ್ಕೆ ಮುಳುವಾಯಿತು. 1999 ಹಾಗೂ 2006ರಲ್ಲಾದ ಮಹಾ ವಿಘಟನೆ ಪಕ್ಷವನ್ನು ದುರ್ಬಲಗೊಳಿಸುತ್ತಲೇ ಹೋಯಿತು. ಎರಡು ಬಾರಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ಅದು ಸ್ವಂತ ಬಲದ ಮೇಲಲ್ಲ. ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್ ಜತೆಗಿನ ಅಪವಿತ್ರ ಕೂಡಿಕೆಯಿಂದ ಸರ್ಕಾರ ರಚನೆಗೆ ಕುಮಾರಸ್ವಾಮಿ ಕೈಗೊಂಡ ನಿರ್ಧಾರವೇ, ಪಕ್ಷವನ್ನು ತಳಾತಳಕ್ಕೆ ತಳ್ಳಿತು. ಪ್ರಸ್ತುತ ಜೆಡಿಎಸ್ ಕುಟುಂಬದ ಕುಮಾರಸ್ವಾಮಿ ಕೇಂದ್ರದಲ್ಲಿ ಪ್ರಭಾವಿ ಖಾತೆ ಹೊಂದಿರುವ ಸಚಿವರಾಗಿದ್ದಾರಾದರೂ ಉಳಿದ ಯಾರಿಗೂ ಅಧಿಕಾರದ ಭಾಗ್ಯವಿಲ್ಲ.

ದಶಕಗಳ ಕಾಲ ಎರಡು ರಾಷ್ಟ್ರೀಯ ಪಕ್ಷಗಳ ಸ್ಥಳೀಯ ನಾಯಕರ ಜತೆ ಬಡಿದಾಡಿಕೊಂಡೇ ಜೆಡಿಎಸ್ಗೆ ಭದ್ರ ನೆಲೆ ಕಟ್ಟಿಕೊಟ್ಟವರು ಪಕ್ಷದ ಅಪವಿತ್ರ ಮೈತ್ರಿಯಿಂದಾಗಿ ತಳಮಳ ಅನುಭವಿಸಿದರು. 2006ರಲ್ಲಿ ಬಿಜೆಪಿ ಜತೆ ಸರ್ಕಾರ ಮಾಡಿದಾಗ, ಕೋಮುವಾದಿ ಬಿಜೆಪಿಯನ್ನು ವಿರೋಧಿಸಿಕೊಂಡೇ ಬಂದವರು ಬಾಯಿಲ್ಲದಂತಾದರು. 2018ರಲ್ಲಿ ಕಾಂಗ್ರೆಸ್ ಜತೆ ಸರ್ಕಾರ ರಚಿಸಿದಾಗಲೂ ಇದೇ ಪರಿಸ್ಥಿತಿ ಉದ್ಭವಿಸಿತು. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಜತೆಗೆ ಗುದ್ದಾಡಿ ಏಗಿ, ಪಕ್ಷ ಕಟ್ಟಿದವರು ಅದೇ ಪಕ್ಷದವರ ಜತೆಗೆ ಕೆಲಸ ನಿರ್ವಹಿಸಬೇಕಾದ ಸಂಕಷ್ಟಕ್ಕೆ ಬಿದ್ದರು.

2019ರ ಲೋಕಸಭೆ ಚುನಾವಣೆಯಂತೂ ಅವರಿಗೆ ನುಂಗಲಾರದ ತುತ್ತಾಯಿತು. ‘ಯಾರಿಗೆ ವೋಟು ಹಾಕಬೇಡಿ’ ಎಂದು ದಶಕಗಳ ಕಾಲ ಪ್ರಚಾರ ಮಾಡಿಕೊಂಡು ಬಂದಿದ್ದರೋ, ಕೆಲವು ಕ್ಷೇತ್ರಗಳಲ್ಲಿ ಅದೇ ಹಸ್ತದ ಚಿಹ್ನೆಗೆ ವೋಟು ಹಾಕಿಸಬೇಕಾದ ಮುಜುಗರ ಎದುರಿಸಬೇಕಾಯಿತು. 2023ರಲ್ಲಿ ಕಾಂಗ್ರೆಸ್– ಬಿಜೆಪಿ ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ, ಎರಡೂ ಪಕ್ಷಗಳನ್ನು ಟೀಕಿಸಿ ಚುನಾವಣೆ ಎದುರಿಸಿದ್ದೂ ಫಲ ಕೊಡಲಿಲ್ಲ. 2024ರ ಲೋಕಸಭೆ ಚುನಾವಣೆಗೆ ಮುನ್ನವೇ ಬಿಜೆಪಿ ಜತೆಗೆ ಹೋಗುವ ತೀರ್ಮಾನವನ್ನು ದೇವೇಗೌಡ ಮತ್ತು ಕುಮಾರಸ್ವಾಮಿ ಕೈಗೊಂಡರು. ಹೀಗೆ, ಮೇಲಿಂದ ಮೇಲೆ ನಿಲುವುಗಳಲ್ಲಿ ಬದಲಾವಣೆಯಾಗುತ್ತಲೇ ಹೋಗಿದ್ದರಿಂದಾಗಿ, ಶತ್ರು ಯಾರು, ಮಿತ್ರ ಯಾರು ಎನ್ನುವ ನಿಷ್ಕರ್ಷೆ ಜೆಡಿಎಸ್ ಸೈನಿಕರಿಗೆ ಕಷ್ಟವಾಗಿ, ಯಾರೊಂದಿಗೆ ನಿಲ್ಲಬೇಕೆಂಬ ದ್ವಂದ್ವ ಕಾಡಿತು.

ಜೆಡಿಎಸ್ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲಾರಂಭಿಸಿದ್ದರಿಂದಾಗಿ ಕಾರ್ಯಕರ್ತರು ಒಂದೇ ಕಡೆ ನಿಲ್ಲಲಾಗದ ಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ಜತೆ ಸರ್ಕಾರ ರಚಿಸಿದಾಗ, ಅವರೊಂದಿಗೆ ಗುರುತಿಸಿಕೊಂಡ ಕೆಲವರು ಆ ಕಡೆ ಹೋದರು. ಬಿಜೆಪಿ ಜತೆ ಕೂಡಿಕೆ ಮಾಡಿಕೊಂಡಾಗ, ಕೆಲವರು ಪಕ್ಷದಲ್ಲೇ ಉಳಿದರೆ, ಉಳಿದವರು ಅತ್ತ ಕಡೆ ಹೋದರು.

ಏನೆಲ್ಲ ಕಸರತ್ತು ನಡೆಸಿದರೂ ಹಳೆ ಮೈಸೂರು ಭಾಗದಲ್ಲಿ ನೆಲೆ ವಿಸ್ತರಿಸಿಕೊಳ್ಳಲು ಸಾಧ್ಯವಾಗದ ಬಿಜೆಪಿ, ಜೆಡಿಎಸ್ ಕಡೆಗೆ ಕೈಚಾಚಿತು. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಮೈತ್ರಿ ಅನಿವಾರ್ಯವೂ ಆಗಿತ್ತು. ಅಧಿಕಾರವಿಲ್ಲದೇ ಪರಿತಪಿಸುತ್ತಿದ್ದ ಜೆಡಿಎಸ್ಗೂ ಅದು ಬೇಕಿತ್ತು. ಜೆಡಿಎಸ್ ಪ್ರಾಬಲ್ಯವಿದ್ದ ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಿಟ್ಟುಕೊಡುವ ಅನಿವಾರ್ಯವನ್ನು ಬಿಜೆಪಿ ನಾಯಕರು ಸೃಷ್ಟಿಸಿದರು. ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ ಜೆಡಿಎಸ್ನ ಕೆಲವರು ಆ ಪಕ್ಷದ ಕಡೆಗೆ ಹೋದರು. ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾದ ಮೇಲೆ, ಖಾತೆಯ ನಿರ್ವಹಣೆಗೆ ಹೆಚ್ಚು ಗಮನ ಕೊಟ್ಟರು. ಕೇಂದ್ರದ ಕೆಲಸವನ್ನು ಬಿಟ್ಟು ಕೆಲವೊಮ್ಮೆ ರಾಜ್ಯಕ್ಕೆ ಬರುತ್ತಾರಾದರೂ ಆ ಭೇಟಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ವಾಚಾಮಗೋಚರ ಬೈಯುವುದಕ್ಕೆ ಸೀಮಿತ. ಪಕ್ಷ ಸಂಘಟನೆಗೆ ಹೆಚ್ಚು ಸಮಯ ನೀಡಲು ಅವರಿಂದ ಆಗುತ್ತಿಲ್ಲ. ಇದರಿಂದಾಗಿ ಪಕ್ಷ ದಿನದಿಂದ ದಿನಕ್ಕೆ ಸೊರಗುತ್ತಲೇ ಇದೆ.

ತಳಸ್ತರದಲ್ಲಿ ಬಿಜೆಪಿಯನ್ನು ವಿರೋಧಿಸಿಕೊಂಡೇ ಇಷ್ಟು ವರ್ಷ ರಾಜಕಾರಣ ಮಾಡಿಕೊಂಡು ಬಂದವರು ಜೆಡಿಎಸ್ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರು. ದೇವೇಗೌಡ, ಕುಮಾರಸ್ವಾಮಿಯವರ ಮೇಲಿನ ಪ್ರೀತಿಗಾಗಿ ಪಕ್ಷದಲ್ಲಿದ್ದು, ‘ಮುಂದೇನು’ ಎಂಬ ಹೊಯ್ದಾಟದಲ್ಲಿದ್ದವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಜಮೀರ್ ಅಹಮದ್ ಖಾನ್ ಯಶಸ್ವಿಯಾಗಿದ್ದಾರೆ. ಹಿಂದುಳಿದವರು, ದಲಿತರನ್ನು ಮಾತ್ರವಲ್ಲದೇ, ಗ್ಯಾರಂಟಿ ಯೋಜನೆಗಳ ಮೂಲಕ ಬಹು ಜನವರ್ಗವನ್ನು ತನ್ನ ಬೆಂಬಲಕ್ಕೆ ತೆಗೆದುಕೊಂಡಿರುವ ಸಿದ್ದರಾಮಯ್ಯ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಜೆಡಿಎಸ್ ಜತೆಗೆ ಇನ್ನೂ ಇದ್ದ ಮುಸ್ಲಿಮರನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆಯುವಲ್ಲಿ ಜಮೀರ್ ಅಹಮದ್ ತಮ್ಮದೇ ಆದ ಕೆಲಸ ನಿರ್ವಹಿಸಿದ್ದಾರೆ. ಶಿವಕುಮಾರ್ ಕಾರಣಕ್ಕೆ ಒಕ್ಕಲಿಗ ಸಮುದಾಯದ ಒಂದು ಪಡೆ ಕೂಡ ಕಾಂಗ್ರೆಸ್ನತ್ತ ಜಾರಿದೆ.

ಬಹಳ ವರ್ಷಗಳಿಂದ ‘ಮುಸ್ಲಿಂ ನಾಯಕತ್ವ’ ಕರ್ನಾಟಕದಲ್ಲಿ ಇದ್ದಿರಲಿಲ್ಲ. ಸಿ.ಕೆ. ಜಾಫರ್ ಷರೀಫ್, ಅಜೀಜ್ ಸೇಠ್, ಸಗೀರ್ ಅಹಮದ್ ಅಂತಹವರು ಕಾಂಗ್ರೆಸ್ನಲ್ಲಿದ್ದರೂ ರಾಜ್ಯದ ಎಲ್ಲ ಮತ ಕ್ಷೇತ್ರಗಳಲ್ಲೂ ಹಿಡಿತ ಸಾಧಿಸುವಷ್ಟು ಅವರು ಪ್ರಭಾವಿಗಳಾಗಿರಲಿಲ್ಲ. ಜೆಡಿಎಸ್ನಿಂದಲೇ ಕಾಂಗ್ರೆಸ್ಗೆ ಬಂದ ಜಮೀರ್ ಅಹಮದ್, ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ಗೆ ಸೆಳೆಯುವಲ್ಲಿ ತಮ್ಮ ಸಾಮರ್ಥ್ಯ ತೋರಿದರು.

ದಳದ ಗರಡಿಯಲ್ಲೇ ಪಳಗಿ ಬೆಳೆದ ಸಿದ್ದರಾಮಯ್ಯ, ಅಲ್ಲಿನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಕಂಡವರು. ಅಹಿಂದ ಮತ್ತು ಒಕ್ಕಲಿಗ ಮತಗಳು ಒಗ್ಗಟ್ಟಾದರೆ ಅಧಿಕಾರ ಕೇಂದ್ರವನ್ನು ಹಿಡಿದಿಟ್ಟುಕೊಳ್ಳುವುದು ಸಲೀಸು ಎಂಬುದನ್ನು ಅರಿತು, ಶಿವಕುಮಾರ್ ಅವರನ್ನು ಜತೆಗಿಟ್ಟುಕೊಂಡು ಜೆಡಿಎಸ್ ಬೆನ್ನಿಗಿದ್ದ ಒಕ್ಕಲಿಗ ಮತಗಳನ್ನು ಒಡೆಯುವ ಚತುರತೆಯನ್ನು ಸಿದ್ದರಾಮಯ್ಯ ತೋರಿದರು.

ಸಿದ್ದರಾಮಯ್ಯ ಅವರನ್ನು ಜನತಾದಳದಿಂದ ಹೊರಗಟ್ಟಿದಾಗ ಅವರ ಜತೆಗೆ ಬಂದ ನಾಯಕರು ಹಲವರು. ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಅಮರೇಗೌಡ ಬಯ್ಯಾಪುರ, ಶರಣಬಸಪ್ಪ ದರ್ಶನಾಪುರ, ಕೃಷ್ಣ ಬೈರೇಗೌಡ, ಸಂತೋಷ್ ಲಾಡ್ ಇವರೆಲ್ಲರೂ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. 2018ರ ಚುನಾವಣೆ ಪೂರ್ವದಲ್ಲಿ ಕುಮಾರಸ್ವಾಮಿಯವರ ಗಳಸ್ಯ–ಕಂಠಸ್ಯ ಎಂಬಂತಿದ್ದ ಜಮೀರ್ ಅಹಮದ್, ಚೆಲುವರಾಯಸ್ವಾಮಿ, ಬಾಲಕೃಷ್ಣ ಅವರು ಸಿದ್ದರಾಮಯ್ಯನವರ ಕಾರಣಕ್ಕೆ ಕಾಂಗ್ರೆಸ್ ತೆಕ್ಕೆಗೆ ಜಾರಿದರು.

2023ರಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್, ಜೆಡಿಎಸ್ನ ಭದ್ರ ನೆಲೆಗೆ ಕೈ ಹಾಕಿದರು. ಇದರ ಭಾಗವಾಗಿ ಕೆ.ಎಂ. ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್ ಸೇರಿದರು. ಬಿಜೆಪಿಯಲ್ಲಿದ್ದ ಸಿ.ಪಿ. ಯೋಗೇಶ್ವರ್ ಈಚೆಗೆ ಕಾಂಗ್ರೆಸ್ಗೆ ಬಂದರು. ಅವಕಾಶ ಇಲ್ಲವೆಂಬುದು ಜೆಡಿಎಸ್ ತೊರೆಯಲು ಒಂದು ಕಾರಣವಾದರೆ, ಒಂದೇ ಜಾತಿಯ ಮತಗಳಿಂದ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಮತ್ತೊಂದು ಅಂಶ.

ಇತ್ತೀಚಿನ ವರ್ಷಗಳಲ್ಲಿ ನೆಲ–ಜಲ–ಭಾಷೆಯ ವಿಷಯ ಬಂದಾಗ, ಕನ್ನಡಿಗರಿಗೆ ಏಕೈಕ ಪರ್ಯಾಯ ಎಂದು ಜೆಡಿಎಸ್ ಬಿಂಬಿಸಿಕೊಂಡಿತ್ತು. ಯಾವಾಗ ಬಿಜೆಪಿ ನೇತೃತ್ವದಲ್ಲಿ ಕುಮಾರಸ್ವಾಮಿ ಕೇಂದ್ರ ಸಚಿವರಾದರೋ ಅವರ ಬಾಯಿ ಕಟ್ಟಿ ಹೋಯಿತು. ಆ ಸ್ಥಿತಿಯನ್ನು ಸಿದ್ದರಾಮಯ್ಯ ಯಶಸ್ವಿಯಾಗಿ ಬಳಸಿಕೊಂಡರು. ಮೊದಲ ಬಾರಿ ಮುಖ್ಯಮಂತ್ರಿಯಾದಾಗಲೂ ಒಕ್ಕೂಟ ವ್ಯವಸ್ಥೆಯೊಳಗೆ ರಾಜ್ಯದ ಹಕ್ಕಿನ ವಿಷಯದಲ್ಲಿ ಸಮರ್ಥ ಪ್ರತಿಪಾದಕರಾಗಿದ್ದ ಸಿದ್ದರಾಮಯ್ಯ, ಈ ಅವಧಿಯಲ್ಲಿ ಮತ್ತಷ್ಟು ಪರಿಣಾಮಕಾರಿಯಾದರು. ಕೇಂದ್ರದಲ್ಲಿ ತಮ್ಮ ಪಕ್ಷದ ಸರ್ಕಾರ ಇಲ್ಲದೇ ಇರುವುದು ಹಾಗೂ ಹಿಂದಿಯನ್ನು ದೇಶವ್ಯಾಪಿ ಹೇರುವ ಉದ್ದೇಶ ಇಟ್ಟುಕೊಂಡ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವುದು ಅವರಿಗೆ ವರದಾನವಾಯಿತು.

ಜೆಡಿಎಸ್ನ ಬುಡಕ್ಕೆ ಕೈಹಾಕಿ ನಾಯಕರನ್ನು ಸೆಳೆದು, ಅನಾಯಕತ್ವ ಸೃಷ್ಟಿಸುವುದು ಹಾಗೂ ಜೆಡಿಎಸ್ಗಿದ್ದ ಪ್ರಾದೇಶಿಕ ಬದ್ಧತೆಯನ್ನು ಕಾಂಗ್ರೆಸ್ಗೆ ವರ್ಗಾಯಿಸಿ, ರಾಷ್ಟ್ರೀಯ ಪಕ್ಷವಾದರೂ ರಾಜ್ಯದ ಹಿತ ಕಾಪಾಡುವ ಏಕೈಕ ಪಕ್ಷವೆಂದು ಬಿಂಬಿಸುವುದು ಸಿದ್ದರಾಮಯ್ಯನವರಿಗೆ ಸಾಧ್ಯವಾಯಿತು.

ಬೇಲಿಯ ಮೇಲೆ ಕುಳಿತು ಫಸಲು ತೆಗೆಯುವ ಜಾಯಮಾನ ರೂಢಿಸಿಕೊಂಡ ಜೆಡಿಎಸ್, ಬಲಿಷ್ಠ ಪ್ರಾದೇಶಿಕ ಪಕ್ಷವಾಗುವ ಅವಕಾಶವನ್ನು ಕೈಚೆಲ್ಲಿಬಿಟ್ಟಿದೆ. ಇದನ್ನು ಕಾಂಗ್ರೆಸ್, ಸಮರ್ಪಕವಾಗಿ ಬಳಸಿಕೊಂಡಿದೆ.

ಎಲ್ಲ ಆಘಾತಗಳ ಮಧ್ಯೆ, ಮೂರನೇ ತಲೆಮಾರಿಗೆ ಪಕ್ಷದ ನಾಯಕತ್ವ ವಹಿಸುವ ಇರಾದೆಯಲ್ಲಿರುವ ಗೌಡರ ಕುಟುಂಬ, ನಿಖಿಲ್ ಕುಮಾರಸ್ವಾಮಿಗೆ ‘ತೆನೆ’ ಹೊರಿಸಿದ್ದಾರೆ. ನಿಖಿಲ್ ಅವರ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ ವೇಳೆ ಮಾತನಾಡಿದ ಕುಮಾರಸ್ವಾಮಿ, ‘ನಿಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಲಪಡಿಸಿ, ದೆಹಲಿಯಿಂದ ಟಿಕೆಟ್ ತರುವ ಹೊಣೆ ನನಗೆ ಬಿಡಿ’ ಎಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಮೂರು ವರ್ಷಗಳು ಇರುವಾಗಲೇ ಮಗನನ್ನು ಕುದುರೆ ಹತ್ತಿಸಿರುವ ಕುಮಾರಸ್ವಾಮಿ, ವಿಧಾನಸೌಧದ ಮೂರನೇ ಮಹಡಿಯನ್ನು ಮತ್ತೆ ಏರಲಿದ್ದಾರೆಯೇ ಎಂಬುದು ಯಕ್ಷ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.