ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ಮೂರೇ ತಿಂಗಳು; ಅಸಹನೆಯ ಸಿಡಿಲು

ಅಂಗಿಗೆ ಮಸಿ ಬಿದ್ದರೂ ಮಸಿಯ ಮೇಲೆ ಅಂಗಿ ಬಿದ್ದರೂ ಮಾನಗೆಡುವುದು ಬಿಳಿ ಅಂಗಿಯದೇ!
Published 15 ಆಗಸ್ಟ್ 2023, 23:32 IST
Last Updated 15 ಆಗಸ್ಟ್ 2023, 23:32 IST
ಅಕ್ಷರ ಗಾತ್ರ

ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿಯಾದಾಗ ಪ್ರವರ್ಧಮಾನದಲ್ಲಿದ್ದ ಅವರ ಮಗ ರಾಕೇಶ್, ಮುಖ್ಯಮಂತ್ರಿ ಸಚಿವಾಲಯದ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಕಡತವನ್ನು ಅಪ್ಪನ ಬಳಿ ತೆಗೆದುಕೊಂಡ ಹೋದ ರಾಕೇಶ್, ಅದಕ್ಕೆ ಸಹಿ ಹಾಕುವಂತೆ ಅವರ ಮುಂದೆ ಹಿಡಿದರು. ಅಧಿಕಾರ ವರ್ತುಲದೊಳಗೆ ಕುಟುಂಬಸ್ದರನ್ನು ಬಿಟ್ಟುಕೊಳ್ಳುವುದನ್ನು ವಿರೋಧಿಸುತ್ತಿದ್ದ ಸಿದ್ದರಾಮಯ್ಯ, ರಾಕೇಶ್ ಕಡೆ ದುರುಗುಟ್ಟಿ ನೋಡಿ ಕಡತ ಎಸೆದರು. ಕಾಗದಗಳೆಲ್ಲ ಚೆಲ್ಲಾಪಿಲ್ಲಿ ಹರಿದಾಡಿದವು. ಇನ್ಯಾವತ್ತೂ ಯಾವುದೇ ಕಡತವನ್ನೂ ತರಬಾರದು ಎಂದು ಕಟ್ಟಪ್ಪಣೆ ವಿಧಿಸಿ ಗದರಿ ಕಳುಹಿಸಿದ್ದರು. ಆ ಬಳಿಕ, ರಾಕೇಶ್ ಕಡತಗಳಿಗೆ ಸಹಿ ಬೀಳುತ್ತಿತ್ತೋ ಇಲ್ಲವೋ ಎಂಬುದು ಬಹಿರಂಗವಾಗಿಲ್ಲ.

ಈಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ. ರಾಕೇಶ್‌ ಅವರಷ್ಟು ಪ್ರಭಾವಿಯಲ್ಲದ, ಮುನ್ನುಗ್ಗುವ ಛಾತಿ ಇಲ್ಲದ ಡಾ.ಯತೀಂದ್ರ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ವಿರೋಧ ಪಕ್ಷದವರು ಯತೀಂದ್ರ ಮೇಲೆ ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯನವರು ಪ್ರತಿನಿಧಿಸುವ ವರುಣ ಕ್ಷೇತ್ರದ ಕಾರ್ಯಕರ್ತರ ಕೆಲಸವನ್ನಷ್ಟೇ ಯತೀಂದ್ರ ಮಾಡುತ್ತಿದ್ದಾರೆ ಎಂಬುದು ಮುಖ್ಯಮಂತ್ರಿ ಆಪ್ತವಲಯದ ಆಂಬೋಣ. ರಾಕೇಶ್ ತಂದಿದ್ದ ಕಡತ ಎಸೆದಂತೆ ಯತೀಂದ್ರ ಅವರ ಕಡತವನ್ನು ಸಿದ್ದರಾಮಯ್ಯ ಎಸೆದಿದ್ದಾರೋ ಅಥವಾ ಅವರೇ ತರಿಸಿಕೊಂಡು ಸಹಿ ಹಾಕುತ್ತಿದ್ದಾರೋ ಎಂಬುದು ರಹಸ್ಯ.

ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಡಿತ್ತು. ಬಿ.ಎಸ್. ಯಡಿಯೂರಪ್ಪ ಕಾಲದಲ್ಲಿ ಪ್ರಧಾನಿ ಕಚೇರಿಗೆ ಸಲ್ಲಿಕೆಯಾಗಿದ್ದ ಶೇ 40ರಷ್ಟು ಕಮಿಷನ್ ಆರೋಪದ ಅಂಚು ಹಿಡಿದಿದ್ದ ಕಾಂಗ್ರೆಸ್ ನಾಯಕರು, ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಹಾಗಂತ, ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಎಲ್ಲರೂ ಸುಭಗರೇನಲ್ಲ. ಆ ದಿನಗಳಲ್ಲಿ ‘ಪೇ ಸಿಎಂ’ ಅಭಿಯಾನದ ನೇತೃತ್ವವನ್ನು ಸ್ವತಃ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದರು. ಶೇ 40ರ ಲಂಚದ ದುಷ್ಪರಿಣಾಮಗಳನ್ನು ಅನುಭವಿಸಿದ್ದ ಜನರಿಗೆ ಈ ಅಭಿಯಾನ ಗಾಢವಾಗಿ ತಟ್ಟಿತ್ತು. ತಮ್ಮ ಸರ್ಕಾರದಲ್ಲಿ ಅದೇನೂ ನಡೆದೇ ಇಲ್ಲ; ತಮ್ಮಷ್ಟು ಪ್ರಾಮಾಣಿಕರು ಜಗತ್ತಿನಲ್ಲೇ ಇಲ್ಲವೆಂಬ ರೀತಿಯೊಳಗೆ ಈಗ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಭ್ರಷ್ಟಾಚಾರವನ್ನೇ ಮುಂದಿಟ್ಟು ಚುನಾವಣೆ ಎದುರಿಸಿ ಗೆದ್ದು, ಅಧಿಕಾರ ಹಿಡಿದು ಮೂರು ತಿಂಗಳು ಕಳೆಯುವಷ್ಟರಲ್ಲೇ ಭ್ರಷ್ಟಾಚಾರದ ಕೆಸರು ಕಾಂಗ್ರೆಸ್‌ಗೂ ಮೆತ್ತಿಕೊಂಡಿದೆ. ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡು, ಅವರ ಪರ ವಕಾಲತ್ತು ವಹಿಸುವಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಯಲಬುರ್ಗಾದ ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಇಂತಹದೇ ಮಾತನಾಡಿದ್ದಾರೆ. ‘ಭ್ರಷ್ಟಾಚಾರದ ವಿಷಯದಲ್ಲಿ ಕರ್ನಾಟಕ ಬ್ರ್ಯಾಂಡ್ ಆಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ತಡೆಯಲು ಮುಖ್ಯಮಂತ್ರಿ ಕ್ರಮ ವಹಿಸಬೇಕು. ಹಿಂದೆ ಬಿಜೆಪಿ ಆಡಳಿತವಿದ್ದಾಗ ಗುತ್ತಿಗೆದಾರರು ಶೇ 40ರಷ್ಟು ಕಮಿಷನ್‌ ಆರೋಪ ಮಾಡಿದ್ದರು. ಈಗ ಶೇ 15ರಷ್ಟು ಕಮಿಷನ್‌ ಎಂದು ಆರೋಪಿಸುತ್ತಿದ್ದಾರೆ. ಆಗ ನಾವು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದೆವು. ಈಗ ಅವರು ನಮ್ಮ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂಬುದು ಅವರ ವಾದ.

ವರ್ಗಾವಣೆ, ಕಮಿಷನ್ ವಿಚಾರ ಈಗ ದೊಡ್ಡ ಸದ್ದು ಮಾಡುತ್ತಿದೆ. ಅಧಿಕಾರ ಹಿಡಿದ ಮೂರೇ ತಿಂಗಳಲ್ಲಿ ಇಂತಹದೊಂದು ಆಪಾದನೆಗೆ ಸರ್ಕಾರ ಗುರಿಯಾಗಿರುವುದು ಸಮರ್ಥನೀಯವಲ್ಲ. ಹಾಗಂತ, ಸಿದ್ದರಾಮಯ್ಯನವರ ಬಗ್ಗೆ, ಅವರ ಸಚಿವಾಲಯದ ಬಗ್ಗೆ ಶಾಸಕರ ತಕರಾರಿಲ್ಲ. ಆಪ್ತ ಬಣದಲ್ಲಿ ಗುರುತಿಸಿಕೊಂಡ ಕೆಲವರು,  ಕೆಲಸ ಮಾಡಿಸುವುದಾಗಿ ವಾಗ್ದಾನ ಮಾಡಿಸುವವರು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವುದು ಸುಳ್ಳಲ್ಲ. ಅಂಗಿಗೆ ಮಸಿ ಬಿದ್ದರೂ ಮಸಿಯ ಮೇಲೆ ಅಂಗಿ ಬಿದ್ದರೂ ಮಾನಗೆಡುವುದು ಬಿಳಿ ಅಂಗಿಯದೇ. ಈ ಅರಿವು ಅಧಿಕಾರಸ್ಥರಿಗೆ ಇರಬೇಕು.

ವರ್ಗಾವಣೆ ವಿಷಯದಲ್ಲಿ ತಮ್ಮ ಶಿಫಾರಸು ಪತ್ರಗಳಿಗೆ ಕಿಮ್ಮತ್ತಿಲ್ಲ ಎಂದು ಶಾಸಕರು ದೂರಿದ್ದಾರೆ. ಹಳಿ ತಪ್ಪಿದ ಆಡಳಿತವನ್ನು ಸರಿದಾರಿಗೆ ತರಬೇಕಾದರೆ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ತಂದು ಕೂರಿಸಬೇಕಾದುದು ಅಧಿಕಾರಕ್ಕೆ ಬಂದ ಸರ್ಕಾರವೊಂದು ಮಾಡಲೇಬೇಕಾದ ಮೊದಲ ಕೆಲಸ. ಆಡಳಿತಾತ್ಮಕ ವಿಷಯದಲ್ಲಿ, ಶಾಸಕರು ಹಸ್ತಕ್ಷೇಪ ಮಾಡಿದರೆ ಉತ್ತಮ ಆಡಳಿತವೆಂಬುದು ಲೊಳಲೊಟ್ಟೆಯಾಗುತ್ತದೆ. ವರ್ಗಾವಣೆಯೆಂಬುದು ಜಾತಿ– ಧರ್ಮದ ಹೊರತಾಗಿ, ನಿಷ್ಪಕ್ಷಪಾತವಾಗಿ ನಡೆದಾಗಲಷ್ಟೇ ಆಡಳಿತ ಸರಿದಾರಿಗೆ ಬರಬಹುದು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಬಳಿಕ, ಕೆಲವು ಆಯಕಟ್ಟಿನ ಜಾಗಕ್ಕೆ ಬಂದವರು ಹಾಗೂ ಐದಾರು ಇಲಾಖೆಗಳ ಉಸ್ತುವಾರಿ ಹೊತ್ತಿದ್ದ ಕಳಂಕಿತರು ಅದೇ ಹುದ್ದೆಯಲ್ಲಿ ಮುಂದುವರಿದಿರುವುದನ್ನು ನೋಡಿದರೆ, ಉತ್ತಮ ಆಡಳಿತಕ್ಕಾಗಿ ವರ್ಗಾವಣೆ ನಡೆದಿದೆ ಎಂದು ಭಾವಿಸುವಂತಹ ನಡಾವಳಿಯೇನಲ್ಲ.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿದ್ದವರು ತಮ್ಮ ಮಾತು ಕೇಳುತ್ತಿಲ್ಲ; ಅವರಲ್ಲಿ ಬಹುತೇಕರು ಕೋಮುವಾದಿಗಳು, ಅಸೂಕ್ಷ್ಮ ಮನಸ್ಸಿನವರು ಆಗಿದ್ದರು. ಅವರನ್ನಷ್ಟೇ ಬದಲಿಸಿ ಎಂದು ಕೇಳುತ್ತಿದ್ದೇವೆ’ ಎಂಬುದು ಶಾಸಕರ ಬೇಡಿಕೆ. ಅಧಿಕಾರದಲ್ಲಿದ್ದ ಪಕ್ಷದ ಸಿದ್ಧಾಂತ, ನೀತಿ–ನಿಲುವಿಗೆ ತಕ್ಕಂತೆ ಅಧಿಕಾರಿಗಳು ವರ್ತಿಸುವುದು ಸಾಮಾನ್ಯ. ಆಡಳಿತ ಪಕ್ಷ ಬದಲಾದಂತೆ ಅಧಿಕಾರಿಗಳೂ ತಮ್ಮ ಧೋರಣೆ ಬದಲಿಸಿಕೊಳ್ಳುತ್ತಿದ್ದರು. ಕೇಂದ್ರ– ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಲು ಆರಂಭಿಸಿದ ಮೇಲೆ ಪರಿಸ್ಥಿತಿ ಬದಲಾದಂತಿದೆ. ಸಿದ್ಧಾಂತ, ನಂಬಿಕೆಯನ್ನು ಬದಿಗಿಟ್ಟು ಅಧಿಕಾರಿಗಳಂತೆ ವರ್ತಿಸುತ್ತಿದ್ದ ಬಹುತೇಕರು ತಮ್ಮೊಳಗಿದ್ದ ಜಾತಿವಾದಿ, ಕೋಮುವಾದಿ ಭಾವನೆಯನ್ನು ನಿರ್ಲಜ್ಜೆಯಿಂದ ಪ್ರದರ್ಶಿಸಿದ್ದೂ ಇದೆ. ಆರ್‌ಎಸ್‌ಎಸ್‌, ಬಿಜೆಪಿ ಕಟ್ಟಾಳುಗಳಿಗಿಂತ ತೀವ್ರ ಕೋಮುವಾದಿಗಳಾಗಿ ಆಡಳಿತ ನಡೆಸಿದ್ದನ್ನು ನೋಡಿದ್ದೇವೆ. ಅಧಿಕಾರಿಗಳಲ್ಲಿ ಬೇರೂರಿರುವ ಈ ಅಪಾಯಕಾರಿ ಮನಸ್ಥಿತಿಯನ್ನು ಸರ್ಕಾರ ಬದಲಿಸಬೇಕಿದೆ. ಇಲ್ಲದಿದ್ದರೆ, ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸುವ ಕಾಂಗ್ರೆಸ್ ಕನಸು ನನಸಾಗದು. ಅಧಿಕಾರಿಗಳು ಈ ರೀತಿ ಇದ್ದಾರೆ ಎಂಬ ಕಾರಣಕ್ಕೆ, ತಾವು ಹೇಳಿದ ಅಧಿಕಾರಿಗಳನ್ನು ಹಾಕಿಕೊಡಿ ಎಂದು ಶಾಸಕರು ಕೇಳುತ್ತಿರುವುದು ನಿಜವಾದರೆ, ಸರ್ಕಾರ ಆ ಕೆಲಸವನ್ನು ಮೊದಲು ಮಾಡಬೇಕಿದೆ.

ಮುಗಿದ ಕಾಮಗಾರಿಗೆ ಕಮಿಷನ್, ವರ್ಗಾವಣೆಯಲ್ಲಿ ದೊಡ್ಡ ಮಟ್ಟದ ಲಂಚ ನಡೆಯುತ್ತಿದೆ ಎಂಬ ಆರೋಪದ ಆಚೆಗೆ ಸತ್ಯವಿದೆ. ಆ ಸತ್ಯವೇನೆಂದು ಆಡಳಿತಾರೂಢರಿಗೆ ಗೊತ್ತಿಲ್ಲದ ಸಂಗತಿಯಲ್ಲ.

‘ಭ್ರಷ್ಟ ರಾಜಕಾರಣಿಗಳು ಎಂದು ಬರೆಯಬೇಕಿಲ್ಲ; ರಾಜಕಾರಣಿಗಳೆಂದರೆ ಭ್ರಷ್ಟರು’ ಎಂದು ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲರು ಹೇಳುತ್ತಿದ್ದರು. ನಾಲ್ಕು ಗೋಡೆಯ ಮಧ್ಯೆ ನಡೆಯುವ ವ್ಯವಹಾರ ಬೀದಿಯಲ್ಲಿ ಸದ್ದು ಮಾಡ ತೊಡಗಿದರೆ, ಅದು ವಿಪರೀತ ಎನ್ನುವ ಮಟ್ಟಕ್ಕೆ ಹೋಗಿದೆ ಎಂದರ್ಥ. ಅಧಿಕಾರಿಗಳು, ಗುತ್ತಿಗೆದಾರರನ್ನು ಖಾಸಗಿಯಾಗಿ ಕರೆಯಿಸಿಕೊಂಡು ವಾಚು, ಪೆನ್ನು, ಬಳೆ, ಮೊಬೈಲ್, ಉಂಗುರ ಎಲ್ಲವನ್ನೂ ಹೊರಗಿರಿಸಿ ‘ವ್ಯಾವಹಾರಿಕ’ ಮಾತುಕತೆಗಳನ್ನು ನಡೆಸುವ ಸಚಿವರು ಈಗಲಾದರೂ ಎಚ್ಚರವಾಗಬೇಕಿದೆ. ಇಲ್ಲದಿದ್ದರೆ, ಮತ್ತೆ ‘ಪೇ ಸಿಎಂ, ಪೇ ಡಿಸಿಎಂ’ ಘೋಷಣೆಗಳಿಗೆ ಬಲಬರಲಿದೆ.

ಒಂದೂರಿನ ದೋಣಿಗಂಡಿಯಲ್ಲಿ ಅಂಬಿಗನಿದ್ದ. ಒಂದು ಸರ್ತಿ ಹೊಳೆ ದಾಟಿಸಿದರೆ ₹ 2 , ಎರಡೂ ಕಡೆಗಾದರೆ ₹ 3 ಪಡೆಯುತ್ತಿದ್ದ. ಒಂದು ಸರ್ತಿಗೆ ಇಷ್ಟು ದುಡ್ಡು ತೆಗೆದುಕೊಳ್ಳುತ್ತಾನೆ ಎಂದು ಜನ ಬೈದುಕೊಳ್ಳುತ್ತಲೇ, ನಿರ್ವಾಹವಿಲ್ಲದೇ ದೋಣಿ ಏರುತ್ತಿದ್ದರು. ಆತ ತೀರಿಕೊಂಡ ಬಳಿಕ ಅವನ ಮಗ ದೋಣಿಯ ಉಸ್ತುವಾರಿ ವಹಿಸಿಕೊಂಡ. ಒಂದು ಸರ್ತಿಗೆ ₹ 3, ಎರಡೂ ಕಡೆಗಾದರೆ ₹ 5 ನಿಗದಿ ಮಾಡಿದ. ಹಿಂದೆ, ಆತನ ಅಪ್ಪನನ್ನು ಬೈಯುತ್ತಿದ್ದವರು, ಇವ್ನ ಅಪ್ಪನೇ ಒಳ್ಳೆಯವನಿದ್ದ; ಕಡಿಮೆ ರೇಟು ತೆಗೆದುಕೊಳ್ಳುತ್ತಿದ್ದ. ಇವ ಬಂದ ಮೇಲೆ ಬದುಕೇ ದುಬಾರಿಯಾಯ್ತು ಎಂದು ಮಗನನ್ನು ಬೈಯಲಾರಂಭಿಸಿದರು. ಈ ಕತೆ ಎಲ್ಲ ಕಾಲಕ್ಕೂ ಸಲ್ಲದಿರಲಿ; ಬದುಕಿನ ಬವಣೆ ಕಡಿಮೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT