ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧರ್ಮ’ ಕಾರಣವೂ ಕೋಮು ಬೆಂಕಿಯೂ

ಧರ್ಮದ ವಿಷಯದಲ್ಲಿ ಕ್ರೋಧ ತ್ಯಜಿಸಿ ಶ್ರದ್ಧೆ ಹೊಂದೋಣ
Last Updated 19 ಆಗಸ್ಟ್ 2020, 2:21 IST
ಅಕ್ಷರ ಗಾತ್ರ

‘ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ’– ಮಹಾಭಾರತದ ವನಪರ್ವದಲ್ಲಿ ಬರುವ ಶ್ಲೋಕವಿದು.ಧರ್ಮಪಾಲನೆ ಮಾಡದಿರುವವನು ನಾಶವಾಗುತ್ತಾನೆ ಮತ್ತು ಯಾರು ಧರ್ಮವನ್ನು ಪಾಲಿಸುತ್ತಾನೆಯೋ ಅವನನ್ನು ಧರ್ಮವು ರಕ್ಷಿಸುತ್ತದೆ ಎಂಬುದು ಶ್ಲೋಕಾರ್ಥ.

ತಾವು ಮಾಡುತ್ತಿರುವ ಕಾಯಕವನ್ನು ನಿಸ್ಪೃಹವಾಗಿ, ನಿರ್ವಂಚನೆಯಿಂದ ಮಾಡುವುದೇ ನಿಜವಾದ ಧರ್ಮ ಎಂಬುದು ಜನಸಾಮಾನ್ಯರ ಆಡುಭಾಷೆಯಲ್ಲಿ ಇದಕ್ಕಿರುವ ಅರ್ಥ. ಇದನ್ನು ವಿಶಾಲಾರ್ಥದಲ್ಲಿ ಹೇಳುವುದಾದರೆ, ಜನರಲ್ಲಿ ಭೇದ ಎಣಿಸದಿರುವುದು ಆಡಳಿತಗಾರನಿಗೆ, ಸದ್ವಿಚಾರ ಬೋಧಿಸುವುದು ಧರ್ಮಗುರುಗಳಿಗೆ, ಜನರ ನೋವಿಗೆ ದನಿಯಾಗುವುದು ಪತ್ರಕರ್ತನಿಗೆ, ನ್ಯಾಯಪಾಲನೆಯು ನ್ಯಾಯಾಧೀಶನ ಪಾಲಿಗೆ ಅಸಲಿ ಧರ್ಮ. ರಾಜಕಾರಣಿಗಳು ಧರ್ಮದ ವಿಷಯದಲ್ಲಿ ಕೈಹಾಕುವುದು, ಧರ್ಮಗುರುಗಳು ರಾಜಕೀಯ ಮಾಡುವುದು, ಪತ್ರಕರ್ತರು ನ್ಯಾಯ ನಿರ್ಣಯಿಸುವವರಂತೆ ಹಾಗೂ ರಾಜಕಾರಣಿಗಳಂತೆವರ್ತಿಸುವುದು ಇಂದಿನ ಸಾಮಾಜಿಕ ವಿಘಟನೆ, ಕೋಮು ವಿದ್ವೇಷ, ಜನಸಮುದಾಯಗಳ ಮಧ್ಯೆ ಪರಸ್ಪರ ಅಪನಂಬಿಕೆಗೆ ಕಾರಣವಾಗಿರುವುದು ಅವಾಸ್ತವವೇನಲ್ಲ.

ಶಿವಮೊಗ್ಗದಂತಹ ಪೇಟೆಯನ್ನೇ ನೆಟ್ಟಗೆ ಕಾಣದಿದ್ದ ನಾನು, ಎಂ.ಎ. ಮಾಡಲು ಶೃಂಗೇರಿ ಸಮೀಪದ ಹಳ್ಳಿಯಿಂದ ಕುವೆಂಪು ವಿಶ್ವವಿದ್ಯಾಲಯಕ್ಕೆ 1992ರಲ್ಲಿ ಹೋದಾಗ, ಯಾರೂ ಪರಿಚಯಸ್ಥರಿರಲಿಲ್ಲ. ಶೃಂಗೇರಿ ಕಾಲೇಜಿನಲ್ಲಿ ನನ್ನ ಹಿರೀಕನಾಗಿದ್ದ ಶಂಷೀರ್ ಅಹಮದ್,‌ ಆತನ ಜತೆಗೆ ರೂಮ್‌ ಮಾಡಿಕೊಂಡು ಓದುತ್ತಿದ್ದ ಆದಿಲ್ ಅಹಮದ್‌ ಹಾಗೂ ಪ್ರಕಾಶ್ ಎಂಬುವರು ಒಂದು ವರ್ಷ ನನಗೆ ಉಳಿಯಲು ಜಾಗ ಕೊಟ್ಟಿದ್ದರು. ಶಂಷೀರ್‌, ಆದಿಲ್ ಯಾವತ್ತೂ ನನಗೆ ಪರಕೀಯರು ಎನಿಸಿರಲೇ ಇಲ್ಲ. ಅವರಿಗೂ ನಾನು ‘ಅನ್ಯ’ ಎಂಬ ಭಾವವೂ ಇರಲಿಲ್ಲ.

ಇದು ನೆನಪಾಗಲು ಕಾರಣ ಇಷ್ಟೇ; ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಮೆಯಿರುವ ಮಂಟಪದ ಮೇಲೆ ಎಸ್‌ಡಿಪಿಐ ಬಾವುಟ ಹಾರಿಸಲಾಯಿತು ಎಂಬ ಗದ್ದಲ ಇತ್ತೀಚೆಗೆ ಎದ್ದಿತ್ತು. ಮತ್ತೆ ರಾಜಕೀಯ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಡಿ.ಎನ್.ಜೀವರಾಜ್, ಇದರ ಮುಂಚೂಣಿಯಲ್ಲಿದ್ದರು. ಈ ಘಟನೆಗೆ ಸಂಬಂಧವಿಲ್ಲದೇ ಇದ್ದರೂ ಜೀವಭಯದ ಕಾರಣಕ್ಕೆ ಠಾಣೆಗೆ ಹೋಗಿ ಕುಳಿತಿದ್ದ ರಫೀಕ್ ಅಹಮದ್ ಸೇರಿದಂತೆ ನಾಲ್ವರು ‘ದೇಶದ್ರೋಹಿ’ಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕೆಂದು ಅಬ್ಬರಿಸಿದರು. ಮಿಲಿಂದ್ ಮನೋಹರ್ ಎಂಬಾತ ‘ರಾತ್ರಿಯ ಚಳಿಯ ರಕ್ಷಣೆಗಾಗಿ ಮಸೀದಿಯಿಂದ ತಂದಿದ್ದ ಬ್ಯಾನರ್‌ ಅನ್ನು ಅದರ ಮೇಲೆ ಎಸೆದುಹೋಗಿದ್ದ’ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾದ ‘ಸತ್ಯ’. ಇಂದು ಇಂತಹವು ಎಲ್ಲ ಊರುಗಳಲ್ಲಿಯೂ ನಡೆಯುತ್ತಿವೆ.

ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಲ್ಲುವವರು ಅದು ಯಾವ ಜಾತಿಯ ಮರವೆಂದು ನೋಡುವುದಿಲ್ಲ. ಧರ್ಮಗಳೆಂದರೆ ಮೊದಲು ಇಂತಹ ರೂಪಕಗಳೇ ಆಗಿದ್ದವು. ಯಾವಾಗ ಮತಕ್ಕೆ ರಾಜಕೀಯದ ‘ಮತ್ತು’ ಬೆರೆಸುವುದು ಶುರುವಾಯಿತೋ ಆಗ ಇಂತಹ ಅವಘಡಗಳು ನಡೆಯತೊಡಗಿದವು. ಉರಿವ ಮನೆಯಲ್ಲಿ ಚಳಿ ಕಾಯಿಸಿಕೊಳ್ಳುವವರು ಇರುವವರೆಗೂ ಉರಿವ ಕೆನ್ನಾಲಗೆಗೆ ಊರು ಸುಟ್ಟುಕೊಳ್ಳುತ್ತಲೇ ಇರಬೇಕಾಗುತ್ತದೆ.ಧರ್ಮದ ವಿಷಯವು ಜನರನ್ನು ರೊಚ್ಚಿಗೆಬ್ಬಿಸುವ ರೀತಿಯಲ್ಲಿ, ಹಸಿವಿನಿಂದ ಕೂಗುವ ಕಂದಮ್ಮನ ಅಳುವಾಗಲೀ ಹೆರಿಗೆ ಸಮಯದಲ್ಲಿ ಚಿಕಿತ್ಸೆ ಸಿಗದ ಗರ್ಭಿಣಿಯ ಆಕ್ರಂದನವಾಗಲೀ ನಮ್ಮನ್ನು ಕಾಡದಿರುವುದು ದುರಂತ.

ಬೆಂಗಳೂರಿನಲ್ಲಿ ನವೀನ್ ಎಂಬುವವನ ಫೇಸ್‌ಬುಕ್‌ ಪೋಸ್ಟ್‌ಗೆ ಕೆಲವು ಮುಸ್ಲಿಮರು ಪ್ರತಿಕ್ರಿಯಿಸಿದ ರೀತಿ ಕೂಡ ಅತ್ಯಂತ ಕ್ರೂರವಾದುದು. ಇದರ ಹಿಂದೆ ಯೋಜಿತ ಸಂಚು ಇಲ್ಲದೇ ಇದ್ದರೆ, ಕೇವಲ ಆವೇಶಕ್ಕೆ ಒಳಗಾದ ಗುಂಪು, ಶಾಸಕರ ಮನೆಯನ್ನೇ ಸುಟ್ಟು ಹಾಕುವಂತಹ ಕ್ರೌರ್ಯಕ್ಕೆ ಮುಂದಾಗುತ್ತಿರಲಿಲ್ಲ ಎಂಬುದಂತೂ ಸತ್ಯ;ಇದರ ಹಿಂದೆ ರಾಜಕೀಯ ಫಸಲು ತೆಗೆಯುವ ಕುಯುಕ್ತಿ ಯಾರಿಗಾದರೂ ಇದ್ದರೆ ಅದು ಅಕ್ಷಮ್ಯ.

ಫೇಸ್‌ಬುಕ್‌ ಪೋಸ್ಟ್‌ನಂತಹ ಕ್ಷುಲ್ಲಕ ಸಂಗತಿಗಳು ಸಮುದಾಯಗಳನ್ನು ಈ ಪರಿಯ ಹಿಂಸೆಗೆ ಈಡು ಮಾಡುವುದು ಭೀತಿ ಹುಟ್ಟಿಸುತ್ತದೆ. ಕೋಮು ಹಿಂಸೆಯ ಪ್ರಕರಣಗಳಲ್ಲಿ ಆಸ್ತಿ–ಪಾಸ್ತಿ ಸುಟ್ಟುಹೋಗಿರುವ ನೋವು, ಹಾನಿ ಶಾಶ್ವತವಾದ ಗಾಯದಂತೆ ಒಂದೆಡೆ ಉಳಿದು ಬಿಡುತ್ತದೆ. ಅಂತಹ ಪಾಪಕೃತ್ಯ ಮಾಡಿಸಿದವರು ದೂರದಲ್ಲೇ ಉಳಿದು ಮಜಾ ನೋಡುತ್ತಿರುತ್ತಾರೆ.

ಯಾರದೋ ಮಾತು ಕೇಳಿ ಕಲ್ಲೆಸೆದವರು, ಬೆಂಕಿ ಇಟ್ಟವರು, ಕೆಲವೊಮ್ಮೆ ಗಲಾಟೆ ಏನೆಂದು ಇಣುಕಿದವರು ಕೇಸುಗಳನ್ನು ಹಾಕಿಸಿಕೊಂಡು ಪರಿತಾಪ ಪಡಬೇಕಾಗುತ್ತದೆ. ಈ ಬಗೆಯ ಕೇಸುಗಳಲ್ಲಿ ಅಪರಾಧಿಗಳನ್ನು ಬಿಡಿಸಿಕೊಂಡು ಬರುವ, ಅವರು ಜೈಲಿನಲ್ಲಿದ್ದಷ್ಟು ದಿನ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಗುಂಪು ಮುಂದಿನ ಚುನಾವಣೆಗಳಲ್ಲಿ ರಾಜಕೀಯ ಫಸಲನ್ನು ತೆಗೆಯುತ್ತದೆ. ಹಿಂದೂ–ಮುಸ್ಲಿಂ ಎಂಬ ಭೇದವಿಲ್ಲದೇ ಕುತ್ಸಿತ ರಾಜಕೀಯ ಹಿತಾಸಕ್ತಿ ಇರುವ ಎಲ್ಲ ಸಂಘಟನೆಗಳೂ ಇಂತಹದನ್ನು ಮಾಡಿವೆ.

ಕಾಮಿಡಿ ಷೋನಲ್ಲಿ ಜ್ಯೋತಿಷಿಗಳನ್ನು ಅವಹೇಳನ ಮಾಡಿದರೆಂದು ಆಪಾದಿಸಿ ರಂಗಕರ್ಮಿಗಳನ್ನು ಬೆದರಿಸಿ ಕ್ಷಮೆ ಕೇಳಿಸಿದ್ದೂ ಮಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ವ್ಯವಸ್ಥೆಯ ಕುರಿತು ವ್ಯಂಗ್ಯ ಅಥವಾ ಟೀಕೆ ಭಾರತೀಯ ಪರಂಪರೆಯಲ್ಲಿ ಹೊಸತಲ್ಲ. ಅದನ್ನೇ ದೇಶದ್ರೋಹ ಎಂದು ಬಿಂಬಿಸುವುದು ಮಾತ್ರ ಈಗಿನ ಬೆಳವಣಿಗೆ. ಈಗಂತೂ ದೇವರು–ಧರ್ಮದ ಬಗ್ಗೆ ಟೀಕಿಸಿದವರನ್ನು ಕಡಿ–ಕೊಚ್ಚು–ಕೊಲ್ಲು ಎಂಬ ಫರ್ಮಾನು, ಧರ್ಮವನ್ನು ಗುತ್ತಿಗೆ ಪಡೆದವರಿಂದ ಹೊರಬರುತ್ತಲೇ ಇದೆ.

‘ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ; ತರ್ಕವೆಂಬುದು ತಗರ ಹೋರಟೆ, ಭಕ್ತಿ ಎಂಬುದು ತೋರುಂಬ ಲಾಭ...’ ಎಂದು 12ನೇ ಶತಮಾನದಲ್ಲೇ ಅಲ್ಲಮಪ್ರಭು ಹೇಳಿದ್ದರು. ಅವರು ಈಗ ಏನಾದರೂ ಹೀಗೆ ಹೇಳಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೆಂದು ಯಾರಾದರೂ ಊಹಿಸಬಹುದು. ಧರ್ಮದೊಳಗೆ ರಾಜಕೀಯವನ್ನು, ರಾಜಕೀಯದೊಳಗೆ ಧರ್ಮವನ್ನು ಬೆಸೆಯುವ ಪ್ರಕ್ರಿಯೆ ಎಂದು ಆರಂಭವಾಯಿತೋ ಆಗ ಹಿಂಸೆ, ಅಸಹಿಷ್ಣುತೆ ಹೆಚ್ಚಲು ಆರಂಭವಾದವು. ಇಂತಹ ಬೆಳವಣಿಗೆಗಳನ್ನು ಪೋಷಿಸುವ ಸಂಘಟನೆಗಳು ತಲೆ ಎತ್ತತೊಡಗಿದವು. ಇದು ಈ ಹೊತ್ತಿನ ದ್ವೇಷಮಯ ಸನ್ನಿವೇಶಕ್ಕೆ ಕಾರಣ.

ಪಿಎಫ್‌ಐ, ಎಸ್‌ಡಿಪಿಐ ಮೇಲಿದ್ದ ನೂರಾರು ಕೇಸುಗಳನ್ನು 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಪಸ್ ತೆಗೆದುಕೊಂಡಿದ್ದೇ ಇಂತಹ ಸ್ಥಿತಿಗೆ ಕಾರಣ ಎಂದು ಬಿಜೆಪಿ ದೂರುತ್ತಿದೆ. 2008ರಿಂದಅಧಿಕಾರದಲ್ಲಿದ್ದ ಬಿಜೆಪಿಯು ಕೋಮುಗಲಭೆಗೆ ಸಂಬಂಧಿಸಿದ 128 ಕೇಸುಗಳನ್ನು ವಾಪಸ್ ಪಡೆದಿತ್ತು. ಈಗಲೂ ವಿದ್ವೇಷದ ಭಾಷಣ ಮಾಡಲು ಹಿಂಜರಿಯದ ಅನಂತಕುಮಾರ ಹೆಗಡೆ, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಹಿಂದೂ ಜಾಗರಣಾ ವೇದಿಕೆಯ ಜಗದೀಶ ಕಾರಂತ ಅಂತಹವರ ಮೇಲೆ ಇದ್ದ ಕೇಸುಗಳು ಇದರಲ್ಲಿ ಸೇರಿದ್ದವು. ಕೋರ್ಟ್‌ ಮಾಡಬೇಕಾದ ಕೆಲಸವನ್ನು ಈ ಎರಡೂ ಸರ್ಕಾರಗಳು ಮಾಡಿದವು. ಅಧಿಕಾರದಲ್ಲಿದ್ದಾಗ ಓಲೈಕೆ ಮಾಡುವ ಕೆಲಸ ಮಾಡುವುದು ಬಿಟ್ಟು ರಾಜಧರ್ಮ ಪಾಲಿಸಿದ್ದರೆ ಇಂತಹ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ.

ಬಿಜೆಪಿಯವರು ಅಧಿಕಾರದಲ್ಲಿರುವಾಗ, ಕಾನೂನು ಪಾಲನೆ ಮಾಡಲು ಬೋಧನೆ ಮಾಡುವುದುಂಟು. ವಿರೋಧ ಪಕ್ಷದಲ್ಲಿದ್ದಾಗ ನಿಷೇಧಾಜ್ಞೆ ಉಲ್ಲಂಘಿಸುವುದು, ಅನುಮತಿ ಇಲ್ಲದೇ ರ‍್ಯಾಲಿ ನಡೆಸಿ ವೀರಾವೇಶ ಪ್ರದರ್ಶಿಸುವುದು, ಮುಸ್ಲಿಂ ಬಾಹುಳ್ಯ ಇರುವ ಪ್ರದೇಶದಲ್ಲಿ ಸಮಾಜೋತ್ಸವ, ವಿಜಯದಶಮಿ ದಿನ ಪಥಸಂಚಲನ ಇಂತಹವನ್ನು ಮಾಡಿರುವುದು ಉಂಟು. ಇಂತಹ ರಾಜಕೀಯ ನಿಲುವುಗಳ ಹಿಂದಿನ ಹಿತಾಸಕ್ತಿ ಚರ್ಚಾರ್ಹ ಕೂಡ.

ಕಾಯುವುದು ಧರ್ಮವಾಗಬೇಕೇ ವಿನಾ ಕೊಲ್ಲುವುದು ಧರ್ಮವಾಗಬಾರದು. ಧರ್ಮದ ವಿಷಯದಲ್ಲಿ ಶ್ರದ್ಧಾಳುಗಳಾಗಬೇಕೇ ಹೊರತು ಕ್ರುದ್ಧಾಳುಗಳಾಗಬಾರದು. ಬಸವಣ್ಣನವರು ‘ದಯವಿಲ್ಲದ ಧರ್ಮವದೇವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ, ದಯವೇ ಧರ್ಮದ ಮೂಲವಯ್ಯಾ’ ಎಂದು ಹೇಳಿದ್ದರು. ಅಂತಹ ಬಸವಣ್ಣನ ನಾಡಿನಲ್ಲಿ, ದಯೆಯುಳ್ಳ ಧರ್ಮವನ್ನು ಪಾಲನೆ ಮಾಡುವುದು ನಮ್ಮ ಮುಂದಿನ ದಾರಿಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT