ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದಿದ್ದಾಯ್ತು: ಜನಹಿತವೇ ವ್ರತವಾಗಲಿ

‘ಛಲ’ದೊಳ್‌ ಯಡಿಯೂರಪ್ಪ ಅವರಿಗೆ ಲೋಕ ಮೆಚ್ಚಿಸುವ ಸವಾಲು
Last Updated 18 ಡಿಸೆಂಬರ್ 2019, 19:36 IST
ಅಕ್ಷರ ಗಾತ್ರ

ಸ್ವನಾಮ ಬಲವೋ ವಾಮಮಾರ್ಗದ ಬಲೆಯೋ ಅಂತೂ ಇಂತೂ ಬಿ.ಎಸ್‌. ಯಡಿಯೂರಪ್ಪನವರು ನಾಲ್ಕನೇ ಬಾರಿ ಮುಖ್ಯಮಂತ್ರಿ ಗದ್ದುಗೆಗೇರಿದ್ದಾರೆ. ಈ ವಿಷಯದಲ್ಲಿ ‘ಛಲ’ದೊಳ್‌ ಯಡಿಯೂರಪ್ಪ ಎಂಬುದು ಕಲಿಯುಗದಲ್ಲಿ ಒಪ್ಪತಕ್ಕ ಮಾತೇ ಆದೀತು. ಅನೇಕ ಬಾರಿ ಗೆಲ್ಲುವುದು ಸಲೀಸು; ಗುದ್ದಾಡಿ ಗೆದ್ದ ಗದ್ದುಗೆ ಉಳಿಸಿಕೊಳ್ಳುವುದು, ಅದನ್ನು ಲೋಕ ಮೆಚ್ಚುವ ರೀತಿಯೊಳಗೆ ಜನಹಿತಕ್ಕಾಗಿ ಬಳಸುವುದು ಸವಾಲು. ಇನ್ನು ಮೂರೂವರೆ ವರ್ಷ ಅಂತಹದೊಂದು ಕೊಂಡ ಹಾಯುವ, ಕೊಂಡದ ಉರಿಯುಂಡು ಜನರ ಪಾಲಿಗೆ ಬೆಳಕನ್ನಷ್ಟೇ ನೀಡುವಕಾಯಕದ ಕೈಂಕರ್ಯವನ್ನು ಅವರು ತೊಡಬೇಕಾಗಿದೆ.

2008ರಲ್ಲಿ ಅಧಿಕಾರ ಹಿಡಿದು ಸ್ವಯಂತಪ್ಪಿನಿಂದ ಪದತ್ಯಾಗ ಮಾಡಿದ ದಿನದಿಂದ ಯಡಿಯೂರಪ್ಪ ಇಂತಹ ಜಾರುವ– ಏರುವ ಸರ್ಕಸ್‌ ಮಾಡುತ್ತಲೇ ಬಂದಿದ್ದಾರೆ. ಅಧಿಕಾರದಿಂದ ಇಳಿಸಿದ ಸಿಟ್ಟು ತೀರಿಸಲು ಬಿಜೆಪಿ ತೊರೆದ ಅವರು, ಕೆಜೆಪಿ ಕಟ್ಟಿ ಕೈಸುಟ್ಟುಕೊಂಡರು. ಅಲ್ಪಕಾಲದಲ್ಲೇ ಬಿಜೆಪಿ ಸೇರಿ ಸಂಸದರೂ ಆದರು. ಕೇಂದ್ರದಲ್ಲಿ ಕೃಷಿ ಮಂತ್ರಿಯಾಗುವೆ ಎಂದು ನಂಬಿಕೊಂಡರು. ಆದರೆ, ಭ್ರಷ್ಟಾಚಾರದ ಆರೋಪದ ಸುಳಿಯಲ್ಲಿ ಸಿಕ್ಕಿದ್ದ ಅವರಿಗೆ ಕೇಂದ್ರದ ‘ವ್ಯವಸಾಯ’ ಕೈ ಹತ್ತಲಿಲ್ಲ. ಅದು ಕೈಗೆಟುಕುವುದಿಲ್ಲ ಎಂದು ಗೊತ್ತಾಗಿದ್ದೇ ತಡ ಮತ್ತೆ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ರಾಜ್ಯ ರಾಜಕಾರಣಕ್ಕೆ ಮರಳಿದರು.‍

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಮುನ್ನಡೆದ ಅವರು ಮತ್ತೆ ಮುಗ್ಗರಿಸಿದರು. ಬಹುಮತ ಸಿಗದೇ ಇದ್ದಾಗಲೂ ಹಟ ಹೊತ್ತು, ‘ಆಪರೇಷನ್ ಕಮಲ’ದ ವಿಶ್ವಾಸದ ಮೇಲೆ ಮುಖ್ಯಮಂತ್ರಿಯಾದರು. ‘ವಿಶ್ವಾಸ’ ಗೆಲ್ಲಲಿಲ್ಲ; ಅದೃಷ್ಟವೂ ಒಲಿಯಲಿಲ್ಲ. ಆದರೆ ಯಡಿಯೂರಪ್ಪ ಮಾತ್ರ ಛಲ ಬಿಡಲಿಲ್ಲ. ಕಾಂಗ್ರೆಸ್‌–ಜೆಡಿಎಸ್‌ನ 17 ಶಾಸಕರ ರಾಜೀನಾಮೆ ಕೊಡಿಸಿ ಅವರನ್ನೆಲ್ಲ ಮುಂಬೈಗೆ ‘ಏರ್‌ಲಿಫ್ಟ್‌’ ಮಾಡಿಸಿ ಮೈತ್ರಿ ಸರ್ಕಾರ ಉರುಳಿಸಿದರು.

ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12ರಲ್ಲಿ ಗೆಲುವು ಸಾಧಿಸಿದ್ದರಿಂದಾಗಿ ಯಡಿಯೂರಪ್ಪ ಅವರಿಗೆ ಇದ್ದ ಅಡೆತಡೆ ಮಾಯವಾಗಿದೆ. ಏರಿದ ವಯಸ್ಸು, ತಿಂದ ಹೊಡೆತಗಳಿಂದಾಗಿ ಯಡಿಯೂರಪ್ಪ ಈಗ ಮಾಗಿದ್ದಾರೆ. ಈ ಮಾಗುವಿಕೆಯನ್ನೇ ಕೈಮರ ಮಾಡಿಕೊಂಡು ಕೆಲಸ ಮಾಡುವ ಜಾಣ್ಮೆಯನ್ನು ತೋರಬೇಕಾಗಿದೆ.

ದಶಕದ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ 110 ಶಾಸಕರ ಬಲ ಬಿಜೆಪಿಗೆ ಇತ್ತು. ಗಣಿ ಅಕ್ರಮದ ದುಡ್ಡಿನಿಂದ ಝಗಮಗಿಸುತ್ತಿದ್ದ ಗಾಲಿ ಜನಾರ್ದನ ರೆಡ್ಡಿ, ‘ಟಿಪ್ಪರ್‌’ನಲ್ಲೇ ಪಕ್ಷೇತರ ಶಾಸಕರನ್ನು ತಂದು ‘ಶೌರ್ಯ’ ಪ್ರದರ್ಶಿಸಿದ್ದರು. ದುಡ್ಡೊಂದಿದ್ದರೆ ಏನನ್ನಾದರೂ ಜೈಸಬಹುದು ಎಂಬ ‘ಸತ್ಯ’ ಯಡಿಯೂರಪ್ಪನವರಿಗೆ ಗೋಚರಿಸಿತ್ತು. ರೆಡ್ಡಿ ಸೋದರರು ದುಡ್ಡಿನ ಮದದಿಂದ ನೀಡುತ್ತಿದ್ದ ಉಪಟಳ, ತಾವು ಹೇಳಿದ್ದೇ ನಡೆಯಬೇಕು ಎಂಬ ಸರ್ವಾಧಿಕಾರ ನೋಡಿದ್ದ ಯಡಿಯೂರಪ್ಪ ಅವರು ಎಡವಟ್ಟು ಮಾಡಿಕೊಂಡರು. ಹೀಗಾಗಿಯೇ, ‘ಜೈಲಿಗೆ ಹೋಗಿಬಂದವರು’ ಎಂಬ ಅಪಕೀರ್ತಿಯನ್ನು ಹೆಗಲ ಮೇಲೆ ಹೊತ್ತು ತಿರುಗಬೇಕಾಯಿತು.

ಈಗ ಅವನ್ನೆಲ್ಲ ಜನ ಮರೆತಿದ್ದಾರೆ. ಯಡಿಯೂರಪ್ಪನವರಿಗೆ ‘ಭೀಮ’ ಬಲ ಕೊಟ್ಟಿದ್ದಾರೆ. ದುಡ್ಡಿನ ಬಲ
ದಿಂದಲೇ ಅಂದು ಎರಡು ಬಾರಿ ಸರ್ಕಾರ ಅಲ್ಲಾಡಿಸಿದ್ದ ರೆಡ್ಡಿ ಗುಂಪು ಈಗ ಮೂಲೆಗೆ ಸೇರಿದೆ. ‘ಅಗೋಚರ’ ಶಕ್ತಿಯ ಬಲದಿಂದ ಆಟವಾಡುತ್ತಿದ್ದ ಬಿಜೆಪಿಯ ಹಿರೀಕರು ಈಗ ಮೆತ್ತಗಾಗಿದ್ದಾರೆ. ಕಮಕ್ ಕಿಮಕ್ ಅಂದವರನ್ನು ಅದುಮುವಷ್ಟು ‘ಶಕ್ತಿಶಾಲಿ’ ರಾಷ್ಟ್ರೀಯ ಅಧ್ಯಕ್ಷರೂ ಮುಖ್ಯಮಂತ್ರಿ ಬೆನ್ನಿಗೆ ಇದ್ದಾರೆ.

ಹಾಗೆಂದ ಮಾತ್ರಕ್ಕೆ ತಾವೇ ಗುಡ್ಡ ಕಡಿದು ಮಾಡಿಕೊಂಡ ದಾರಿ ಯಡಿಯೂರಪ್ಪನವರಿಗೆ ಸುಗಮವಾಗಿಲ್ಲ. ಅಧಿಕಾರದ ಗರ ಬಡಿದು ‘ಸ್ವಾರ್ಥ ಬಂಡಾಯ’ವೆದ್ದಅತೃಪ್ತಿಯನ್ನೇ ಒಡಲೊಳಗೆ ತುಂಬಿಕೊಂಡವರನ್ನು ಕರೆ ತಂದು ಶಾಸಕರನ್ನಾಗಿಸಿ ಸರ್ಕಾರ ಭದ್ರ ಮಾಡಿಕೊಂಡಿದ್ದಾರೆ. ಅವರನ್ನೆಲ್ಲಾ ಸಂಭಾಳಿಸಿ, ತಮ್ಮ ಪಕ್ಷದ ಮೂಲನಿವಾಸಿಗಳ ಸಿಟ್ಟನ್ನು ನಿವಾರಿಸಿಕೊಂಡು ಹುಲಿ ಸವಾರಿ ಮಾಡಬೇಕಾಗಿದೆ.

ಯಡಿಯೂರಪ್ಪನವರಿಗೂ ಆದರ್ಶವಾಗಿರುವ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಇಂದು ಚಹರೆಗಳಂತೆ ಉಳಿದಿವೆ. ವಾಜಪೇಯಿ ಕೊಟ್ಟ ಆಡಳಿತದ ಮಾದರಿ ಮುಂದಿದೆ. ಇಳಿಗಾಲದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪ, ರಾಜ್ಯದ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುವಂತಹತಮ್ಮದೇ ಆದ ಶಾಶ್ವತ ಕಾರ್ಯಕ್ರಮ ರೂಪಿಸಲು ಇದು ಸಕಾಲ. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯು 2011ರಲ್ಲಿ ತನ್ನ ತೀರ್ಪು ನೀಡಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ‘ನೀರಾವರಿ ದಶಕ’ ಎಂದು ಘೋಷಿಸಿ ನೀರಿನ ಸಮರ್ಪಕ ಬಳಕೆ ಮಾಡುವ ಸಂಕಲ್ಪ ಮಾಡಿದ್ದರು. ಅಷ್ಟರಲ್ಲೇ ಅವರು ಅಧಿಕಾರದಿಂದ ಇಳಿದರು. ತೀರ್ಪು ಬಂದು ಎಂಟು ವರ್ಷಗಳು ಕಳೆದಿವೆ. ಈಗ ಅದನ್ನು ಅನುಷ್ಠಾನ ಮಾಡುವ ಹೊಣೆಗಾರಿಕೆಯೂ ಅವರಿಗಿದೆ.

ಆರ್ಥಿಕ ಸ್ಥಿತಿ ಹದಗೆಟ್ಟಿದೆ. ತೆರಿಗೆ ಕೊಡಲಾರದ ಸ್ಥಿತಿಗೆ ಜನ ತಲುಪಿದ್ದಾರೆ. ಕಳೆದ ಮೂರು ವರ್ಷದ ಆರ್ಥಿಕ ಸಮೀಕ್ಷೆಯ ವರದಿ ನೋಡಿದರೆ ಸೇವಾ ಕ್ಷೇತ್ರ ಬಿಟ್ಟರೆ ಕೈಗಾರಿಕೆ, ಕೃಷಿ ಕ್ಷೇತ್ರದ ಬೆಳವಣಿಗೆ ಹಿಂದಡಿಯಿಟ್ಟಿದೆ. ಆಡಳಿತಾರೂಢರಿಗೆ ಇದು ಸಂಕಷ್ಟದ ಕಾಲವೂ ಹೌದು.

ಹಾಗೆ ನೋಡಿದರೆ, ರಾಜ್ಯದ ಜನರು ಬಿಜೆಪಿಗೆ ಜನಾದೇಶ ಕೊಟ್ಟಿರಲಿಲ್ಲ. ಮೊನ್ನೆ ನಡೆದ ಉಪಚುನಾವಣೆಯಲ್ಲೂ ಅಯೋಧ್ಯೆ, ಕಾಶ್ಮೀರದ ವಿಶೇಷ ಸ್ಥಾನಮಾನ ಹಾಗೂ ತ್ರಿವಳಿ ತಲಾಖ್ ರದ್ದು ಮತ್ತಿತರ ವಿಷಯಗಳು ಚುನಾವಣೆಯ ಕೇಂದ್ರಬಿಂದು ಆಗಿರಲಿಲ್ಲ. ಮೋದಿಯವರ ನಾಮಬಲವೂ ಬಳಕೆಯಾಗಲಿಲ್ಲ. ಅಭಿವೃದ್ಧಿ, ಸ್ಥಿರ ಸರ್ಕಾರ ಹಾಗೂ ಯಡಿಯೂರಪ್ಪ ವರ್ಚಸ್ಸಿನ ಮೇಲೆ ಚುನಾವಣೆ ನಡೆಯಿತು. ಆರ್‌ಎಸ್‌ಎಸ್‌ ಕಾರ್ಯಸೂಚಿಗಿಂತ ಯಡಿಯೂರಪ್ಪ ನಾಯಕತ್ವಕ್ಕೆ ನೀಡಿದ ಬೆಂಬಲ ಇದೆಂಬುದು ಮೇಲ್ನೋಟಕ್ಕೆ ಕಾಣಿಸುವ ಸಂಗತಿ. ಹೀಗಾಗಿ, ಇನ್ನುಳಿದ ಅವಧಿಯಲ್ಲಿ ಅಭಿವೃದ್ಧಿಯನ್ನೇ ಪರಮಧ್ಯೇಯವಾಗಿ ಗುರಿಯಿಟ್ಟು ಅವರು ಕೆಲಸ ಮಾಡಬೇಕಾಗಿದೆ.

ಯಡಿಯೂರಪ್ಪನವರೂ ನಂಬುವ ಬಸವಣ್ಣನವರು ಹೇಳಿದಂತೆ ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ...’ ಎಂಬ ‘ನಿಜ ಶರಣ’ನ ಆದರ್ಶ ಪಾಲನೆಯಾಗಬೇಕಾಗಿದೆ. ಕವಿ ಕುವೆಂಪು ಪ್ರತಿಪಾದಿಸಿದ ‘ಸರ್ವಜನಾಂಗದ ಶಾಂತಿಯ ತೋಟ’ವಾಗಿಯೇ ಭಾರತ ಜನನಿಯ ತನುಜಾತೆ ಕರ್ನಾಟಕ ಉಳಿಯಲಿ.

ಒಂದು ಊರಿನಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಬಡಿದಾಡುವ ಒಬ್ಬ ಪ್ರಖರ ಹೋರಾಟಗಾರನಿದ್ದ. ಜನರ ಸಮಸ್ಯೆ ಬಗೆಹರಿಯುತ್ತದೆ ಎಂಬ ಕಾರಣಕ್ಕೆ ಆತ ರಾಜನನ್ನು ಭೇಟಿ ಮಾಡಲು ನಿರ್ಧರಿಸಿದ. ಅರಮನೆಯೊಳಗೆ ಹೋಗಲು ಇದ್ದ ಮೂರು ಮೆಟ್ಟಿಲಿನಲ್ಲಿ ಮೂರು ಭೂತಗಳಿದ್ದವು. ರಾಜನನ್ನು ಭೇಟಿ ಮಾಡಬೇಕಾದರೆ ನಾವು ಹೇಳಿದ್ದನ್ನು ಕೊಡಬೇಕು ಎಂಬ ಷರತ್ತು ಹಾಕಿದ ಭೂತಗಳು ಮೊದಲ ಮೆಟ್ಟಲಿನಲ್ಲಿ ಕಿವಿ, ಎರಡನೆಯದರಲ್ಲಿ ಕಣ್ಣು, ಮೂರನೆಯದರಲ್ಲಿ ಬಾಯಿಯನ್ನು ಕೇಳುತ್ತವೆ. ಹೇಗೋ ರಾಜನನ್ನು ಭೇಟಿ ಮಾಡುತ್ತೇನಲ್ಲ; ಸಮಸ್ಯೆ ಬಗೆಹರಿದರೆ ಸಾಕು ಎಂಬ ಕಾರಣಕ್ಕೆ ಮೂರನ್ನೂ ಕೊಟ್ಟು ಆತ ಮುನ್ನಡೆಯು
ತ್ತಾನೆ. ರಾಜನ ಬಳಿಗೆ ಹೋಗುವಷ್ಟರಲ್ಲಿ ಜನರ ರೋದನ ಕೇಳುವ ಕಿವಿ, ಕಷ್ಟ ಕಾಣುವ ಕಣ್ಣು, ಅದನ್ನು ಪ್ರಶ್ನಿಸುವ ಬಾಯಿಯೇ ಆತನ ಬಳಿ ಇರುವುದಿಲ್ಲ. ಆತ ಏನೂ ಹೇಳಲಾಗದೇ ವಾಪಸ್ ಬರುತ್ತಾನೆ.

ಇದೊಂದು ಜಾನಪದ ಕತೆ. ಹೋರಾಟದ ಭೂಮಿಕೆಯಿಂದಲೇ ಬಂದ ಯಡಿಯೂರಪ್ಪ ಈಗ ಅಧಿಕಾರವೆಂಬ ರಾಜನ ಮುಂದೆ ನಿಂತಿದ್ದಾರೆ. ಆದರೆ, ಯಾವುದೇ ಅಂಗವನ್ನೂ ಅವರು ಕೊಟ್ಟಿಲ್ಲ. ಜನರ ನೋವಿಗೆ, ಕಷ್ಟಕ್ಕೆ ಕಿವಿಯಾಗುವ ಕೆಲಸವನ್ನು ಅವರು ಮಾಡಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT