ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ಬೆಲೆ ಏರಿಕೆ, ಭ್ರಷ್ಟಾಚಾರವೇ ‘ಮುಳುಗುತಾಣ’

ಮೋದಿ ’ಶೋ‘ಗೆ ಸೋಲದ ಜನ, ಕಾಂಗ್ರೆಸ್‌ ಮುಂದಿದೆ ಸವಾಲು, ಕೋಮುದ್ವೇಷದ ಬದಲು ಅರಳಲಿ ಪ್ರೀತಿ
Published 16 ಮೇ 2023, 20:42 IST
Last Updated 16 ಮೇ 2023, 20:42 IST
ಅಕ್ಷರ ಗಾತ್ರ

ಭ್ರಷ್ಟಾಚಾರ ವಿರುದ್ಧದ ಕೋಪ, ಬೆಲೆ ಏರಿಕೆಯ ತಾಪ ತಡೆಯಲಾಗದೇ ಕಂಗೆಟ್ಟಿದ್ದ ನಾಡಿನ ಜನ ಬಿಜೆಪಿಗೆ ಹಿಡಿಶಾಪ ಹಾಕಿದ್ದಾರೆ. ಬಣ್ಣಬಣ್ಣದ ದಿರಿಸು ತೊಟ್ಟ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕರ್ತರಿಂದ ತೂರಿಸಿಕೊಂಡ ಟನ್‌ಗಟ್ಟಲೇ ಹೂವು, ಕೇಸರಿ ಪಾಲಿಗೆ ಮುಳ್ಳಾಗಿ ಕಾಡಿದೆ. ನಿತ್ಯದ ಬದುಕನ್ನು ಸಂಕಷ್ಟಕ್ಕೆ ದೂಡಿರುವ ಎಲ್‌ಪಿಜಿ ಸಿಲಿಂಡರ್ ದರ, ಏರುತ್ತಲೇ ಇರುವ ದಿನಸಿ ವಸ್ತುಗಳ ಬೆಲೆಯನ್ನು ನಿಯಂತ್ರಿಸಲಾಗದ ಕೇಂದ್ರ ಸರ್ಕಾರದ ವಿರುದ್ಧದ ಜನರ ಸಿಟ್ಟು, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಜಂಘಾಬಲವನ್ನೇ ಉಡುಗಿಸಿದೆ.

‘ಚಾಣಕ್ಯ’ ಎಂದು ಬಿಂಬಿಸಿಕೊಂಡ ಗೃಹ ಸಚಿವ ಅಮಿತ್ ಶಾ, ಜನರನ್ನು ಪ್ರಭಾವಿಸಿ ಮತಯಂತ್ರಗಳಲ್ಲಿ ಕಮಲದ ಗುಂಡಿ ಒತ್ತುವಂತೆ ಮಾಡಬಲ್ಲ ‘ಶಕ್ತಿಮಾನ್’ ಎಂದೇ ಬಣ್ಣಿಸಲಾಗುವ ಮೋದಿಯವರ ವರ್ಚಸ್ಸು ಈ ಚುನಾವಣೆಯಲ್ಲಿ ಕೆಲಸವನ್ನೇ ಮಾಡಿಲ್ಲ. ಕರ್ನಾಟಕವನ್ನು ಹೆಬ್ಬಾಗಿಲು ಮಾಡಿಕೊಂಡು ದಕ್ಷಿಣದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸುವ ಕನಸು ಕಟ್ಟಿದ್ದ ಮೋದಿ–ಶಾ ಜೋಡಿಗೆ, ಬಿಜೆಪಿಯನ್ನು ದಕ್ಷಿಣದಿಂದಲೇ ಪೇರಿ ಕೀಳಿಸುವಂತಹ ಫಲಿತಾಂಶವನ್ನು ನಾಡಿನ ಜನ ನೀಡಿದ್ದಾರೆ. ಹಿಂದುತ್ವ, ಕೋಮುದ್ವೇಷ, ಕುಟಿಲ ತಂತ್ರಗಾರಿಕೆಗಳನ್ನು ಉತ್ತರಪ್ರದೇಶ, ಗುಜರಾತಿಗೆ ಇಟ್ಟುಕೊಳ್ಳಿ, ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರುನಾಡಿನಲ್ಲಿ ನಿಮ್ಮ ಆಟ ನಡೆಯದು ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

ತಾವೇ ಚುನಾವಣೆಗೆ ನಿಂತಂತೆ ಬಿಂಬಿಸಿಕೊಂಡ ನರೇಂದ್ರ ಮೋದಿಯವರು, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆಯನ್ನು ಒಮ್ಮೆಯೂ ತಮ್ಮ ಭಾಷಣದಲ್ಲಿ ಉಲ್ಲೇಖಿಸಲಿಲ್ಲ. ಬಹುಶಃ ಅವರು ಹೇಳಿಕೊಳ್ಳುವಂತಹ ಸಾಧನೆ ತೋರಿಲ್ಲವೆಂದು ಮೋದಿಯವರಿಗೂ ಅನಿಸಿದ್ದೀತು. ನಾಲ್ಕು ವರ್ಷ ಆಳಿದ್ದು ಡಬಲ್ ಎಂಜಿನ್ ಸರ್ಕಾರ ಎಂಬುದು ಗೊತ್ತಿದ್ದರೂ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರಕ್ಕೆ ಅವಕಾಶ ಕೊಡಿ ಎಂದು ಕರೆ ನೀಡಿದರೆ ವಿನಾ, ಎಂಜಿನ್ ಏನು ಕೊಟ್ಟಿತೆಂದು ಹೇಳಲು ಅವರಲ್ಲಿ ದಾಖಲೆಗಳೇ ಇರಲಿಲ್ಲ.

‘₹1 ಕೊಟ್ಟರೆ 15 ಪೈಸೆಯಷ್ಟೇ ಜನರಿಗೆ ತಲುಪುತ್ತದೆ’ ಎಂದು ರಾಜೀವ್ ಗಾಂಧಿ ಅವರು 30 ವರ್ಷಗಳ ಹಿಂದೆ ಹೇಳಿದ್ದ ಮಾತನ್ನು ಹತ್ತು ಹಲವು ಬಾರಿ ಪುನರುಚ್ಚರಿಸಿದರು. ಆದರೆ ಇಲ್ಲಿನ ಸರ್ಕಾರದ ಅವಧಿಯ ಭ್ರಷ್ಟಾಚಾರ ‘ಸೀದಾರುಪಯ್ಯಾ’ ಟೀಕೆಯನ್ನೂ ಮೀರಿತ್ತು. ತಮ್ಮದೇ ಪಕ್ಷದ ನೇತೃತ್ವವಿದ್ದ ರಾಜ್ಯ ಸರ್ಕಾರವನ್ನು ನಿಯಂತ್ರಿಸುವ ಅಧಿಕಾರವಿದ್ದರೂ ನಾಲ್ಕು ವರ್ಷ ಸುಮ್ಮನಿದ್ದ ಮೋದಿಯವರಿಗೆ ಈ ವಿಷಯದಲ್ಲಿ ಹೇಳಲು ಪದಗಳೇ ಇರಲಿಲ್ಲ. ಹೀಗಾಗಿಯೇ, ಮೋದಿಯವರು ಅತ್ತ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ, ಇತ್ತ ರಾಜ್ಯದ ಶೇ 43ರಷ್ಟು ಮತದಾರರು ‘ಈ ಬಾರಿ ನಿರ್ಧಾರ, ಬಹುಮತದ ಕಾಂಗ್ರೆಸ್ ಸರ್ಕಾರ’ ಎಂದೇ ನಿಶ್ಚಯಿಸಿಬಿಟ್ಟರು.

ಭಾರಿ ಬಹುಮತವನ್ನು ಜನ ಕಾಂಗ್ರೆಸ್‌ಗೆ ನೀಡಿದ್ದಾರೆ. ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆಯ ಬೆಂಕಿಯಿಂದ ಜನರನ್ನು ಪಾರು ಮಾಡದೇ ಇದ್ದರೆ, ಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಾರೂಢ ಪಕ್ಷಕ್ಕೆ ಅದೇ ಬೆಂಕಿಯ ಬಿಸಿ ಚೆನ್ನಾಗಿ ತಟ್ಟದೇ ಇರದು.

2013ರ ಚುನಾವಣೆಗೆ ಮುನ್ನ, ಈಗಿನ ಮಾದರಿಯಲ್ಲೇ ನಡೆದಿದ್ದ ಆಗಿನ ಸರ್ಕಾರದ ಅವಾಂತರಗಳನ್ನು ಜನ ನೋಡಿದ್ದರು. ಅದಕ್ಕಾಗಿಯೇ, ಆ ಚುನಾವಣೆಯಲ್ಲಿ ಅಧಿಕಾರವನ್ನು ಚಿನ್ನದ ತಟ್ಟೆಯಲ್ಲಿ ಇರಿಸಿ ಸಿದ್ದರಾಮಯ್ಯನವರಿಗೆ ಕೊಟ್ಟರು. ಅಧಿಕಾರಕ್ಕೆ ಬಂದ ಅಲ್ಪಕಾಲದಲ್ಲೇ ಲೋಕಾಯುಕ್ತದ ಅಧಿಕಾರವನ್ನು ವಿಭಜಿಸಿ, ತನಿಖಾ ಸಂಸ್ಥೆಯನ್ನು ದುರ್ಬಲಗೊಳಿಸಿದರು. ಸರ್ಕಾರದ ಮೂಗಿನ ನೇರಕ್ಕೆ ನಡೆಯುವ ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿದರು. ಇದರಿಂದಾಗಿ, ಕಾಂಗ್ರೆಸ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರದ ಮುಖವೇ ಜನರಿಗೆ ಸ್ಪಷ್ಟವಾಗಿ ಗೋಚರಿಸಲಿಲ್ಲ. ಸರ್ಕಾರಿ ನೇಮಕಾತಿಯಲ್ಲಿ ಪಾರದರ್ಶಕತೆ ತರುವ ಬದಲಿಗೆ, ಯಾರ ವಿರುದ್ಧ ಉಗ್ರವಾದ ಟೀಕೆಗಳು ಕೇಳಿಬರುತ್ತಿದ್ದವೊ ಅಂತಹವರಿಗೇ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನ ಕೊಟ್ಟರು. ಪೊಲೀಸ್ ಇಲಾಖೆಯನ್ನು ನಡೆಸುವ ಹೊಣೆಯನ್ನು ಗೃಹ ಸಚಿವರ ಬದಲಿಗೆ ನಿವೃತ್ತ ಅಧಿಕಾರಿಯೊಬ್ಬರು ಪರೋಕ್ಷವಾಗಿ ನಿರ್ವಹಿಸಿ ‘ಸೂಪರ್ ಹೋಮ್‌ ಮಿನಿಸ್ಟರ್‌’ ಎಂನಿಸಿಕೊಂಡರು. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾನಿಧಿಯಂತಹ ಹಲವು ಜನಪರ ಯೋಜನೆಗಳನ್ನು ಕೊಟ್ಟರೂ ಅವ್ಯಾವುವೂ ಚುನಾವಣೆಯಲ್ಲಿ ಕೈಹಿಡಿಯದಿದ್ದುದು ಇತಿಹಾಸ.

ಈ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ಮತ ಹಾಕಿರುವುದು ಬೆಲೆಯೇರಿಕೆಯನ್ನು ತಾಳಲಾಗದ ಸಂಕಟಕ್ಕೆ. ಕಾಂಗ್ರೆಸ್ ನೀಡಿದ ಐದು ‘ಗ್ಯಾರಂಟಿ’ಗಳು ತಮ್ಮ ದಿನನಿತ್ಯದ ತಾಪತ್ರಯಗಳನ್ನು ನಿವಾರಿಸಬಹುದೆಂಬ ಕಾರಣಕ್ಕೆ ಮಹಿಳೆಯರು, ಯುವಜನರು ಕಾಂಗ್ರೆಸ್‌ ಅನ್ನು ಅಪ್ಪಿಕೊಂಡಿದ್ದಾರೆ. ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡುವ ಸವಾಲಿನ ಜತೆಗೆ, ಅವು ಅರ್ಹ ಕುಟುಂಬಗಳಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಬೇಕಾದ ಹೊಣೆಯೂ ಹೊಸ ಸರ್ಕಾರದ ಹೆಗಲೇರಿದೆ. ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ಕಡಿತಗೊಳಿಸಿ ಜನರ ಬದುಕನ್ನು ಹಸನುಗೊಳಿಸಬೇಕಿದೆ. ಬೆಲೆ ಏರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲಾಗದೇ ಇದ್ದರೂ ಆಹಾರ ವಸ್ತುಗಳನ್ನು ಕಳ್ಳ ದಾಸ್ತಾನು ಮಾಡಿ, ಬೆಲೆ ಏರಿಕೆ, ಇಳಿಕೆ ಮಾಡುವ ಮಾರುಕಟ್ಟೆಯ ಕೈವಾಡವನ್ನು ಆಹಾರ ಇಲಾಖೆ ಮೂಲಕ ಹತ್ತಿಕ್ಕಬೇಕು. ಆಗ ಜನರಿಗೆ ಬೇಕಾಗುವ ನಿತ್ಯದ ವಸ್ತುಗಳ ಬೆಲೆ ಕಡಿಮೆಯಾಗಬಹುದು. ಈ ಕೆಲಸವನ್ನು ಆದ್ಯತೆ ಮೇರೆಗೆ ಮಾಡಿದರಷ್ಟೇ ಜನರ ವಿಶ್ವಾಸವನ್ನು ಕಾಂಗ್ರೆಸ್‌ ಪಡೆಯಬಹುದು. 

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಲಕ್ಷ–ಕೋಟಿ ರೂಪಾಯಿ ಲಂಚವಿಲ್ಲದೆ ಕರ್ನಾಟಕದಲ್ಲಿ ಉದ್ಯೋಗ ಸಿಗಲಿದೆ ಎಂಬ ವಾತಾವರಣವನ್ನು ಸೃಷ್ಟಿ ಮಾಡಿದರೆ ಮಾತ್ರ ನಿರುದ್ಯೋಗಿಗಳಲ್ಲಿ ಭರವಸೆ ಮೂಡಬಹುದು. ಇಲ್ಲದಿದ್ದರೆ ‘ಯುವನಿಧಿ’ ಗ್ಯಾರಂಟಿ ಯೋಜನೆ ಸರ್ಕಾರಕ್ಕೆ ಕಂಟಕವಾಗಬಹುದಾದ ಎಲ್ಲ ಅಪಾಯವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ವಿವಿಧ ಸರ್ಕಾರಿ ಕಚೇರಿಗಳಲ್ಲಿನ ಲಂಚಗುಳಿತನದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ತಹಶೀಲ್ದಾರ್‌, ಸಬ್ ರಿಜಿಸ್ಟ್ರಾರ್, ಆರ್‌ಟಿಒ ಹಾಗೂ ಎಂಜಿನಿಯರ್‌ಗಳ ವರ್ಗಾವಣೆಗೆ ಶಿಕ್ಷಣ ಇಲಾಖೆ ಮಾದರಿಯ ಕೌನ್ಸೆಲಿಂಗ್ ಜಾರಿಗೊಳಿಸಿದರೆ ಭ್ರಷ್ಟಾಚಾರಕ್ಕೆ 40 ಪರ್ಸೆಂಟ್ ಆದರೂ ಕಡಿವಾಣ ಬೀಳಬಹುದು. ಜನರಿಗೂ ನೆಮ್ಮದಿಯಾದೀತು.

‘ಸಕಾಲ’ ಯೋಜನೆಯನ್ನು ಸರಿಯಾಗಿ ಜಾರಿ ಮಾಡಿ, ತಮ್ಮ ಕೆಲಸಗಳು ಹೋಬಳಿ ಮಟ್ಟದಲ್ಲೇ ಆಗುತ್ತವೆ ಎಂಬ ನಂಬುಗೆಯನ್ನು ಜನರಲ್ಲಿ ಮೂಡಿಸಬೇಕಾಗಿದೆ. ಸಣ್ಣ ಅರ್ಜಿ ಹಿಡಿದುಕೊಂಡು ಮುಖ್ಯಮಂತ್ರಿ ಬಳಿಗೆ ಅಥವಾ ವಿಧಾನಸೌಧಕ್ಕೆ ಎಡತಾಕುವುದು ನಿಂತಾಗಲಷ್ಟೇ ಸರ್ಕಾರ ಅಸ್ತಿತ್ವದಲ್ಲಿ ಇದೆಯೆಂಬ ವಿಶ್ವಾಸ ಜನರಲ್ಲಿ ಮೂಡಬಲ್ಲದು. 

ಧರ್ಮದ್ವೇಷದ ಆಧಾರದ ಮೇಲೆ ಅಧಿಕಾರವನ್ನು ಶಾಶ್ವತಗೊಳಿಸಿಕೊಳ್ಳಬಹುದೆಂಬ ನಂಬಿಕೆಯ ಮೇಲೆ ಬಿಜೆಪಿ ಹುಟ್ಟಿಸಿದ್ದ ಹುಸಿ ವಿವಾದಗಳನ್ನು ಈಗ ಸರ್ಕಾರವೇ ಬಯಲುಗೊಳಿಸಬೇಕಿದೆ. ‘ಬಾಂಗ್ಲಾದೇಶದ ಬಹಳಷ್ಟು ಮಂದಿ ಬಂದು ನೆಲೆಸಿದ್ದು, ನೆಮ್ಮದಿಯನ್ನೇ ಹಾಳು ಮಾಡುತ್ತಿದ್ದಾರೆ’ ಎಂದು ಬೆಂಗಳೂರು ಹೊರವಲಯದ ಶಾಸಕರೊಬ್ಬರು ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿನ ವಿಧಾನಸಭಾ ಕಲಾಪದಲ್ಲಿ ಅಬ್ಬರಿಸಿದ್ದರು. ಆಗ ಜಯನಗರದ ಶಾಸಕರಾಗಿದ್ದ ಬಿ.ಎನ್. ವಿಜಯಕುಮಾರ್‌, ‘ಇವರ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಬಾಂಗ್ಲಾದೇಶೀಯರಿಗೆ ಇವರೇ ಮುಂದೆ ನಿಂತು ಆಧಾರ್ ಕಾರ್ಡ್ ಕೊಡಿಸಿದ್ದಾರೆ. ಪ್ರಚಾರ ಗಿಟ್ಟಿಸುವ ಸಲುವಾಗಿ ಇಲ್ಲಿ ಹೀಗೆ ಮಾತನಾಡುವ ನೈತಿಕತೆಯಾದರೂ ಎಲ್ಲಿದೆ’ ಎಂದು ತಮ್ಮ ಪಕ್ಷದ ಶಾಸಕನನ್ನೇ ಖಾಸಗಿಯಾಗಿ ಹಂಗಿಸಿದ್ದುಂಟು. ಅಂತಹ ಸುಳ್ಳನ್ನು ಹಬ್ಬಿಸಿದ್ದವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಲಿಲ್ಲ.

ಇನ್ನು ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಿತು. ಒಂದು ಸಮುದಾಯವನ್ನು ಹತ್ತಿಕ್ಕುವ, ಗೋಮಾಂಸ ತಿನ್ನುವ ಹತ್ತಾರು ಸಮುದಾಯಗಳ ಆಹಾರದ ಹಕ್ಕನ್ನೇ ಕಿತ್ತುಕೊಳ್ಳುವ ಹುನ್ನಾರವನ್ನೂ ನಡೆಸಿತು. ಬಿಜೆಪಿ ನೇತೃತ್ವದ ಸರ್ಕಾರ ಇರುವ ಇತರ ರಾಜ್ಯಗಳಲ್ಲಿ ಗೋಮಾಂಸದ ಬಳಕೆ ಹೇಗಿದೆ ಎಂಬುದನ್ನು ಹಾಗೂ ಕೇಂದ್ರ ಸಚಿವರೊಬ್ಬರು ನಡೆಸುತ್ತಿರುವ ಗೋಮಾಂಸದ ಭಾರಿ ವ್ಯವಹಾರವನ್ನು ಸರ್ಕಾರವೇ ಜನರ ಮುಂದಿಡಬೇಕಾಗಿದೆ. ಈ ಮೂಲಕ ಜನರ ಆಹಾರದ ಹಕ್ಕನ್ನು ಕಾಪಾಡುವ ಕೆಲಸವನ್ನೂ ಮಾಡಬೇಕಿದೆ. 

ಭ್ರಷ್ಟಾಚಾರ ನಿಗ್ರಹ ಸರ್ಕಾರದ ಮುಂದಿರುವ ಸವಾಲು. ಏಕೆಂದರೆ, ಹಿಂದಿನ ಅವಧಿಯಲ್ಲಿ ನಡೆದ ರೀಡೂ ಪ್ರಕರಣ, ವರ್ಗಾವಣೆಯಲ್ಲಿನ ಭ್ರಷ್ಟಾಚಾರ ಸರ್ಕಾರವನ್ನು ಕಾಡಿದ್ದವು. ವಿದ್ಯುತ್ ಪ್ರಸರಣ ತಂತಿಗಳ ಮೇಲೆ ಬೀಳಬಹುದಾಗಿದ್ದ ಮರದ ರೆಂಬೆಕೊಂಬೆಗಳನ್ನು ಕತ್ತರಿಸುವ ವಾರ್ಷಿಕ ಗುತ್ತಿಗೆಗೆ ₹ 1,000 ಕೋಟಿಗೂ ಹೆಚ್ಚಿನ ಮೊತ್ತದ ಪ್ರಸ್ತಾವವು ಮೈತ್ರಿ ಸರ್ಕಾರದ ಮುಂದೆ ಇತ್ತು. ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅದಕ್ಕೆ ಒಪ್ಪಿಗೆ ನೀಡಲಿಲ್ಲ.

ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸುವುದು ಈ ಹೊತ್ತಿನಲ್ಲಿ ಕಷ್ಟ. ಆದರೆ, ಹಾಲು ಕೊಡುವ ಹಸುವನ್ನೇ ಕದ್ದು ಮಾರುವವರಿಗಿಂತ, ಆಗಾಗ್ಗೆ ಹಾಲು ಕರೆದು ಕದ್ದು ಮಾರುವವರು ವಾಸಿ ಎಂಬುದು ಸದ್ಯಕ್ಕೆ ಸಮಾಧಾನಪಟ್ಟುಕೊಳ್ಳಬೇಕಾದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT