ಮಂಗಳವಾರ, ಡಿಸೆಂಬರ್ 7, 2021
20 °C
ಜನನಿಷ್ಠೆಗಿಂತ ‘ಸ್ವಾಮಿತ್ವ ಯೋಜನೆ’ಗೆ ಆಡಳಿತಾರೂಢ ಬಿಜೆಪಿ ಒತ್ತು

ಗತಿಬಿಂಬ: ರಾಜಕೀಯ ಸಮೀಕರಣದ ಹೊಸ ಮಜಲು

ವೈ.ಗ.ಜಗದೀಶ್ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ವಿಧಾನಸಭೆ ಚುನಾವಣೆಯ ಕಡೆಗೆ ಹೆಜ್ಜೆ ಇಡುವ ಹೊತ್ತಿನೊಳಗೆ ರಾಜಕೀಯ ಸಮೀಕರಣವನ್ನೇ ಬದಲು ಮಾಡುವ ಪುಟ್ಟ ನಡೆಗಳು ಶುರುವಾಗಿವೆ. ಕಾಲುಚಾಚಿ ಕುಳಿತಿದ್ದವರು, ಮಲಗಿದ್ದವರು ದಿಗ್ಗನೆದ್ದು ಬೀದಿಯಲ್ಲಿ ಅಬ್ಬರಿಸುತ್ತಿದ್ದಾರೆ.

2013ರ ವಿಧಾನಸಭೆ ಚುನಾವಣೆಗೆ ವರ್ಷ ಬಾಕಿ ಇದ್ದಾಗ ಶುರುವಾಗಿದ್ದ ನಡಾವಳಿಗಳು ರಾಜಕೀಯ ಪಕ್ಷಗಳ ಒಳಗುಡಿಯಲ್ಲಿ, ನಾಯಕರ ಪಡಸಾಲೆಗಳಲ್ಲಿ ಮತ್ತೆ ಚಾಲ್ತಿಗೆ ಬಂದಿವೆ. ಈ ಕಿರಿಕಿಚ್ಚು ಹಿರಿದಾಗುವುದೋ ಅಥವಾ ಅಪ್ಪಳಿಸಬಹುದಾದ ಧಾಡಸಿ ಹೊಡೆತಕ್ಕೆ ಅಲ್ಲಿಯೇ ಕಮರಿಹೋಗುವುದೋ ಎಂದು ಹೇಳುವ ಕಾಲವಿನ್ನೂ ಪಕ್ವವಾಗಿಲ್ಲ. 

ಬಿ.ಎಸ್. ಯಡಿಯೂರಪ್ಪ ಅವರನ್ನು ಇಳಿಸಿ, ಮುಖ್ಯಮಂತ್ರಿಯನ್ನಾಗಿ ಬಸವರಾಜ ಬೊಮ್ಮಾಯಿ ಅವರನ್ನು ಮಾಡಲಾಯಿತು. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬೊಮ್ಮಾಯಿ ಆಶೀರ್ವಾದ ಪಡೆದರು. ಯಾರೂ ಬೆಂಬಲ ಕೇಳದಿದ್ದರೂ, ‘ಸರ್ಕಾರಕ್ಕೆ ಸಂಕಷ್ಟ ಎದುರಾದರೆ ತಮ್ಮ ಪಕ್ಷ ಬೆಂಬಲಕ್ಕೆ ನಿಲ್ಲಲಿದೆ’ ಎಂದು ಗೌಡರು ಘೋಷಿಸಿದರು. ಜೆಡಿಎಸ್‌ನ ಉಪವರಿಷ್ಠ ಎಚ್.ಡಿ. ಕುಮಾರಸ್ವಾಮಿ ಕೂಡ ಅದೇ ಧಾಟಿಯಲ್ಲಿ ಮಾತನಾಡಿದರು. ಇತ್ತೀಚೆಗೆ ಜೆಡಿಎಸ್‌ ನಾಯಕರು ಆಡಳಿತ ಪಕ್ಷವನ್ನು ಟೀಕಿಸುವುದಕ್ಕಿಂತ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರನ್ನು ಹಂಗಿಸುವುದರಲ್ಲೇ ಹೆಚ್ಚಿನ ಸಮಯ ವ್ಯಯಿಸುತ್ತಿದ್ದಾರೆ. ಪ್ರತಿಪಕ್ಷಕ್ಕೆ ವಿರೋಧಪಕ್ಷ ಎಂಬ ನಿಲುವಿಗೆ ಜೆಡಿಎಸ್ ಆತುಕೊಂಡಂತೆ ಕಾಣಿಸುತ್ತಿದೆ.

‘ಬೊಮ್ಮಾಯಿ ಸರ್ಕಾರಕ್ಕೆ ಸಂಕಷ್ಟ ಎದುರಾದರೆ’ ಎಂಬ ಗೌಡರ ಮಾತನ್ನೇ ತೆಗೆದುಕೊಂಡರೆ, ಖುದ್ದು ಯಡಿಯೂರಪ್ಪನವರೇ ‘ರಾಜೀನಾಮೆ’ ಘೋಷಿಸಿ, ಬೊಮ್ಮಾಯಿ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿರುವಾಗ ಸಂಕಷ್ಟ ಎದುರಾಗುವುದಾದರೂ ಯಾರಿಂದ? ಯಡಿಯೂರಪ್ಪ ಅವರನ್ನು ಇಳಿಸುವ ಹೊತ್ತಿಗೆ, ಅವರು ರಾಜೀನಾಮೆ ಕೊಡುವುದಿಲ್ಲ; ಬಲವಂತದಿಂದ ಕೊಡಿಸಿದರೆ ಪಕ್ಷವನ್ನೇ ಒಡೆದು ಹೊಸ ಪಕ್ಷ ಕಟ್ಟಲಿದ್ದಾರೆ; ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ ಎಂಬ ಸುದ್ದಿಯೂ ಹರಡಿತ್ತು. ಗೌಡರ ‘ಸಂಕಷ್ಟಹರ’ ಪಾತ್ರಧಾರಿಯ ಹಿಂದಿನ ಲೆಕ್ಕಾಚಾರ ಹೀಗೂ ಇದ್ದೀತು!

ಅಂದರೆ, ಗೌಡರು ಮತ್ತು ಕುಮಾರಸ್ವಾಮಿ ಒಂದಿಷ್ಟರ ಮಟ್ಟಿಗೆ ಬಿಜೆಪಿಯ ಕಡೆಗೆ ಒಲವು ಹೊಂದಿರುವುದು ಈ ಎಲ್ಲ ನಡೆಗಳಿಂದ ಸಿಗುವ ಹೊಳಹು. ಮುಂದಿನ ಚುನಾವಣೆ ಹೊತ್ತಿಗೆ ಒಂದಿಷ್ಟು ಸಾಮು ಮಾಡಿದರೂ ಸಿಗಬಹುದಾದ, ಸಿಗಬೇಕಾದ ಯಶಸ್ಸು ಸಿಗದೇ ಇದ್ದರೆ ಜೆಡಿಎಸ್‌, ಬಿಜೆಪಿ ಜತೆಗೆ ಈಗಿರುವ ಸಡಿಲ ಸಖ್ಯವನ್ನು ಮತ್ತಷ್ಟು ಬಿಗಿಗೊಳಿಸಬಹುದು. 35–40 ಸ್ಥಾನಗಳಲ್ಲಿ ಗೆದ್ದರೂ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಬಿಜೆಪಿ ಜತೆಗೆ ಕುಮಾರಸ್ವಾಮಿ ಕೂಡಿಕೆ ಮಾಡಿಕೊಳ್ಳಬಹುದು. ಅವರು ಇತ್ತೀಚಿನ ದಿನಗಳಲ್ಲಿ ಏರುಕಂಠದಿಂದ ಆರ್‌ಎಸ್‌ಎಸ್‌ನ ಬಣ್ಣವನ್ನು ಬಯಲು ಮಾಡುತ್ತಿದ್ದಾರೆ. ಇದು ತತ್‌ಕ್ಷಣದ ಎರಡು ಉಪಚುನಾವಣೆಗಳು ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಒಂದಿಷ್ಟು ವೋಟು ಗಿಟ್ಟಿಸುವ ಲೆಕ್ಕಾಚಾರದಂತಿದೆ. 

ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ, ಯಡಿಯೂರಪ್ಪ ಆಪ್ತ ಆಯನೂರು ಉಮೇಶ್, ಶಶಿಧರ ಮರಡಿ, ಬಿ.ವೈ. ವಿಜಯೇಂದ್ರ ಆಪ್ತ ಅರವಿಂದ್ ಮತ್ತು ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿ ನಡೆದಿದೆ. ತಮ್ಮದೇ ಪಕ್ಷದ ಪ್ರಭಾವಿ ನಾಯಕನನ್ನು ಕೇಂದ್ರೀಕರಿಸಿ ಐ.ಟಿ ಬಲೆ ಹೆಣೆದ ಹುನ್ನಾರವಾದರೂ ಏನು? ಸರ್ಕಾರ ಅಥವಾ ಬಿಜೆಪಿಯಲ್ಲಿ ಯಡಿಯೂರಪ್ಪನವರಷ್ಟೇ ಹಣ ಮಾಡಿದವರು, ಸರ್ಕಾರಿ ಯಂತ್ರಾಂಗ, ಗುತ್ತಿಗೆ, ಖರೀದಿ ಬಳಸಿಕೊಂಡು ಕಮಿಷನ್ ಪಡೆಯುತ್ತಿರುವ ಸಚಿವರು ಇಲ್ಲವೇ? ದೇಶದಲ್ಲೇ ಅತ್ಯುನ್ನತ ಗುಪ್ತಚರ ಪಡೆ ಇಟ್ಟುಕೊಂಡ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಕುರಿತು ಮಾಹಿತಿಯಿಲ್ಲವೇ ಎಂಬ ಪ್ರಶ್ನೆಗಳು ಬಂದು ನಿಲ್ಲುತ್ತವೆ.

ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುವುದು ಇದರ ಹಿಂದಿನ ಲೆಕ್ಕಾಚಾರ ಎಂಬ ವಿಶ್ಲೇಷಣೆಯೂ ಇದೆ. ಅದರಿಂದ ಬಿಜೆಪಿಗೇನು ಲಾಭ? ಅವರು ಓಡಾಡಿದರೆ ಎರಡು ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪಡೆಯುವ ಮತ ಮತ್ತಷ್ಟು ಹೆಚ್ಚಾಗಬಹುದು. ಇದು ಗೊತ್ತಿದ್ದೂ ಐ.ಟಿಯನ್ನು ಛೂ ಬಿಟ್ಟಿದ್ದು ಏಕೆ?

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬಿಜೆಪಿ ಬಹುಮತ ಪಡೆದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಯನ್ನು ಗಮನಿಸಿದರೆ ಒಂದು ಸಿದ್ಧಸೂತ್ರ ಸಿಗುತ್ತದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಗೋವಾದ ಪ್ರಮೋದ ಸಾವಂತ್, ಮಹಾರಾಷ್ಟ್ರದ ದೇವೇಂದ್ರ ಫಡಣವೀಸ್‌, ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಇವರೆಲ್ಲ ಚಿಕ್ಕಪ್ರಾಯದಲ್ಲೇ ಮುಖ್ಯಮಂತ್ರಿ ಹುದ್ದೆಗೇರಿದವರು. ಯೋಗಿ, ಒಂದಿಷ್ಟು ಜನಪ್ರಿಯರಾದರೂ ತಮ್ಮದೇ ಬಲದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಷ್ಟು, ಮುಖ್ಯಮಂತ್ರಿಯಾದ ಹೊತ್ತಿನಲ್ಲಿ ಅವರು ಪ್ರಭಾವಿಯಾಗಿರಲಿಲ್ಲ. ಮೋದಿ–ಶಾ ಪೆಟ್ಟಿಗೆ ಬಗ್ಗದ ಮಧ್ಯ ಪ್ರದೇಶದ ಶಿವರಾಜ ಸಿಂಗ್ ಚೌಹಾಣ್‌ ಅವರನ್ನು ಬದಲು ಮಾಡುವುದು ಅಷ್ಟು ಸುಲಭವಲ್ಲ. ಹರಿಯಾಣದ ಮನೋಹರ್‌ಲಾಲ್ ಖಟ್ಟರ್‌, ಗುಜರಾತ್‌ನ ಭೂಪೇಂದ್ರ ಭಾಯಿ ಪಟೇಲ್‌ ಮುಖ್ಯಮಂತ್ರಿಯಾದಾಗ 60ರ ಆಸುಪಾಸಿನವರೇ. ಕರ್ನಾಟಕದಲ್ಲಿ  ಯಡಿಯೂರಪ್ಪನವರನ್ನು ಇಳಿಸಲೇಬೇಕೆಂದು ಹಟಕ್ಕೆ ಬಿದ್ದಾಗ, ಲಿಂಗಾಯತರ ಮನಸ್ಸನ್ನು ಗಾಸಿ ಮಾಡದೇ ಇರುವ ಕಾರಣಕ್ಕೆ ಲಿಂಗಾಯತರು, ಉತ್ತರ ಕರ್ನಾಟಕದ ಭಾಗದವರು ಆದ ಬೊಮ್ಮಾಯಿ ಸಹಜ ಆಯ್ಕೆಯಾಗಿದ್ದರು. ಸಾಮರಸ್ಯದ ನೆಲೆವೀಡಾದ ಕರ್ನಾಟಕದಲ್ಲಿ ಏರು ಧ್ವನಿಯ ಕೂಗುಮಾರಿಗಳನ್ನು ಜನ ಸಹಿಸಲಾರರು. ಕೋಮುವಾದವನ್ನು ಮೃದುಧ್ವನಿಯಲ್ಲಿ ಪ್ರತಿಪಾದಿಸುವ ಬೊಮ್ಮಾಯಿಯಂತಹ ನಾಯಕನೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರಲೂ ಸಾಕು.

ಐ.ಟಿ ದಾಳಿಯ ಹುನ್ನಾರವನ್ನು ಈ ರಾಜಕೀಯ ಆಯಾಮದಲ್ಲೇ ನೋಡಬೇಕಾಗಿದೆ. ಯಡಿಯೂರಪ್ಪ ಆಪ್ತರನ್ನು ಐ.ಟಿ ದಾಳಿಗೆ ಗುರಿ ಮಾಡುವ ಮೂಲಕ, ಸವಾಲು ಒಡ್ಡುವವರು, ಬಂಡಾಯ ಏಳುವವರು ಪಕ್ಷಕ್ಕೆ ಬೇಕಿಲ್ಲ, ಅಪರಿಚಿತ ಅಥವಾ ಜನಸಮುದಾಯವನ್ನು ಪ್ರಭಾವಿಸುವ ಛಾತಿ ಇಲ್ಲದ ಸಾಮಾನ್ಯ ಮುಖವನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸಿ ಸರ್ಕಾರ ನಡೆಸುತ್ತೇವೆ, ಪಕ್ಷ ಕಟ್ಟುತ್ತೇವೆ ಎಂಬ ಸಂದೇಶವನ್ನು ಸಾರುವುದು ಇದರ ಆಶಯ. ಜನಪ್ರಿಯ ನಾಯಕನಿಗಿಂತ ಸಂಘ ನಿಷ್ಠ ಅಥವಾ ಮೋದಿ–ಅಮಿತ್ ಶಾ ಹೇಳಿದಂತೆ ನಡೆದುಕೊಳ್ಳಬಲ್ಲ, ‘ಸ್ವಾಮಿತ್ವ’ವನ್ನೇ ನಂಬಿಕೊಂಡ ಸಾಮಾನ್ಯ ನಾಯಕ ಸಾಕು ಎಂಬುದು ಪಕ್ಷದ ಧೋರಣೆ ಇದ್ದಂತೆ ಕಾಣಿಸುತ್ತಿದೆ. ಇವೆಲ್ಲದರಾಚೆಗೂ ಇರುವ ಸಂಗತಿಯೆಂದರೆ, ಒಂದು ವೇಳೆ ಯಡಿಯೂರಪ್ಪ 2012ರಲ್ಲಿ ಕೆಜೆಪಿ ಕಟ್ಟಿದಂತೆ ಈಗ  ಉತ್ಸವಮೂರ್ತಿಯಾಗಿದ್ದುಕೊಂಡು ವಿಜಯೇಂದ್ರ ನೇತೃತ್ವದಲ್ಲಿ ‍ಪಕ್ಷ ಕಟ್ಟುವ ಲೆಕ್ಕಾಚಾರ ಅವರ ಆಪ್ತ ವಲಯದಲ್ಲಿ ನಡೆಯುತ್ತಿತ್ತು. ಹೊಸ ಪಕ್ಷ ಕಟ್ಟುವ ಘೋಷಣೆ ಮಾಡಿದ ಮೇಲೆ, ಐ.ಟಿ ದಾಳಿ ನಡೆಸಿದರೆ ದ್ವೇಷದ ರಾಜಕಾರಣ ಎಂಬ ದೂಷಣೆಗೆ ಗುರಿಯಾಗ
ಬೇಕಾಗುತ್ತದೆ. ಈಗಲೇ ಮಾಡಿದರೆ, ಪಕ್ಷದೊಳಗಿನ ಭ್ರಷ್ಟರನ್ನೂ ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿ
ದಂತಾಗುತ್ತದೆ ಎಂಬ ತರ್ಕ ಇದ್ದಂತಿದೆ. 

‘ಸಿದ್ದರಾಮಯ್ಯನವರನ್ನು ಯಡಿಯೂರಪ್ಪ ಭೇಟಿ ಮಾಡಿದ್ದಕ್ಕೆ ಐ.ಟಿ ದಾಳಿ ನಡೆಯಿತು’ ಎಂಬ ಕುಮಾರಸ್ವಾಮಿ ಹೇಳಿಕೆಯನ್ನು ಈ ಇಬ್ಬರೂ ನಾಯಕರು ಅಲ್ಲಗಳೆದಿದ್ದಾರೆ. ಯಡಿಯೂರಪ್ಪ ಯಾರನ್ನು ಭೇಟಿ ಮಾಡಿದ್ದರು ಎನ್ನುವುದಕ್ಕಿಂತ ವಿಜಯೇಂದ್ರ ಅವರು ಯಾರನ್ನು ಯಾವಾಗ ಏಕಾಗಿ ಭೇಟಿ ಮಾಡಿದ್ದರು ಎಂಬುದು ಮತ್ತಷ್ಟು ನಿಗೂಢದ ಸಂಗತಿ. ಹಾಗೊಂದು ವೇಳೆ ಯಡಿಯೂರಪ್ಪ ಪಕ್ಷ ಕಟ್ಟುವುದು ನಿಜವಾದರೆ, ಅವರು ಹಿಂದಿನಂತೆ ತಮ್ಮದೇ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿದರೂ ಆ ಹೊತ್ತಿನ ರಾಜಕೀಯ ಲೆಕ್ಕದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಅಂದಾಜು ಇದ್ದಂತಿದೆ. ಏಕಾಂಗಿಯಾಗಿ ಸ್ಪರ್ಧಿಸಿದರೆ ಹಿಂದೆ 6 ಸ್ಥಾನ ಗೆದ್ದಂತೆ ಈಗ 3 ಅಥವಾ 10 ಗೆಲ್ಲಬಹುದು. ಅದರಿಂದ ಬಿಜೆಪಿಗೆ ನಷ್ಟವಾಗಬಹುದೇ ವಿನಾ ತಮ್ಮ ಪುತ್ರ ವಿಜಯೇಂದ್ರಗೆ ಏನೂ ಲಾಭವಾಗದು ಎಂಬುದು ಯಡಿಯೂರಪ್ಪಗೆ ಗೊತ್ತಿಲ್ಲದ ಸತ್ಯವೇನಲ್ಲ.

ಹೀಗೆ, ಚುನಾವಣೆಯನ್ನು ಎದುರಿಟ್ಟುಕೊಂಡು ರಾಜಕೀಯ ಸಮೀಕರಣವೊಂದು ಮುನ್ನೆಲೆಗೆ ಬಂದಿದೆ. ಅದು ಎಲ್ಲಿಗೆ ತಲುಪುತ್ತದೆ ಎಂಬುದಕ್ಕೆ ಇನ್ನಾರು ತಿಂಗಳಾದರೂ ಕಾಯಬೇಕಷ್ಟೇ.

‘ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ/ ಕೋಟಿ ನಟರಾಂತಿಹರು ಚಿತ್ರಪಾತ್ರಗಳ/ ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ/ ನೋಟಕರು ಮಾಟಕರೆ ಮಂಕುತಿಮ್ಮ’ ಎಂಬ ಡಿವಿಜಿ ವಾಣಿಯಷ್ಟೇ ಸದ್ಯ ನಮ್ಮೆದುರು ಇರುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು