ಗುರುವಾರ , ಸೆಪ್ಟೆಂಬರ್ 24, 2020
21 °C

ಒಳಿತು ಒಳ ಹೊರಗಿರಲಿ

ಕೆ. ರತ್ನಪ್ರಭಾ Updated:

ಅಕ್ಷರ ಗಾತ್ರ : | |

ಕಳೆದೆರಡು ವಾರಗಳ ಲೇಖನಗಳಿಗೆ ಅಸಂಖ್ಯಾತ ಮೆಚ್ಚುಗೆಯ ಮಾತುಗಳು ಹರಿದುಬಂದವು. ‘ನಿಮಗೆ ಹೇಗೆ ಸಾಧ್ಯವಾಯಿತು? ನೀವು ಹೇಗೆ ಇದನ್ನು ಸಿದ್ಧಿಸಿದಿರಿ’ ಎಂಬ ಪ್ರಶ್ನೆಗಳನ್ನೇ ಬಹುತೇಕ ಯುವಜನರು ಕೇಳಿದ್ದರು. ಅಂತಃಕರುಣಿಯಾಗಿರುವುದು ಪ್ರತಿಯೊಬ್ಬರ ಸಹಜಗುಣ. ಕೆಲವರಿಗೆ ಕೇವಲ ನಮ್ಮವರಿಗಾಗಿ ಮಾತ್ರ ಮಿಡಿಯುವ ಮಟ್ಟದ್ದಿರುತ್ತದೆ. ಇನ್ನೂ ಕೆಲವರಿಗೆ ತಮ್ಮ ಸುತ್ತಲಿನವರಿಗಾಗಿ... ಕೆಲವೇ ಕೆಲವು ಜನರಿಗೆ ಮಾತ್ರ ಸರ್ವರಿಗೂ ಒಳಿತು ಮಾಡಬೇಕು ಎಂಬ ಗುಣವಿರುತ್ತದೆ.

ಆಂತರ್ಯದ ಈ ಗುಣ ‘ನಮ್ಮವರಿಗಾಗಿ’ ಎನ್ನುವವರೇ ಬಹುಸಂಖ್ಯೆಯಲ್ಲಿದ್ದಾರೆ. ನಮ್ಮ ‘ಸುತ್ತಮುತ್ತಲಿನವರಿಗಾಗಿ’ ಎನ್ನುವುದು ಬಹುತೇಕವಾಗಿ ನನ್ನಪ್ಪನಿಂದ ನನಗೆ ಬಂದ ಬಳುವಳಿ. ‘ಸರ್ವರಿಗಾಗಿ’ ಎಂಬುದು ಅಮ್ಮನಿಂದ ಸಿಕ್ಕ ಸಂಸ್ಕಾರ. ಇದನ್ನು ಇನ್ನಷ್ಟು ವಿಸ್ತೃತವಾಗಿ ಹಂಚಿಕೊಳ್ಳುವ ಅಗತ್ಯವಿದೆ ಎಂದೆನಿಸುತ್ತದೆ. ಅದಕ್ಕೆ ನನ್ನ ಕೌಟುಂಬಿಕ ಹಿನ್ನೆಲೆಯನ್ನಿಲ್ಲಿ ಹಂಚಿಕೊಳ್ಳುತ್ತಿರುವೆ.

ಎಲ್ಲರಿಗೂ ತೀರ ವಿಶೇಷ ಎನಿಸಿದ ಈ ಎರಡೂ ಗುಣಗಳು ಮಾನವ ಸಹಜ ಪ್ರಕ್ರಿಯೆಗಳೇ ಆಗಿದ್ದವು. ಒಂದು, ಇನ್ನೊಬ್ಬ ವ್ಯಕ್ತಿ ಹೇಳುವುದನ್ನು ಸಹಾನುಭೂತಿಯಿಂದ ಕೇಳುವುದು. ಇನ್ನೊಂದು, ಎಲ್ಲರ ಒಳಿತಿಗಾಗಿ ಪ್ರಯತ್ನಿಸುವುದು. ಇವೆರಡೂ ನನ್ನಲ್ಲಿ ಸಹಜವಾಗಿಯೇ ಅಂತರ್ಗತವಾಗಿರುವ ಗುಣಗಳು ಎಂದು ನನ್ನಮ್ಮ ಡಾ. ವಿಮಲಾ ಹೇಳುತ್ತಿದ್ದರು. ಅಮ್ಮ ವೈದ್ಯೆಯಾಗಿದ್ದರು.

ಅಪ್ಪ ಚಂದ್ರಯ್ಯ ಐಎಎಸ್‌ ಅಧಿಕಾರಿಯಾಗಿದ್ದರು. ಅಪ್ಪನ ಸಹಾಯ ಯಾಚಿಸಿ, ಗ್ರಾಮೀಣ ಜನರು, ಅಧಿಕಾರಿಗಳು ಮನೆಗೆ ಬರುತ್ತಿದ್ದರು. ಮನೆಗೆ ಬಂದವರನ್ನು ನಾನು ಗಮನಿಸುತ್ತಿದ್ದೆ. ಅವರೆಲ್ಲ ಬಂದಾಗ ದುಗುಡದಿಂದ, ಆತಂಕದಿಂದಲೇ ಬರುತ್ತಿದ್ದರು. ಹೋಗುವಾಗ ನಿರಾಳವಾಗಿರುತ್ತಿದ್ದರು. ಅಪ್ಪನ ಕಾರ್ಯವೈಖರಿಯನ್ನು ಗಮನಿಸುತ್ತಿದ್ದ ನನಗೆ, ‘ಪರಿಹಾರಗಳಿಲ್ಲದ ಸಮಸ್ಯೆಗಳೇ ಇಲ್ಲ’ ಎಂದೆನಿಸಿದ್ದು ಸುಳ್ಳಲ್ಲ. ಜನರಿಗೆ ಸಹಾಯ ಮಾಡಲೆಂದೇ ಅಧಿಕಾರವಿದೆ ಎಂದೆನಿಸಿದ್ದು ಅಪ್ಪಯ್ಯನಿಂದ.

ನಾವು ಮೂರು ಜನ ಮಕ್ಕಳು. ನಾನು ವೈದ್ಯೆಳಾಗಬೇಕು ಎಂಬ ಮಹದಾಸೆ ಅಮ್ಮನಿಗೆ ಇತ್ತು. ಆದರೆ ಪ್ರಾಣಿಶಾಸ್ತ್ರದಲ್ಲಿ ಅವನ್ನು ಛೇದಿಸಿ ನೋಡುವುದು, ಅಭ್ಯಸಿಸುವುದು ನನ್ನಿಂದಾಗದ ಕೆಲಸವಾಗಿತ್ತು. ಹಾಗಾಗಿ ನಾನು ವಿಜ್ಞಾನ ಓದಲಿಲ್ಲ. ಅದರ ಬದಲಿಗೆ ಅಪ್ಪನಂತೆ ಭಾರತೀಯ ಆಡಳಿತ ಸೇವೆಗೆ ಸೇರಬೇಕೆಂದು ನಿರ್ಧರಿಸಿದೆ. ನನ್ನಣ್ಣ ಪ್ರದೀಪ್‌ ಚಂದ್ರ ಅವರೂ ಭಾರತೀಯ ಆಡಳಿತ ಸೇವೆ ಸೇರಿದ್ದರು. ತೆಲಂಗಾಣ ರಾಜ್ಯದ ಮುಖ್ಯಕಾರ್ಯದರ್ಶಿಯಾಗಿ ನಿವೃತ್ತರಾದರು. ಇನ್ನೊಬ್ಬ ಅಣ್ಣ ಡಾ. ಪ್ರಫುಲ್‌ಚಂದ್ರ ವೈದ್ಯರಾಗಿ ಅಮ್ಮನ ಆಸೆಯನ್ನು ನೆರವೇರಿಸಿದರು.

ಇಬ್ಬರು ಸಹೋದರರೊಂದಿಗೆ ಬೆಳೆದ ನನಗೆ, ಮುದ್ದಿನ ಮಗಳು ಎಂಬ ಪ್ರೀತಿ ಮಾತ್ರ ಇತ್ತು. ಯಾವುದಕ್ಕೂ ರಿಯಾಯಿತಿ ಇರಲಿಲ್ಲ. ಅಪ್ಪ, ಅಮ್ಮ ಇಬ್ಬರೂ ವೃತ್ತಿನಿರತರಾಗಿದ್ದರೂ ಮಕ್ಕಳಿಗೆ ಸಾಕಷ್ಟು ಸಮಯ ನೀಡುತ್ತಿದ್ದರು.

ಅಮ್ಮ ಸ್ವಾವಲಂಬಿ. ಮನೆಯ ಎಲ್ಲ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು. ನಮ್ಮ ಮನೆಯ ದಿನಚರಿ ಬೆಳಗಿನ 5.55ಕ್ಕೆ ರೇಡಿಯೊದೊಂದಿಗೆ ಆರಂಭವಾಗುತ್ತಿತ್ತು. ಇದು ಬಹುತೇಕ ಮನೆಗಳ ದಿನಚರಿಯಾಗಿತ್ತು ಆ ಕಾಲದಲ್ಲಿ. ‘ವಂದೇ ಮಾತರಂ’ನೊಂದಿಗೆ ದಿನದ ಕೆಲಸ ಆರಂಭವಾಗುತ್ತಿತ್ತು. ಆನಂತರ ಸಮಾಚಾರ, ಭಕ್ತಿ ಸಂಗೀತದ ಕಾರ್ಯಕ್ರಮ ವಂದನಾ... ಇವುಗಳ ಲೆಕ್ಕದಲ್ಲಿಯೇ ನಮ್ಮ ದಿನವೂ ಓಡುತ್ತಿತ್ತು. ರೇಡಿಯೊ ಕೇಳುತ್ತಲೇ ನಮ್ಮ ಟೈಮ್‌ಟೇಬಲ್‌ ಫಿಕ್ಸ್‌ ಆಗಿರುತ್ತಿತ್ತು. ಈ ಕಾರ್ಯಕ್ರಮ ಮುಗಿಯುವುದರಲ್ಲಿ ಸ್ನಾನವಾಗಬೇಕು, ರೆಡಿ ಆಗಬೇಕು... ಹೀಗೆ ಒಂದು ಅಂದಾಜು ನಮಗಿತ್ತು.

ಅಪ್ಪ ಅಮ್ಮ ಅಧಿಕಾರಿಗಳಾಗಿದ್ದರೂ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕಿತ್ತು. ಆಳು–ಕಾಳುಗಳ ಸಹಾಯ ಪಡೆಯುವಂತಿರಲಿಲ್ಲ. ನಮ್ಮ ಬಟ್ಟೆ ಇಸ್ತ್ರಿ ಮಾಡಿಕೊಳ್ಳುತ್ತಿದ್ದೆವು. ಶೂ ಪಾಲಿಷ್‌ ಮಾಡಿಕೊಳ್ಳುತ್ತಿದ್ದೆವು. ಅಂಗಿಯ ಗುಂಡಿಗಳೇನಾದರೂ ಬಿದ್ದು ಹೋಗಿದ್ದಲ್ಲಿ ನಾವೇ ಹೊಲಿದುಕೊಳ್ಳಬೇಕಿತ್ತು. ಅಣ್ಣಂದಿರೂ ಈ ಕೆಲಸಗಳನ್ನು ಮಾಡುತ್ತಿದ್ದರು. ಉದ್ಯೋಗಸ್ಥ ಮಹಿಳೆಯರ ಮಕ್ಕಳಲ್ಲಿ ಲಿಂಗ ಸಮಾನತೆ, ಸಂವೇದನೆ ಹೀಗೆ ಬೆಳೆಯುತ್ತಲೇ ಅಂತರ್ಗತವಾಗುತ್ತವೆ. ಅಣ್ಣಂದಿರು ಮತ್ತು ನನ್ನಲ್ಲಿ ಯಾವುದೇ ಭೇದಭಾವ ಇಲ್ಲದಂತೆ ಕೆಲಸಗಳನ್ನು ಹಂಚಿಕೊಳ್ಳುತ್ತಿದ್ದೆವು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಲೇ ಇತ್ತು. ಹೆಣ್ಣುಮಗಳು ಎಂಬ ಕಾರಣಕ್ಕೆ ರಿಯಾಯಿತಿ ಇಲ್ಲದೇ ದುಡಿದಿದ್ದು ಇದೇ ಕಾರಣದಿಂದ.

ಹೈದರಾಬಾದ್‌ನಲ್ಲಿ ಸಾಕಷ್ಟು ಸ್ಥಿತಿವಂತರ ಕುಟುಂಬ ನಮ್ಮದು. ಅಪ್ಪ ಅಮ್ಮನ ಬಳಿ ಕಾರುಗಳಿದ್ದವು. ಆದರೆ ನಾವು ಮಾತ್ರ ಸಾಮಾನ್ಯರಂತೆಯೇ ನಮ್ಮ ಶಿಕ್ಷಣ ಮುಗಿಸಿದೆವು. ಮೂರು ತಿಂಗಳಿಗೆ ಒಮ್ಮೆ ಸರದಿ ಸಾಲಿನಲ್ಲಿ ನಿಂತು ಬಸ್‌ಪಾಸ್‌ ಖರೀದಿಸಿ, ಬಸ್‌ಗಳಲ್ಲಿಯೇ ಓಡಾಡುತ್ತಿದ್ದೆವು. ಅಧಿಕಾರಿಯ ಮಕ್ಕಳೆಂಬ ದರ್ಪ, ವೈದ್ಯೆಯ ಮಕ್ಕಳು ಎಂಬ ಗರ್ವ ನಮ್ಮಲ್ಲಿ ಮೂಡದಂತೆ ಬೆಳೆಸಿದ್ದು ಕಲೆಯೇ ಆಗಿದೆ.

ಪಾಠ ಮತ್ತು ಆಟಗಳಲ್ಲಿ ಭಾಗವಹಿಸುವುದು ನಮಗೆಲ್ಲರಿಗೂ ಇಷ್ಟದ ಚಟುವಟಿಕೆಗಳಾಗಿದ್ದವು. ನಾವೆಲ್ಲ ಪಾಠಗಳಿಗೆ ನೀಡಿದಷ್ಟೇ ಮಹತ್ವವನ್ನು ಆಟಗಳಿಗೂ ನೀಡಿದ್ದೆವು. ಆಟದ ಸೋಲು ಗೆಲುವುಗಳು ನಮಗೆ ಎಂಥ ಸಂದರ್ಭಗಳನ್ನೂ ನಿಭಾಯಿಸುವ ಕೌಶಲ ನೀಡುತ್ತವೆ ಎನ್ನುವುದು ಅಪ್ಪ ಅಮ್ಮನ ನಂಬಿಕೆಯಾಗಿತ್ತು. ಅಪ್ಪನ ಶಿಸ್ತು, ಸರಳತೆ ಹಾಗೂ ಅಮ್ಮನ ಸಂಸ್ಕಾರ ಮತ್ತು ಸಹನೆ ನಮ್ಮನ್ನು ಕೇವಲ ‘ಅಕ್ಷರಸ್ಥ’ರನ್ನಾಗಿಸದೇ ‘ಸುಶಿಕ್ಷಿತ’ರಾಗುವಂತೆ ಮಾಡಿದವು. ಅವರ ಜೀವನಶೈಲಿಯಿಂದ ಒಂದಂತೂ ಸ್ಪಷ್ಟವಾಗಿತ್ತು; ‘ಅಧಿಕಾರ ಮತ್ತು ಜವಾಬ್ದಾರಿ ನಿಭಾಯಿಸಬೇಕಿರುವುದು ಕೇವಲ ನಮ್ಮ ಹೊಟ್ಟೆಪಾಡಿಗಲ್ಲ, ಸಂಬಳಕ್ಕಾಗಿಯಲ್ಲ, ನಮ್ಮ ಕೈಲಾದ ಸಹಾಯವನ್ನು ಮಾಡುತ್ತ ನಮ್ಮ ಸುತ್ತಲಿನವರನ್ನೂ ಮುನ್ನಡೆಸಲು’ ಎಂಬುದು. ಈ ಸಹಾಯ ಪ್ರಜ್ಞೆ ಬಾಲ್ಯದಿಂದಲೇ ನಮ್ಮೊಳಗೆ ಅಚ್ಚೊತ್ತುವಂತೆ ಮಾಡಿದ್ದು ಈ ಸಂಸ್ಕಾರಗಳೇ. ಅವರ ಈ ಜೀವನಶೈಲಿಯೇ ನಮಲ್ಲಿ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ, ಸಹಾಯ ಮಾಡುವ ಗುಣಗಳು ಸಹಜವಾಗಿಯೇ ಬೆಳೆಯುವಂತೆ ಮಾಡಿದವು.

ಈಗ ಇಷ್ಟು ವರ್ಷಗಳ ನಂತರ ಇವನ್ನೆಲ್ಲ ನೆನಪಿಸಿಕೊಳ್ಳುವುದು ನಾಸ್ತಾಲ್ಜಿಕ್‌ ಎನಿಸಬಹುದು. ಆದರೆ ನಾವು ನಮ್ಮ ಮಕ್ಕಳನ್ನು ಬೆಳೆಸುವಾಗ ಇನ್ನೊಂದು ಪೀಳಿಗೆಯನ್ನೇ ಬೆಳೆಸುತ್ತಿದ್ದೇವೆ ಎಂಬುದು ನಮ್ಮ ಪ್ರಜ್ಞೆಯೊಳಗಿರಬೇಕು. ಖಲೀಲ್‌ ಗಿಬ್ರಾನ್‌ ಹೇಳಿದಂತೆ, ‘ನಾವು ಹೇಳುವುದನ್ನು ಕಲಿಯುವುದಿಲ್ಲ. ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ’. ನನ್ನ ಕಲಿಕೆಯೂ ಹಾಗೆಯೇ ಆಯಿತು. ನೀವು ನಿಮ್ಮ ಮಕ್ಕಳಿಗೆ ಏನು ಕಲಿಸಲಿದ್ದೀರಿ ಎನ್ನುವುದು ನಿಮ್ಮನ್ನೇ ಅವಲಂಬಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು