ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಅಂಗವಿಕಲರಿಗೆ ಮಾನದಂಡವೇ ಅಡ್ಡಿ!

ನಾಗರಿಕ ಸೇವಾ ನೇಮಕಾತಿ ಪ್ರಕ್ರಿಯೆಯಲ್ಲಿ ವಿಚಿತ್ರ ನಿಬಂಧನೆ
Last Updated 3 ಡಿಸೆಂಬರ್ 2022, 2:02 IST
ಅಕ್ಷರ ಗಾತ್ರ

ಹೆಸರು ಇರಾ ಸಿಂಘಾಲ್. ಐಎಎಸ್‌ ಅಧಿಕಾರಿ. 2014ರಲ್ಲಿ ನಡೆದ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದಾಕೆ. ಅದಕ್ಕೂ ಮುನ್ನ ಇಂಡಿಯನ್ ರೆವಿನ್ಯೂ ಸರ್ವಿಸಸ್ ಪರೀಕ್ಷೆಯಲ್ಲಿ ಮೂರು ಬಾರಿ ಉನ್ನತ ರ್‍ಯಾಂಕ್ ಗಳಿಸಿದ್ದರು. ಆದರೂ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಅದಕ್ಕೆ ಕಾರಣ ಅವರಿಗಿದ್ದ ಬೆನ್ನು ಮೂಳೆಯ ಸಮಸ್ಯೆ. ಇರಾ ಅವರು ಸ್ಕೊಲಿಯೊಸಿಸ್‌ನಿಂದ ಬಳಲುತ್ತಿದ್ದರು.

ಗುರುರಾಜ್ ಎಸ್. ದಾವಣಗೆರೆ
ಗುರುರಾಜ್ ಎಸ್. ದಾವಣಗೆರೆ

ತಮಗೆ ನಾಗರಿಕ ಸೇವಾ ಹುದ್ದೆಯನ್ನು ನೀಡದ್ದರಿಂದ ನೊಂದ ಇರಾ, ಕೇಂದ್ರೀಯ ಆಡಳಿತ ನ್ಯಾಯಮಂಡಳಿ ಮುಂದೆ ಕೇಸು ದಾಖಲಿಸಿ ಗೆದ್ದೂ ಬಿಟ್ಟರು. ನಂತರ ತರಬೇತಿಗೆ ಹಾಜರಾದರು. ಹುದ್ದೆ ಪಡೆದರು. ಈಗ ದೆಹಲಿಯಲ್ಲಿ ಸೇವಾನಿರತರಾಗಿದ್ದಾರೆ. ಆದರೆ ಇರಾ ಅವರು ಅನುಭವಿಸಿದ ಅವಮಾನ, ನಿರಾಕರಣೆಯನ್ನು
ಇಂದಿಗೂ ಅನುಭವಿಸುತ್ತಿರುವ ಸಿವಿಲ್ ಸರ್ವಿಸಸ್‌ ಹುದ್ದೆಯ ಅಂಗವಿಕಲ ಆಕಾಂಕ್ಷಿಗಳು ತಮಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಕಾನೂನಿನ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ.

2021ರ ನಾಗರಿಕ ಸೇವಾ ಪರೀಕ್ಷೆ ಪಾಸಾಗಿರುವ, ಆಯ್ಕೆ ಪ್ರಕ್ರಿಯೆಗೂ ಮುನ್ನ ನಿಗದಿಪಡಿಸಲಾಗಿದ್ದ ಮಾನದಂಡ ಪೂರೈಸಿರುವ 7 ಮಂದಿ ಅಂಗವಿಕಲರು ಆಯ್ಕೆ ಸಮಿತಿ ನಿಗದಿಪಡಿಸಿರುವ ‘ಪರ್ಸನ್ ವಿತ್‌ ಬೆಂಚ್‍ಮಾರ್ಕ್ ಡಿಸೆಬಿಲಿಟಿ’ (ಶೇ 40ಕ್ಕಿಂತ ಕಡಿಮೆ ಇರದ ಅಂಗವೈಕಲ್ಯ) ಮಾನದಂಡ ಪೂರೈಸಿದ್ದರೂ ಉದ್ಯೋಗ ತರಬೇತಿ ವಿಭಾಗದಿಂದ ಅವರಿಗೆ ಯಾವುದೇ ಕರೆ ಬಂದಿಲ್ಲ. ಹಿಂದಿನ ಸಾಲಿನ ಪರೀಕ್ಷೆಯ ಅಂತಿಮ ಮೆರಿಟ್ ಲಿಸ್ಟ್‌ನಲ್ಲಿ 749 ಹುದ್ದೆಗಳಿಗೆ ಎದುರಾಗಿ 685 ಅಭ್ಯರ್ಥಿಗಳ ಹೆಸರುಗಳನ್ನು ‘ಶಾರ್ಟ್‌ಲಿಸ್ಟ್‌’ ಮಾಡಲಾಗಿತ್ತು. ಅದರಲ್ಲಿ ಇವರೂ ಇದ್ದರು. ಕೈ– ಕಾಲು ಊನವಿರುವವರಿಗೆಂದೇ ಆರು ಹುದ್ದೆಗಳು ಮೀಸಲಿದ್ದವು. ಅವರಲ್ಲಿ ಮೂವರಿಗೆ ಸ್ನಾಯು– ಮೂಳೆ ಸಂಬಂಧಿ ಅಂಗವೈಕಲ್ಯ ಇತ್ತು. ನವೆಂಬರ್ 1ರವರೆಗೆ ಇವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ.

ಐಎಎಸ್, ಐಪಿಎಸ್ ಹುದ್ದೆ ಅಲಂಕರಿಸಿ ಜನರ ಸೇವೆ ಮಾಡಬೇಕೆನ್ನುವ ಪದವಿ ಕಲಿತ ವಿದ್ಯಾರ್ಥಿಗಳು ದೇಶದಲ್ಲಿ ಹೆಜ್ಜೆಗೊಬ್ಬರು ಸಿಗುತ್ತಾರೆ. ಸಿಕ್ಕ ಅಧಿಕಾರ, ಸವಲತ್ತು ಬಳಸಿಕೊಂಡು ಪ್ರಾಮಾಣಿಕವಾಗಿ ದುಡಿದು ಸಾಧನೆ ಮಾಡಿದ ಅನೇಕರು ನಮ್ಮ ನಡುವೆ ಇದ್ದಾರೆ. ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನಾ ಧರಿಸಿ ಆಡಳಿತ, ಪೊಲೀಸ್‌, ವಿದೇಶಾಂಗ, ರೆವಿನ್ಯೂ ವಿಭಾಗಗಳಲ್ಲಿ ಕೆಲಸ ಪಡೆಯುವ ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಆದರೆ ಎಲ್ಲ ಸಾಮಾನ್ಯ ಅಭ್ಯರ್ಥಿಗಳಂತೆ ಪರೀಕ್ಷೆ ಎದುರಿಸಿ, ಉನ್ನತ ರ್‍ಯಾಂಕ್ ಗಳಿಸಿ ಅಂತಿಮ ಹಂತದ ಸಂದರ್ಶನದಲ್ಲೂ ತೇರ್ಗಡೆಯಾಗಿರುವ ಅಂಗವಿಕಲರು ತಾವು ಬಯಸಿದ ಇಲಾಖೆಯ ಪೋಸ್ಟಿಂಗ್ ಸಿಗದೆ ಪರದಾಡುವಂತಾಗಿದೆ. ಅದಕ್ಕೆ ಕಾರಣ, ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯು ನಿಗದಿಪಡಿಸಿರುವ ಮಾನದಂಡಗಳು.

ಯಾವುದೇ ವ್ಯಕ್ತಿಯ ದೈಹಿಕ ನ್ಯೂನತೆ ಶೇ 40ಕ್ಕಿಂತ ಕಡಿಮೆ ಇರದಿದ್ದರೆ ಅಂತಹ ನ್ಯೂನತೆಯನ್ನು ಬೆಂಚ್‌ಮಾರ್ಕ್ ಡಿಸೆಬಿಲಿಟಿ ಎನ್ನುತ್ತಾರೆ. 2016ರ ಅಂಗವಿಕಲರ ಹಕ್ಕುಗಳ ಕಾಯ್ದೆ ಪ್ರಕಾರ, 21 ಪ್ರಮಾಣೀಕೃತ ದೈಹಿಕ ನ್ಯೂನತೆಗಳಿವೆ. ಅವುಗಳಲ್ಲಿ ಕುರುಡು, ಕ್ಷೀಣ ದೃಷ್ಟಿ, ಕುಬ್ಜತೆ, ಕೀಲು– ಮೂಳೆಗಳ ನ್ಯೂನತೆ, ಸೆರೆಬ್ರಲ್ ಪಾಲ್ಸಿ, ಆಟಿಸಮ್‍ ಸೇರಿವೆ. ದೈಹಿಕ ನ್ಯೂನತೆ ಇರುವವರನ್ನು ಮೂರು ಮುಖ್ಯ ವಿಧಗಳಲ್ಲಿ ವಿಂಗಡಿಸಲಾಗುತ್ತದೆ. ಕೀಲು– ಮೂಳೆ ನ್ಯೂನತೆ ಇರುವವರನ್ನು ಪಿಎಚ್‌1, ದೃಷ್ಟಿವೈಕಲ್ಯ ಇರುವವರನ್ನು ಪಿಎಚ್‌2 ಮತ್ತು ಶ್ರವಣದೋಷ ಇರುವವರನ್ನು ಪಿಎಚ್‌3 ಎಂದು ವರ್ಗೀಕರಿಸಲಾಗಿದೆ.

ಇಲ್ಲಿ ಎರಡು ಮುಖ್ಯ ಅಂಶಗಳಿವೆ. ಒಂದು, ಕ್ರಿಯಾತ್ಮಕ ವರ್ಗೀಕರಣ. ಇದು ನ್ಯೂನತೆಯನ್ನು ಗುರುತಿಸಿ ಅದರ ವಿಧವನ್ನು ತಿಳಿಸುವ ವಿಧಾನ. ಇನ್ನೊಂದು, ದೈಹಿಕ ಅಳತೆಗಳನ್ನಾಧರಿಸಿ ವ್ಯಕ್ತಿಯು ಯಾವ ಯಾವ ಕೆಲಸ ಮಾಡಬಹುದು ಎಂಬುದನ್ನು ನಿರ್ಧರಿಸುವ ಮಾನದಂಡ. ಲೋಕೊಮೋಟಾರ್ ಡಿಸೆಬಿಲಿಟಿ (ಕಾಲು ಮತ್ತು ಕೈ ವೈಕಲ್ಯ), ಸೆರೆಬ್ರಲ್ ಪಾಲ್ಸಿ (ಮೆದುಳಿನ ಪಾರ್ಶ್ವವಾಯು), ಸ್ನಾಯು ಕ್ಷಯ, ಆಟಿಸಮ್, ಬೌದ್ಧಿಕ ನ್ಯೂನತೆ, ಮಾನಸಿಕ ಕಾಯಿಲೆ, ಬಹು ಅಂಗಾಂಗ ನ್ಯೂನತೆ, ನಿರ್ದಿಷ್ಟ ಕಲಿಕೆಯ ಅಸಾಮರ್ಥ್ಯಗಳು ಬೆಂಚ್‍ಮಾರ್ಕ್ ಡಿಸೆಬಿಲಿಟಿಗಳ ಗುಂಪಿಗೆ ಸೇರುತ್ತವೆ. 2021ರಲ್ಲಿ ದೇಶದಾದ್ಯಂತ ವಿವಿಧ ಶ್ರೇಣಿಯ 3,566 ಉದ್ಯೋಗಗಳು ಬೆಂಚ್‍ಮಾರ್ಕ್ ಡಿಸೆಬಿಲಿಟಿ ಇರುವವರಿಗೆ ಮೀಸಲಿದ್ದವು. ಆದರೆ ಅವುಗಳನ್ನು ಪಡೆದುಕೊಳ್ಳಲು ಅಭ್ಯರ್ಥಿಗಳು ಬೇಡದ ಯಾತನೆ ಅನುಭವಿಸುವಂತಾಗಿದೆ.

ಸಮಸ್ಯೆ ಇರುವುದು ಅಭ್ಯರ್ಥಿಗಳ ಕೆಲಸ ಮಾಡಬಲ್ಲ ಕ್ಷಮತೆ, ಪ್ರಮಾಣೀಕೃತ ಅಂಗವೈಕಲ್ಯದ ವಿಧಗಳ ಗುರುತಿಸುವಿಕೆ ಮತ್ತು ಕ್ರಿಯಾತ್ಮಕ ವರ್ಗೀಕರಣದಲ್ಲಿ. ಉದಾಹರಣೆಗೆ, ಎರಡೂ ಕೈ– ಎರಡೂ ಕಾಲು ಪೂರ್ಣವಾಗಿ ಇರುವವರು ಭಾರತೀಯ ಆಡಳಿತ ಸೇವೆ, ಸಿವಿಲ್ ಅಕೌಂಟ್ಸ್ ಸೇವೆ, ಇಂಡಿಯನ್ ಇನ್‍ಫರ್ಮೇಶನ್ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಸೇವೆಗಳಾದ ಡ್ಯಾನಿಕ್ಸ್ (DANICS – ದೆಹಲಿ, ಅಂಡಮಾನ್ ನಿಕೊಬಾರ್ ಆಡಳಿತ) ಮತ್ತು ಪಾಂಡಿಕ್ಸ್‌ಗೆ (PONDICS- ಪುದುಚೇರಿಯ ಆಡಳಿತ) ಅರ್ಹತೆ ಪಡೆಯುತ್ತಾರೆ. ಇಲ್ಲಿ ಎಲ್ಲೂ ಕೈಕಾಲುಗಳ ಉದ್ದ ಇಂತಿಷ್ಟೇ ಇರಬೇಕು, ಎತ್ತರ ಇಷ್ಟೇ ಇರಬೇಕು ಎಂದು ಹೇಳಿಲ್ಲ. ಅಂಗ ನ್ಯೂನತೆಯ ವರ್ಗೀಕರಣಕ್ಕೂ ಕಾರ್ಯಕ್ಷಮತೆಗೆ ಬೇಕಾದ ದೈಹಿಕ ಸಾಮರ್ಥ್ಯದ ಮಾನದಂಡಗಳಿಗೂ ಸರಿಯಾದ ಹೊಂದಾಣಿಕೆ ಇಲ್ಲದಿರುವುದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ ಎಂದಿರುವ ಇರಾ ಸಿಂಘಾಲ್, ‘ನನ್ನ ಪ್ರಕರಣ ಮುಗಿದು ಏಳು ವರ್ಷಗಳಾಗಿವೆ, ಆದರೂ ಸಮಸ್ಯೆ ಬಗೆಹರಿದಿಲ್ಲ, ಮೊದಲೇ ಅಂಗವೈಕಲ್ಯ ದಿಂದ ನೊಂದಿರುವ ಮನಸ್ಸುಗಳಿಗೆ ಸರ್ಕಾರದ ಇಂಥ ನಡೆಯಿಂದ ಇನ್ನಷ್ಟು ಗಾಸಿಯಾಗುತ್ತದೆ’ ಎಂದಿದ್ದಾರೆ.

ಈ ಸಾಲಿನಲ್ಲಿ ಸೇವೆಗೆ ನೇಮಕವಾಗದ ಮಹಿಳಾ ಅಭ್ಯರ್ಥಿಯೊಬ್ಬರು, ‘ತರಬೇತಿ ಮತ್ತು ನೇಮಕಾತಿ ವಿಭಾಗವು ಕೆಲಸಕ್ಕೆ ಬೇಕಾದ ದೈಹಿಕ ಮಾನದಂಡ ಗಳಾಗಲೀ ಕೆಲಸ ಮಾಡುವ ಕ್ಷಮತೆಯಾಗಲೀ ಇಲ್ಲ ಎಂಬ ಕಾರಣ ನೀಡಿ ನನಗೆ ಹುದ್ದೆ ನಿರಾಕರಿಸಿದೆ. ನನ್ನ ಮೆರಿಟ್‍ಗೆ ಏನೂ ಬೆಲೆ ಇಲ್ಲದಂತಾಗಿದೆ’ ಎಂದು ದುಃಖಿಸುತ್ತಾ, ‘ಕೈಕಾಲುಗಳ ನ್ಯೂನತೆಯ ವ್ಯಾಖ್ಯೆ ತುಂಬಾ ದೊಡ್ಡದಿದೆ. ಉದಾಹರಣೆಗೆ, ವ್ಯಕ್ತಿಯ ಕಾಲು ಅಲ್ಪ ಪ್ರಮಾಣದಲ್ಲಿ ಊನವಾಗಿದ್ದು ಆತನಿಗೆ ಇತರರಂತೆ ಓಡಲು, ಹಾರಲು ಸಾಧ್ಯವಾಗದಿರಬಹುದು, ಆದರೆ ನಡೆಯಲು, ನಿಲ್ಲಲು ಯಾವುದೇ ಸಮಸ್ಯೆ ಇರುವುದಿಲ್ಲ. ನೋಡುವುದು, ಕೇಳಿಸಿ ಕೊಳ್ಳುವುದು, ಮಾತನಾಡುವುದು ಸಾಧ್ಯವಿರುವಾಗ ಅದನ್ನೂ ಪರಿಗಣಿಸಬೇಕಲ್ಲವೇ’ ಎಂದು ಪ್ರಶ್ನಿಸುತ್ತಾರೆ.

ಯಾವುದೇ ಇಲಾಖೆಗೆ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳುವ ಅಂತಿಮ ಅಧಿಕಾರವು ಸಂಬಂಧಿಸಿದ ನಿಗಮ– ಮಂಡಳಿಗಳಿಗೆ ಇರುತ್ತದೆ. 2015ರವರೆಗೆ ಕಾಲು ಮತ್ತು ಕೈ ವೈಕಲ್ಯ ಇರುವ ಅಭ್ಯರ್ಥಿಗಳನ್ನು ಭಾರತೀಯ ನಾಗರಿಕ ಲೆಕ್ಕ ಇಲಾಖೆ, ಗ್ರೂಪ್ ‘ಎ’ (ಶ್ರೇಣಿ 3) ಮತ್ತು ಪುದುಚೇರಿಯ ಗ್ರೂಪ್ ‘ಬಿ’ ಹುದ್ದೆಗಳಿಗೆ ನೇಮಕ ಮಾಡುತ್ತಿರಲಿಲ್ಲ. ಈಗ ನಿರ್ಬಂಧ ತೆರವಾಗಿದೆಯಾದರೂ ಅನುಷ್ಠಾನ ಅಷ್ಟು ಸುಲಭವಲ್ಲ. ಕೀಲು ಮೂಳೆಗಳ ನ್ಯೂನತೆ ಇರುವವರು ನಾಗರಿಕ ಸೇವಾ ವಿಭಾಗದ ಆರು ಹುದ್ದೆಗಳಿಗೆ ಆರ್ಹರು, ಉಳಿದವುಗಳಿಗೆ ಇಲ್ಲ ಎಂಬ ಭಾವನೆ ಆಯ್ಕೆದಾರರಲ್ಲಿದೆ. ಮೆರಿಟ್ ಆಧಾರದಲ್ಲಿ ಪರೀಕ್ಷೆ ನಡೆಸಿ, ದೈಹಿಕ ಲಕ್ಷಣಗಳನ್ನಾಧರಿಸಿ ಹುದ್ದೆ ನೀಡುತ್ತೇವೆ ಎನ್ನುವುದೇ ಅಸಾಂವಿಧಾನಿಕ. ಇದು 2016ರ ಅಂಗವಿಕಲರ ಹಕ್ಕುಗಳ ನೇರ ಉಲ್ಲಂಘನೆಯಾಗುತ್ತದೆ ಎಂಬುದು ತಜ್ಞರ ಮಾತು.

ದೈಹಿಕ ನ್ಯೂನತೆ ಇರುವ ಆಟಗಾರರು ಪ್ಯಾರಾಲಿಂಪಿಕ್‍ ಕೂಟದಲ್ಲಿ ಚಿನ್ನದ ಪದಕ ಗಳಿಸಿದರೆ ನಮಗೇ ಪದಕ ಸಿಕ್ಕಂತೆ ಸಂಭ್ರಮಿಸುತ್ತೇವೆ. ಪ್ರೇರಣೆದಾಯಕ ಭಾಷಣ ಮಾಡುವಾಗ ಅವರ ಉದಾಹರಣೆ ನೀಡುತ್ತೇವೆ. ದೇಶದ ಅತ್ಯುನ್ನತ ‘ಪದ್ಮ’ ಪ್ರಶಸ್ತಿ ನೀಡುತ್ತೇವೆ. ಆದರೆ ಅವರೇ ಪರೀಕ್ಷೆ ಬರೆದು ಗಳಿಸಿದ ಅಂಕಗಳಿಗೆ ದೈಹಿಕ ನ್ಯೂನತೆಯ ಆಧಾರದಲ್ಲಿ ವಿಚಿತ್ರ ನಿಬಂಧನೆಗಳನ್ನೊಡ್ಡಿ ನೇಮಕಾತಿ ನಿರಾಕರಿಸುತ್ತೇವೆ. ಇದನ್ನು ಸರಿಪಡಿಸಲಾಗದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT