ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ

Last Updated 16 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಯೋಧನೋರ್ವನ ನೀತಿ ಸಂಹಿತೆ ಹೀಗಿರುತ್ತದೆ:

ನಾನೊಬ್ಬ ವೀರ ಯೋಧ –ಯುದ್ಧ ಮಾಡುವುದು ನನ್ನ ಧರ್ಮ; ನಾನು ನನ್ನ ದೇಹ, ಮನಸ್ಸು ಮತ್ತು ಆತ್ಮವನ್ನು ಹೋರಾಟಕ್ಕೇ ಅಣಿಗೊಳಿಸುತ್ತೇನೆ, ವರ್ತಮಾನ ಮತ್ತು ಭವಿಷ್ಯದಲ್ಲಿ ಯಾವುದೇ ಯುದ್ಧದ ಶಸ್ತ್ರಾಸ್ತ್ರ ಅಥವಾ ಆಯುಧಗಳ ಉಪಯೋಗಿಸುವಿಕೆಯಲ್ಲಿ ಪರಿಣತಿ ಸಾಧಿಸಿರುತ್ತೇನೆ. ಸದಾ ಕಾಲವೂ ದುರ್ಬಲರ ರಕ್ಷಣೆ ಮಾಡುತ್ತೇನೆ

ಸದಾ ಕಾಲ ನಿಷ್ಪಕ್ಷಪಾತನಾಗಿ, ಸತ್ಯದ ಪರವಾಗಿರುತ್ತೇನೆ– ಮಾನವೀಯತೆಗಳ ಸುಸಂಸ್ಕೃತನಾಗಿ ಸದಾ ಸಹಾನುಭೂತಿ ಯಿಂದಿರುತ್ತೇನೆ. ಎದುರಾಗುವ ತೊಂದರೆಗಳೊಂದಿಗೆ ಹೋರಾಡುತ್ತೇನೆ, ಪರಿಣಾಮಗಳನ್ನು ಸ್ವೀಕರಿಸುತ್ತೇನೆ. ದೇವರೇ, ನಿನ್ನನ್ನೆಂದೂ ಏನನ್ನೂ ಬೇಡದಂತ ಶಕ್ತಿಯನ್ನು ನನಗೆ ಕೊಡು.

34 ವರ್ಷಗಳ ನನ್ನ ಸೈನಿಕ ಜೀವನ ಮುಗಿದೇ 16 ವರ್ಷಗಳಾಗಿವೆ. ನಿವೃತ್ತ ಜೀವನದ ಅನೇಕ ಸಂಜೆಗಳಲ್ಲಿ ಒಬ್ಬನೇ ಕುಳಿತಿರುತ್ತೇನೆ. ಸಂಪೂರ್ಣ ಏಕಾಂತದಲ್ಲಿ ಹಿಂದಿನ ಘಟನೆಗಳನ್ನು ಮೆಲುಕು ಹಾಕುತ್ತಿರುತ್ತೇನೆ. ಅದೆಷ್ಟೋ ಪ್ರಶ್ನೆಗಳು ನನ್ನೊಳಗೆ ಹುಟ್ಟಿಕೊಳ್ಳುತ್ತವೆ, ಅರ್ಥ ಹುಡುಕುವ ವ್ಯರ್ಥ ಪ್ರಯತ್ನವನ್ನೂ ಮಾಡುತ್ತಿರುತ್ತೇನೆ-ಆದರೂ ನಿಜಕ್ಕೂ ಕೆಲ ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್. ನಾನು ನನ್ನ ಅಮೂಲ್ಯ ಜೀವನದ ಕ್ಷಣಗಳನ್ನು ಸೈನಿಕರ ನಡುವೆ ಕಳೆದಿದ್ದರೂ, ಅನೇಕ ಸೇನಾನಿಗಳ ಮುಂದೆ ನನ್ನ ಸಾಧನೆ ಏನೇನೂ ಅಲ್ಲ ಎಂಬ ಭಾವ ಮೂಡುತ್ತದೆ. ಉದಾಹರಣೆಗೆ ಒಂದು ಘಟನೆ ಹೇಳುವೆ:

ಮೇಜರ್ ತೀರಾತ್ ಸಿಂಘ್ ಮತ್ತವನ ಮಹೋನ್ನತ ತ್ಯಾಗ : ಮೇಜರ್ ತೀರಾತ್ ಸಿಂಗ್ ಸುಂದರವಾಗಿ ಕಾಣುತ್ತಿದ್ದ ಸರದಾರ್ಜೀ. ದಪ್ಪವಾಗಿದ್ದ, ರೋಲ್‍ಮಾಡಿದಂತೆ ಬಾಚಿಕೊಂಡಿದ್ದ ಗಡ್ಡ, ಮೇಲ್ಮುಖವಾಗಿ ವೀರಗಾಂಭೀರ್ಯವನ್ನು ಸೂಸುತ್ತಿದ್ದ ಮೀಸೆ. ಎಲ್ಲ ಸೈನಿಕರಿಗೂ ಓರ್ವ ರೋಲ್ ಮಾಡೆಲ್ ನಂತಿದ್ದ ಅಜಾನುಬಾಹು ಮೇಜರ್. ನಮ್ಮ ಬೆಟಾಲಿಯನ್ ನಲ್ಲಿರುವ ನಾಲ್ಕು ರೈಫಲ್ ಕಂಪೆನಿಗಳೆಂದರೆ ಆಲ್ಫಾ, ಬ್ರೇವೋ, ಚಾರ್ಲಿ ಹಾಗೂ ಡೆಲ್ಟಾ. ಇವುಗಳಲ್ಲಿ 120 ಸರದಾರ ಸೈನಿಕರಿದ್ದ ಆಲ್ಫಾ ರೈಫಲ್ ಕಂಪೆನಿಯನ್ನು ಮೇಜರ್ ತೀರಾತ್ ಸಿಂಘ್ ಕಮಾಂಡ್ ಮಾಡುತ್ತಿದ್ದರು. ಆಗಿನ್ನೂ 30ರ ಹರೆಯ. ಮದುವೆಯೂ ಆಗಿತ್ತು. 4 ಮತ್ತು 2ವರ್ಷ ಪ್ರಾಯದ ಇಬ್ಬರು ಗಂಡು ಮಕ್ಕಳೂ ಇದ್ದರು. ಅವರ ಪತ್ನಿ ಆಗಷ್ಟೇ ಒಂದು ಹೆಣ್ಣು ಮಗುವನ್ನೂ ಹಡೆದಿದ್ದರು. ಜಲಂಧರ್‍ನ ಅವರ ಮನೆಗೆ ನಾನೂ ಆಗಾಗ ಹೋಗುತ್ತಿದ್ದೆ. ನನ್ನನ್ನು ಅವರು ಮನೆಯ ಕಿರಿಯ ಸಹೋದರನಂತೆ ನೋಡಿಕೊಳ್ಳುತ್ತಿದ್ದರು. ಒಲವೇ ತುಂಬಿದ ಅಪರೂಪದ ಆತ್ಮೀಯ ಕುಟುಂಬವಾಗಿತ್ತದು.

ಅದು 1971ನೇ ಇಸವಿಯ ಯುದ್ಧ ಕಾಲ. ನಮಗೆ ನಮ್ಮ ದೇಶದ ಫತೇಪುರವನ್ನು ಸೇರಿಸಿ ಪಾಕ್ ಆಕ್ರಮಿಸಿ ಕೊಂಡಿದ್ದ ಪಾಕ್ ಫತೇಪುರವನ್ನು ಮರಳಿ ವಶ ಮಾಡಿಕೊಳ್ಳ ಬೇಕಾದ ಕಠಿಣ ಸವಾಲಿನ ಜವಾಬ್ದಾರಿಯನ್ನು ವಹಿಸಲಾಗಿತ್ತು. ಡಿಸೆಂಬರ್ 3, 1971ರಂದು ಪಾಕಿಸ್ತಾನ ಅಚ್ಚರಿ ಎಂಬಂತೆ ನಮ್ಮ ದೇಶದ ಪೋಸ್ಟ್ ಮೇಲೆ ದಾಳಿ ಮಾಡಿ, ಅದನ್ನು ಅತ್ಯಂತ ಸುರಕ್ಷಿತ ತಾಣವಾಗಿ ಪರಿವರ್ತಿಸಿಕೊಂಡು ಬಿಟ್ಟಿತ್ತು. ಇದಕ್ಕೆ ಅವರು ತೆಗೆದುಕೊಂಡ ಅವಧಿ ಕೇವಲ ಏಳೇ ದಿನಗಳು. ರಾವೀ ನದಿಯ ಒಂದು ಬದಿಯಲ್ಲಿ ಪಾಕ್ ಸೇನೆ ಸ್ವಯಂಚಾಲಿತ ಮೀಡಿಯಂ ಮೆಶಿನ್ ಗನ್, ಆಂಟಿ ಟ್ಯಾಂಕ್ ಗನ್‍ಗಳು ಮತ್ತು ಮುಂಭಾಗದಲ್ಲೇ ಮೈನ್ ಫೀಲ್ಡ್‌ಗಳ
ಮೂಲಕ ಪಾಕ್ ಬಲಿಷ್ಠವಾಗಿ ಅಲ್ಲಿ ಬೀಡು ಬಿಟ್ಟೇ ಬಿಟ್ಟಿತು.

ನಮ್ಮ ಯೋಜನೆಯಂತೆ ಆಲ್ಫಾ ಕಂಪೆನಿ ಈ ಪ್ರದೇಶದ ಮೇಲೆ ಅಂತಿಮ ದಾಳಿ ಮಾಡಿ, ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ಫತೇಪುರ್‍ವನ್ನು ವಶ ಪಡಿಸಿಕೊಳ್ಳಬೇಕಿತ್ತು. 1971ರ ಡಿಸೆಂಬರ್ 11ರ ರಾತ್ರಿ 11ಗಂಟೆಗೆ ಯೋಜಿಸಿದ್ದಂತೇ ದಾಳಿ ಆರಂಭವಾಯಿತು. ಮೊದಲ ಹಂತದ ಯೋಜನೆಯಂತೆ ಬ್ರೇವೋ ಮತ್ತು ಚಾರ್ಲಿ ಪಡೆಗಳು ಮುಂದುವರಿದುವು. ಮರುದಿನ ಬೆಳಗಿನ ಜಾವ 2 ಗಂಟೆಗಳ ತನಕ ನಡೆದ ‘ಮುಖಾಮುಖಿ’ ಯುದ್ಧದಲ್ಲಿ ಈ ಎರಡೂ ತಂಡಗಳು ಗೆಲುವನ್ನೂ ಸಾಧಿಸಿ, ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿಯೇ ಮುಗಿಸಿದುವು. ಅಂತೂ ಆರಂಭಿಕ ಯುಶಸ್ಸನ್ನು ಸಾಧಿಸಿದ ನಂತರ, ಮೇಜರ್ ತಿರಾತ್ ಸಿಂಘ್ ಡೆಲ್ಟಾ ಮತ್ತು ಚಾರ್ಲೀ ಕಂಪೆನಿಗಳ ಕಾರ್ಯಾಚರಣೆಯನ್ನು ಮುಂದುವರಿಸುವಂತೆ ತನ್ನದೇ ಆಲ್ಫಾ ಕಂಪೆನಿಗೆ ಆಜ್ಞೆ ಕೊಟ್ಟರು.

ಇದೇ ಸಂದರ್ಭದಲ್ಲಿ ಎಡವಟ್ಟಾಗಿ ಹೋಯ್ತು. ಮೇಜರ್ ತೀರಾತ್ ಸಿಂಘ್ ಮುಂಚೂಣಿಯಲ್ಲಿದ್ದು ಸೈನಿಕರ ಜೊತೆಗೆ ದಾಳಿಯ ನೇತೃತ್ವ ವಹಿಸಿದ್ದರು. ಈ ಹಂತದಲ್ಲಿ ಹಿಂದೆ ಸರಿದಿದ್ದರೆಂದು ಕೊಂಡಿದ್ದ ಪಾಕ್ ಸೈನಿಕರು ಅನಿರೀಕ್ಷಿತವಾಗಿ ತಮ್ಮ ಗುಂಡಿನ ದಾಳಿಯನ್ನು ಆರಂಭಿಸಿಬಿಟ್ಟರು. ನೇರವಾಗಿ ಮೇಜರ್ ತೀರಾತ್ ಸಿಂಗ್ ಅವರ ಗುರಿಯನ್ನಾಗಿಸಿದ ದಾಳಿ ಅದು. ಆಲ್ಫಾ ಪಡೆಯ ಅನೇಕ ಸೈನಿಕರು ಕ್ಷಣಾರ್ಧದಲ್ಲಿ ಈ ದಾಳಿಗೆ ಹುತಾತ್ಮರಾದರು. ಅನೇಕರು ಗಾಯಗೊಂಡರು. ಇದು ಮೇಜರ್ ತೀರಾತ್ ಸಿಂಘ್ ಮತ್ತು ಇಡೀ ಸೈನಿಕರ
ಪಡೆಗೇ ಅನಿರೀಕ್ಷಿತವಾಗಿತ್ತು. ಆದರೂ ಎದೆಗುಂದದ ಆಲ್ಫಾ ಪಡೆ ಮುಂಜಾನೆ 3.30ರ ತನಕ ಕಾದಾಡಿತು. ಅದೊಂದು ಅತ್ಯಂತ ಶೌರ್ಯದ ಯುದ್ಧವಾಗಿತ್ತು ಮತ್ತು ಕೊನೆಗೂ ನಮ್ಮ ಆಲ್ಫಾ ಪಡೆ ಫತೇಪುರ್ ವನ್ನು ವಶಪಡಿಸಿಕೊಂಡಿತು. ಆದರೆ..

ಈ ಹಂತದಲ್ಲಿ ಮೇಜರ್ ತೀರಾತ್ ಸಿಂಗ್ ಜೊತೆ ಕೇವಲ 20ಕ್ಕಿಂತಲೂ ಕಡಿಮೆ ಸೈನಿಕರು ಉಳಿದುಕೊಂಡಿದ್ದರು!. ಸಾಮಾನ್ಯವಾದ ಕೆಲ ಮೆಶಿನ್‍ಗನ್‍ಗಳು ಮಾತ್ರ ಜೊತೆಗಿದ್ದುದು. ಪಾಕಿಸ್ತಾನಿಗಳೂ ತಮ್ಮ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಮತ್ತೆ 4ಗಂಟೆಯ ಸುಮಾರಿಗೆ ಮತ್ತೆ ಅವರೆಲ್ಲರೂ ಒಮ್ಮಿಂದೊಮ್ಮೆಗೇ ಮರು ದಾಳಿಯನ್ನು ಆರಂಭಿಸಿಯೇ ಬಿಟ್ಟರು. ಎರಡೂ ಕಡೆಗಳಿಂದ ಭೀಕರ ಯುದ್ಧ. ಇದೊಂದು ಊಹಿಸಲೂ ಆಗದ ಯುದ್ಧ ಸನ್ನಿವೇಶ. ನಮ್ಮ ಆಲ್ಫಾ ಪಡೆಯ ಮತ್ತೂ ಹತ್ತು ಜನ ಸೈನಿಕರು ಬಲಿಯಾದರು. ಇದ್ದ ಇಪ್ಪತ್ತೇ ಸೈನಿಕರೂ ಅವರ ಕಡೆಯ ಹಲವರನ್ನೂ ಕೊಂದರು. ಅಂತಿಮವಾಗಿ ಅತ್ಯಂತ ಭೀಕರ ಶೆಲ್ಲಿಂಗ್ ನಡೆಯುತ್ತಿತ್ತು. ಆಲ್ಫಾ ಪಡೆಯಲ್ಲಿ ಉಳಿದದ್ದು ಕೇವಲ ಹತ್ತು ಜನ ಸೈನಿಕರು! ಆ ಹಂತದಲ್ಲೂ ಪಾಕ್ ಪಡೆಯನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸಿದರು.

ಆದರೆ ಮತ್ತೆ ಅರ್ಧ ಪಾಕ್ ಕಡೆಯಿಂದ ಮತ್ತೆ ಆಕ್ರಮಣ. ಈ ಸಲ ಅವರ ಸುಮಾರು 60ಜನ ಸೈನಿಕರು ನಮ್ಮ ಆಲ್ಫಾ ಪಡೆಯ ಕೇವಲ ಹತ್ತು ಸೈನಿಕರ ಮೇಲೆ ಗುಂಡಿನ ಮಳೆಗರೆದರು. ಗಮನಿಸಿ, 60ಶತ್ರು ಸೈನಿಕರೆದುರು ನಮ್ಮ ಕಡೆಯಿಂದ ಹೋರಾಡುತ್ತಿದ್ದುದು ಕೇವಲ 10ಸೈನಿಕರು-ಮೇಜರ್ ತೀರಾತ್ ಸಿಂಗ್ ನೇತೃತ್ವದಲ್ಲಿ.

ಈಗ ಮೇಜರ್ ತೀರಾತ್ ಮುಂದೆ ಎರಡೇ ಆಯ್ಕೆಗಳಿದ್ದುವು. ಒಂದು ಸೋಲೊಪ್ಪಿಕೊಂಡು, ಸುರಕ್ಷಿತ ಜಾಗಕ್ಕೆ ಓಡಿ ಹೋಗಿ ಬಚಾವಾಗುವುದು. ಎರಡನೆಯೆದು ಹತ್ತು ಜನರನ್ನೇ ಉತ್ತೇಜಿಸಿ, ಅರುವತ್ತು ಸೈನಿಕರನ್ನು ಎದುರಿಸುವಂತೆ ಮಾಡಿ ಕೊನೆಯ ಸೈನಿಕ, ಕೊನೆಯ ಗುಂಡಿಗೆ ಬಲಿಯಾಗುವ ತನಕವೂ ಹೋರಾಡುವುದು!

ಯೋಚಿಸುವುದಕ್ಕೂ ಚಿಂತಿಸುವುದಕ್ಕೂ ಕಾಲಾವಕಾಶವೇ ಇರಲಿಲ್ಲ. ಮೇಜರ್ ತೀರಾತ್ ಸಿಂಘ್ ಮುಂಚೂಣಿಯಲ್ಲಿದ್ದರು. ಅಂದರೆ ಶತ್ರುವಿಗೆ ಸಮೀಪವೇ. ಹಿಂಬಾಲಿಸುತ್ತಿದ್ದು ಹತ್ತು ಸೈನಿಕರು. ಈಗ ಹೆಚ್ಚು ಯೋಚಿಸದೇ ಮೇಜರ್ ತೀರಾತ್ ಸಿಂಘ್ ನ ಕಂಚಿನ ಕಂಠ ಕೂಗಿದ್ದು ಮೂರೇ ಶಬ್ದ-ರೆಡ್-ರೆಡ್-ರೆಡ್!

ಇದರರ್ಥ ಹಿಂದಿನ ಸೈನಿಕರಿಗೆ ಯಾವುದೇ ಯೋಚನೆಗೂ ಅವಕಾಶವಿಲ್ಲದೇ ಸ್ವತಃ ತನ್ನತ್ತಲೇ ಗುಂಡಿನ ಮಳೆಗರೆಯಿರಿ ಮತ್ತು ಆ ಮೂಲಕ ಶತ್ರುಗಳ ಮೇಲೂ ದಾಳಿ ಮಾಡಿರಿ ಎಂಬ ಸಂದೇಶ ಕೊಟ್ಟರು. ಇದೊಂದು ರೀತಿಯ ಆತ್ಮ ಹತ್ಯೆಯಂತಹ ಆಜ್ಞೆ. ಶತ್ರುಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ, ಈ ದಾಳಿಯಿಂದ ಅವರೂ ಹೆಚ್ಚಿನ ಸಾವು ನೋವು ಅನುಭವಿಸಬೇಕಾಗಿದ್ದು ಸಹಜವಾಗಿತ್ತು. ಅಂತೂ ಸೈನಿಕರು ತಮ್ಮ ನಾಯಕನ ಆಜ್ಞೆಯನ್ನು ಪಾಲಿಸಿಯೇ ಬಿಟ್ಟರು. ಗುಂಡಿನ ಮಳೆಯೇ ಭೋರ್ಗರೆಯಿತು. ಶತ್ರು ಸೈನಿಕರು ದಿಕ್ಕಾ ಪಾಲಾಗಿ ಓಡಿದರು. ಗೆಲುವು ಆಲ್ಫಾ ಪಡೆಯದ್ದಾಗಿತ್ತು -ಅಂದರೆ ನಮ್ಮ ಭಾರತೀಯಸೇನೆಯದ್ದಾಗಿತ್ತು.

ಆದರೆ ಮೇಜರ್ ತೀರಾತ್ ಸಿಂಘ್ ಹುತಾತ್ಮರಾಗಿದ್ದರು. ವಿಜಯ ಮಾಲೆಯನ್ನು ಧರಿಸುವ ಹೊತ್ತಿನಲ್ಲಿ, ನಮ್ಮ ನೆಲವನ್ನು ಮರಳಿ ವಶ ಪಡಿಸಿಕೊಂಡ ಹೆಮ್ಮೆ ಮತ್ತು ಶೌರ್ಯದ ಗೌರವದಿಂದ ನಾವು ಬೀಗಬೇಕಾದ ಈ ಕ್ಷಣಕ್ಕಾಗಿ ಮೇಜರ್ ತೀರಾತ್ ಸಿಂಗ್ ತನ್ನ ಮೇಲೆಯೇ ದಾಳಿ ಮಾಡಿಸಿಕೊಂಡು ತನ್ನದೇ ಪಡೆಯ ಓರ್ವ ಸೈನಿಕನ ತೋಳುಗಳಲ್ಲಿ ಸಾವನ್ನು ತಂದುಕೊಂಡು ಹುತಾತ್ಮರಾದರು.

ಈಗ ನನ್ನಲ್ಲಿ ಇರುವ ಪ್ರಶ್ನೆಗಳು. ರೆಡ್ ರೆಡ್ ರೆಡ್ ಎಂದು ಹೇಳುವ ಆ ಕ್ಷಣದಲ್ಲಿ ತನ್ನ ಸಾವು ಖಚಿತ ಎಂದು ಗೊತ್ತಿದ್ದ ತೀರಾತ್ ಸಿಂಗ್ ಮನದಲ್ಲಿ ಯಾವ ಯೋಚನೆ ಮೂಡಿದ್ದಿರಬಹುದು? ತನ್ನ ಮೇಲೇ ಆ ದಾಳಿಯನ್ನು ಮಾಡಿ, ಆತ್ಮಹತ್ಯೆಯಂತಹ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಮನಸ್ಸಿನಲ್ಲಿ ಎಂತಹ ದೇಶಭಕ್ತಿ ಇದ್ದಿರಬೇಕು ! ದೇಶ ಸೇವೆಯ ಕರ್ತವ್ಯ, ಹೆಮ್ಮೆ ಅಥವಾ ಗೌರವಗಳು ಆತನಿಂದ ವಯಕ್ತಿಕ ಹಿತಾಸಕ್ತಿಯನ್ನು ಮರೆಸಿಬಿಟ್ಟವೆ? ಆ ಕ್ಷಣದಲ್ಲಿ ಆತನ ಎದುರು ಪತ್ನಿ, ಎರಡು ಗಂಡು ಮಕ್ಕಳು ಮತ್ತು ಆಗಷ್ಟೇ ಜನಿಸಿದ್ದ ಹೆಣ್ಣು ಮಗುವಿನ ಮುಖಗಳೇನಾದರೂ ಹಾದು ಹೋಗಿದ್ದುವೇ. ಅವರೆಲ್ಲರಿಗಾಗಿ ಆತ ಮೌನವಾಗಿ ಪ್ರಾರ್ಥನೆ ಸಲ್ಲಿಸಿ ಅವರ
ಕ್ಷಮೆ ಕೇಳಿರಬಹುದೇ. ಅವನ ಮನದೊಳಗೆ ಏನಿತ್ತು ಆ ಕ್ಷಣದಲ್ಲಿ? ಸ್ವಾಭಿಮಾನ? ಅಹಂ? ಶೌರ್ಯ? ದೇಶ ಭಕ್ತಿ? ಕರ್ತವ್ಯನಿಷ್ಠೆ?ನನ್ನ ಮನದಲ್ಲಿ ಸಾವಿರ ಪ್ರಶ್ನೆಗಳು ಹಾದು ಹೋಗುತ್ತವೆ.

ಈಗ ನನಗನಿಸುವುದು-ಸಾಮಾನ್ಯ ಪ್ರಜೆಗಳಾಗಿ ನಾವು ಈ ರೀತಿಯ ಮಹೋನ್ನತ ತ್ಯಾಗಗಳಿಗೆ ಅದೆಷ್ಟು ಆರ್ಹರು!. ನಮ್ಮ ರಾಷ್ಟ್ರಕ್ಕಾಗಿ ಅದೆಷ್ಟೋ ಇಂತ ವೀರಸೇನಾನಿಗಳೇ ಹುತಾತ್ಮರಾಗಿದ್ದಾರಲ್ಲ. ಇದಕ್ಕೆಲ್ಲಾ ನಾವು ಎಷ್ಟರ ಮಟ್ಟಿಗೆ ಆರ್ಹರು!. ಇದಕ್ಕೆಲ್ಲಾ ನಾವು ಯಾವುದೇ ರೀತಿಯಲ್ಲಿ ಕೃತಜ್ಞರಾಗಿರಲು ಸಾಧ್ಯವೇ!

ಪ್ರೀತಿಯ ಓದುಗರೇ...ಒಮ್ಮೆ ಕುಳಿತು ಈ ಪ್ರಶ್ನೆಗಳಿಗೆಲ್ಲಾ ಉತ್ತರ ಹುಡುಕೋಣ. ಆ ಆತ್ಮಗಳಿಗೆ ಈ ಮೂಲಕವಾದರೂ ಒಂದೆರಡು ಹನಿ ಕಣ್ಣಿರು ಹಾಕಲಾಗದೇ. ಇವೆಲ್ಲಾ ಪ್ರಶ್ನೆಗಳು ನನಗಿನ್ನೂ ಕೊರೆಯುತ್ತಿರುತ್ತವೆ.

ನನ್ನ ಈ ಸ್ವಗತವನ್ನು ಸಿಖ್‍ರ ಹತ್ತನೇ ಗುರು, ಗುರು ಗೋಬಿಂದ್ ಸಿಂಗ್ ಅವರ ಸಾಲಿನೊಂದಿಗೆ ಮುಗಿಸುತ್ತೇನೆ. ಪಂಜಾಬಿಯಲ್ಲಿರುವ ಈ ಸಾಲುಗಳನ್ನು ಯಾವಾಗಲೂ ಗುನುಗುತ್ತಿರುತ್ತೇನೆ. ವೀರತ್ವವೆಂದರೆ ದುರ್ಬಲನ ರಕ್ಷಣೆಗೆ ಸದಾ ಹೋರಾಡುವವನು. ಆತನನ್ನು ನೀವು ತುಂಡು ತುಂಡಾಗಿ ಕತ್ತರಿಸಿದರೂ, ಯುದ್ಧ ಭೂಮಿಯನ್ನು ಆತನೆಂದೂ ಬಿಡಲಾರ.

(ಮುಗಿಯಿತು)

ನಿರೂಪಣೆ: ಅರೆಹೊಳೆ ಸದಾಶಿವ ರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT