ತಕ್ಷಣದ ಪ್ರಚೋದನೆ

ಸೋಮವಾರ, ಮಾರ್ಚ್ 18, 2019
31 °C

ತಕ್ಷಣದ ಪ್ರಚೋದನೆ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೇಷ್ಠಿಯ ಮನೆಯಲ್ಲಿ ಹುಟ್ಟಿದ್ದ. ದೊಡ್ಡವನಾದ ಮೇಲೆ ಅವನೇ ರಾಜನಿಗೆ ಶ್ರೇಷ್ಠಿಯಾಗಿ ಪದವಿ ಪಡೆದ. ಒಂದು ದಿನ ರಾಜ ಸೇವೆಗೆಂದು ಅರಮನೆಗೆ ಹೋದ.

ಅಂದು ಅವನ ಅತ್ತೆ ತನ್ನ ಮಗಳನ್ನು ನೋಡಲೆಂದು ಮನೆಗೆ ಬಂದಳು. ಬರುವಾಗ ಬಹಳಷ್ಟು ತಿಂಡಿ-ತಿನಿಸುಗಳನ್ನು ತಂದಿದ್ದಳು. ತಾಯಿ ಮಗಳು ಸಂತೋಷವಾಗಿ ಊಟಮಾಡಿ ವಿಶ್ರಾಂತಿ ಪಡೆಯುತ್ತಿದ್ದಾಗ ತಾಯಿ, ‘ಮಗಳೇ, ನಿನ್ನ ಗಂಡ ನಿನ್ನೊಡನೆ ಚೆನ್ನಾಗಿದ್ದಾನೆಯೇ? ನಿನ್ನೊಂದಿಗೆ ಜಗಳವಾಡದೆ ಪ್ರೇಮದಿಂದ ಇದ್ದಾನೆಯೇ?’ ಎಂದು ಕೇಳಿದಳು.

ಮಗಳು ಸಂತೋಷದಿಂದ, ‘ಅಮ್ಮಾ ನನ್ನ ಸಂತೋಷವನ್ನು ಏನೆಂದು ಹೇಳಲಿ? ನನ್ನ ಗಂಡ ತುಂಬ ಶೀಲವಂತ, ಬಲವುಳ್ಳವನು. ನನ್ನನ್ನು ತುಂಬಾ ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅವನಂತೆ ಸದಾಚಾರಿಯಾದವರು ಪಬ್ಬಜಿತರಲ್ಲೂ ದೊರೆಯುವುದು ಕಷ್ಟ’ ಎಂದಳು. ತಾಯಿಗೆ ಸ್ವಲ್ಪ ಕಿವುಡು. ಆಕೆಗೆ ಪಬ್ಬಜಿತ ಎಂಬ ಪದ ಸ್ಪಷ್ಟವಾಗಿ ಕೇಳಿಸಿತು, ಉಳಿದದ್ದು ಅರ್ಥವಾಗಲಿಲ್ಲ.

ಆಕೆ ಗಾಬರಿಯಾದಳು, ‘ಅಯ್ಯೋ, ಇಂಥ ಬಂಗಾರದಂಥ ಹೆಂಡತಿಯನ್ನು ಬಿಟ್ಟು ನನ್ನ ಅಳಿಯ ಪಬ್ಬಜಿತನಾದನೆ?’ ಎಂದು ಹೋರಾಡಿ, ಚೀರಾಡಿ ಅಳಹತ್ತಿದಳು. ಮಗಳು ಸಮಾಧಾನ ಮಾಡಬಂದರೂ ಕೇಳಿಸಿಕೊಳ್ಳದೇ ಬೀದಿಗೆ ಬಂದು ಅಳತೊಡಗಿದಳು. ಸುತ್ತಮುತ್ತಲಿನ ಜನ ನೆರೆದರು.

‘ಅಯ್ಯೋ ನನ್ನ ಅಳಿಯ ಪಬ್ಬಜಿತನಾದನೇ’ ಎಂದು ಕೊರಗುವುದನ್ನು ಕೇಳಿ, ಈ ಮನೆಯೊಡೆಯ ಶ್ರೇಷ್ಠಿ ಪಬ್ಬಜಿತನಾದ ಎಂಬ ತೀರ್ಮಾನಕ್ಕೆ ಬಂದರು. ಮಾತು ಬೆಂಕಿಯಂತೆ ಬೇಗನೇ ಊರೆಲ್ಲ ಹರಡಿತು. ಕೆಲವರು ಶ್ರೇಷ್ಠಿಯ ಗುಣಗಾನ ಮಾಡತೊಡಗಿದರು. ರಾಜನಿಗೆ ಅಷ್ಟು ಪ್ರಿಯನಾದವನು, ಶ್ರೀಮಂತನಾದವನು ಎಲ್ಲವನ್ನೂ ತೊರೆದು ಪಬ್ಬಜಿತನಾಗಿದ್ದನೆಂದರೆ ಅವನು ತುಂಬಾ ದೊಡ್ಡವನು, ಅವನಿಗೆ ಮರ್ಯಾದೆ ಮಾಡಬೇಕು ಎಂದೆಲ್ಲ ಯೋಜಿಸತೊಡಗಿದರು. ಊರಲ್ಲೆಲ್ಲ ಅವನ ಬಗ್ಗೆ ಅಭಿಮಾನದ ಹೊಳೆ ಹರಿಯತೊಡಗಿತು.

ರಾಜಸೇವೆಯನ್ನು ಮುಗಿಸಿ ಮನೆಗೆ ಹೊರಟಿದ್ದ ಶ್ರೇಷ್ಠಿಯನ್ನು ಒಂದು ಗುಂಪಿನ ಜನ ಬಂದು ಅಭಿನಂದಿಸಿದರು, ಹೊಗಳಿದರು. ಮತ್ತೆ ಕೆಲವರು, ‘ನಿಮ್ಮ ಅತ್ತೆಗೆ ಮಾತ್ರ ನೀವು ಪಬ್ಬಜಿತರಾಗುವುದು ಇಷ್ಟವಿಲ್ಲ. ಆಕೆ ಅಳುತ್ತಿದ್ದಾಳೆ, ಆದರೆ ಇಡೀ ಊರಿಗೆ ನಿಮ್ಮ ಬಗ್ಗೆ ಅಭಿಮಾನ ಬಂದಿದೆ’ ಎಂದರು.

ಶ್ರೇಷ್ಠಿ ಯೋಚಿಸಿದ, ತಾನು ಪಬ್ಬಜಿತನಾಗಿಲ್ಲ, ಆಗುವ ಯೋಚನೆಯೂ ಇಲ್ಲ. ಆದರೆ ತಾನು ಪಬ್ಬಜಿತನಾಗಿದ್ದೇನೆಂದು ಊರಿಗೇ ಊರೇ ನನ್ನನ್ನು ಪ್ರಶಂಸೆಮಾಡುತ್ತಿದೆ. ಇದನ್ನು ನಾನು ಕಳೆದುಕೊಳ್ಳ ಬಾರದು ಎಂದುಕೊಂಡು ಮರಳಿ ರಾಜನ ಕಡೆಗೆ ಹೋಗಿ, ‘ಸ್ವಾಮೀ ನಾನು ಪಬ್ಬಜಿತನಾಗಬೇಕೆಂದು ತೀರ್ಮಾನಮಾಡಿದ್ದೇನೆ. ನನ್ನನ್ನು ರಾಜಸೇವೆಯಿಂದ ಬಿಡುಗಡೆ ಮಾಡಿ’ ಎಂದು ಕೇಳಿಕೊಂಡು ಹಿಮಾಲಯ ಪ್ರದೇಶಕ್ಕೆ ಹೋಗಿ ಪಬ್ಬಜಿತನಾಗಿ ಮುಂದೆ ಅರ್ಹತನಾದ.

ಯಾವ ಮಾತು, ಯಾವ ಕ್ಷಣದಲ್ಲಿ ಎಂಥ ಬದಲಾವಣೆಯನ್ನು ತಂದೀತೆಂಬುದನ್ನು ಹೇಳುವುದು ಕಷ್ಟ. ಪ್ರಚೋದನೆಗಳಿಗೆ ಮನಸ್ಸನ್ನು ತೆರೆದಿಟ್ಟುಕೊಂಡಿದ್ದರೆ ನಮಗೆ ಅರಿವಿಲ್ಲದಂತೆ ಬದಲಾವಣೆ ಬಂದೀತು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !