ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ | ಮೂರು ಫಲಿತಾಂಶ ಆರು ಪಾಠ

ಕರ್ನಾಟಕದ ರಾಜಕೀಯ ನಾಯಕರಿಗಿದೆ ಉಪಯುಕ್ತ ಒಳನೋಟ
Last Updated 25 ಡಿಸೆಂಬರ್ 2022, 23:30 IST
ಅಕ್ಷರ ಗಾತ್ರ

ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳು ಹಾಗೂ ದೆಹಲಿ ಮಹಾನಗರಪಾಲಿಕೆಯ ಮತದಾರರ ಆದ್ಯತೆಗಳ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆ ಆಗಿದೆ. ಭಾರತದಲ್ಲಿ ಸಂಕೀರ್ಣವಾದ ಒಗಟಿನ ಚಿತ್ರದಂತಹ ಪರಿಸ್ಥಿತಿ ಇದ್ದು, ಪ್ರತಿಯೊಂದು ರಾಜ್ಯವೂ ತನ್ನದೇ ಆದ ವಿಶಿಷ್ಟ ಹಾಗೂ ವಿಭಿನ್ನ ಗುಣಗಳಿಂದ ಕೂಡಿದೆ. ದೇಶದ 28 ರಾಜ್ಯಗಳ ಚುನಾವಣಾ ಫಲಿತಾಂಶಗಳು ಕೂಡ ತಮ್ಮದೇ ವಿಶಿಷ್ಟವಾದ ಅಂಶಗಳನ್ನು ಆಧರಿಸಿರುತ್ತವೆ.

ವಸ್ತುಸ್ಥಿತಿ ಹೀಗಿರುವಾಗ, ಈಗಿನ ಚುನಾವಣಾ ಫಲಿತಾಂಶಗಳಿಂದ ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕಾರ್ಯನೀತಿ ತಜ್ಞರು ಕಲಿಯಬಹುದಾದ ಪಾಠಗಳೇನಾದರೂ ಇವೆಯೇ?

2022ರ ಕೊನೆಯಲ್ಲಿ ನಡೆದ ಚುನಾವಣೆಗಳಿಂದ ಕರ್ನಾಟಕ ಕಲಿಯಬಹುದಾದ ಆರು ಪ್ರಮುಖ ಪಾಠಗಳನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ. ಈ ವಿಶ್ಲೇಷಣೆಯು ಸರಾಸರಿ ಮಾಹಿತಿಯನ್ನಷ್ಟೇ ಆಧರಿಸಿಲ್ಲ; ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿನ ಲೋಕನೀತಿ- ಸಿಎಸ್‌ಡಿಎಸ್ ಚುನಾವಣೋತ್ತರ ಸಮೀಕ್ಷಾ ಅಧ್ಯಯನಗಳನ್ನು ಸಹ ಆಧರಿಸಿದೆ.

ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯವಾದ ಮೊದಲ ಪಾಠವೆಂದರೆ, ಒಂದು ಆಡಳಿತಾರೂಢ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲಲು ಇರುವ ಅನುಕೂಲಗಳೇನು ಮತ್ತು ಸವಾಲುಗಳೇನು ಎಂಬುದು. ಕರ್ನಾಟಕ ದಂತೆಯೇ ಗುಜರಾತ್, ಹಿಮಾಚಲ ಪ್ರದೇಶ ಮತ್ತು ದೆಹಲಿ ಮಹಾನಗರಪಾಲಿಕೆಯಲ್ಲಿಯೂ ಬಿಜೆಪಿಯೇ ಆಡಳಿತಾರೂಢ ಪಕ್ಷವಾಗಿತ್ತು. ಇವುಗಳಲ್ಲಿ ಅದು ಒಂದು ರಾಜ್ಯವನ್ನು ಉಳಿಸಿಕೊಂಡಿತು, ಇನ್ನೊಂದನ್ನು ಕಾಂಗ್ರೆಸ್ಸಿಗೂ ಮಹಾನಗರಪಾಲಿಕೆಯನ್ನು ಎಎಪಿಗೂ ಬಿಟ್ಟುಕೊಟ್ಟಿತು. ಆಡಳಿತಾರೂಢ ಪಕ್ಷವು ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂದರೆ, ಸರ್ಕಾರದ ಕಾರ್ಯವೈಖರಿಯತ್ತ ಅದು ವಿಶೇಷ ಗಮನ ಹರಿಸಬೇಕಾಗುತ್ತದೆ. ಒಂದು, ‘ಡಬಲ್ ಎಂಜಿನ್’ ಸರ್ಕಾರದಿಂದ ಏನೆಲ್ಲ ಅನುಕೂಲಗಳಾಗಬಹುದೋ ಆ ಎಲ್ಲವುಗಳ ಬಗ್ಗೆ ಬಿಜೆಪಿಯು ಗಮನ ಕೇಂದ್ರೀಕರಿಸಿತು. ಕೇಂದ್ರದ ಎಂಜಿನ್ ಗುಜರಾತಿನ ಮಟ್ಟಿಗೆ ರಾಜ್ಯದ ಎಂಜಿನ್ ಅನ್ನು ಎಳೆಯಬಲ್ಲಷ್ಟು ಶಕ್ತಿಶಾಲಿಯಾಗಿತ್ತು. ಆದರೆ ಹಿಮಾಚಲ ಪ್ರದೇಶದ ಎಂಜಿನ್ ಅನ್ನು ಗುರಿ ಮುಟ್ಟಿಸಲು ಕೇಂದ್ರದ ಎಂಜಿನ್‌ಗೆ ಸಾಧ್ಯವಾಗಲಿಲ್ಲ. ಇನ್ನು, ದೆಹಲಿ ಮಹಾನಗರ ಪಾಲಿಕೆಯಲ್ಲಿ ಎಎಪಿಯ ‘ಡಬಲ್ ಎಂಜಿನ್’ ಗುರಿ ಸಫಲವಾಯಿತು ಎಂದು ಕೆಲವರು ವಿಶ್ಲೇಷಿಸುತ್ತಾರೆ.

ಎರಡನೆಯ ಪಾಠವೆಂದರೆ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಮತದಾರರಲ್ಲಿ ಕಂಡುಬರುವ ಒಂದು ಸಮಾನ ಪ್ರವೃತ್ತಿಯ ಹಿನ್ನೆಲೆಯಲ್ಲೂ ಹಿಮಾಚಲದ ಮತದಾರರ ತೀರ್ಪಿನಿಂದ ಕರ್ನಾಟಕ ಪ್ರಮುಖವಾದುದನ್ನು ಕಲಿಯಬಹುದಾಗಿದೆ. ಎರಡೂ ರಾಜ್ಯಗಳ ಮತದಾರರು ಚುನಾವಣೆ ಬಂದಾಗ ಆಡಳಿತಾರೂಢ ಪಕ್ಷವನ್ನು ಸ್ಪಷ್ಟ ಬಹುಮತದೊಂದಿಗೆ ಆಶೀರ್ವದಿಸುವುದಿಲ್ಲ. 1985ರ ನಂತರ ಕರ್ನಾಟಕದಲ್ಲಿ ಈ ಬೆಳವಣಿಗೆ ಕಾಣಿಸಿದರೆ, ಹಿಮಾಚಲ ಪ್ರದೇಶದಲ್ಲಿ ಆ ರಾಜ್ಯವು ಅಸ್ತಿತ್ವಕ್ಕೆ ಬಂದ 1971ರಿಂದಲೂ ಈ ಪ್ರವೃತ್ತಿ ಇದ್ದೇ ಇದೆ (ಒಂದು ಸಂದರ್ಭವನ್ನು ಹೊರತುಪಡಿಸಿ). ಅಲ್ಲಿನ ಈ ರೂಢಿಗೆ ಭಂಗ ತರಲು ಬಿಜೆಪಿ ಸರ್ವಪ್ರಯತ್ನ ಮಾಡಿತಾದರೂ ಅದು ಸಫಲವಾಗಲಿಲ್ಲ. ಅಲ್ಲಿ ಬಿಜೆಪಿ ಎದುರಿಸಿದ ಸವಾಲುಗಳು ಕರ್ನಾಟಕದ ಆಡಳಿತಾರೂಢ ಬಿಜೆಪಿಗೂ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೂ ಮೂರನೇ ಪಕ್ಷವಾದ ಜೆಡಿಎಸ್‌ಗೂ ಕರ್ನಾಟಕದಲ್ಲಿ ಹೆಣೆಯಬಹುದಾದ ಕಾರ್ಯತಂತ್ರಗಳಿಗೆ ಹಲವು ಸುಳಿವು-
ಸೂಚನೆಗಳನ್ನು ಒದಗಿಸಬಹುದು.

ಮೂರನೇ ಮಹತ್ವದ ಅಂಶವೆಂದರೆ, ಪಕ್ಷ ಮತ್ತು ಅಭ್ಯರ್ಥಿಗೆ ಸಂಬಂಧಿಸಿದ್ದು. ಈ ಎರಡೂ ರಾಜ್ಯಗಳ ಚುನಾವಣಾ ಪ್ರಚಾರದುದ್ದಕ್ಕೂ ಬಿಜೆಪಿಯು ಮುಖ್ಯವಾಗಿ ಪಕ್ಷ ಮತ್ತು ಕೇಂದ್ರ ನಾಯಕತ್ವದತ್ತ ಗಮನ ಕೇಂದ್ರೀಕರಿಸಿತ್ತು. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿಲ್ಲ; ಇನ್ನು ಗುಜರಾತ್‌ನಲ್ಲಿ ಅಂಥದೊಂದು ಘೋಷಣೆ ಮುಖ್ಯವಾಗಲಿಲ್ಲ. ಗುಜರಾತಿನಲ್ಲಿ ಪಕ್ಷವು ಕೇಂದ್ರ ನಾಯಕತ್ವದ ಬಲದ ಮೇಲೆ ಅಧಿಕಾರಕ್ಕೆ ಏರಿತು. ಅಲ್ಲಿ ಪ್ರತಿಯೊಬ್ಬ ಬಿಜೆಪಿ ಅಭ್ಯರ್ಥಿಯೂ ಮತದಾರರೆದುರು ಪ್ರಧಾನಿ ಹೆಸರು ಹೇಳಿಕೊಂಡು ಬೆಂಬಲ ಯಾಚಿಸಿದರು.

ಹಿಮಾಚಲ ಪ್ರದೇಶದ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರದಲ್ಲಿ ಮತದಾರರು ಪಕ್ಷಕ್ಕೆ ನೀಡಿದಷ್ಟೇ ಮಹತ್ವವನ್ನು ಅಭ್ಯರ್ಥಿಗೂ ನೀಡಿದರು. ಪ್ರತೀ ಹತ್ತು ಮತದಾರರ ಪೈಕಿ ಒಂಬತ್ತು ಮಂದಿ ಅಭ್ಯರ್ಥಿಗೆ ಪ್ರಾಮುಖ್ಯ ನೀಡಿದ್ದಾರೆ ಎಂದು ಲೋಕನೀತಿ- ಸಿಎಸ್‌ಡಿಎಸ್ ಸಮೀಕ್ಷೆ ಬೊಟ್ಟು ಮಾಡಿದೆ. ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಅನುಸರಿಸುವ ಕಾರ್ಯತಂತ್ರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮತದಾರರ ಗಮನ ಪಕ್ಷದ ಮೇಲಿದೆಯೇ ಅಥವಾ ಮತದಾರರು ಅಭ್ಯರ್ಥಿಯ ಸಾಮರ್ಥ್ಯ ಮತ್ತು ಅರ್ಹತೆಗಳನ್ನು ಪರಿಗಣಿಸುವರೇ? ಇದು ಮುಂದೆ ನಾವು ಚರ್ಚಿಸಲಿರುವ ಅಂಶದ ಮೇಲೆ ಪ್ರಭಾವ ಹೊಂದಿರುತ್ತದೆ.

ನಾಲ್ಕನೆಯ ಅಂಶವು ಪ್ರಚಾರದ ಭೂಮಿಕೆಯನ್ನು ಕುರಿತದ್ದಾಗಿದೆ. ಎರಡು ರಾಜ್ಯಗಳಲ್ಲೂ ಪ್ರಚಾರ ಪ್ರಾರಂಭವಾಗುವ ಮೊದಲೇ ಪಕ್ಷನಿಷ್ಠ ಮತದಾರರು ತಾವು ಯಾರಿಗೆ ಮತ ಹಾಕಬೇಕೆಂಬ ನಿರ್ಧಾರಕ್ಕೆ ಬಂದಿದ್ದರು ಎಂಬುದು ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ಆದರೆ ಹಾಗೆ ನಿರ್ದಿಷ್ಟವಾಗಿ ಯಾವ ಪಕ್ಷಕ್ಕೂ ಬದ್ಧರಾಗಿರದಿದ್ದ ಮತದಾರರು ಪ್ರಚಾರ ಮುಗಿಯುತ್ತಾ ಬಂದಂತೆ ತಾವು ಯಾರಿಗೆ ಮತ ಹಾಕಬೇಕೆಂಬುದನ್ನು ನಿರ್ಧರಿಸಿದರು.

ಗುಜರಾತ್‌ನಲ್ಲಿ ಬಿಜೆಪಿ ಭಾರಿ ಜನಾದೇಶದ ಕೊಡುಗೆ ಪಡೆದರೆ, ಹಿಮಾಚಲದಲ್ಲಿ ಮತದಾರರ ಕೊನೆಯ ಕ್ಷಣದ ನಿರ್ಧಾರದಿಂದ ಜನಾದೇಶವು ಶೇ 1ರಷ್ಟು ಪ್ರಮಾಣದಲ್ಲಿ ಕಾಂಗ್ರೆಸ್ ಕಡೆಗೆ ವಾಲಿತು. ಹೀಗಾಗಿ ಪ್ರಚಾರವು ನಿರ್ಣಾಯಕವಾದುದು. ಹಿಮಾಚಲ ಪ್ರದೇಶದಲ್ಲಿ ಸ್ಥಳೀಯ ಸಮಸ್ಯೆಗಳತ್ತ ಗಮನಹರಿಸಿದ್ದು ಕಾಂಗ್ರೆಸ್‌ಗೆ ಸ್ವಲ್ಪ ಮಟ್ಟಿಗೆ ಲಾಭ ತಂದುಕೊಟ್ಟಿತು. ಬಿಜೆಪಿಯಂತೂ ಕೇಂದ್ರ ಸರ್ಕಾರದ ಸಾಧನೆಯ ದಾಖಲೆಗಳನ್ನು ಮತ್ತು ರಾಷ್ಟ್ರೀಯ ವಿಷಯಗಳನ್ನು ಮುಂದಿಟ್ಟು ಪ್ರಚಾರಕ್ಕಿಳಿದಿತ್ತು.

ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಯಾವ ಭೂಮಿಕೆಯ ಮೇಲೆ ಪ್ರಚಾರ ನಡೆಸುತ್ತವೆ ಎಂಬುದು ಕುತೂಹಲಕರ ಸಂಗತಿಯಾಗಿದೆ.

ಐದನೆಯ ಅಂಶವು ಹಿಮಾಚಲ ಪ್ರದೇಶದಿಂದ ಕಲಿಯಬಹುದಾದ ಒಂದು ಪ್ರಮುಖ ಪಾಠವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತಗಳ ಅಂತರ ಶೇ 1ಕ್ಕಿಂತ ಕಡಿಮೆ ಇತ್ತು. ಆದರೂ ಮತದಾರನ ಆರ್ಥಿಕ ಸ್ಥಿತಿಯ ಹಿನ್ನೆಲೆಯಿಂದ ನೋಡಿದಾಗ, ಮತದಾನದಲ್ಲಿ ಒಂದು ಸ್ಪಷ್ಟ ಮಾದರಿಯನ್ನು ಕಾಣಬಹುದಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯು ಶ್ರೀಮಂತ ಸಮುದಾಯಗಳಿಂದ ಹೆಚ್ಚು ಮತಗಳನ್ನು ಪಡೆದಿದ್ದರೆ, ಬಡ ಮತದಾರರ ನಡುವೆ ಮತಗಳಿಕೆಯ ಪ್ರಮಾಣ ಕಡಿಮೆಯಾಗುತ್ತ ಹೋಗಿರುವುದು ಕಂಡುಬರುತ್ತದೆ.

ಕಾಂಗ್ರೆಸ್ಸಿನ ಮತಗಳಿಕೆಯ ಮಾದರಿಯು ಇದಕ್ಕೆ ವ್ಯತಿರಿಕ್ತವಾಗಿದೆ. ರಾಜ್ಯದ ಒಟ್ಟಾರೆ ಮತದಾನವನ್ನು ಪರಿಗಣಿಸಿದಾಗ, ಮತಗಳಿಕೆಯ ಅಂತರದಲ್ಲಿ ಶೇ 1ಕ್ಕಿಂತ ಕಡಿಮೆ ಮತಗಳ ವ್ಯತ್ಯಾಸವಿದ್ದರೆ, ಬಡ ಮತದಾರರನ್ನು ಪರಿಗಣಿಸಿದಾಗ ಮತಗಳಿಕೆಯ ಅಂತರ ಶೇ 13ರಷ್ಟಿದೆ. ಮತದಾರರ ಅಂತಿಮ ತೀರ್ಪನ್ನು ನಿರ್ಣಯಿಸುವಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ಕಂಡುಬರುತ್ತದೆ. ಕರ್ನಾಟಕದ ರಾಜಕೀಯ ಪಕ್ಷಗಳ ಕಾರ್ಯತಂತ್ರವನ್ನು ಹೆಣೆಯುವವರಿಗೆ ಇದರಲ್ಲಿ ಮಹತ್ವದ ಪಾಠಗಳಿವೆ.

ಇನ್ನು ಕೊನೆಯ ಅಂಶ- ಮಹಿಳಾ ಮತ. ಲೋಕನೀತಿ- ಸಿಎಸ್‌ಡಿಎಸ್‌ನ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ 2017ರಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರ ಮತಗಳನ್ನು ತುಸು ಹೆಚ್ಚಿಗೆ ಗಳಿಸುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಯಶಸ್ವಿಯಾಗಿದ್ದವು. ಆದರೆ ಈ ಬಾರಿ ಮಹಿಳಾ ಮತದಾರರ ಆಶೀರ್ವಾದ ಪಡೆಯುವಲ್ಲಿ ಕಾಂಗ್ರೆಸ್‌ ಮತ್ತು ಪುರುಷ ಮತದಾರರಿಂದ ಜನಾದೇಶ ಪಡೆಯುವಲ್ಲಿ ಬಿಜೆಪಿ ಮುಂದಿವೆ. ಈ ಬಾರಿ ಬಿಜೆಪಿಯು ಪುರುಷರ ಮತಗಳಲ್ಲಿ ಶೇಕಡ 5ರಷ್ಟು ಕುಸಿತವನ್ನೂ ಮಹಿಳಾ ಮತಗಳಲ್ಲಿ ಶೇ 6ರಷ್ಟು ಕುಸಿತವನ್ನೂ ಕಂಡಿದೆ. ಕಾಂಗ್ರೆಸ್‌ನ ವಿಷಯಕ್ಕೆ ಬರುವುದಾದರೆ, ಪಕ್ಷವು ಹೆಚ್ಚುವರಿಯಾಗಿ ಶೇ 1ರಷ್ಟು ಪುರುಷರ ಮತಗಳ ಪಾಲನ್ನೂ ಶೇ 4ರಷ್ಟು ಮಹಿಳಾ ಮತಗಳ ನಿರ್ಣಾಯಕವಾದ ಪಾಲನ್ನೂ ಗಳಿಸಿದೆ. ಈ ಅಂಶವೂ ಪಕ್ಷದ ಗೆಲುವಿಗೆ ಕಾರಣವಾಗಿದೆ ಎಂದು ಚುನಾವಣಾ ವಿಶ್ಲೇಷಕರು ತೀರ್ಮಾನಿಸಿದ್ದಾರೆ.

ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ಉತ್ಸಾಹದಿಂದ ಚುನಾವಣಾ ಪ್ರಚಾರದ ಸಿದ್ಧತೆ ನಡೆಸುತ್ತಿರುವ ಈ ಸನ್ನಿವೇಶದಲ್ಲಿ, 2022ರ ಕೊನೆಯ ಚುನಾವಣೆ ಕಲಿಸಿರುವ ಈ ಎಲ್ಲಾ ಪಾಠಗಳು ಉಪಯುಕ್ತ ಒಳನೋಟಗಳನ್ನು ನೀಡಬಲ್ಲವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT