‘ಸಿಂಧೂರ ಕಾರ್ಯಾಚರಣೆ’ ಬಗ್ಗೆ ಭಾರತದ ನಿಲುವನ್ನು ವಿವರಿಸಲು ವಿದೇಶಗಳಿಗೆ ಕಳುಹಿಸಲಾಗಿದ್ದ, ಸರ್ವಪಕ್ಷಗಳ ಪ್ರಾತಿನಿಧ್ಯ ಹೊಂದಿರುವ ಏಳು ನಿಯೋಗಗಳು ತಮ್ಮ ಕೆಲಸ ಪೂರ್ಣಗೊಳಿಸಿವೆ. ಅವು ಭಾರತಕ್ಕೆ ಮರಳಿವೆ. ನಿಯೋಗಗಳಲ್ಲಿ ಇದ್ದ ಎಲ್ಲ ಸದಸ್ಯರನ್ನು ಭೇಟಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನಿಯೋಗಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದರ ಸುತ್ತಲಿನ ಬೆಳವಣಿಗೆಗಳ ಬಗ್ಗೆ– ಅಂದರೆ, ನಿಯೋಗಗಳನ್ನು ರಚಿಸಿದ ಪ್ರಕ್ರಿಯೆಯ ಬಗ್ಗೆ, ಅವುಗಳು ಮಾಡಬೇಕಿರುವ ಕಾರ್ಯಗಳನ್ನು ನಿಗದಿ ಮಾಡಿದ ಬಗೆಯ ಬಗ್ಗೆ, ಅವು ಚರ್ಚಿಸಬೇಕಿರುವ ವಿಷಯಗಳ ಕುರಿತು ಮಾಹಿತಿ ನೀಡಿದ ಬಗ್ಗೆ, ನಿಯೋಗಗಳಿಗೆ ನಿಗದಿ ಮಾಡಿದ ದೇಶಗಳಲ್ಲಿ ಅವು ಅನುಕೂಲಕರ ಸನ್ನಿವೇಶ ಇಲ್ಲದಿದ್ದರೂ ಸಭೆಗಳನ್ನು ನಡೆಸಿದ ಬಗ್ಗೆ ಹಾಗೂ ಸಾರ್ವಜನಿಕರ ಜೊತೆ ನಡೆಸಿದ ಸಂವಾದದ ಬಗ್ಗೆ, ನಿಯೋಗಗಳ ಭೇಟಿಯಿಂದ ಆಗುವ ವಿಸ್ತೃತ ಪರಿಣಾಮಗಳ ಬಗ್ಗೆ – ಪರಿಶೀಲನೆ ನಡೆಸಲು ಇದೊಂದು ಉತ್ತಮ ಸಮಯ.

ಈ ನಿಯೋಗಗಳ ಭೇಟಿಯ ಬಗ್ಗೆ ಭಾರತದಲ್ಲಿ ಸಾರ್ವಜನಿಕರ ಗಮನ ಇದ್ದಿದ್ದು ಬಹಳ ಗಮನಾರ್ಹವಾಗಿತ್ತು. ಹೀಗಾಗಿ, ‘ಸಂಸದೀಯ ಸ್ನೇಹಕೂಟ’ಗಳನ್ನು ರಚಿಸಲು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಆಲೋಚನೆ ನಡೆಸಿರುವುದರಲ್ಲಿ ಆಶ್ಚರ್ಯ ಮೂಡಿಸುವಂಥದ್ದು ಏನೂ ಇಲ್ಲ.

ಸರ್ವಪಕ್ಷಗಳ ಪ್ರಾತಿನಿಧ್ಯದ ಏಳು ನಿಯೋಗಗಳಲ್ಲಿ ಒಟ್ಟು 59 ಸದಸ್ಯರು ಇದ್ದರು. ಬೇರೆ ಬೇರೆ ಪಕ್ಷಗಳ ಸಂಸದರು, ರಾಜಕಾರಣಿಗಳು ಮತ್ತು ನಿವೃತ್ತ ರಾಜತಾಂತ್ರಿಕರು ಈ ನಿಯೋಗದ ಸದಸ್ಯರಾಗಿದ್ದರು. ಎರಡು ನಿಯೋಗಗಳಿಗೆ ಬಿಜೆಪಿ ನಾಯಕರ ನೇತೃತ್ವ ಇತ್ತು. ಇನ್ನೆರಡು ನಿಯೋಗಗಳಿಗೆ ಬಿಜೆಪಿಗೆ ಸೇರಿರದ, ಆದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್ಡಿಎ) ಭಾಗವಾಗಿರುವ ಪಕ್ಷಗಳ ನಾಯಕರ ನೇತೃತ್ವ ಇತ್ತು. ಇನ್ನುಳಿದ ಮೂರು ನಿಯೋಗಗಳ ನೇತೃತ್ವವನ್ನು ವಿರೋಧ ಪಕ್ಷಗಳ ಪ್ರಮುಖರು ವಹಿಸಿದ್ದರು.

ನಿಯೋಗ ರಚಿಸಲು ಮುಂದಡಿ ಇರಿಸಿದ ಕೇಂದ್ರ ಸರ್ಕಾರವು ನಿಯೋಗಗಳ ಮುಖ್ಯಸ್ಥರನ್ನು ಹಾಗೂ ನಿಯೋಗಗಳ ಸದಸ್ಯರನ್ನು ಆಯ್ಕೆ ಮಾಡುವಾಗ ತನ್ನದೇ ಆದ ಸ್ಪಷ್ಟ ತಾರ್ಕಿಕ ಕಾರಣಗಳನ್ನು ಹೊಂದಿತ್ತು. ತೃಣಮೂಲ ಕಾಂಗ್ರೆಸ್ ವಿಚಾರದಲ್ಲಿ, ಮೊದಲು ಆಯ್ಕೆ ಮಾಡಿದ್ದ ಪ್ರತಿನಿಧಿಯು ನಿಯೋಗದ ಭಾಗವಾಗಲು ನಿರಾಕರಿಸಿದರು. ಪಕ್ಷವು ಇನ್ನೊಬ್ಬರ ಹೆಸರನ್ನು ಸೂಚಿಸಿತು. ಹೀಗಾಗಿ ಆ ಪಕ್ಷದ ಪ್ರತಿನಿಧಿಯನ್ನು ಬದಲಾಯಿಸಲಾಯಿತು.

ನಿಯೋಗಗಳಲ್ಲಿ ಕಾಂಗ್ರೆಸ್ ಸದಸ್ಯರ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ದೊಡ್ಡ ವಿವಾದವೊಂದು ಸೃಷ್ಟಿಯಾಯಿತು. ಕಾಂಗ್ರೆಸ್ ಪಕ್ಷವು ನೀಡಿದ ಪಟ್ಟಿಯಲ್ಲಿ ಇದ್ದ ಪ್ರತಿನಿಧಿಗಳ ಪೈಕಿ ಒಬ್ಬರನ್ನು ಮಾತ್ರ ನಿಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಕಾಂಗ್ರೆಸ್ಸಿನ ಇನ್ನುಳಿದ ಸದಸ್ಯರು ಸರ್ಕಾರದ ಆಯ್ಕೆಯಾಗಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ನಿಯೋಗಗಳ ಕಾರ್ಯನಿರ್ವಹಣೆಯ ಮೇಲೆ ಯಾವುದೂ ಕೆಟ್ಟ ಪರಿಣಾಮ ಬೀರಲಿಲ್ಲ. ಇದರ ಶ್ರೇಯಸ್ಸು ಎಲ್ಲ ರಾಜಕೀಯ ಪಕ್ಷಗಳಿಗೆ ಸಲ್ಲಬೇಕು. ನಿಯೋಗಗಳ ಕೆಲವು ಸದಸ್ಯರು ಆಡಿದ ಮಾತುಗಳಿಗೆ, ಅವರು ಪ್ರತಿನಿಧಿಸುವ ಪಕ್ಷಗಳ ಕಡೆಯಿಂದ ಒಂದಿಷ್ಟು ಪ್ರತಿಕ್ರಿಯೆಗಳು ಬಂದವು. ಆದರೆ ಈ ಪ್ರತಿಕ್ರಿಯೆಗಳು ಇಡೀ ವಿಚಾರದ ಕೇಂದ್ರವೇನೂ ಅಲ್ಲ.

ಏಳು ನಿಯೋಗಗಳು ಭೇಟಿ ನೀಡಿದ ದೇಶಗಳ ಹೆಸರು ಗಮನಿಸಿದಾಗ, ಆದ್ಯತೆಗಳಲ್ಲಿ ಬಹಳ ಸ್ಪಷ್ಟವಾದ ವ್ಯತ್ಯಾಸ ಇದ್ದುದು, ಕಾರ್ಯತಂತ್ರದಲ್ಲಿ ಭಿನ್ನತೆ ಇದ್ದುದು ಗೊತ್ತಾಗುತ್ತದೆ. ಆ ನೆಲೆಯಲ್ಲಿಯೇ ನಿಯೋಗಗಳು ಭೇಟಿ ನೀಡಬೇಕಾದ ದೇಶಗಳನ್ನು ಅಂತಿಮಗೊಳಿಸಲಾಗಿತ್ತು. ನಿಯೋಗಗಳ ಸದಸ್ಯರು ಹಾಗೂ ಅವುಗಳ ನಾಯಕ ಯಾರು ಎಂಬುದನ್ನು ಅಂತಿಮಗೊಳಿಸುವಾಗ ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿತ್ತು. ನಿಯೋಗಗಳ ವಿದೇಶ ಭೇಟಿ ಶುರುವಾದ ನಂತರದಲ್ಲಿ, ನಿಯೋಗದಲ್ಲಿ ಕೆಲವು ಸದಸ್ಯರ ಉಪಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು, ಭೇಟಿಯ ಉದ್ದೇಶವನ್ನು ವಿವರಿಸಲಾಯಿತು. ಅದರಲ್ಲೂ ಮುಖ್ಯವಾಗಿ, ನಿಯೋಗದಲ್ಲಿನ ಸದಸ್ಯರ ಪ್ರಾತಿನಿಧ್ಯವು ಸಾರ್ವಜನಿಕರ ಜೊತೆಗಿನ ಸಂವಾದಗಳಲ್ಲಿ ಹಾಗೂ ಮಾಧ್ಯಮಗಳ ಜೊತೆಗಿನ ಚರ್ಚೆಯ ವೇಳೆ ನಿರೀಕ್ಷಿತ ಪರಿಣಾಮವನ್ನು ಉಂಟುಮಾಡಿದ್ದುದು ಸ್ಪಷ್ಟ.

ಏಳು ನಿಯೋಗಗಳು ಮಾಡಿರುವ ಕೆಲಸಗಳ ಬಗ್ಗೆ ಮಾಧ್ಯಮಗಳು ಮಾಡಿರುವ ವರದಿಗಳನ್ನು ಪರಿಶೀಲಿಸಿದರೆ, ಕೆಲವು ನಿಯೋಗಗಳ ಕೆಲಸಗಳ ಮೇಲೆ ಹೆಚ್ಚು ಗಮನ ಇತ್ತು ಎಂಬುದು ಗೊತ್ತಾಗುತ್ತದೆ. ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ದೇಶಗಳಿಗೆ ಭೇಟಿ ನೀಡಿದ ನಿಯೋಗವು ಹೆಚ್ಚಿನ ಗಮನವನ್ನು ಪಡೆದುಕೊಂಡಂತೆ ಕಾಣುತ್ತಿತ್ತು. ನಿಯೋಗದ ನಾಯಕತ್ವ ವಹಿಸಿದ್ದ ವ್ಯಕ್ತಿ ಹಾಗೂ ಆ ನಿಯೋಗ ಭೇಟಿ ಮಾಡಿದ ದೇಶಗಳು ಇದಕ್ಕೆ ಕಾರಣ ಇರಬಹುದು. ಇತರ ನಿಯೋಗಗಳು (ಯುರೋಪಿನ ಪಶ್ಚಿಮ ಭಾಗಕ್ಕೆ ಭೇಟಿ ನೀಡಿದ ನಿಯೋಗ ಹೊರತುಪಡಿಸಿ) ಕಡಿಮೆ ಪ್ರಮಾಣದಲ್ಲಿ ಮಾಧ್ಯಮಗಳ ಗಮನ ಸೆಳೆದವು. ಆದರೆ ಈ ನಿಯೋಗಗಳ ಕೆಲವು ಸದಸ್ಯರ ಸಾರ್ವಜನಿಕ ಹೇಳಿಕೆಗಳು ಮಾಧ್ಯಮಗಳ ಗಮನ ಪಡೆದವು.

ಸರ್ವಪಕ್ಷಗಳ ನಿಯೋಗಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಆ ದೇಶಗಳಲ್ಲಿ ಭಾರತದ ಕೇಂದ್ರ ಸಚಿವರು ಪರ್ಯಾಯ ಸಭೆಗಳನ್ನು ಆಯೋಜಿಸಿದ್ದರು. ಇದು ಬಹಳ ಕುತೂಹಲಕಾರಿ ಅಂಶ. ಜಾಗತಿಕ ಮಟ್ಟದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ನಿಯೋಗಗಳ ಭೇಟಿಯ ಸಂದರ್ಭದಲ್ಲಿಯೇ ಸಚಿವರು ಸಭೆಗಳನ್ನು ಆಯೋಜಿಸಿದ್ದುದು ಕಾಕತಾಳೀಯವೇ ಎಂಬುದು ಸ್ಪಷ್ಟವಾಗಿಲ್ಲ. ಮೂವತ್ತೆರಡು ದೇಶಗಳಿಗೆ ಭೇಟಿ ನೀಡಿದ ನಿಯೋಗಗಳು ಯಾರನ್ನು ಭೇಟಿ ಮಾಡಿದವು ಎಂಬ ವಿಚಾರದಲ್ಲಿಯೂ ವ್ಯತ್ಯಾಸಗಳು ಕಂಡುಬಂದವು.

ನಿಯೋಗಗಳಲ್ಲಿನ ಬಹುಪಾಲು ಸದಸ್ಯರು ಸಂಸದರಾಗಿದ್ದರು. ಹೀಗಾಗಿ, ನಿಯೋಗಗಳು ತಾವು ಭೇಟಿ ಮಾಡಿದ ದೇಶಗಳ ಸಂಸದರ ಜೊತೆ ಮಾತುಕತೆ ನಡೆಸಿದವು. ನಿಯೋಗಗಳು ಭೇಟಿ ಮಾಡಿದ ದೇಶಗಳಲ್ಲಿ ಮಾತುಕತೆಗೆ ಸಿಕ್ಕ ಸಚಿವರ ಹಿರಿತನದಲ್ಲಿಯೂ ವ್ಯತ್ಯಾಸಗಳು ಇದ್ದವು. ನಿಯೋಗಗಳ ಸದಸ್ಯರು ಹೆಚ್ಚಿನ ದೇಶಗಳಲ್ಲಿ ಭಾರತ ಮೂಲದವರ ಜೊತೆ ಸಂವಾದ ನಡೆಸಿದರು. ಭಾರತೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಹಾಗೂ ಬೆಂಬಲ ಗಿಟ್ಟಿಸಲು ಅಗತ್ಯವಿರುವ ಜಾಲವೊಂದನ್ನು ಕಟ್ಟುವ ವಿಚಾರದಲ್ಲಿ ಈ ಬಗೆಯ ಮಾತುಕತೆಗಳು ಮಹತ್ವದ್ದಾಗಿ ಕಂಡುಬಂದವು.

ನಿಯೋಗಗಳು ತಮ್ಮ ಭೇಟಿಯನ್ನು ಪೂರ್ಣಗೊಳಿಸಿ, ಸ್ವದೇಶಕ್ಕೆ ಮರಳಿದ ನಂತರದಲ್ಲಿ ಅವುಗಳಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸುವ ಅವಕಾಶ ಇತ್ತು. ಮೋದಿ ಅವರು ನಿಯೋಗಗಳ ಸದಸ್ಯರಿಗೆ ಔತಣಕೂಟ ಆಯೋಜಿಸಿದ್ದರು. ಇಲ್ಲಿ ಮಾಧ್ಯಮಗಳ ಗಮನವು ವಿವಿಧ ನಿಯೋಗಗಳಲ್ಲಿ ಇದ್ದ ಕಾಂಗ್ರೆಸ್ ಪಕ್ಷದ ಸದಸ್ಯರ ಜೊತೆ ಮೋದಿ ಅವರು ಯಾವ ಬಗೆಯಲ್ಲಿ ಚರ್ಚೆ ನಡೆಸಿದರು ಎಂಬುದರ ಮೇಲೆ ಇತ್ತು! ಮಾಧ್ಯಮಗಳ ಕಣ್ಣಿನ ಆಚೆಗೆ, ನಿಯೋಗಗಳ ಸದಸ್ಯರಿಗೆ ಪ್ರಧಾನಿ ಮೋದಿ ಅವರ ಜೊತೆ ಹಾಗೂ ಸಂಪುಟದ ಹಿರಿಯ ಸದಸ್ಯರ ಜೊತೆ ಇನ್ನಷ್ಟು ಮಾತುಕತೆ ನಡೆಸುವ ಅವಕಾಶ ಇತ್ತು ಎಂಬುದು ಖಚಿತ.

ತಾವು ನಡೆಸಿದ ಸಭೆಗಳ ಬಗ್ಗೆ ಮಾಹಿತಿ ಒದಗಿಸಲು ಏಳೂ ನಿಯೋಗಗಳ ನಾಯಕರು ಒಟ್ಟಾಗಿ ಸೇರಿ ಒಂದು ಪತ್ರಿಕಾಗೋಷ್ಠಿ ನಡೆಸಿದ್ದಿದ್ದರೆ ಇನ್ನಷ್ಟು ಉತ್ತಮವಾಗಿತ್ತು. ಸರ್ವಪಕ್ಷಗಳ ನಿಯೋಗಗಳು ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿದ್ದುದು ಪ್ರಮುಖ ವಿದ್ಯಮಾನ ಹೌದಾದರೂ ಮುಂದಿನ ದಿನಗಳಲ್ಲಿಯೂ ಇಂತಹ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಬಹುದು.

ಇಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸುವುದು ಬಹಳ ಮುಖ್ಯವಾಗುತ್ತದೆ. ವಿದೇಶಗಳಲ್ಲಿ ಇದ್ದಾಗ ತಾವು ಪ್ರತಿನಿಧಿಸುತ್ತಿದ್ದುದು ಭಾರತವನ್ನು, ‘ಸಿಂಧೂರ ಕಾರ್ಯಾಚರಣೆ’ಯ ಪರಿಣಾಮಗಳ ಬಗ್ಗೆ ಎಲ್ಲರೂ ಒಂದಾಗಿ ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿತ್ತು ಎಂಬುದನ್ನು ನಿಯೋಗಗಳ ಸದಸ್ಯರು ಬಹಳ ಸ್ಪಷ್ಟವಾಗಿ ತಿಳಿಸಿದ್ದರು. ನಿಯೋಗಗಳ ಕೆಲಸವು ಪೂರ್ಣಗೊಂಡು ಭಾರತಕ್ಕೆ ಹಿಂದಿರುಗಿದ ನಂತರದಲ್ಲಿ ತಮ್ಮ ಪಕ್ಷಗಳನ್ನು ಪ್ರತಿನಿಧಿಸುವ ಕೆಲಸವು ಹಿಂದೆ ಇದ್ದಂತೆಯೇ ನಡೆಯಲಿದೆ ಎಂಬುದನ್ನು ಕೂಡ ಕೆಲವು ಸದಸ್ಯರು ಹೇಳಿದರು.

ಸರ್ವಪಕ್ಷಗಳ ನಿಯೋಗದ ಸದಸ್ಯರಾಗಿ ಹೊರದೇಶಗಳಲ್ಲಿ ಇದ್ದಾಗ ಎಲ್ಲರಿಗೂ ಒಪ್ಪಿತವಾದ ನಿಲುವನ್ನು ಅನುಸರಿಸುವುದು ಹಾಗೂ ಆಂತರಿಕ ರಾಜಕಾರಣದಲ್ಲಿ ತಮ್ಮ ರಾಜಕೀಯ ಪಕ್ಷಗಳ ಕಾರ್ಯಸೂಚಿಗೆ ಅನುಗುಣವಾಗಿ ವರ್ತಿಸುವುದು ಮುಂದಿನ ದಿನಗಳಲ್ಲಿ ಸ್ವೀಕೃತ ನಿಯಮ ಆಗಲಿದೆಯೇ? ಆ ರೀತಿ ಆದಲ್ಲಿ, ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅವುಗಳ ಮುಖಂಡರು ಈ ವ್ಯತ್ಯಾಸವನ್ನು ಗುರುತಿಸಬೇಕಾಗುತ್ತದೆ, ಗೌರವಿಸಬೇಕಾಗುತ್ತದೆ.

ಈ ರೀತಿ ಆದಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ನಿಲುವುಗಳಲ್ಲಿನ ಭಿನ್ನತೆಗಳನ್ನು ಗುರುತಿಸದೇ ಇರುವುದರಿಂದ ಆಗುವ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ. ಆದರೆ ತೀವ್ರವಾಗಿ ಧ್ರುವೀಕೃತ ಆಗುತ್ತಿರುವ ರಾಜಕೀಯ ವ್ಯವಸ್ಥೆಯಲ್ಲಿ ಇಂಥದ್ದೊಂದು ಸಾಧ್ಯವೇ? ಅದಕ್ಕಿಂತ ಹೆಚ್ಚಾಗಿ, ಇಂಥ ನಿಲುವು ಬಹುಕಾಲ ಉಳಿಯುತ್ತದೆಯೇ? ಈ ಬಗೆಯಲ್ಲಿ ಭಿನ್ನತೆಯನ್ನು ಕಾಪಾಡಿಕೊಳ್ಳುವುದನ್ನು ಸಲೀಸಾಗಿ ಮರೆಯುವ ರಾಜಕೀಯ ಮುಖಂಡರು, ರಾಜಕೀಯ ಲಾಭ ಪಡೆದುಕೊಳ್ಳುವ ಆಸೆಯನ್ನು ಮೀರಿ ನಿಲ್ಲುತ್ತಾರೆಯೇ? ಅದರಲ್ಲೂ, ರಾಜಕೀಯವಾಗಿ ತಮಗೆ ಅನುಕೂಲ ಆಗುತ್ತದೆ ಎಂಬುದು ಗೊತ್ತಾದಾಗಲೂ ಅವರು ಆ ಒತ್ತಡವನ್ನು ಮೀರುವರೇ? ಮುಂದಿನ ದಿನಗಳಲ್ಲಿ ರಾಜಕೀಯವು ಯಾವ ಗತಿಯಲ್ಲಿ ಸಾಗಲಿದೆ ಎಂಬುದು ಈ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.