ಗುರುವಾರ , ನವೆಂಬರ್ 26, 2020
19 °C
ಬಿಹಾರ ಚುನಾವಣೆ ಫಲಿತಾಂಶವು ರಾಷ್ಟ್ರ ರಾಜಕಾರಣವನ್ನು ಪ್ರಭಾವಿಸಲಿದೆ

ನಾಟಕೀಯ ಬೆಳವಣಿಗೆಗೆ ಅಣಿ?

ಸಂದೀಪ್‌ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಬಿಹಾರದಲ್ಲಿ ಒಂದು ಹಂತದ ಚುನಾವಣೆ ಮುಗಿದಿದೆ. ಉಳಿದ ಎರಡು ಹಂತಗಳ ಚುನಾವಣೆ ಮುಂದಿನ ವಾರ ನಡೆಯಲಿದೆ. ಈ ಚುನಾವಣೆಯು ಹಲವಾರು ಕಾರಣಗಳಿಗಾಗಿ ದೇಶದ ಗಮನ ಸೆಳೆದಿದೆ. ಮೊದಲನೆಯದಾಗಿ, ಇದು ಜಗತ್ತನ್ನೆಲ್ಲಾ ವ್ಯಾಪಿಸಿದ ಸೋಂಕು ಉದ್ಭವವಾದ ಮೇಲೆ ದೇಶದಲ್ಲಿ ನಡೆಯುತ್ತಿರುವ ಮೊದಲನೆಯ ಚುನಾವಣೆ. ಹೀಗಾಗಿ, ಇದು ರೋಗದ ಸೋಂಕಿಗೆ ಹಾಗೂ ಸರ್ಕಾರ ಅದಕ್ಕೆ ಸ್ಪಂದಿಸಿದ ರೀತಿಯ ಬಗ್ಗೆ ಜನಸಮುದಾಯದ ನಿಲುವೇನು ಎಂಬುದರ ಸೂಚಕವನ್ನು ಒದಗಿಸುತ್ತದೆ.

ಎರಡನೆಯದಾಗಿ, ಬಿಹಾರವು ಈಗ ತಾಯ್ನೆಲಕ್ಕೆ ಮರಳಿದ ವಲಸಿಗರನ್ನು ಹೆಚ್ಚಾಗಿ ಹೊಂದಿರುವ ರಾಜ್ಯ. ಅಂದರೆ, ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದ ಬಿಹಾರದ ವಲಸಿಗರು ಕೋವಿಡ್ ಕಾರಣದಿಂದಾಗಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸ್ವಸ್ಥಾನಗಳಿಗೆ ವಾಪಸಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಉಪಕ್ರಮಗಳಿಂದ ಅವರಿಗಾದ ಅನುಭವಗಳು ಅವರ ಮತಚಲಾವಣೆ ವೈಖರಿ ಮೇಲೆ ಮಹತ್ವದ ಪ್ರಭಾವ ಬೀರುವ ನಿರೀಕ್ಷೆ ಇದೆ. ಇದರ ಜೊತೆಗೆ ಬಿಹಾರವು ಎರಡು ಪ್ರಮುಖ ಮೈತ್ರಿಕೂಟಗಳ ನಡುವಿನ ತುರುಸಿನ ಸ್ಪರ್ಧೆಗೆ ಸನ್ನದ್ಧವಾಗಿದೆ. ಒಂದೆಡೆ, ಬಿಜೆಪಿ ಮತ್ತು ಜೆಡಿಯು ಪ್ರಮುಖ ಪಕ್ಷಗಳಾಗಿರುವ ಎನ್‌ಡಿಎ ಇದ್ದರೆ, ಮತ್ತೊಂದೆಡೆ, ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ (ಎಂಜಿಬಿ) ಇದೆ. ಇದರ ಜೊತೆಗೆ ಮೂರನೇ ಮೈತ್ರಿಕೂಟವೊಂದು ಹೊರಹೊಮ್ಮುತ್ತಿರುವುದು ಹಾಗೂ ಎಲ್‌ಜೆಪಿ ಉಪಸ್ಥಿತಿಯು ಗಮನಿಸಬೇಕಾದ ಪ್ರಮುಖ ಸಂಗತಿಯಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಎನ್‌ಡಿಎ ಭಾಗವಾಗಿರುವ ಎಲ್‌ಜೆಪಿಯು ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವಾರ ಪ್ರಕಟಗೊಂಡ ಲೋಕನೀತಿ- ಸಿಎಸ್‌ಡಿಎಸ್ ಜನಮತಾಭಿಪ್ರಾಯವು ಬಿಹಾರ ರಾಜಕಾರಣದಲ್ಲಿನ ಆಸಕ್ತಿಕರ ಸ್ಥಿತಿಗತಿಗಳನ್ನು ತೆರೆದಿಟ್ಟಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನಪ್ರಿಯತೆಯು ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವುದನ್ನು ಇದು ತೋರಿಸುವಂತೆ ಕಾಣುತ್ತಿದೆ. ಮುಖ್ಯಮಂತ್ರಿಯಾಗಿ ಯಾರಿಗೆ ಆದ್ಯತೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರ ನಡುವಿನ ಅಂತರ ಶೇಕಡ 5ರಷ್ಟಕ್ಕೆ ಇಳಿದಿದೆ. ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಸಲ, ಈಗಿನ ಸರ್ಕಾರಕ್ಕೆ ಮತ್ತೆ ಅಧಿಕಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿರುವವರ ಸಂಖ್ಯೆಯು ಮತ್ತೆ ಅಧಿಕಾರ ನೀಡುತ್ತೇವೆ ಎನ್ನುವವರ ಸಂಖ್ಯೆಗಿಂತ ಅಧಿಕವಾಗಿರುವುದು ನಿತೀಶ್ ಅವರಿಗೆ ಚಿಂತೆ ತಂದಿರುವ ಅಂಶವಾಗಿದೆ. ಈ ವ್ಯತ್ಯಾಸದ ಶೇಕಡಾವಾರು ಕೂಡ ಶೇ 5ರಷ್ಟು ಇದೆ. ಪ್ರತಿಕ್ರಿಯಿಸಿದ ಪ್ರತೀ ಹತ್ತು ಮತದಾರರ ಪೈಕಿ ಇಬ್ಬರು ಈ ಕುರಿತು ಇನ್ನೂ ನಿರ್ಧರಿಸಿಲ್ಲ ಎಂಬುದು ಗಮನಾರ್ಹ ಅಂಶ.

ಎನ್‌ಡಿಎ ಮೈತ್ರಿಕೂಟದೊಳಗೆ ಬಿಜೆಪಿ ಬೆಂಬಲಿಗರ ಪೈಕಿ ನಿತೀಶ್ ಅವರೆಡೆಗಿನ ಬೆಂಬಲ ಕ್ಷಿಪ್ರವಾಗಿ ಕುಂದುತ್ತಿದೆ. ಜನಮತಾಭಿಪ್ರಾಯದ ಪ್ರಕಾರ, ಅರ್ಧಕ್ಕಿಂತ ಕೊಂಚವೇ ಹೆಚ್ಚು ಜನ ಮಾತ್ರ ನಿತೀಶ್ ಅವರನ್ನು ಸಮ್ಮಿಶ್ರ ಸರ್ಕಾರದ ನಾಯಕನನ್ನಾಗಿಸುವುದಕ್ಕೆ ಒಲವು ತೋರಿದ್ದಾರೆ. ಬಿಜೆಪಿ ಬೆಂಬಲಿಗರಲ್ಲಿ ಪ್ರತೀ ಹತ್ತರಲ್ಲಿ ಮೂವರು ನಿತೀಶ್ ಅವರು ಅಭಿವೃದ್ಧಿ ಬಗ್ಗೆ ಗಮನ ಕೇಂದ್ರೀಕರಿಸಿದ್ದರೂ ರಾಜ್ಯಕ್ಕೆ ಹೊಸ ನಾಯಕತ್ವದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎನ್‌ಡಿಎ ಬೆಂಬಲಿಗರ ಪೈಕಿ ಪ್ರತೀ ಹತ್ತರಲ್ಲಿ ನಾಲ್ಕಕ್ಕೂ ಹೆಚ್ಚು ಜನರು, ಕೇಂದ್ರ ಸರ್ಕಾರ ಮಾಡಿರುವ ಕೆಲಸಗಳನ್ನು ನೋಡಿಕೊಂಡು ತಾವು ಎನ್‌ಡಿಎಗೆ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ಇವರಲ್ಲಿ ಮೂರನೇ ಒಂದರಷ್ಟು ಜನ ಮಾತ್ರ ರಾಜ್ಯ ಸರ್ಕಾರ ಮಾಡಿರುವ ಕೆಲಸಗಳನ್ನು ನೋಡಿ ಎನ್‌ಡಿಎಗೆ ಮತ ಹಾಕುವುದಾಗಿ ಹೇಳಿದ್ದಾರೆ. ಇದಲ್ಲದೆ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಗಳಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿಯ ಮೂರನೇ ಎರಡರಷ್ಟು ಸಂಖ್ಯೆಯ ಬೆಂಬಲಿಗರು ಮಾತ್ರ ಜೆಡಿಯು ಅಭ್ಯರ್ಥಿಗೆ ಮತ ಹಾಕುವ ಇಚ್ಛೆ ವ್ಯಕ್ತಪಡಿಸಿರುವುದು ಎನ್‌ಡಿಎಯನ್ನು ಚಿಂತೆಗೀಡುಮಾಡಿರುವ ಮತ್ತೊಂದು ವಿಷಯವಾಗಿದೆ.

ಮಹಾಘಟಬಂಧನದ ಒಳಗೂ ಸವಾಲುಗಳಿವೆ. ಕಾಂಗ್ರೆಸ್ ಪಕ್ಷವು ಈ ಕೂಟದ ಬಲಗುಂದಲು ಪ್ರಮುಖ ಕಾರಣವೆಂಬಂತೆ ಕಂಡುಬರುತ್ತಿದೆ. ಕಾಂಗ್ರೆಸ್ ಬೆಂಬಲಿಗರಲ್ಲಿ ಅರ್ಧದಷ್ಟು ಮಂದಿ ಮಾತ್ರ ಈ ಕೂಟದ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಬದ್ಧತೆ ವ್ಯಕ್ತ
ಪಡಿಸಿದ್ದಾರೆ. ಉಳಿದ ಅರ್ಧದಷ್ಟು ಬೆಂಬಲಿಗರು ತಾವು ಮಹಾಘಟಬಂಧನಕ್ಕೆ ಸೇರದ ಅಭ್ಯರ್ಥಿಗೆ ಮತ ಹಾಕುವ ಸಾಧ್ಯತೆ ಇದೆ ಎಂದಿದ್ದಾರೆ. ಯುವಜನರ ಮತ ಚಲಾವಣೆಯು ಈ ಚುನಾವಣೆಯಲ್ಲಿ ಮಹತ್ವದ ಪರಿಣಾಮ ಬೀರಲಿರುವ ಮತ್ತೊಂದು ಅಂಶವಾಗಿರುತ್ತದೆ. ಲೋಕನೀತಿ-ಸಿಎಸ್‌ಡಿಎಸ್ ಜನಮತಾಭಿಪ್ರಾಯ ಸಂಗ್ರಹಿಸಿದ ಸಮಯದಲ್ಲಿನ ಸ್ಥಿತಿಗತಿಯನ್ನು ಗಮನಿಸಿದರೆ, ಯುವಜನರ ಮತಗಳು ಎನ್‌ಡಿಎ, ಎಂಜಿಬಿ ಹಾಗೂ ಇತರರ ನಡುವೆ ಮೂರು ಭಾಗಗಳಾಗಿ ವಿಭಜನೆಗೊಳ್ಳುವ ಲಕ್ಷಣಗಳು ಕಂಡುಬಂದಿವೆ.

ರಾಜ್ಯದ ಚುಕ್ಕಾಣಿ ಹಿಡಿದಿರುವ ಸರ್ಕಾರದ ವಿರುದ್ಧ ಆಡಳಿತಾರೂಢ ಅಲೆ ಕಂಡುಬರುತ್ತಿರುವ ಈ ಸನ್ನಿವೇಶದಲ್ಲಿ ಬಿಜೆಪಿ ಹಾಗೂ ಅದರ ಕೇಂದ್ರ ನಾಯಕತ್ವವು ಎನ್‌ಡಿಎಯನ್ನು ಸಂಭಾವ್ಯ ಸಂಕಷ್ಟದಿಂದ ಪಾರು ಮಾಡಿ ಪುನಃ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಲಿವೆಯೇ? ಇದು, ಈಗಿನ ಪ್ರಶ್ನೆಯಾಗಿದೆ. ಎನ್‌ಡಿಎ, ಮತದಾರರನ್ನು ತನ್ನತ್ತ ಸೆಳೆಯಲು ಪ್ರಧಾನಿಯವರನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇ ಆದರೆ, ಅವರು ಚಿರಾಗ್ ಪಾಸ್ವಾನ್ ಮತ್ತು ಎಲ್‌ಜೆಪಿ ಪಾತ್ರದ ಬಗ್ಗೆ ಯಾವ ಪ್ರಸ್ತಾಪವನ್ನೂ ಮಾಡುತ್ತಿಲ್ಲ. ಅವರೆಲ್ಲರೂ ನಿತೀಶ್ ಅವರನ್ನೇ ಬೆಂಬಲಿಸುತ್ತಿದ್ದಾರೆ. ಆದರೆ, ಇದೇ ಮನಃಸ್ಥಿತಿಯು ಬಿಜೆಪಿ ನಿಷ್ಠ ಮತದಾರರಲ್ಲೂ ಕಂಡುಬರಲಿದೆಯೇ ಎಂಬುದನ್ನು ಆಸಕ್ತಿಯಿಂದ ಕಾದು ನೋಡಬೇಕಾಗಿದೆ. ಬಿಜೆಪಿ ಮತ್ತು ಜೆಡಿಯು ಕ್ಷೇತ್ರಗಳ ಸಂಖ್ಯೆಯನ್ನು ಸಮಾನವಾಗಿ ಹಂಚಿಕೊಂಡು ಸ್ಪರ್ಧಿಸುತ್ತಿವೆ. ಹೀಗಾಗಿ, ಈ ಎರಡೂ ಪಕ್ಷಗಳು ಅಂತಿಮವಾಗಿ ಎಷ್ಟು ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಲಿವೆ ಎಂಬುದು ಬಲು ಮುಖ್ಯವಾಗುತ್ತದೆ. ಒಂದೊಮ್ಮೆ ಬಿಜೆಪಿ ಗೆಲ್ಲುವ ಸ್ಥಾನಗಳ ಸಂಖ್ಯೆ ಜೆಡಿಯು ಸ್ಥಾನಗಳಿಗಿಂತ ಹೆಚ್ಚಾದರೆ, ಆಗ ಚುನಾವಣೋತ್ತರ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆಗೆ ಆಗ್ರಹ ಕೇಳಿಬರಲಿದೆಯೇ? ಈಗ ಬಿಜೆಪಿಯು ಔಪಚಾರಿಕ ವಿಧಿ ಎಂಬಂತೆ ನಿತೀಶ್ ಅವರ ನಾಯಕತ್ವಕ್ಕೆ ಬದ್ಧತೆಯನ್ನು ವ್ಯಕ್ತಪಡಿಸುತ್ತಿದೆಯಾದರೂ ಚುನಾವಣೋತ್ತರ ಸನ್ನಿವೇಶದಲ್ಲಿ ನಾಟಕೀಯ ಬದಲಾವಣೆ ಕಂಡುಬರಬಹುದು.

ಮತ್ತೊಂದೆಡೆ, ಆರ್‌ಜೆಡಿ ನೇತೃತ್ವದ ಮಹಾಘಟಬಂಧನವು ತೇಜಸ್ವಿ ಅವರನ್ನೇ ವಿಪರೀತವಾಗಿ ಅವಲಂಬಿಸಿದೆ. ತೇಜಸ್ವಿ ಅವರೆಡೆಗೆ ಯುವಜನರ ಬೆಂಬಲ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಮತದಾರರ ವಯಸ್ಸು ಹೆಚ್ಚುತ್ತಾ ಹೋದಂತೆ ಆ ಜನವರ್ಗದಲ್ಲಿ ಈ ಮೈತ್ರಿಕೂಟದ ಬಗ್ಗೆ ಯಾವ ಉತ್ಸಾಹವೂ ಕಂಡುಬರುತ್ತಿಲ್ಲ. ಯುವ ತಲೆಮಾರಿನವರು ಲಾಲೂ ಪ್ರಸಾದ್‌, ರಾಬ್ಡಿ ದೇವಿ ಅವರ ಆಡಳಿತ ಅವಧಿಯ ದಿನಗಳ ಅನುಭವ ಕಂಡವರಾಗಿಲ್ಲದಿರುವುದು ಇದಕ್ಕೆ ಕಾರಣ ಇರಬಹುದು. ಆದರೆ ವಯಸ್ಸಾದವರು ಆರ್‌ಜೆಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಎಂದರೆ ಹೇಗಿತ್ತು ಎಂಬುದನ್ನು ಪ್ರತ್ಯಕ್ಷ ಅನುಭವಿಸಿದವರಾಗಿದ್ದಾರೆ. ಎನ್‌ಡಿಎ ಮತ್ತು ಆರ್‌ಜೆಡಿ ನೇತೃತ್ವದ ಮೈತ್ರಿಕೂಟಗಳಿಗೆ ಹೊರತಾದ ರಾಜಕೀಯ ಶಕ್ತಿಗಳ ಪಾತ್ರವು ಈ ಚುನಾವಣೆಯಲ್ಲಿ ಮಹತ್ವದ್ದಾಗಿರುತ್ತದೆ.

ಎಲ್‌ಜೆಪಿ, ಎಐಎಂಐಎಂ, ಆರ್‌ಎಲ್ಎಸ್‌ಪಿ (ಉಪೇಂದ್ರ ಕುಶ್ವಾಹ) ಮತ್ತು ಬಿಎಸ್‌ಪಿ ತಮ್ಮದೇ ಪ್ರಮುಖ ಪ್ರಭಾವಿ ನೆಲೆಗಳನ್ನು ಹೊಂದಿರುವ ಪಕ್ಷಗಳಾಗಿವೆ. ಇವುಗಳು ಎನ್‌ಡಿಎ ಅಥವಾ ಮಹಾಘಟಬಂಧನದ ಸಾಧ್ಯತೆಗಳನ್ನು ಕಸಿದುಕೊಳ್ಳಲಿವೆಯೇ ಎಂಬುದು ಕಾದು ನೋಡಬೇಕಾದ ಆಸಕ್ತಿಯ ಸಂಗತಿಯಾಗಿದೆ.

ಅಧಿಕಾರಕ್ಕಾಗಿ ಸೆಣಸಾಟ ಇನ್ನೂ ಮುಕ್ತವಾಗಿದೆ. ಈ ಹಂತದಲ್ಲಿ ಎನ್‌ಡಿಎಗೆ ಒಂದಿಷ್ಟು ಹೆಚ್ಚಿನ ಅವಕಾಶಗಳಿವೆ ಎನ್ನಿಸುತ್ತಿದೆ. ಆದರೂ ಮುಂದಿನ ಪ್ರಚಾರಾಂದೋಲನದ ವೈಖರಿಯು ಇದನ್ನು ಬದಲಾಯಿಸಬಹುದು. ಬಿಹಾರ ಚುನಾವಣೆ ಫಲಿತಾಂಶವು ರಾಷ್ಟ್ರ ರಾಜಕಾರಣದ ಮೇಲೆ ಪ್ರಮುಖವಾದ ರೀತಿಯಲ್ಲಿ ಪ್ರಭಾವಿಸುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಚುನಾವಣಾ ಫಲಿತಾಂಶ ಹಾಗೂ ಆನಂತರದ ಬೆಳವಣಿಗೆಗಳು ಎನ್‌ಡಿಎ ಸ್ವರೂಪ ಹಾಗೂ ಸಂರಚನೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆಗಳಿವೆ. ಹಾಗೆಯೇ, ಆರ್‌ಜೆಡಿ ಚುನಾವಣಾ ಸಾಧನೆಯು ರಾಷ್ಟ್ರ ಮಟ್ಟದಲ್ಲಿ ಎನ್‌ಡಿಎ ವಿರೋಧಿ ಮೈತ್ರಿಕೂಟ ಹೊರಹೊಮ್ಮುವುದರ ಬಗ್ಗೆ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು