ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ | ಚುನಾವಣೆ: ಬಿಜೆಪಿಯ ಸವಾಲುಗಳು ಏನು?

ಬಿಜೆಪಿ – ಕಾಂಗ್ರೆಸ್ ನಡುವೆ ರಾಜ್ಯದಲ್ಲಿ ನೇರ ಹಣಾಹಣಿ ಇರಲಿದೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ
Last Updated 4 ಜುಲೈ 2022, 19:30 IST
ಅಕ್ಷರ ಗಾತ್ರ

ಬಿಜೆಪಿಯು ದಕ್ಷಿಣ ಭಾರತದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವ ಯತ್ನಕ್ಕೆ ಮುಂದಾಗಿರುವುದು ಹೈದರಾಬಾದ್‌ನಲ್ಲಿ ಭಾನುವಾರ ಮುಕ್ತಾಯವಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸ್ಪಷ್ಟವಾಗಿದೆ. ‘ಡಬಲ್ ಎಂಜಿನ್’ ಸರ್ಕಾರದ ಪ್ರಯೋಜನಗಳ ಬಗ್ಗೆ ಪಕ್ಷದ ನಾಯಕತ್ವವು ಮತ್ತೆ ಮತ್ತೆ ಮಾತನಾಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಗಟ್ಟಿ ನೆಲೆಯನ್ನು ಕಂಡುಕೊಂಡಿತು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಪೂರ್ವ ಹಾಗೂ ಪೂರ್ವಾಂಚಲ ರಾಜ್ಯಗಳಲ್ಲಿ ನೆಲೆ ಗಟ್ಟಿಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ದಕ್ಷಿಣದ ರಾಜ್ಯಗಳತ್ತ ಗಮನಹರಿಸುವುದು ಪಕ್ಷದ ಈಗಿನ ಕಾರ್ಯತಂತ್ರ ಎಂಬುದು ಸ್ಪಷ್ಟ. ವಿಂಧ್ಯ ಪರ್ವತದ ದಕ್ಷಿಣ ಭಾಗದಲ್ಲಿರುವ ಕರ್ನಾಟಕ, ತೆಲಂಗಾಣದಲ್ಲಿ 2024ರ ಲೋಕಸಭಾ ಚುನಾವಣೆಗೂ ಮೊದಲು ವಿಧಾನಸಭಾ ಚುನಾವಣೆ ನಡೆಯಲಿದೆ.

ಒಂದು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವ ಭರವಸೆ ಬಿಜೆಪಿಯಲ್ಲಿದೆ. ಇನ್ನೊಂದು ರಾಜ್ಯದಲ್ಲಿ ಅಧಿಕಾರವನ್ನು ಕಸಿದುಕೊಳ್ಳಲು ಪಕ್ಷವು ಎಲ್ಲ ಯತ್ನ ನಡೆಸಿದೆ. ಕರ್ನಾಟಕದಲ್ಲಿನ ಚುನಾವಣಾ ಸಮರಕ್ಕೆ ಒಂದು ವರ್ಷವೂ ಉಳಿದಿಲ್ಲ. ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಬಲ್ಲೆ ಎಂಬುದನ್ನು ತೋರಿಸಿಕೊಡುವುದು ಬಿಜೆಪಿಯ ಪಾಲಿಗೆ ಮಹತ್ವದ್ದಾಗಲಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಕರ್ನಾಟಕದಲ್ಲಿ ಮಾತ್ರ. ವಿಧಾನಸಭಾ ಚುನಾವಣೆ
ಗಳಲ್ಲಿ ಪಕ್ಷವು ಸರಳ ಬಹುಮತವನ್ನು ಪಡೆದೇ ಇರಲಿಲ್ಲ ಎಂಬುದು ನಿಜವಾದರೂ, ಇಲ್ಲಿ ಅಧಿಕಾರ ಹಿಡಿಯಲು ಪಕ್ಷಕ್ಕೆ ಸಾಧ್ಯವಾಗಿದೆ. 2004ರ ಚುನಾವಣೆಯ ನಂತರ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿದ ಪರಿಣಾಮವಾಗಿ ಬಿಜೆಪಿಗೆ ಅಧಿಕಾರ ಹಿಡಿಯಲು ಆಗಲಿಲ್ಲ. 2008ರಲ್ಲಿ ಪಕ್ಷವು ಪಕ್ಷೇತರರ ನೆರವು ಪಡೆದು ಸರ್ಕಾರ ರಚಿಸಿತು. 2018ರಲ್ಲಿ ಸರಳ ಬಹುಮತದ ಹತ್ತಿರ ಬಂದರೂ, ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡಲು ಆಗಲಿಲ್ಲ. ಆಗ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲವು ಶಾಸಕರು ರಾಜೀನಾಮೆ ನೀಡಿದ ಕಾರಣ ಮೈತ್ರಿ ಸರ್ಕಾರ ಉರುಳಿತು. ನಂತರದಲ್ಲಿ ಬಿಜೆಪಿಯು ಸರ್ಕಾರ ರಚಿಸಿತು.

ಹೀಗಾಗಿ, 2023ರಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದು ಬಿಜೆಪಿಯ ಗುರಿ ಆಗಿರಲಿದೆ. 2023ರ ಚುನಾವಣೆಯು ಬಹಳ ತುರುಸಿನಿಂದ ಕೂಡಿರುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಹಲವು ಕಾರಣಗಳು ಇವೆ. 1985ರ ನಂತರದಲ್ಲಿ ಕರ್ನಾಟಕದ ಮತದಾರರು ಆಡಳಿತದಲ್ಲಿ ಇರುವ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ಮತ್ತೊಮ್ಮೆ ಯಾವತ್ತೂ ನೀಡಿಲ್ಲ. ಬಿಜೆಪಿಯು ಇದನ್ನು ಬದಲಾಯಿಸ ಲಿದೆಯೇ? ಬಿಜೆಪಿಯು ಕರ್ನಾಟಕದಲ್ಲಿ ಬೆಳವಣಿಗೆ ಕಾಣುವಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪಾತ್ರ ಪ್ರಮುಖ. ಯಡಿಯೂರಪ್ಪ ಅವರು 2013ರಲ್ಲಿ ಪಕ್ಷ ತೊರೆದಿದ್ದಾಗ, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಪಕ್ಷವು 2023ರಲ್ಲಿ ಯಡಿಯೂರಪ್ಪ ಅವರ ಮುಂದಾಳತ್ವ ಇಲ್ಲದೆ ಚುನಾವಣೆ ಎದುರಿಸಲಿದೆ. ಯಡಿಯೂರಪ್ಪ ಅವರನ್ನು ಹಿರಿಯ ಮಾರ್ಗದರ್ಶಕ ಎಂದು ಕಾಣ
ಲಾಗುತ್ತಿದೆಯಾದರೂ, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪಕ್ಷದಲ್ಲಿ ಅವರ ಸ್ಥಾನ ಏನು ಎಂಬುದು ಅಸ್ಪಷ್ಟ. ಅವರಿಗೆ ಯಾವ ಹೊಣೆ ನೀಡಲಾಗುತ್ತದೆ ಎಂಬುದನ್ನು ಆಧರಿಸಿ, ಅವರು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ
ರೆಯೇ ಎಂಬುದು ತೀರ್ಮಾನವಾಗಲಿದೆ. ಯಡಿಯೂರಪ್ಪ ಅವರಿಂದ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಹಸ್ತಾಂತರವು ಸುಲಲಿತವಾಗಿ ಆಗಿದೆಯಾದರೂ, ಒಂದಿಷ್ಟು ಅನಿಶ್ಚಿತತೆಗಳು ಉಳಿದುಕೊಂಡಿವೆ. ಮೂರು ವರ್ಷಗಳಲ್ಲಿ ಬಿಜೆಪಿ ಮಾಡಿದ ಕೆಲಸಗಳು ನಿಕಷಕ್ಕೆ ಒಳಗಾಗುತ್ತವೆ. ಅಭಿವೃದ್ಧಿ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದ ಬಗೆಯನ್ನು ಜನ ಹೇಗೆ ಸ್ವೀಕರಿಸಿ
ದ್ದಾರೆ ಎಂಬುದು ಮಹತ್ವದ್ದಾಗಲಿದೆ.

ಡಬಲ್ ಎಂಜಿನ್ ಸರ್ಕಾರ ಇದ್ದರೆ ಎಷ್ಟು ಅನುಕೂಲ ಇದೆ ಎಂಬುದನ್ನು ಪ್ರಧಾನಿ, ಗೃಹ ಸಚಿವರು ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹೈದರಾಬಾದ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮತ್ತೆ ಮತ್ತೆ ವಿವರಿಸಿದರು. ಉತ್ತರಾಖಂಡ ಹಾಗೂ ಗೋವಾದ ಚುನಾವಣಾ ಯಶಸ್ಸು ಈ ಮಾತಿನ ಮಹತ್ವವನ್ನು ಹೇಳುತ್ತದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳ ಸಾಧನೆಗೆ ಹೆಚ್ಚಿನ ಸ್ಪಂದನ ಇಲ್ಲದಿದ್ದರೂ, ಪಕ್ಷದ ಕೇಂದ್ರ ನಾಯಕತ್ವ ಹಾಗೂ ಕೇಂದ್ರ ಸರ್ಕಾರದ ಕುರಿತು ಬಲವಾದ ಒಲವು ಬಿಜೆಪಿಗೆ ಅಧಿಕಾರಕ್ಕೆ ಮರಳಲು ಸಹಾಯ ಮಾಡಿತು ಎಂದು ಲೋಕನೀತಿ–ಸಿಎಸ್‌ಡಿಎಸ್ ಗೋವಾ ಮತ್ತು ಉತ್ತರಾಖಂಡದಲ್ಲಿ ನಡೆಸಿದ ಚುನಾವಣೋತ್ತರ ಸಮೀಕ್ಷೆಯು ಹೇಳಿದೆ.

ಕರ್ನಾಟಕದಲ್ಲಿಯೂ ಇಂಥದ್ದೇ ಕಾರ್ಯತಂತ್ರ ವನ್ನು ಬಳಸಿಕೊಳ್ಳಲಾಗುತ್ತದೆಯೇ? 2013ರಲ್ಲಿ ಲೋಕನೀತಿ–ಸಿಎಸ್‌ಡಿಎಸ್ ನಡೆಸಿದ ಸಮೀಕ್ಷೆಯನ್ನು ನೋಡುವುದಾದರೆ, ಮೊದಲ ಹಾಗೂ ಎರಡನೆಯ ಸುತ್ತಿನ ಮತದಾನದ ಸಂದರ್ಭಗಳಲ್ಲಿ ಸ್ಪಷ್ಟ ವ್ಯತ್ಯಾಸ ಕಂಡುಬಂದಿತ್ತು. ಎರಡನೆಯ ಹಂತದ ಮತದಾನದ ಭಾಗವಾಗಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿತ್ತು. ಆ ವರ್ಷ, ಪ್ರಧಾನಿಯವರು ಹೆಚ್ಚು ಪ್ರಚಾರ ನಡೆಸಿದ್ದು ಮೊದಲ ಹಂತದ ಮತದಾನ ಆದ ನಂತರದಲ್ಲಿ. ಮೊದಲ ಹಂತದ ಮತದಾನ ನಡೆದ ನಂತರದಲ್ಲಿ ಬಿಜೆಪಿಯ ಚುನಾವಣಾ ಕಾರ್ಯತಂತ್ರ ನಿಪುಣರು, ಪ್ರಧಾನಿಯವರ ರ್‍ಯಾಲಿಗಳ ಸಂಖ್ಯೆಯನ್ನು ಜಾಸ್ತಿ ಮಾಡಿದರು.

ಪಕ್ಷದ ರಾಜ್ಯ ಘಟಕದಲ್ಲಿನ ಹಲವು ಗುಂಪುಗಳನ್ನು ಒಗ್ಗೂಡಿಸುವುದು ಬಿಜೆಪಿಯು ಗಮನ ನೀಡಬೇಕಿರುವ ಇನ್ನೊಂದು ಅಂಶ. ಪಕ್ಷ ನಿಷ್ಠರು ಹಾಗೂ ಪಕ್ಷಕ್ಕೆ ಹೊಸದಾಗಿ ಬಂದವರ ನಡುವೆ ಕಂದಕ ಇರುವಂತೆ ಕಾಣಿಸುತ್ತಿದೆ. ರಾಜ್ಯ ಸಚಿವ ಸಂಪುಟದ ಪುನರ್ ರಚನೆಯು ಆಗುತ್ತದೆ ಎಂದು ಬಹಳ ಕಾಲದಿಂದ ಹೇಳಲಾಗುತ್ತಿದೆ. ಆದರೆ ಅದು ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಿದೆ. ಸಚಿವರ ಪೈಕಿ ಹಲವರ ಸಾಧನೆ ಬಗ್ಗೆ ಪ್ರಶ್ನೆಗಳು ಇವೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಹೊರಬಂದು, ಬಿಜೆಪಿ ಸೇರಿ ಮಂತ್ರಿಯಾದವರ ಕಾರ್ಯಕ್ಷಮತೆಯನ್ನು ಚುನಾವಣೆ ಹತ್ತಿರವಾದಂತೆಲ್ಲ ಬಹಳ ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ. ಈ ರೀತಿ ಬಿಜೆಪಿಗೆ ಬಂದ ಕೆಲವರು, ಬಿಜೆಪಿಯ ಹಿರಿಯ ನಾಯಕರ ಕ್ಷೇತ್ರದಿಂದ ಗೆದ್ದುಬಂದರು. ಆ ಕ್ಷೇತ್ರಗಳನ್ನು ಆ ಹಿರಿಯ ನಾಯಕರು ತಮ್ಮದು ಎಂದು ಈಗಲೂ ಹೇಳಿಕೊಳ್ಳುವುದಿದೆ. ಟಿಕೆಟ್ ನೀಡುವ ಸಂದರ್ಭದಲ್ಲಿ ಬೇರೆ ಬೇರೆ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವುದು ಬಿಜೆಪಿ ಪಾಲಿಗೆ ಪ್ರಮುಖವಾಗಲಿದೆ.

ಬಸವರಾಜ ಬೊಮ್ಮಾಯಿ ಅವರೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸ್ಪಷ್ಟವಾಗಿ ಘೋಷಿಸಿ, ಬಿಜೆಪಿ ಚುನಾವಣಾ ಕಣಕ್ಕೆ ಇಳಿಯಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಿಜೆಪಿಯಲ್ಲಿನ ಕೆಲವು ಗುಂಪುಗಳು ‘ಸಾಮೂಹಿಕ ನಾಯಕತ್ವ’ದ ಮಾತು ಆಡುತ್ತಿವೆ. ಇನ್ನು ಕೆಲವು ಗುಂಪುಗಳು, ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿ ಚುನಾವಣೆ ಎದುರಿಸುವ ಮಾತುಗಳನ್ನು ಆಡುತ್ತಿವೆ. ಇನ್ನೂ ಕೆಲವು ಗುಂಪುಗಳು, ಕೇಂದ್ರದ ನಾಯಕತ್ವದ ಅಡಿಯಲ್ಲಿ ಚುನಾವಣೆ ಎದುರಿಸಲಾಗುತ್ತದೆ ಎಂದು ಹೇಳುತ್ತಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜ್ಯದಲ್ಲಿ ನೇರ ಹಣಾಹಣಿ ಇರಲಿದೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಜೆಡಿಎಸ್‌ ಪಕ್ಷವು ಮೂರನೆಯ, ಸಣ್ಣ ಪಕ್ಷವಾಗಿ ಇರಲಿದೆ. ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವು ಗಮನಾರ್ಹ ರಾಜಕೀಯ ಅಸ್ತಿತ್ವವನ್ನು ಇನ್ನೂ ತೋರಿಸಿಲ್ಲ. ರಾಜ್ಯದಲ್ಲಿ ಮುಂದಿನ ಕೆಲವು ತಿಂಗಳುಗಳುಬಹಳ ಕುತೂಹಲಕಾರಿ ಆಗಿರಲಿವೆ.

– ಪ್ರೊ. ಸಂದೀಪ್‌ ಶಾಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT