ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ | ರಾಜ್ಯಸಭಾ ಚುನಾವಣೆ: ಯಾವುದು ಪರಿಗಣನೆ?

ಸಂಸತ್ತಿನ ಮೇಲ್ಮನೆಯು ರಾಜ್ಯಗಳ ಸಭೆಯಾಗಿ ಮಾಡಬೇಕಿದ್ದ ಕೆಲಸ ಗೌಣವಾಗಿದೆ
Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

ನಾವು ಮತ್ತೆ ರಾಜ್ಯಸಭಾ ಚುನಾವಣೆಗಳ ಹಂಗಾಮಿನಲ್ಲಿ ಇದ್ದೇವೆ. ತಮ್ಮ ಪಕ್ಷದಿಂದ ಗರಿಷ್ಠ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಹೇಗೆ ಎಂಬ ಕಾರ್ಯತಂತ್ರ ರೂಪಿಸುವಲ್ಲಿ ದೇಶದೆಲ್ಲೆಡೆ ಎಲ್ಲ ರಾಜಕೀಯ ಪಕ್ಷಗಳೂ ತೊಡಗಿಸಿಕೊಂಡಿವೆ. ಹಲವು ರಾಜ್ಯಗಳಲ್ಲಿ ತೆರವಾಗುತ್ತಿರುವ ಸ್ಥಾನಗಳಿಗೆ ಸಮನಾದ ಸಂಖ್ಯೆಯ ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ ಮತದಾನದ ಪ್ರಶ್ನೆ ಉದ್ಭವಿಸುವುದಿಲ್ಲ.

ಕರ್ನಾಟಕದಲ್ಲಿ ತೆರವಾಗುತ್ತಿರುವ ನಾಲ್ಕು ಸ್ಥಾನಗಳಿಗೆ ಆರು ನಾಮಪತ್ರಗಳು ಸಲ್ಲಿಕೆಯಾಗಿರುವ ಕಾರಣ, ಇಲ್ಲಿ ಮತದಾನ ನಡೆಯುವುದು ಅನಿವಾರ್ಯ ಆಗಿದೆ. ಮುಂದಿನ ಕೆಲವು ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ತಿರುವುಗಳು, ಬದಲಾವಣೆಗಳು ನಡೆಯ ಬಹುದು ಎಂಬ ನಿರೀಕ್ಷೆ ಇರಿಸಿಕೊಳ್ಳಬಹುದು.

ರಾಜ್ಯಸಭಾ ಚುನಾವಣೆ ಹತ್ತಿರವಾದಾಗಲೆಲ್ಲ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸಂಸತ್ತಿನ ಮೇಲ್ಮನೆಯಾಗಿ ರಾಜ್ಯಸಭೆ ವಹಿಸುವ ಪಾತ್ರದ ಬಗ್ಗೆ ಗಮನ ಹರಿಯುತ್ತದೆ. ರಾಜ್ಯಸಭೆಯ ಸ್ಥಾನಗಳು ದೇಶದ ಎಲ್ಲ ರಾಜ್ಯಗಳ ನಡುವೆ ಹಂಚಿಕೆಯಾಗಿವೆ. ಸಂಖ್ಯೆಯನ್ನು ತೀರ್ಮಾನಿಸುವಲ್ಲಿ ರಾಜ್ಯಗಳ ಜನಸಂಖ್ಯೆಯು ಒಂದು ಮುಖ್ಯ ಅಂಶ. ಸಣ್ಣ ರಾಜ್ಯಗಳಿಗೆ ಕನಿಷ್ಠ ತಲಾ ಒಂದಾದರೂ ಸ್ಥಾನ ಇರುತ್ತದೆ. ರಾಜ್ಯಗಳ ವಿಧಾನಸಭೆಗಳು ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುತ್ತವೆ. ರಾಜ್ಯಸಭೆಯ ಹನ್ನೆರಡು ಸದಸ್ಯರನ್ನು ನಾಮನಿರ್ದೇಶನದ ಮೂಲಕ ರಾಷ್ಟ್ರಪತಿ ನೇಮಿಸುತ್ತಾರೆ.

ರಾಜ್ಯಸಭೆಯ ಚುನಾಯಿತ ಪ್ರತಿನಿಧಿಗಳ ಜಾತಕವನ್ನು ಅವಲೋಕಿಸಿದರೆ, ಸ್ಪಷ್ಟವಾದ ಕೆಲವು ವಿದ್ಯಮಾನಗಳು ಗೊತ್ತಾಗುತ್ತವೆ. ಮೊದಲನೆಯದು, ಕೇಂದ್ರ ಸಂಪುಟದ ಸದಸ್ಯರನ್ನಾಗಿ ಅಥವಾ ಸಚಿವರನ್ನಾಗಿ ನೇಮಕ ಮಾಡಲಿಕ್ಕಿರುವವರನ್ನು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷಗಳು ರಾಜ್ಯಸಭೆಯ ಮೂಲಕ ಸಂಸತ್ ಸದಸ್ಯರನ್ನಾಗಿಸುತ್ತವೆ. ಎರಡನೆಯದು, ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಅಥವಾ ನೇರ ಚುನಾವಣೆಯನ್ನು ಎದುರಿಸಲು ನಿರಾಕರಿಸುವ ಹಿರಿಯ ನಾಯಕರನ್ನು ಪಕ್ಷಗಳು ರಾಜ್ಯಸಭೆಗೆ ಕಳುಹಿಸುತ್ತವೆ. ಮೂರನೆಯದು, ನಿಷ್ಠಾವಂತರನ್ನು ಗೌರವಿಸಲು ಕೂಡ ರಾಜಕೀಯ ನಾಯಕರು ರಾಜ್ಯಸಭಾ ಸ್ಥಾನವನ್ನು ನೀಡುತ್ತಾರೆ. ಈಚಿನ ವರ್ಷಗಳಲ್ಲಿ, ಉದ್ಯಮ ಜಗತ್ತಿನವರು ಕೂಡ ರಾಜ್ಯಸಭೆಯಲ್ಲಿ ಸ್ಥಾನ ಪಡೆದಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಎರಡು ಬಗೆಯ ಬೆಳವಣಿಗೆಗಳು ಕಂಡುಬರುತ್ತಿವೆ. ಮೊದಲನೆಯದು, ಸರಿಸುಮಾರು ಮೂರನೆಯ ಎರಡರಷ್ಟು ಸದಸ್ಯರು ಒಂದು ಬಾರಿ ಸದಸ್ಯರಾದವರು. ಅಂದರೆ, ಒಂದು ಅವಧಿ ಪೂರ್ಣ ಗೊಳಿಸಿದ ನಂತರದಲ್ಲಿ ಪಕ್ಷಗಳು ಅವರನ್ನು ಮತ್ತೆ ಅದೇ ಸ್ಥಾನಕ್ಕೆ ತರುತ್ತಿಲ್ಲ. ಎರಡನೆಯದು, 2002ರ ನಂತರದಲ್ಲಿ ರಾಜ್ಯಸಭೆಯ ಸರಿಸುಮಾರು ನಾಲ್ಕನೆಯ ಒಂದರಷ್ಟು ಸದಸ್ಯರು ಲೋಕಸಭೆಯ ಮಾಜಿ ಸದಸ್ಯರೂ ಹೌದು. 2002ಕ್ಕೂ ಮೊದಲು ಲೋಕಸಭೆಯ ಮಾಜಿ ಸದಸ್ಯರು ರಾಜ್ಯಸಭಾ ಸದಸ್ಯರಾದ ಪ್ರಮಾಣವು ಶೇಕಡ 10ಕ್ಕಿಂತ ಕಡಿಮೆ ಇತ್ತು.

ಇವೆಲ್ಲ ಕರ್ನಾಟಕದ ಮಟ್ಟಿಗೂ ಸತ್ಯ. ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಇಬ್ಬರು ಹಿರಿಯ ಮುಖಂಡರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ. ಇವರಿಬ್ಬರೂ 2019ರ ಲೋಕಸಭಾ ಚುನಾವಣೆ ಯಲ್ಲಿ ಸೋಲು ಕಂಡವರು. ಈ ಬಾರಿಯ ಚುನಾವಣೆಯಲ್ಲಿಯೂ ಕರ್ನಾಟಕದಲ್ಲಿ ಕಾಣುತ್ತಿರುವುದು ರಾಷ್ಟ್ರಮಟ್ಟದಲ್ಲಿನ ಬೆಳವಣಿಗೆಗಳ ಬಿಂಬವೇ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಇಳಿದಿದ್ದಾರೆ. 2014ರಲ್ಲಿ ಕೇಂದ್ರ ಸಂಪುಟ ಸೇರಿದ ತಕ್ಷಣ ಅವರು ಆಂಧ್ರಪ್ರದೇಶದಿಂದ ರಾಜ್ಯಸಭೆ ಪ್ರವೇಶಿಸಿದರು. 2016ರಲ್ಲಿ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದರು. ಈಗ ಅವರು ಇಲ್ಲಿಂದ ಮತ್ತೊಂದು ಅವಧಿಗೆ ಆಯ್ಕೆಯಾಗಬಯಸಿದ್ದಾರೆ. ನಟ ಜಗ್ಗೇಶ್ ಅವರೂ ಬಿಜೆಪಿ ಅಭ್ಯರ್ಥಿ. ಅವರಿಗೆ ಇದು ರಾಜ್ಯಸಭೆ ಪ್ರವೇಶಕ್ಕೆ ಮೊದಲ ಚುನಾವಣೆ. ಕೆ.ಸಿ.ರಾಮಮೂರ್ತಿ ಅವರ ಬದಲಿಗೆ ಜಗ್ಗೇಶ್ ಕಣಕ್ಕೆ ಇಳಿದಿದ್ದಾರೆ. ರಾಮಮೂರ್ತಿ ಅವರು 2016ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಗೆದ್ದಿದ್ದರು. ಕಾಂಗ್ರೆಸ್ ಪಕ್ಷವು ಜೈರಾಂ ರಮೇಶ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.

ರಮೇಶ್ ಅವರು ರಾಜ್ಯಸಭಾ ಸದಸ್ಯರಾಗಿ ಮೂರು ಅವಧಿಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರು ಮೊದಲಿಗೆ 2004ರಲ್ಲಿ ಆಂಧ್ರಪ್ರದೇಶದಿಂದ ಆಯ್ಕೆಯಾಗಿದ್ದರು. 2016ರಲ್ಲಿ ಕರ್ನಾಟಕದಿಂದ ಆಯ್ಕೆಯಾದರು. ನಿರ್ಮಲಾ, ಜಗ್ಗೇಶ್ ಮತ್ತು ರಮೇಶ್ ಅವರ ಗೆಲುವು ಸುಲಭದ್ದಾಗಿರುವ ನಿರೀಕ್ಷೆ ಇದೆ. ಏಕೆಂದರೆ ಅವರ ಪಕ್ಷಗಳಿಗೆ ಅವರನ್ನು ಗೆಲ್ಲಿಸಲು ಅಗತ್ಯವಿರುವಷ್ಟು ಸಂಖ್ಯಾಬಲ ವಿಧಾನಸಭೆಯಲ್ಲಿ ಇದೆ.

ನಿಜವಾದ ಸ್ಪರ್ಧೆ ನಡೆಯಲಿರುವುದು ನಾಲ್ಕನೆಯ ಸ್ಥಾನಕ್ಕಾಗಿ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು– ಬಿಜೆಪಿ, ಕಾಂಗ್ರೆಸ್, ಜೆಡಿಎಸ್– ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಆದರೆ, ನಾಲ್ಕನೆಯ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಿರುವ ಸಂಖ್ಯಾಬಲ ಯಾವ ಪಕ್ಷಕ್ಕೂ ಇಲ್ಲ. ಹೀಗಾಗಿ, ನಾಲ್ಕನೆಯ ಸ್ಥಾನವನ್ನು ಗೆಲ್ಲಬೇಕು ಎಂದಾದರೆ ಅಭ್ಯರ್ಥಿ (ಮತ್ತು ಅವರನ್ನು ಬೆಂಬಲಿಸಿರುವ ಪಕ್ಷ) ತಮ್ಮ ಪಕ್ಷದ ಆಚೆಗೂ ಬೆಂಬಲ ಗಿಟ್ಟಿಸಿಕೊಳ್ಳಬೇಕು. ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸ್ಪಷ್ಟ ಕಾರ್ಯತಂತ್ರವೊಂದನ್ನು ರೂಪಿಸಿದ್ದವು ಎಂದು ಕಾಣುತ್ತಿದೆ.

ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಕುಪೇಂದ್ರ ರೆಡ್ಡಿ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷವು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದೆ. ಖಾನ್ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು ಎನ್ನಲಾಗಿದೆ. ಬಿಜೆಪಿಯು ಪಕ್ಷದ ರಾಜ್ಯ ಘಟಕದ ಮಾಜಿ ಖಜಾಂಚಿ ಲಹರ್ ಸಿಂಗ್ ಸಿರೋಯಾ ಅವರನ್ನು ಕಣಕ್ಕಿಳಿಸಿದೆ. ಇವರಲ್ಲಿ ಯಾರೇ ಗೆಲ್ಲಲಿ ಆ ಗೆಲುವು ಪಕ್ಷಗಳ ನಡುವಿನ ಪ್ರಭಾವವನ್ನು, ಬೆಂಬಲ ಗಿಟ್ಟಿಸುವ ವಿಚಾರದಲ್ಲಿ ಅಭ್ಯರ್ಥಿಗಳು ಹೊಂದಿರುವ ಕೌಶಲವನ್ನು ತೋರಿಸಿಕೊಡಲಿದೆ.

ರಾಜ್ಯಸಭಾ ಚುನಾವಣೆಯು ಇನ್ನೂ ಒಂದು ಪ್ರಶ್ನೆಯನ್ನು ಎತ್ತುತ್ತದೆ. ಸದಸ್ಯರು ಯಾವ ರಾಜ್ಯದಿಂದ ಆಯ್ಕೆಯಾಗಿರುತ್ತಾರೋ ಆ ರಾಜ್ಯವನ್ನು ಪ್ರತಿನಿಧಿಸಲು ರಾಜಕೀಯ ಪಕ್ಷಗಳು ನಡೆಸಿದ ಪ್ರಯತ್ನವನ್ನು ಆ ಸದಸ್ಯತ್ವವು ಪ್ರತಿಬಿಂಬಿಸುತ್ತದೆಯೇ? ನಮ್ಮಂತಹ ಒಕ್ಕೂಟ ವ್ಯವಸ್ಥೆಯಲ್ಲಿ, ರಾಜ್ಯಸಭೆ ಇರುವುದು ರಾಜ್ಯಗಳ ಹಿತಾಸಕ್ತಿಗಳ ಕುರಿತು ಗಮನ ಸೆಳೆಯುವುದಕ್ಕೆ. ಆದರೆ, ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿರುವ ರೀತಿ ಯನ್ನು ಗಮನಿಸಿದರೆ, ರಾಜ್ಯಸಭೆಯ ಪಾತ್ರವನ್ನು ನಿಜವಾಗಿಯೂ ಗಮನದಲ್ಲಿ ಇರಿಸಿಕೊಂಡು ಇವನ್ನೆಲ್ಲ ಮಾಡಲಾಗುತ್ತದೆಯೇ ಎಂಬುದು ಖಚಿತವಾಗುವುದಿಲ್ಲ. ಇದು ಹಿರಿಯ ನಾಯಕರನ್ನು, ಸಚಿವರಾದವರನ್ನು, ಸಚಿವ ಆಗಬೇಕಿರುವವರನ್ನು ಸಂಸತ್ತಿಗೆ ಕರೆತರಲು ಇರುವ ದಾರಿಯಂತೆ ಕಾಣಿಸುತ್ತಿದೆ.

ಹಾಗೆಯೇ, ಲೋಕಸಭೆಗೆ ಚುನಾಯಿತರಾಗಲು ಸಾಧ್ಯವಾಗದ ಪಕ್ಷದ ನಾಯಕರನ್ನು ಸಂಸತ್ತಿಗೆ ಕರೆದು ತರಲು ಇರುವ ಮಾರ್ಗದಂತೆಯೂ ಇದು ಕಾಣಿಸುತ್ತಿದೆ. ಪಕ್ಷಕ್ಕೆ ಅಥವಾ ನಾಯಕನೊಬ್ಬನಿಗೆ ತೋರಿದ ನಿಷ್ಠೆಗೆ ಪ್ರತಿಯಾಗಿ ನೀಡುವ ಬಹುಮಾನದ ರೀತಿ ಯಲ್ಲಿಯೂ ರಾಜ್ಯಸಭಾ ಸ್ಥಾನವು ಹಲವು ಸಂದರ್ಭಗಳಲ್ಲಿ ಕಾಣಿಸುತ್ತಿದೆ. ಕೊನೆಯಲ್ಲಿ ಹೇಳಬೇಕು ಎಂದಾದರೆ, ಸ್ಪರ್ಧೆ ತುರುಸಿನಿಂದ ಕೂಡಿದ್ದರೆ ಪಕ್ಷದ ಪರಿಧಿಯನ್ನು ಮೀರಿ ಬೆಂಬಲ ಒಗ್ಗೂಡಿಸಲು ಸಾಧ್ಯವಾಗುವ ಕೌಶಲ ಅಭ್ಯರ್ಥಿಗೆ ಇದ್ದರೆ ಅದು ಮಹತ್ವದ್ದಾಗುತ್ತದೆ.

ಇವೆಲ್ಲವುಗಳ ಫಲವಾಗಿ, ಸಂಸತ್ತಿನ ಮೇಲ್ಮನೆಯ ನಿಜವಾದ ಪಾತ್ರ, ರಾಜ್ಯಗಳ ಸಭೆಯಾಗಿ ಅದು ಮಾಡ ಬೇಕಿದ್ದ ಕೆಲಸ ಮರೆಯಾಗಿವೆ. ಅದು ತಾತ್ವಿಕವಾಗಿ ರಾಜಕೀಯ ಪುನರ್ವಸತಿಗೆ ವೇದಿಕೆ ಆಗುತ್ತದೆ. ನಮ್ಮ ರಾಜಕೀಯ ಸಂಸ್ಥೆಗಳ ಸ್ಥಿತಿ ಕುರಿತ ವಿಷಾದಕರ ಬಣ್ಣನೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT