ಬುಧವಾರ, ನವೆಂಬರ್ 25, 2020
20 °C
ಮಾನವ ತನ್ನ ದುರಾಸೆಗೆ ಇನ್ನಾದರೂ ಕಡಿವಾಣ ಹಾಕಲೇಬೇಕಾಗಿದೆ

ಅಂಕಣ| ಹಣ, ಆರೋಗ್ಯ, ಲಾಲಸೆ

ಡಾ. ಶಿವಮೂರ್ತಿ ಮುರುಘಾ ಶರಣರು Updated:

ಅಕ್ಷರ ಗಾತ್ರ : | |

ಕೊರೊನಾ ವೈರಾಣು ನಮ್ಮ ಸಾಮಾಜಿಕ ಬದುಕಿನಲ್ಲಿ ಭಾರಿ ಬದಲಾವಣೆ ಉಂಟುಮಾಡಿದೆ. ಕೊರೊನಾಪೂರ್ವದಲ್ಲಿ ಮಾನವ ಜಗತ್ತಿನ ಚಲನೆ ಬೇರೆಯದೇ ರೀತಿ ಇತ್ತು. ಕೊರೊನಾ ನಂತರ ಹಿಂದಿನ ಆ ಚಲನೆಯು ಪಲ್ಲಟಗೊಂಡಿದೆ, ತಲ್ಲಣ ಮೂಡಿಸಿದೆ. ಹಿಂದಿನ, ಇಂದಿನ ಹಾಗೂ ಮುಂದಿನ ಹೆಜ್ಜೆಗಳ ಕುರಿತು ವಿಮರ್ಶಿಸುವ ಸಂದರ್ಭ ಇದು.

ಕೊರೊನಾ ಯುಗಕ್ಕಿಂತ ಮೊದಲಿನ ಪರಿಸ್ಥಿತಿಯನ್ನು ಮೆಲುಕು ಹಾಕೋಣ. ‘ಆರೋಗ್ಯವೇ ಭಾಗ್ಯ’ ಎಂಬುದು ಒಂದು ವಾಡಿಕೆಯ ನುಡಿ. ಇದರ ಬಗೆಗೆ ಮಾನವ ಪ್ರಪಂಚವು ಅಷ್ಟೇನೂ ಜಾಗೃತವಾಗಿರಲಿಲ್ಲ. ಹಣವಿದ್ದರೆ ಆರೋಗ್ಯ ಇರುತ್ತದೆ ಎಂಬ ಭಾವನೆ ಬೇರೂರಿತ್ತು. ಅಹುದು, ಹಣವು ಮಾನವ ಜೀವನಕ್ಕೆ ಅತ್ಯಂತ ಅವಶ್ಯ. ಹಣದ ಮುಖಾಂತರ ಮಾನವ ತನಗೆ ಬೇಕಾದ ಸಾಮಾನುಗಳನ್ನು ಮತ್ತು ಅನುಕೂಲಕರ ಸೌಕರ್ಯಗಳನ್ನು ಪಡೆದುಕೊಳ್ಳಬಹುದೆಂಬ ಕಾರಣಕ್ಕೆ ಹಣದ ಹಿಂದೆ ಸಾಗುತ್ತಾ ನಡೆದ. ಹಣದ ಶೇಖರಣೆಯ ವಿಧಾನವನ್ನು ಕಂಡುಕೊಂಡ. ಅದಕ್ಕಾಗಿ ಏನೆಲ್ಲ ಅಕ್ರಮಗಳ ಹಾದಿಯನ್ನು ಹಿಡಿದ. ಅಕ್ರಮಗಳ ಮುಖಾಂತರ ಗಳಿಸಿದ ಹಣವು ಅವನಿಗೆ ನೆಮ್ಮದಿ ನೀಡಿತೇ ಎಂಬ ಪ್ರಶ್ನೆಗೆ ಬಹುತೇಕ ಅವನಲ್ಲಿ ಉತ್ತರ ಇರಲಿಕ್ಕಿಲ್ಲ.

ಧನವು ನೆಮ್ಮದಿಯ ಅಳತೆಗೋಲಲ್ಲ ಎಂಬುದು ಅವನಿಗೆ ಆರಂಭದಲ್ಲಿ ತಿಳಿದುಬರಲಿಲ್ಲ. ಆ ದಿಸೆಯಲ್ಲಿ ಅವನದು ಜಾಣ ಮರೆವು. ಹುಚ್ಚೆದ್ದು ಹಣ ಗಳಿಸುತ್ತಾ ಹೋದ. ತಾತ್ಕಾಲಿಕವಾದ ಸುಖ-ಸಂತೋಷವನ್ನು ಅನುಭವಿಸುತ್ತಿರುವಾಗಲೇ ಅವನನ್ನು ‘ಮುಂದೇನು’ ಎಂಬ ಪ್ರಶ್ನೆ ಕಾಡುತ್ತದೆ. ಮಾನವ ತಾನು ಸಂಪಾದಿಸಿದ ಹಣದಿಂದ ಔಷಧಿಯನ್ನು ಖರೀದಿಸಬಹುದು. ಆರೋಗ್ಯವನ್ನು ಖರೀದಿಸಲಾದೀತೇ? ಎಂದಿಗೂ ಸಾಧ್ಯವಿಲ್ಲ.

ಬದುಕಿನಲ್ಲಿ ಸಕಾರಾತ್ಮಕವಾದ ನಂಬುಗೆ ಇರಲಿ. ನೇತ್ಯಾತ್ಮಕವಾದ ನಂಬುಗೆಯು ಅಪಾಯಕಾರಿ ಎಂಬುದು ಅರ್ಥವಾಗಬೇಕು. ಹಣದಿಂದ ತನಗೆ ಬೇಕಾದುದನ್ನು ಖರೀದಿಸಬಹುದು ಎಂಬುದು ನಂಬುಗೆಯಾದರೆ, ಅದೇ ಹಣದಿಂದ ಎಲ್ಲವನ್ನೂ ತನ್ನದನ್ನಾಗಿಸಿಕೊಳ್ಳಬಹುದು ಎಂದು ಭಾವಿಸುವುದು ಭ್ರಮೆ. ಭ್ರಮೆಗೆ ಒಳಗಾದವರು ಅಕ್ರಮ-ಅನ್ಯಾಯದಿಂದ ಹಣವನ್ನು ಕೂಡಿಡುತ್ತಾ ಹೋಗುವುದು ವಿಪರ್ಯಾಸ.

ಕೂಡಿಟ್ಟ ಹಣದಿಂದ ಏನೆಲ್ಲ ಸಾಧಿಸಲಾಯಿತು ಎಂಬುದು ಕೂಡ ನಿಗೂಢ! ಉಳ್ಳವನಿಗೆ ಊರೆಲ್ಲ ಸನ್ಮಾನ ಎಂಬ ವಾತಾವರಣ ಬದಲಾಗಿ, ಅಕ್ರಮಗಳೊಂದಿಗೆ ಹಣ ಶೇಖರಿಸಿದವನಿಗೆ ಅವಮಾನ. ಈ ನುಡಿ ನಿಶ್ಚಿತ ಮತ್ತು ಖಚಿತ. ಏನೆಲ್ಲ ಅನುಮಾನ. ಒಂದೆಡೆ ಅವಮಾನ, ಮತ್ತೊಂದೆಡೆ ಅನುಮಾನ. ಹಣವನ್ನು ಕೂಡಿಡುವ ದಿಸೆಯಲ್ಲಿ ಏನೆಲ್ಲ ಹಪಹಪಿ.

ಅತಿಯಾಗಿ ಹಣವನ್ನು ಶೇಖರಿಸಿ ಇಟ್ಟುಕೊಂಡವರ ಬದುಕಿನಲ್ಲಿ ಅಧೋಗತಿ. ಅತ್ತ ಹಣವನ್ನು ಅನುಭವಿಸಲು ಆಗಲಿಲ್ಲ, ಇತ್ತ ಅನುಮಾನ- ಅವಮಾನವು ನಿಲ್ಲಲಿಲ್ಲ. ದಿನಕ್ಕೊಂದು ಹಗರಣ. ಮೋಸ-ವಂಚನೆಯ ಮಾರ್ಗದಿಂದ ದೂರವುಳಿದು, ಪರಿಶ್ರಮವನ್ನು ಅವಲಂಬಿಸುತ್ತ ಬದುಕನ್ನು ಆಸ್ವಾದಿಸುವವರ ಬದುಕಿನಲ್ಲಿ ಒಂದಿಷ್ಟು ಶಾಂತಿ-ಸಮಾಧಾನ. ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ. ಇಂತಹ ಸ್ಥಿತಿಯಲ್ಲಿ ಯಾವುದೇ ಹಗರಣ, ಅನ್ಯಾಯ ಮತ್ತು ಅಕ್ರಮ ಇಲ್ಲವೆಂಬುದೇ ಸಮಾಧಾನ. ಐಷಾರಾಮಿ ಜೀವನ ಏನನ್ನು ತಂದೊಡ್ಡಿದೆ ಎಂಬುದು ಚಿಂತನಾರ್ಹ.

ಶಾರೀರಿಕ ಶ್ರಮ ಹಾಕುವವರು, ದಿನಗೂಲಿ ನೌಕರರು, ಕೃಷಿಕರು, ಔದ್ಯೋಗಿಕ ಕೇಂದ್ರಗಳಲ್ಲಿ ಕೆಲಸ ಮಾಡುವವರನ್ನು ಕೊರೊನಾ ವೈರಾಣು ಹೆಚ್ಚಾಗಿ ಬಾಧಿಸುತ್ತಿಲ್ಲ. ಕಾರಣವೇನೆಂದರೆ, ಅವರು ದಿನವೂ ಬಿಸಿಲು, ಮಳೆ, ಗಾಳಿಗೆ ಒಡ್ಡಿಕೊಂಡು ಜೀವನ ನಡೆಸುತ್ತಾರೆ. ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಸದಾ ಫ್ಯಾನ್ ಮತ್ತು ಹವಾನಿಯಂತ್ರಿತ ಪರಿಸರದಲ್ಲಿ ಕಾರ್ಯನಿರ್ವಹಿಸು
ವವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆಂದು ಹೇಳಲಾಗುತ್ತದೆ. ಇಂಥವರು ನಿಸರ್ಗದೊಂದಿಗೆ ಸಂಪರ್ಕ ಹೊಂದಿರುವುದಿಲ್ಲ. ಅದಕ್ಕಾಗಿ ಆಯುರ್ವೇದೀಯ ಅಂಶಗಳು, ಪ್ರಾಣಾಯಾಮ ಮತ್ತು ಕಷಾಯಗಳಿಗೆ ಮೊರೆ ಹೋಗುವುದು ಅನಿವಾರ್ಯ.

ಶ್ರಮ ಆಧಾರಿತ ಜೀವನ ಸುರಕ್ಷಿತ, ಶ್ರಮರಹಿತ ಜೀವನ ಅಸುರಕ್ಷಿತ ಎಂಬುದು ಕೊರೊನಾ ಯುಗದಲ್ಲಿ ದಿಟವಾಗಿದೆ. ನೈಜ ಅಥವಾ ಸಹಜ ಜೀವನ ವಿಧಾನವು ಎಲ್ಲ ಸಮಸ್ಯೆಗಳಿಗೆ ಪರಿಹಾರ. ಹಣವಿದ್ದು ಆರೋಗ್ಯ ಇಲ್ಲದೆ ಪರಿತಪಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಆರೋಗ್ಯವಿದ್ದರೆ ಮಾತ್ರ ಎಲ್ಲ ರೀತಿಯ ಭಾಗ್ಯ. ಆರೋಗ್ಯ ಇಲ್ಲದಿದ್ದರೆ ಆ ಭಾಗ್ಯದಿಂದೇನು ಪ್ರಯೋಜನ? ಶಿವಶರಣರು ಒಂಬೈನೂರು ವರ್ಷಗಳ ಹಿಂದೆಯೇ ಮಾರ್ಮಿಕವಾಗಿ ಇದನ್ನು ಪ್ರತಿಪಾದಿಸಿದ್ದಾರೆ-

ಅರ್ಥರೇಖೆ ಇದ್ದಲ್ಲಿ ಫಲವೇನು?
ಆಯುಷ್ಯರೇಖೆ ಇಲ್ಲದ್ದನ್ನಕ್ಕ- ಬಸವಣ್ಣ

ನಿನ್ನೊಡವೆಯೆಂಬುದು ಜ್ಞಾನರತ್ನ ನೋಡಾ
ಅಂತಪ್ಪ ದಿವ್ಯರತ್ನವ ಕೆಡಕೊಡದೆ
ನೀನಲಂಕರಿಸಿದೆಯಾದಡೆ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ- ಅಲ್ಲಮಪ್ರಭು

ಕೊರೊನಾ ವೈರಾಣು ಮಾನವನಿಗೆ ಬದುಕುವ ಪಾಠ, ಸಹನೆಯ ಪಾಠ, ಆರೋಗ್ಯದ ಪಾಠ, ಮಾನವೀಯ ಪಾಠ, ಭಾವನೆಯ ಪಾಠವನ್ನಷ್ಟೇ ಅಲ್ಲದೆ ವಸ್ತುಗಳ ಬೆಲೆ, ಜೀವದ ಬೆಲೆ, ಸಂಬಂಧದ ಬೆಲೆ, ಸರಳತೆಯ ಬೆಲೆ ಎಲ್ಲವನ್ನೂ ಹೇಳಿಕೊಟ್ಟಿದೆ. ಧರ್ಮಗ್ಲಾನಿ ಆದಾಗಲೆಲ್ಲ ಸತ್ಪುರುಷರು ಬರುತ್ತಾರೆಂದು ಭಗವದ್ಗೀತೆ ಪ್ರತಿಪಾದಿ
ಸುತ್ತದೆ. ಅಸಮಾನತೆ, ಅನ್ಯಾಯ, ಅಕ್ರಮ, ಪರಿಸರ ಮಾಲಿನ್ಯ ಮತ್ತು ಶೋಷಣೆ ಮಿತಿಮೀರಿದಾಗ ಸ್ವತಃ ನಿಸರ್ಗವೇ ನಿಯಂತ್ರಿಸಲು ಮುಂದಾಗುತ್ತದೆ ಎಂಬುದಕ್ಕೆ ಕೊರೊನಾ ಸೋಂಕು ಸಾಕ್ಷಿ ಆಗಿದೆ. ಬ್ರಹ್ಮಾಂಡ ಅಂದರೆ ಪ್ರಕೃತಿಗೆ ಅಖಂಡ ಅಧಿಕಾರವಿದ್ದಾಗ್ಯೂ ಅದು ವಿನಯದಿಂದ ಬಾಗುತ್ತದೆ. ಮಾನವ ಹಾಗಲ್ಲ! ಒಂದು ಸಣ್ಣ ಹುದ್ದೆ ಸಿಕ್ಕರೂ ಸಾಕು ಅವನು ಬೀಗುತ್ತಾನೆ. ಒಂದಷ್ಟು ಧನಬಲ ಮತ್ತು ಜನಬಲ ಸೇರ್ಪಡೆಯಾದರೆ ಅವನು ಯಾವುದನ್ನೂ ಲೆಕ್ಕಿಸುವುದಿಲ್ಲ. ಜಗತ್ತೇ ತನ್ನದು ಎಂದು ಭಾವಿಸುತ್ತಾನೆ. ಈ ದಿನಗಳಲ್ಲಿ ಅವನು ಏನೂ ಮಾಡುವುದು ಬೇಡ. ತನ್ನ ಆರೋಗ್ಯ, ತನ್ನ ಜೀವ ಉಳಿಸಿಕೊಳ್ಳುವುದರ ಜೊತೆಗೆ ಸಾಧ್ಯವಾದರೆ ತನ್ನವರ ಆರೋಗ್ಯ ಹಾಗೂ ಜೀವ, ಜೀವನ ಉಳಿಸಿಕೊಂಡರೆ ಸಾಕು. ಮಾನವನಾಗಿ ಜನಿಸಿದ್ದಕ್ಕೆ ಸಾರ್ಥಕ.

ತನ್ನ ಬಳಿ ಹಣ ಇಲ್ಲ ಎಂಬುದು ಒಂದು ಚಿಂತೆಯಾದರೆ, ತನ್ನ ಬಳಿ ಇರಬಹುದಾದ ಹಣದಿಂದ ನೂರಾರು ಚಿಂತೆ. ಶ್ರೀಮಂತಿಕೆಯಿಂದ ಜೀವ ಉಳಿಸಿಕೊಳ್ಳಬಹುದು ಎಂಬ ಮಾತು ಈಗ ಸುಳ್ಳಾಗಿದೆ. ಸುನಾಮಿ, ಭೂಕಂಪ, ಜ್ವಾಲಾಮುಖಿ, ಅತಿವೃಷ್ಟಿ ಮತ್ತು ಅನಾವೃಷ್ಟಿಯಂಥ ಪ್ರಕೃತಿ ಪ್ರಕೋಪಗಳು ಸಂಭವಿಸುತ್ತ ಬಂದಿದ್ದು, ಮಾನವ ಅದರಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಕಾಂಗೋ ಜ್ವರ, ಎಬೊಲಾ ವೈರಸ್, ಜಿಕಾ ವೈರಸ್, ಸಾರ್ಸ್ ವೈರಸ್, ಡೆಂಗಿ ಜ್ವರ, ಹಕ್ಕಿಜ್ವರ, ಮೆದುಳುಜ್ವರ ಮುಂತಾದ ಬೇನೆಗಳು ಮಾನವ ಜೀವನವನ್ನು ಕಾಡುತ್ತ ಬಂದರೂ ಅವನಿಗೆ ಬುದ್ಧಿ ಬರಲಿಲ್ಲ. ಇಷ್ಟೆಲ್ಲ ಅನಾಹುತ ನಡೆದಾಗ್ಯೂ ನಿರ್ಲಕ್ಷ್ಯದಿಂದ ವರ್ತಿಸಿದ, ಎಂದಿನಂತೆ ತನ್ನ ಭ್ರಮೆಯಲ್ಲಿ ತಾನುಳಿದ. ನಿಸರ್ಗದ ಮೇಲೆ ನಿರಂತರ ಕ್ರೌರ್ಯ ಎಸಗುತ್ತಾ ನಡೆದ. ಅದರ ಪಾಪದ ಫಲವೇ ಕೊರೊನಾ ವೈರಸ್‌ ಅಥವಾ ಕೋವಿಡ್-19 ರೋಗ. ಪಾಪಕ್ಕೆ ಪ್ರಾಯಶ್ಚಿತ್ತ ಬೇಕಲ್ಲವೇ? ಕೆಲವರ ಬಳಿ ಹಣವಿಲ್ಲವೆಂಬ ನಿರಾಸೆ, ಕೆಲವರಿಗೆ ದುಡ್ಡಿದ್ದೂ ದುರಾಸೆ. ಕೆಲವರ ದುರಾಸೆಯು ಹಲವರ ಬದುಕಿನಲ್ಲಿ ನಿರಾಸೆ ಹುಟ್ಟಿಸಿದೆ. ಇನ್ನಾದರೂ ಮಾನವ ತನ್ನ ಅತಿಯಾದ ಲಾಲಸೆಗೆ ಕಡಿವಾಣ ಹಾಕುತ್ತ, ತಾನೂ ಬದುಕಿ ಇತರರನ್ನೂ ಬದುಕಲು ಬಿಡಬೇಕು. ಇಲ್ಲವಾದಲ್ಲಿ ನಿಸರ್ಗವೇ ಮುಂದಾಗಿ ಮಾನವನ ಎಲ್ಲ ದುರಾಗ್ರಹ ಮತ್ತು ದುರಾಸೆಗೆ ಕಡಿವಾಣ ಹಾಕುತ್ತದೆ.

ಮಾನವ ಪ್ರಪಂಚದಲ್ಲಿ ಈಗಾಗಲೇ ನಿರಂತರ ಸಂಕಷ್ಟ ಆರಂಭವಾಗಿದೆ. ಅದನ್ನು ತಡೆಯುವ ದೃಷ್ಟಿಕೋನ ಬೇಕಾಗಿದೆ. ಒಂದಿಲ್ಲೊಂದು ವೈರಸ್ ಹುಟ್ಟಿಕೊಳ್ಳುತ್ತಿದ್ದು, ಮುಂಜಾಗ್ರತೆ ವಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನೈಸರ್ಗಿಕ ಪ್ರಕೋಪಗಳಿಂದ ಮಾನವ ಭೌತಿಕ ಆಸ್ತಿಯನ್ನು, ಒಮ್ಮೊಮ್ಮೆ ಪ್ರಾಣವನ್ನೂ ಕಳೆದುಕೊಳ್ಳಬಹುದು. ವೈರಾಣುಗಳಿಂದ ಮಾನವ ಜೀವ ಕಳೆದುಹೋಗುತ್ತದೆ. ಮಾನವ ಸಂತತಿ ಕ್ಷೀಣಿಸುತ್ತದೆ. ಈ ದಿಸೆಯಲ್ಲಿ ಶಾಶ್ವತ ಪರಿಹಾರ ಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು