ಶುಕ್ರವಾರ, ಜನವರಿ 27, 2023
21 °C
ಕನಸುಗಳ ನೆಪದಲ್ಲಿ ಗ್ರಾಮೀಣ ಭಾರತದ ಕಟು ವಾಸ್ತವಗಳ ಕಾಣಿಸುವ ಪ್ರಯತ್ನ

ರಘುನಾಥ ಚ.ಹ. ಬರಹ: ಗ್ರಾಮೀಣ ಅಂತಃಕರಣಕ್ಕೆ ‘ಬಂಡಿ’ಗನ್ನಡಿ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ಊರೊಂದನ್ನು ಒಗ್ಗೂಡಿಸುವ ಸಂಗತಿಗಳು ಯಾವುವು? ‘ಸಿನಿಮಾ’ ಅಂಥ ಸಂಗತಿಗಳಲ್ಲೊಂದು ಎನ್ನುತ್ತದೆ ‘ಸಿನಿಮಾ ಬಂಡಿ’. ಪಕ್ಕದಲ್ಲಿ ಕುಳಿತ ವ್ಯಕ್ತಿಯ ಹಿನ್ನೆಲೆಯ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರೇಕ್ಷಕ, ಪರದೆಯ ಮೇಲಿನ ಬಿಂಬಗಳಲ್ಲಿ ಕಳೆದುಹೋಗುತ್ತಾನೆ ಹಾಗೂ ವಿವಿಧ ಜಾತಿ, ಧರ್ಮ, ಸಾಮಾಜಿಕ ಹಿನ್ನೆಲೆಗಳ ಜನ ಚಿತ್ರಮಂದಿರದ ಮಬ್ಬಿನಲ್ಲಿ ಒಟ್ಟುಗೂಡಿ ಪರದೆಯ ಮೇಲಿನ ಬೆಳಕನ್ನು ಮನಸ್ಸಿಗಿಳಿಸಿಕೊಳ್ಳುತ್ತಾರೆ. ಇದು ಸಿನಿಮಾದಿಂದ ಸಾಧ್ಯವಾಗುವ ಜಾದೂ. ಯಾವುದೇ ಕಲೆಯ ಉದ್ದೇಶ ಮನುಷ್ಯನ ಮನಸ್ಸನ್ನು ತಿಳಿಗೊಳಿಸುವುದು ಎನ್ನುವು ದಾದರೆ, ಆ ಉದ್ದೇಶವನ್ನು ಉಳಿದೆಲ್ಲ ಕಲೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸಿನಿಮಾ ಮಾಡುತ್ತದೆ. 

‘ನೆಟ್‌ಫ್ಲಿಕ್ಸ್‌’ನಲ್ಲಿ ತೆರೆಕಂಡಿರುವ ‘ಸಿನಿಮಾ ಬಂಡಿ’ ತೆಲುಗು ಚಿತ್ರೋದ್ಯಾನದಲ್ಲಿ ಅರಳಿರುವ ಅಪರೂಪದ ಮಂದಾರ. ಬಹುಕೋಟಿ ಬಜೆಟ್‌ನ ವ್ಯಾಪಾರಿ ಸಿನಿಮಾ ಗಳಿಗೆ ಪ್ರಸಿದ್ಧವಾದ ತೆಲುಗು ಚಿತ್ರರಂಗದಲ್ಲಿ, ಕಥೆಗೆ ಒತ್ತು ನೀಡುವ ಸರಳ ಗುಣಾತ್ಮಕ ಸಿನಿಮಾಗಳು ಅಪರೂಪಕ್ಕೊಮ್ಮೆ ರೂಪುಗೊಳ್ಳುವುದಿದೆ. ಅಂಥ, ಕಣ್ಣರಳಿಸಬಹುದಾದ ಕೃತಿ ‘ಸಿನಿಮಾ ಬಂಡಿ’. ಈ ಬಂಡಿ ಕನ್ನಡದ ಪ್ರೇಕ್ಷಕರಿಗೆ ಆಪ್ತವಾಗಲಿಕ್ಕೆ ವಿಶೇಷ ಕಾರಣವೊಂದಿದೆ. ಅದು, ಕೋಲಾರದ ಪರಿಸರದಲ್ಲಿ, ಅಲ್ಲಿನ ಕನ್ನಡ ಸೊಗಡು ಬೆರೆತ ತೆಲುಗನ್ನು ಒಳಗೊಂಡು ರೂಪುಗೊಂಡಿರುವುದು. ಆದರೆ, ಕೋಲಾರದ ಬಹುಭಾಷಿಕ ವಾತಾವರಣವನ್ನು ಚಿತ್ರತಂಡ ಬಳಸಿಕೊಳ್ಳದಿರುವುದು ಅಚ್ಚರಿಯ ಸಂಗತಿ ಹಾಗೂ ಅದು ಸಿನಿಮಾಕ್ಕಾಗಿರುವ ನಷ್ಟ ಕೂಡ. 

ಪಾತ್ರ ಸೃಷ್ಟಿ, ಆಯ್ಕೆ, ನಿರೂಪಣೆ, ಭಾಷಾಸೊಗಡು, ಸಿನಿಮಾದುದ್ದಕ್ಕೂ ಹಾಸುಹೊಕ್ಕಾಗಿರುವ ಹಾಸ್ಯ, ಸರಳತೆಯಲ್ಲಿ ಸಾಧಿಸಿರುವ ಅಪೂರ್ವ ಸೌಂದರ್ಯ, ಗಂಭೀರ ಸಿನಿಮಾ ವ್ಯಾಕರಣ – ಈ ಎಲ್ಲ ಸಂಗತಿಗಳಲ್ಲಿ ‘ಸಿನಿಮಾ ಬಂಡಿ’ ಕನ್ನಡದ ‘ತಿಥಿ’ಯ ಕಿರಿಯ ಸೋದರನಂತಿದೆ. ಕನ್ನಡದ ಗಡ್ಡಪ್ಪನನ್ನು ಹೋಲುವಂಥ ಪಾತ್ರ ತೆಲುಗಿನ ಬಂಡಿಯಲ್ಲೂ ಇದೆ. ಎರಡೂ ಸಿನಿಮಾಗಳ ಆತ್ಮಸಾಕ್ಷಿಯಂತೆ ಈ ಪಾತ್ರಗಳಿವೆ. ಗಡ್ಡಪ್ಪ ಸಿನಿಮಾದುದ್ದಕ್ಕೂ ಮಾತನಾಡಿದರೆ, ಬಂಡಿಯ ಅಜ್ಜನಿಗಿರುವುದು ಒಂದೇ ಡೈಲಾಗ್‌. ‘ನನಗೆ ಓದು ಬರಹ ತಿಳಿದಿಲ್ಲ’ ಎನ್ನುವ ಅಜ್ಜನ ಮಾತು ಸಿನಿಮಾದ ಕ್ಲೈಮ್ಯಾಕ್ಸ್‌ ಮಾತ್ರವಲ್ಲ; ಬಂಡಿಗೆ ಹೊಸ ದೃಷ್ಟಿಕೋನವೊಂದನ್ನು ಕರುಣಿಸುವ ಮಾತೂ ಹೌದು. 

ಸಿನಿಮಾದ ಶೀರ್ಷಿಕೆಗೆ ಪೂರಕವೆನ್ನುವಂತೆ ಕಥಾ ನಾಯಕ ವೀರಬಾಬು ರಿಕ್ಷಾವಾಲ. ಹಳ್ಳಿಯ ಕೊರಕಲು ರಸ್ತೆಗಳಿಂದ ಸುಧಾರಣೆಗೊಂಡ ರಸ್ತೆಗಳ ಪಟ್ಟಣಗಳಿಗೆ ಆಟೊ ಮೂಲಕ ಜನರನ್ನು ಸಾಗಿಸುವ ಆತನಿಗೆ, ಅನಿಯಮಿತ ಮಳೆಯಿಂದಾಗಿ ಕೃಷಿಯ ಮೇಲೆ ನಂಬಿಕೆ ಕಳೆದುಕೊಂಡು ನಗರದತ್ತ ಮುಖ ಮಾಡಿರುವ ರೈತ ಕುಟುಂಬಗಳ ಬಗ್ಗೆ ಬೇಸರ. ಎಲ್ಲರೂ ನಗರಕ್ಕೆ ಹೋದರೆ ಹಳ್ಳಿಯನ್ನು ಉದ್ಧಾರ ಮಾಡುವವರು ಯಾರು ಎಂದು ಪ್ರಶ್ನಿಸುವ ಆತ, ಇಂದಲ್ಲಾ ನಾಳೆ ಹಳ್ಳಿಯಲ್ಲೂ ಏನಾದರೂ ಪವಾಡ ನಡೆಯುತ್ತದೆ ಎಂದು ನಂಬಿರುವ ಆಶಾವಾದಿ. ಅವನ ಆಶಾವಾದಕ್ಕೆ ಇಂಬುಕೊಡುವಂತೆ ಆಟೊದಲ್ಲಿ ಯಾರೋ ಬಿಟ್ಟುಹೋದ ಕ್ಯಾಮೆರಾವೊಂದು ದೊರೆಯುತ್ತದೆ. ಆ ಕ್ಯಾಮೆರಾ ವೀರಬಾಬುವಿನ ಪಾಲಿಗೆ ಕನಸುಗಳ ಪೆಟ್ಟಿಗೆಯಾಗಿ ಪರಿಣಮಿಸಿ, ತಾನೊಂದು ಸಿನಿಮಾ ಮಾಡಲು ಮುಂದಾಗುತ್ತಾನೆ. ಅವನ ಕನಸಿಗೆ ಕಣ್ಣಾಗಿ, ಊರಿನಲ್ಲಿ ಮದುವೆಮುಂಜಿಗಳ ಫೋಟೊ ತೆಗೆಯುತ್ತಿದ್ದ ಫೋಟೊಗ್ರಾಫರ್‌ ಗಣ ಅಲಿಯಾಸ್‌ ಗಣಪತಿ ಜೊತೆಯಾಗುತ್ತಾನೆ. ಕಥೆಗಾರ ಮಂಜಣ್ಣನಂಥ ಅಜ್ಜ, ನಾಯಕನ ಪಾತ್ರಕ್ಕೆ ಆಯ್ಕೆಯಾಗುವ ಮರಿಡಯ್ಯ, ನಾಯಕಿ ಪಾತ್ರ ಒಪ್ಪಿಕೊಳ್ಳುವ ಶಾಲಾ ಬಾಲಕಿ ಹಾಗೂ ತರಕಾರಿ ಮಾರುವ ಮಂಗಾ, ಸಹಾಯಕ ನಿರ್ದೇಶಕನ ರೂಪದಲ್ಲಿ ಒದಗಿಬರುವ ಬಾಲಕ, ಹೀಗೆ ಬೆಳೆಯುವ ಚಿತ್ರತಂಡವನ್ನು ಊರು ಕಡೆಗಣ್ಣಿನಲ್ಲಿಯೇ ಗಮನಿಸುತ್ತದೆ. ಸಿನಿಮಾ ಮೂಲಕ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಹಂಬಲಿಸುವ ವೀರನ ಪ್ರಯತ್ನವನ್ನು ಅವನ ಹೆಂಡತಿ ಗಂಗಾ ಮೊದಲಿಗೆ ವಿರೋಧಿಸಿದರೂ, ನಂತರದಲ್ಲಿ ಗಂಡನಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಕೂಲಿ ಕೆಲಸಕ್ಕೆ ಹೋಗುವ ಮೂಲಕ ಮನೆಯ ಜವಾಬ್ದಾರಿವಹಿಸಿಕೊಳ್ಳುತ್ತಾಳೆ. ಊರಿನ ಜನರೂ ತಮ್ಮ ದಂದುಗ ಗಳಿಂದ ಹೊರಬಂದು ಸಿನಿಮಾ ನಿರ್ಮಾಣದ ವಿನೋದ ದಲ್ಲಿ ಭಾಗಿಯಾಗುತ್ತಾರೆ. ವೀರನ ಸಿನಿಮಾ ಊರಿನ ಸಿನಿಮಾ ಆಗುವ ಮೂಲಕ, ‘ಪ್ರತಿಯೊಬ್ಬನೂ ಸಿನಿಮಾ ನಿರ್ಮಾತೃ’ (Everyone is a filmmaker) ಎನ್ನುವ ಸಿನಿಮಾಬಂಡಿಯ ಧ್ಯೇಯವಾಕ್ಯ ಸಾಕಾರಗೊಳ್ಳುತ್ತದೆ. 

‘ಸಿನಿಮಾ ಬಂಡಿ’ ಹಳ್ಳಿಯ ಜನರಲ್ಲಿನ ಸಿನಿಮಾ ಹುಚ್ಚಿನ ಕುರಿತಷ್ಟೇ ಹೇಳುತ್ತಿದೆ ಎಂದುಕೊಂಡರೆ ಅದು ನಮ್ಮ ನೋಟದ ಮಿತಿ. ಈ ಸಿನಿಮಾ ಹಳ್ಳಿಯ ಅಂತರಂಗಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನು ಸೂಚ್ಯವಾಗಿ ಮಾಡಿದೆ. ಸಿನಿಮಾ ಬಂಡಿ ಕನಸುಗಳನ್ನಷ್ಟೇ ಕಾಣಿಸುವುದಿಲ್ಲ; ಕನಸುಗಳ ನೆಪದಲ್ಲಿ ಊರಿನ ಅಗತ್ಯಗಳನ್ನೂ ಕಟು ವಾಸ್ತವಗಳನ್ನೂ ಕಾಣಿಸುವ ಕೆಲಸ ಮಾಡುತ್ತದೆ. ಇಡೀ ಸಿನಿಮಾದಲ್ಲಿ ಹಾಸುಹೊಕ್ಕಾಗಿರುವ ಹಾಸ್ಯದ ಹಿನ್ನೆಲೆಯಲ್ಲಿ ವಿಷಾದ ಇಣುಕಿದೆ. ಹಳ್ಳಿಗಳಿಂದ ನಗರಕ್ಕೆ ಜನರ ವಲಸೆ ನಿಲ್ಲಿಸುವ ಹಾಗೂ ಶಿಥಿಲಗೊಂಡಿರುವ ಶಾಲೆಯನ್ನು ಬಲಪಡಿಸಬೇಕಾದ ಅಗತ್ಯದ ಬಗ್ಗೆ ಬಂಡಿ ಗಮನಸೆಳೆಯುತ್ತದೆ. ಪ್ರೇಮವಿವಾಹ ಗ್ರಾಮೀಣ ಸಮಾಜದಲ್ಲಿ ತರುವ ಚಲನೆಯನ್ನು ಕಾಣಿಸುತ್ತದೆ. ಮಳೆಯಲ್ಲಿ ಹಾಡೊಂದನ್ನು ಚಿತ್ರೀಕರಿಸಲು ಚಿತ್ರತಂಡ ಪಡುವ ಪಡಿಪಾಟಲು ನಗು ತರಿಸಿದರೂ, ಮಳೆಯ ಕಣ್ಣಾಮುಚ್ಚಾಲೆ ಗ್ರಾಮೀಣರ ಆತ್ಮವಿಶ್ವಾಸ ಕುಗ್ಗಿಸಿರುವು ದರ ವ್ಯಥೆಯನ್ನು ಆ ದೃಶ್ಯಗಳು ಕಾಣಿಸುವಂತಿವೆ. ಚಿತ್ರತಂಡದ ಮಳೆನೃತ್ಯದ ಹಾಡಿನ ಹಂಬಲಕ್ಕೆ ನೀರೆರೆ ಯುವಂತೆ ಮುಗಿಲು ಆಸೆ ತೋರಿಸಿದರೂ ಮೋಡಗಳು ದಯೆ ತೋರುವುದಿಲ್ಲ. ಕ್ಯಾಮೆರಾ ಕೈತಪ್ಪಿಹೋಗಿ ಚಿತ್ರೀಕರಣ ಅಪೂರ್ಣವಾದಾಗ, ಚಿತ್ರತಂಡದ ಸಂಕಟಕ್ಕೆ ಸ್ಪಂದಿಸುವಂತೆ ಮುಗಿಲು ಹನಿಗಣ್ಣಾಗುತ್ತದೆ. ನಗರದ ಯುವತಿಯ ಒಳ್ಳೆಯತನದಿಂದಾಗಿ ಗೊಲ್ಲಪಲ್ಲಿಯ ಜನರ ಸಿನಿಮಾ ಪೂರ್ಣಗೊಳ್ಳುತ್ತದೆ. ಕನಸೊಂದು ನನಸಾಗುವ ಈ ಕ್ರಿಯೆ, ಗ್ರಾಮೀಣಾಭಿವೃದ್ಧಿಯ ಬಂಡಿಗೆ ಇಂಧನ ಊಡಿಸುವಂತಿದೆ. 

‘ಸಿನಿಮಾ ಬಂಡಿ’ ಗ್ರಾಮೀಣರಲ್ಲಿನ ಸುಪ್ತ ಚೈತನ್ಯ ಹಾಗೂ ಅಂತಃಕರಣಕ್ಕೆ ಹಿಡಿದಿರುವ ಕ್ಯಾಮೆರಾ ಬೆಳಕೂ ಹೌದು. ಕೊರೊನಾ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್‌ ಸಂದರ್ಭದಲ್ಲಿ, ನಗರಗಳಲ್ಲಿನ ಲಕ್ಷ ಲಕ್ಷ ಕಾರ್ಮಿಕರು ಮತ್ತೆ ಹಳ್ಳಿಗಳ ಹಾದಿ ಹಿಡಿದರಲ್ಲ; ಅನ್ನ ಹುಡುಕಿಕೊಂಡು ನಗರಕ್ಕೆ ವಲಸೆ ಬಂದಿದ್ದ ಅವರೆಲ್ಲ ಮತ್ತೆ ಯಾವ ನಿರೀಕ್ಷೆ, ನಂಬಿಕೆಯಿಂದ ತಮ್ಮೂರುಗಳಿಗೆ ಮರಳಿದರು? ಈ ಪ್ರಶ್ನೆಗೆ ಉತ್ತರ ಸಂಕೀರ್ಣವಾದುದೇನೂ ಅಲ್ಲ. ಹಂಚಿಕೊಂಡು ತಿನ್ನುವ ಅಂತಃಕರಣ ಹಾಗೂ ಕಷ್ಟದಲ್ಲಿ ಇರುವವರಿಗೆ ಮರುಗುವ ಮನಸ್ಸುಗಳು ಹಳ್ಳಿಗಳಲ್ಲಿನ್ನೂ ಇವೆ ಎನ್ನುವ ನಂಬಿಕೆ ಜನರಲ್ಲಿದೆ. ಆ ನಂಬಿಕೆಯನ್ನು ‘ಸಿನಿಮಾ ಬಂಡಿ’ ಗಟ್ಟಿಗೊಳಿಸುತ್ತದೆ. ಹಳ್ಳಿಯ ಜನ ಒಗ್ಗಟ್ಟಾಗಿ ನಿಂತರೆ ಏನನ್ನಾದರೂ ಸಾಧಿಸಬಲ್ಲರು ಎನ್ನುವ ಸೂಚನೆ ಸಿನಿಮಾದಲ್ಲಿದೆ. ಹಾಗೆ ಸಾಧಿಸಬೇಕಾದುದು ಏನನ್ನು? ಊರಿನ ಶಾಲೆಯ ಬೆನ್ನು ಮೂಳೆ ಗಟ್ಟಿಗೊಳಿಸುವುದು, ಕೆರೆಯ ಆರ್ದ್ರತೆಯನ್ನು ಕಾಪಾಡಿಕೊಳ್ಳುವುದು, ಜಾತಿಯ ರಾಜಕಾರಣದಿಂದ ದೂರ ಉಳಿಯುವುದು, ಗ್ರಾಮೀಣ ಉದ್ಯೋಗಾವಕಾಶ ಗಳನ್ನು ಸೃಷ್ಟಿಸಿಕೊಳ್ಳುವುದು – ಇವೆಲ್ಲ ಊರಿನ ಆರೋಗ್ಯಕ್ಕಾಗಿ ಆಗಬೇಕಾದ ಕೆಲಸಗಳು. ಸದ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ, ಕೊರೊನಾ ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಗ್ರಾಮಗಳು ಒಗ್ಗಟ್ಟನ್ನು ತೋರಿಸಬೇಕಾಗಿದೆ. ಯಾರೋ ನಮ್ಮ ನೆರವಿಗೆ ಬರುತ್ತಾರೆ ಎನ್ನುವ ನಿರೀಕ್ಷೆಯನ್ನು ಬಿಟ್ಟು ಗ್ರಾಮೀಣರು ಒಟ್ಟಾಗಿ, ಒಗ್ಗಟ್ಟಾಗಿ ನಿಂತರೆ ಕೊರೊನಾ ಮಾತ್ರವೇನು, ಯಾವುದೇ ಸೋಂಕಾದರೂ ಪೇರಿ ಕೀಳಲೇಬೇಕು. 

‘ಸಿನಿಮಾ ಬಂಡಿ’ ಯುವ ಪ್ರತಿಭೆಗಳ ಕಲಾಕೃತಿ. ಪ್ರವೀಣ್‌ ಕಂಡ್ರೇಗುಲ ಅವರಿಗಿದು ಚೊಚ್ಚಿಲ ನಿರ್ದೇಶನದ ಸಂಭ್ರಮ. ಮುಖ್ಯಪಾತ್ರಗಳಾದ ವೀರ ಬಾಬು ಹಾಗೂ ಮಂಗಾನ ಪಾತ್ರಗಳಲ್ಲಿ ನಟಿಸಿರುವ ವಿಕಾಸ್‌ ವಸಿಷ್ಠ ಹಾಗೂ ಉಮಾ ಕನ್ನಡದ ಪ್ರತಿಭೆಗಳು. ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿರುವ ಅಪೂರ್ವ ಶಾಲಿಗ್ರಾಮ ಮತ್ತು ಸಾಗರ್‌, ಸಂಗೀತ ಸಂಯೋಜಿಸಿರುವ ಸತ್ಯವೋಲು ಶಿರೀಷ್ ಕೂಡ ಹೊಸ ಕನಸುಗಳ ಹಂಬಲದ ಸೃಜನಶೀಲರು. ಯುವ ತಂಡವನ್ನು ಅಭಿನಂದಿಸುತ್ತಲೇ, ‘ಸಿನಿಮಾ ಬಂಡಿ’ಯಲ್ಲಿರುವ ಪಾಠವೊಂದನ್ನು ಕನ್ನಡ ಸಿನಿಮಾ ನಿರ್ಮಾತೃಗಳ ಗಮನಕ್ಕೆ ತರಬೇಕು. ಹಳೆಯದಾದರೂ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಆ ಪಾಠ: ಸಿನಿಮಾ ಮಾಡಲಿಕ್ಕೆ ಮುಖ್ಯವಾದುದು ಕಥೆ ಹಾಗೂ ಸ್ವಂತಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು