ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮನಿಗೆ ಕಟ್ಟಿದ ಗೋಡೆ

ಅಮೆರಿಕದ ಅಧ್ಯಕ್ಷರು ಕಾಣದೇ ಹೋದ ಗೋಡೆಯ ಹಿಂದಿನ ಗಾಂಧಿ
Last Updated 26 ಫೆಬ್ರುವರಿ 2020, 3:03 IST
ಅಕ್ಷರ ಗಾತ್ರ
ADVERTISEMENT
""

ಗೋಡೆಗಳನ್ನು ಕಟ್ಟುವುದು ಹಾಗೂ ಒಡೆಯುವುದು ಮನುಕುಲಕ್ಕೆ ಹೊಸತೇನಲ್ಲ. ಕಟ್ಟುವ ಹಂಬಲದೊಂದಿಗೆಕೆಡಹುವ ಇಲ್ಲವೇ ಮೀರುವ ಗುಣಗಳು ಚರಿತ್ರೆಯುದ್ದಕ್ಕೂ ಮನುಷ್ಯನ ಮೂಲಭೂತ ಲಕ್ಷಣಗಳಾಗಿ ಗುರ್ತಿಸಿಕೊಂಡು ಬಂದಿವೆ. ಈ ವಿರೋಧಾಭಾಸದ ಗುಣಕ್ಕೆ ಅತ್ಯುತ್ತಮ ಉದಾಹರಣೆ ಗೋಡೆ. ಅದರ ಒಂದು ಬದಿಯಲ್ಲಿ ನಿಯಂತ್ರಣದ ಬಿಂಬವಿದ್ದರೆ, ಮತ್ತೊಂದು ಬದಿಯಲ್ಲಿ ಉಲ್ಲಂಘನೆಯ ರೂಪವಿರುತ್ತದೆ.ಮತ್ತಷ್ಟು ಬಿಡಿಸಿ ಹೇಳುವುದಾದರೆ– ಸ್ವಾತಂತ್ರ್ಯದ ರಕ್ಷಣೆಗಾಗಿ ಗೋಡೆಯನ್ನು ಕಟ್ಟಲಾಗುತ್ತದೆ; ಹಾಗೆಯೇ, ಸ್ವಾತಂತ್ರ್ಯದ ಹಂಬಲದಲ್ಲಿ ಗೋಡೆಯನ್ನು ಹಾರಲಾಗುತ್ತದೆ, ಒಡೆಯ
ಲಾಗುತ್ತದೆ. ಗೋಡೆಯಾಚೆಗೆ ಸ್ವಾತಂತ್ರ್ಯ ಇದೆ, ಕೆಲವು ಸಂದರ್ಭಗಳಲ್ಲಿ ಈಚೆಗೂ ಇದೆ. ಕಾರಾಗೃಹದ ಸಂದರ್ಭದಲ್ಲಿ ಗೋಡೆಗಳು ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ರಚನೆಗಳಾಗಿವೆ.

ರಘುನಾಥ ಚ.ಹ.

ಗೋಡೆ ಕಟ್ಟುವುದರ ಉದ್ದೇಶವಾದರೂ ಏನು? ಖಾಸಗಿತನ, ರಕ್ಷಣೆಯ ಹೆಸರಿನಲ್ಲಿ ಗೋಡೆಗಳು ರೂಪುಗೊಳ್ಳುತ್ತವೆ. ಮನೆಯೊಳಗೆ ಗೋಡೆಗಳು ಹೆಚ್ಚಾದಂತೆಲ್ಲ ಅವು ಮನಸುಗಳ ನಡುವಿನ ಗೋಡೆಗಳಾಗಿ ಬದಲಾಗುವ ಸಾಧ್ಯತೆಯಿರುತ್ತದೆ. ಈ ಕೊರತೆ ತುಂಬಿಕೊಳ್ಳುವ ಉದ್ದೇಶದಿಂದಲೋ ಏನೋ ಗೋಡೆಗಳನ್ನು ಅಲಂಕರಿಸಲು, ಕಿಟಕಿಗಳನ್ನು ಅಳವಡಿಸಿ ಗಾಳಿಬೆಳಕಿನ ಸಂಸರ್ಗಕ್ಕೆ ಅವಕಾಶ ಕಲ್ಪಿಸುವ ಮೂಲಕ ಗೋಡೆಗಳ ಜಡತೆಯನ್ನು ಕ್ಷೀಣಗೊಳಿಸಲು ಪ್ರಯತ್ನಿಸುತ್ತೇವೆ. ಆದರೆ ಗೋಡೆಗಳಾಚೆಗಿನ ಮನಸ್ಸುಗಳೊಂದಿಗಿನ ಸಂವಹನವೇ ನಮಗೆ ಎಷ್ಟೋ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ.

ಜಡವಾದರೂ ಗೋಡೆಗೆ ಸೃಜನಶೀಲತೆಯ ಆಯಾಮವಿದೆ. ಗೋಡೆ ಬರಹ ಹಾಗೂ ಪೋಸ್ಟರ್‌ಗಳಿಗೆ ಚಾರಿತ್ರಿಕ ಹಿನ್ನೆಲೆಯೇ ಇದೆ. ಕನ್ನಡದ ಲೇಖಕರಿಗಂತೂ ಗೋಡೆಯು ಜೀವನದ ಅಸಂಗತಗಳನ್ನು ಕಾಣಿಸುವ ಅದ್ಭುತ ರೂಪಕ. ಜಿ.ಎಸ್. ಶಿವರುದ್ರಪ್ಪನವರ ‘ಗೋಡೆ’ ಹೆಸರಿನ ಕವಿತೆ, ಬೊಳುವಾರರ ‘ಒಂದು ತುಂಡು ಗೋಡೆ’ ಕಥೆ, ದೇವನೂರರ ‘ಒಡಲಾಳ’ ನೀಳ್ಗತೆಯ ಗೋಡೆಯ ಮೇಲೆ‌ ಗೌರಿ ಬಿಡಿಸುವ ನವಿಲು– ಇದೆಲ್ಲದರ ಜೊತೆಗೆ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ರ ‘ಗೋಡೆ’ ಎನ್ನುವ ವಿಶೇಷಣವನ್ನೂ ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಗಮನಿಸಬೇಕು.

ಗೋಡೆ ಎಂದಾಕ್ಷಣ ಚಾರಿತ್ರಿಕ‌ ಮಹತ್ವದ ಎರಡು ಗೋಡೆಗಳು ನೆನಪಿಗೆ ಬರುತ್ತವೆ. ಒಂದು, ಚೀನಾದ‌ ಮಹಾಗೋಡೆ, ಇನ್ನೊಂದು, ಜರ್ಮನಿಯನ್ನು ಪೂರ್ವ– ಪಶ್ಚಿಮಗಳಾಗಿ ಒಡೆದಿದ್ದ ಗೋಡೆ. ಎರಡೂ ಈಗ ಪಳೆಯುಳಿಕೆಗಳು. ಹೊಸ ಗೋಡೆಯು ಭಾರತಕ್ಕೆ ಸಂಬಂಧಿಸಿದ್ದು; ಅಹಮದಾಬಾದ್‌ನಲ್ಲಿನ ಕೊಳೆಗೇರಿಯು ಮುಖ್ಯರಸ್ತೆಗೆ ಕಾಣದಂತೆ ಕಟ್ಟಿರುವಂತಹದ್ದು. ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇಲ್ಲಿನ ಬಡತನ, ಕೊಳಕು ಕಣ್ಣಿಗೆ ಬೀಳಬಾರದೆಂಬ ಉದ್ದೇಶದಿಂದ ಕಟ್ಟಿದ ಗೋಡೆ ಸಹಜವಾಗಿಯೇ ಚರ್ಚೆಗೆ ಕಾರಣವಾಗಿದೆ.

‘ಗಾಂಧಿ ನಾಡಿಗೆ ಸ್ವಾಗತ’ ಎಂದು ಅಮೆರಿಕದ ಅಧ್ಯಕ್ಷರನ್ನು ಭಾರತ ಸ್ವಾಗತಿಸಿದೆ. ಗಾಂಧೀಜಿಯ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಮಹಾತ್ಮನ ನೆನಪುಗಳು ಉಸಿರಾಡುತ್ತಿರುವ ನೆಲದಲ್ಲಿ ನಿಂತು ಟ್ರಂಪ್
ರೋಮಾಂಚನಗೊಂಡಿದ್ದೂ ಆಗಿದೆ. ಹೊಸ ಹೊಸ ಸೂಪರ್‌ ಸ್ಟಾರ್‌ಗಳ ಅವತಾರದ ನಂತರವೂ ಅಂತರ
ರಾಷ್ಟ್ರೀಯ ಮಟ್ಟದಲ್ಲಿ ಈಗಲೂ ಭಾರತವನ್ನು ಪ್ರತಿಬಿಂಬಿಸಲಿಕ್ಕೆ ಗಾಂಧೀಜಿ ಅನಿವಾರ್ಯವಾಗಿರುವ ಬಗ್ಗೆ ಪ್ರಜ್ಞಾವಂತರ ವಲಯವೊಂದು ಪುಲಕಗೊಂಡಿದೆ. ಆ ಸಂಭ್ರಮದಿಂದ ಹೊರಗೆ ನಿಂತು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವೆ. ಅವುಗಳೆಂದರೆ– ಗಾಂಧಿ ಈಗ ಜೀವಂತವಾಗಿ ಇದ್ದಿದ್ದರೆ ಅವರನ್ನು ಟ್ರಂಪ್ ಭೇಟಿಯಾಗುತ್ತಿದ್ದರೇ? ಹೌದಾದರೆ ಆ ಭೇಟಿ ಎಲ್ಲಿ ನಡೆಯುತ್ತಿತ್ತು?

ಪ್ರಸ್ತುತ ಸಾಬರಮತಿ ಆಶ್ರಮಕ್ಕೆ ಭೇಟಿ ಕೊಟ್ಟಷ್ಟು ಸಲೀಸಾಗಿ, ಗಾಂಧಿಯು ಜೀವಂತವಾಗಿದ್ದಲ್ಲಿ ಅವರನ್ನು ಟ್ರಂಪ್‌ ಭೇಟಿ ಮಾಡುತ್ತಿದ್ದರೋ ಇಲ್ಲವೋ ಹೇಳುವುದು ಕಷ್ಟ. ಆದರೆ, ಆ ಭೇಟಿಯೇನಾದರೂ ನಡೆದಿದ್ದಲ್ಲಿ ಅದು ಖಂಡಿತವಾಗಿಯೂ ಆಶ್ರಮದಲ್ಲಲ್ಲ; ಯಾವ ಕೊಳೆಗೇರಿಯನ್ನು ಮತ್ತು ಅಲ್ಲಿನ ಜನರನ್ನು ಅಮೆರಿಕದ ಅಧ್ಯಕ್ಷರು ನೋಡಬಾರದೆಂದು ಅಹಮದಾಬಾದ್‌ನಲ್ಲಿ ಗೋಡೆ ಕಟ್ಟಲಾಗಿದೆಯೋ, ಆ ಗೋಡೆಯಾಚೆಗಿನ ಜನರ ನಡುವೆಯೇ ಗಾಂಧಿ ಇರುತ್ತಿದ್ದರು ಮತ್ತು ಅಲ್ಲಿಗೆ ಹೋಗದೆ ಗಾಂಧಿಯನ್ನು ಭೇಟಿ ಮಾಡಲು ಟ್ರಂಪ್ ಮಹಾಶಯನಿಗೆ ಸಾಧ್ಯವಾಗುತ್ತಿರಲಿಲ್ಲ. ಇದೇ ಟ್ರಂಪ್‌, ಭಾರತದ ಪ್ರಧಾನಿಯನ್ನು ನವ ರಾಷ್ಟ್ರಪಿತ ಎಂದು ಸಂಬೋಧಿಸಿದ್ದನ್ನು ನೆನಪಿಸಿಕೊಂಡರೆ, ಅವರ ಗ್ರಹಿಕೆಯ ಗಾಂಧಿಯನ್ನು ಸುಲಭವಾಗಿ ಊಹಿಸಿಕೊಳ್ಳಬಹುದು.

ಗಾಂಧಿ ತಮ್ಮ ಜೀವನದುದ್ದಕ್ಕೂ ಮಿಡಿದದ್ದು ದೀನ ದಲಿತರ ಅಭ್ಯುದಯಕ್ಕಾಗಿ. ಅಂಥ ಸಮೂಹವನ್ನೇ ಗೋಡೆಯಾಚೆಗೆ ಮರೆ ಮಾಡುವ ಪ್ರಯತ್ನವನ್ನು ಅವರು ವಿರೋಧಿಸುತ್ತಿದ್ದರು ಹಾಗೂ ಆ ಜನರ ನಡುವೆಯೇಕುಳಿತು ಉಪವಾಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ, ಅಹಮದಾಬಾದ್‌ನಲ್ಲಿ ಕಟ್ಟಿರುವ ಗೋಡೆಯನ್ನು ಕೊಳೆಗೇರಿಗೆ ಕಟ್ಟಿರುವ ಬಣ್ಣದ ಪರದೆ ಎಂದು ಭಾವಿಸುವುದು ಆತ್ಮವಂಚನೆಯಾದೀತು. ನಿಜ ಅರ್ಥದಲ್ಲದು, ಅಮೆರಿಕದ ಅಧ್ಯಕ್ಷ ಮತ್ತು ಗಾಂಧಿಯ ನಡುವೆ ಕಟ್ಟಿರುವ ಗೋಡೆ ಮತ್ತು ಗೋಡೆಯ ರೂಪದ ಅಧಿಕಾರಶಾಹಿಯೂ ಆಗಿದೆ. ವಾಸ್ತವದಲ್ಲಿ ಟ್ರಂಪ್ ಕಣ್ಣುಗಳಿಂದ ಗಾಂಧಿಯನ್ನು ಮರೆಮಾಚಲಾಯಿತು. ಟ್ರಂಪ್ ಅವರಿಗೆ ಬೇಕಾದುದೂ ಅದೇ. ಅಧಿಕಾರ, ಶ್ರೀಮಂತಿಕೆಯ ಮದ ಮೂರ್ತವೆತ್ತಂತೆ ಕಾಣಿಸುವ ವ್ಯಕ್ತಿ ತನ್ನ ಪ್ರತಿರೂಪದಂತಹ ವ್ಯಕ್ತಿಯನ್ನು ಅಪ್ಪಿಕೊಳ್ಳಬಲ್ಲನೇ ಹೊರತು ಗಾಂಧೀಜಿಯ ಪ್ರಖರ ನೈತಿಕತೆಯ ಸಮ್ಮುಖದಲ್ಲಿ ಪರೀಕ್ಷೆಗೊಳಪಡಲು ಬಯಸುವುದಿಲ್ಲ. ಆ ಹಿಂಜರಿಕೆಯಿಂದಲೇ ಟ್ರಂಪ್‌ ಅಂಥವರು ನಿಜದ ಮಹಾತ್ಮನನ್ನು ಬಯಸುವುದಿಲ್ಲ; ಅವರಿಗೆ ಬೇಕಾದುದು ನೆನಪುಗಳ ಪಳೆಯುಳಿಕೆಯಷ್ಟೇ. ಆ ಪಳೆಯುಳಿಕೆ
ಯನ್ನು ಅವರು ಆಶ್ರಮದಲ್ಲಿ ಕಂಡು ರೋಮಾಂಚನಗೊಂಡಿದ್ದಾರೆ; ಚರಕದ ಎದುರು ನಿಂತು ಫೋಟೊ ತೆಗೆಸಿಕೊಂಡಿದ್ದಾರೆ.

ಟ್ರಂಪ್‌ ಅವರ ಭಾರತ ಭೇಟಿಯ ಸಂದರ್ಭವನ್ನು ಗಮನಿಸಿ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಟ್ರಂಪ್‌ ಅವರು ಗಾಂಧಿಯ ನಾಡಿಗೆ ಭೇಟಿ ಕೊಟ್ಟ ದಿನವೇ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಹತ್ತು ಮಂದಿ ಬಲಿಯಾಗಿದ್ದಾರೆ. ಗಾಂಧೀಜಿಯ ಅಹಿಂಸೆಯ ರೂಪಕ ಮುಕ್ಕಾದ ಸಂದರ್ಭವೂ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ಅಧ್ಯಕ್ಷನ ಭಾರತ ಭೇಟಿಯ ಸಂದರ್ಭವೂ ಒಂದೇ ಆಗಿರುವುದು ಕಾಕತಾಳೀಯ.

ಉಡುಪಿಯ ಕೃಷ್ಣದೇಗುಲದ ಗೋಡೆ ಲೋಕಪ್ರಿಯವಾದುದು. ಗೋಡೆಯಲ್ಲಿ ಕಿಂಡಿಯೊಡೆದು ಕನಕನಿಗೆ ಕೃಷ್ಣನು ದರ್ಶನ ನೀಡಿದ ಕಥೆ ಜನಜನಿತವಾದುದು. ವಿಪರ್ಯಾಸವೆಂದರೆ, ಆ ಭಗವಂತನಿಗೆ ಕೂಡ ಗೋಡೆ ಒಡೆಯಲಾಗಲಿಲ್ಲ; ಗೋಡೆಯಲ್ಲೊಂದು ಕಿಟಕಿ ಮಾಡಿದನಷ್ಟೇ. ಕೃಷ್ಣನೇ ಗೋಡೆ ದಾಟಲಾರನೆಂದ ಮೇಲೆ, ಅವನ ಒಕ್ಕಲಾದ ಮನುಷ್ಯರು ಗೋಡೆಗಳನ್ನು ಮೀರಬೇಕೆಂದು ಹೇಗೆ ನಿರೀಕ್ಷಿಸುವುದು?

ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರೊಮ್ಮೆ ಪು.ತಿ. ನರಸಿಂಹಾಚಾರ್‌ ಅವರ ಮನೆಗೆ ಹೋದಾಗ ಇಳಿಸಂಜೆಯ ಹೊತ್ತು. ಗೋಡೆಗೆ ಮುಖ ಮಾಡಿ ಕುಳಿತಿದ್ದ ಹಿರಿಯರನ್ನು ಕಂಡು ಎಚ್ಚೆಸ್ವಿ ಅವರಿಗೆ ಪಿಚ್ಚೆನ್ನಿಸಿತು. ಕಣ್ಣು ಮಂಜಾದುದರಿಂದ ಪುತಿನ ಹಾಗೆ ಕುಳಿತಿರಬಹುದೆಂದು ಭಾವಿಸಿದ ಅವರು, ‘ಸರ್‌, ಬಾಗಿಲು ನಿಮ್ಮ ಹಿಂಭಾಗಕ್ಕಿದೆ. ದಯವಿಟ್ಟು ತಿರುಗಿ ಕುಳಿತುಕೊಳ್ಳಿ’ ಎಂದರು. ಆಗ ಪುತಿನ, ‘ನಿಮ್ಮ ಕಣ್ಣಿಗೆ ಗೋಡೆ ಕಾಣುತ್ತಿದೆ. ನಾನು ಗೋಡೆಯಾಚೆಗಿನ ಸೂರ್ಯ ಪರಮಾತ್ಮನ ಅಸ್ತಮಿಸುವಿಕೆಯನ್ನು ನೋಡುತ್ತಿದ್ದೇನೆ’ ಎನ್ನುವ ಮೂಲಕ, ಎಚ್ಚೆಸ್ವಿ ಅವರ ಕಣ್ಣಿಗೆ ಅಡ್ಡವಾಗಿದ್ದ ಗೋಡೆಯನ್ನು ಒಡೆದರಂತೆ.

ಪುತಿನ ಅವರ ಕವಿಸಮಯ– ದರ್ಶನವು ಟ್ರಂಪ್‌ ಅವರಿಗೂ ಸಿದ್ಧಿಸಿ, ಅವರು ಅಹಮದಾಬಾದ್‌ನಲ್ಲಿನ ಗೋಡೆಯನ್ನು ದಿಟ್ಟಿಸಿ ನೋಡಿದ್ದಲ್ಲಿ ಅವರಿಗಲ್ಲಿ ಗಾಂಧಿ ಕಾಣುತ್ತಿದ್ದರೇನೊ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT