ಕನ್ನಡದ ಅತ್ಯುತ್ತಮ ಸಣ್ಣಕಥೆಗಳ ಅನೇಕ ಸಂಕಲನಗಳಲ್ಲಿ ಪುನರಾವರ್ತನೆಗೊಂಡಿರುವ ಕಥೆ, ‘ಆನಂದ’ ಕಾವ್ಯನಾಮದಿಂದ ಪ್ರಸಿದ್ಧರಾದ ಅಜ್ಜಂಪುರ ಸೀತಾರಾಮಯ್ಯನವರ ‘ನಾನು ಕೊಂದ ಹುಡುಗಿ.’ ಗಂಡಿನ ಪ್ರಭಾವಳಿಯಿಂದ ಹೊರಗೆ ಉಳಿಯಬಯಸುವ ಹೆಣ್ಣುಮಕ್ಕಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿನ ಬಾಯಿಹರುಕತನ ಹಾಗೂ ಸಮಾಜಕ್ಕೆ ಮಾದರಿ ಆಗಬೇಕಾದವರೇ ಅವಕಾಶ ಸಿಕ್ಕಿದಾಗ ಹೆಣ್ಣನ್ನು ಹುರಿದುಮುಕ್ಕುವ ಪೈಶಾಚಿಕ ಪ್ರವೃತ್ತಿಯ ಹಿನ್ನೆಲೆಯಲ್ಲಿ ಆನಂದರ ಕಥೆಯನ್ನು ಹಲವು ಆಯಾಮಗಳಲ್ಲಿ ಓದುವುದು ಸಾಧ್ಯವಿದೆ.

ಹಳ್ಳಿಯೊಂದರ ಮನೆಗೆ ಅಭ್ಯಾಗತನಾಗಿ ಬರುವ ಕಥಾನಾಯಕ, ಆ ಮನೆಯ ಹೆಣ್ಣುಮಗಳ ಸಾವಿಗೆ ಪರೋಕ್ಷವಾಗಿ ಕಾರಣನಾಗುವುದು ‘ನಾನು ಕೊಂದ ಹುಡುಗಿ’ಯ ಒಂದು ಸಾಲಿನ ಕಥೆ. ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಯುವತಿಯ ಬಗ್ಗೆ ಕಥಾನಾಯಕನ ಪ್ರಾಸಂಗಿಕ ವಿಚಾರಣೆಯೇ ಆಹ್ವಾನವಾಗಿ ಪರಿಣಮಿಸಿ, ಆ ಯುವತಿ ಆ ರಾತ್ರಿ ಅವನ ಕೋಣೆಗೆ ಬರುತ್ತಾಳೆ. ಸಖ್ಯ ಬಯಸಿ ಬಂದ ಹೆಣ್ಣನ್ನು ಕಂಡು ಕಥಾನಾಯಕ ತಬ್ಬಿಬ್ಬು. ನೀನು ಮಾಡುತ್ತಿರುವುದು ಸರಿಯಲ್ಲ; ಈ ವಿಷಯ ನಿನ್ನ ಅಪ್ಪ–ಅಮ್ಮನಿಗೆ ತಿಳಿದರೆ ಇಬ್ಬರಿಗೂ ತೊಂದರೆಯಾಗುತ್ತದೆ ಎಂದು ಬುದ್ಧಿ ಹೇಳುತ್ತಾನೆ. ಆಕೆಯ ಪಾಲಿಗದು ವಿಚಿತ್ರ ಸಂದರ್ಭ. ಅದುವರೆಗೆ ಏಕಾಂತದಲ್ಲಿ ಆಕೆಗೆ ಎದುರಾದ ಯಾವ ಗಂಡಸೂ ಹೀಗೆ ವರ್ತಿಸಿದ್ದಿಲ್ಲ. ಅಲ್ಲದೆ, ತಾನು ಮಾಡುತ್ತಿರುವ ಕೆಲಸವನ್ನು ಸೇವೆ–ಕರ್ತವ್ಯವೆಂದು ಆಕೆ ತಿಳಿದಿದ್ದಾಳೆಯೇ ಹೊರತು, ಅದು ಅನೈತಿಕ ಎನ್ನುವ ಸಣ್ಣ ಶಂಕೆಯೂ ಅವಳಿಗಿಲ್ಲ. ಅತಿಥಿಗಳನ್ನು ತೃಪ್ತಿಪಡಿಸುವುದು ತನ್ನ ಕರ್ತವ್ಯವೆಂದು ಆಕೆಯೂ ನಂಬಿದ್ದಾಳೆ; ಮಗಳನ್ನು ದೇವದಾಸಿಯನ್ನಾಗಿಸಿದ ತಂದೆಯೂ ನಂಬಿದ್ದಾನೆ. ಆ ನಂಬಿಕೆಯನ್ನೇ ಕಥಾನಾಯಕ ಪ್ರಶ್ನಿಸುತ್ತಿದ್ದಾನೆ. ಏನಾದರೂ ಮಾಡಿ ಅವಳು ಮಾಡುತ್ತಿರುವ ಕೆಲಸ ಬಹಳ ಕೆಟ್ಟದ್ದು– ಬಹಳ ನೀಚವಾದದ್ದು– ಬಹಳ ಪಾಪಕೃತ್ಯದ್ದು– ಎಂದು ಅವಳ ಮನಸ್ಸಿಗೆ ಚೆನ್ನಾಗಿ ನಾಟುವಂತೆ ಹೇಳಲು ಪ್ರಯತ್ನಿಸುತ್ತಾನೆ. ಪತಿವ್ರತಾ ಧರ್ಮದ ಬಗ್ಗೆ ಉಪನ್ಯಾಸ ನೀಡುತ್ತಾನೆ. ಅದರ ಫಲವಾಗಿ, ತಾನು ಆವರೆಗೂ ಮಾಡುತ್ತಿದ್ದುದು ಸೇವೆಯಲ್ಲ– ಹಾದರ ಎನ್ನುವ ಅರಿವು ಮತ್ತು ಪಾಪಪ್ರಜ್ಞೆಯಿಂದ ತತ್ತರಿಸುವ ಯುವತಿ ಬಾವಿಗೆ ಬಿದ್ದು ಬದುಕನ್ನು ಕೊನೆಗಾಣಿಸಿಕೊಳ್ಳುತ್ತಾಳೆ. ಇದಿಷ್ಟು ಕಥೆ.

ಕಥೆಯನ್ನು ಓದಿದ ಯಾರಿಗಾದರೂ ಕಥಾನಾಯಕಿ ಚೆನ್ನಿಯ ಬಗ್ಗೆ ಅನುಕಂಪ ಮೂಡುತ್ತದೆ. ಹಾಗೆಯೇ, ಅವಳ ಸಾವಿಗೆ ಪರೋಕ್ಷ
ವಾಗಿ ಕಾರಣನಾಗಿ, ಪಾಪಪ್ರಜ್ಞೆ ಅನುಭವಿಸುವ ಕಥಾನಾಯಕನ ಬಗ್ಗೆಯೂ ಸಹಾನುಭೂತಿ ಉಂಟಾಗುತ್ತದೆ. ಆದರೆ, ಕಥೆಯೊಳಗಿನ ವಿವರಗಳು ಅಷ್ಟು ಸರಳವಾಗಿಲ್ಲ.

ಓದುಗರ ಕಣ್ಣಿಗೆ ಕಥಾನಾಯಕ ಸುಸಂಸ್ಕೃತನಂತೆ ಹಾಗೂ ಪತ್ನಿಯನ್ನಲ್ಲದೆ ಬೇರೆ ಯಾರನ್ನೂ ಮೋಹಿಸದ ವ್ಯಕ್ತಿಯಂತೆ ಕಾಣಿಸುತ್ತಾನೆ. ಆದರೆ, ಮೇಲ್ನೋಟದ ವ್ಯಕ್ತಿತ್ವಕ್ಕೆ ತಕ್ಕಂತೆ ಅವನ ಮಾತು ಮತ್ತು ವರ್ತನೆಯಿಲ್ಲ. ಚೆನ್ನಿಯ ಮುಗ್ಧ ನಗುವನ್ನು ಕಂಡಾಗ, ‘ಪಟ್ಟಣಗಳಲ್ಲಿ ಯುವತಿಯರ ಮಂದಹಾಸವನ್ನು ಅನೇಕ ಸಂದರ್ಭಗಳಲ್ಲಿ ನೋಡಿದ್ದೇನೆ. ಆದರೆ ಅದು ಸಾಧಾರಣವಾಗಿ ದೊಡ್ಡ ದೊಡ್ಡ ಮರಗಳನ್ನುರುಳಿಸಿ ಧೂಳೆಬ್ಬಿಸುವ ಬಿರುಗಾಳಿಯಂತೆ, ಮನಸ್ಸಿನಲ್ಲಿ ಗರ್ಜಿಸುವ ಅಲೆಗಳನ್ನೆಬ್ಬಿಸಿ ಅಲ್ಲೋಲ ಕಲ್ಲೋಲ ಮಾಡುವ ಮುಗುಳ್ನಗೆ. ಚೆನ್ನಮ್ಮನ ಮುಗುಳ್ನಗೆ ಅಂತಹುದಲ್ಲ. ಅದು, ಮೃದುವಾಗಿ ಅಲ್ಲಿ ಸುಳಿದು ಇಲ್ಲಿ ಸುಳಿದು, ಚಿಗುರುಗಳಲ್ಲಿ ತೂರಿ, ಹೂಗೊಂಚಲನ್ನು ಹಾಯ್ದು, ಪರಿಮಳವನ್ನು ಹೊತ್ತು ತರುವ ತಂಗಾಳಿಯಂತೆ, ಹೃದಯದಲ್ಲಿ ಚಿಕ್ಕ ಚಿಕ್ಕ ತರಂಗ ಮಾಲೆಗಳನ್ನು ಹುಟ್ಟಿಸುವ ಸರಳವಾದ ಮುಗುಳ್ನಗೆ’ ಎಂದು ಯೋಚಿಸುತ್ತಾನೆ. ಪೂರ್ವಗ್ರಹ ಮತ್ತು ಭಾವುಕತೆ ಬೆರೆತ ಮಾತುಗಳಿವು. ಈ ಪೂರ್ವಗ್ರಹ ಅಪ್ರಜ್ಞಾಪೂರ್ವಕವಾದುದೋ, ಆಕಸ್ಮಿಕವಾದುದೋ ಅಲ್ಲ. ನಿರೂಪಕ, ನಗರ ನಾಗರಿಕತೆಯನ್ನು ಶ್ರೇಷ್ಠವೆಂದು ಬಗೆದವನು; ಅದೇ ಕಾಲಕ್ಕೆ ಹೆಣ್ಣುಮಕ್ಕಳ ನಡವಳಿಕೆಯ ಬಗ್ಗೆ ಪೂರ್ವಗ್ರಹಪೀಡಿತ.

ತೋಟದ ಬಾವಿಯ ದಂಡೆಯಲ್ಲಿ ಕುಳಿತು ಕೊಳಲೂದುವ ನಿರೂಪಕ, ಚೆನ್ನಿ ಅಲ್ಲಿಗೆ ಬಂದಾಗ ಅನಗತ್ಯವಾಗಿ ನಾಚಿಕೊಳ್ಳುತ್ತಾನೆ. ನಾನು ಪಟ್ಟಣದ ನಾಗರಿಕನೆಂದು ಇವರು ಗೌರವವನ್ನಿಟ್ಟುಕೊಂಡಿದ್ದಕ್ಕೂ, ಈಗ ನಾನು ಗೊಲ್ಲರ ಹುಡುಗನಂತೆ ಕೊಳಲೂದುತ್ತ ಬಾಯಿಗೆ ಬಂದಂತೆ ಅರಚುತ್ತಿದ್ದುದಕ್ಕೂ ಸರಿಹೋಯಿತು ಎಂದುಕೊಳ್ಳುತ್ತಾನೆ. ಮರಡಿ ಬೆಟ್ಟದಿಂದ ಹಿಂತಿರುಗುವಾಗ ಗೊಲ್ಲರ ಹುಡುಗನೊಬ್ಬ ಲಾವಣಿ ಹಾಡುವುದನ್ನು ನೋಡಿ:ಅವನಿಗೆ ಯಾರದ್ದೇನು ಹೆದರಿಕೆ? ಎಂದು ಯೋಚಿಸುತ್ತಾನೆ. ಪಟ್ಟಣದ ನಾಗರಿಕತೆ ಶ್ರೇಷ್ಠವಾದುದೆಂದು ಬಿಂಬಿಸುವ ಈ ಮಾತುಗಳು, ನಾಗರಿಕತೆ ಮತ್ತು ಅನಾಗರಿಕತೆಯ ಕಪ್ಪುಬಿಳುಪು ಗ್ರಹಿಕೆಯೂ ಹೌದು.

ಚೆನ್ನಮ್ಮನ ವೃತ್ತಾಂತವನ್ನು ತಿಳಿಸುವ ಆಳಿನ ವರ್ತನೆಯನ್ನು ನೋಡಿ, ‘ಲಕ್ಷ್ಮಿಯನ್ನು ಬಿಟ್ಟು ನನ್ನ ಜೀವವೇ ಇಲ್ಲವೆಂದು ಈ ಮುಟ್ಠಾಳನು ತಿಳಿಯುವುದು ಹೇಗೆ?’ ಎಂದು ಕಥಾನಾಯಕ ಯೋಚಿಸುತ್ತಾನೆ. ಪದೇ ಪದೇ ತನ್ನ ಚಾರಿತ್ರ್ಯದ ಬಗ್ಗೆ ಹೇಳಿಕೊಳ್ಳುವ ಹಂಬಲ ಅವನದು. ಚಾರಿತ್ರ್ಯದ ಬಗ್ಗೆ ಬಹಳಷ್ಟು ಯೋಚಿಸುವ ಈ ವ್ಯಕ್ತಿ, ಯಾವುದೇ ಲಜ್ಜೆಯಿಲ್ಲದೆ ಚೆನ್ನಮ್ಮನ ಫೋಟೊಗಳನ್ನು ತೆಗೆದು, ಅವುಗಳ ಪ್ರತಿ ತೆಗೆದು ಮನೆಯವರಿಗೆ ಕೊಡುತ್ತಾನೆ. ಅಷ್ಟು ಮಾತ್ರವಲ್ಲ, ಅವಳ ಸೌಂದರ್ಯ, ಬಿಗಿದ ಮೈಕಟ್ಟನ್ನು ಗಮನಿಸುತ್ತಾನೆ.

ಚೆನ್ನಮ್ಮ ಕೊಠಡಿಯೊಳಕ್ಕೆ ಬಂದಾಗ ನಿರೂಪಕ ತನ್ನ ಬಗ್ಗೆ ಹೇಳಿಕೊಳ್ಳುವ ಮಾತುಗಳು ಸ್ವಾನುಕಂಪದಿಂದ ಕೂಡಿರುವಂತಹವು. ‘ಅವಳು ಬಾಗಿಲು ಹಾಕಿದ್ದನ್ನು ನೋಡಿ ಇದ್ದಕ್ಕಿದ್ದ ಹಾಗೆಯೇ ನನ್ನ ಮೈ ನಡುಗಿ ಬಿಸಿಯಾಯಿತು. ಬೆವರು ಮುಖದ ಮೇಲೆಲ್ಲಾ ಮೂಡಿತು. ಗಂಟಲು ಒಣಗಿ ಉಗುಳು ನುಂಗತೊಡಗಿದೆ.’ ಸ್ವಯಂ ನಿಯಂತ್ರಣವಿಲ್ಲದ ಆತ, ಪತ್ನಿಯನ್ನು ನೈತಿಕ ಗುರಾಣಿಯಂತೆ ಬಳಸಿಕೊಂಡು ಸಂದರ್ಭವನ್ನು ನಿಭಾಯಿಸಲು ಪ್ರಯತ್ನಿಸುತ್ತಾನೆ. ‘ಆ ದಿನ ರಾತ್ರಿ ಪಾಪದ ಬಲೆಯಿಂದ ತಪ್ಪಿಸಿ ರಕ್ಷಿಸಿದವಳು ನನ್ನ ಲಕ್ಷ್ಮಿ. ಅವಳ ಪ್ರೇಮವೆಂಬ ಕೋಟೆ ನನ್ನನ್ನು ಸಂಪೂರ್ಣ ಆವರಿಸಿತ್ತು’ ಎನ್ನುವ ನಾಯಕನ ಮಾತು, ಆತನಿಗೆ ಮದುವೆ ಆಗದೆ ಇದ್ದಿದ್ದರೆ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ನಾಯಕನಲ್ಲಿನ ದ್ವಂದ್ವಗಳಿಂದಾಗಿಯೇ, ಆತನ ತಳಮಳವನ್ನು ಪಾಪಪ್ರಜ್ಞೆಯಷ್ಟೇ ಆಗಿ ನೋಡುವುದು ಕಷ್ಟ. ಸೂಕ್ಷ್ಮವಾಗಿ ನೋಡಿದರೆ, ಅದು ಪಾಪಕೃತ್ಯವೇ ಆಗಿದೆ.

‘ನಾನು ಕೊಂದ ಹುಡುಗಿ’ಯಲ್ಲಿನ ಕೊಲೆ ಎರಡು ಬಗೆಯದು. ಒಂದು, ದೇವದಾಸಿ ಕಾಯಕದಲ್ಲಿ ತೊಡಗಿಕೊಂಡಿದ್ದ ಯುವತಿಯನ್ನು ಪಾಪಪ್ರಜ್ಞೆಗೆ ಒಳಗಾಗುವಂತೆ ಮಾಡಿ ಅವಳು ತನ್ನನ್ನು ತಾನು ಕೊಂದುಕೊಳ್ಳುವಂತೆ ಮಾಡುವುದು. ಇದು, ನಿರೂಪಕ ಅಪ್ರಜ್ಞಾಪೂರ್ವಕವಾಗಿ ದುರಂತಕ್ಕೆ ಕಾರಣಕರ್ತನಾಗುವ ನಡವಳಿಕೆ. ಎರಡನೆಯದು, ಯುವತಿಯ ಬದುಕಿನಲ್ಲಿನ ಅನೈತಿಕತೆಯನ್ನು ಅವಳಿಗೆ ಮನವರಿಕೆ ಮಾಡಿಕೊಡುವ ಭರದಲ್ಲಿ, ಹೆಣ್ಣೆಂದರೆ ಹೇಗಿರಬೇಕು ಎಂದು ನಾಯಕ ಪ್ರತಿಪಾದಿಸುವ ವಿಚಾರಗಳು. ಲಿಂಗ ಸಮಾನತೆಯ ಮೀಮಾಂಸೆ ಬಹು ಗಟ್ಟಿಯಾಗಿ ಬೆಳೆದಿರುವ ಸಂದರ್ಭದಲ್ಲಿ, ಕಥೆಯಲ್ಲಿನ ಸಂಗತಿಗಳೀಗ ಪ್ರತಿಗಾಮಿ ವಿಚಾರಗಳಾಗಿ ಕಾಣಿಸುತ್ತವೆ. ಪಾತಿವ್ರತ್ಯ ಹಾಗೂ ಚಾರಿತ್ರ್ಯದ ಕುರಿತ ವಿಚಾರಗಳು, ಪಾತ್ರದ ಪೂರ್ವಗ್ರಹವಷ್ಟೇ ಆಗಿರದೆ, ಒಟ್ಟು ಗಂಡುಕುಲದ ಪೂರ್ವಗ್ರಹವಾಗಿರುವ ಸಾಧ್ಯತೆಗಳೂ ಇವೆ.

ಕಥಾನಾಯಕಿ ಚೆನ್ನಮ್ಮನಿಗೆ, ಆಕೆ ಸೇವೆಯೆಂದು ನಂಬಿರುವುದು ಸೇವೆಯಾಗಿರದೆ ಮೌಢ್ಯವಾಗಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವುದು ಹಾಗೂ ಆಕೆ ಶೋಷಣೆಗೆ ಒಳಗಾಗುತ್ತಿದ್ದಾಳೆ ಎನ್ನುವ ಅರಿವು ಮೂಡಿಸುವುದು ಕಥಾನಾಯಕನ ಕರ್ತವ್ಯವಾಗಿತ್ತು. ಆ ಮನವರಿಕೆಯ ಪ್ರಯತ್ನ ಆಕೆಯಲ್ಲಿ ಪಾಪಪ್ರಜ್ಞೆಗೆ ಕಾರಣವಾಗದೆ, ಅರಿವಿಗೆ ಹಾಗೂ ಹೊಸ ಬದುಕಿಗೆ ಪ್ರೇರಣೆಯಾಗಬೇಕಿತ್ತು. ಆದರೆ, ಕಥಾನಾಯಕ ಆಡುವ ಮಾತುಗಳು ಚೆನ್ನಿಯಲ್ಲಿ ಬದುಕುವ ಹಕ್ಕನ್ನೇ ಕಳೆದುಕೊಂಡಂತಹ ಪಾಪಪ್ರಜ್ಞೆ ಮೂಡಿಸುವುದರ ಜೊತೆಗೆ, ತಾನು ಹೆಣ್ಣೇ ಅಲ್ಲ ಅಥವಾ ಹೆಣ್ಣಿನ ಗುಣ ಅರ್ಹತೆಗಳು ತನ್ನಲ್ಲಿಲ್ಲ ಎನ್ನುವ ನಿಲುವಿಗೆ ಬರಲು ಒತ್ತಾಯಿಸುವಂತಿವೆ. ಇದು, ಸುಧಾರಣೆಯ ಆಶಯದ ಬರಹವೊಂದು ತನಗೆ ತಿಳಿಯದಂತೆಯೇ ಮಾಡಬಹುದಾದ ಅಪಾಯಕ್ಕೆ ಉದಾಹರಣೆಯಂತಿದೆ.

ಚೆನ್ನಮ್ಮ ಓದಿದವಳಲ್ಲ. ಮಗಳನ್ನು ದೇವದಾಸಿಯನ್ನಾಗಿಸಿದ ಅವಳ ತಂದೆಯೂ ಓದಿದವನಲ್ಲ. ಮಗನನ್ನು ಪಡೆಯುವುದಕ್ಕಾಗಿ ಮಗಳನ್ನು ದೇವರಿಗೆ ಮೀಸಲಿಡುವ ಹರಕೆ ಕಟ್ಟಿಕೊಂಡವನು. ಚೆನ್ನಮ್ಮನ ಬದುಕಿನ ದುರಂತಕ್ಕೆ ಅವಳ ಅನಕ್ಷರತೆಯೂ ಕಾರಣವಾಗಿದೆ. ಹಾಗಾದರೆ, ಅಕ್ಷರದ ಆಸರೆ ಹೆಣ್ಣನ್ನು ಸಬಲಳನ್ನಾಗಿಸುತ್ತದೆ ಎಂದು ನಂಬಿರುವ ವರ್ತಮಾನದಲ್ಲಿ ಹೆಣ್ಣು ಸುರಕ್ಷಿತಳಾಗಿದ್ದಾಳೆಯೇ? ಮನೆ, ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಧಾರ್ಮಿಕ ಸ್ಥಳ – ಎಲ್ಲಿಯಾದರೂ ಹೆಣ್ಣು ಸುರಕ್ಷಿತಳು ಎಂದು ಹೇಳುವುದು ನಮಗೆ ಸಾಧ್ಯವಿದೆಯೆ?

‘ನಾನು ಕೊಂದ ಹುಡುಗಿ’ಯ ಕುರಿತಾದ ಈ ಟಿಪ್ಪಣಿ, ಕಥೆಯ ಮಿತಿಗಳನ್ನು ಅಥವಾ ಕಥೆಗಾರರ ಮಿತಿಗಳನ್ನು ಗುರ್ತಿಸುವ ಪ್ರಯತ್ನವಲ್ಲ. ಆನಂದರು ಬರೆದ ಕಾಲಕ್ಕೆ ಕಥೆಯಲ್ಲಿನ ವಿಚಾರಗಳು ಸಮಕಾಲೀನವೂ ಪ್ರಸ್ತುತವೂ ಆಗಿದ್ದಿರಬಹುದು. ಕಾಲದ ಜೊತೆಗೆ ನಮ್ಮ ಚಿಂತನೆಗಳ ಧಾಟಿ ಬದಲಾಗುತ್ತಾ ಹೋದಂತೆ, ಹಳೆಯ ಕೃತಿಗಳ ಮರು ಓದು ಸಮಕಾಲೀನ ವಿದ್ಯಮಾನಗಳು, ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಬೆಳಕಿಂಡಿಗಳನ್ನು ತೆರೆಯಬಹುದು; ಹಾಗೆಯೇ, ಒಬ್ಬ ಬರಹಗಾರ ಅಥವಾ ಸಹೃದಯಿ ತನ್ನ ಸಂವೇದನೆಗಳನ್ನು ಒರೆಗೆ ಹಚ್ಚಿಕೊಳ್ಳಲು ಪ್ರೇರಣೆಯನ್ನೂ ನೀಡಬಹುದು. ಆನಂದರ ಕಥೆಯ ಶೀರ್ಷಿಕೆ ಹಾಗೂ ವಿವರಗಳು ಈ ಹೊತ್ತಿನ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಕೆಲವು ಹೊಳಹುಗಳನ್ನು ಕರುಣಿಸುತ್ತಿವೆ.

‘ನಾನು ಕೊಂದ ಹುಡುಗಿ’ ಎನ್ನುವುದು ಕಥೆಯ ಶೀರ್ಷಿಕೆಯಷ್ಟೇ ಅಲ್ಲ ಹಾಗೂ ಸಾವಿಗೀಡಾದ ಹುಡುಗಿ ಕಥೆಯ ಪಾತ್ರವಷ್ಟೇ ಅಲ್ಲ. ಶಿಕ್ಷಣಜ್ಞಾನವುಳ್ಳ ವ್ಯಕ್ತಿ, ತನ್ನ ಮೇಲರಿಮೆಯನ್ನು ಯುವತಿಯ ಮೇಲೆ ಹೇರಿ ಕೊಲ್ಲುವ ಕಥೆ, ಈ ಹೊತ್ತಿನ ವಾಸ್ತವದ ವ್ಯಾಖ್ಯಾನವೂ ಹೌದು. ಆಧುನಿಕತೆಯ ಓಟದಲ್ಲಿ ಸಾಕಷ್ಟು ದೂರ ಸಾಗಿಬಂದಿದ್ದರೂ ಹೆಣ್ಣಿನ ಕುರಿತ ನಮ್ಮ ಧೋರಣೆ ಆನಂದರ ಕಥೆಯ ನಾಯಕನಿಗಿಂತಲೂ ಹೆಚ್ಚು ಭಿನ್ನವೇನೂ ಆಗಿಲ್ಲ. ಹೆಣ್ಣಿನ ಅಭಿವ್ಯಕ್ತಿಗೆ ಮಿತಿಗಳನ್ನು ಕಲ್ಪಿಸುವ ಹಾಗೂ ಆಕೆಗೆ ಚಾರಿತ್ರ್ಯವನ್ನು ಆರೋಪಿಸುವ ಗಂಡು ಮನೋಭಾವ ಸಾಮಾಜಿಕ ಮಾಧ್ಯಮಗಳ ಸಂದರ್ಭದಲ್ಲೂ ಬದಲಾಗಿಲ್ಲ. ತನ್ನನ್ನು ಕೊಂದುಕೊಂಡ ಚೆನ್ನಿ ವರ್ತಮಾನದಲ್ಲೂ ಬೇರೆ ಬೇರೆ ರೂಪದಲ್ಲಿ ಸಾಯುತ್ತಿದ್ದಾಳೆ. ಸತ್ಯ ಇಷ್ಟೇ: ಹೆಣ್ಣನ್ನು ಕೊಲ್ಲುವ ಕ್ರಿಯೆ ಮುಂದುವರೆದಿದೆ – ಮಾನಸಿಕವಾಗಿಯೂ ದೈಹಿಕವಾಗಿಯೂ. ಆದರೆ, ಕಥಾನಾಯಕ ತನ್ನ ಕೃತ್ಯಕ್ಕೆ ಮರುಗುವುದು ಹಾಗೂ ಪಾಪಪ್ರಜ್ಞೆಯಿಂದ ನರಳುವುದು (ಆ ಪಾಪಪ್ರಜ್ಞೆಗೆ ಸಕಾರಣಗಳಿಲ್ಲದಿದ್ದರೂ) ಕಥೆಯಲ್ಲಷ್ಟೇ ಸತ್ಯ ಎನ್ನುವ ಸ್ಥಿತಿ ವರ್ತಮಾನದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.