ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸ್ಥಾನಮರ್ಯಾದೆ

Last Updated 29 ಆಗಸ್ಟ್ 2020, 3:27 IST
ಅಕ್ಷರ ಗಾತ್ರ

ಅಶ್ವಃ ಶಸ್ತ್ರಃ ಶಾಸ್ತ್ರಂ ವೀಣಾ ವಾಣೀ ನರಶ್ಚ ನಾರೀ ಚ ।
ಪುರುಷವಿಶೇಷಂ ಪ್ರಾಪ್ಯ ಭವಂತ್ಯಯೋಗ್ಯಾಶ್ಚ ಯೋಗ್ಯಾಶ್ಚ ।।

ಇದರ ತಾತ್ಪರ್ಯ ಹೀಗೆ:‘ಕುದುರೆ, ಶಸ್ತ್ರ, ಶಾಸ್ತ್ರ, ವೀಣೆ, ಮಾತು, ಮನುಷ್ಯ ಮತ್ತು ಹೆಂಗಸು – ಇವರು ವಿಶಿಷ್ಟರಾದ ಪುರುಷರನ್ನು ಸೇರಿದಾಗ ಯೋಗ್ಯರಾಗುವುದೂ ಉಂಟು, ಅಯೋಗ್ಯರಾಗುವುದೂ ಉಂಟು.‘

ಪ್ರತಿಯೊಂದಕ್ಕೂ ಸ್ಥಾನಮಹಿಮೆ ಎನ್ನುವ ಶಕ್ತಿವಿಶೇಷ ಇದ್ದೇ ಇರುತ್ತದೆ. ವಸ್ತುಗಳಿರಬಹುದು ಅಥವಾ ವ್ಯಕ್ತಿಗಳಿರಬಹುದು ಸರಿಯಾದ ಆಶ್ರಯ ಸಿಗದ ವಿನಾ ಅವುಗಳ / ಅವರ ಒಳ್ಳೆಯತನವಾಗಲೀ ಕೆಟ್ಟತನವಾಗಲೀ ಪ್ರಕಟವಾಗದು. ಬೀಜದಲ್ಲಿ ಎಷ್ಟೇ ಶಕ್ತಿ ಇದ್ದರೂ ಅದು ಬೆಳೆಯಾಗಲು ಅಥವಾ ಕಳೆಯಾಗಲು ತಕ್ಕ ಭೂಮಿ ನೀರು ಬೆಳಕುಗಳ ಆಶ್ರಯ ಬೇಕೇ ಬೇಕು. ಸುಭಾಷಿತ ಇಲ್ಲಿ ಹೇಳುತ್ತಿರುವುದು ಇದನ್ನೇ.

ಕೆಲವೊಂದು ವಸ್ತುಗಳನ್ನೂ ವ್ಯಕ್ತಿಗಳನ್ನೂ ವಿಷಯಗಳನ್ನೂ ಸುಭಾಷಿತ ಇಲ್ಲಿ ಪಟ್ಟಿಮಾಡಿದೆ. ಇವು ಕೇವಲ ಸಾಂಕೇತಿಕ ಮಾತ್ರ; ನಮ್ಮ ಜೀವನದ ಎಲ್ಲದರ, ಎಲ್ಲರ ಯೋಗ್ಯತಾಯೋಗ್ಯತೆಗಳು ನಿರ್ಧಾರವಾಗುವುದು ಅವು ಆಶ್ರಯಿಸುವ ಮನುಷ್ಯರನ್ನು ಅವಲಂಬಿಸಿಯೇ ಎನ್ನುವುದನ್ನು ಇಲ್ಲಿ ಅದು ಪ್ರತಿಪಾದಿಸಿದೆ.

ವಿದ್ಯೆ, ವಾಹನ, ಆಯುಧ, ಮಾತು, ಕಲೆ, ಕೊನೆಗೆ ಗಂಡು ಮತ್ತು ಹೆಣ್ಣು – ಇವು ಯಾರಲ್ಲಿರುತ್ತವೆ ಎನ್ನುವುದನ್ನು ಆಧರಿಸಿಯೇ ಅವುಗಳ ಯೋಗ್ಯತೆ ಅಭಿವ್ಯಕ್ತವಾಗುವುದು; ಒಳ್ಳೆಯವರನ್ನು ಆಶ್ರಯಿಸಿದರೆ ಅವುಗಳಿಂದ ಸಾರ್ಥಕ ಫಲಗಳನ್ನೇ ನಿರೀಕ್ಷಿಸಬಹುದು, ಕೆಟ್ಟವರನ್ನು ಆಶ್ರಯಿಸಿದರೆ ಆಗ ಅನರ್ಥಕಾರಿ ಫಲಗಳೇ ಅವುಗಳಿಂದ ಪ್ರಕಟವಾಗುತ್ತವೆಯಷ್ಟೆ!

ಸಜ್ಜನನಲ್ಲಿ ವಿದ್ಯೆ ಇದ್ದರೆ ಅದರಿಂದ ನಾಲ್ಕು ಜನರಿಗೆ ಉಪಯೋಗವಾಗವಂತೆ ಅವನು ಅದನ್ನು ಬಳಸುತ್ತಾನೆ. ಅದೇ ದುಷ್ಟನಲ್ಲಿದ್ದರೆ ಸಮಾಜವನ್ನು ಹಿಂಸೆಮಾಡುವುದಕ್ಕಾಗಿಯೇ ಅವನು ಬಳಸುತ್ತಾನೆ. ವಾಹನದ ನಿಜವಾದ ಬಳಕೆಯನ್ನು ತಿಳಿದವನಲ್ಲಿ ಅದಿದ್ದರೆ ಆ ವಾಹನಕ್ಕೆ ಸಾರ್ಥಕತೆ ಒದಗುತ್ತದೆ; ಆದರೆ ಬರೀ ಷೋಕಿಗಾಗಿ ವಾಹನವನ್ನು ಓಡಿಸುತ್ತಿದ್ದರೆ ಅಂಥವನಿಂದ ಅಪಘಾತವೂ ಸಹಜ, ಅದರಿಂದ ಜನರಿಗೂ ಅಪಾಯ ತಪ್ಪಿದ್ದಲ್ಲ. ಇನ್ನು ಆಯುಧಗಳ ಬಗ್ಗೆ ಹೇಳುವುದೇ ಬೇಡ. ಸೈನಿಕನ ಬಳಿ ಇರುವ ಬಂದೂಕು ಜನರನ್ನು ರಕ್ಷಿಸಿದರೆ, ಅದೇ ಬಂದೂಕು ಉಗ್ರಗಾಮಿಯಲ್ಲಿದ್ದರೆ ಅವನು ಅದರಿಂದ ಜನರನ್ನು ಕೊಲ್ಲುತ್ತಾನೆಯೇ ಹೊರತು ಅವರನ್ನು ಕಾಪಾಡಲಾರ.

ಈ ಯುಕ್ತಸಾಂಗತ್ಯದ ವೈಶಿಷ್ಟ್ಯವನ್ನು ದಾಂಪತ್ಯದ ಸಂದರ್ಭದಲ್ಲೂ ಕಾಣಬಹುದು. ಒಂದು ಹೆಣ್ಣಿಗೆ ಅಥವಾ ಗಂಡಿಗೆ ಎಲ್ಲ ವಿಧದಲ್ಲೂ ಸರಿಹೋಗುವಂಥ ಒಂದು ಗಂಡು ಅಥವಾ ಹೆಣ್ಣು ಇದ್ದೇ ಇರುತ್ತಾರೆ. ಅವರು ಪರಸ್ಪರ ಒಂದಾದರೆ ಆಗ ಆ ದಾಂಪತ್ಯವು ಸುಖಮಯವಾಗಿರುತ್ತದೆ. ಅದು ಬಿಟ್ಟು, ವಿರುದ್ಧ ಸ್ವಭಾವಗಳ ಗಂಡು–ಹೆಣ್ಣು ದಂಪತಿಗಳಾದರೆ ಆಗ ಆ ಕುಟುಂಬದಲ್ಲಿ ನೆಮ್ಮದಿ ಹೇಗೆ ನೆಲಸೀತು?

ಹೀಗಾಗಿಯೇ ನಾವು ಎಲ್ಲಿ ಸಲ್ಲುತ್ತೇವೆ ಮತ್ತು ನಮ್ಮಲ್ಲಿ ಯಾರು ಸಲ್ಲುತ್ತಾರೆ – ಎಂಬುದನ್ನು ಚೆನ್ನಾಗಿ ಪರಾಮರ್ಶಿಸಿ ನಾವೂ ಹತ್ತಿರವಾಗಬೇಕು ಮತ್ತು ನಾವೂ ಹತ್ತಿರವಾಗಿಸಿಕೊಳ್ಳಬೇಕು. ಯೋಗ್ಯತೆಗೂ ಅಯೋಗ್ಯತೆಗೂ ಶಕ್ತಿ ಒದಗುವುದೇ ಅವು ಸಂಪಾದಿಸಿಕೊಳ್ಳುವ ಸಾಂಗತ್ಯದಲ್ಲಿ. ಆದುದರಿಂದ ನಾವು ಯಾರಿಗಾದರೂ ಬೆಂಬಲ ಕೊಡುವ ಮೊದಲು ವಿವೇಕದಿಂದ ಆಲೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT