ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ತೆರಿಗೆ ಉಳಿಸಲು, ಮಕ್ಕಳ ಭವಿಷ್ಯಕ್ಕೆ ಹಣ ಕೂಡಿಡುವುದು ಹೇಗೆ?

Last Updated 14 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಸೀತಾಲಕ್ಷ್ಮಿ, ಧಾರವಾಡ

l ಪ್ರಶ್ನೆ: ಬೇರೆಯವರಿಂದ ಇನಾಮು ಅಥವಾ ಕಾಣಿಕೆ ರೂಪದಲ್ಲಿ ಸ್ಥಿರ–ಚರ ಆಸ್ತಿ ಅಥವಾ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ಪಡೆದಾಗ ಬೆಲೆಗೆ ಅನುಗುಣವಾಗಿ ತೆರಿಗೆ ಕೊಡಬೇಕೇ? ವಿವರಿಸಿ.

ಪುರಾಣಿಕ್
ಪುರಾಣಿಕ್

ಉತ್ತರ: 1998ರ ಅಕ್ಟೋಬರ್ 1ರಿಂದ ಗಿಫ್ಟ್‌ ಟ್ಯಾಕ್ಸ್‌ (ಉಡುಗೊರೆ ಮೇಲಿನ ತೆರಿಗೆ) ವಜಾ ಮಾಡಲಾಗಿದೆ. ಆದರೆ ಆದಾಯ ತೆರಿಗೆ ಸೆಕ್ಷನ್‌ 56 (2)(X) ಪ್ರಕಾರ ಓರ್ವ ವ್ಯಕ್ತಿ ₹ 50 ಸಾವಿರಕ್ಕೂ ಮಿಕ್ಕಿದ ಹಣ, ಸೊತ್ತು, ಆಸ್ತಿ ದಾನವಾಗಿ ಪಡೆದಾಗ ಇಂತಹ ಮೊತ್ತವನ್ನು ವ್ಯಕ್ತಿಯ ವಾರ್ಷಿಕ ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ. ಇದೇ ವೇಳೆ, ಕೆಳಗೆ ನಮೂದಿಸಿದ ವಿಚಾರಗಳಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಇದೆ.

1) ಹಣ ಅಥವಾ ಆಸ್ತಿ ವಹಿವಾಟು ಗಂಡ – ಹೆಂಡತಿ ನಡುವೆ ಆದಲ್ಲಿ. 2) ಅಣ್ಣ–ತಮ್ಮ, ಅಕ್ಕ–ತಂಗಿ ನಡುವೆ ನಡೆದಲ್ಲಿ. 3) ಗಂಡ–ಹೆಂಡತಿ, ಇವರ ಅಣ್ಣ–ತಮ್ಮಂದಿರು, ಅಕ್ಕ–ತಂಗಿಯರ ಜೊತೆ ಆದಲ್ಲಿ. 4) ಹೆತ್ತವರ ಅಣ್ಣ–ತಮ್ಮಂದಿರು, ಅಕ್ಕ–ತಂಗಿಯರು. 5) ವ್ಯಕ್ತಿಯ ಮದುವೆ ಸಂದರ್ಭದಲ್ಲಿ. 6) ಉಯಿಲಿನಿಂದ. 7) ವಾರಸುದಾರರ ಹಕ್ಕಿನಿಂದ ನಡೆದಲ್ಲಿ... ವಿನಾಯಿತಿ ಇರುತ್ತದೆ. ವಿನಾಯಿತಿ ಪಡೆಯಲು ಅರ್ಹತೆ ಇರುವಲ್ಲಿ ತೆರಿಗೆ ಕೊಡುವ ಅಗತ್ಯ ಇಲ್ಲ.

ಚಂದ್ರೇಗೌಡ, ರಾಜಾಜಿನಗರ, ಬೆಂಗಳೂರು

l ಪ್ರಶ್ನೆ: ನಾನು 2012ರಲ್ಲಿ ₹ 7 ಲಕ್ಷ ಕೊಟ್ಟು ಒಂದು ನಿವೇಶನ ಕೊಂಡಿದ್ದೆ. ಈಗ ಅದನ್ನು ಮಾರಾಟ ಮಾಡಬೇಕೆಂದಿದ್ದೇನೆ. ಮಾರಾಟ ಮಾಡಿದರೆ ₹ 45 ಲಕ್ಷ ಬರಬಹುದು. ಬಂಡವಾಳ ಗಳಿಕೆ ತೆರಿಗೆ (ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌) ಉಳಿಸಲು ಮಾರ್ಗದರ್ಶನ ಮಾಡಿ.

ಉತ್ತರ: ನಿಮಗೆ ನಿವೇಶನ ಮಾರಾಟ ಮಾಡಿ ಬರುವ ಮೊತ್ತದಿಂದ 2012ರಿಂದ 2021ರ ತನಕ ಬಂಡವಾಳ ಗಳಿಕೆ ತೆರಿಗೆ ಕಳೆದು ಉಳಿದ ಮೊತ್ತಕ್ಕೆ ಶೇಕಡ 20ರಂತೆ ತೆರಿಗೆ ಕೊಡುವ ಅವಕಾಶ ಇದೆ. ಸಂಪೂರ್ಣ ತೆರಿಗೆ ಉಳಿಸಲು ಸೆಕ್ಷನ್‌ 54ಇಸಿ ಆಧಾರದ ಮೇಲೆ ₹ 45 ಲಕ್ಷ ಎನ್‌ಎಚ್‌ಎಐ–ಆರ್‌ಇಸಿ ಬಾಂಡ್‌ಗಳಲ್ಲಿ ತೊಡಗಿಸಬೇಕಾಗುತ್ತದೆ. ಸೆಕ್ಷನ್‌ 54ಇಸಿಯ ಆಧಾರದ ಮೇಲೆ, ಇಲ್ಲಿ ತಿಳಿಸಿದ ಬಾಂಡ್‌ಗಳಲ್ಲಿ ಇರಿಸಬಹುದಾದ ಗರಿಷ್ಠ ಮೊತ್ತ ₹ 50 ಲಕ್ಷ (ಈ ಹಿಂದೆ ಭಾಗ್ಯಲಕ್ಷ್ಮಿ ಅವರ ಪ್ರಶ್ನೆಗೆ ಸಂಬಂಧಿಸಿದ ಉತ್ತರದಲ್ಲಿ ₹ 50 ಸಾವಿರ ಹಾಗೂ ತಿದ್ದುಪಡಿಯಲ್ಲಿ ₹ 5 ಲಕ್ಷ ಎಂದು ಉತ್ತರಿಸಿದ್ದಕ್ಕೆ ವಿಷಾದಿಸುತ್ತೇನೆ.) ನೀವು ಹೀಗೆ ಮಾರಾಟ ಮಾಡಿದ ನಿವೇಶನದಿಂದ ಬರುವ ಸಂಪೂರ್ಣ ಹಣವನ್ನು ಇನ್ನೊಂದು ಮನೆ ಅಥವಾ ಫ‍್ಲ್ಯಾಟ್‌ ಕೊಳ್ಳಲು ಬಳಸಬಹುದು. ಹೀಗೆ ಮಾಡಿದಲ್ಲಿ ಕಾಸ್ಟ್‌ ಆಫ್‌ ಇನ್‌ಫ್ಲೇಷನ್‌ ಲೆಕ್ಕ ಹಾಕುವಂತಿಲ್ಲ ಹಾಗೂ ಮಾರಾಟ ಮಾಡಿ ಬಂದಿರುವ ಪೂರ್ತಿ ಮೊತ್ತವನ್ನು ಮನೆ ಅಥವಾ ಫ್ಲ್ಯಾಟ್‌ ಕೊಳ್ಳಲು ಬಳಸಬಹುದು.

ಡಾ. ಶಶಿಧರ್, ಗಂಗಾನಗರ, ಬೆಂಗಳೂರು

l ಪ್ರಶ್ನೆ: ನಾನು ವೃತ್ತಿಯಲ್ಲಿ ವೈದ್ಯ. ಹೆಂಡತಿ ಗೃಹಿಣಿ. ನಮಗೆ 7 ವರ್ಷ ವಯಸ್ಸಿನ ಮಗಳು, 4 ವರ್ಷ ವಯಸ್ಸಿನ ಮಗ ಇದ್ದಾರೆ. ನಮ್ಮೊಡನೆ ಒಂದು ನಿವೇಶನ ಇದೆ. ಸದ್ಯ ಬಾಡಿಗೆ ಮನೆಯಲ್ಲಿ ವಾಸ. ಸ್ವಂತ ಪ್ರ್ಯಾಕ್ಟೀಸ್‌ ಆದ್ದರಿಂದ ತಿಂಗಳ ಆದಾಯ ಸಮನಾಗಿ ಬರುವುದಿಲ್ಲ. ಆದರೂ ಕನಿಷ್ಠ ₹ 1.25 ಲಕ್ಷ ತಿಂಗಳ ವರಮಾನ ಇದೆ. ನಿಮ್ಮ ಅಂಕಣ ನೋಡಿ ಕಳೆದ ಐದು ವರ್ಷಗಳಿಂದ ಆರ್‌.ಡಿ. ಮಾಡುತ್ತಾ ಬಂದು ಈಗ ಈ ಖಾತೆಯಲ್ಲಿ ₹ 15 ಲಕ್ಷ ಜಮಾ ಇದೆ. ನಮ್ಮ ಮುಂದಿನ ಗುರಿ ಮನೆ ಕಟ್ಟಿಸುವುದು. ತೆರಿಗೆ ಉಳಿಸಲು ಹಾಗು ಮಕ್ಕಳ ಭವಿಷ್ಯಕ್ಕೆ ಸಲಹೆ ನೀಡಿ.

ಉತ್ತರ: ಆದಷ್ಟು ಬೇಗ ಗೃಹಸಾಲ ಪಡೆದು ಮನೆ ಕಟ್ಟಿಸಿರಿ. ಸಾಲದ ಅವಧಿ 20 ವರ್ಷಗಳಿರಲಿ. ₹ 50 ಲಕ್ಷ ಸಾಲ ಪಡೆದರೆ ಇಎಂಐ ₹ 50 ಸಾವಿರ ಬರಬಹುದು. ಸಾಲದ ಕಂತು ಸೆಕ್ಷನ್‌ 80ಸಿ, ಬಡ್ಡಿ ಸೆಕ್ಷನ್‌ 24(ಬಿ) ಆಧಾರದಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ಗರಿಷ್ಠ ₹ 50 ಸಾವಿರ ಎನ್‌ಪಿಎಸ್‌ನಲ್ಲಿ ತೊಡಗಿಸಿದಲ್ಲಿ ಕೂಡಾ ತೆರಿಗೆ ವಿನಾಯಿತಿ ಪಡೆಯಬಹುದು. ಹೆಣ್ಣು ಮಗುವಿನ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣ ತೊಡಗಿಸಿ, ಬಂಗಾರದ ನಾಣ್ಯ ಕೊಳ್ಳಿರಿ. ಗಂಡು ಮಗುವಿನ ಸಲುವಾಗಿ ಆರ್‌.ಡಿ. ಮುಂದುವರಿಸಿ. ನೀವು ₹ 50 ಲಕ್ಷದ ಟರ್ಮ್‌ ಇನ್ಶುರೆನ್ಸ್‌ ಮಾಡಿಸಿ. ಯೋಜನೆಗೆ ಬದ್ಧವಾಗಿ ನಡೆದುಕೊಳ್ಳಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT