ಗುರುವಾರ , ಸೆಪ್ಟೆಂಬರ್ 24, 2020
21 °C
ರಾಮಾಯಣ ರಸಯಾನ 54

ಮಾತನ್ನು ಉಳಿಸಿಕೊಂಡ ದಶರಥ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Deccan Herald

ವಿಶ್ವಾಮಿತ್ರಮಹರ್ಷಿಯ ಏರುತ್ತಿದ್ದ ಕೋಪವನ್ನು ವಸಿಷ್ಠಮಹರ್ಷಿ ಗಮನಿಸಿದ. ಅನಾಹುತವಾಗುವುದಕ್ಕಿಂತ ಮೊದಲು ತಾನು ಪ್ರವೇಶಿಸಬೇಕೆಂದು ನಿರ್ಧರಿಸಿದ. ದಶರಥನನ್ನು ಉದ್ದೇಶಿಸಿ ‘ದಶರಥ, ಇಕ್ಷ್ವಾಕುವಂಶದ ಧರ್ಮಪುರುಷ ನೀನು. ನಿನ್ನಂಥವನು ಧರ್ಮಮಾರ್ಗವನ್ನು ಬಿಟ್ಟುಹೋಗುವುದು ಸರಿಯಲ್ಲ. ನೀನು ಈ ಮೊದಲು ಎಂದೂ ಹೀಗೆ ಮಾಡಿಲ್ಲ. ‘ದಶರಥ ಧರ್ಮಾತ್ಮ’ ಎಂಬ ಕೀರ್ತಿ ಮೂರು ಲೋಕಗಳಲ್ಲಿಯೂ ಹರಡಿದೆ. ‘ಸತ್ಯಪ್ರತಿಜ್ಞ’ನಾಗಿ ಸ್ವಧರ್ಮವನ್ನು ಅನುಸರಿಸು. ‘ನಡೆಸುತ್ತೇನೆ’ ಎಂದು ಮಾತು ಕೊಟ್ಟು ಆಮೇಲೆ ‘ಆಗುವುದಿಲ್ಲ’ ಎನ್ನಬೇಡ. ಹಾಗೆ ನೀನು ನಡೆದುಕೊಂಡರೆ ಅಧರ್ಮದ ಭಾರವನ್ನು ಹೊತ್ತಂತಾಗುತ್ತದೆ. ಪ್ರತಿಜ್ಞೆಮಾಡಿ ಅದರ ಪ್ರಕಾರ ನಡೆಯದಿದ್ದರೆ ಇಷ್ಟಾಪೂರ್ತದ ಫಲವೆಲ್ಲವೂ ನಷ್ಟವಾಗುತ್ತದೆಯಷ್ಟೆ. ವಿಶ್ವಾಮಿತ್ರಮಹರ್ಷಿಗಳ ಜೊತೆ ರಾಮನನ್ನು ಕಳುಹಿಸು. ಅವನಿಗೆ ಅಸ್ತ್ರವಿದ್ಯೆ ತಿಳಿದಿದೆಯೋ, ತಿಳಿದಿಲ್ಲವೋ – ಅವನು ವಿಶ್ವಾಮಿತ್ರರ ರಕ್ಷಣೆಯಲ್ಲಿದ್ದಾಗ ಅವನನ್ನು ರಾಕ್ಷಸರು ಏನೂ ಮಾಡಲಾರರು. ಅಗ್ನಿಚಕ್ರದಿಂದ ಅಮೃತವು ಸುರಕ್ಷಿತವಾಗಿದ್ದಂತೆ, ವಿಶ್ವಾಮಿತ್ರರ ಜೊತೆಯಲ್ಲಿ ರಾಮನು ಯಾವುದೇ ತೊಂದರೆಯಿಲ್ಲದೆ ಕ್ಷೇಮವಾಗಿರುತ್ತಾನೆ. ವಿಶ್ವಾಮಿತ್ರರನ್ನು ನೀನು ಏನೆಂದು ತಿಳಿದಿರುವೆ? ಇವರಿಗೆ ಎಷ್ಟು ಬಗೆಯ ಮಂತ್ರಾಸ್ತ್ರಗಳು ಕೈವಶವಾಗಿವೆ ಎಂದು ನಿನಗೆ ತಿಳಿದಿದೆಯೆ? ಇವರ ಶಕ್ತಿಯನ್ನೂ ಮಹಿಮೆಯನ್ನೂ ಮೂರು ಲೋಕದಲ್ಲಿಯೂ ಬಲ್ಲವರಿಲ್ಲ. ದೇವತೆಗಳಿಗೂ ತಿಳಿದಿಲ್ಲ ಎಂದರೆ ಉಳಿದವರ ಪಾಡೇನು? ಪರಮೇಶ್ವರನೇ  ಅಸ್ತ್ರವಿದ್ಯೆಯಷ್ಟನ್ನೂ  ಇವರಿಗೆ ಉಪದೇಶಿಸಿರುವುದು. ಇವರೇ ಸ್ವತಃ ಹಲವು ಮಂತ್ರವಿದ್ಯೆಗಳ ಜನಕರು. ಜಯಾ ಮತ್ತು ಸುಪ್ರಭಾ – ಎಂಬ ಎರಡು ಮಂತ್ರ ವಿದ್ಯೆಗಳು ನೂರಾರು ಅಸ್ತ್ರವಿದ್ಯೆಗಳಿಗೆ ಮೂಲವಾಗಿವೆ. ದಶರಥ, ವಿಶ್ವಾಮಿತ್ರ ಮಹರ್ಷಿಗಳು ತ್ರಿಕಾಲಜ್ಞಾನಿಗಳು. ಇವರೇ ಕ್ಷಣಮಾತ್ರದಲ್ಲಿ ರಾಕ್ಷಸರನ್ನು ಸದೆಬಡಿಯಬಲ್ಲರು. ಆದರೆ ನಿನ್ನ ಮಗನಿಗೆ ಶ್ರೇಯಸ್ಸನ್ನು ಕೋರಿ ಇಲ್ಲಿಗೆ ಬಂದಿದ್ದಾರಷ್ಟೆ. ರಾಮನನ್ನು ಇವರೊಂದಿಗೆ ಧೈರ್ಯವಾಗಿ ಕಳುಹಿಸು’ ಎಂದ. 

ವಸಿಷ್ಠನ ಮಾತುಗಳನ್ನು ಕೇಳಿ ವಿಶ್ವಾಮಿತ್ರನ ಕೋಪ ತಣ್ಣಗಾಯಿತು; ದಶರಥನ ಭಯ ತೊಲಗಿತು. 

ರಾಮನನ್ನು ವಿಶ್ವಾಮಿತ್ರನ ಜೊತೆಯಲ್ಲಿ ಕಳುಹಿಸಲು ದಶರಥ ಒಪ್ಪಿದ.

*   *   *

ಉದ್ವಿಗ್ನ ಪರಿಸ್ಥಿತಿಯನ್ನು ಪ್ರಬುದ್ಧರಾದವರು ಹೇಗೆ ತಿಳಿಗೊಳಿಸಬಲ್ಲರು ಎನ್ನುವುದಕ್ಕೆ ವಸಿಷ್ಠಮಹರ್ಷಿಯ ಮಾತುಗಳು ಒಳ್ಳೆಯ ಉದಾಹರಣೆ. ಏಕಕಾಲದಲ್ಲಿ ವಿಶ್ವಾಮಿತ್ರ ಮತ್ತು ದಶರಥ – ಇಬ್ಬರನ್ನೂ ಸಮಾಧಾನಗೊಳಿಸಿದ್ದು ಗಮನಾರ್ಹ. ವಿಶ್ವಾಮಿತ್ರ ತಾನು ಅಸಹಾಯಕನಾಗಿ ನೆರವನ್ನು ಕೋರುತ್ತಿಲ್ಲ – ಎಂದು ಪ್ರತಿಪಾದಿಸುವ ಮೂಲಕ ವಿಶ್ವಾಮಿತ್ರನ ಆತ್ಮಗೌರವವನ್ನು ವಸಿಷ್ಠ ಎತ್ತಿಹಿಡಿದ; ವಿಶ್ವಾಮಿತ್ರನ ಶಕ್ತಿ ಎಂಥದ್ದು ಎಂದು ಹೇಳಿದ್ದರಿಂದ ದಶರಥನಿಗೆ ರಾಮನ ರಕ್ಷಣೆ ಬಗ್ಗೆ ಧೈರ್ಯ ಮೂಡಿತು. ರಾಮನಿಗೆ ಕೀರ್ತಿಯನ್ನು ತಂದುಕೊಡಬೇಕೆಂಬುದೇ ವಿಶ್ವಾಮಿತ್ರನ ಉದ್ದೇಶ ಎಂದದ್ದು ದಶರಥನ ಸಂತೋಷಕ್ಕೆ ಕಾರಣವಾಯಿತು; ಯಾವ ತಂದೆ ತನ್ನ ಮಗನ ಶ್ರೇಯಸ್ಸನ್ನು ಬಯಸುವುದಿಲ್ಲ? ಎಲ್ಲಕ್ಕಿಂತಲೂ ಮುಖ್ಯವಾಗಿ ವಸಿಷ್ಠನ ಮಾತುಗಳಲ್ಲಿ ಗಮನಿಸಬೇಕಾದದ್ದು ಎಂದರೆ ಧರ್ಮಾಧರ್ಮಗಳ ವಿವೇಚನೆ. ಕೊಟ್ಟ ಮಾತಿಗೆ ತಪ್ಪುವುದು ಎಂಥ ಅನಾಹುತಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಅವನು ದಶರಥನಿಗೆ ಮನವರಿಕೆ ಮಾಡಿದ. ರಾಮಾಯಣದುದ್ದಕ್ಕೂ ಮಾತಿನ ನೆಲೆ–ಬೆಲೆಗಳು ಪ್ರತಿಪಾದಿತವಾಗುತ್ತಲೇ ಇರುತ್ತವೆ – ಎಂಬುದನ್ನು ಆರಂಭದಲ್ಲಿಯೇ ನೋಡಿದ್ದೆವು; ಈ ಸಂದರ್ಭವೂ ಅದಕ್ಕೆ ಸಾಕ್ಷ್ಯವಾಗಿದೆ.

‘ಕೊಟ್ಟ ಮಾತಿಗೆ ತಪ್ಪಬಾರದು’ – ಎಂಬ ಧಾರ್ಮಿಕ ಶ್ರದ್ಧೆಯ ತೀವ್ರತೆ ಮುಂದೆ ಪ್ರಕಟವಾಗುತ್ತದೆಯೆನ್ನಿ!

ದಶರಥನನ್ನು ಈ ‘ಸತ್ಯಪ್ರತಿಜ್ಞೆ’ಯಷ್ಟೇ ಕಟ್ಟಿಹಾಕಲಿಲ್ಲ; ಅವನು ರಾಮನನ್ನು ವಿಶ್ವಾಮಿತ್ರನೊಂದಿಗೆ ಕಳುಹಿಸಲು ಇನ್ನೊಂದು ಪ್ರಬಲ ಕಾರಣವೂ ಇದೆ. ವಿಶ್ವಾಮಿತ್ರನ ಯಜ್ಞವನ್ನು ರಕ್ಷಿಸಲು ತಾನು ಸಿದ್ಧ – ಎಂದು ಅವನು ಆರಂಭದಲ್ಲಿಯೇ ಉತ್ಸುಕನಾಗುತ್ತಾನೆ. ರಾಮನ ಬಗ್ಗೆ ಪ್ರೀತಿ ಮತ್ತು ಅವನಿನ್ನೂ ಬಾಲಕ ಎಂಬ ಭಯ – ಈ ಎರಡು ಕಾರಣಗಳಿಂದ ಅವನು ‘ರಾಮ ಬೇಡ, ನಾನೇ ಬರುತ್ತೇನೆ’ ಎನ್ನುತ್ತಾನಷ್ಟೆ. ಯಾರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲು ಅಸರ್ಮಥರಾಗಿರುತ್ತಾರೋ ಅಂಥವರ ರಕ್ಷಣೆಯನ್ನು ಮಾಡಬೇಕಾದದ್ದು ರಾಜನ ಆದ್ಯಕರ್ತವ್ಯ. ಋಷಿಗಳೂ ಹೀಗೆ ರಕ್ಷಿಸಬೇಕಾದವರ ಯಾದಿಗೇ ಸೇರುತ್ತಾರೆ. ಮಾತ್ರವಲ್ಲ, ಋಷಿಗಳ ಯಜ್ಞವನ್ನು ರಕ್ಷಿಸಬೇಕಾದ್ದು ಕೂಡ ರಾಜನ ಕರ್ತವ್ಯ. ಏಕೆಂದರೆ ಯಜ್ಞಗಳನ್ನು ಮಾಡುವುದೇ ಎಲ್ಲರ ಹಿತಕ್ಕಾಗಿ. ಇದಲ್ಲದೆ, ಪ್ರಭುತ್ವದ ಕೇಂದ್ರ ಯಾವುದೆಂದರೆ ರಾಜಧಾನಿಯಲ್ಲಿರುವ ಅರಮನೆ ಅಲ್ಲ. ಕಾಡಿನಲ್ಲಿರುವ ಗುರುಮನೆಯೇ ಹೌದು – ಎಂಬ ಸಂವಿಧಾನಕ್ಕೆ ಅಂದಿನ ರಾಜ್ಯವ್ಯವಸ್ಥೆ ಬದ್ಧವಾಗಿತ್ತು. ಗುರುಮನೆ, ಎಂದರೆ ವನದಲ್ಲಿರುವ ಆಶ್ರಮ. ಆಶ್ರಮವಾಸಿಗಳಾದ ಋಷಿಗಳೂ ಮುನಿಗಳೂ ಆಚಾರ್ಯರೂ ಕುಲಪತಿಗಳೂ – ಇವರೆಲ್ಲರೂ ರಾಜಧರ್ಮದ ಸಂರಕ್ಷಕರೂ ಆಗಿರುತ್ತಿದ್ದರು. ಕ್ಷಾತ್ರವೂ ಧರ್ಮಕ್ಕೆ ಅಧೀನ ಎನ್ನುವುದು ಇಲ್ಲಿರುವ ತಾತ್ಪರ್ಯ. ಸ್ವಾರ್ಥಮೂಲವಾದ ಎಲ್ಲ ಆಮಿಷಗಳಿಂದಲೂ ಆಶ್ರಮ ಮುಕ್ತವಾಗಿರುತ್ತದೆ, ಇರಬೇಕು – ಎಂಬುದು ಈ ಬ್ರಾಹ್ಮ–ಕ್ಷಾತ್ರಗಳ ಸಂಗಮದ ಧರ್ಮಸೂತ್ರ ಎನ್ನುವುದನ್ನು ಇಲ್ಲಿ ಗಮನಿಸತಕ್ಕದ್ದು. ಋಷ್ಯಾಶ್ರಮಗಳು ತ್ಯಾಗಕ್ಕೂ ಶಾಂತಿಗೂ ಸಹನೆಗೂ ಕೇಂದ್ರಗಳಾಗಿದ್ದುದರಿಂದಲೇ ಪ್ರಾಚೀನ ಭಾರತೀಯ ವಾಙ್ಮಯದುದ್ದಕ್ಕೂ ಅವನ್ನು ಆದರ್ಶದ ನೆಲೆಗಳನ್ನಾಗಿಯೇ ಪ್ರಶಂಸಿಸಲಾಗಿದೆ. ‘ತಪೋವನ’ಗಳ ಬಗ್ಗೆ ರವೀಂದ್ರನಾಥ ಠಾಕೂರ್‌ ಅವರು ಮನೋಜ್ಞವಾದ ದೀರ್ಘಪ್ರಬಂಧವೊಂದನ್ನು ಬರೆದಿದ್ದಾರೆ. ಅದರ  ಸಂಗ್ರಹಭಾಗವನ್ನು ಇಲ್ಲಿ ಉಲ್ಲೇಖಿಸಬಹುದು:

‘ನಮ್ಮ ಕವಿಗಳೆಲ್ಲರೂ ತಪೋವನ ಶಾಂತರಸಾಸ್ಪದವಾದುದೆನ್ನುವರು. ತಪೋವನದ್ದಾಗಿ ಯಾವ ಒಂದು ವಿಶೇಷ ರಸವಿದೆಯೊ ಅದೇ ಶಾಂತರಸ. ಶಾಂತರಸ ಪರಿಪೂರ್ಣತೆಯ ರಸ. ಯಾವ ರೀತಿಯಲ್ಲಿ ಏಳು ವರ್ಣಗಳ ರಶ್ಮಿಗಳು ಒಂದುಗೂಡಿದರೆ ಆಗ ಬಿಳಿಯ ಬಣ್ಣ ಆಗುತ್ತದೆಯೊ ಅದರಂತೆಯೇ ಚಿತ್ತದ ಪ್ರವಾಹ ನಾನಾ ಭಾಗಗಳಲ್ಲಿ ವಿಭಕ್ತವಾಗದೆ ಅವಿಚ್ಛಿನ್ನಭಾವದಲ್ಲಿ ನಿಖಿಲದೊಡನೆ ತನ್ನ ಸಾಮಂಜಸ್ಯವನ್ನು ತುಂಬಿಕೊಂಡಾಗ ಶಾಂತರಸ ಉದ್ಭವಾಗುತ್ತದೆ. ತಪೋವನದಲ್ಲಿ ಅದೇ ಶಾಂತರಸ. ಇಲ್ಲಿ ಸೂರ್ಯ, ಅಗ್ನಿ, ವಾಯು, ಜಲ, ಸ್ಥಲ, ಆಕಾಶ, ತರುಲತೆ, ಮೃಗಪಕ್ಷಿ ಎಲ್ಲದರೊಡನೆ ಚೇತನದ ಒಂದು ಪರಿಪೂರ್ಣಯೋಗವಿದೆ. ಇಲ್ಲಿ ನಾಲ್ಕು ದಿಕ್ಕಿನ ಯಾವುದರೊಡನೆಯೂ ಮನುಷ್ಯನಿಗೆ ವಿಚ್ಛೇದವಿಲ್ಲ, ವಿರೋಧವಿಲ್ಲ. ಭಾರತವರ್ಷದ ತಪೋವನದದಲ್ಲಿ ಈ ಒಂದು ಶಾಂತರಸದ ಸಂಗೀತಸೃಷ್ಟಿ ಕೇವಲ ಆನಂದವನ್ನೇ ಕೊಟ್ಟಿದೆ. ಈ ಆನಂದ ಪ್ರಭುತ್ವದ ಆನಂದವಲ್ಲ; ಆ ಸಂಗೀತದ ಆದರ್ಶದಲ್ಲಿಯೇ ನಮ್ಮ ದೇಶದಲ್ಲಿ ಅನೇಕ ವಿಚಿತ್ರ ರಾಗರಾಗಿಣಿಯರ ಸೃಷ್ಟಿಯಾಗಿದೆ. ಆದರಿಂದಲೇ ನಮ್ಮ ಕಾವ್ಯದಲ್ಲಿ ಮಾನವವ್ಯಾಪಾರದ ನಡುವೆ ಪ್ರಕೃತಿಗೆ ಇಷ್ಟು ದೊಡ್ಡ ಸ್ಥಾನ ಕೊಡಲಾಗಿದೆ. ಇದು ಕೇವಲ ಸಂಪೂರ್ಣತೆಗಾಗಿ ನಮ್ಮಲ್ಲಿ ಸ್ವಾಭಾವಿಕವಾಗಿರುವ ಒಂದು ಆಕಾಂಕ್ಷೆಯನ್ನು ತೃಪ್ತಿಗೊಳಿಸುವ ಉದ್ದೇಶದಿಂದಾದ್ದು...

‘ನಾವು ಯಾವ ಸತ್ಯದಲ್ಲಿ ಭಾರತವರ್ಷ ತನ್ನನ್ನು ತಾನು ನಿಶ್ಚಿತರೀತಿಯಲ್ಲಿ ಹೊಂದಬಹುದೊ, ಆ ಸತ್ಯ ಯಾವುದು?  ಎಂದು ಇಂದು ಎಚ್ಚರದಿಂದ ಯೋಚನೆ ಮಾಡಬೇಕಾಗಿದೆ – ಆ ಸತ್ಯ ಪ್ರಧಾನತಃ ವಣಿಕ್‌ವೃತ್ತಿಯಲ್ಲ, ಸ್ವಾರಾಜ್ಯವಲ್ಲ, ಸ್ವಾದೇಶಿಕತೆಯಲ್ಲ; ವಿಶ್ವಜಾಗತಿಕೆ. ಆ ಸತ್ಯವೇ ಭಾರತವರ್ಷದ ತಪೋವನದಲ್ಲಿ ಸಾಧಿತವಾಗಿದೆ. ಉಪನಿಷತ್ತಿನಲ್ಲಿ ಉಚ್ಚರಿತವಾಗಿದೆ, ಗೀತೆಯಲ್ಲಿ ವ್ಯಾಖ್ಯಾತವಾಗಿದೆ – ಬುದ್ಧದೇವನು ಅದೇ ಸತ್ಯವನ್ನು ಪೃಥ್ವಿಯ ಎಲ್ಲ ಮಾನವರ ನಿತ್ಯವ್ಯವಹಾರದಲ್ಲಿ ಸಫಲಗೊಳಿಸುವುದಕ್ಕಾಗಿ ತಪಸ್ಸನ್ನೂ ಆಚರಿಸಿದ್ದನು... ಪ್ರಬಲತೆಯೊಳಗೆ ಸಂಪೂರ್ಣತೆಯ ಆದರ್ಶವಿಲ್ಲ. ಸಮಗ್ರದ ಸಾಮಂಜಸ್ಯವನ್ನು ನಷ್ಟಗೊಳಿಸಿ ಪ್ರಬಲತೆ ತನ್ನನ್ನು ಸ್ವತಂತ್ರಗೊಳಿಸಿ ತೋರಿಸುವುದೆಂದೇ ಅದು ದೊಡ್ಡದು – ಎನ್ನಿಸುವುದು. ಆದರೆ ಅಸಲಲ್ಲಿ ಅದು ಕ್ಷುದ್ರವಾದ್ದು. ಭಾರತವರ್ಷ ಈ ಪ್ರಬಲತೆಯನ್ನು ಬಯಸಲಿಲ್ಲ. ಅದು ಪರಿಪೂರ್ಣತೆಯನ್ನು ಬಯಸಿತ್ತು. ಈ ಪರಿಪೂರ್ಣತೆ ನಿಖಿಲದೊಡನೆ ಯೋಗ. ಆ ಯೋಗ ಅಹಂಕಾರವನ್ನು ದೂರಮಾಡಿ ವಿನಮ್ರವಾಯಿತು. ಈ ವಿನಮ್ರತೆ ಒಂದು ಆಧ್ಯಾತ್ಮಿಕಶಕ್ತಿ. ಇದು ದುರ್ಬಲಸ್ವಭಾವಕ್ಕೆ ಎಟುಕದು. ವಾಯುವಿನ ಓಟ ನಿತ್ಯಶಾಂತತೆಯ ಮೂಲಕವಾದ್ದರಿಂದಲೇ ಅದರ ಶಕ್ತಿ ಬಿರುಗಾಳಿಗಿಂತಲೂ ಹೆಚ್ಚಿನದು. ಆದ್ದರಿಂದಲೇ ಬಿರುಗಾಳಿ ನಿರಂತರ ನೆಲಸಿರಲಾರದಿದೆ. ಆದ್ದರಿಂದಲೇ ಬಿರುಗಾಳಿ ಕೇವಲ ಸಂಕೀರ್ಣ ಸ್ಥಾನವನ್ನು ಮಾತ್ರ ಕೆಲವು ಕಾಲ ಕ್ಷುಬ್ಧಗೊಳಿಸುತ್ತದೆ; ಶಾಂತವಾಯುವಿನ ಪ್ರವಾಹ ಸಮಸ್ತ ಪೃಥ್ವಿಯನ್ನೂ ಸದಾಕಾಲ ಸುತ್ತಿಕೊಂಡಿದೆ. ಯಥಾರ್ಥ ನಮ್ರತೆ, – ಯಾವುದು ಸಾತ್ವಿಕತೆಯ ತೇಜಸ್ಸಿನಿಂದ ಉಜ್ವಲವಾಗಿದೆಯೊ, ಯಾವುದು ತ್ಯಾಗಸಂಯಮಗಳ ಕಠೋರಶಕ್ತಿಯಿಂದ ದೃಢ ಪ್ರತಿಷ್ಠಿತವಾಗಿದೆಯೊ, ಆ ನಮ್ರತೆಯೇ – ಎಲ್ಲರೊಡನೆ ತಡೆಯಿಲ್ಲದೆ ಸೇರಿಕೊಂಡು ಸತ್ಯಭಾವದಲ್ಲಿ, ನಿತ್ಯಭಾವದಲ್ಲಿ ಎಲ್ಲವನ್ನೂ ಪಡೆಯುತ್ತದೆ. ಅದು ಯಾರನ್ನೂ ದೂರಮಾಡದು, ವಿಚ್ಛಿನ್ನಗೊಳಿಸದು, ತನ್ನನ್ನು ತ್ಯಾಗಮಾಡಿಕೊಳ್ಳುತ್ತದೆ. ಸಕಲರನ್ನೂ ತನ್ನವರನ್ನಾಗಿ ಮಾಡಿಕೊಳ್ಳುತ್ತದೆ.’

(ಅನುವಾದ: ಸ್ವಾಮಿ ಶಂಕರಾನಂದ ಸರಸ್ವತಿ)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು