ಕಳೆದ ಮೂರು ದಶಕಗಳ ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಮುಖ್ಯವಾಗಿ ಕಾಣಿಸು ವುದು ಇಬ್ಬರು ಮಹಿಳೆಯರು. 2025ರ ಡಿಸೆಂಬರ್ 30ರಂದು ತೀರಿಕೊಂಡ ಬೇಗಂ ಖಾಲಿದಾ ಜಿಯಾ ಹಾಗೂ ಐದು ಬಾರಿ ಪ್ರಧಾನಿಯಾಗಿ ಇದೀಗ ಆ ದೇಶದಿಂದ ಗಡಿಪಾರಾಗಿ ಭಾರತದಲ್ಲಿರುವ ಶೇಖ್ ಹಸೀನಾ!

ಆಗಸ್ಟ್ 2024ರ ನಂತರ ಬಾಂಗ್ಲಾದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ, ಅರಾಜಕತೆ ಮತ್ತು ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ– ಬಾಂಗ್ಲಾದೇಶದ ರಚನೆಯ ಬಳಿಕ ಅಲ್ಲಿ ನಡೆದ ಸೇನಾದಂಗೆಗಳು, ಖಾಲಿದಾ ಹಾಗೂ ಹಸೀನಾರ ಆಡಳಿತದ ಜೊತೆಗೆ ಅಲ್ಲಿ ಗುಪ್ತವಾಹಿನಿಯಾಗಿರುವ ಮತೀಯತೆ ಮತ್ತು ಪಾಕಿಸ್ತಾನ ಪರ ಒಲವನ್ನು ಗಮನಿಸಬೇಕು.

ಬೇಗಂ ಖಾಲಿದಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ. 1991 ಮತ್ತು 2001ರಲ್ಲಿ ಎರಡು ಪೂರ್ಣ ಅವಧಿಗೆ ಪ್ರಧಾನಿಯಾಗಿದ್ದರು. 1990ರಲ್ಲಿ ಸೇನಾ ಆಡಳಿತಗಾರ ಹೊಸೈನ್ ಮೊಹಮ್ಮದ್ ಎರ್ಷಾದ್ ಅವರನ್ನು ಪದಚ್ಯುತಗೊಳಿಸಿದ, ಪ್ರಜಾಪ್ರಭುತ್ವಕ್ಕಾಗಿ ಆಗ್ರಹಿಸಿದ ಹೋರಾಟದಲ್ಲಿ ಖಾಲಿದಾ ಹಾಗೂ ಶೇಕ್ ಹಸೀನಾ ಜೊತೆಯಾಗಿ ಭಾಗವಹಿಸಿದ್ದರು. 1991ರಲ್ಲಿ ಜನಾಭಿಪ್ರಾಯ ಸಂಗ್ರಹದ ಮೂಲಕ ದೇಶದ ರಾಜಕೀಯ ವ್ಯವಸ್ಥೆ ಯನ್ನು ಅಧ್ಯಕ್ಷೀಯ ಪ್ರಜಾಪ್ರಭುತ್ವ ಮಾದರಿಯಿಂದ ಸಂಸದೀಯ ಮಾದರಿಗೆ ಬದಲಾಯಿಸಲಾಯಿತು. ಬಿಎನ್ಪಿ ಹೆಚ್ಚಿನ ಸ್ಥಾನ ಗಳಿಸಿದ್ದರಿಂದ ಖಲೀದಾ ಪ್ರಧಾನಿಯಾದರು. 1996ರ ಚುನಾವಣೆಯಲ್ಲಿ ಗೆದ್ದು ಹಸೀನಾ ಬಾಂಗ್ಲಾದ ಚುಕ್ಕಾಣಿ ಹಿಡಿದರು. 2009ರ ಬಳಿಕ ದೇಶದ ರಾಜಕೀಯದ ಮೇಲೆ ಹಿಡಿತ ಸಾಧಿಸಿದ ಹಸೀನಾ 15 ವರ್ಷಗಳ ಕಾಲ ಆಡಳಿತ ನಡೆಸಿದರು.

1991ರಿಂದ 2024ರ ಅವಧಿಯಲ್ಲಿ ಈ ಬೇಗಂ ದ್ವಯರ ರಾಜಕೀಯ ಕದನದಿಂದಾಗಿ ಬಾಂಗ್ಲಾ ದೇಶದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಅರಳದೇ, ವಿರೋಧಿಗಳನ್ನು ಮಟ್ಟ ಹಾಕುವ ಮನಃಸ್ಥಿತಿಯ ಅರೆ ಸರ್ವಾಧಿಕಾರದ ಆಡಳಿತ ಸ್ಥಾಪನೆಗೊಂಡಿತು.

ಬಾಂಗ್ಲಾದೇಶದ ನಿರ್ಮಾತೃ ಶೇಕ್ ಮುಜಿಬುರ್ ರೆಹಮಾನ್ ಅವರ ಮಗಳು ಹಸೀನಾ ತಂದೆಯ ವಾರಸುದಾರಳಾಗಿ ಅವಾಮಿ ಲೀಗ್ ಪಕ್ಷದ ನೇತೃತ್ವ ವಹಿಸಿಕೊಂಡು ರಾಜಕೀಯಕ್ಕೆ ಧುಮುಕಿದಂತೆಯೇ, 1977ರಿಂದ 1981ರವರೆಗೆ ಬಾಂಗ್ಲಾ ಅಧ್ಯಕ್ಷನಾಗಿ ಆಡಳಿತ ನಡೆಸಿದ ಸೇನಾ ಹಿನ್ನೆಲೆಯ ಜಿಯಾವುರ್ ರೆಹಮಾನ್ ಪತ್ನಿಯಾಗಿ ಖಾಲಿದಾ ಅವರು, ಪತಿಯ ಹತ್ಯೆಯ ಬಳಿಕ ಬಿಎನ್ಪಿ ಸಾರಥ್ಯ ವಹಿಸಿಕೊಂಡರು. ಜಿಯಾವುರ್ ‘ರಾಷ್ಟ್ರೀಯತೆ’ಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಬಾಂಗ್ಲಾವನ್ನು ಭಾರತದ ಸಾಂಸ್ಕೃತಿಕ ಕಕ್ಷೆಯಿಂದ ಪ್ರತ್ಯೇಕಿಸುವ ಕೆಲಸ ಮಾಡಿದ್ದರು. ಬಾಂಗ್ಲಾದೇಶದ ಸಾರ್ವಭೌಮತ್ವಕ್ಕೆ ಆದ್ಯತೆ ನೀಡಿದ್ದರು. ಪತಿ ಹಾಕಿಕೊಟ್ಟ ಹಾದಿಯಲ್ಲಿ ಖಾಲಿದಾ ಮುಂದುವರಿದರು.

ಖಾಲಿದಾ ಪ್ರಧಾನಿಯಾದಾಗ ಭಾರತದ ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾ ಮೂಲಕ ಸರಕು ಗಳನ್ನು ಸಾಗಿಸುವುದನ್ನು ಆಕ್ಷೇಪಿಸಿದ್ದರು. ಇದು ಬಾಂಗ್ಲಾ ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು. ಭಾರತೀಯ ಟ್ರಕ್ಗಳು ರಸ್ತೆ ಸುಂಕ ನೀಡದೇ ಬಾಂಗ್ಲಾದೇಶದ ರಸ್ತೆಗಳನ್ನು ಬಳಸುವುದನ್ನು ಅವರು ಒಪ್ಪಿರಲಿಲ್ಲ.

ಭಾರತದ ಈಶಾನ್ಯ ರಾಜ್ಯಗಳ ಪತ್ಯೇಕತಾವಾದಿ ಗುಂಪುಗಳನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಚಿತ್ರಿಸುವ ಪ್ರಯತ್ನವೂ ನಡೆದಿತ್ತು. ಖಾಲಿದಾ ಅವರ ಎರಡನೇ ಅವಧಿಯುಲ್ಲಿ ಇಸ್ಲಾಮಿಕ್ ಉಗ್ರರ ಚಟುವಟಿಕೆಗಳು ಬಾಂಗ್ಲಾದಲ್ಲಿ ಹೆಚ್ಚಾದವು. ಭಾರತ ವಿರೋಧಿ ನಿಲುವು ಬೆಳೆಯತೊಡಗಿತು. 2002ರಲ್ಲಿ ಅವರು ಭಾರತವನ್ನು ನಿರ್ಲಕ್ಷಿಸಿ ಚೀನಾದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡರು. 2004ರಲ್ಲಿ ಹಸೀನಾ ಭಾಷಣ ಮಾಡುತ್ತಿದ್ದ ಸಭೆಯ ಮೇಲೆ ಗ್ರೆನೇಡ್ ದಾಳಿ ನಡೆಯಿತು. ಈ ಪ್ರಕರಣದ ಆರೋಪ ಖಾಲಿದಾ ಅವರ ಪುತ್ರ ತಾರಿಕ್ ರೆಹಮಾನ್ ಅವರ ಮೇಲೆ ಬಂತು. ಖಾಲಿದಾ ಅವರು ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳನ್ನು ನಿಗ್ರಹಿಸಲು ಪ್ರಯತ್ನಿಸಿದರು. ಆದರೆ, ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರ ವ್ಯಾಪಕಗೊಂಡಿತು. ಸೇನಾದಂಗೆ ನಡೆದು ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಿತು. ತಾರಿಕ್ ದೇಶ ತೊರೆದರು. ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪದ ಮೇಲೆ ಖಾಲಿದಾ ಮತ್ತು ಹಸೀನಾ ಇಬ್ಬರನ್ನೂ ಜೈಲಿಗೆ ಹಾಕಲಾಯಿತು. 2008ರಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಡುಗಡೆ ಮಾಡಲಾಯಿತು. ಹಸೀನಾ ಹೆಚ್ಚಿನ ಹಿಡಿತ ಸಾಧಿಸಿ ಸತತವಾಗಿ ಚುನಾವಣೆಗಳನ್ನು ಗೆದ್ದರು.

ಟ್ರಸ್ಟ್ ಮೂಲಕ ಪಡೆದ ವಿದೇಶಿ ದೇಣಿಗೆ ದುರುಪ ಯೋಗದ ಆರೋಪದಲ್ಲಿ 2018ರಲ್ಲಿ ಖಾಲಿದಾ ಅವರನ್ನು ಬಂಧಿಸಲಾಯಿತು. ಆಗಸ್ಟ್ 2024ರಲ್ಲಿ ಹಸೀನಾ ಪದಚ್ಯುತರಾದ ಮೇಲೆ ಖಾಲಿದಾ ಅವರನ್ನು ಬಂಧನದಿಂದ ಮುಕ್ತಗೊಳಿಸಲಾಯಿತು.

ಹಸೀನಾ ಅವರು ತಮ್ಮ ಅವಧಿಯಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದ ಆರ್ಥಿಕತೆಯನ್ನು ಬೆಳೆಸುವ, ಬೃಹತ್ ಉಡುಪು ಉದ್ಯಮವನ್ನು ಕಟ್ಟುವ ಕೆಲಸ ಮಾಡಿದರು. ಮ್ಯಾನ್ಮಾರ್ನ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಲು ಮುಂದಾದರು. ಅಭಿವೃದ್ಧಿ ಮತ್ತು ಮತೀಯ ಭಾವನೆಯನ್ನು ಸರಿದೂಗಿಸುವ ಯತ್ನ ಅದಾಗಿತ್ತು. 1990ರ ದಶಕದ ಉತ್ತರಾರ್ಧದಲ್ಲಿ ಮತ್ತು 2000ರ ದಶಕದ ಆರಂಭ ದಲ್ಲಿ, ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಮ್ (ಉಲ್ಫಾ) ರೀತಿಯ ಪ್ರತ್ಯೇಕತಾವಾದಿ ಗುಂಪುಗಳಿಗೆ ಬಾಂಗ್ಲಾದೇಶ ಆಶ್ರಯ ನೀಡಿದ್ದಲ್ಲದೇ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ದೊರಕುವಂತೆ ನೋಡಿಕೊಳ್ಳುತ್ತಿತ್ತು. ಹಸೀನಾ ಅಧಿಕಾರಾವಧಿಯಲ್ಲಿ ಬಾಂಗ್ಲಾದೇಶದಲ್ಲಿನ ಭಾರತ ವಿರೋಧಿ ಜಾಲಗಳನ್ನು ಹತ್ತಿಕ್ಕಲಾಯಿತು.

ಹಸೀನಾರ ಆಡಳಿತ ಆರೋಪಗಳಿಂದ ಮುಕ್ತ ಆಗಿರಲಿಲ್ಲ. ಹಿಂಸಾಚಾರ, ಬೆದರಿಕೆ ಹಾಗೂ ಚುನಾವಣಾ ಅಕ್ರಮದ ಆರೋಪಗಳು ಇದ್ದವು. ಖಾಲಿದಾ ಅವರ ಬಂಧನ ಹಾಗೂ ತಾರಿಕ್ ಅವರ ಪಲಾಯನದಿಂದಾಗಿ ಬಿಎನ್ಪಿ ಚುನಾವಣೆ ಎದುರಿಸ ಲಿಲ್ಲ. ಬಾಂಗ್ಲಾ ಚುನಾವಣಾ ಪ್ರಕ್ರಿಯೆಯ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದವು. ಆದರೆ ಭಾರತ, ಚುನಾವಣಾ ಫಲಿತಾಂಶವನ್ನು ಅನುಮೋದಿಸಿತು. ಇದರಿಂದಾಗಿ ಪ್ರಜಾಪ್ರಭುತ್ವದ ಮೌಲ್ಯವನ್ನು ಲೆಕ್ಕಿಸದೆ ಹಸೀನಾ ಅವರನ್ನು ಭಾರತ ಬೆಂಬಲಿಸುತ್ತದೆ ಎಂಬ ಭಾವನೆ ಗಟ್ಟಿಗೊಂಡಿತು.

ವಿದ್ಯಾರ್ಥಿ ಚಳವಳಿ 2024ರಲ್ಲಿ ವ್ಯಾಪಕಗೊಂಡು ಹಸೀನಾ ಅವರನ್ನು ಪದಚ್ಯುತಿಗೊಳಿಸುವ ಹಂತಕ್ಕೆ ಬೆಳೆಯಿತು. ಹಸೀನಾ ಬಾಂಗ್ಲಾ ತೊರೆದು ಭಾರತದಲ್ಲಿ ಆಶ್ರಯ ಪಡೆದಾಗ ಭಾರತ ವಿರೋಧಿ ಭಾವನೆ ಮತ್ತಷ್ಟು ಹಿಗ್ಗಿತು.

ಭಾರತ ವಿರೋಧಿ ಭಾವನೆ ಬಲಿಯಲು ಹಸೀನಾ ಆಡಳಿತದೊಂದಿಗೆ ಭಾರತ ನಿಕಟವಾಗಿ ಸ್ಪಂದಿಸಿದ್ದೊಂದೇ ಕಾರಣವಲ್ಲ. ಭಾರತ ವಿರೋಧಿ ನಿಲುವು ಹಲವು ವರ್ಷಗಳಿಂದ ಬಾಂಗ್ಲಾದಲ್ಲಿ ವ್ಯಕ್ತವಾಗುತ್ತಾ, ಶಕ್ತಗೊಳ್ಳುತ್ತಾ ಬಂದಿದೆ. ಅವಾಮೀ ಲೀಗ್ ಮತ್ತು ಬಿಎನ್ಪಿ ಹೊರತಾಗಿ ಬಾಂಗ್ಲಾದಲ್ಲಿ ಜಮಾತ್–ಎ–ಇಸ್ಲಾಮಿ ತರಹದ ಭಾರತ ವಿರೋಧಿ ನೀತಿಯನ್ನು ಮುಖ್ಯವಾಗಿ ಇರಿಸಿಕೊಂಡ ಪಕ್ಷಗಳು ಸಕ್ರಿಯವಾಗಿವೆ. ಜಮಾತ್ 1971ರ ಬಾಂಗ್ಲಾ ವಿಮೋಚನಾ ಯುದ್ಧವನ್ನು ವಿರೋಧಿಸಿತ್ತು; ದಕ್ಷಿಣ ಏಷ್ಯಾದಲ್ಲಿ ಮುಸ್ಲಿಂ ಶಕ್ತಿಯನ್ನು ದುರ್ಬಲಗೊಳಿಸುವ ಭಾರತದ ಪಿತೂರಿ ಇದೆಂದು ಬಣ್ಣಿಸಿತ್ತು. ಭಾರತದ ಸಪ್ತ ಸಹೋದರಿ ರಾಜ್ಯಗಳನ್ನು ನಾವು ವಶಪಡಿಸಿಕೊಳ್ಳಬೇಕು ಎಂದಿತ್ತು.

ಕಳೆದ ವರ್ಷ ಮೀಸಲಾತಿ ವಿರೋಧಿ ವಿದ್ಯಾರ್ಥಿ ಚಳವಳಿಗೆ ಬೆಂಬಲವಾಗಿ ಜಮಾತ್ ನಿಂತಿತು. ಇದೀಗ ಹಸೀನಾ ವಿರೋಧಿ ಭಾವನೆಯನ್ನು ಭಾರತ ವಿರೋಧಿ ಭಾವನೆಯಾಗಿ ಬದಲಿಸಿ, ಅರಾಜಕತೆಯ ನೆಪದಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿದೆ. ಈ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಐಎಸ್ಐ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಫೆಬ್ರುವರಿ ಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಘೋಷಿಸಿದೆ. ರಾಜಕೀಯ ಸ್ಥಿರತೆಯ ಜೊತೆಗೆ ಭಾರತ ವಿರೋಧಿ ನಿಲುವನ್ನು ಪ್ರೋತ್ಸಾಹಿಸದ ಸರ್ಕಾರ ಅಲ್ಲಿ ರಚನೆಯಾಗಬೇಕಿದೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರ ಗಳು ನಿಲ್ಲಬೇಕಿದೆ. ಇಲ್ಲವಾದರೆ ಭಾರತ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಿಂಸಾಚಾರ ಮುಂದುವರೆದರೆ, ವಲಸೆ ಸಮಸ್ಯೆ ಉದ್ಭವಿಸುತ್ತದೆ. ಮತೀಯ ಶಕ್ತಿಗಳು ಮೇಲುಗೈ ಸಾಧಿಸಿದರೆ, ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹೆಚ್ಚುತ್ತದೆ.

ನಿಗದಿಯಾಗಿರುವ ಚುನಾವಣೆಯಲ್ಲಿ ಅವಾಮಿ ಲೀಗ್ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿದೆ. ಭಾರತ ವಿರೋಧಿ ನಿಲುವಿನ ಜಮಾತ್ ಮತ್ತು ವಿದ್ಯಾರ್ಥಿ ಚಳವಳಿಯ ಉಪಉತ್ಪನ್ನವಾಗಿ ಹೊರಹೊಮ್ಮಿರುವ ಎನ್ಸಿಪಿ ಜೊತೆಯಾಗಿ ಸ್ವರ್ಧಿಸಲು ನಿರ್ಧರಿಸಿವೆ. 17 ವರ್ಷಗಳ ಕಾಲ ಬಾಂಗ್ಲಾದಿಂದ ಹೊರಗಿದ್ದ ತಾರಿಕ್ ರೆಹಮಾನ್ ಚುನಾವಣೆಯಲ್ಲಿ ಬಿಎನ್ಪಿ ಮುನ್ನಡೆಸಲು ಬಾಂಗ್ಲಾಕ್ಕೆ ಹಿಂದಿರುಗಿದ್ದಾರೆ. ಭಾರತ ಮತ್ತು ಬಾಂಗ್ಲಾ ನಡುವಿನ ಐತಿಹಾಸಿಕ ಸಂಬಂಧದ ಅರಿವು ಅವರಿಗಿದೆ.

ಈ ಹಿಂದೆ ಖಾಲಿದಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಭಾರತ ಮಾಡಿತ್ತು. ಪ್ರಧಾನಿ ಮೋದಿ ಅವರು ಜೂನ್ 2015ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿಯಿತ್ತಾಗ, ವಿರೋಧ ಪಕ್ಷದ ನಾಯಕಿಯಾಗಿದ್ದ ಖಾಲಿದಾರನ್ನು ಭೇಟಿಯಾಗಿದ್ದರು. ಇದೀಗ ಖಾಲಿದಾ ಅವರ ಅಂತ್ಯಸಂಸ್ಕಾರದಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಭಾಗವಹಿಸಿದ್ದು ಸಮಯೋಚಿತ. 1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತ ನಿರ್ವಹಿಸಿದ ಪಾತ್ರವನ್ನು ನೆನೆದು ಬಾಂಗ್ಲಾದೇಶ ಸದಾಕಾಲ ಭಾರತದ ಪರ ಇರಬೇಕು ಎಂದು ಆಗ್ರಹಿಸುವುದರಲ್ಲಿ ಅರ್ಥವಿಲ್ಲ. ಬಾಂಗ್ಲಾದೇಶದ ಸಾರ್ವಭೌಮತೆಯನ್ನು ಗೌರವಿಸುತ್ತಲೇ, ನಮ್ಮ ನೆರೆಯ ಪ್ರಮುಖ ರಾಷ್ಟ್ರವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಭಾರತ ಚತುರೋಪಾಯಗಳನ್ನು ಬಳಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.