ಮಂಗಳವಾರ, ಸೆಪ್ಟೆಂಬರ್ 22, 2020
26 °C
ಬ್ರಿಟನ್‌ನ ‘ಟ್ರಂಪ್‌’ ಮುಂದಿರುವ ಹಾದಿ ಅಷ್ಟೇನೂ ಸುಲಭದ್ದಲ್ಲ

ಬೋರಿಸ್ ಗಂಟಲಲ್ಲಿ ‘ಬ್ರೆಕ್ಸಿಟ್’ ಬಿಸಿತುಪ್ಪ

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

Prajavani

ಐರೋಪ್ಯ ಒಕ್ಕೂಟದ ಹೊರಗೊಂದು ಒಳಗೊಂದು ಕಾಲಿಟ್ಟು ಕಂಗೆಟ್ಟಿರುವ ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅಧಿಕಾರ ವಹಿಸಿಕೊಂಡಿದ್ದಾರೆ. ತೆರೆಸಾ ಮೇ ಅವರ ಸ್ಥಾನಕ್ಕೆ ಬಂದಿರುವ ಬೋರಿಸ್ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೊಂದಿಗೆ ಹೋಲಿಸಿ ನೋಡಲಾಗುತ್ತಿದೆ. ಬೋರಿಸ್ ಅವರು ಬ್ರೆಕ್ಸಿಟ್ ಪರ ಮಾತನಾಡುವುದನ್ನುಕೇಳಿದವರಿಗೆ, ಮೆಕ್ಸಿಕೊ ಗೋಡೆ ಕುರಿತು ಟ್ರಂಪ್ ಮಾತನಾಡಿದ್ದು ನೆನಪಾಗುತ್ತದೆ. ಅಷ್ಟರಮಟ್ಟಿಗೆ ಇಬ್ಬರ ವ್ಯಕ್ತಿತ್ವ, ನಿಲುವು, ಮಾತಿನ ವೈಖರಿಯಲ್ಲಿ ಸಾಮ್ಯವಿದೆ. ಬೋರಿಸ್ ಅವರು ಬ್ರಿಟನ್ ಪ್ರಧಾನಿಯಾದ ಬಳಿಕ ಮಾತನಾಡಿರುವ ಟ್ರಂಪ್, ‘ಬ್ರಿಟನ್ನಿನ ಟ್ರಂಪ್ ಎಂದು ಬೋರಿಸ್ ಅವರನ್ನು ಕರೆಯಲಾಗುತ್ತಿದೆ. ಅಲ್ಲಿನ ಜನ ಕೂಡ ನನ್ನನ್ನು ಮೆಚ್ಚುತ್ತಾರೆ. ಬೋರಿಸ್ ಉತ್ತಮ ಕೆಲಸಗಳನ್ನು ಮಾಡಲಿದ್ದಾರೆ’ ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಾ ಬೋರಿಸ್ ಆಯ್ಕೆಯನ್ನು ಸ್ವಾಗತಿಸಿದ್ದಾರೆ.

ನಿಜ, ಟ್ರಂಪ್ ಮತ್ತು ಬೋರಿಸ್ ನಡುವೆ ಬಹಳಷ್ಟು ಸಾಮ್ಯವಿದೆ. ಟ್ರಂಪ್ ಅವರಂತೆಯೇ ಬೋರಿಸ್ ಅಸಂಬದ್ಧ ಮಾತುಗಳಿಗೆ ಹೆಸರಾಗಿರುವ ರಾಜಕಾರಣಿ. ‘ಬುರ್ಖಾ ಧರಿಸಿದ ಮಹಿಳೆಯರು ಅಂಚೆಪೆಟ್ಟಿಗೆಯಂತೆ ಕಾಣುತ್ತಾರೆ’ ಎಂಬ ಅವರ ಮಾತು ದೊಡ್ಡ ವಿವಾದಕ್ಕೆ ದಾರಿ ಮಾಡಿತ್ತು. ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ಹಿಲರಿ ಕ್ಲಿಂಟನ್ ಅವರನ್ನು ‘ಹುಚ್ಚಾಸ್ಪತ್ರೆಯ ದಾದಿ’ ಎಂದು ಕರೆದು ಬೋರಿಸ್ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಆದರೆ, ಉನ್ನತ ರಾಜಕೀಯ ಹುದ್ದೆಯು ಟ್ರಂಪ್ ಅವರಂತೆ ಬೋರಿಸ್ ಪಾಲಿಗೆ ಅಚಾನಕ್ಕಾಗಿ ಬಂದದ್ದೇನಲ್ಲ. ಬೋರಿಸ್ ಹಲವು ವರ್ಷಗಳ ಕಾಲ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟು, ಇಟ್ಟ ಕಣ್ಣು ಕದಲಿಸದೇ ತಮ್ಮ ಹಾದಿಯನ್ನು ರೂಪಿಸಿಕೊಂಡು ಆ ಸ್ಥಾನಕ್ಕೆ ಬಂದಿದ್ದಾರೆ. ಅಮೆರಿಕ ಮತ್ತು ಯುರೋಪಿನಲ್ಲಿ ಬಹುಕಾಲ ಕಳೆದ ಬೋರಿಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿತವರು. ನಂತರ ಪತ್ರಿಕೋದ್ಯಮವನ್ನು ಆಯ್ದುಕೊಂಡವರು. ಮೊದಲಿಗೆ ‘ದಿ ಟೈಮ್ಸ್’ನಲ್ಲಿ ಕೆಲಸಕ್ಕೆ ಸೇರಿದ ಬೋರಿಸ್ ಕೆಲ ದಿನಗಳಲ್ಲೇ ನೌಕರಿಯಿಂದ ವಜಾಗೊಂಡರು. ನಂತರ 1994ರಿಂದ 1999ರವರೆಗೆ ‘ದಿ ಡೈಲಿ ಟೆಲಿಗ್ರಾಫ್’ನಲ್ಲಿ ಕೆಲಸ ಮಾಡಿದರು. ಕನ್ಸರ್ವೇಟಿವ್ ಪಕ್ಷದ ಪರ ಒಲವಿಟ್ಟುಕೊಂಡಿದ್ದ ಬೋರಿಸ್ ಆ ಕುರಿತೇ ಹೆಚ್ಚು ಬರೆದರು. ಆ ಮೂಲಕ ಮಾರ್ಗರೇಟ್ ಥ್ಯಾಚರ್ ಅವರಿಗೆ ಹತ್ತಿರವಾದರು. ಐರೋಪ್ಯ ರಾಷ್ಟ್ರದ ಅಧಿಕಾರಿವರ್ಗ ಬ್ರಿಟನ್ ಸಾರ್ವಭೌಮತೆಗೆ ಅಗೌರವ ತೋರುತ್ತಿದೆ ಎಂಬುದು ಬೋರಿಸ್ ನಿಲುವಾಗಿತ್ತು. ಕೆಲ ವರ್ಷಗಳಲ್ಲೇ ಬೋರಿಸ್ ಕನ್ಸರ್ವೇಟಿವ್ ಪಕ್ಷದ ಮುಖವಾಣಿ ‘ದಿ ಸ್ಪೆಕ್ಟೇಟರ್’ ಪತ್ರಿಕೆಯ ಸಂಪಾದಕರಾದರು. ಚುನಾವಣಾ ರಾಜಕೀಯಕ್ಕೆ ಧುಮುಕಿ ಬ್ರಿಟನ್ ಸಂಸತ್ತಿಗೆ ಆರಿಸಿ ಬಂದರು.

2008ರಲ್ಲಿ ಲಂಡನ್ ನಗರದ ಮೇಯರ್ ಆದಾಗ ಬೋರಿಸ್ ರಾಜಕೀಯ ಬದುಕಿಗೆ ಏರುಗತಿ ದೊರೆಯಿತು. ತೆಗೆದುಕೊಂಡ ಹಲವು ನಿರ್ಣಯಗಳು ಜನಪ್ರಿಯತೆಗೆ ಮೆಟ್ಟಿಲುಗಳಾದವು. ಬೋರಿಸ್ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಮದ್ಯಪಾನ ನಿಷೇಧ ಮಾಡಲಾಯಿತು. ಹೆಚ್ಚೆಚ್ಚು ಸೈಕಲ್ ಬಳಸುವಂತೆ ಜನರನ್ನು ಪ್ರೋತ್ಸಾಹಿಸಲಾಯಿತು. ‘ಬೋರಿಸ್ ಬೈಕ್ಸ್’ ರಸ್ತೆಗಿಳಿದವು. ಸ್ವತಃ ಬೋರಿಸ್, ಲಂಡನ್ ನಗರದ ರಸ್ತೆಗಳಲ್ಲಿ ಸೈಕಲ್ ತುಳಿಯುತ್ತಾ ಗಮನ ಸೆಳೆದರು. ಥೇಮ್ಸ್ ತೀರದಲ್ಲಿ ಕೇಬಲ್ ಕಾರು ಯೋಜನೆ ಅನುಷ್ಠಾನಗೊಂಡಿತು. ಲೇಬರ್ ಪಕ್ಷದ ಪರ ಮತ್ತು ಎಡ ಚಿಂತನೆಯತ್ತ ತುಡಿಯುತ್ತಿದ್ದ ಲಂಡನ್ ನಗರಕ್ಕೆ, ಬಲಪಂಥೀಯರಾಗಿದ್ದ ಬೋರಿಸ್ ಜಾನ್ಸನ್ ಅವರು ಮೇಯರ್ ಆಗಿ ಆಯ್ಕೆಯಾದಾಗ ಅದನ್ನು ಅಚ್ಚರಿಯೆಂದೇ ರಾಜಕೀಯ ವಲಯ ನೋಡಿತ್ತು. ಅವಧಿ ಮುಗಿಯುವುದರೊಳಗಾಗಿ ಬೋರಿಸ್, ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿ ಹೆಸರು ಗಳಿಸಿದ್ದರು. ಎರಡು ಅವಧಿಗೆ ಮೇಯರ್ ಆದ ಬೋರಿಸ್, ಐರೋಪ್ಯ ಒಕ್ಕೂಟ ತೊರೆಯಬೇಕೆಂಬ ಅನಿಸಿಕೆಯು ಬ್ರಿಟನ್‌ನಾದ್ಯಂತ ಸಾಂದ್ರವಾಗುತ್ತಿದ್ದಂತೆ ಆ ಚಳವಳಿಯ ಭಾಗವಾಗಿ ಗುರುತಿಸಿಕೊಂಡರು.

2013ರಲ್ಲಿ ಅಂದಿನ ಪ್ರಧಾನಿ ಡೇವಿಡ್ ಕ್ಯಾಮರೂನ್ ಒಂದೊಮ್ಮೆ ತಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ, ಐರೋಪ್ಯ ಒಕ್ಕೂಟ ತೊರೆಯಬೇಕೇ ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ತಮ್ಮ ಮಾತಿನಂತೆ ನಡೆದುಕೊಂಡ ಕ್ಯಾಮರೂನ್ 2016ರ ಜೂನ್‌ನಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾದರು. ಒಕ್ಕೂಟ ತೊರೆಯಬೇಕು ಎಂಬ ಚಳವಳಿಯೊಂದಿಗೆ ಗುರುತಿಸಿಕೊಂಡಿದ್ದ ಬೋರಿಸ್, ಬಹಿರಂಗವಾಗಿ ಕ್ಯಾಮರೂನ್ ವಿರುದ್ಧ ಹೇಳಿಕೆಗಳನ್ನು ಕೊಟ್ಟರು. ಅದಾಗ ಬ್ರೆಕ್ಸಿಟ್ ಅನುಷ್ಠಾನ ಹೇಗೆ ಎಂಬುದರ ಕುರಿತು ತಮಗೆ ಸ್ಪಷ್ಟ ಚಿಂತನೆಗಳು ಇರದಿದ್ದರೂ, ಬೋರಿಸ್ ಈ ಅವಕಾಶವನ್ನು ಪ್ರಚಾರ ಪಡೆಯಲು ಮತ್ತು ಕ್ಯಾಮರೂನ್ ನಂತರದ ನಾಯಕನಾಗಿ ತಮ್ಮನ್ನು ಬಿಂಬಿಸಿಕೊಳ್ಳಲು ಬಳಸಿಕೊಂಡರು. ‘ಬ್ರೆಕ್ಸಿಟ್ ಬ್ಯಾಟಲ್ ಬಸ್ ಟೂರ್’ ಮೂಲಕ ಜನರ ಗಮನ ಸೆಳೆಯುವ, ಹೋರಾಟದ ಪರ ಜನರನ್ನು ಸಂಘಟಿಸುವ ಪ್ರಯತ್ನ ಮಾಡಿದರು.

ಜನಾಭಿಪ್ರಾಯ ಸಂಗ್ರಹದ ವೇಳೆ ಬ್ರೆಕ್ಸಿಟ್ ಪರ ಹೆಚ್ಚು ಜನ ಒಲವು ತೋರಿದ್ದರಿಂದ, ಕ್ಯಾಮರೂನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತೆರೆಸಾ ಮೇ ಪ್ರಧಾನಿ ಸ್ಥಾನಕ್ಕೆ ಕನ್ಸರ್ವೇಟಿವ್ ಪಕ್ಷದಿಂದ ಆಯ್ಕೆಯಾದರು. ಮಾರ್ಗರೇಟ್ ಥ್ಯಾಚರ್ ನಂತರ ಬ್ರಿಟನ್ ಪ್ರಧಾನಿಯಾದ ಎರಡನೆಯ ಮಹಿಳೆಯೆಂಬ ಕೀರ್ತಿಗೆ ಭಾಜನರಾದರು.

ಪಕ್ಷದೊಳಗೆ ಆಂತರಿಕ ಬೇಗುದಿ ಹೆಚ್ಚಾದಾಗ, 2017ರ ಜೂನ್‌ನಲ್ಲಿ ತೆರೆಸಾ ಮೇ ಅವಧಿಪೂರ್ವ ಚುನಾವಣೆ ನಡೆಸುವ ತೀರ್ಮಾನವನ್ನು ಸಂಸತ್ತಿನಲ್ಲಿ ಮತಕ್ಕೆ ಹಾಕಿದರು. ಅದಕ್ಕೆ ಒಪ್ಪಿಗೆ ದೊರೆತು, ಸಾರ್ವತ್ರಿಕ ಚುನಾವಣೆ ನಡೆಯಿತು. ಆದರೆ ಕನ್ಸರ್ವೇಟಿವ್ ಪಕ್ಷಕ್ಕೆ ಬಹುಮತ ದೊರೆಯದೇ, ಅತಂತ್ರ ಸಂಸತ್ತು ಸೃಷ್ಟಿಯಾಯಿತು. ಕನ್ಸರ್ವೇಟಿವ್ ಪಕ್ಷ ಇನ್ನೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಿತು. ಬ್ರೆಕ್ಸಿಟ್ ಕುರಿತು ಮುಂದುವರಿಯಲು ಸಾಧ್ಯವಾಗದ ಕಾರಣ ತೆರೆಸಾ ಮೇ ವಿರುದ್ಧ ಸಂಸದರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಬ್ರೆಕ್ಸಿಟ್ ಅನುಷ್ಠಾನಕ್ಕೆ ತೆರೆಸಾ ಅವರು ಮುಂದಿಟ್ಟ ಯಾವ ಮಾರ್ಗೋಪಾಯಗಳಿಗೂ ಸಂಸದರು ಸಮ್ಮತಿ ಸೂಚಿಸಲಿಲ್ಲ. ಕೊನೆಗೆ ತೆರೆಸಾ ರಾಜೀನಾಮೆ ಇತ್ತರು.

ಕಳೆದ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಬ್ರೆಕ್ಸಿಟ್ ಕುರಿತು ಹಿಂಜರಿದದ್ದೇ ಕಾರಣ ಎಂದು ವಿಶ್ಲೇಷಿಸಿರುವ ಕನ್ಸರ್ವೇಟಿವ್ ಪಕ್ಷ, ಬ್ರೆಕ್ಸಿಟ್ ಕಾರ್ಯಗತಗೊಳಿಸಲು, ಮುಂದಿನ ಚುನಾವಣೆಯ ಹೊತ್ತಿಗೆ ಜನರ ವಿಶ್ವಾಸವನ್ನು ಮರಳಿ ಪಡೆಯಲು ಬೋರಿಸ್ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿದಂತಿದೆ. ಹಾಗಾಗಿಯೇ ಬೋರಿಸ್ ಅಗ್ರ ನಾಯಕನಾಗಿ ಹೊರಹೊಮ್ಮಿದ್ದಾರೆ. ‘ಏನೇ ಸವಾಲು ಬರಲಿ, ಐರೋಪ್ಯ ಒಕ್ಕೂಟ ತೊರೆಯುವುದು ನನ್ನ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟ’ ಎನ್ನುತ್ತಾ ಬೋರಿಸ್ ಅಕ್ಟೋಬರ್ 31ರ ಗಡುವನ್ನು ವಿಧಿಸಿಕೊಂಡಿದ್ದಾರೆ. ಆದರೆ ಅವರ ಮುಂದಿನ ಹಾದಿ ಅಷ್ಟೇನೂ ಸುಲಭದ್ದಲ್ಲ. ತೆರೆಸಾ ತಮ್ಮ ಮೂರು ವರ್ಷಗಳ ಅವಧಿಯಲ್ಲಿ ಬ್ರೆಕ್ಸಿಟ್ ಕರಾರಿನ ಕುರಿತು ಸಂಸತ್ತಿನಲ್ಲಿ ಒಮ್ಮತ ಮೂಡಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಆರ್ಥಿಕತೆ, ಭದ್ರತೆ ಮತ್ತು ಜಾಗತಿಕ ರಾಜಕೀಯ ಸ್ಥಾನಮಾನದ ದೃಷ್ಟಿಯಿಂದ ಬ್ರಿಟನ್, ಐರೋಪ್ಯ ಒಕ್ಕೂಟದ ಭಾಗವಾಗಿರುವುದು ಒಳಿತು ಎಂಬ ಅಭಿಪ್ರಾಯವೂ ಮುನ್ನೆಲೆಗೆ ಬರುತ್ತಿದೆ. ವಿಶ್ವ ಸಾಮ್ರಾಟನಾಗಬೇಕು ಎಂದು ಚಿಕ್ಕಂದಿನಲ್ಲಿ ಕನಸು ಕಂಡಿದ್ದ ಬೋರಿಸ್, ಬ್ರಿಟನ್ ಪ್ರಧಾನಿಯಂತೂ ಆಗಿದ್ದಾರೆ. ಎಲ್ಲರ ಊಹೆ ಸುಳ್ಳುಮಾಡಿ ಪಕ್ವ, ದೃಢ, ಅಭಿವೃದ್ಧಿ ಕೇಂದ್ರಿತ ನಿಲುವು ತಳೆದು ಬೋರಿಸ್ ಇತಿಹಾಸ ಸೃಷ್ಟಿಸುತ್ತಾರೋ, ಬ್ರಿಟನ್ ಪ್ರಧಾನಿ ಪಟ್ಟಿಯಲ್ಲಿ ಮಗದೊಬ್ಬರಾಗಿ ಉಳಿಯುತ್ತಾರೋ ಕಾದು ನೋಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು