ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ: ಖಂಡಾಂತರ ಕ್ಷಿಪಣಿ, ಗಗನ ಗುರಾಣಿ

ಯಾವುದೇ ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತ ತನ್ನದಾಗಿಸಿಕೊಂಡರೂ, ಅದರಿಂದ ಜಗತ್ತು ಹೆದರಬೇಕಿಲ್ಲ
Last Updated 1 ನವೆಂಬರ್ 2021, 22:30 IST
ಅಕ್ಷರ ಗಾತ್ರ

ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು 5 ಸಾವಿರ ಕಿ.ಮೀ. ದೂರದ ಗುರಿ ತಲುಪಬಲ್ಲ ಅಗ್ನಿ-5 ಹೆಸರಿನ ಖಂಡಾಂತರ ಕ್ಷಿಪಣಿಯನ್ನು ಭಾರತ ಅಕ್ಟೋಬರ್ 27ರಂದು ಯಶಸ್ವಿಯಾಗಿ ಪರೀಕ್ಷಿಸಿತು. ಇನ್ನು ಕೆಲವು ದಿನಗಳಲ್ಲಿ ವಾಯುದಾಳಿ ಪ್ರತಿರೋಧ ಕ್ಷಿಪಣಿ ಎಸ್-400ರ ಘಟಕಗಳು ರಷ್ಯಾದಿಂದ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಇದರಿಂದಾಗಿ ನಮ್ಮ ಸಾಮರಿಕ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತದೆ.

ಅತ್ಯಾಧುನಿಕ ರಕ್ಷಣಾ ಉಪಕರಣಗಳು ಭಾರತದ ಬತ್ತಳಿಕೆಯನ್ನು ಸೇರಿದಾಗ ನಮ್ಮ ನೆರೆಯ ಚೀನಾ ಮತ್ತು ಪಾಕಿಸ್ತಾನ ಅಧೀರಗೊಂಡರೆ ಅದು ಸಹಜವೇ. ಆದರೆ ಎಸ್-400 ವಿಷಯದಲ್ಲಿ ಅಮೆರಿಕ ಕೊಂಚ ಸಿಟ್ಟಾಗಿದೆ. ರಷ್ಯಾದಿಂದ ಎಸ್-400 ಖರೀದಿಸುವ ಪ್ರಕ್ರಿಯೆಗೆ ಭಾರತ ಚಾಲನೆ ಕೊಟ್ಟ ದಿನದಿಂದಲೂ ಅದು ತನ್ನ ಅಸಮಾಧಾನ ವನ್ನು ತೋರ್ಪಡಿಸಿದೆ, ದಿಗ್ಬಂಧನ ಹೇರುವ ಬೆದರಿಕೆ ಒಡ್ಡಿದೆ. ಇದುವರೆಗೂ ಎಚ್ಚರಿಕೆ ಮತ್ತು ಬೆದರಿಕೆಯ ಅಸ್ತ್ರ ಬಿಟ್ಟ ಅಮೆರಿಕ ಇದೀಗ ತನ್ನ ನಿಲುವು ಪ್ರಕಟಿಸಬೇಕಾದ ಹಂತ ತಲುಪಿದೆ. ಚೆಂಡು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಅಂಗಳಕ್ಕೆ ಬಿದ್ದಿದೆ.

ಇಲ್ಲಿ ಕೆಲವು ಪ್ರಶ್ನೆಗಳಿವೆ. ಅಮೆರಿಕದ ವಿರೋಧದ ನಡುವೆಯೂ ಭಾರತ ಎಸ್-400 ಖರೀದಿಗೆ ಮುಂದಾಗಲು ಕಾರಣವೇನು ಎಂಬುದು ಮೊದಲ ಪ್ರಶ್ನೆ. ರಷ್ಯಾ ಅಭಿವೃದ್ಧಿಪಡಿಸಿರುವ ಎಸ್-400, ಪ್ರಸ್ತುತ ಲಭ್ಯವಿರುವ ವಾಯುದಾಳಿ ಪ್ರತಿರೋಧಕಗಳ ಪೈಕಿ ಅತ್ಯುತ್ತಮವಾದದ್ದು ಎನಿಸಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕ್ಷಿಪ್ರವಾಗಿ ಮತ್ತು ಸುಲಭವಾಗಿ ಕೊಂಡೊಯ್ಯಬಹುದು ಎಂಬುದು ಇದರ ಹೆಗ್ಗಳಿಕೆ. ಶತ್ರು ದೇಶದ ಯಾವುದೇ ಬಗೆಯ ವಾಯುದಾಳಿಯನ್ನು ಇದು ಗುರುತಿಸುತ್ತದೆ ಮತ್ತು ನಿಖರವಾದ ಪ್ರತಿದಾಳಿಗೆ ಅನುಕೂಲ ಒದಗಿಸುತ್ತದೆ ಎಂಬುದು ಹೆಚ್ಚುಗಾರಿಕೆ.

ಹಾಗಾಗಿಯೇ ಹಲವು ರಾಷ್ಟ್ರಗಳು ಎಸ್-400 ಕೊಳ್ಳಲು ಮತ್ತು ತನ್ಮೂಲಕ ತಮ್ಮ ವಾಯುಪಡೆಗೆ ಶಕ್ತಿ ತುಂಬಲು ಉತ್ಸುಕವಾಗಿವೆ. ಚೀನಾ 2014ರಲ್ಲಿ ರಷ್ಯಾದ ಜೊತೆ ಎಸ್-400 ಖರೀದಿ ಒಪ್ಪಂದ ಮಾಡಿಕೊಂಡಿತು. 2018ರ ಜನವರಿಯಲ್ಲಿ ಆ ಬೇಡಿಕೆಯನ್ನು ರಷ್ಯಾ ಪೂರೈಸಿತು. ಇದೀಗ ಭಾರತದ ಗಡಿಯಲ್ಲಿ ಎಸ್-400 ಘಟಕಗಳನ್ನು ಚೀನಾ ನಿಲ್ಲಿಸಿದೆ. ಹಾಗಾಗಿ ಪಾಕಿಸ್ತಾನ ಮತ್ತು ಚೀನಾದ ಗಡಿತಂಟೆಯನ್ನು ಎದುರಿಸುತ್ತಲೇ ಬಂದಿರುವ ಭಾರತ ಸೇನೆಯನ್ನು ರಕ್ಷಣಾತ್ಮಕವಾಗಿ ಬಲಪಡಿಸಲು ಎಸ್-400 ಹೊಂದುವುದು ಅನಿವಾರ್ಯವಾಗಿದೆ.

ಹಾಗಾದರೆ ಎಸ್-400 ಕುರಿತ ಅಮೆರಿಕದ ಕಳವಳಕ್ಕೆ ಕಾರಣಗಳೇನು ಎಂಬುದು ಎರಡನೆಯ ಪ್ರಶ್ನೆ. ಅಮೆರಿಕದ ವಿರೋಧಿ ರಾಷ್ಟ್ರಗಳನ್ನು ದಿಗ್ಬಂಧನದ ಮೂಲಕ ಕಟ್ಟಿಹಾಕುವ ಕಾಯ್ದೆಯೊಂದನ್ನು (CAATSA) 2017ರಲ್ಲಿ ಅಮೆರಿಕದ ಸಂಸತ್ತು ಅಂಗೀಕರಿಸಿತು. ಇರಾನ್, ಉತ್ತರ ಕೊರಿಯಾ ಮತ್ತು ರಷ್ಯಾದೊಂದಿಗೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಯಾವುದೇ ವ್ಯಾವಹಾರಿಕ ಒಪ್ಪಂದಗಳನ್ನು ಮಾಡಿಕೊಳ್ಳುವಂತಿಲ್ಲ. ಒಂದೊಮ್ಮೆ ಯಾವುದೇ ದೇಶ ಅಂತಹ ಒಪ್ಪಂದಕ್ಕೆ ಮುಂದಾದರೆ ಆ ದೇಶದ ಮೇಲೆ ಅಮೆರಿಕ ದಿಗ್ಬಂಧನ ಹೇರಬಹುದು. ವಿನಾಯಿತಿ ನೀಡುವುದು ಅಧ್ಯಕ್ಷರ ವಿವೇಚನೆಗೆ ಬಿಟ್ಟದ್ದು ಎಂಬುದು ಕಾಯ್ದೆಯ ಸಾರಾಂಶ. ಹಾಗಾಗಿ ರಷ್ಯಾದೊಂದಿಗೆ ಎಸ್-400 ಖರೀದಿಗೆ ಮುಂದಾಗಿರುವ ಭಾರತ ದಿಗ್ಬಂಧನ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಹೇಳುತ್ತಿದೆ.

ಆದರೆ ಕಾರಣ ಅದೊಂದೇ ಅಲ್ಲ. ಅಮೆರಿಕ ಯುದ್ಧೋಪಕರಣಗಳ ಉತ್ಪಾದಕ ರಾಷ್ಟ್ರ. ಭಾರತ ಯುದ್ಧಸಾಮಗ್ರಿಗಳ ಅತಿದೊಡ್ಡ ಗ್ರಾಹಕ ರಾಷ್ಟ್ರ. ರಕ್ಷಣಾ ಸಾಮಗ್ರಿಗಳ ಅಭಿವೃದ್ಧಿ ಮತ್ತು ಮಾರಾಟದಲ್ಲಿ ಅಮೆರಿಕಕ್ಕೆ ಪ್ರತಿಸ್ಪರ್ಧಿಯಾಗಿ ರಷ್ಯಾ ಇದೆ. ಹಾಗಾಗಿ ರಷ್ಯಾದ ಗ್ರಾಹಕ ದೇಶಗಳನ್ನು ತನ್ನತ್ತ ಒಲಿಸಿಕೊಳ್ಳುವ ಕೆಲಸವನ್ನು ಅಮೆರಿಕ ಎಲ್ಲ ಆಯ್ಕೆಗಳನ್ನು ಬಳಸಿ ಮಾಡುತ್ತಾ ಬಂದಿದೆ. ಒಂದು ಹಂತದಲ್ಲಿ ಡೊನಾಲ್ಡ್‌ ಟ್ರಂಪ್ ಅವರು ‘ಒಂದೊಮ್ಮೆ ಅಮೆರಿಕದ ಎಫ್-16 ಯುದ್ಧ ವಿಮಾನಗಳನ್ನು ಭಾರತ ಕೊಳ್ಳುವುದಾದರೆ ದಿಗ್ಬಂಧನದಿಂದ ವಿನಾಯಿತಿ ನೀಡಲಾಗುವುದು’ ಎಂದಿದ್ದರು. ತಾನು ಅಭಿವೃದ್ಧಿಪಡಿಸಿರುವ ‘ಪ್ಯಾಕ್-3’ ಅಥವಾ ‘ಥಾಡ್’ ರಕ್ಷಣಾ ವ್ಯವಸ್ಥೆಯನ್ನು ಕೊಳ್ಳುವಂತೆ ಅಮೆರಿಕವು ಭಾರತಕ್ಕೆ ಮನವಿ ಮಾಡಿತ್ತು. ಹಾಗಾಗಿ 2017ರ ಕಾಯ್ದೆಯನ್ನು ಅಮೆರಿಕ ಉಲ್ಲೇಖಿಸಿದರೆ ಅದೊಂದು ನೆಪ ಅಷ್ಟೆ.

ಹಾಗಾದರೆ ಜೋ ಬೈಡನ್ ಭಾರತದ ವಿರುದ್ಧ ದಿಗ್ಬಂಧನದ ನಿರ್ಣಯ ಕೈಗೊಳ್ಳುವರೇ? ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಸಖ್ಯ ಗಟ್ಟಿಯಾಗಿದೆ. ಏಷ್ಯಾ ಪೆಸಿಫಿಕ್ ವಲಯದ ಮಟ್ಟಿಗೆ ಚೀನಾವನ್ನು ಎದುರಿಸಲು ಭಾರತದೊಂದಿಗಿನ ಸಖ್ಯ ಅಮೆರಿಕಕ್ಕೆ ಹಿಂದೆಂದಿಗಿಂತಲೂ ಈಗ ಅಗತ್ಯ. ಕ್ವಾಡ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿ ಕೂಡ ಭಾರತ ಇದೆ. ಭಾರತದ ಮೇಲೆ ಕ್ರಮ ಕೈಗೊಂಡರೆ ರಷ್ಯಾದೊಂದಿಗಿನ ತಂತುಗಳನ್ನು ಭಾರತ ಗಟ್ಟಿ ಮಾಡಿಕೊಳ್ಳಬಹುದು ಎಂಬ ಆತಂಕ ಅಮೆರಿಕಕ್ಕೆ ಇಲ್ಲದಿಲ್ಲ. ಇದೆಲ್ಲಕ್ಕೂ ಮಿಗಿಲಾಗಿ ಭಾರತ ಬೆಳೆಯುತ್ತಿರುವ ದೊಡ್ಡ ಮಾರುಕಟ್ಟೆ. ಹಾಗಾಗಿ ದಿಗ್ಬಂಧನ ವಿಧಿಸಿ ತನ್ನ ಕೈಗಳನ್ನು ತಾನೇ ಕಟ್ಟಿಹಾಕಿಕೊಳ್ಳುವ ಕೆಲಸವನ್ನು ಅಮೆರಿಕ ಮಾಡುವ ಸಾಧ್ಯತೆ ಕಡಿಮೆ.

ಆದರೆ ಈ ಹಿಂದೆ ಎಸ್-400 ಅನ್ನು ಚೀನಾ ಖರೀದಿಸಿದಾಗ ಅಮೆರಿಕ ಒಂದಿಷ್ಟು ನಿರ್ಬಂಧ ವಿಧಿಸಿತ್ತು. ರಷ್ಯಾದ ಜೊತೆ ಟರ್ಕಿ ಒಪ್ಪಂದ ಮಾಡಿಕೊಂಡಾಗ, ನ್ಯಾಟೊ ಸದಸ್ಯ ರಾಷ್ಟ್ರ ಎಂಬುದನ್ನು ಲೆಕ್ಕಿಸದೇ ಎಫ್-35 ಯುದ್ಧ ವಿಮಾನಗಳನ್ನು ಸರಬರಾಜು ಮಾಡುವುದಿಲ್ಲ ಎಂದಿತ್ತು. ‘ಎಸ್-400 ಘಟಕಗಳನ್ನು ಅಳವಡಿಸಲು ರಷ್ಯಾದ ತಾಂತ್ರಿಕ ಪರಿಣತರು ಭೇಟಿ ಕೊಡುತ್ತಾರೆ, ಆ ಸಂದರ್ಭದಲ್ಲಿ ಎಫ್-35ರ ತಂತ್ರಜ್ಞಾನ ರಷ್ಯಾದ ಪಾಲಾಗಬಹುದು’ ಎಂಬ ತನ್ನ ದಿಗಿಲನ್ನು ಹೇಳಿಕೊಂಡಿತ್ತು. ಒಂದೊಮ್ಮೆ ಭಾರತಕ್ಕೆ ದಿಗ್ಬಂಧನದಿಂದ ವಿನಾಯಿತಿ ನೀಡಿದರೆ ಟರ್ಕಿ ಮತ್ತು ಚೀನಾದ ಟೀಕೆಯನ್ನು ಕೇಳಬೇಕಾಗಿ ಬರಬಹುದು ಎಂಬ ದ್ವಂದ್ವ ಅಮೆರಿಕವನ್ನು ಕಾಡುತ್ತಿದೆ.

ಎಸ್-400 ವಿಷಯದಲ್ಲಿ ಅಮೆರಿಕದ ಒತ್ತಡ
ಇದ್ದಾಗ್ಯೂ ಭಾರತ ಸ್ಥಿರವಾಗಿ ನಿಂತಿದ್ದಕ್ಕೆ ಕಾರಣವಿದೆ. ಯಾವುದೇ ದೇಶದ ಮೇಲೆ ವಿಶ್ವಸಂಸ್ಥೆ ಹೇರುವ ದಿಗ್ಬಂಧನಕ್ಕೆ ಬದ್ಧವಾಗಿರುತ್ತೇವೆ, ಆದರೆ ಏಕಪಕ್ಷೀಯವಾಗಿ ಯಾವುದೇ ರಾಷ್ಟ್ರ ಹೇರುವ ದಿಗ್ಬಂಧನಗಳಿಗೆ ಮಾನ್ಯತೆ ನೀಡುವುದಿಲ್ಲ ಎನ್ನುವುದು ಭಾರತದ ಸ್ಥಾಪಿತ ನಿಲುವು. ಜೊತೆಗೆ ರಷ್ಯಾ ಜೊತೆಗಿನ ಭಾರತದ ಸಖ್ಯ ಹಳೆಯದು. ಭಾರತ ಬಳಸುತ್ತಿರುವ ಶೇಕಡ 65ರಷ್ಟು ಯುದ್ಧೋಪಕರಣಗಳು ರಷ್ಯಾ ಮೂಲದ್ದಾಗಿವೆ.

ಆ ಉಪಕರಣಗಳನ್ನು ಸುಸ್ಥಿತಿಯಲ್ಲಿಡಲು ಅಗತ್ಯವಾದ ಬಿಡಿಭಾಗಗಳನ್ನು ರಷ್ಯಾ ಪೂರೈಸುತ್ತಿದೆ. ಈ ಹಿಂದೆ 1998ರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ದಿಗ್ಬಂಧನ ಹೇರಿದಾಗಲೂ ಭಾರತದ ಜೊತೆಗಿನ ಶಸ್ತ್ರಾಸ್ತ್ರ ವಹಿವಾಟನ್ನು ರಷ್ಯಾ ತೊರೆದಿರಲಿಲ್ಲ. ಹಾಗಾಗಿ ರಷ್ಯಾ ಜೊತೆಗಿನ ಬಾಂಧವ್ಯವನ್ನು ಭಾರತ ಜಾಗರೂಕತೆಯಿಂದ ಕಾಯ್ದುಕೊಂಡು ಬಂದಿದೆ.

ಅದೇನೇ ಇರಲಿ, ಆಧುನಿಕ ಜಗತ್ತಿನ ಯುದ್ಧಗಳಲ್ಲಿ ಸೋಲು ಮತ್ತು ಗೆಲುವನ್ನು ಅತ್ಯಾಧುನಿಕ ಯುದ್ಧ ವಿಮಾನಗಳು, ಕ್ಷಿಪಣಿಗಳು, ವಾಯುದಾಳಿ ಪ್ರತಿರೋಧಕ ವ್ಯವಸ್ಥೆಗಳು ನಿರ್ಧರಿಸುತ್ತವೆ. ಶತ್ರುರಾಷ್ಟ್ರದ ಉದ್ದಗಲ ತಲುಪಬಲ್ಲ ಖಂಡಾಂತರ ಕ್ಷಿಪಣಿಯಂತಹ ಅಸ್ತ್ರಗಳ ಜೊತೆಗೆ ಪ್ರತಿದಾಳಿಯಿಂದ ತಪ್ಪಿಸಿಕೊಳ್ಳಲು ಗುರಾಣಿಯೂ ಮುಖ್ಯವಾಗುತ್ತದೆ. ಆ ದೃಷ್ಟಿಯಿಂದ ಎಸ್-400 ಭಾರತಕ್ಕೆ ಅತ್ಯಗತ್ಯ. 1998ರಲ್ಲಿ ನಾವು ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಜಗತ್ತು ನಮ್ಮ ಮೇಲೆ ಮುಗಿಬಿದ್ದಿತ್ತು. ಆಗ ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಅವರು ‘ಪರಮಾಣು ಅಸ್ತ್ರ ಹೊಂದಿರುವುದರಿಂದ ಶತ್ರು ರಾಷ್ಟ್ರ ಆಕ್ರಮಣಕ್ಕೆ ಹಿಂಜರಿಯುತ್ತದೆ. ಇದು ಶಾಂತಿ ಸ್ಥಾಪನೆಗೆ ಸಹಕಾರಿ’ ಎಂದು ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು. ‘ಅಭದ್ರತೆಯಿಂದ ನರಳುವ ರಾಷ್ಟ್ರ, ಶಕ್ತಿಶಾಲಿ ರಾಷ್ಟ್ರ ವಾಗಿ ಹೊರಹೊಮ್ಮಲಾರದು. ಯುದ್ಧಗಳನ್ನು ಅಣ್ವಸ್ತ್ರ ತಪ್ಪಿಸಬಲ್ಲದು’ ಎಂಬುದು ವಾಜಪೇಯಿ ಅವರ ನಿಲು ವಾಗಿತ್ತು. ಅಪಾಯಕಾರಿ ಅಸ್ತ್ರಗಳನ್ನು ‘ಮೊದಲು ಬಳಸು ವುದಿಲ್ಲ’ (ನೋ ಫಸ್ಟ್ ಯೂಸ್) ಎಂಬ ಧೋರಣೆಗೆ ಬದ್ಧವಾಗಿರುವ ರಾಷ್ಟ್ರ ಭಾರತ. ಹಾಗಾಗಿ ಯಾವುದೇ ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತ ತನ್ನದಾಗಿಸಿಕೊಂಡರೂ ಅದರಿಂದ ಜಗತ್ತು ಹೆದರಬೇಕಾಗಿಲ್ಲ.

ಸುಧೀಂದ್ರ ಬುಧ್ಯ
ಸುಧೀಂದ್ರ ಬುಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT