ಪಾಕಿಸ್ತಾನದಲ್ಲಿ ನಾಟಕೀಯ ಬೆಳವಣಿಗೆಗಳು ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಎಂಬ ಎರಡು ಅಧಿಕಾರ ಕೇಂದ್ರಗಳನ್ನು ಹೊಂದಿರುವ ಪಾಕಿಸ್ತಾನದಲ್ಲಿ, ಆ ಕೇಂದ್ರಗಳ ನಡುವೆ ಪೈಪೋಟಿ, ಗುದ್ದಾಟ, ಹೊಂದಾಣಿಕೆ ಮತ್ತು ಮುನಿಸು ಸಾಮಾನ್ಯ ಎನ್ನುವಂತಾಗಿದೆ. ಕಳೆದ ವರ್ಷ ಗುಪ್ತಚರ ಇಲಾಖೆಯ ಮುಖ್ಯಸ್ಥರ ನೇಮಕದ ವಿಷಯದಲ್ಲಿ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರ ನಡುವೆ ಭಿನ್ನಾಭಿಪ್ರಾಯ ಮೊಳೆತಿತ್ತು. ಅದು ಹಿರಿದಾಗುತ್ತಾ ಪ್ರತಿಪಕ್ಷಗಳು ಇಮ್ರಾನ್ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಹಂತಕ್ಕೆ ಬೆಳೆಯಿತು.
ಪಾಕಿಸ್ತಾನ್ ತೆಹರೀಕ್ ಇ ಇನ್ಸಾಫ್‌ನ (ಪಿಟಿಐ) ಕೆಲವು ಸಂಸದರು ಪ್ರತಿಪಕ್ಷದ ಪಾಳಯದಲ್ಲಿ ಗುರುತಿಸಿ ಕೊಂಡರು. ಸಂಸತ್ತಿನಲ್ಲಿ ಅವಿಶ್ವಾಸ ಮತ ಪ್ರಕ್ರಿಯೆ ವಿಳಂಬವಾದಾಗ, ವಿಷಯವು ನ್ಯಾಯಾಲಯದ ಅಂಗಳಕ್ಕೆ ಹೋಯಿತು. ಅಂತೂ ಕೊನೆಗೆ ಇಮ್ರಾನ್ ಖಾನ್ ತಮ್ಮ ಸ್ಥಾನ ತ್ಯಜಿಸಿದರು. ಆದರೆ ಅವರು ಸುಮ್ಮನೆ ಕೂರಲಿಲ್ಲ. ತಮ್ಮ ಪದಚ್ಯುತಿಗೆ ಸೇನೆ ಕಾರಣ ಎಂದರು. ನವಾಜ್ ಷರೀಫ್ ಇಂಗ್ಲೆಂಡಿನಲ್ಲಿ ಕೂತು ರಾಜಕೀಯ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ ಎಂದರು. ಅಮೆರಿಕಕ್ಕೆ ತಾನು ಅಧಿಕಾರದಲ್ಲಿ ಇರುವುದು ಬೇಕಿಲ್ಲ ಹಾಗಾಗಿ ಹಿಂಬದಿ ನಿಂತು ಅದು ದಾಳ ಉರುಳಿಸುತ್ತಿದೆ, ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಮೂಗು ತೂರಿಸುತ್ತಿದೆ ಎಂದು ಆರೋಪಿಸಿದರು. ಆದರೆ ಈ ಯಾವ ಆರೋಪಕ್ಕೂ ಅವರು ಸೂಕ್ತ ದಾಖಲೆ ಒದಗಿಸಲಿಲ್ಲ. ಇಷ್ಟಕ್ಕೇ ಸುಮ್ಮ ನಾಗದ ಇಮ್ರಾನ್, ಪಾಕಿಸ್ತಾನದ ವಿವಿಧ ನಗರಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಆ ಸಭೆಗಳಿಗೆ ಜನಸಾಗರವೇ ಹರಿದುಬಂತು. ಇದರಿಂದ ಜನರ ಅನುಕಂಪ ತಮ್ಮ ಪರ ಇದೆ ಎಂಬುದನ್ನು ಖಾನ್ ಕಂಡುಕೊಂಡರು. ಸೇನೆ ಮತ್ತು ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರದ ವಿರುದ್ಧ ‘ಲಾಂಗ್ ಮಾರ್ಚ್’ಗೆ ಕರೆ
ಕೊಟ್ಟರು.
ಪೇಶಾವರದಿಂದ ಇಮ್ರಾನ್ ಖಾನ್ ಇಸ್ಲಾಮಾ
ಬಾದ್‌ನತ್ತ ಹೊರಟರೆ, ಇತರ ಭಾಗಗಳಿಂದ ಖಾನ್ ಬೆಂಬಲಿಗರು ಇಸ್ಲಾಮಾಬಾದ್‌ನತ್ತ ಮುಖ ಮಾಡಿದರು. ಸಂಸತ್ತನ್ನು ಕೂಡಲೇ ವಿಸರ್ಜಿಸಬೇಕು, ಸಾರ್ವತ್ರಿಕ ಚುನಾವಣೆಯನ್ನು ತಡಮಾಡದೇ ಘೋಷಿಸಬೇಕು ಎಂಬ ಎರಡು ಆಗ್ರಹಗಳು ಈ ಸುದೀರ್ಘ ಜಾಥಾದ ಗುರಿಯಾಗಿದ್ದವು. ತ್ವರಿತವಾಗಿ ಚುನಾವಣೆ ನಡೆದರೆ, ಜನರ ಅನುಕಂಪವು ಮತವಾಗಿ ಪರಿವರ್ತನೆ
ಗೊಳ್ಳುತ್ತದೆ, ಬಹುಮತದಿಂದ ಸರ್ಕಾರ ರಚಿಸಬಹುದು ಎಂಬುದು ಇಮ್ರಾನ್ ಲೆಕ್ಕಾಚಾರವಾಗಿತ್ತು. ಮುಖ್ಯವಾಗಿ ಸೇನೆಯ ಮುಖ್ಯಸ್ಥರ ಅಧಿಕಾರದ ಅವಧಿ ಅಂತ್ಯಗೊಳ್ಳುವ (ನ. 29) ಮುನ್ನವೇ ಚುನಾವಣೆ ನಡೆದು ತಮ್ಮ ಸರ್ಕಾರ ರಚನೆಯಾದರೆ, ತಮ್ಮ ಆಪ್ತವಲಯದ ಅಧಿಕಾರಿಯನ್ನು ಸೇನೆಯ ಉನ್ನತ ಹುದ್ದೆಗೆ ನಿಯುಕ್ತಿ ಮಾಡಬಹುದು ಎಂಬ ಅಭಿಲಾಷೆಯನ್ನು ಇಮ್ರಾನ್ ಹೊಂದಿದ್ದರು. ಹಾಗಾಗಿಯೇ ಮೇ ತಿಂಗಳಿನಲ್ಲಿ ಇಮ್ರಾನ್ ತಮ್ಮ ಆಂದೋಲನವನ್ನು ಆರಂಭಿಸಿದರು.
ಆದರೆ ಎಲ್ಲವೂ ಇಮ್ರಾನ್ ಅಂದುಕೊಂಡಂತೆ ಆಗಲಿಲ್ಲ. ಮಾರ್ಗ ಮಧ್ಯದಲ್ಲಿ ಇಮ್ರಾನ್ ಅವರ ಮೇಲೆ ದಾಳಿ ಆಯಿತು. ಅವರ ಕಾಲಿಗೆ ಗುಂಡು ತಗುಲಿತು. ಇದು ಹತ್ಯೆಯ ಪ್ರಯತ್ನ ಎಂದ ಇಮ್ರಾನ್, ತಮ್ಮನ್ನು ಹತ್ಯೆ ಮಾಡಲು ಸರ್ಕಾರ ಮತ್ತು ಸೇನೆ ಸಂಚು ರೂಪಿಸಿವೆ ಎಂದರು. ಆದರೆ ಯಾವುದೇ ದಾಖಲೆ ಮುಂದಿಡಲಿಲ್ಲ. ದಾಳಿಯ ಬಳಿಕ ಇಮ್ರಾನ್ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಇಮ್ರಾನ್ ಉತ್ತಮ ಕ್ರಿಕೆಟರ್ ಮಾತ್ರ ಅಲ್ಲ, ಅವರೊಬ್ಬ ಚಾಣಾಕ್ಷ ರಾಜಕಾರಣಿ. ಇದೀಗ ಪಾಕ್ ಸೇನೆಯ ವಿರುದ್ಧ ಮಾತನಾಡುತ್ತಿರುವ ಇಮ್ರಾನ್, ತಾವು ರಾಜಕೀಯದ ಮೆಟ್ಟಿಲು ಏರುವಾಗ, ಪಾಕಿಸ್ತಾನದ ದುಃಸ್ಥಿತಿಗೆ ಸೇನೆಯ ರಾಜಕೀಯ ಹಸ್ತಕ್ಷೇಪವೂ ಕಾರಣ ಎಂದು ನೆಪಮಾತ್ರಕ್ಕೂ ಹೇಳಿರಲಿಲ್ಲ. ಅಮೆರಿಕವನ್ನು ಮೆಚ್ಚಿಸುವ ಮಾತನ್ನು ಆಡಿದ್ದರು. ಕಟ್ಟಾ ಇಸ್ಲಾಮ್ ಅನುಯಾಯಿ ಎಂಬಂತೆ ಬಿಂಬಿಸಿಕೊಂಡರು. ತಾಲಿಬಾನ್ ಜೊತೆ ಗುರುತಿಸಿಕೊಂಡರು. ಪ್ರಧಾನಿ ಪಟ್ಟ ಇಮ್ರಾನ್ ಅವರ ಕೈಗೆಟುಕಿತು. ಆದರೆ ಅಫ್ಗಾನಿಸ್ತಾನದಿಂದ ಅಮೆರಿಕ ಕಾಲ್ತೆಗೆಯಲು ನಿರ್ಧರಿಸಿದಾಗ, ಇಮ್ರಾನ್ ಅಮೆರಿಕದಿಂದ ಅಂತರ ಕಾಯ್ದುಕೊಂಡರು.
ಇದೀಗ ಅವರು ದೇಶದ ಜನರ ಅನುಕಂಪವನ್ನು ಸಾಂದ್ರ ಮಾಡಿಕೊಳ್ಳುವತ್ತ ಹೆಜ್ಜೆ ಇರಿಸಿದ್ದಾರೆ. ಬಾಹ್ಯಶಕ್ತಿಗಳ ಹಸ್ತಕ್ಷೇಪ, ತಮ್ಮ ಮೇಲಾದ ಹತ್ಯೆಯ ಪ್ರಯತ್ನ ಇಮ್ರಾನ್ ಅವರಿಗೆ ಆಸರೆಯಾಗಿ ಒದಗಿವೆ. ಆದರೆ ಇಮ್ರಾನ್ ಮತ್ತೊಮ್ಮೆ ಅಧಿಕಾರ ಹಿಡಿಯಲು ಹೊರಟಿರುವ ಮಾರ್ಗದಲ್ಲಿ ಹಲವು ಬುಗುಟಿಗಳು ಕಾಣುತ್ತಿವೆ.
ಸಾಮಾನ್ಯವಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥರು ಯಾರಾಗುತ್ತಾರೆ ಎಂಬುದನ್ನು ಜಗತ್ತು ಹೆಚ್ಚಿನ ಕುತೂಹಲದಿಂದ ಗಮನಿಸುತ್ತದೆ. ಏಕೆಂದರೆ ಪಾಕಿಸ್ತಾನದ ರಾಜಕೀಯಕ್ಕೆ ಸೇನೆಯ ಅಂಕುಶ ಇರುತ್ತದೆ. ಪಾಕಿಸ್ತಾನದ ವಿದೇಶಾಂಗ ನೀತಿ ಮತ್ತು ರಕ್ಷಣಾ ನೀತಿಗಳು ಸೇನೆಯ ಕಣ್ಣಳತೆಯಲ್ಲಿ ರೂಪುಗೊಳ್ಳುತ್ತವೆ. ಇದೀಗ ಜನರಲ್ ಬಾಜ್ವಾ ಅವರ ನಿವೃತ್ತಿಯ ನಂತರ ಆ ಸ್ಥಾನಕ್ಕೆ ಪ್ರಧಾನಿಶೆಹಬಾಜ್ ಷರೀಫ್ ಅವರು ಲೆಫ್ಟಿನೆಂಟ್ ಜನರಲ್ ಅಸೀಮ್ ಮುನೀರ್ ಅವರನ್ನು ನೇಮಿಸಿ ಚಾಣಾಕ್ಷತೆ ಮೆರೆದಿದ್ದಾರೆ. 2019ರಲ್ಲಿ ಇಮ್ರಾನ್ ಖಾನ್, ಪಾಕಿಸ್ತಾನದ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದ ಮುನೀರ್ ಅವರ ಅವಧಿಯನ್ನು ಕಡಿತಗೊಳಿಸಿ ಅವರ ಜಾಗಕ್ಕೆ ತಮ್ಮ ಆಪ್ತವಲಯದಲ್ಲಿದ್ದ ಫಯಾಸ್ ಹಮೀದ್ ಅವರನ್ನು ತಂದಿದ್ದರು. ಇದು ಬಾಜ್ವಾ ಮತ್ತು ಇಮ್ರಾನ್ ನಡುವೆ ವೈಮನಸ್ಯ ಮೂಡುವಂತೆ ಮಾಡಿತ್ತು.
ಇನ್ನು ಮೂರು ವರ್ಷಗಳ ಕಾಲ ಮುನೀರ್ ಪಾಕಿಸ್ತಾನದ ಸೇನೆಯ ಮುಖ್ಯಸ್ಥರಾಗಿ ಇರುತ್ತಾರೆ. ಸೇನೆಯ ಮರ್ಜಿಗೆ ಬೀಳದೆ ಯಾರೂ ಪಾಕಿಸ್ತಾನದಲ್ಲಿ ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ. ಮುನೀರ್ ಅವರ ಅಡ್ಡಗಾಲನ್ನು ದಾಟಿ ಇಮ್ರಾನ್ ನಡೆಯ
ಬೇಕಾಗುತ್ತದೆ. ಅದು ಮೊದಲ ಸವಾಲು. ಒಂದೊಮ್ಮೆ 2023ರ ದ್ವಿತೀಯಾರ್ಧದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐ ಬಹುಮತ ಪಡೆದು ಇಮ್ರಾನ್ ಪ್ರಧಾನಿಯಾದರೂ, ಸೇನೆಯೊಂದಿಗಿನ ತಿಕ್ಕಾಟ ಮುಂದುವರಿದರೆ ಅಚ್ಚರಿಯಿಲ್ಲ.
ಇಸ್ಲಾಮಾಬಾದ್‌ನೆಡೆಗೆ ಹೊರಟಿದ್ದ ಇಮ್ರಾನ್ ಖಾನ್, ಇದೀಗ ತಮ್ಮ ಯೋಜನೆ ಬದಲಿಸಿಕೊಂಡಂತೆ ಕಾಣುತ್ತಿದೆ. ಇಸ್ಲಾಮಾಬಾದ್ ತಲುಪಿ ಅಲ್ಲಿ ಚುನಾವಣೆ ಘೋಷಿಸುವ ತನಕ ಧರಣಿ ನಡೆಸುವುದು ಇಮ್ರಾನ್ ಅವರ ಮೂಲ ಯೋಜನೆಯಾಗಿತ್ತು. ಆದರೆ ಶೆಹಬಾಜ್ ನೇತೃತ್ವದ ಸರ್ಕಾರ ಸುಲಭಕ್ಕೆ ಮಣಿಯಲಾರದು, ಸಾರ್ವತ್ರಿಕ ಚುನಾವಣೆಯವರೆಗೆ ಕಾಯುವುದು ಅನಿವಾರ್ಯ ಎಂಬುದು ಇದೀಗ ಇಮ್ರಾನ್ ಅವರಿಗೆ ಮನವರಿಕೆಯಾದಂತಿದೆ. ಹಾಗಾಗಿ ಇದೇ 26ರಂದು ರಾವಲ್ಪಿಂಡಿಯಲ್ಲಿ ನಡೆದ ಸಭೆಯಲ್ಲಿ ಇಮ್ರಾನ್ ‘ಲಾಂಗ್ ಮಾರ್ಚ್’ಗೆ ಕೊನೆ ಹಾಡಿದ್ದಾರೆ. ಇಸ್ಲಾಮಾಬಾದ್ ನಲ್ಲಿ ಧರಣಿ ನಡೆಸಿದರೆ ಅರಾಜಕತೆ ಉಂಟಾಗಬಹುದು, ಅದು ದೇಶಕ್ಕೆ ಹಿತವಲ್ಲ ಎಂದು ಬೆಂಬಲಿಗರ ಮನವೊಲಿಸಿದ್ದಾರೆ. ಆದರೆ ಮುಂದಿನ ವರ್ಷಾಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯವರೆಗೂ ತಮ್ಮೆಡೆಗೆ ವ್ಯಕ್ತವಾಗಿರುವ ಅನುಕಂಪವನ್ನು ಕಾಯ್ದುಕೊಳ್ಳುವುದು ಇಮ್ರಾನ್ ಅವರಿಗೆ ಕಷ್ಟವಾಗಬಹುದು. ಅದು ಎರಡನೆಯ ಸವಾಲು.
ಈ ಹಿಂದೆ ಭಾರತದ ಕುರಿತು ಮೆಚ್ಚುಗೆಯ ಮಾತನಾಡಿದ್ದ ಇಮ್ರಾನ್ ಖಾನ್, ಇತ್ತೀಚಿನ ದಿನಗಳಲ್ಲಿ ತಮ್ಮ ಭಾಷಣದಲ್ಲಿ ಪೂರ್ವ ಪಾಕಿಸ್ತಾನದ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ‘ಪೂರ್ವ ಪಾಕಿಸ್ತಾನದಲ್ಲಿ ಜನಮತ ಗೆದ್ದ ಪ್ರಮುಖ ರಾಜಕೀಯ ಪಕ್ಷವನ್ನು ಕಡೆಗಣಿಸಿದ್ದರಿಂದ ಏನಾಯಿತು ಎಂಬುದನ್ನು ನಾವು ಮರೆಯಬಾರದು’ ಎನ್ನುತ್ತಿದ್ದಾರೆ. ಇಮ್ರಾನ್ ಬದಲಿ ಯೋಜನೆಯನ್ನು
ಹೆಣೆಯುತ್ತಿದ್ದಾರೆಯೇ?
ಇತ್ತ ಭಾರತದ ರಕ್ಷಣಾ ಸಚಿವರು ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲಾಗುವುದು ಎಂದು ಪರೋಕ್ಷವಾಗಿ ಹೇಳಿದ್ದು ವರದಿಯಾಗಿದೆ. ಹಿಂದಿನ ವಾರ ಭಾರತ ಸೇನೆಯ ಉತ್ತರ ವಿಭಾಗದ ಕಮಾಂಡರ್ ಉಪೇಂದ್ರ ದ್ವಿವೇದಿ, ‘ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನರ್ವಶ ಮಾಡಿಕೊಳ್ಳುವ ಕುರಿತು ಕೇಂದ್ರ ಸರ್ಕಾರ ನೀಡುವ ಯಾವುದೇ ಆದೇಶವನ್ನು ಪಾಲಿಸಲಾಗುವುದು’ ಎಂದಿದ್ದಾರೆ. ದುರ್ಬಲ ಆರ್ಥಿಕತೆ, ಹಣದುಬ್ಬರದಿಂದ ನಿಡುಸುಯ್ಯುತ್ತಿರುವ ಪಾಕಿಸ್ತಾನದಲ್ಲಿ ಅಂತರ್ಯುದ್ಧ ಆರಂಭವಾದರೆ, ಇಮ್ರಾನ್ ತಮ್ಮ ಬದಲಿ ಯೋಜನೆಗೆ ಕಾವು ಕೊಡಬಹುದು. ಭಾರತದ ರಕ್ಷಣಾ ಸಚಿವರ ಮಾತಿಗೆ ಇನ್ನಷ್ಟು ಪುಷ್ಟಿ ಬರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.