ಮಂಗಳವಾರ, ಮೇ 17, 2022
25 °C
ಅಮೆರಿಕಕ್ಕೆ ಪಾಕಿಸ್ತಾನದ ಇನ್ನೊಂದು ಮುಖವನ್ನು ನೆನಪಿಸುವ ಬೆಳವಣಿಗೆಯೊಂದು ನಡೆದಿದೆ

ಪಾಕ್ ಮತ್ತು ‘ಪರ್ಲ್’ ಪ್ರಕರಣ

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಉತ್ಸಾಹದಿಂದಲೇ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ದಶಕಗಳ ಕಾಲ ಸೆನೆಟರ್ ಆಗಿ, ಬರಾಕ್‌ ಒಬಾಮ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದ ಬೈಡನ್ ಅವರಿಗೆ ಆಡಳಿತದ ಅನುಭವ ಸಾಕಷ್ಟಿದೆ. ಮುಖ್ಯ ಹುದ್ದೆಗಳಲ್ಲಿ ಒಂದಾದ ವಿದೇಶಾಂಗ ಕಾರ್ಯದರ್ಶಿ ಸ್ಥಾನದಲ್ಲಿರುವ ಆಂಟೋನಿ ಬ್ಲಿಂಕೆನ್ ಕೂಡ, ಈ ಹಿಂದೆ ಒಬಾಮ ಅವಧಿಯಲ್ಲಿ ಕೆಲಸ ಮಾಡಿದ್ದವರೇ. ಹಾಗಾಗಿ ಬೈಡನ್- ಬ್ಲಿಂಕೆನ್ ಜೋಡಿ, ಕೊರೊನೋತ್ತರ ಜಾಗತಿಕ ರಾಜಕೀಯ ಸನ್ನಿವೇಶವನ್ನು ಹೇಗೆ ನಿರ್ವಹಿಸುತ್ತದೆ ಎಂದು ಜಗತ್ತು ಕುತೂಹಲದಿಂದ ನೋಡುತ್ತಿದೆ.

ಈ ಪ್ರಶ್ನೆಗೆ ಜೋತುಬಿದ್ದಿರುವ ಹಲವು ಉಪಪ್ರಶ್ನೆಗಳು ಇವೆ. ‘ಅಮೆರಿಕ ಮೊದಲು’ ಎಂಬುದು ಡೊನಾಲ್ಡ್‌ ಟ್ರಂಪ್ ಆಡಳಿತದ ಒಟ್ಟಾರೆ ಧೋರಣೆಯಾಗಿತ್ತು. ಈ ನಿಲುವಿನಿಂದಾಗಿ ಅಮೆರಿಕವು ಜಾಗತಿಕವಾಗಿ ‘ಹಿರಿಯಣ್ಣ’ನ ಸ್ಥಾನ ಬಿಟ್ಟುಕೊಟ್ಟಿತೇ ಎಂಬ ಚರ್ಚೆ ಆರಂಭವಾಗಿತ್ತು. ನ್ಯಾಟೊ ವಿಷಯದಲ್ಲಿ ಅಮೆರಿಕ ತಳೆದ ನಿಲುವಿನಿಂದಾಗಿ, ಅದರ ಮಿತ್ರ ರಾಷ್ಟ್ರಗಳೂ ಸಿಟ್ಟಾಗಿದ್ದವು. ಮತ್ತೊಂದೆಡೆ, ಚೀನಾದೊಂದಿಗಿನ ವಾಣಿಜ್ಯ ಸಮರ ತಾರಕಕ್ಕೇರಿತ್ತು. ಈ ವಿಷಯಗಳ ಕುರಿತು ಬೈಡನ್ ಧೋರಣೆ ಏನಿರಲಿದೆ? ಇರಾನ್, ಉತ್ತರ ಕೊರಿಯಾ, ಪಾಕಿಸ್ತಾನದ ವಿಷಯದಲ್ಲಿ ಅಮೆರಿಕ ಹೇಗೆ ನಡೆದುಕೊಳ್ಳಲಿದೆ ಎಂಬ ಪ್ರಶ್ನೆಗಳು ಇದೀಗ ಉತ್ತರಕ್ಕಾಗಿ ಕಾಯುತ್ತಿವೆ. ಪ್ರಸಕ್ತ ಜಾಗತಿಕ ರಾಜಕೀಯ ಸನ್ನಿವೇಶದಲ್ಲಿ ಭಾರತ ಮುಖ್ಯ ಪಾತ್ರಧಾರಿಯಾಗಿ ಹೊರಹೊಮ್ಮಿರುವುದರಿಂದ ಭಾರತ- ಅಮೆರಿಕದ ನಡುವಿನ ವಾಣಿಜ್ಯಿಕ ಹಾಗೂ ವ್ಯಾವಹಾರಿಕ ಸಂಬಂಧದಲ್ಲಿ ಹೆಚ್ಚು ವ್ಯತ್ಯಾಸವಾಗದು. ಹಾಗಾಗಿ, ಭದ್ರತೆ ಮತ್ತು ವ್ಯೂಹಾತ್ಮಕ ದೃಷ್ಟಿಯಿಂದ ಅಮೆರಿಕದ ‘ದಕ್ಷಿಣ ಏಷ್ಯಾ ನೀತಿ’ಯಲ್ಲಿ ಏನಾದರೂ ಬದಲಾವಣೆಯಾಗಲಿದೆಯೇ, ಮುಖ್ಯವಾಗಿ ಪಾಕಿಸ್ತಾನದ ವಿಷಯದಲ್ಲಿ ಬೈಡನ್ ಆಡಳಿತ ಮೃದುಧೋರಣೆ ತಳೆಯಬಹುದೇ ಎಂಬುದು ಸದ್ಯದ ಕುತೂಹಲ.

ಅದಕ್ಕೆ ಕಾರಣವೂ ಇದೆ. ತಾಲಿಬಾನ್ ಜೊತೆ ಅರ್ಥಪೂರ್ಣ ಮಾತುಕತೆಗಳಲ್ಲಿ ತೊಡಗಿಕೊಂಡು, ಶಾಂತಿ ಸ್ಥಾಪನೆಯನ್ನು ಖಚಿತಪಡಿಸಿಕೊಂಡ ಮೇಲೆ ಅಫ್ಗಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಂತಹಂತವಾಗಿ ಹಿಂದಕ್ಕೆ ಪಡೆಯಬೇಕು ಎಂಬುದು ಅಮೆರಿಕದ ಸದ್ಯದ ನಿಲುವು. ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮಧ್ಯವರ್ತಿಯಾಗಿ ಸಹಾಯಕ್ಕೆ ಬರಬಹುದೇ ಎಂದು ಅದು ಯೋಚಿಸುತ್ತಿದೆ. ಬ್ಲಿಂಕೆನ್ ಅವರನ್ನು ಅಭಿನಂದಿಸಿ ನಡೆಸಿದ ಮೊದಲ ಸಂಭಾಷಣೆಯಲ್ಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಷಿ, ‘ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯು ಉಭಯ ದೇಶಗಳು ಏಕಾಭಿಪ್ರಾಯ ಹೊಂದಿರುವ ವಿಷಯ’ ಎಂಬುದನ್ನು ನೆನಪಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಬ್ಲಿಂಕೆನ್, ‘ಅಮೆರಿಕ ಹಾಗೂ ಪಾಕಿಸ್ತಾನದ ನಡುವಿನ ದೀರ್ಘಕಾಲದ ಸ್ನೇಹವನ್ನು, ಸಹಭಾಗಿತ್ವವನ್ನು ನೆನೆದರು’ ಎಂದು ಪಾಕಿಸ್ತಾನದ ಪತ್ರಿಕೆಗಳು ವರದಿ ಮಾಡಿವೆ. ಇದೇ ಸಂದರ್ಭದಲ್ಲಿ, ಪಾಕಿಸ್ತಾನದ ಇನ್ನೊಂದು ಮುಖವನ್ನು ಮರೆಯಬಾರದು ಎಂದು ಅಮೆರಿಕಕ್ಕೆ ನೆನಪಿಸುವ ಬೆಳವಣಿಗೆಯೊಂದು ಅಲ್ಲಿ ನಡೆದಿದೆ.

ನಿಮಗೆ ನೆನಪಿರಬಹುದು, 2001ರ ಸೆಪ್ಟೆಂಬರ್ 11ರ ದಾಳಿಯ ಬಳಿಕ, ಅಂದಿನ ಬುಷ್ ಜೂನಿಯರ್ ಆಡಳಿತ ‘ಭಯೋತ್ಪಾದನೆಯ ವಿರುದ್ಧ ಸಮರ’ ಸಾರಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿ ಪ್ಯಾರಿಸ್ ಹಾಗೂ ಮಯಾಮಿ ನಡುವೆ ಸಂಚರಿಸುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿದ್ದ ರಿಚರ್ಡ್ ರೇಡ್ ಎಂಬ ಭಯೋತ್ಪಾದಕ, ತನ್ನ ಶೂಗಳಲ್ಲಿ ಬಾಂಬ್ ಇದೆ ಎಂದು ಅದನ್ನು ಸ್ಫೋಟಿಸುವ ಯತ್ನ ನಡೆಸಿದ್ದ. ಸಹಪ್ರಯಾಣಿಕರು ಆತನನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದರು. ಈತನಿಗೆ ಮತ್ತು ಅಲ್ ಕೈದಾ ಸಂಘಟನೆಗೆ ಇರುವ ನಂಟು ಹಾಗೂ ಪಾಕಿಸ್ತಾನದಲ್ಲಿರುವ ಇಸ್ಲಾಮಿಕ್ ಉಗ್ರ ಜಾಲ ಮತ್ತು ಐಎಸ್ಐ ಸಂಬಂಧದ ಕುರಿತು ತನಿಖೆ ಮಾಡಲು 38 ವರ್ಷದ ಪತ್ರಕರ್ತ ಡೇನಿಯಲ್ ಪರ್ಲ್ ಉತ್ಸುಕರಾಗಿದ್ದರು.

ಪರ್ಲ್ ಆ ಸಮಯದಲ್ಲಿ ಮುಂಬೈನಲ್ಲಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ದಕ್ಷಿಣ ಏಷ್ಯಾ ಬ್ಯೂರೊ ಮುಖ್ಯಸ್ಥರಾಗಿದ್ದರು. ಮುಬಾರಕ್ ಅಲಿ ಗಿಲಾನಿ ಸಂದರ್ಶನಕ್ಕೆಂದು ಕರಾಚಿಗೆ ಹೋಗಿದ್ದ ಪರ್ಲ್ ಅವರನ್ನು 2002ರ ಜನವರಿ 23ರಂದು ಅಪಹರಣ ಮಾಡಿ, ಫೆಬ್ರುವರಿ 1ರಂದು ಹತ್ಯೆ ಮಾಡಲಾಗಿತ್ತು. ತುಂಡರಿಸಿದ ಪರ್ಲ್ ದೇಹವನ್ನು ಕರಾಚಿಯಿಂದ 30 ಕಿ.ಮೀ. ದೂರದಲ್ಲಿ ಹೂಳಲಾಗಿತ್ತು. ಅಮೆರಿಕ ಒತ್ತಡ ಹೇರಿದ್ದರಿಂದ ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಆತನ ಮೂವರು ಸಹಚರರನ್ನು ಪಾಕಿಸ್ತಾನ ಸರ್ಕಾರ ಬಂಧಿಸಿ ಶಿಕ್ಷೆಗೆ ಒಳಪಡಿಸಿತು. ಕೇವಲ ಈ ಪ್ರಕರಣವಷ್ಟೇ ಅಲ್ಲ, ಇದಕ್ಕೂ ಮುಂಚೆ ಒಮರ್ ಶೇಖ್, ವಿದೇಶಿ ಪ್ರವಾಸಿಗರನ್ನು ಅಪಹರಿಸಿದ್ದ ಕಾರಣಕ್ಕಾಗಿ ಭಾರತದಲ್ಲಿ 94ರಿಂದ 99ರವರೆಗೆ ಜೈಲಿನಲ್ಲಿದ್ದ. 1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣ ಪ್ರಕರಣ ನಡೆದಾಗ ಸುಮಾರು 150 ಪ್ರಯಾಣಿಕರ ಜೀವಕ್ಕೆ ಪ್ರತಿಯಾಗಿ, ಭಾರತ ಸರ್ಕಾರ ಬಿಡುಗಡೆಗೊಳಿಸಿದ ಉಗ್ರರ ಪೈಕಿ ಜೆಇಎಂ ಮುಖ್ಯಸ್ಥ ಮಸೂದ್ ಅಜರ್, ಮುಷ್ತಾಕ್ ಅಹ್ಮದ್ ಜರ್ಗರ್ ಜೊತೆಗೆ ಈ ಒಮರ್ ಶೇಖ್ ಕೂಡ ಇದ್ದ.

ಪರ್ಲ್ ಹತ್ಯೆ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎನ್ನುತ್ತಿದ್ದ ಒಮರ್ ಶೇಖ್ ಪರ ಮೇಲ್ಮನವಿಯು ನ್ಯಾಯಾಲಯದ ಅಂಗಳಕ್ಕೆ ಬಂತು. 2020ರ ಏಪ್ರಿಲ್‌ನಲ್ಲಿ ಸಿಂಧ್ ಹೈಕೋರ್ಟ್‌, ಒಮರ್ ಶೇಖ್‍ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಏಳು ವರ್ಷಗಳ ಜೈಲು ಶಿಕ್ಷೆಯನ್ನಾಗಿ ಮಾರ್ಪಡಿಸಿತು. ಟ್ರಂಪ್ ಆಡಳಿತ ‘ಆತನನ್ನು ನಮಗೆ ಒಪ್ಪಿಸಿ, ಇಲ್ಲವೇ ಶಿಕ್ಷಿಸಿ’ ಎಂಬ ಒತ್ತಡ ಹೇರಿದ್ದರಿಂದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಿಂಧ್ ಸರ್ಕಾರ ಮತ್ತು ಪರ್ಲ್ ಕುಟುಂಬ ಮೇಲ್ಮನವಿ ಸಲ್ಲಿಸಿದವು. ಮೊನ್ನೆ ಜನವರಿ 28ರಂದು ಆ ಮೇಲ್ಮನವಿ
ಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ವಜಾಗೊಳಿಸಿ ಆತನನ್ನು ಬಿಡುಗಡೆ ಮಾಡಲು ಆದೇಶಿಸಿದೆ!

ಇದರಿಂದ ಅಮೆರಿಕ ಸಿಟ್ಟಾಗಿದೆ. ‘ಕಾನೂನು ಕ್ರಮ ಜರುಗಿಸಲು ಅಮೆರಿಕಕ್ಕೆ ಅವಕಾಶ ನೀಡುವುದೂ ಸೇರಿದಂತೆ, ಎಲ್ಲ ಕಾನೂನಾತ್ಮಕ ಆಯ್ಕೆಗಳನ್ನು ಬಳಸಿ ಹಂತಕರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಬ್ಲಿಂಕೆನ್ ಪಾಕಿಸ್ತಾನವನ್ನು ಆಗ್ರಹಿಸಿದ್ದಾರೆ.
ಪಾಕಿಸ್ತಾನದ ಸಬೂಬು ಏನು ಎಂಬುದನ್ನು ಕಾದು ನೋಡಬೇಕು.

ಹಾಗಂತ, ಪಾಕಿಸ್ತಾನದಲ್ಲಿ ಶಿಕ್ಷೆಯಿಂದ ತಪ್ಪಿಸಿ ಕೊಳ್ಳುತ್ತಿರುವ ಮೊದಲ ಭಯೋತ್ಪಾದಕ ಒಮರ್ ಶೇಖ್ ಅಲ್ಲ ಎಂಬುದು ಅಮೆರಿಕಕ್ಕೆ ತಿಳಿಯದ ಸಂಗತಿಯಲ್ಲ. 2008ರ ಮುಂಬೈ ದಾಳಿಯ ರೂವಾರಿ, ಲಷ್ಕರ್ ಸಂಸ್ಥಾಪಕ ಹಫೀಸ್ ಸಯೀದ್‍ನನ್ನು ಪಾಕಿಸ್ತಾನದ ನ್ಯಾಯಾಲಯ 2017ರಲ್ಲಿ ಖುಲಾಸೆಗೊಳಿಸಿದಾಗ, ಟ್ರಂಪ್ ಆಡಳಿತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ತಕ್ಷಣ ಮರುಬಂಧಿಸದಿದ್ದಲ್ಲಿ ಕ್ರಮದ ಎಚ್ಚರಿಕೆ ನೀಡಿತ್ತು. ಎಚ್ಚರಿಕೆಯನ್ನು ಪಾಕಿಸ್ತಾನ ಉಪೇಕ್ಷಿಸಿದಾಗ, ಪಾಕಿಸ್ತಾನಕ್ಕೆ ಹೋಗಬೇಕಿದ್ದ ದೊಡ್ಡ ಮೊತ್ತದ ಭದ್ರತಾ ಸಹಾಯಧನವನ್ನು ತಡೆಹಿಡಿದಿತ್ತು. ನಂತರ 2019ರಲ್ಲಿ ಇಮ್ರಾನ್ ಖಾನ್ ಹಾಗೂ ಟ್ರಂಪ್ ಭೇಟಿಗೆ ಮುನ್ನ, ಮತ್ತೊಮ್ಮೆ ಆತನ ವಿರುದ್ಧದ ಪ್ರಕರಣಗಳನ್ನು ಪರಿಗಣಿಸಿ ಬಂಧಿಸುವ ನಾಟಕೀಯ ಬೆಳವಣಿಗೆ ನಡೆಯಿತು. ಆದರೂ ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಕಾರಣದಿಂದ ಅಂತರರಾಷ್ಟ್ರೀಯ ಹಣಕಾಸು ಕಾರ್ಯಪಡೆಯು ಪಾಕಿಸ್ತಾನವನ್ನು ಕಂದು ಪಟ್ಟಿಗೆ ಸೇರಿಸಿತು. ಇಂತಹ ಹಲವು ಪ್ರಕರಣಗಳು ಭಯೋತ್ಪಾದಕರ ವಿಷಯದಲ್ಲಿ ಪಾಕಿಸ್ತಾನದ ಧೋರಣೆ ಏನು ಎಂಬುದನ್ನು ಜಾಹೀರು ಮಾಡಿವೆ.

ಬೈಡನ್- ಬ್ಲಿಂಕೆನ್ ಜೋಡಿ ‘ಹಳೆಯ ಸ್ನೇಹ’ವನ್ನು ನೆನಪು ಮಾಡಿಕೊಂಡು ಪಾಕಿಸ್ತಾನದತ್ತ ಮಧುರ ನೋಟ ಬೀರುತ್ತಿರುವ ಹೊತ್ತಿನಲ್ಲೇ ಮುನ್ನೆಲೆಗೆ ಬಂದ ‘ಡೇನಿಯಲ್ ಪರ್ಲ್ ಹತ್ಯೆ ಪ್ರಕರಣ’ವು 9/11 ಭಯೋತ್ಪಾದಕ ದಾಳಿ, ಕಂದಹಾರ್ ವಿಮಾನ ಅಪಹರಣ, ಪರ್ಲ್ ಶಿರಚ್ಛೇದ, ಮುಂಬೈ ದಾಳಿ ಹೀಗೆ ಪಾಕಿಸ್ತಾನ ಪೋಷಿತ ಭಯೋತ್ಪಾದಕರ ಸರಣಿ ದುಷ್ಕೃತ್ಯಗಳನ್ನು ಅಮೆರಿಕಕ್ಕೆ ನೆನಪಿಸಿ ‘ಎಚ್ಚರಿಕೆ’ ಎನ್ನುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು