ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ: ರಾಷ್ಟ್ರಪತಿ: ಮಿತಿ ಮತ್ತು ಹೊಣೆ

ರಾಷ್ಟ್ರಪತಿ ಭವನ: ಸಂವಿಧಾನಕ್ಕೆ ಸರ್ಕಾರ ಬದ್ಧವಾಗಿರುವಂತೆ ನೋಡಿಕೊಳ್ಳಬೇಕಾದ ಜಾಗೃತ ಸ್ಥಳ
Last Updated 30 ಜೂನ್ 2022, 18:45 IST
ಅಕ್ಷರ ಗಾತ್ರ

ನೂತನ ರಾಷ್ಟ್ರಪತಿಯನ್ನು ಚುನಾಯಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಹುದ್ದೆಯನ್ನು ಒಂದು ಆಲಂಕಾರಿಕ ಹುದ್ದೆಯನ್ನಾಗಿ ನೋಡಲಾಗುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ‘ರಾಷ್ಟ್ರಪತಿ ಎಂದರೆ ಸರ್ಕಾರದ ಮುಖ್ಯಸ್ಥರು, ಆದರೆ ಕಾರ್ಯಾಂಗದ ಮುಖ್ಯಸ್ಥರಲ್ಲ. ಅವರು ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ, ಆದರೆ ರಾಷ್ಟ್ರವನ್ನು ಆಳುವುದಿಲ್ಲ’ ಎಂದು ರಾಷ್ಟ್ರಪತಿ ಹುದ್ದೆಯನ್ನು ವ್ಯಾಖ್ಯಾನಿಸಿದ್ದರು.

ರಾಷ್ಟ್ರಪತಿ ಹುದ್ದೆಗೆ ಚುನಾಯಿತರಾದವರು‘I will preserve, protect and defend the constitution and law of the country’ ಎಂದು ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ. ಅಂದರೆ ಸಂವಿಧಾನ ಮತ್ತು ಕಾನೂನನ್ನು ರಕ್ಷಿಸುವ ಜವಾಬ್ದಾರಿ ರಾಷ್ಟ್ರಪತಿಗಳದ್ದು. ಪ್ರಧಾನಿ ಸೇರಿದಂತೆ ಸಂಪುಟದ ಸಚಿವರು, ಸಂವಿಧಾನ ಮತ್ತು ಕಾನೂನಿಗೆ ಬದ್ಧವಾಗಿ ನಡೆದುಕೊಳ್ಳುವ ಪ್ರಮಾಣ ಮಾತ್ರ ಮಾಡುತ್ತಾರೆ. ಹಾಗಾಗಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದಾಗ, ದೇಶದ ಭದ್ರತೆಗೆ ಸವಾಲು ಎದುರಾದಾಗ, ಆಂತರಿಕ ಪ್ರಕ್ಷುಬ್ಧತೆಯನ್ನು ನಿರ್ವಹಿಸಲು ಸರ್ಕಾರ ಸೋತಾಗ, ರಾಷ್ಟ್ರಪತಿ ತಾತ್ಕಾಲಿಕವಾಗಿ ದೇಶದ ಸಂರಕ್ಷಕರಾಗಿ ಅಧಿಕಾರವನ್ನು ನಿರ್ವಹಿಸಬೇಕಾಗುತ್ತದೆ.

ಚುನಾಯಿತ ಸರ್ಕಾರದ ಸಲಹೆಯನ್ನು ರಾಷ್ಟ್ರಪತಿ ಪುರಸ್ಕರಿಸಬೇಕು ಎಂಬುದು ದಿಟವಾದರೂ ಸರ್ಕಾರದ ನಿರ್ಣಯಗಳ ಕುರಿತು ವಿವರಣೆ ಕೇಳುವ ಅಧಿಕಾರವನ್ನು ರಾಷ್ಟ್ರಪತಿ ಹೊಂದಿರುತ್ತಾರೆ. ಹಾಗಾಗಿ ಅದು ಕೇವಲ ಆಲಂಕಾರಿಕ ಹುದ್ದೆಯಲ್ಲ.

ಆದ್ದರಿಂದಲೇ ರಾಷ್ಟ್ರಪತಿ ಸ್ಥಾನದಲ್ಲಿ ತಮಗೆ ನಿಷ್ಠರಾದವರನ್ನು ಕೂರಿಸುವ ಪ್ರಯತ್ನವನ್ನು ಸರ್ಕಾರಗಳು ಮಾಡಿವೆ. ಪ್ರಧಾನಿಗೆ ಅಂಕುಶ ಹಾಕಲು ರಾಷ್ಟ್ರಪತಿ ಹುದ್ದೆಯನ್ನು ಬಳಸಿಕೊಂಡ ನಿದರ್ಶನಗಳಿವೆ. ರಾಷ್ಟ್ರಪತಿ ಭವನದಲ್ಲಿ ಕೂತು ಆ ಹುದ್ದೆಯ ಘನತೆ ಹೆಚ್ಚಿಸಿದವರು ಕೆಲವರಾದರೆ, ಸರ್ಕಾರದ ಕೈಗೊಂಬೆಯಾಗಿ, ‘ರಬ್ಬರ್ ಸ್ಟ್ಯಾಂಪ್’ಎನಿಸಿಕೊಂಡ ರಾಷ್ಟ್ರಪತಿಗಳನ್ನೂ ಭಾರತ ಕಂಡಿದೆ.

ಮೌಂಟ್ ಬ್ಯಾಟನ್ ಅವರ ಬಳಿಕ ಗವರ್ನರ್ ಜನರಲ್ ಆಗಿದ್ದ ರಾಜಗೋಪಾಲಾಚಾರಿ ಅವರು ಭಾರತದ ಮೊದಲ ರಾಷ್ಟ್ರಪತಿಯಾಗಬೇಕು ಎಂಬ ಬಯಕೆ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಲ್ಲಿತ್ತು. ಆದರೆ ನೆಹರೂ ಅವರ ವೇಗಕ್ಕೆ ತಡೆಯೊಡ್ಡಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಣವು ಡಾ.ರಾಜೇಂದ್ರ ಪ್ರಸಾದ್ ಅವರನ್ನು ಆ ಹುದ್ದೆಗೆ ಬೆಂಬಲಿಸಿತು.

ಮೊದಲ ಪ್ರಧಾನಿ ಮತ್ತು ಮೊದಲ ರಾಷ್ಟ್ರಪತಿ ನಡುವೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇತ್ತು. ‘ಹಿಂದೂ ಕೋಡ್’ ಮಸೂದೆಯು ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಜಾಹೀರುಗೊಳಿಸಿತ್ತು. ಆ ಬಗ್ಗೆ ರಾಜೇಂದ್ರ ಪ್ರಸಾದ್ ‘ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾದರೂ, ಅಂಕಿತ ಹಾಕುವ ಮೊದಲು ಅದರ ಸಾಧಕ ಬಾಧಕಗಳನ್ನು ಪರಿಶೀಲಿಸುವ ಮತ್ತು ಅಭಿಪ್ರಾಯವನ್ನು ಸಂಸತ್ತಿನ ಎದಿರು ಮಂಡಿಸುವ ಹಕ್ಕು ರಾಷ್ಟ್ರಪತಿಗೆ ಇದೆ’ ಎಂದು ಪ್ರಧಾನಿಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರಿಸಿದ್ದ ನೆಹರೂ ‘ನಿಮ್ಮ ಅಭಿಪ್ರಾಯವು ರಾಷ್ಟ್ರಪತಿ ಹಾಗೂ ಸರ್ಕಾರದ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ’ ಎಂದಿದ್ದರು. ನಂತರ ರಾಷ್ಟ್ರಪತಿ ಮತ್ತು ಪ್ರಧಾನಿಯ ನಡುವೆ ಹಲವು ಪತ್ರಗಳ ವಿನಿಮಯವಾಗಿತ್ತು. ಇಬ್ಬರೂ ತಮ್ಮ ವಾದಕ್ಕೆ ಪೂರಕವಾಗಿ ಬ್ರಿಟಿಷ್ ಸಂಸತ್ತಿನ ಕಾರ್ಯವಿಧಾನವನ್ನು ಉಲ್ಲೇಖಿಸಿದ್ದರು. ಈ ಮೇಧಾವಿ ನಾಯಕರ ನಡುವಿನ ಅಭಿಪ್ರಾಯ ವಿನಿಮಯ ರಾಷ್ಟ್ರಪತಿ ಹುದ್ದೆಯ ಬಾಧ್ಯತೆ ಮತ್ತು ಮಿತಿಗಳನ್ನು ಸ್ಪಷ್ಟಗೊಳಿಸಿತು.

1969ರಲ್ಲಿ ರಾಷ್ಟ್ರಪತಿ ಜಾಕೀರ್ ಹುಸೇನ್ ಅವರ ನಿಧನದ ನಂತರ ನಡೆದ ರಾಷ್ಟ್ರಪತಿ ಚುನಾವಣೆಯು ಮೊದಲ ಬಾರಿಗೆ ಪ್ರತಿಷ್ಠೆಯ ಕಣವಾಯಿತು. ಇಂದಿರಾ ಗಾಂಧಿ ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸಿದ್ದ ಹಿರಿಯ ನಾಯಕರ ‘ಸಿಂಡಿಕೇಟ್’ ಸೋಲೊಪ್ಪಿಕೊಳ್ಳಬೇಕಾಯಿತು. ಆ ನಂತರ ರಾಷ್ಟ್ರಪತಿಯಾದ ಫಕ್ರುದ್ದೀನ್ ಅಲಿ ಅಹ್ಮದ್‌ ಅವರು ತುರ್ತುಪರಿಸ್ಥಿತಿ ಹೇರುವಆದೇಶಕ್ಕೆ ಮಧ್ಯರಾತ್ರಿ ಸಹಿ ಮಾಡಿ ವ್ಯಂಗ್ಯಚಿತ್ರಗಳಿಗೆ ವಸ್ತುವಾದರು. ಅಲ್ಲಿಗೆ ರಾಷ್ಟ್ರಪತಿ ಹುದ್ದೆಯ ಘನತೆ ‘ರಬ್ಬರ್ ಸ್ಟ್ಯಾಂಪ್’ ಮಟ್ಟಕ್ಕಿಳಿದು ಕುಬ್ಜವಾಯಿತು.

ಬಳಿಕ ರಾಷ್ಟ್ರಪತಿಗಳನ್ನು ವಿವಿಧ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಕೆಲಸಕ್ಕಷ್ಟೇ ಬಳಸಿಕೊಳ್ಳಲಾಯಿತು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ, ಸಂಜೀವ ರೆಡ್ಡಿಯವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ಒಂಬತ್ತು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ರಾಜೀವ್ ಗಾಂಧಿ ಪ್ರಧಾನಿಯಾಗುವ ವೇಳೆಗೆರಾಷ್ಟ್ರಪತಿಯಾಗಿ ಜೇಲ್ ಸಿಂಗ್ ಇದ್ದರು. ರಾಜೀವ್ ಮತ್ತು ಜೇಲ್ ಸಿಂಗರ ‘ಜಗಳ್ಬಂದಿ’ ರಾಷ್ಟ್ರಪತಿ ಭವನದ ಇತಿಹಾಸದಲ್ಲಿ ಪ್ರಮುಖ ಅಧ್ಯಾಯವಾಯಿತು.

ಕೆ.ಆರ್. ನಾರಾಯಣನ್ ಅವರು ರಾಷ್ಟ್ರಪತಿ ಭವನ ಪ್ರವೇಶಿಸಿದಾಗ ರಾಷ್ಟ್ರಪತಿ ಭವನ ತನ್ನ ಪ್ರಾಮುಖ್ಯವನ್ನು ಮರಳಿ ಪಡೆಯಿತು. ಅವರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳಲು ಹಿಂಜರಿಯುತ್ತಿರಲಿಲ್ಲ. ಭಾರತಕ್ಕೆ ಭೇಟಿಯಿತ್ತಿದ್ದ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್ ‘ಭಾರತ ಉಪಖಂಡ ಇಂದು ವಿಶ್ವದ ಅಪಾಯಕಾರಿ ಸ್ಥಳವಾಗಿದೆ ಮತ್ತು ಪರಮಾಣು ಯುದ್ಧಕ್ಕೆ ಕಾಶ್ಮೀರ ಕಾರಣವಾಗಬಹುದು’ ಎಂಬರ್ಥದ ಮಾತನ್ನು ಆಡಿದ್ದರು. ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಔತಣಕೂಟದ ಭಾಷಣದಲ್ಲಿ ಕ್ಲಿಂಟನ್ ಅವರ ಅಭಿಪ್ರಾಯವನ್ನು ನಾರಾಯಣನ್ ಖಂಡಿಸಿದ್ದರು. ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಹವಣಿಸುತ್ತಿದ್ದ ವಾಜಪೇಯಿ ನೇತೃತ್ವದ ಸರ್ಕಾರಕ್ಕೆ ರಾಷ್ಟ್ರಪತಿಗಳ ಮಾತು ಇರಿಸುಮುರಿಸು ತಂದಿತ್ತು. ರಾಷ್ಟ್ರಪತಿಗಳ ಭಾಷಣವನ್ನು ಪ್ರಧಾನಮಂತ್ರಿ ಕಾರ್ಯಾಲಯದ ಗಮನಕ್ಕೆ ತರಲಿಲ್ಲವೇಕೆ ಎಂದು ವಿದೇಶಾಂಗ ಇಲಾಖೆ ಆಕ್ಷೇಪಿಸಿತು. ‘ಅವರ ಅಧಿಕಾರದ ವ್ಯಾಪ್ತಿಯಲ್ಲೇ ರಾಷ್ಟ್ರಪತಿ ಮಾತನಾಡಿದ್ದಾರೆ’ ಎಂದು ರಾಷ್ಟ್ರಪತಿ ಭವನ ಸಮರ್ಥಿಸಿಕೊಂಡಿತು.

ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿ ಜನರೊಂದಿಗೆ ಹೆಚ್ಚು ಬೆರೆತರು. ಪ್ರತಿಭಾ ಪಾಟೀಲರು ರಾಷ್ಟ್ರಪತಿಯಾದಾಗ ಮತ್ತೊಮ್ಮೆ ‘ರಬ್ಬರ್ ಸ್ಟ್ಯಾಂಪ್’ ಮೂದಲಿಕೆ ಕೇಳಿಬಂತು. ಪ್ರಣವ್ ಮುಖರ್ಜಿ ಆ ಸ್ಥಾನಕ್ಕೆ ಬಂದಾಗ ರಾಷ್ಟ್ರಪತಿ ಭವನವು ವರ್ಚಸ್ಸನ್ನು ಮರಳಿ ಪಡೆಯಿತು. ಮುಖರ್ಜಿ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳಿದರು. ಬಹುತ್ವದ ಕುರಿತು ಮಾತನಾಡಿದರು. ಅಸಹಿಷ್ಣುತೆಯ ವಿರುದ್ಧ ಧ್ವನಿ ಎತ್ತಿದರು. ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಹಿಂದೇಟು ಹಾಕಲಿಲ್ಲ. ನಾಗಪುರದಲ್ಲಿ ಹೆಡಗೇವಾರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ, ಗೋಳ್ವಲ್ಕರ್ ಸಮಾಧಿಗೆ ನಮಿಸಿ ರಾಷ್ಟ್ರ, ರಾಷ್ಟ್ರೀಯತೆ ಮತ್ತು ದೇಶಪ್ರೇಮದ ಕುರಿತು ಮುಖರ್ಜಿ ಭಾಷಣ ಮಾಡಿದರು. ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಈ ಐದು ವರ್ಷಗಳಲ್ಲಿ ರಾಷ್ಟ್ರಪತಿ ಭವನದ ಘನತೆ ಮುಕ್ಕಾಗದಂತೆ ನೋಡಿಕೊಂಡರಾದರೂ, ರಾಷ್ಟ್ರಪತಿ ಭವನದ ಮೌನ ಎದ್ದುಕಂಡಿತು.

ಇದೀಗ ಚುನಾವಣಾ ಕಣದಲ್ಲಿರುವ ದ್ರೌಪದಿ ಮುರ್ಮು ಅವರು ಬುಡಕಟ್ಟು ಜನಾಂಗದ ಹಿನ್ನೆಲೆಯಿಂದ ಬಂದವರು. ಅವರನ್ನು ಕಣಕ್ಕೆ ಇಳಿಸಿರುವ ಎನ್.ಡಿ.ಎಗೆ ತಾನು ಸ್ಥಾನಮಾನ ವಂಚಿತ ಸಮುದಾಯಗಳ ಪರ, ಮಹಿಳೆಯರ ಪರ ಎಂದು ತೋರಿಸಿಕೊಳ್ಳುವ ಬಯಕೆ ಇರಬಹುದು. ಪ್ರತಿಪಕ್ಷಗಳು ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿಸಿರುವುದರ ಹಿಂದೆ ಅವರು ಪ್ರಸ್ತುತ ಸರ್ಕಾರದ ಕಾರ್ಯವೈಖರಿಯನ್ನು ದೊಡ್ಡ ಧ್ವನಿಯಲ್ಲಿ ಟೀಕಿಸುತ್ತಿರುವವರು, ಊಹೆಗಳನ್ನು ಮೀರಿ ಅವರು ಗೆದ್ದರೆ, ಕೇಂದ್ರ ಸರ್ಕಾರಕ್ಕೆ ಅಂಕುಶ ಹಾಕಬಹುದು ಎಂಬ ಲೆಕ್ಕಾಚಾರ ಇರಬಹುದು. ಅರ್ಹತೆಯ ದೃಷ್ಟಿಯಿಂದ ಇಬ್ಬರೂ ಆಡಳಿತಾತ್ಮಕ ಅನುಭವ ಉಳ್ಳವರು, ಸಂವಿಧಾನ ಮತ್ತು ಕಾನೂನು ತಿಳಿದವರು.

ಆದರೆ ಅದಷ್ಟೇ ಮುಖ್ಯವೇ? ರಾಷ್ಟ್ರಪತಿ ಎಂದರೆ ಬಿರುದು ಬಾವಲಿ ಅಲ್ಲ. ಅದೊಂದು ಸಾಂವಿಧಾನಿಕ ಹುದ್ದೆ. ಅದಕ್ಕೆ ಅದರದ್ದೇ ಆದ ಕರ್ತವ್ಯಗಳನ್ನು ಗುರುತಿಸಲಾಗಿದೆ. ವ್ಯಕ್ತಿಗತ ಹಿನ್ನೆಲೆ, ಸೈದ್ಧಾಂತಿಕ ಒಲವು, ಸಮುದಾಯದ ಪ್ರತಿನಿಧಿತ್ವ ಏನೇ ಇರಲಿ, ರಾಷ್ಟ್ರಪತಿ ಹುದ್ದೆಯಲ್ಲಿ ಕುಳಿತವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ದೇಶದ ಆಗುಹೋಗುಗಳನ್ನು ತೆರೆದ ಕಣ್ಣಿನಿಂದ ಗಮನಿಸುವ, ಸಮಕಾಲೀನ ವಿದ್ಯಮಾನಗಳಿಗೆ ಕಿವಿಗೊಡುವ, ಸರ್ಕಾರ ಎಡವಿದಾಗ ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ. ಅಷ್ಟಕ್ಕೂ ರಾಷ್ಟ್ರಪತಿ ಭವನ ಎಂದರೆ 340 ಕೊಠಡಿಗಳ ಧ್ಯಾನ ಕೇಂದ್ರವಲ್ಲ, ಕಾನೂನು ಮತ್ತು ಸಂವಿಧಾನಕ್ಕೆ ಸರ್ಕಾರ ಬದ್ಧವಾಗಿರುವಂತೆ ನೋಡಿಕೊಳ್ಳಬೇಕಾದ ಜಾಗೃತ ಸ್ಥಳ. ಕಣದಲ್ಲಿರುವ ಈ ಇಬ್ಬರಲ್ಲಿ ಯಾರು ಗೆದ್ದರೂ, ರಾಷ್ಟ್ರಪತಿ ಭವನವು ಧ್ವನಿ ಉಳಿಸಿಕೊಳ್ಳಬೇಕು. ಅದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT