ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸಂಭ್ರಮಕ್ಕೆ ಟ್ರಂಪ್‌ ‘ರಂಗು’

ಅಮೆರಿಕದ ಸ್ವಾತಂತ್ರ್ಯೋತ್ಸವದಂದು ಅಚ್ಚರಿ ಮೂಡಿಸಿತು ಅಧ್ಯಕ್ಷರ ಅನೂಹ್ಯ ನಡೆ– ನುಡಿ
Last Updated 8 ಜುಲೈ 2019, 19:46 IST
ಅಕ್ಷರ ಗಾತ್ರ

ಅಮೆರಿಕ ಜುಲೈ 4ರಂದು ತನ್ನ ಸ್ವಾತಂತ್ರ್ಯೋತ್ಸವವನ್ನುಎಂದಿಗಿಂತ ಭಿನ್ನವಾಗಿ ಆಚರಿಸಿಕೊಂಡಿತು. ಅತ್ತ ಇಡೀ ಜಗತ್ತು 30 ವರ್ಷಗಳ ಹಿಂದೆ ಚೀನಾದ ಯುದ್ಧ ವಾಹನಗಳು ಟಿಯನಾನ್ಮೆನ್ ಚೌಕದಲ್ಲಿ ಪ್ರತಿಭಟನಕಾರರ ಮೇಲೆ ಮುಗಿಬಿದ್ದ ಸಂಗತಿಯನ್ನು, ಕಮ್ಯುನಿಸ್ಟ್‌ ರಾಷ್ಟ್ರದ ಕರಾಳ ಇತಿಹಾಸವನ್ನು ನೆನಪಿಸಿಕೊಳ್ಳುತ್ತಿರುವಾಗಲೇ, 243 ವರ್ಷಗಳ ಹಿಂದೆ ಸ್ವಾತಂತ್ರ್ಯ ಗಳಿಸಿಕೊಂಡ ಅಮೆರಿಕದಲ್ಲಿ ಹೊಸದೊಂದು ಚರ್ಚೆ ಆರಂಭವಾಗಿತ್ತು. ಜುಲೈ 4ರ ಸ್ವಾತಂತ್ರ್ಯ ದಿನದಂದು ಸೇನಾ ಕವಾಯತು ಮತ್ತು ಶಕ್ತಿ ಪ್ರದರ್ಶನ ನಡೆಯಲಿದೆ ಎಂದು ಡೊನಾಲ್ಡ್‌ ಟ್ರಂಪ್ ನೇತೃತ್ವದ ಆಡಳಿತ ಘೋಷಿಸಿದ್ದು, ಪರ, ವಿರೋಧದ ಚರ್ಚೆಗೆ ನಾಂದಿ ಹಾಡಿತ್ತು. ‘ಸ್ವಾತಂತ್ರ್ಯ ದಿನವನ್ನು ರಾಜಕೀಯಗೊಳಿಸಲು ಆಡಳಿತ ನೋಡುತ್ತಿದೆ. ಜನರನ್ನು ವಿಭಜಿಸುವ ಮಾತನ್ನು ಸ್ವಾತಂತ್ರ್ಯ ದಿನದ ನೆಪದಲ್ಲಿ ಟ್ರಂಪ್ ಆಡುತ್ತಾರೆ’ ಎಂದು ಡೆಮಾಕ್ರಟಿಕ್ ಪಕ್ಷ ಟೀಕಿಸಿತು. ಶಕ್ತಿ ಪ್ರದರ್ಶನಕ್ಕೆ ಅಪಾರ ವೆಚ್ಚ ತಗುಲಲಿದೆ, ಸೇನಾ ಯುದ್ಧ ವಾಹನಗಳು ರಸ್ತೆಗೆ ಇಳಿಯುವುದರಿಂದ ರಸ್ತೆಗಳು ಹಾನಿಗೊಳಗಾಗಬಹುದು ಎಂಬುದು ಕೆಲವರ ವಿರೋಧಕ್ಕೆ ಕಾರಣವಾಗಿತ್ತು.

ಆದರೆ, ಈ ಆರೋಪಗಳಿಗೆ ಆಸ್ಪದವಿರದಂತೆ ಶ್ವೇತಭವನವು ಆಸ್ಥೆಯಿಂದ ‘ಸಲ್ಯೂಟ್‌ ಟು ಅಮೆರಿಕ’ ಸಮಾರಂಭವನ್ನು ಆಯೋಜಿಸಿತು. ಸಮರ ಕೌಶಲ ಪ್ರದರ್ಶನಕ್ಕೆ ವಾಯುಪಡೆಯನ್ನು ಬಳಸಲಾಯಿತು. ಎಫ್‌- 18, ಎಫ್‌- 22 ಯುದ್ಧ ವಿಮಾನ ಮತ್ತು ಬಿ-2 ಬಾಂಬರ್‌ಗಳು ಐತಿಹಾಸಿಕ ಲಿಂಕನ್ ಸ್ಮಾರಕದ ಮೇಲೆ ಬಳುಕುತ್ತಾ ಹಾರಿದವು. ಸೇನಾ ಯುದ್ಧ ವಾಹನಗಳ ಪ್ರದರ್ಶನದ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಜನ ತುಂತುರು ಮಳೆಯ ನಡುವೆ, ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿದರು. ಅಂದು ಟ್ರಂಪ್ ನಡೆ, ನುಡಿ ಎಲ್ಲರ ಊಹೆಯನ್ನೂ ತಲೆಕೆಳಗು ಮಾಡಿತು.

ಈ ಬಾರಿಯ ಸ್ವಾತಂತ್ರ್ಯ ದಿನದ ಆಚರಣೆ ಎರಡು ಕಾರಣಗಳಿಂದ ವಿಶೇಷ ಎನಿಸಿತು. ಒಂದು, ಸೇನಾ ಶಕ್ತಿ ಪ್ರದರ್ಶನವು ಸ್ವಾತಂತ್ರ್ಯೋತ್ಸವದ ಭಾಗವಾಯಿತು. ಎರಡು, ಅಮೆರಿಕದ ಅಧ್ಯಕ್ಷ ಟ್ರಂಪ್ ರಾಷ್ಟ್ರವನ್ನು ಉದ್ದೇಶಿಸಿ ಮಹತ್ವದ ಭಾಷಣ ಮಾಡಿದರು. ಹೀಗೆ ಅಧ್ಯಕ್ಷರು ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ, ವೈಭವದ ಸಮಾರಂಭದಲ್ಲಿ ಭಾಗಿಯಾಗುವ ಪರಿಪಾಟ ಅಮೆರಿಕದಲ್ಲಿ ಇರಲಿಲ್ಲ. ವರ್ಷದ ಆರಂಭದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಅಧ್ಯಕ್ಷರು ಮಾಡುವ ‘ಸ್ಟೇಟ್ ಆಫ್ ಯೂನಿಯನ್’ ಭಾಷಣವೇ ಹೆಚ್ಚಿನ ಮಹತ್ವದ್ದು. ಸ್ವಾತಂತ್ರ್ಯ ದಿನದಂದು ಸ್ವಾತಂತ್ರ್ಯದ ಗೊತ್ತುವಳಿಯನ್ನು ಅನುಮೋದಿಸಿದ, ಅಮೆರಿಕದ ಸಂವಿಧಾನವನ್ನು ಅಂಗೀಕರಿಸಿದ ಫಿಲಡೆಲ್ಫಿಯ ಸ್ವಾತಂತ್ರ್ಯ ಭವನದ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಭಾಗಿಯಾಗುತ್ತಿದ್ದರಾದರೂ ಅದಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತಿರಲಿಲ್ಲ.

ಮೊದಮೊದಲು ಸ್ವಾತಂತ್ರ್ಯದಿನದ ಆಚರಣೆ, ಸೇನಾ ಮುಖ್ಯಸ್ಥರೊಂದಿಗೆ ಅಧ್ಯಕ್ಷರು ಮದ್ಯ ಸೇವಿಸುತ್ತಾ ಸಂತೋಷ ಕೂಟದಲ್ಲಿ ಭಾಗಿಯಾಗುವುದಕ್ಕೆ ಸೀಮಿತವಾಗಿತ್ತು. ನಂತರ ಲಘು ಸಂಗೀತ, ವಿದ್ಯಾರ್ಥಿಗಳ ಪಥ ಸಂಚಲನವು ಆಚರಣೆಯ ಭಾಗವಾಯಿತು. ಪ್ರತೀ ನಗರದ ವಿಶಾಲ ಮೈದಾನ ಅಥವಾ ನದಿ ತೀರದಲ್ಲಿ ಆ ಊರಿನ ಜನರೆಲ್ಲಾ ಸೇರಿ ಸಂಜೆಯ ವೇಳೆ ಸಾಮೂಹಿಕವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರೆ ಆಚರಣೆ ಮುಗಿಯುತ್ತಿತ್ತು. ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ಜುಲೈ 4, ಇತರ ದಿನಗಳಂತೆ ಕರ್ತವ್ಯದ ದಿನವಾಗಿತ್ತು. ನಂತರ ಆ ದಿನದಂದು ವೇತನರಹಿತ ರಜೆ ಘೋಷಿಸಲಾಯಿತು. 1940ರ ದಶಕದಲ್ಲಿ ಅಮೆರಿಕದ ಕಾಂಗ್ರೆಸ್‌, ನಿಯಮಕ್ಕೆ ತಿದ್ದುಪಡಿ ತಂದು ಜುಲೈ 4ನ್ನು ವೇತನಸಹಿತ ರಜಾ ದಿನವಾಗಿ ಪರಿವರ್ತಿಸಿತು.

ಕೇವಲ ವಿಶೇಷ ಸಂದರ್ಭಗಳಲ್ಲಷ್ಟೇ ವೈಭವದ ಕಾರ್ಯಕ್ರಮ ನಡೆಯುತ್ತಿತ್ತು. ಲಿಂಕನ್ ಹತ್ಯೆಯ ಬಳಿಕ ಶೋಕದಲ್ಲಿ ಮುಳುಗಿದ್ದ ರಾಷ್ಟ್ರದ ಗಮನವನ್ನು ಬೇರೆಡೆ ಸೆಳೆಯಲು ಆಂಡ್ರಿವ್ ಜಾನ್ಸನ್ ಸ್ವಾತಂತ್ರ್ಯ ದಿನವನ್ನು ಬಳಸಿಕೊಂಡಿದ್ದರು. ರಾಜಧಾನಿಯಲ್ಲಿ ಸೇನಾ ತುಕಡಿಗಳ ಪಥ ಸಂಚಲನ ಆಯೋಜಿಸಿದ್ದರು. 1919 ಮತ್ತು 1946ರಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೆಯ ವಿಶ್ವ ಸಮರದ ವಿಜಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಒಟ್ಟಾಗಿದ್ದರಿಂದ, 25 ಸಾವಿರ ಯೋಧರು ನ್ಯೂಯಾರ್ಕ್ ನಗರದ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದ್ದರು. 1953ರಲ್ಲಿ ಐಸೆನ್ ಹೂವರ್ ಅಂದಿನ ಸೋವಿಯತ್ ಯೂನಿಯನ್‌ಗೆ ಸಂದೇಶ ರವಾನಿಸಲು ಮಿಲಿಟರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಆಗ ಅಮೆರಿಕದ ಸೇನಾ ಯುದ್ಧ ವಾಹನಗಳು ರಸ್ತೆಗಿಳಿದಿದ್ದವು.

1961ರಲ್ಲಿ ಕೆನಡಿ ಇಂತಹುದೇ ಮತ್ತೊಂದು ಶಕ್ತಿ ಪ್ರದರ್ಶನ ಆಯೋಜಿಸಿದ್ದರು. ಅದು ಶೀತಲ ಸಮರದ ಅಂತ್ಯದವರೆಗೂ ಒಂದು ಪದ್ಧತಿಯಂತೆ ನಡೆದುಕೊಂಡು ಬಂತು. ಆದರೆ ಈ ಬಾರಿ ಸೇನಾ ಶಕ್ತಿ ಪ್ರದರ್ಶನ ಮಾಡಬೇಕಾದ ಸಾಂದರ್ಭಿಕ ಅಗತ್ಯವಂತೂ ಅಮೆರಿಕಕ್ಕೆ ಇರಲಿಲ್ಲ. ಆದರೂ ಟ್ರಂಪ್ ಆಡಳಿತ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿದ್ದು ಅಚ್ಚರಿಯೇ!

ಅದೇನೇ ಇರಲಿ, ಟ್ರಂಪ್ ಈ ಕಾರ್ಯಕ್ರಮದ ಮೂಲಕ, ಜನಮಾನಸದಲ್ಲಿ ಬೇರುಬಿಟ್ಟಿರುವ ತಮ್ಮ ಚರ್ಯೆಗೆ ಹೊಸ ರೂಪ ಕೊಟ್ಟರು. ಸೇನಾ ಸಾಮರ್ಥ್ಯ ಪ್ರದರ್ಶನದೊಂದಿಗೆ ತಾವೂ ಭಾಷಣ ಮಾಡಿ ಜನರ ಗಮನ ಸೆಳೆದರು. ಆಕ್ಷೇಪಾರ್ಹ ಮಾತುಗಳಿಗೆ ಅನ್ವರ್ಥದಂತಿದ್ದ ಟ್ರಂಪ್, ಮಾತಿನುದ್ದಕ್ಕೂ ಸಂಯಮ ಕಾಯ್ದುಕೊಂಡರು. ಅಮೆರಿಕದ ಪರಂಪರೆ ಮತ್ತು ಅಗ್ಗಳಿಕೆಯನ್ನು ತನ್ನ ಜನರಿಗೆ ನೆನಪಿಸುವ, ಜಗತ್ತಿಗೆ ತಿಳಿಸುವ ಭಾಷಣ ಅದಾಗಿತ್ತು. ಭಾಷಣದುದ್ದಕ್ಕೂ ಇತಿಹಾಸದ ಮಹತ್ವದ ಘಟನೆಗಳನ್ನು ನೆನಪಿಸುತ್ತಾ ಸ್ವಾತಂತ್ರ್ಯ ಹೋರಾಟ, ಗುಲಾಮಗಿರಿಯ ನಿರ್ಮೂಲನೆ, ನಾಗರಿಕ ಹಕ್ಕು ಚಳವಳಿ, ಮಹಿಳಾ ಸಬಲೀಕರಣದೆಡೆಗೆ ಇಟ್ಟ ಹೆಜ್ಜೆಗಳು... ಹೀಗೆ ಅನೇಕ ಸಂಗತಿಗಳನ್ನು ಮೆಲುಕು ಹಾಕಿದರು. ಸಾಮಾಜಿಕ ರಂಗದಲ್ಲಿ ಮಹತ್ತನ್ನು ಸಾಧಿಸಿದ ಮಾರ್ಟಿನ್ ಲೂಥರ್ ಕಿಂಗ್, ಫ್ರೆಡ್ರಿಕ್ ಡಾಗ್ಲಸ್, ಜಾಕಿ ರಾಬಿನ್ಸನ್, ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಇತ್ತ ಲೆವಿಸ್, ಕ್ಲಾರ್ಕ್, ಥಾಮಸ್ ಎಡಿಸನ್, ಅಲೆಕ್ಸಾಂಡರ್ ಗ್ರಾಹಮ್‌ ಬೆಲ್, ರೈಟ್ ಸಹೋದರರು, ವೈದ್ಯಕೀಯ ಕ್ಷೇತ್ರದ ಸಾಧಕರು, ಸಂಶೋಧಕರು ಹೀಗೆ ಅಮೆರಿಕವನ್ನು ಸಶಕ್ತಗೊಳಿಸಿದ ಅನೇಕರ ಪ್ರಸ್ತಾಪವನ್ನು ಟ್ರಂಪ್ ಮಾಡಿದರು. ಅಧ್ಯಕ್ಷರ ಸಂಯಮದ ಮಾತು ಮತ್ತು ಸೇನಾ ಬಲ ಎರಡೂ ಅಂದು ಪ್ರದರ್ಶನಗೊಂಡವು.

ಕಳೆದ ಅಧ್ಯಕ್ಷೀಯ ಚುನಾವಣೆಯ ವೇಳೆ ‘ಟ್ರಂಪ್ ಅವರನ್ನು ಚುನಾಯಿಸಿದರೆ ಆತ ಸರ್ವಾಧಿಕಾರಿಯಾಗಬಹುದು, ಅಮೆರಿಕದ ರಸ್ತೆಗಳಲ್ಲಿ ಯುದ್ಧ ವಾಹನಗಳು ಚಲಿಸುವ ಪರಿಸ್ಥಿತಿ ಬರಬಹುದು’ ಎಂದು ಟ್ರಂಪ್ ವಿರೋಧಿ ಗುಂಪು ಹೇಳುತ್ತಿತ್ತು. ಆದರೆ ಟ್ರಂಪ್ ಅಮೆರಿಕದ ಸೇನಾ ಶಕ್ತಿ ಪ್ರದರ್ಶನವನ್ನು, ಸ್ವಾತಂತ್ರ್ಯೋತ್ಸವದೊಂದಿಗೆ ಜೋಡಿಸಿ ಇದೀಗ ಜಾಣ್ಮೆ ಮೆರೆದಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಗೆ ವರ್ಷ ಬಾಕಿ ಇರುವಾಗ, ರಾಷ್ಟ್ರಪ್ರೇಮ ಮತ್ತು ಸೇನಾ ಶಕ್ತಿ ಎಂಬ ಎರಡು ಪ್ರಬಲ ವಿಷಯಗಳನ್ನು ಮುನ್ನೆಲೆಗೆ ತಂದಿದ್ದಾರೆ. ‘ಮೇಕ್ ಅಮೆರಿಕ ಗ್ರೇಟ್ ಅಗೇನ್‌’ ಎಂಬ ಘೋಷಣೆಯೊಂದಿಗೆ ಅಧಿಕಾರ ಹಿಡಿದ ಟ್ರಂಪ್, ಈ ಮೂರು ವರ್ಷಗಳಲ್ಲಿ ಅಮೆರಿಕ ಹಿಂದೆಂದಿಗಿಂತ ಬಲಗೊಂಡಿದೆ ಎಂದು ಹೇಳುತ್ತಾ ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ‘ಸಲ್ಯೂಟ್‌ ಟು ಅಮೆರಿಕ’ ಕಾರ್ಯಕ್ರಮ ಜರುಗಿದೆ. ಟ್ರಂಪ್ ಜನಪ್ರಿಯತೆ ಅಮೆರಿಕದಲ್ಲಿ ಕುಸಿಯುತ್ತಿದೆ ಎಂದು ಆಗಾಗ ಹೊರಬೀಳುವ ವರದಿಯ ನಡುವೆ, ಜುಲೈ 4ರ ರಾಷ್ಟ್ರವಂದನೆ ಸಮಾರಂಭ ನಡೆದಿದೆ. ಟ್ರಂಪ್ ಜನಪ್ರಿಯತೆಯ ಶ್ರೇಯಾಂಕ ಬದಲಾದೀತೇ ನೋಡಬೇಕು.

ಒಟ್ಟಿನಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ಅವರ ಐತಿಹಾಸಿಕ ಭಾಷಣ ಸೇರಿದಂತೆ ಅಮೆರಿಕದ ಹಲವು ಮಹತ್ವದ ವಿದ್ಯಮಾನಗಳಿಗೆ ಸಾಕ್ಷಿಯಾದ ಲಿಂಕನ್ ಸ್ಮಾರಕ, ಟ್ರಂಪ್ ಅವಧಿಯ ವಿಶಿಷ್ಟ ಸ್ವಾತಂತ್ರ್ಯದಿನದ ಆಚರಣೆಗೆ ಸಾಕ್ಷಿಯಾಗಿದ್ದು ಇತಿಹಾಸದಲ್ಲಿ ಉಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT