ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದ ಮನೆಗೆ ಬಿಗಿ ಸರಪಳಿ

ವಿಶ್ವವಿದ್ಯಾಲಯಗಳ ಚಟುವಟಿಕೆಗಳಲ್ಲಿ ಸರ್ಕಾರಗಳ ಹಸ್ತಕ್ಷೇಪ ಆತಂಕಕಾರಿ
Last Updated 29 ಜುಲೈ 2019, 20:00 IST
ಅಕ್ಷರ ಗಾತ್ರ

ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ರಾಜ್ಯದ 27 ಖಾಸಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ಸುಗಳಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಿರ್ಬಂಧಿಸುವ ಉದ್ದೇಶದ ಮಸೂದೆಗೆ ಇತ್ತೀಚೆಗೆ ವಿಧಾನಸಭೆಯ ಅನುಮೋದನೆ ಪಡೆದುಕೊಂಡಿದೆ. ಇದರ ಪ್ರಕಾರ, ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ತಲೆಯೆತ್ತುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್ಸಿನಲ್ಲಿ ‘ಯಾವುದೇ ಬಗೆಯ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ’ ಎಂಬ ಮುಚ್ಚಳಿಕೆ ಬರೆದುಕೊಡಬೇಕು.

ಸಾಮಾಜಿಕ ಸಾಮರಸ್ಯ ಕಾಪಾಡುವುದು, ರಾಷ್ಟ್ರೀಯ ಏಕತೆ, ಜಾತ್ಯತೀತತೆ, ದೇಶಭಕ್ತಿ ಬೆಳೆಸುವುದು ವಿಶ್ವವಿದ್ಯಾಲಯಗಳ ಮುಖ್ಯ ಉದ್ದೇಶಗಳಾಗಿರಬೇಕು. ಅಲ್ಲದೆ, ಸರ್ಕಾರದ ಪೂರ್ವಾನುಮತಿ ಇಲ್ಲದೆ ವಿಶ್ವವಿದ್ಯಾಲಯಗಳು ಗೌರವ ಪದವಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ನಾನಾ ನಿರ್ಬಂಧಗಳ ದೊಡ್ಡ ಪಟ್ಟಿಯನ್ನೇ ಒಳಗೊಂಡಿರುವ ಈ ಮಸೂದೆಯು ವಿಶ್ವವಿದ್ಯಾಲಯಗಳಿಗೆ ಹಾಕಿದ ಬೆದರಿಕೆಯಂತಿದೆ. ಪರಿಪಾಲನೆಯಲ್ಲಿ ಲೋಪವಾದಲ್ಲಿ ವಿಶ್ವವಿದ್ಯಾಲಯಗಳ ಮಾನ್ಯತೆಯೂ ರದ್ದಾಗಬಹುದಾಗಿದೆ. ‘ಇವೆಲ್ಲ ಬಿಜೆಪಿಯ ಗುಪ್ತ ಕಾರ್ಯಸೂಚಿಯ ಭಾಗ’ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯು ‘ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕುಲಪತಿ, ಕುಲಸಚಿವ ಹಾಗೂ ಇತರ ಅಧಿಕಾರಿಗಳು ಮಾಧ್ಯಮದವರ ಜೊತೆ ಮಾತನಾಡಬಾರದು’ ಎಂಬ ಸುತ್ತೋಲೆಯನ್ನು ಇತ್ತೀಚೆಗಷ್ಟೇ ಹೊರಡಿಸಿದೆ. ಸ್ವಾಯತ್ತ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳ ಆಡಳಿತ ವ್ಯವಹಾರದಲ್ಲಿ ಸರ್ಕಾರಗಳು ಹೀಗೆ ಮೂಗು ತೂರಿಸುವ ಹುನ್ನಾರಗಳು ಆತಂಕ ಹುಟ್ಟಿಸುತ್ತಿವೆ.

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು), ಜಾಧವಪುರ್ ವಿಶ್ವವಿದ್ಯಾಲಯ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಸೋಷಿಯಲ್ ಸೈನ್ಸಸ್‌ನಂತಹ ವಿಶ್ವವಿದ್ಯಾಲಯಗಳೂ ಇತ್ತೀಚಿನ ದಿನಗಳಲ್ಲಿ ಟೀಕೆಗೊಳಗಾಗಿದ್ದು ಬಹಿರಂಗ ಸತ್ಯ. ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಮೇಲಂತೂ ಹಿಂದುತ್ವವಾದಿ ದಾಳಿಗಳು ಸರ್ವೇ ಸಾಮಾನ್ಯ ಎಂಬಂತಾಗಿವೆ. ಎಎಂಯುಗೆ ದೊರೆತಿರುವ ಅಲ್ಪಸಂಖ್ಯಾತ ಸ್ಥಾನಮಾನವನ್ನು ಮರುಪರಿಶೀಲಿಸುವ ಬಗ್ಗೆ ಚಿಂತಿಸುವುದಾಗಿ ಈ ಹಿಂದೆ ಹೇಳಿ ಸರ್ಕಾರ ವಿವಾದ ಸೃಷ್ಟಿಸಿತ್ತು.

2016ರಲ್ಲಿ ಗುಜರಾತ್ ಸರ್ಕಾರ, ಪಿಎಚ್‌.ಡಿ ವಿದ್ಯಾರ್ಥಿಗಳು ತಮ್ಮ ಡಾಕ್ಟರೇಟ್ ಪ್ರಬಂಧಗಳಿಗಾಗಿ ಕಡ್ಡಾಯವಾಗಿ ಸಂಶೋಧನೆ ಮಾಡಬೇಕಾದ 82 ವಿಷಯಗಳ ಪಟ್ಟಿಯನ್ನೇ ಸಿದ್ಧಪಡಿಸಿತ್ತು. ರಾಜ್ಯ ವಿಶ್ವ ವಿದ್ಯಾಲಯಗಳು ಸರ್ಕಾರ ಅನುಮೋದಿಸಿದ ಪಟ್ಟಿಯಿಂದ ಕನಿಷ್ಠ ಐದು ವಿಷಯಗಳನ್ನು ಆಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿತ್ತು. ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣವನ್ನು ಬಿಗಿ ಮಾಡುವ, ಸ್ವಾಯತ್ತತೆಯನ್ನು ನೊಣೆದುಹಾಕುವ ವ್ಯೂಹಗಳನ್ನು ಸರ್ಕಾರಗಳು ಹೀಗೆ ಕಾಲಕಾಲಕ್ಕೆ ರಚಿಸುತ್ತಲೇ ಬಂದಿವೆ.

ಒಂದು ರಾಜ್ಯವು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಂಕೆಯಲ್ಲಿಡುವ ಉದ್ದೇಶದಿಂದ ಕಾನೂನು ತರಲು ಚಿಂತಿಸುತ್ತದೆ ಎಂದರೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳು ಅದಕ್ಕೆ ಲೆಕ್ಕಕ್ಕಿಲ್ಲ ಎಂದೇ ಅರ್ಥ. ‘ಜ್ಞಾನ ಕೇಂದ್ರಗಳಾದ ವಿಶ್ವವಿದ್ಯಾಲಯಗಳು, ಅವುಗಳ ಹೆಸರೇ ಸೂಚಿಸುವಂತೆ ವೈಶ್ವಿಕವಾಗಬೇಕು–ಭೌಗೋಳಿಕ ವಿಸ್ತಾರದಲ್ಲಿ ಮಾತ್ರವಲ್ಲದೆ ಮಾನಸಿಕ ವಿಕಾಸದಲ್ಲಿಯೂ ಸಹ. ವಿಶ್ವವಿದ್ಯಾಲಯವೆಂದರೆ ರಾಷ್ಟ್ರವಿದ್ಯಾಲಯ ಅಲ್ಲ’ ಎಂದು ಎನ್‌ಡಿಟಿವಿಯ ಹಿರಿಯ ಸಂಪಾದಕ ಪ್ರಿಯವರ್ಧನ್ ತಮ್ಮ ಬ್ಲಾಗಿನಲ್ಲಿ ಟೀಕಿಸಿದ್ದಾರೆ.

ಆರೋಗ್ಯಕರ ಪ್ರತಿಭಟನೆ, ಸೈದ್ಧಾಂತಿಕ ಚರ್ಚೆ, ಆಂದೋಲನಗಳು ಪ್ರಜಾಪ್ರಭುತ್ವದ ಜೀವಾಳಗಳಾಗಿವೆ. ಅಷ್ಟಕ್ಕೂ ಆದಿತ್ಯನಾಥ ನೇತೃತ್ವದ ಸರ್ಕಾರ ಸಂಕೇತಿಸುವ ‘ರಾಷ್ಟ್ರದ್ರೋಹ’ದ ವ್ಯಾಖ್ಯಾನವನ್ನು ಈ ಮಸೂದೆ ಮೊದಲು ಸ್ಪಷ್ಟಪಡಿಸಬೇಕು. ಏಕೆಂದರೆ, ಯಾವುದೋ ಒಬ್ಬ ವಿದ್ಯಾರ್ಥಿ ರಚಿಸಿದ ಕವಿತೆಯೋ ಕಥೆಯೋ ದೇಶದ್ರೋಹದ್ದು ಎಂಬ ಆಪಾದನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ವಿಚಾರ ಸಂಕಿರಣ, ಚರ್ಚಾಕೂಟಗಳಲ್ಲಿ ವಿದ್ಯಾರ್ಥಿಗಳು ನಡೆಸುವ ಚರ್ಚೆಗಳನ್ನು ಅಥವಾ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳನ್ನು ರಾಷ್ಟ್ರವಿರೋಧಿ ಎಂದು ತೀರ್ಮಾನಿಸಬಹುದಾದ ಅವಕಾಶ ಇರುವುದರಿಂದ, ಈ ಮಸೂದೆಯು ಸಾರ್ವಜನಿಕ ಚರ್ಚೆಗೆ ಕೂಲಂಕಷವಾಗಿ ಒಳಗಾಗಬೇಕಾದ ಅಗತ್ಯವಿತ್ತು. ‌

ಇಂತಹ ಬೆಳವಣಿಗೆಗಳನ್ನು ಕಂಡಾಗ, 1943ರಲ್ಲಿ ಯುದ್ಧ ವಿರೋಧಿ ಕರಪತ್ರಗಳನ್ನು ವಿತರಿಸಿದ್ದಕ್ಕಾಗಿ ಜರ್ಮನಿ ವಿದ್ಯಾರ್ಥಿ ಸೋಫಿ ಸ್ಕೋಲ್‌ಳನ್ನು ನಾಜಿಗಳು ಗಲ್ಲಿಗೇರಿಸಿದ್ದ ಘಟನೆ ನೆನಪಾಗುತ್ತದೆ. ‘ಭಗವಂತ ಭೂಮಿಯಿಂದ ಗುಳೆ ಹೋಗಬೇಕು ಇಲ್ಲವೇ ಆಗಸದಲ್ಲಿ ಧಾನ್ಯ ಜಮೆಯಾಗಬೇಕು’ ಎಂದು ಹೇಳಿದ್ದ ಜೆಎನ್‌ಯುವಿನ ಪ್ರಖ್ಯಾತ ಬಂಡಾಯ ಕವಿ ರಮಾಶಂಕರ ಯಾದವ್ ‘ವಿದ್ರೋಹಿ’ ಈ ಹೊತ್ತು ನೆನಪಾಗುತ್ತಾರೆ. ಉತ್ತರಪ್ರದೇಶದ ಸುಲ್ತಾನಪುರದ ಈ ವಿಲಕ್ಷಣ ಕವಿ, 1980ರಲ್ಲಿ ಜೆಎನ್‌ಯುವಿನಲ್ಲಿ ಹಿಂದಿ ಸಾಹಿತ್ಯ ಓದಲು ಬರುತ್ತಾರೆ. ವಿದ್ಯಾರ್ಥಿ ಆಂದೋಲನದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ 1983ರಲ್ಲಿ ವಿಶ್ವವಿದ್ಯಾಲಯವು ಅವರನ್ನು ಹೊರಹಾಕುತ್ತದೆ. ಕ್ಯಾಂಪಸ್ಸಿನ ಒಳಗೆ ಬರಬಾರದು ಎಂದು ಜೆಎನ್‌ಯು ಆಡಳಿತ ಮಂಡಳಿಯು ಅವರಿಗೆ ಎಚ್ಚರಿಕೆ ಕೊಡುತ್ತದೆ. ಆದರೂ ಅವರು ಕ್ಯಾಂಪಸ್ ಬಿಡಲಿಲ್ಲ. ಡಿಗ್ರಿಯೂ ಅವರಿಗೆ ಸಿಗಲಿಲ್ಲ.

ಕುಟುಂಬವನ್ನು ತೊರೆದು, ಮೂರು ದಶಕಗಳ ಕಾಲ ಅವರು ಜೆಎನ್‌ಯುವಿನ ಕಾಡುಮೇಡು, ಲೈಬ್ರರಿ, ಕ್ಯಾಂಟೀನು ಹೀಗೆ ಓಡಾಡಿಕೊಂಡೇ ಇದ್ದರು. ‘ಜೆಎನ್‌ಯು ಕ್ಯಾಂಪಸ್ಸೇ ನನ್ನ ಕರ್ಮಭೂಮಿ’ ಎನ್ನುತ್ತಿದ್ದರು. ವಿದ್ಯಾರ್ಥಿಗಳು ಪ್ರೀತಿಯಿಂದ ಹಂಚಿದ್ದನ್ನು ಉಂಡು, ಕೊಟ್ಟದ್ದನ್ನು ಉಟ್ಟು, ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತ, ಜಾತಿವಾದ, ಕೋಮುವಾದ, ಅಸಮಾನತೆಯ ವಿರುದ್ಧ ನಿರಂತರವಾಗಿ ಕ್ರಾಂತಿಕಾರಿ ಕವಿತೆಗಳನ್ನು ವಾಚಿಸುತ್ತಲೇ ಇಹಲೋಕ ತ್ಯಜಿಸಿದರು.

ಕ್ಯಾಂಪಸ್ಸಿನ ಇತಿಹಾಸದ ಭಾಗವಾಗಿ, ಜೆಎನ್‌ಯುವಿನ ಪರಂಪರೆಯಾಗಿ, ಗೋಡೆಗಳ ಪಿಸುದನಿಯಾಗಿ ಉಳಿದುಹೋದ ‘ವಿದ್ರೋಹಿ’ ಅವರನ್ನು ಜೆಎನ್‌ಯುವಿನ ಯಾವ ವಿದ್ಯಾರ್ಥಿಯೂ ಮರೆಯುವುದಿಲ್ಲ. ನೂರಾರು ಎಕರೆಯ ಕ್ಯಾಂಪಸ್ಸಿನ ಮಣ್ಣು, ವಿದ್ರೋಹಿಯವರನ್ನು ಹೊರದೂಡಲಿಲ್ಲ. ಸಿಪಿಐ ಯುವ ಮುಖಂಡ ಕನ್ಹಯ್ಯ ಕುಮಾರ್‌ ಅವರು ಹಿಂದೆ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾಗ ‘ಇನ್ನು ಕ್ಯಾಂಪಸ್ಸಿನಲ್ಲಿ ನಾನು ನಿಶ್ಚಿಂತನಾಗಿ ಇರಬಲ್ಲೆ’ ಎಂದು ಅವರ ಕಿವಿಯಲ್ಲಿ ವಿದ್ರೋಹಿ ಉಸುರಿದ್ದರು. ಇದನ್ನು ಕನ್ಹಯ್ಯಾ ಒಂದು ಸಂದರ್ಭದಲ್ಲಿ ಹಂಚಿಕೊಂಡಿದ್ದರು.

‘ವಿದ್ಯೆಯು ಕೇವಲ ಜ್ಞಾನಾರ್ಜನೆಗಾಗಿ ಸೀಮಿತಗೊಳ್ಳದೆ ಸಮಾಜದ ಕೊಳೆಯನ್ನು ನಿರ್ಮೂಲಗೊಳಿಸಬಲ್ಲ ವಿವೇಚನೆಯನ್ನು, ತರ್ಕಬದ್ಧವಾಗಿ ಯೋಚಿಸಬಲ್ಲ ಬೌದ್ಧಿಕತೆಯನ್ನು, ನ್ಯಾಯಸಮ್ಮತವಲ್ಲದ್ದರ ಬಗ್ಗೆ ಪ್ರಶ್ನಿಸುವುದನ್ನು ಕಲಿಸುತ್ತದೆ. ದೇಶದಿಂದ ನಾವು ಸ್ವಾತಂತ್ರ್ಯ ಕೇಳುತ್ತಿಲ್ಲ, ದೇಶದೊಳಗೆ ನಮಗೆ ಸ್ವಾತಂತ್ರ್ಯ ಬೇಕು’ ಎಂದ ಕನ್ಹಯ್ಯಾ, ಲಾಭವನ್ನು ಕೆಲವರು ಮಾತ್ರ ಉಣ್ಣುವ, ನಷ್ಟದ ಪರಿಣಾಮವನ್ನು ಎಲ್ಲರೂ ಅನುಭವಿಸುವಂತೆ ಮಾಡುವ ವ್ಯವಸ್ಥೆಯನ್ನು ವಿರೋಧಿಸಿದ್ದರು. ಫ್ಯಾಸಿಸಂ ಪ್ರಾಬಲ್ಯದ ಇಂದಿನ ರಾಜಕಾರಣವು ತಾರ್ಕಿಕ ಹಾಗೂ ಬೌದ್ಧಿಕ ಎಚ್ಚರದ ಪ್ರಜ್ಞಾವಂತ ಸಮಾಜವನ್ನು ಒಡೆಯಬೇಕು ಎನ್ನುತ್ತದೆ.

ಪ್ರಜಾಪ್ರಭುತ್ವವಾದಿ ಚರ್ಚೆಗಳನ್ನು ನಡೆಸುವುದು ವಿಶ್ವವಿದ್ಯಾಲಯಗಳ ಕೆಲಸ. ನಡೆಯಲು ಅವಕಾಶ ಮಾಡಿಕೊಡುವುದು ಸರ್ಕಾರಗಳ ಕರ್ತವ್ಯ. ಆದರೆ ಈಗಿನ ಪ್ರಭುತ್ವಗಳು ಪ್ರಶ್ನಿಸುವವರನ್ನು ಇಷ್ಟಪಡುವುದಿಲ್ಲ. ಜ್ಞಾನದ ಬಾಗಿಲುಗಳನ್ನು ಅಧಿಕಾರದ ಉಕ್ಕಿನ ಸರಪಳಿಗಳಿಂದ ಕಟ್ಟಿಹಾಕಿ, ಕೀಲಿಕೈಯನ್ನು ತನ್ನ ಕಿಸೆಯಲ್ಲಿ ಇಟ್ಟುಕೊಳ್ಳುವುದೇ ಸದ್ಯದ ರಾಜಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT