ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ರಾಜಾಡಳಿತ ಇಲ್ಲ!

ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾದ ಹೇಳಿಕೆ ನೀಡುವುದು ಸಲ್ಲದು
Last Updated 11 ಮೇ 2019, 3:58 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಕಾಂಗ್ರೆಸ್ ಇದ್ದಿತಾದರೂ, ನಮ್ಮ ಸಂವಿಧಾನ ಹೇಳುವ ಮೂಲಭೂತ ಮೌಲ್ಯಗಳು ಹಾಗೂ ಪ್ರಜಾತಾಂತ್ರಿಕ ಜೀವನ ಕ್ರಮ ಈ ಪಕ್ಷದ ಹಲವು ಸದಸ್ಯರಿಗೆ ಈಗಲೂ ರುಚಿಸುತ್ತಿಲ್ಲ. ನೆಹರೂ- ಗಾಂಧಿ ಕುಟುಂಬವು ಈ ದೇಶದ ‘ಪ್ರಥಮ ಕುಟುಂಬ’ ಎಂದು ಕಾಂಗ್ರೆಸ್ಸಿಗ ಪಿ.ಸಿ. ಚಾಕೊ ಅವರು ಈಚೆಗೆ ಹೇಳಿರುವುದು ಇದಕ್ಕೆ ಒಂದು ನಿದರ್ಶನ.

70ರ ದಶಕದ ಮಧ್ಯಭಾಗದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ದೇವಕಾಂತ ಬರುವಾ ಅವರು ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಎಂದು ಘೋಷಿಸಿದ್ದರು. ಇದಾದ ನಂತರದ ಸಂದರ್ಭದಲ್ಲಿ ದೇಶದ ಜನ ಘೋರ ಪರಿಸ್ಥಿತಿಯೊಂದನ್ನು ಎದುರಿಸ
ಬೇಕಾಯಿತು. ಇಂತಹ ಭಟ್ಟಂಗಿಗಳ ನಡುವೆ ಇದ್ದ ಇಂದಿರಾ ಗಾಂಧಿ ಅವರು ಫ್ಯಾಸಿಸ್ಟ್‌ ಮನೋಭಾವ ಪ್ರದರ್ಶಿಸಿದರು, ನಮ್ಮ ಪ್ರಜಾತಂತ್ರವನ್ನು ಸರ್ವಾಧಿಕಾರದ ವ್ಯವಸ್ಥೆಯನ್ನಾಗಿ ಪರಿವರ್ತಿಸಿದರು.

ಚಾಕೊ ಹೇಳಿರುವ ಮಾತುಗಳು ನಮ್ಮ ಪ್ರಜಾತಂತ್ರ ಹಾಗೂ ಸಾಂವಿಧಾನಿಕ ಧರ್ಮಕ್ಕೆ ವಿರುದ್ಧವಾಗಿದ್ದರೂ, ನೆಹರೂ- ಗಾಂಧಿ ಕುಟುಂಬವು ಹಲವು ‘ಪ್ರಥಮ’ಗಳನ್ನು ಮುಡಿಗೇರಿಸಿಕೊಂಡಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು! ಇಲ್ಲಿವೆ ಅಂತಹ ಕೆಲವು ‘ಪ್ರಥಮ’ಗಳು:

ಪಕ್ಷದ ಅಧ್ಯಕ್ಷ ಯಾರಾಗಬೇಕು, ಭಾರತದ ಮೊದಲ ಪ್ರಧಾನಿ ಯಾರಾಗಬೇಕು ಎಂದು ಹೆಸರು ಸೂಚಿಸುವಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ರಾಜ್ಯ ಘಟಕಗಳಿಗೆ 1946ರಲ್ಲಿ ಸೂಚಿಸಿದಾಗ, ಒಂದೇ ಒಂದು ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಕೂಡ ಜವಾಹರಲಾಲ್ ನೆಹರೂ ಅವರ ಹೆಸರು ಸೂಚಿಸಲಿಲ್ಲ. ಸರ್ದಾರ್ ಪಟೇಲರು ಪಕ್ಷದ ಅಧ್ಯಕ್ಷರಾಗಲಿ, ಮೊದಲ ಪ್ರಧಾನಿಯಾಗಲಿ ಎಂದು ಒಂದು ಡಜನ್‌ನಷ್ಟು ಪ್ರಾದೇಶಿಕ ಸಮಿತಿಗಳು ಬಯಸಿದ್ದವು. ಮೂರು ಪ್ರಾದೇಶಿಕ ಸಮಿತಿಗಳು ಯಾರ ಹೆಸರನ್ನೂ ಸೂಚಿಸಿರಲಿಲ್ಲ. ಹೀಗಿದ್ದರೂ, ಮಹಾತ್ಮ ಗಾಂಧಿ ಅವರ ಬೆಂಬಲದಿಂದ ಜವಾಹರಲಾಲ್‌ ನೆಹರೂ ಮೊದಲ ಪ್ರಧಾನಿಯಾದರು. ನೆಹರೂ ಅವರು ಮಹಾನ್ ಪ್ರಜಾತಂತ್ರವಾದಿ ಎಂದು ಕಾಂಗ್ರೆಸ್ ಪಕ್ಷ ಹಾಗೂ ಈ ಕುಟುಂಬಕ್ಕೆ ಹತ್ತಿರವಿರುವ ಇತಿಹಾಸಕಾರರು ಬಹಳಷ್ಟು ಬರೆದಿದ್ದಾರೆ. ಆದರೆ ಈ ಸತ್ಯವನ್ನು ಸಾರ್ವಜನಿಕರಿಂದ ಮರೆಮಾಚಿದ್ದಾರೆ. ದೊಡ್ಡ ಹುದ್ದೆಯೊಂದನ್ನು ಒಂದೂ ಮತ ಪಡೆಯದೆ ದಕ್ಕಿಸಿಕೊಂಡ ಅನನ್ಯ ಹೆಗ್ಗಳಿಕೆ ನೆಹರೂ ಅವರಿಗೆ ಇದೆ!

ಭಾರತವು ಅವಮಾನಕಾರಿ ಸೋಲನ್ನು ಅನುಭವಿಸಿದ್ದು ಚೀನಾ ವಿರುದ್ಧದ ಯುದ್ಧದಲ್ಲಿ ಮಾತ್ರ. ಆಗ ಪ್ರಧಾನಿಯಾಗಿದ್ದವರು ನೆಹರೂ. ಸೋಲಿಗೆ ಕಾರಣ ಅಂತರರಾಷ್ಟ್ರೀಯ ಸಂಬಂಧಗಳನ್ನು ಗೊಂದಲಮಯವಾಗಿ ನಿಭಾಯಿಸಿದ್ದು ಮತ್ತು ಚೀನಾದ ನೈಜ ಉದ್ದೇಶವನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥಮಾಡಿಕೊಂಡಿದ್ದು. ನುಸುಳುಕೋರರನ್ನು ಹೊರದಬ್ಬಲು ಸೇನೆಗೆ ಅನುವು ಮಾಡಿಕೊಡುವ ಬದಲು 1948ರಲ್ಲಿ ವಿಶ್ವಸಂಸ್ಥೆಯ ಎದುರು ಕೈಒಡ್ಡಿ, ಕಾಶ್ಮೀರದ ಸಮಸ್ಯೆಯನ್ನು ಅಂತರರಾಷ್ಟ್ರೀಯ ಸಮಸ್ಯೆಯನ್ನಾಗಿಸಿದ್ದು ಕೂಡ ನೆಹರೂ ಅವರೇ.

ದೇಶದಲ್ಲಿ ವಂಶಪಾರಂಪರ್ಯದ ರಾಜಕಾರಣಕ್ಕೆ ನಾಂದಿ ಹಾಡಿದ ಬಗೆಯು ನೆಹರೂ ಅವರ ಇನ್ನೊಂದು ‘ಪ್ರಥಮ’. ತಂತ್ರಗಾರಿಕೆಯಿಂದ ಪಕ್ಷದ ನಾಯಕರನ್ನೇ ನಿಯಂತ್ರಣಕ್ಕೆ ತೆಗೆದುಕೊಂಡು ನೆಹರೂ ಅವರು ತಮ್ಮ ಪುತ್ರಿ ಇಂದಿರಾ ಗಾಂಧಿ ಅವರನ್ನು 1959ರಲ್ಲಿ ಪಕ್ಷದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿಸುವಲ್ಲಿ ಯಶಸ್ವಿಯಾದರು.

ಇಂದಿರಾ ಅವರೂ ಹಲವು ‘ಪ್ರಥಮ’ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಾಲ್ವರು ನ್ಯಾಯಮೂರ್ತಿಗಳ ಸೇವಾ ಹಿರಿತನವನ್ನು ಕಡೆಗಣಿಸಿದ ಹಾಗೂ ‘ಬದ್ಧತೆಯ ನ್ಯಾಯಾಂಗ’ ಬೇಕು– ಬದ್ಧತೆ ಅಂದರೆ, ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಎಂದು ಅರ್ಥ– ಎಂದ ಏಕೈಕ ಪ್ರಧಾನಿ, ಇಂದಿರಾ ಗಾಂಧಿ. ತುರ್ತು ಸ್ಥಿತಿ ಹೇರಿ, ಸರ್ವಾಧಿಕಾರವನ್ನು ತಂದ ಭಾರತದ ಏಕೈಕ ನಾಯಕಿ ಇಂದಿರಾ. ಕಾಂಗ್ರೆಸ್ಸಿನ ಕೆಲವೇ ಸಂಸದರನ್ನು ಇಟ್ಟುಕೊಂಡು ಕಾನೂನು ಮಾಡಬಹುದು ಎಂಬ ಕಾರಣಕ್ಕೆ ಸಂಸತ್ತಿನಲ್ಲಿ ಕೋರಂ ಅವಶ್ಯಕತೆ ಇಲ್ಲವಾಗಿಸಿದ ಮೊದಲ ರಾಷ್ಟ್ರೀಯ ನಾಯಕಿ ಇಂದಿರಾ. ಸಂವಿಧಾನವನ್ನು ಕಾರ್ಯಕಾರಿ ಆದೇಶದ ಮೂಲಕ ತಿದ್ದುಪಡಿ ಮಾಡುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡಿದ ಮೊದಲ ಹಾಗೂ ಏಕೈಕ ಪ್ರಧಾನಿ ಕೂಡ ಇಂದಿರಾ ಅವರೇ.

1978ರಲ್ಲಿ ವಿಮಾನ ಅಪಹರಣ ಮಾಡಿದ್ದವರಿಗೆ ಪಕ್ಷದ ಟಿಕೆಟ್ ನೀಡಿದ ಕಾಂಗ್ರೆಸ್ಸಿನ ಮೊದಲ ನಾಯಕಿ ಇಂದಿರಾ. ಅಧಿಕಾರಕ್ಕೆ ಮರಳಿದ ನಂತರ ಇಂದಿರಾ ಅವರು ಈ ಇಬ್ಬರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದರು, 1981ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ಕೊಡಿಸಿದರು, ಅವರು ಜಯ ಸಾಧಿಸುವಂತೆ ನೋಡಿಕೊಂಡರು. ಆ ಮೂಲಕ, ಅಪಹರಣಕಾರರು ಉತ್ತರಪ್ರದೇಶ ರಾಜ್ಯ ವಿಧಾನಸಭೆಯ ಗೌರವಾನ್ವಿತ ಸದಸ್ಯರಾಗುವಂತೆ ಇಂದಿರಾ ನೋಡಿಕೊಂಡರು. ಅದಾದ ನಂತರ, ಇಂದಿರಾ ಅವರ ಉತ್ತರಾಧಿಕಾರಿಗಳು, ಇಬ್ಬರಲ್ಲಿ ಒಬ್ಬ ಅಪಹರಣಕಾರನಿಗೆ ಲೋಕಸಭಾ ಚುನಾವಣೆಯಲ್ಲಿ ಐದು ಬಾರಿ ಟಿಕೆಟ್ ನೀಡಿದ್ದಾರೆ.

ಈ ಕುಟುಂಬದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಇನ್ನೊಬ್ಬ ವ್ಯಕ್ತಿ ರಾಜೀವ್ ಗಾಂಧಿ. ಅಂತರರಾಷ್ಟ್ರೀಯ ಮಟ್ಟದ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಕಿಕ್‌ಬ್ಯಾಕ್‌ ಪಡೆದ ನೇರ ಆರೋಪಕ್ಕೆ ಗುರಿಯಾದ ಏಕೈಕ ಪ್ರಧಾನಿ ರಾಜೀವ್ ಗಾಂಧಿ. ಪತ್ರಿಕಾ ಸ್ವಾತಂತ್ರ್ಯವನ್ನು ಹೊಸಕಿಹಾಕಲು ಕಾನೂನನ್ನು ತಂದ ಪ್ರಧಾನಿಗಳ ಸಾಲಿನಲ್ಲಿ ಇಂದಿರಾ ಅವರ ನಂತರ ಕಾಣಿಸುವುದು ರಾಜೀವ್ ಹೆಸರು.

ಈ ಕುಟುಂಬದ ಇಬ್ಬರು ವ್ಯಕ್ತಿಗಳು– ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ– ಭಾರತರತ್ನ ಗೌರವವನ್ನು ತಮಗೆ ತಾವೇ ನೀಡಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ. ನಂತರ, ರಾಜೀವ್ ಅವರಿಗೂ ಮರಣೋತ್ತರವಾಗಿ ಭಾರತರತ್ನ ನೀಡಲಾಯಿತು. ಈ ಕುಟುಂಬ ಸಾಧಿಸಿದ ಇನ್ನೊಂದು ಪ್ರಥಮ ಇದೆ. ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳಿಗೆ, ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಮತ್ತು ಸಂಸ್ಥೆಗಳಿಗೆ ಹಾಗೂ ಆಟೋಟಗಳಿಗೆ ಸಂಬಂಧಿಸಿದ ಬಹುತೇಕ ಟ್ರೋಫಿಗಳಿಗೆ ತನ್ನದೇ ಸದಸ್ಯರ ಹೆಸರು ಇರಿಸಿ, ಇತರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕುಟುಂಬ ಇದು ಮಾತ್ರ.

ನಮ್ಮ ದೇಶದ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸಿಕೊಂಡ ಏಕೈಕ ವಿದೇಶಿ ಮಹಿಳೆ ಬಹುಶಃ ಸೋನಿಯಾ ಗಾಂಧಿ ಮಾತ್ರ. ಇದು ಆಗಿದ್ದು ಸೋನಿಯಾ ಅವರು ಇನ್ನೂ ಇಟಲಿಯ ಪ್ರಜೆಯೇ ಆಗಿದ್ದ 1980ರ ಸುಮಾರಿನಲ್ಲಿ. ಆಗ ಯಾರೋ ಒಬ್ಬರು ದೆಹಲಿಯ ಮುಖ್ಯ ಚುನಾವಣಾ ಆಯುಕ್ತರಲ್ಲಿ ದೂರು ಸಲ್ಲಿಸಿದ್ದರು. ಅವರು ಸೋನಿಯಾ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದರು. ಏಕೆಂದರೆ ಸೋನಿಯಾ ಅವರು ಭಾರತದ ಪ್ರಜೆ ಆಗಿರಲಿಲ್ಲ.

ನೆಹರೂ- ಗಾಂಧಿ ಕುಟುಂಬ ಸದಸ್ಯರಾದ ಸೋನಿಯಾ ಮತ್ತು ರಾಹುಲ್‌ ಅವರು ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳುವುದು ಘನತೆಗೆ ತಕ್ಕುದಾದ ಕೆಲಸವಲ್ಲ ಎಂದು ಭಾವಿಸಿದ್ದಾರೆ. ಈ ಇಬ್ಬರು ಗಾಂಧಿಗಳ ಸಂಸದೀಯ ಇತಿಹಾಸವನ್ನು ಅವಲೋಕಿಸಿದರೆ, ಅವರು ಸಂಸದರಾಗಿ ಯಾವ ಪ್ರಶ್ನೆಯನ್ನೂ ಕೇಳಿಲ್ಲ ಎಂಬುದು ಗೊತ್ತಾಗುತ್ತದೆ.

‘ಮೊದಲ ಕುಟುಂಬ’ದ ದಾಖಲೆಗಳು ಹೀಗಿವೆ! ಶ್ರೀಮಾನ್ ಚಾಕೊ ಅವರೇ, ನಮ್ಮ ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾಗಿರುವ ಹೇಳಿಕೆ ನೀಡುವುದನ್ನು ದಯವಿಟ್ಟು ನಿಲ್ಲಿಸಿ. ಭಾರತವೆಂಬುದು ವಿಶ್ವದ ಅತಿದೊಡ್ಡ ಪ್ರಜಾತಂತ್ರ ದೇಶ; ರಾಜಾಡಳಿತದ ದೇಶವಲ್ಲ.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT