ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ. ಸೂರ್ಯ ಪ್ರಕಾಶ್ ಲೇಖನ | ವಿಸ್ತರಣಾವಾದಕ್ಕೆ ಭಾರತದ ಸವಾಲು

ನೆರೆಹೊರೆಯ ದೇಶಗಳನ್ನು ನುಂಗಿಹಾಕಬಹುದು ಎಂದು ಹಿಟ್ಲರ್‌ನ ಜರ್ಮನಿ ಭಾವಿಸಿತ್ತು
Last Updated 14 ಜುಲೈ 2020, 21:17 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಈಚೆಗೆ ಲಡಾಖ್‌ನಿಂದ ಚೀನಾಕ್ಕೆ ನೀಡಿದ ಬಲವಾದ ಸಂದೇಶ ಹಾಗೂ ಚೀನಾದ ಯುದ್ಧದಾಹಿ ನಡೆಯ ಬಗ್ಗೆ ಆಡಿದ ಮಾತುಗಳಿಗೆ ಅವರು ಪಡೆದ ಜಾಗತಿಕ ಬೆಂಬಲವು, ತಂಟೆಕೋರ ನೆರೆರಾಷ್ಟ್ರದ ವಿಚಾರದಲ್ಲಿ ಭಾರತ ತಂದುಕೊಳ್ಳಬೇಕಾಗಿದ್ದ ಬದಲಾವಣೆಯನ್ನು ಗುರುತಿಸುವಂತೆ ಮಾಡಿದೆ.

ಗಾಲ್ವನ್‌ನಲ್ಲಿ ಗಡಿರೇಖೆಯನ್ನು ಬದಲಿಸಲು ಚೀನಾ ಕಳೆದ ತಿಂಗಳು ನಡೆಸಿದ ಯತ್ನವು, ಇಂತಹ ದಾಳಿಗಳ ಸಾಲಿಗೆ ಹೊಸ ಸೇರ್ಪಡೆ ಮಾತ್ರ. ಚೀನಾ ಸೇನೆಯ ಯತ್ನಗಳಿಗೆ ಭಾರತೀಯ ಸೇನೆಯ ವೀರ ಯೋಧರು ಸವಾಲಾಗಿ ನಿಂತಿದ್ದಾರೆ. ಆದರೆ, ಯೋಧರು ತೋರುವ ರೀತಿಯ ಆತ್ಮವಿಶ್ವಾಸದ ನಡವಳಿಕೆಗಳು ಭಾರತದ ರಾಜಕಾರಣಿಗಳಿಂದ ಈ ಹಿಂದೆ ಕಂಡುಬಂದಿರಲಿಲ್ಲ. ಚೀನಾದ ನಡವಳಿಕೆಯು ಜವಾಹರಲಾಲ್‌ ನೆಹರೂ ಅವರು ಪ್ರಧಾನಿಯಾಗಿದ್ದ ಕಾಲದಿಂದಲೂ ಇದೇ ರೀತಿ ಇದೆ. ಚೀನಾ ಜೊತೆಗಿನ ಸ್ನೇಹದ ವಿಚಾರದಲ್ಲಿ ನೆಹರೂ ಅವರು ಅವಾಸ್ತವಿಕ ನಂಬಿಕೆಗಳನ್ನು ಹೊಂದಿದಂತಿತ್ತು. ವಿಚಿತ್ರವೆಂದರೆ, ಚೀನಾ ಜೊತೆಗಿನ ಸಂಬಂಧವು ಕಾಲಕ್ರಮೇಣ ಸುಧಾರಿಸುತ್ತದೆ ಎಂದು ನೆಹರೂ ನಂಬಿದ್ದರು. ಹಾಗಾಗಿಯೇ, ಆ ದೇಶದ ಜೊತೆ ನಂಟು ಬೆಳೆಸಿಕೊಳ್ಳಲು ಅಸಾಮಾನ್ಯ ಕ್ರಮಗಳನ್ನು ಕೈಗೊಂಡರು. ಅದರಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ಸ್ಥಾನದಲ್ಲಿ ಚೀನಾವನ್ನು ಕಾಣುವುದೂ ಒಂದಾಗಿತ್ತು!

ಆದರೆ, ಭಾರತದ ಕ್ರಮಗಳಿಗೆ ಚೀನಾದಿಂದ ಯಾವತ್ತೂ ಸ್ಪಂದನೆ ಸಿಕ್ಕಿಲ್ಲ. ಗಡಿಗೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸಿಕೊಳ್ಳುವ ಒಲವನ್ನು ಅದು ತೋರಿಸಿಲ್ಲ. ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಅಸ್ಪಷ್ಟತೆಯನ್ನು ಬಳಸಿಕೊಂಡು, ಭಾರತದ ಭೂಪ್ರದೇಶವನ್ನು ಕಬಳಿಸಲು ಅವಕಾಶವಾಗುತ್ತದೆ ಎಂಬುದು ಅದರ ಲೆಕ್ಕಾಚಾರ. ಏಳು ದಶಕಗಳಿಂದಲೂ ಅದು ಸಮಸ್ಯೆಯನ್ನು ಹಾಗೇ ಉಳಿಸಿಕೊಂಡಿದೆ.

ಇದಲ್ಲದೆ, ಚೀನಾ ದೇಶವು ಪಾಕಿಸ್ತಾನದ ಜೊತೆ ಸ್ನೇಹ ಸಂಪಾದಿಸಿದೆ. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ, ಆ ದೇಶದ ಅಣ್ವಸ್ತ್ರ ಯೋಜನೆಗೆ ನೆರವು ನೀಡಿದೆ. ಭಾರತದ ವಿರುದ್ಧದ ಛಾಯಾಸಮರಕ್ಕೆ ಪಾಕಿಸ್ತಾನನಡೆಸುತ್ತಿರುವ ಭಯೋತ್ಪಾದಕರ ಕಾರ್ಖಾನೆಗಳ ವಿಚಾರದಲ್ಲಿ ಚೀನಾ ಕುರುಡಾಗಿ ವರ್ತಿಸುತ್ತಿದೆ. ಇವೆಲ್ಲದರ ಅರ್ಥವೇನು? ವಕೀಲ ಮಹೇಶ್ ಜೇಠ್ಮಲಾನಿ ಅವರು ಈಚೆಗೆ ಹೇಳಿರುವಂತೆ ಚೀನಾವು ಶತ್ರುರಾಷ್ಟ್ರ, ಚೀನಾದ ಕಮ್ಯುನಿಸ್ಟ್ ಪಕ್ಷವು ಶತ್ರು ಸಂಘಟನೆ ಎಂದು ಅರ್ಥ.

ಪ್ರಧಾನಿ ಮೋದಿ ಅವರು ಲಡಾಖ್‌ನಿಂದ ರವಾನಿಸಿದ ಸಂದೇಶ, ಚೀನೀ ಆ್ಯಪ್‌ಗಳನ್ನು ನಿಷೇಧಿಸುವ ಗಟ್ಟಿ ತೀರ್ಮಾನವು, ಹಲವು ಬೃಹತ್ ಯೋಜನೆಗಳ ಗುತ್ತಿಗೆಯನ್ನು ಚೀನಾದ ಕಂಪನಿಗಳಿಗೆ ನೀಡಲಾಗುತ್ತಿದ್ದುದನ್ನು ರದ್ದು ಮಾಡುವ ತೀರ್ಮಾನ ಚೀನಾದ ಪಾಲಿಗೆ ಬರಸಿಡಿಲಿನಂತೆ ಬಂದೆರಗಿರಬಹುದು. ಈ ಹಿಂದೆ ಭಾರತದ ಯಾವ ನಾಯಕನೂ ಇಷ್ಟೊಂದು ಗಟ್ಟಿಯಾಗಿ ಮಾತನಾಡಿರಲಿಲ್ಲ, ತೀರ್ಮಾನ ಕೈಗೊಂಡಿರಲಿಲ್ಲ. ‘ವಿಸ್ತರಣಾವಾದದ ಯುಗ ಮುಗಿದಿದೆ’ ಎಂದು ಮೋದಿ ಅವರು ಘೋಷಿಸಿದ್ದು, ಚೀನಾ ತನ್ನ ನಡೆ ಬದಲಿಸಿಕೊಳ್ಳಬೇಕು ಎಂಬ ತೀಕ್ಷ್ಣ ಸಂದೇಶ. ಅಷ್ಟೇ ಅಲ್ಲ, ಈ ರೀತಿಯ ಬೆದರಿಕೆಗಳನ್ನು ಭಾರತ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಇಡೀ ಜಗತ್ತಿಗೆ ನೀಡಿದ ಸಂದೇಶವೂ ಹೌದು.

ವಿಸ್ತರಣಾವಾದಿ ನೀತಿಗಳು ಮಾನವ ಕುಲಕ್ಕೆ ವಿನಾಶಕಾರಿಯಾಗಿ ಪರಿಣಮಿಸುತ್ತವೆ, ವಿಶ್ವಶಾಂತಿಗೆ ದೊಡ್ಡ ಅಪಾಯ ಒಡ್ಡುತ್ತವೆ ಎಂದು ಮೋದಿ ಅವರು ಚೀನಾಕ್ಕೂ ಜಗತ್ತಿಗೂ ನೆನಪಿಸಿಕೊಟ್ಟಿದ್ದಾರೆ. ಇನ್ನೊಬ್ಬರ ಭೂಪ್ರದೇಶವನ್ನು ಆಕ್ರಮಿಸಲು ಯತ್ನಿಸಿದ ಶಕ್ತಿಗಳು ಒಂದೋ ನಾಶವಾಗಿವೆ ಅಥವಾ ತಮ್ಮ ವರ್ತನೆ ಬದಲಿಸಿಕೊಂಡಿವೆ ಎಂಬುದನ್ನು ನಮಗೆ ಇತಿಹಾಸವೇ ತೋರಿಸಿಕೊಟ್ಟಿದೆ. ಮೋದಿ ಅವರು ‘ವಿಸ್ತರಣಾವಾದ’ದ ಕುರಿತು ಮಾಡಿದ ಉಲ್ಲೇಖ ಹಾಗೂ ವಿಸ್ತರಣಾವಾದವು ವಿಶ್ವಶಾಂತಿಯ ಮೇಲೆ ಬೀರುವ ಕೆಟ್ಟ ಪರಿಣಾಮವು ಎರಡನೆಯ ಮಹಾಯುದ್ಧದ ಭೀಕರ ನೆನಪುಗಳನ್ನು ಹೊತ್ತು ತಂದಿತು. ಚೀನಾದ ಹೆಸರು ಉಲ್ಲೇಖಿಸದೆಯೇ ಮೋದಿ ಅವರು, ಆ ದೇಶವು ಹುಚ್ಚುಚ್ಚಾಗಿ ವರ್ತಿಸುತ್ತಿದೆ, ಹಲವು ದೇಶಗಳೊಂದಿಗೆ ಜಗಳಗಂಟತನ ತೋರುತ್ತಿದೆ ಎಂಬುದನ್ನು ವಿಶ್ವಕ್ಕೆ ತಿಳಿಸಿದರು.

ಹಿಟ್ಲರನ ವಿಸ್ತರಣಾವಾದಿ ನೀತಿಯ ಪರಿಣಾಮವಾಗಿ, ತಾವು ಅದಮ್ಯರು ಎಂಬ ನಂಬಿಕೆ ಜರ್ಮನ್ನರಲ್ಲಿ ಮೂಡಿತ್ತು. ನೆರೆಹೊರೆಯ ದೇಶಗಳನ್ನು ನುಂಗಿಹಾಕಬಹುದು, ಬ್ರಿಟನ್, ರಷ್ಯಾವನ್ನು ಮತ್ತು ಅಮೆರಿಕ ನೇತೃತ್ವದ ಮಿತ್ರಕೂಟವನ್ನು ಕೂಡ ನಾಶ ಮಾಡಬಹುದು ಎಂದು ಭಾವಿಸಿದ್ದರು. ಹಿಟ್ಲರ್‌ ತನ್ನ ಅನರ್ಥಕಾರಿ ಕೆಲಸವನ್ನು ಆಸ್ಟ್ರಿಯಾ, ಪೋಲೆಂಡ್ ಮತ್ತು ಜೆಕೊಸ್ಲೊವಾಕಿಯಾ ಮೇಲಿನ ದಾಳಿಯ ಮೂಲಕ ಆರಂಭಿಸಿದ. ನಂತರ ನಾರ್ವೆ, ಡೆನ್ಮಾರ್ಕ್ ಮತ್ತು ಬೆಲ್ಜಿಯಂ, ಯುಗೊಸ್ಲಾವಿಯಾ ಮತ್ತು ಗ್ರೀಸ್‌ ಹಾಗೂ ಲಕ್ಸಂಬರ್ಗ್‌ ಮತ್ತು ನೆದರ್ಲೆಂಡ್ಸ್‌ ಮೇಲೆ ದಾಳಿ ನಡೆಯಿತು. ಫ್ರಾನ್ಸ್, ರಷ್ಯಾದ ಮೇಲೆ ದಾಳಿ ನಡೆಸುವ ಹೊತ್ತಿನಲ್ಲಿ ಹಿಟ್ಲರ್‌, ಅಗಿಯಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದನ್ನು ಬಾಯಿಗೆ ಹಾಕಿಕೊಂಡಂತೆ ಆಗಿತ್ತು.

ಹಿಂದಿರುಗಿ ನೋಡಿದಾಗ, ತಾನು ಅದಮ್ಯ ಎಂದು ನಂಬಿದ್ದ ದೇಶವೊಂದು ನಡೆಸಿದ ಅತೀವ ಉದ್ಧಟತನದ ಕೃತ್ಯ ಅದಾಗಿತ್ತು ಎಂದು ಹೇಳಬಹುದು. ಜಪಾನ್‌, ಆಸ್ಟ್ರೇಲಿಯಾ, ವಿಯೆಟ್ನಾಂ, ದಕ್ಷಿಣ ಕೊರಿಯಾ, ಸಿಂಗಪುರ ಮತ್ತು ಇತರ ಹಲವು ರಾಷ್ಟ್ರಗಳು ಸಮುದ್ರದ ಮೇಲೆ ಹೊಂದಿರುವ ಹಕ್ಕು ಹಾಗೂ ಸಾರ್ವಭೌಮ ಹಕ್ಕುಗಳಿಗೆ ಸವಾಲು ಹಾಕುವುದರ ಜೊತೆಯಲ್ಲೇ ಚೀನಾ ಎಲ್‌ಎಸಿಯಲ್ಲಿ ಭಾರತವನ್ನು ಕೆಣಕಲು ಯತ್ನಿಸಿದೆ. ಹಾಂಗ್‌ಕಾಂಗ್‌ ಹಾಗೂ ತೈವಾನ್‌ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳದ ವರ್ತನೆಯನ್ನು ಹೊರತುಪಡಿಸಿ, ಚೀನಾವು ಒಟ್ಟು 23 ದೇಶಗಳ ಜೊತೆ ತಕರಾರು ಹೊಂದಿದೆ ಎಂದು ಈಚೆಗಿನ ಲೆಕ್ಕಾಚಾರವೊಂದು ಹೇಳುತ್ತಿದೆ. ಇದು 80 ವರ್ಷಗಳ ಹಿಂದೆ ನಾಜಿಗಳು ತೋರಿದ್ದ ಬೇಜವಾಬ್ದಾರಿಯ ವರ್ತನೆಯನ್ನು ನೆನಪಿಸುತ್ತಿದೆ. ಚೀನಾದ ಅಕ್ರಮವನ್ನು ಭಾರತ ಎತ್ತಿ ತೋರಿಸಿದ ನಂತರ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಫ್ರಾನ್ಸ್ ಮತ್ತು ಆಸಿಯಾನ್‌ ಗುಂಪಿನ ಹಲವು ರಾಷ್ಟ್ರಗಳು ಚೀನಾದ ವಿಚಾರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಪ್ರಧಾನಿಯವರು ಲಡಾಖ್‌ನಿಂದ ಇನ್ನೂ ಎರಡು ಪ್ರಮುಖ ಸಂದೇಶಗಳನ್ನು ರವಾನಿಸಿದರು. ಶಕ್ತಿಯಿಂದ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ, ಎಲ್‌ಎಸಿಗೆ ಹೊಂದಿಕೊಂಡಿರುವ ಭೂಪ್ರದೇಶಗಳಲ್ಲಿ ಭಾರತವು ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಕೈಗೊಂಡಿದೆ ಮತ್ತು ಮುಂದೆಯೂ ಕೈಗೊಳ್ಳಲಿದೆ ಎಂಬುವು ಆ ಸಂದೇಶಗಳು. ಇವು ನಿಜಕ್ಕೂ ಮಹತ್ವದವು. ಸಭ್ಯ ಮತ್ತು ಸಹಕಾರಿ ನಡವಳಿಕೆಯನ್ನು ನಾವು ತೋರಿದರೆ ನೆರೆಯ ರಾಷ್ಟ್ರಗಳೂ ಅದನ್ನೇ ತೋರುತ್ತವೆ ಎಂದು ದೇಶದ ಜನ ನಂಬುವಂತೆ ಮಾಡಲಾಗಿದೆ. ಪ್ರಧಾನಿಯವರ ಸಂದೇಶವು ಅವರನ್ನೂ ಉದ್ದೇಶಿಸಿದೆ.

ಪ್ರಧಾನಿಯವರ ಭಾಷಣಕ್ಕೆ ಚೀನಾದ ಪ್ರತಿಕ್ರಿಯೆ ಹಾಸ್ಯಾಸ್ಪದ. ಹಲವು ತಿಂಗಳುಗಳಿಂದ ಸಂಘರ್ಷದ ಹಾದಿಯನ್ನು ಹಿಡಿದ ಚೀನಾ ದೇಶವು, ತನ್ನ ವಿದೇಶಾಂಗ ಸಚಿವಾಲಯದ ಮೂಲಕ ಹೇಳಿಕೆಯೊಂದನ್ನು ನೀಡಿ, ಇದು ಗಡಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಸಂದರ್ಭವಲ್ಲ ಎಂದಿದೆ. ಚೀನಾದ ವಿಚಾರದಲ್ಲಿ ಭಾರತವು ತಪ್ಪು ಲೆಕ್ಕಾಚಾರ ಹಾಕಬಾರದು ಎಂದೂ ಅದು ಹೇಳಿದೆ. ಆದರೆ, ದಾಳ ಉರುಳಿದ ರೀತಿಯನ್ನು ಗಮನಿಸಿದರೆ ಭಾರತದ ವಿಚಾರವಾಗಿ ಚೀನಾ ತಪ್ಪು ಲೆಕ್ಕಾಚಾರ ಹಾಕಿತು ಎಂಬುದು ಗೊತ್ತಾಗುತ್ತದೆ.

ಭಾರತದ ಯೋಧರು ಚೀನೀಯರ ಬೆದರಿಕೆಯ ತಂತ್ರವನ್ನು ಎದುರಿಸಿ ನಿಂತಾಗ, ಅವರಿಗೆ ಸೋಲುಣಿಸಿದಾಗ, ಚೀನಾ ಸೇನೆಗೆ ಆಘಾತ ಉಂಟಾಯಿತು. ಗಾಲ್ವನ್‌ ಸಂಘರ್ಷದಲ್ಲಿ ಮೃತಪಟ್ಟ ತನ್ನ ಸೈನಿಕರ ಸಂಖ್ಯೆ ಎಷ್ಟು ಎಂಬುದನ್ನು ವಿಶ್ವಕ್ಕೆ ಹೇಳುವ ಧೈರ್ಯ ಚೀನಾಕ್ಕೆ ಇದುವರೆಗೂ ಬಂದಿಲ್ಲ. ಇದು ಆ ದೇಶದ ಆಂತರಿಕ ಶಕ್ತಿಯ ಬಗ್ಗೆ ಬಹಳಷ್ಟನ್ನು ಹೇಳುವಂತಿದೆ.

‘ಇಲ್ಲಿಗೆ ಇದು ಸಾಕು’ ಎಂದು ಹೇಳಲೇಬೇಕಾದ ಸಂದರ್ಭವು ಎಲ್ಲ ರಾಷ್ಟ್ರಗಳ ಬದುಕಿನಲ್ಲೂ ಒಮ್ಮೆ ಎದುರಾಗುತ್ತದೆ. ಚೀನಾಕ್ಕೆ ಆಘಾತ ನೀಡುವ ರೀತಿಯಲ್ಲಿ ಭಾರತ ಎದ್ದು ನಿಲ್ಲಬೇಕು. ಇದು ದೀರ್ಘಾವಧಿಯ ಕೆಲಸವಾಗಿರಬಹುದು. ಆದರೆ, ರಾಷ್ಟ್ರವೊಂದರ ಜೀವನದಲ್ಲಿ ಒಂದೆರಡು ದಶಕ ದೊಡ್ಡದೇ? 135 ಕೋಟಿ ಜನರ ರಾಷ್ಟ್ರ ನಮ್ಮದು. ಒಂದೆರಡು ದಶಕಗಳಲ್ಲಿ ನಾವು ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆಯ ರಾಷ್ಟ್ರವಾಗಲಿದ್ದೇವೆ. ಈ ಸತ್ಯವನ್ನು ಅರ್ಥಮಾಡಿಕೊಳ್ಳುವ ಕಾಲ ಚೀನಾಕ್ಕೂ ಬಂದಿದೆ, ವಿಶ್ವಕ್ಕೂ ಬಂದಿದೆ. ಸಮಾಜಶಾಸ್ತ್ರಜ್ಞರು ಹೇಳುವಂತೆ ‘ಜನಸಂಖ್ಯೆಯೇ ವಿಧಿಯನ್ನು ತೀರ್ಮಾನಿಸುತ್ತದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT