ಬುಧವಾರ, ಏಪ್ರಿಲ್ 8, 2020
19 °C
ಎಡಪಕ್ಷಗಳು ತಮ್ಮ ಆಲೋಚನಾ ಕ್ರಮವನ್ನು ಬದಲಿಸಿಕೊಳ್ಳುವವೇ?

ಕಮ್ಯುನಿಸ್ಟರ ಕೋಟೆ ಕುಸಿಯುತ್ತಿದೆ

ಎ. ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ಕಾರ್ಮಿಕರ ಕ್ರಾಂತಿಯ ಪ್ರಮುಖ ಪರಿಣಾಮವೆಂದರೆ ಪ್ರಭುತ್ವದ ಕುಸಿತ ಎಂದು ಫ್ರೆಡ್ರಿಕ್ ಏಂಗಲ್ಸ್‌ ಹೇಳಿದ್ದ. ಆದರೆ ಭಾರತದಲ್ಲಿ 2019ರ ಚುನಾವಣೆಯ ಫಲಿತಾಂಶದ ನಂತರ ವಾಸ್ತವವಾಗಿ, ಪ್ರಭುತ್ವ ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಯುತವಾಗಿ ಹೊರಹೊಮ್ಮಿದೆ, ಕಮ್ಯುನಿಸ್ಟ್ ಪಕ್ಷಗಳ ನೆಲೆ ಕುಸಿಯುತ್ತಿದೆ! ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಪಕ್ಷದ ಭಾರಿ ಸೋಲು ಹೆಚ್ಚಿನ ಗಮನ ಸೆಳೆದಿದೆಯಾದರೂ, ಫಲಿತಾಂಶದ ಮೂಲಕ ಪ್ರಮುಖವಾಗಿ ಕಂಡುಕೊಂಡಿರುವ ಅಂಶ, ಭಾರತದ ಎರಡು ಕಮ್ಯುನಿಸ್ಟ್ ಪಕ್ಷಗಳ ಅದೃಷ್ಟರೇಖೆ ಮಸುಕಾಗುತ್ತಿರುವುದು.

ಸ್ವಾತಂತ್ರ್ಯಾನಂತರ ಕೆಲವು ದಶಕಗಳ ಅವಧಿಯಲ್ಲಿ ಎಡಪಕ್ಷಗಳು ದೇಶದ ಹಲವು ರಾಜ್ಯಗಳಲ್ಲಿ ಗಣನೀಯ ಅಸ್ತಿತ್ವ ಹೊಂದಿದ್ದವು. 1951-52ರಲ್ಲಿ ಲೋಕಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ದೇಶದ ಅವಿಭಜಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) 16 ಸ್ಥಾನಗಳನ್ನು ಗೆದ್ದುಕೊಂಡಿತ್ತು. 1962ರಲ್ಲಿ ಈ ಸಂಖ್ಯೆ 29ಕ್ಕೆ ಏರಿಕೆ ಕಂಡಿತು. ಆಗ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ 9ರಷ್ಟನ್ನು ಪಕ್ಷ ಪಡೆದಿತ್ತು. ಪಕ್ಷ ವಿಭಜನೆಯಾದ ನಂತರ, ಸಿಪಿಐ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)-  ಸಿಪಿಎಂ 1967ರ ಚುನಾವಣೆಯಲ್ಲಿ ಒಟ್ಟು 42 ಸ್ಥಾನಗಳನ್ನು ಪಡೆದವು. ಆಗಲೂ ಅವುಗಳ ಮತ ಗಳಿಕೆ ಪ್ರಮಾಣ ಶೇ 9ರ ಆಸುಪಾಸಿನಲ್ಲೇ ಇತ್ತು. ಈ ಸ್ಥಿತಿ ಮೂರು ದಶಕಗಳವರೆಗೆ ಮುಂದುವರಿಯಿತು. 2004ರ ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಈ ಎರಡು ಪಕ್ಷಗಳು ಒಟ್ಟಾಗಿ 53 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಅಲ್ಲಿಂದ ಮುಂದೆ ಎಡಪಕ್ಷಗಳ ವಿಧಿ ಬದಲಾಯಿತು.

2014ರ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಗೆಲ್ಲಲು ಸಾಧ್ಯವಾಗಿದ್ದು 10 ಸ್ಥಾನಗಳನ್ನು ಮಾತ್ರ. ಅಲ್ಲದೆ, ಅವುಗಳ ಮತ ಗಳಿಕೆ ಪ್ರಮಾಣ ಶೇ 4ರಷ್ಟಕ್ಕೆ ಕುಸಿಯಿತು. ಈ ಬಾರಿ ಅಪಾಯದ ಗೆರೆಗಿಂತ ಕೆಳಗೆ ಬಂದಿರುವ ಎಡಪಕ್ಷಗಳು ಕೇವಲ ಐದು ಸ್ಥಾನಗಳನ್ನು ಗೆದ್ದುಕೊಂಡಿವೆ, ದೇಶದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇಕಡ 2ರಷ್ಟನ್ನು ಮಾತ್ರ ಪಡೆದಿವೆ.

ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಬಹುತೇಕ ಪಕ್ಷಗಳು ಚಲಾವಣೆಯಲ್ಲಿ ಉಳಿದುಕೊಳ್ಳಲು ಮತ್ತು ಜನರ ಬೆಂಬಲ ಗಿಟ್ಟಿಸಲು ತಮ್ಮನ್ನು ತಾವು ಮತ್ತೆ ಮತ್ತೆ ಅವಲೋಕನಕ್ಕೆ ಒಳಪಡಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಗೆ ಕಮ್ಯುನಿಸ್ಟ್ ಪಕ್ಷಗಳೂ ಹೊರತಾಗಿಲ್ಲ. ಆದರೆ, ಭಾರತದ ಸಿಪಿಐ ಮತ್ತು ಸಿಪಿಎಂ ಮಾತ್ರ ತಮಗೆ ದಶಕಗಳ ಹಿಂದೆ ಅಸ್ಮಿತೆ ನೀಡಿದ್ದ ಘೋಷಣೆಗಳು ಹಾಗೂ ಸಿದ್ಧಾಂತಗಳಿಗೇ ಅಂಟಿ ಕೊಂಡಿವೆ. ಜಗತ್ತೇ ಬದಲಾಗಿದ್ದರೂ, ದುಡಿಯುವ ವರ್ಗ, ಸಂಘಟಿತ ಕಾರ್ಮಿಕರು, ಬಂಡವಾಳಶಾಹಿ ಹಾಗೂ ಕಾರ್ಮಿಕ ವರ್ಗದ ನಡುವಣ ವ್ಯತ್ಯಾಸ ಕುರಿತ ಅವರ ಆಲೋಚನೆಗಳು ಬದಲಾಗಿಲ್ಲ.

ಈ ವಿಚಾರದಲ್ಲಿ ಈ ಲೇಖಕನಿಗೆ ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಉದಾಹರಣೆಗಳು ದೊರೆತವು. ಅಲ್ಲಿ ರೋಡ್‌ ಷೋ ವೇಳೆ ಸಿಪಿಎಂ ಕಾರ್ಯಕರ್ತರು ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆ ಕೂಗುತ್ತಿದ್ದರು, ಕುಡುಗೋಲು ಮತ್ತು ಸುತ್ತಿಗೆಯ ಚಿತ್ರವನ್ನು ಒಳಗೊಂಡ ಕೆಂಪು ಬಾವುಟವನ್ನು ಕೈಯಲ್ಲಿ ಹಿಡಿದಿದ್ದರು. ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯು ಎಲ್ಲವನ್ನೂ ನಿಯಂತ್ರಿಸುತ್ತಿರುವ ಈ ಕಾಲದಲ್ಲಿ ಅವರು ಯಾವ ಕ್ರಾಂತಿಯ ಬಗ್ಗೆ ಮಾತನಾಡುತ್ತಿದ್ದಾರೆ?! 

ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ಉಜ್ವಲಾ ಯೋಜನೆ, ಜನಧನ ಯೋಜನೆ, ನೇರನಗದು ವರ್ಗಾವಣೆಯಂತಹ ಯೋಜನೆಗಳು ಅತ್ಯಂತ ಬಡವರಿಗೆ ತಂದುಕೊಟ್ಟಿರುವ ಅನುಕೂಲಗಳನ್ನು ಒಪ್ಪಿಕೊಳ್ಳಲು ಈ ಎರಡು ಪಕ್ಷಗಳು ನಿರಾಕರಿಸುತ್ತಿರುವುದು, ಅವು ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಹೊಂದಿಲ್ಲ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ.

ಬಡ ವರ್ಗದವರಲ್ಲಿ ಉದ್ಯಮಶೀಲತೆಯ ಗುಣ ಉದ್ದೀಪಿಸಲು, ಅವರ ಸಾಮಾಜಿಕ– ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ತರಲು ಮೋದಿ ಅವರು ಆರಂಭಿಸಿದ ಯೋಜನೆ ಮುದ್ರಾ. ಈ ಯೋಜನೆಯ ಅಡಿ ₹50 ಸಾವಿರದಿಂದ ₹10 ಲಕ್ಷದವರೆಗೆ ಸಾಲ ಸಿಗುತ್ತದೆ. ಹೀಗೆ ಸಾಲ ಪಡೆಯುವ ಸಣ್ಣ ಉದ್ದಿಮೆದಾರರು ಐದರಿಂದ ಹತ್ತು ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ.  ಹಲವು ರಾಜ್ಯಗಳಲ್ಲಿ ಈ ಲೇಖಕ ಈಚೆಗೆ ಪ್ರವಾಸ ಮಾಡಿದಾಗ, ಯೋಜನೆಯಿಂದ ಪ್ರಯೋಜನ ಪಡೆದ ಅನೇಕರನ್ನು ಭೇಟಿ ಮಾಡಲು ಸಾಧ್ಯವಾಯಿತು. ಮುದ್ರಾ ಯೋಜನೆಯಿಂದ ದೊಡ್ಡ ಮಟ್ಟದ ಪ್ರಯೋಜನ ಪಡೆದವರು ಮಹಿಳೆಯರು. ಪ್ರಯೋಜನ ಪಡೆದ ಒಟ್ಟು ಜನರಲ್ಲಿ ಅವರ ಪಾಲು ಶೇ 70ರಷ್ಟು. ಈ ಯೋಜನೆಯ ಅಡಿ ಒಟ್ಟು ₹ 7.23 ಲಕ್ಷ ಕೋಟಿ ಸಾಲ ವಿತರಣೆ ಆಗಿದೆ ಎಂದು ವರ್ಷದ ಆರಂಭದಲ್ಲಿ ಸರ್ಕಾರ ತಿಳಿಸಿತ್ತು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರವು ಉಜ್ವಲಾ ಯೋಜನೆಯ ಅಡಿ ಉಚಿತ ಎಲ್‌ಪಿಜಿ ಸಂಪರ್ಕ ನೀಡುತ್ತದೆ. ದೂರಗಾಮಿ ಪರಿಣಾಮ ಬೀರುವ ಇನ್ನೊಂದು ಯೋಜನೆ ಬಡವರಿಗೆ ಮನೆ ನಿರ್ಮಿಸುವುದು ಹಾಗೂ ಪ್ರತಿ ಮನೆಗೆ ಶೌಚಾಲಯ ನಿರ್ಮಿಸುವುದು. ಕೆಲವು ಯೋಜನೆಗಳನ್ನು ಹಿಂದಿನ ಸರ್ಕಾರಗಳೇ ಆರಂಭಿಸಿದ್ದರೂ, ಬದ್ಧತೆಯ ಕೊರತೆಯ ಕಾರಣದಿಂದ ಅವುಗಳ ಅನುಷ್ಠಾನ ಮಂದಗತಿಯಲ್ಲಿ ಸಾಗಿತ್ತು. 2014ರಲ್ಲಿ ಮೋದಿ ಅವರು ಪ್ರಧಾನಿಯಾದ ನಂತರ ಈ ಯೋಜನೆಗಳು ಫಲಾನುಭವಿಗಳನ್ನು ತಲುಪುವುದಕ್ಕೆ ವೇಗ ದೊರೆಯಿತು.

ಮಹಿಳೆಯರು, ಮಕ್ಕಳಿಗೆ ಘನತೆ ತಂದುಕೊಡುವುದು, ಜೀವನಮಟ್ಟ ಸುಧಾರಿಸುವುದು ಹಾಗೂ ಅವರಿಗೆ ಉತ್ತೇಜಕ ಕೊಡುಗೆಗಳನ್ನು ನೀಡುವುದು ಈ ಎಲ್ಲ ಯೋಜನೆಗಳ ಗುರಿ. ಇಂತಹ ಯೋಜನೆಗಳನ್ನು ಕಮ್ಯುನಿಸ್ಟರು ಶ್ಲಾಘಿಸಬಹುದು ಎಂದು ಕೆಲವರು ಆಲೋಚಿಸಿದ್ದಿರಬಹುದು. ಆದರೆ ಆ ರೀತಿ ಆಗಲಿಲ್ಲ.

ಬಡ ವರ್ಗದವರ ಜೀವನ ಸುಧಾರಿಸಲೆಂದೇ ರೂಪಿಸಿದ ಮುದ್ರಾ ಸೇರಿದಂತೆ ಇತರ ಯೋಜನೆಗಳನ್ನು ಈ ಎರಡು ಪಕ್ಷಗಳ ವಕ್ತಾರರು ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದರು. ಏಕೆಂದರೆ ಇವುಗಳನ್ನು ಆರಂಭಿಸಿದ್ದು ಮೋದಿ. ಸಂಗತಿಗಳನ್ನು ನಕಾರಾತ್ಮಕವಾಗಿ ನೋಡುವುದನ್ನು ಜನ ಒಪ್ಪಿಕೊಂಡಿಲ್ಲ ಎಂಬುದನ್ನು ಈ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ.

ಈ ಪಕ್ಷಗಳ ಜನಪ್ರಿಯತೆ ಕಡಿಮೆ ಮಾಡಿರುವ ಇನ್ನಷ್ಟು ಅಂಶಗಳಿವೆ. ಮೊದಲನೆಯದು, ಸೆಕ್ಯುಲರಿಸಂ ವಿಚಾರದಲ್ಲಿ ಪಕ್ಷಗಳ ನಡೆ. ಶಾ ಬಾನೊ ಪ್ರಕರಣದಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಕೈಗೊಂಡ ತೀರ್ಮಾನವನ್ನು ಎಡಪಕ್ಷಗಳ ಸೋಮನಾಥ ಚಟರ್ಜಿ, ಸೈಫುದ್ದೀನ್ ಚೌಧರಿ ಸೇರಿದಂತೆ ಹಲವರು ವಿರೋಧಿಸಿದ್ದರು. ಆದರೆ, ಈಗ ಎಡಪಕ್ಷಗಳು ಅಂದಿನ ನಿಲುವಿನಿಂದ ದೂರ ಸರಿದಿವೆ. ಈ ಮೂರು ದಶಕಗಳ ಅವಧಿಯಲ್ಲಿ ಎಡಪಕ್ಷಗಳು ಪೊಳ್ಳು ಜಾತ್ಯತೀತವಾದದ ಕಡೆ ವಾಲಿವೆ,  ಹಿಂದೂಗಳ ವಿರೋಧಿಗಳಾಗಿವೆ, ತೀವ್ರವಾದಿ ಇಸ್ಲಾಂ ಎನ್ನುವುದು ಸಮಸ್ಯೆಯೇ ಅಲ್ಲ ಎಂಬಂತೆ ವರ್ತಿಸುತ್ತಿವೆ. ಶಬರಿಮಲೆ ಪ್ರಕರಣದಲ್ಲಿ ಎಡಪಕ್ಷಗಳು ಹಿಂದೂ ಜೀವನ ಪದ್ಧತಿಯನ್ನು ಹೀಗಳೆಯಲು ಜನರನ್ನು ಉತ್ತೇಜಿಸಿದವು.

ಇನ್ನು, ಈ ಹಂತದಿಂದ ಎಡಪಕ್ಷಗಳು ಎಲ್ಲಿಗೆ ಹೋಗುತ್ತವೆ? ಬ್ರಿಟಿಷ್ ಲೇಬರ್ ಪಕ್ಷವು ಕೆಲವು ವರ್ಷಗಳ ಹಿಂದೆ ಮಾಡಿದಂತೆ, ಎಡ ಪಕ್ಷಗಳು ಆಲೋಚನಾ ಕ್ರಮ ಬದಲಿಸಿಕೊಳ್ಳುವವೇ? ಈ ಪಕ್ಷಗಳು ಪುನಃ ಎಡಕ್ಕೇ ವಾಲಿದರೆ, ಮುಂದೆ ಸಾಗಲು ದಾರಿ ಇಲ್ಲದಂತೆ ಆಗುತ್ತದೆ. ಬಲಕ್ಕೆ ಹೊರಳಿದರೆ ‘ಎಡ’ ಎನ್ನುವ ಅಸ್ಮಿತೆ ಇರುವುದಿಲ್ಲ. ಅವು ಎಲ್ಲಿಗೆ ಹೋಗುತ್ತಿವೆ?! ದೇಶಕ್ಕೆ ಉತ್ತರ ಬೇಕಿದೆ.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು