ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಮುಗಿದಿದೆ, ಕಥೆ ಇನ್ನೂ ಇದೆ

ಈಗ ಇನ್ನೊಂದು ಸುತ್ತಿನ ರಾಜಕೀಯ ಅನಿಶ್ಚಿತ ಸ್ಥಿತಿ ಎದುರಾಗುವ ಸಾಧ್ಯತೆ ಇದೆ
Last Updated 28 ಜುಲೈ 2019, 19:45 IST
ಅಕ್ಷರ ಗಾತ್ರ

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವು ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಸೋಲುವ ಹಾಗೂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನೇಮಕವಾಗುವ ಮೂಲಕ ಕರ್ನಾಟಕದ ಕೊಳಕು ರಾಜಕೀಯ ನಾಟಕ ಅಂತೂ ಕೊನೆಗೊಂಡಿದೆ.

ಆದರೆ, ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರು ಮೊದಲೇ ರಾಜೀನಾಮೆ ಪತ್ರ ರವಾನಿಸಿದ್ದ 17 ಶಾಸಕರನ್ನು ಅನರ್ಹಗೊಳಿಸುವ ತೀರ್ಮಾನ ಕೈಗೊಂಡ ಕಾರಣದಿಂದ ಮುನ್ನೆಲೆಗೆ ಬಂದಿರುವ ಸಾಂವಿಧಾನಿಕ ಪ್ರಶ್ನೆಗಳ ಪರಿಣಾಮವಾಗಿ, ಕಥೆ ಇಲ್ಲಿಗೇ ಕೊನೆಗೊಂಡಿಲ್ಲ. ತಮ್ಮ ರಾಜೀನಾಮೆಯನ್ನುವಿಧಾನಸಭಾಧ್ಯಕ್ಷರು ಒಪ್ಪಿಕೊಳ್ಳಬೇಕು ಎಂದು ಶಾಸಕರು ಬಯಸಿದ್ದರು, ರಾಜೀನಾಮೆ ಸಲ್ಲಿಸುವ ತಮ್ಮ ಹಕ್ಕನ್ನು ಸ್ಪಷ್ಟವಾಗಿ ಹೇಳಲು ಅವರಲ್ಲಿ ಹತ್ತು ಶಾಸಕರು ವಿಧಾನಸಭಾಧ್ಯಕ್ಷರ ಎದುರು ಹಾಜರಾಗಿದ್ದರು. ಅವರನ್ನು ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕೇಳಿದ್ದವು. ಏಕೆಂದರೆ, ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಈ ಶಾಸಕರು ಪಾಲ್ಗೊಂಡಿರಲಿಲ್ಲ. ಈಗಿನ ವಿಧಾನಸಭೆ ಅವಧಿ ಪೂರ್ಣಗೊಳ್ಳುವವರೆಗೆ ಈ ಶಾಸಕರು ಚುನಾವಣೆ ಎದುರಿಸುವಂತೆ ಇಲ್ಲ ಎಂದೂ ವಿಧಾನಸಭಾಧ್ಯಕ್ಷರು ಆದೇಶಿಸಿದ್ದಾರೆ. ಅನರ್ಹಗೊಂಡ ಶಾಸಕರ ಹಾಗೂ ಹೊಸ ಮುಖ್ಯಮಂತ್ರಿಯ ಆಲೋಚನೆಗಳನ್ನು ಇದು ಹಾಳುಗೆಡಹಿದೆ. ಉಪಚುನಾವಣೆಯಲ್ಲಿ ಇವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವ ಆಲೋಚನೆ ಹೊಸ ಮುಖ್ಯಮಂತ್ರಿಯಲ್ಲಿ ಇತ್ತು.

ಶಾಸಕರ ರಾಜೀನಾಮೆ ವಿಚಾರ ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ಇದೆ. ಅನರ್ಹಗೊಂಡವರುವಿಧಾನ ಸಭಾಧ್ಯಕ್ಷರ ತೀರ್ಮಾನವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಮುಂದೆ ಏನೇ ಆದರೂ, ಈ ಬೆಳವಣಿಗೆಗಳು ದೇಶದ ಪ್ರಜಾತಾಂತ್ರಿಕ ಪರಂಪರೆಗೆ ಗಣನೀಯವಾಗಿ ಏಟು ನೀಡಿವೆ ಎಂಬುದರಲ್ಲಿ ಅನುಮಾನ ಉಳಿದಿಲ್ಲ.

ಅತೃಪ್ತರು ವಿಧಾನಸಭಾಧ್ಯಕ್ಷರ ಕಚೇರಿಗೆ ಹೋಗಿ ರಾಜೀನಾಮೆ ಸಲ್ಲಿಸುವ ಮೂಲಕ ನಾಟಕ ಆರಂಭ ವಾಯಿತು. ತಮ್ಮ ಅನುಪಸ್ಥಿತಿಯಲ್ಲಿ ರಾಜೀನಾಮೆ ಸಲ್ಲಿಸಿದ್ದರಿಂದ ಅವರು ತಮ್ಮೆದುರು ಹಾಜರಾಗಬೇಕು, ಸ್ವಇಚ್ಛೆ ಯಿಂದ ರಾಜೀನಾಮೆ ಸಲ್ಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಕರ್ತವ್ಯ ತಮ್ಮ ಪಾಲಿಗಿದೆ ಎಂದು ರಮೇಶ್ ಕುಮಾರ್ ಹೇಳಿದರು. ರಾಜೀನಾಮೆ ಪತ್ರವನ್ನು ಶಾಸಕರು ತಾವೇ ತಂದು ಕೊಟ್ಟಾಗ, ರಾಜೀ ನಾಮೆ ಸಲ್ಲಿಸಿರುವುದು ಸ್ವಇಚ್ಛೆಯಿಂದ ಹಾಗೂ ಶುದ್ಧ ಮನಸ್ಸಿನಿಂದ ಎಂದು ಹೇಳಿದಾಗ (ಆ ಮಾತುವಿಧಾನಸಭಾಧ್ಯಕ್ಷರಿಗೆ ತೃಪ್ತಿ ತಂದರೆ) ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಬೇಕು ಎಂದು ವಿಧಾನಸಭೆಯ ನಿಯಮಗಳು ಹೇಳುತ್ತವೆ. ರಾಜೀನಾಮೆ ಪತ್ರವನ್ನು ಖುದ್ದಾಗಿ ತಂದುಕೊಡದಿದ್ದಲ್ಲಿ, ರಾಜೀನಾಮೆ ಸ್ವಇಚ್ಛೆಯಿಂದ ನೀಡಿದ್ದೇ ಎಂಬುದನ್ನು ಪರಿಶೀಲಿಸುವ ಅಧಿಕಾರವಿಧಾನಸಭಾಧ್ಯಕ್ಷರಿಗೆ ಇರು ತ್ತದೆ. ಅಂತಹ ರಾಜೀನಾಮೆಯನ್ನು ತಿರಸ್ಕರಿಸುವ ಅಧಿಕಾರ ಕೂಡ ಅವರಿಗಿದೆ. ವಿಧಾನಸಭಾಧ್ಯಕ್ಷರನ್ನು ಭೇಟಿಯಾಗುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದ ನಂತರ ಹತ್ತು ಶಾಸಕರುವಿಧಾನಸಭಾಧ್ಯಕ್ಷರ ಬಳಿ ಬಂದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು.

ಕುಮಾರಸ್ವಾಮಿ ನೇತೃತ್ವದ ಸರ್ಕಾರವು ವಿಶ್ವಾಸಮತ ಯಾಚಿಸುವ ಸಂದರ್ಭ ಎದುರಾದಾಗ, ಮತ ಯಾಚನೆ ವೇಳೆ ಸದನದಲ್ಲಿ ಹಾಜರಿರಬೇಕು ಎಂದು ಮೈತ್ರಿಕೂಟದ ಎರಡೂ ಪಕ್ಷಗಳು ವಿಪ್ ಜಾರಿಗೊಳಿಸಿದವು. ರಾಜೀನಾಮೆ ಸಲ್ಲಿಸಿದ್ದ ಬಂಡಾಯ ಶಾಸಕರು ಮುಂಬೈನಲ್ಲೇ ಉಳಿದರು. ಘಟನೆಗಳ ಅನುಕ್ರಮಣಿಕೆ ಹಾಗೂ ಶಾಸಕರ ರಾಜೀನಾಮೆಗೆ ಸಂಬಂಧಿಸಿದ ನಿಯಮಗಳ ಆಧಾರದಲ್ಲಿ ಅವರ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸಬೇಕಿತ್ತು. ಸದನವು ವಿಶ್ವಾಸಮತದ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಮೊದಲೇ ರಾಜೀನಾಮೆ ಸಲ್ಲಿಕೆ ಆಗಿದ್ದರಿಂದಾಗಿ, ವಿಪ್‌ಗೆ ಅರ್ಥವಿಲ್ಲ ಎಂದು ಬಂಡಾಯ ಶಾಸಕರು ವಾದಿಸಿದರು. ಮುಂಬೈನಲ್ಲಿ ಇದ್ದ ಶಾಸಕರು ಪೊಲೀಸ್‌ ಭದ್ರತೆ ಕೇಳಬೇಕಾಗಿ ಬಂದಿದ್ದು ಈ 15 ದಿನಗಳ ನಾಟಕದಲ್ಲಿ ಕಂಡುಬಂದ ಕೆಟ್ಟ ಬೆಳವಣಿಗೆ.

ರಾಜೀನಾಮೆ ವಿಚಾರದಲ್ಲಿ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ನಡೆದುಕೊಂಡ ರೀತಿಗೂ, ರಮೇಶ್‌ಕುಮಾರ್ ನಡೆದುಕೊಂಡ ರೀತಿಗೂ ಬಹಳ ವ್ಯತ್ಯಾಸವಿದೆ. ಸಮಾಜವಾದಿ ಪಕ್ಷದ ಸದಸ್ಯ ನೀರಜ್ ಶೇಖರ್ ಅವರ ರಾಜೀನಾಮೆ ಪತ್ರ ನಾಯ್ಡು ಅವರಿಗೆ ಜುಲೈ 15ರಂದು ತಲುಪಿತು. ಶೇಖರ್ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ನಾಯ್ಡು ಅವರು ಮಾರನೆಯ ದಿನವೇ ಸದನಕ್ಕೆ ತಿಳಿಸಿದರು. ರಾಜೀನಾಮೆ ಸಲ್ಲಿಸಿರುವುದು ಸ್ವಇಚ್ಛೆಯಿಂದ ಹೌದೇ ಎಂದು ನಾಯ್ಡು ಅವರು ಶೇಖರ್ ಅವರನ್ನು ಕೇಳಿದ್ದರು. ತೀರ್ಮಾನವನ್ನು ಪುನರ್‌ ಪರಿಶೀಲಿಸುವ ಬಯಕೆ ಇದೆಯೇ ಎಂದೂ ಕೇಳಿದ್ದರು. ರಾಜೀನಾಮೆಯ ತೀರ್ಮಾನವನ್ನು ಶೇಖರ್ ಬದಲಿಸದಿದ್ದಾಗ ನಾಯ್ಡು ಅವರು ‘ತಕ್ಷಣದಿಂದ ಅನ್ವಯವಾಗುವಂತೆ’ ರಾಜೀನಾಮೆ ಒಪ್ಪಿಕೊಂಡರು. ಮುಂದಿನ ಅಗತ್ಯ ಕ್ರಮಗಳನ್ನು ಜರುಗಿ ಸುವಂತೆ ಸಚಿವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜೀನಾಮೆ ಅಂಗೀಕಾರ ಆಗಿರುವುದನ್ನು ಜುಲೈ 16ರಂದು ಸದನದಲ್ಲಿ ಪ್ರಕಟಿಸಿದರು.

ಕರ್ನಾಟಕದ ವಿಚಾರಕ್ಕೆ ಮರಳುವುದಾದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ಒಂದು ಪಕ್ಷಕ್ಕೆ ಅಥವಾ ಒಂದು ಚುನಾವಣಾಪೂರ್ವ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡದಿದ್ದುದು ದುರ ದೃಷ್ಟಕರ. 104 ಸ್ಥಾನ ಪಡೆದ ಬಿಜೆಪಿ ಅಸಹಾಯಕ ಸ್ಥಿತಿಯಲ್ಲಿ ನಿಂತಿತ್ತು. ಸಂಖ್ಯಾಬಲದಲ್ಲಿ ಮೂರನೆಯ ಸ್ಥಾನ ಪಡೆದ ಜೆಡಿಎಸ್‌ ಪಕ್ಷದವರು ಮುಖ್ಯಮಂತ್ರಿ ಆಗುವುದನ್ನು ರಾಜ್ಯ ಕಂಡಿತು. ಎರಡನೆಯ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು ಜೆಡಿಎಸ್‌ಗೆ ಬೆಂಬಲ ನೀಡಿತು. 2008ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು, 224 ಸ್ಥಾನಗಳ ಪೈಕಿ 110 ಸ್ಥಾನಗಳನ್ನು ಬಿಜೆಪಿಗೆ ನೀಡಿದರು. ಯಡಿಯೂರಪ್ಪ ಅವರು ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸಬೇಕಾಯಿತು. ಈ ಹೊಂದಾಣಿಕೆಯು ಅನಿಶ್ಚಿತ ಸ್ಥಿತಿಯಲ್ಲೇ ಕೆಲವು ಕಾಲ ಮುಂದುವರಿಯಿತು.

ಸಂವಿಧಾನಕ್ಕೆ ತಂದ 91ನೇ ತಿದ್ದುಪಡಿಯ ಪರಿಣಾಮ ವಾಗಿ ಪಕ್ಷಾಂತರ ಮಾಡುವುದು ಬಹಳ ಕಷ್ಟದ ಪ್ರಕ್ರಿಯೆ ಆಗಿದೆ. ಹಾಗಾಗಿ, ಪಕ್ಷವೊಂದು ಬಹುಮತಕ್ಕೆ ಕೆಲವೇ ಕೆಲವು ಸ್ಥಾನಗಳ ಕೊರತೆ ಎದುರಿಸುತ್ತಿದ್ದಾಗ, ವಿರೋಧ ಪಕ್ಷಗಳ ಶಾಸಕರು ರಾಜೀನಾಮೆ ಕೊಡುವಂತೆ ಮನವೊಲಿಸಿ, ತನ್ನ ಚಿಹ್ನೆಯ ಅಡಿ ಸ್ಪರ್ಧಿಸುವಂತೆ ಮಾಡುವ ಆಯ್ಕೆ ಮಾತ್ರ ಉಳಿದುಕೊಂಡಿದೆ. 2008 ರಲ್ಲಿ ಯಡಿಯೂರಪ್ಪಮಾಡಿದ್ದು ಕೂಡ ಇದನ್ನೇ. ಯಡಿಯೂರಪ್ಪ ನೇತೃತ್ವದ ಸರ್ಕಾರ ಬಹುಮತ ಹೊಂದಲಿ ಎಂದು ಮತದಾರರು ಈ ನಡೆಯನ್ನು ಬೆಂಬಲಿಸಿದರು. ಆದರೆ, ಈ ಕ್ರಮ ತೀವ್ರ ಟೀಕೆಗೆ ಗುರಿಯಾಯಿತು. ವಿಧಾನಸಭೆಯನ್ನು ವಿಸರ್ಜಿಸಿ, ಮತ್ತೆ ಚುನಾವಣೆ ನಡೆಸುವುದಕ್ಕಿಂತ ಕೆಲವು ಶಾಸಕರು ಪುನಃ ಜನರ ಮುಂದೆ ಹೋಗಿ ಹೊಸ ಜನಾದೇಶ ಕೇಳುವುದು ಉತ್ತಮ ಎಂಬುದು ಈ ಲೇಖಕನ ಅಭಿಪ್ರಾಯ. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬರುವವರೆಗೆ ಇದ್ದ, ಶಾಸಕರು ಮತ್ತು ಸಂಸದರು ಮಾಡುತ್ತಿದ್ದ ನಾಚಿಕೆಗೇಡಿನ ಪಕ್ಷಾಂತರಕ್ಕಿಂತ ಇದು ಹೆಚ್ಚು ಉತ್ತಮ ಆಯ್ಕೆ.

ಈ ಬಾರಿ ಕೂಡ ಇದೇ ರೀತಿಯ ಕಸರತ್ತು ಮಾಡ ಬಹುದು ಎಂಬ ನಿರೀಕ್ಷೆಯಲ್ಲಿ ಇದ್ದರು ಯಡಿಯೂರಪ್ಪ. ಪಕ್ಷ ತೊರೆಯುವ ಶಾಸಕರನ್ನು ಬಿಜೆಪಿ ಅಭ್ಯರ್ಥಿಗಳನ್ನಾಗಿ ಪುನಃ ಚುನಾವಣೆ ಎದುರಿಸುವಂತೆ ಮಾಡುವ ಆಲೋಚನೆಯಲ್ಲಿ ಇದ್ದರು. ಆದರೆ ವಿಧಾನಸಭಾಧ್ಯಕ್ಷರು ನೀಡಿರುವ ಆದೇಶವು ಈ ಆಲೋಚನೆಗೆ ತಡೆಯೊಡ್ಡಿದೆ. ಈಗ ನಾವು ನ್ಯಾಯಾಂಗ ನೀಡುವ ತೀರ್ಮಾನಕ್ಕೆ ಕಾದು ಕುಳಿತುಕೊಳ್ಳಬೇಕಾಗಿದೆ. ಅಲ್ಲಿಯವರೆಗೆ, ಇನ್ನೊಂದು ಸುತ್ತಿನ ರಾಜಕೀಯ ಅನಿಶ್ಚಿತ ಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇನ್ನೊಂದು ಸರ್ಕಾರ ಹಗ್ಗದ ಮೇಲೆ ನಡಿಗೆಯ ಸರ್ಕಸ್‌ ಮಾಡುವುದನ್ನು ಜನ ಅಸಹಾಯಕರಾಗಿ ನೋಡಬೇಕಾಗುತ್ತದೆ.

ಲೇಖಕ: ಪ್ರಸಾರಭಾರತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT