ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಭಾರತದ್ದು; ಶಿವಸೇನೆಗೆ ಸೇರಿದ್ದಲ್ಲ

ಮುಂಬೈ ಪ್ರವೇಶದ ಕೀಲಿಕೈಯನ್ನು ಭಾರತದ ಜನ ಎಂದಿಗೂ ಶಿವಸೇನೆಯ ಕೈಗೆ ನೀಡುವುದಿಲ್ಲ
Last Updated 17 ಸೆಪ್ಟೆಂಬರ್ 2020, 8:23 IST
ಅಕ್ಷರ ಗಾತ್ರ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ ರನೌತ್ ಅವರನ್ನು ಬೆದರಿಸಲು ಶಿವಸೇನೆ ನಡೆಸಿರುವ ಯತ್ನವನ್ನು, ಕಂಗನಾ ಅವರಿಗೆ ಸೇರಿದ ಕಟ್ಟಡದ ಒಂದು ಭಾಗವನ್ನು ಧ್ವಂಸಗೊಳಿಸಿದ ಕ್ರಮವನ್ನು ಪ್ರಜಾತಂತ್ರವನ್ನು ಪ್ರೀತಿಸುವ ಎಲ್ಲರೂ ಖಂಡಿಸಬೇಕು. ‘ಮುಂಬೈ ನಗರದ ಮಾಲೀಕತ್ವವನ್ನು ನೀವು ಹೊಂದಿಲ್ಲ, ಆ ನಗರವನ್ನು ಪ್ರವೇಶಿಸಲು ವೀಸಾ ನೀಡುವ ಅಧಿಕಾರವನ್ನು ನಿಮಗೆ ಯಾರೂ ನೀಡುವುದಿಲ್ಲ’ ಎಂಬ ಮಾತನ್ನು ಶಿವಸೇನೆಗೆ ಹೇಳಬೇಕಾದ ಸಮಯ ಇದು. ಮುಂಬೈ ನಗರ ಭಾರತಕ್ಕೆ ಸೇರಿದ್ದು.

ನಿಯಮ ಉಲ್ಲಂಘನೆಯ ಆರೋಪದ ಅಡಿ ಒಂದು ದಿನದ ಹಿಂದಷ್ಟೇ ನೋಟಿಸ್ ನೀಡಿ, ಕಂಗನಾ ಅವರಿಗೆ ಸೇರಿದ ಕಟ್ಟಡವನ್ನು ಸೆಪ್ಟೆಂಬರ್ 9ರಂದು ಧ್ವಂಸಗೊಳಿಸಲಾಯಿತು. ಇದಕ್ಕೂ ಮೊದಲು ಶಿವಸೇನೆಯ ನಾಯಕರು ಹಾಗೂ ಪಕ್ಷದ ಗೂಂಡಾಗಳು ಕಂಗನಾ ಅವರಿಗೆ ಹಿಮಾಚಲ ಪ್ರದೇಶದಿಂದ ಮುಂಬೈಗೆ ಮರಳದಂತೆ ಮತ್ತೆ ಮತ್ತೆ ಬೆದರಿಕೆ ಒಡ್ಡಿದ್ದರು. ಬೆದರಿಕೆ ಒಡ್ಡಿದವರಲ್ಲಿ ರಾಜ್ಯದ ಗೃಹ ಸಚಿವರೂ ಒಬ್ಬರಾಗಿದ್ದರು. ಅಲ್ಲದೆ, ಪಕ್ಷದ ಕೆಲವು ನಾಯಕರು ಕಂಗನಾ ವಿರುದ್ಧ ಕೊಳಕು ದೂಷಣೆಗಳನ್ನೂ ಮಾಡಿದ್ದರು. ಇಂಥದ್ದನ್ನೆಲ್ಲ ದೇಶ ಸಹಿಸಿಕೊಳ್ಳುವುದಾದರೆ, ಪ್ರಜಾತಂತ್ರಕ್ಕೆ ವಿದಾಯ ಹೇಳಿ ‘ಗೂಂಡಾ ರಾಜ್ಯ’ ವ್ಯವಸ್ಥೆಗೆ ತೆರೆದುಕೊಳ್ಳಬೇಕಾಗುತ್ತದೆ.

ಕಂಗನಾ ರಕ್ಷಣೆಗೆ ಧಾವಿಸಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಂ ಠಾಕೂರ್ ಅವರು, ಇಂತಹ ನಡೆಗಳ ಹಿಂದೆ ದ್ವೇಷದ ರಾಜಕಾರಣ ಇದೆ ಎಂದು ಹೇಳಿದ್ದಾರೆ. ‘ಹಿಮಾಚಲದ ಪುತ್ರಿಗೆ ಆಗಿರುವ ಅವಮಾನವು ಸಹಿಸಲು ಅಸಾಧ್ಯ’ ಎಂದೂ ಅವರು ಹೇಳಿದ್ದಾರೆ. ಈ ನಟಿಯನ್ನು ಬೆದರಿಸಲು ಶಿವಸೇನೆಯು ಸರ್ಕಾರದ ಶಕ್ತಿಯನ್ನು ಹಾಗೂ ಪಕ್ಷದ ಗೂಂಡಾಗಳನ್ನು ಬಳಸಿಕೊಂಡಿರುವುದರ ಪರಿಣಾಮವಾಗಿ ಹಿಮಾಚಲ ಪ್ರದೇಶ ಸರ್ಕಾರವು ಕಂಗನಾ ಅವರಿಗೆ ‘ವೈ ಪ್ಲಸ್’ ಶ್ರೇಣಿಯ ಭದ್ರತೆ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಬೇಕಾಯಿತು. ಮುಂದೆ ಏನಾಗಬಹುದು ಎಂಬ ವಿಚಾರದಲ್ಲಿ ಇವೆಲ್ಲವೂ ಮಹಾರಾಷ್ಟ್ರದ ಮುಖ್ಯಮಂತ್ರಿ
ಯನ್ನು ಎಚ್ಚರಿಸಬೇಕು. ಏಕೆಂದರೆ, ಇತರ ರಾಜ್ಯಗಳ ನಾಗರಿಕರ ವಿಚಾರದಲ್ಲಿ ಶಿವಸೇನೆಯ ಕಾರ್ಯಕರ್ತರು ನಡೆದುಕೊಳ್ಳುವ ರೀತಿಯನ್ನು ಯಾರೂ ಸಹಿಸುವುದಿಲ್ಲ.

ಸೂರ್ಯ ಪ್ರಕಾಶ್

ಕಟ್ಟಡವನ್ನು ಧ್ವಂಸಗೊಳಿಸಿದ ಕ್ರಮ ‘ತೀವ್ರ ಖಂಡನೀಯ’ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಅದು ಬಿಎಂಸಿಯನ್ನು (ಬೃಹನ್‌ ಮುಂಬೈ ಮುನಿಸಿಪಲ್‌ ಕಾರ್ಪೊರೇಷನ್‌) ತರಾಟೆಗೆ ತೆಗೆದುಕೊಂಡಿದೆ ಸಹ. ಬಿಎಂಸಿ ಕೈಗೊಂಡ ಕ್ರಮದ ಹಿಂದೆ ದುರುದ್ದೇಶ ಇದ್ದಂತಿದೆ ಎಂದೂ ಕೋರ್ಟ್‌ ಹೇಳಿದೆ. ಬಿಎಂಸಿ ಹೇಳುತ್ತಿರುವ ‘ಅಕ್ರಮ’ ಕಟ್ಟಡವು ರಾತ್ರೋರಾತ್ರಿ ನಿರ್ಮಾಣ ಆಗಿದ್ದಲ್ಲ. ಹೀಗಿದ್ದರೂ, ಬಿಎಂಸಿ ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚೆತ್ತು, ಕಂಗನಾ ನಗರದಲ್ಲಿ ಇಲ್ಲದಿದ್ದಾಗಲೇ ಅವರಿಗೆ ನೋಟಿಸ್ ಜಾರಿ ಮಾಡಿ, 24 ಗಂಟೆ ಮಾತ್ರ ಸಮಯಾವಕಾಶ ನೀಡಿ ಕಟ್ಟಡ ಧ್ವಂಸಗೊಳಿಸಲು ಮುಂದಾಯಿತು. ಇವೆಲ್ಲವೂ ಬಿಎಂಸಿಯ ಕೃತ್ಯವು ದುರುದ್ದೇಶದಿಂದ ಕೂಡಿತ್ತು ಎಂಬುದನ್ನು ಹೇಳುತ್ತವೆ.

ಬಿಎಂಸಿ ಪರ ವಕೀಲರು ಸಮಯಕ್ಕೆ ಸರಿಯಾಗಿ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಬಿಎಂಸಿ ಆಯುಕ್ತರನ್ನು ಸಂಪರ್ಕಿಸಲು ತಾನು ಯತ್ನಿಸಿದಾಗ ಅವರ ಮೊಬೈಲ್ ಫೋನ್ ಸ್ವಿಚ್ಡ್‌ ಆಫ್ ಸ್ಥಿತಿಯಲ್ಲಿತ್ತು ಎಂಬುದನ್ನು ಕೋರ್ಟ್‌ ಹೇಳಿದೆ. ಈ ನಡುವೆಯೇ ಧ್ವಂಸ ಕಾರ್ಯ ಮುಂದುವರಿದಿತ್ತು. ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಇತರ ಕಟ್ಟಡಗಳ ವಿಚಾರದಲ್ಲಿಯೂ ಬಿಎಂಸಿ ಇಷ್ಟೇ ಚುರುಕಾಗಿ ಕ್ರಮ ಜರುಗಿಸುತ್ತದೆಯೇ ಎಂದೂ ಕೋರ್ಟ್‌ ಆಶ್ಚರ್ಯ ವ್ಯಕ್ತಪಡಿಸಿದೆ. ಕಟ್ಟಡದ ಧ್ವಂಸ ಕಾರ್ಯ ಪೂರ್ಣಗೊಳ್ಳುವವರೆಗೂ ಅದಕ್ಕೆ ಸಂಬಂಧಿಸಿದ ವಿಚಾರಣೆ ತಡೆಯಲು ಬಿಎಂಸಿ ನಡೆಸಿದ ಪ್ರಯತ್ನಗಳನ್ನು ಕೋರ್ಟ್‌ ಸೆಪ್ಟೆಂಬರ್ 9ರಂದು ನೀಡಿದ ಆದೇಶದಲ್ಲಿ ದಾಖಲಿಸಿದೆ. ಇದು ಕಾರ್ಯಾಂಗದ ಉದ್ಧಟತನ ಹಾಗೂ ನ್ಯಾಯಾಂಗದ ಬಗ್ಗೆ ಇರುವ ಅಗೌರವವನ್ನು ತೋರಿಸುತ್ತದೆ.

ಮುಂಬೈನ ಮಾಲೀಕತ್ವವು ಶಿವಸೇನೆಯ ಕೈಯಲ್ಲಿ ಇಲ್ಲ ಎಂಬುದನ್ನು ಆ ಪಕ್ಷಕ್ಕೆ ಹೇಳಬೇಕಿದೆ. ಅವರು ಅದು ತಮ್ಮ ಬಳಿ ಇದೆ ಎಂಬ ಭ್ರಮೆಯಲ್ಲಿ ಬಹುಕಾಲ ಕಳೆದಿದ್ದಾರೆ. ಮರಾಠಿ ಭಾಷಿಕರಿಗಾಗಿ ಪ್ರತ್ಯೇಕ ರಾಜ್ಯ ರಚಿಸಬೇಕು ಎಂಬ ಆಗ್ರಹ ಗಟ್ಟಿಯಾಗುತ್ತಿದ್ದ ಸಂದರ್ಭದಲ್ಲೇ, ಬಾಂಬೆಯನ್ನು (ಆಗ ಈ ನಗರವನ್ನು ಹಾಗೇ ಕರೆಯಲಾಗುತ್ತಿತ್ತು) ಕೇಂದ್ರಾಡಳಿತ ಪ್ರದೇಶವನ್ನಾಗಿಸಬೇಕು ಎಂದು ಗುಜರಾತ್ ಮೂಲದವರು ಹಾಗೂ ಇತರ ಕೆಲವರು ಆಗ್ರಹಿಸಿದ್ದರು. ಆಗಿನಿಂದಲೂ ಮುಂಬೈನ ಜನಸಂಸ್ಕೃತಿಯು ಕಾಸ್ಮೊಪಾಲಿಟನ್ ಆಗಿಯೇ ಮುಂದುವರಿದಿದೆ. ಭಾಷಾ ಅಂಧಾಭಿಮಾನದ ವಿಷವನ್ನು ಮುಂಬೈನ ರಾಜಕೀಯದಲ್ಲಿ ತುರುಕಲು ಶಿವಸೇನೆ ಯತ್ನಿಸಿದರೂ, ಈ ನಗರವು ತನಗಿರುವ ಅಂತರರಾಷ್ಟ್ರೀಯ ಸ್ಪರ್ಶವನ್ನು ಕಳೆದುಕೊಳ್ಳಲು ಒಪ್ಪಿಲ್ಲ.

ಭಾಷಾವಾರು ಪ್ರಾಂತ್ಯಗಳ ಆಯೋಗದ ಎದುರು 1948ರಲ್ಲಿ ‘ಗುಜರಾತ್ ಸಂಶೋಧನಾ ಸೊಸೈಟಿ’ಯ ಅಧ್ಯಕ್ಷರು ಮನವಿಯೊಂದನ್ನು ಸಲ್ಲಿಸಿದ್ದರು. ಮರಾಠಿ ಭಾಷಿಕರಿಗೆ ಒಂದು ರಾಜ್ಯ ರೂಪಿಸುವ ಆಲೋಚನೆ ಸಾಕಾರಗೊಳ್ಳುವುದೇ ಆದರೆ, ಬಾಂಬೆಯ ಆಡಳಿತವನ್ನು ಕೇಂದ್ರದ ಕೈಗೆ ನೀಡಬೇಕು ಎಂದು ಕೋರಿದ್ದರು. ಭಾಷಾವಾರು ರಾಜ್ಯಗಳ ರಚನೆಯ ಬೇಡಿಕೆ ಬಗ್ಗೆ ಪರಿಶೀಲಿಸಲು ಸಂವಿಧಾನ ರಚನಾ ಸಭೆಯು ಈ ಆಯೋಗವನ್ನು ನೇಮಿಸಿತ್ತು. ‘ಬಾಂಬೆ ನಗರ, ಅದರ ಬಂದರು ಹಾಗೂ ಸುತ್ತಲಿನ ಪ್ರದೇಶಗಳನ್ನು ಕೇಂದ್ರದ ಅಧೀನದ ಪ್ರತ್ಯೇಕ ಪ್ರಾಂತ್ಯವಾಗಿಸಬೇಕು. ಅಂತರರಾಷ್ಟ್ರೀಯ ದೃಷ್ಟಿಕೋನ ಹೊಂದಿರುವ ಅಖಿಲ ಭಾರತ ನಗರ ಬಾಂಬೆ. ಇಲ್ಲಿ ಭಾರತದ ಎಲ್ಲ ಪ್ರಾಂತ್ಯಗಳ ಜನ ತಮ್ಮದೇ ಆದ ಪಾಲು ಹೊಂದಿದ್ದಾರೆ. ವಿದೇಶಿಯರೂ ಇಲ್ಲಿ ತಮ್ಮದೇ ಆದ ಪಾತ್ರ ನಿಭಾಯಿಸುತ್ತಿದ್ದಾರೆ. ಹಾಗಾಗಿ, ಬಾಂಬೆಯಂತಹ ಅಂತರರಾಷ್ಟ್ರೀಯ ಬಂದರನ್ನು ಮಹಾರಾಷ್ಟ್ರಕ್ಕೆ ಹಸ್ತಾಂತರ ಮಾಡುವುದು ಸರಿಯಲ್ಲ’ ಎಂದು ಮನವಿಯಲ್ಲಿ ಹೇಳಲಾಗಿತ್ತು.

ಅಲ್ಲಿ ವ್ಯಕ್ತವಾಗಿರುವ ಭಾವನೆಗೆ ಇಂದಿಗೂ ಬೆಲೆ ಇದೆ. ಶಿವಸೇನೆಗೆ ಸೇರಿದ ಒರಟು, ಸಂಕುಚಿತ ಭಾವನೆಯ ರಾಜಕಾರಣಿಗಳಿಗೆ ಸೇರಿದ್ದಲ್ಲ ಮುಂಬೈ. ಕಂಗನಾ ಅವರು ಮುಂಬೈ, ಮಹಾರಾಷ್ಟ್ರ ಮತ್ತು ಮರಾಠಿ ಜನರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ ಎಂದು ಬಿಂಬಿಸಲು ಶಿವಸೇನೆ ಪ್ರಯತ್ನಿಸುತ್ತಿದೆ. ಆದರೆ, ವಾಸ್ತವ ಹಾಗಿಲ್ಲ. ಕಂಗನಾ ಅವರು ಇವರ್‍ಯಾರ ಮೇಲೆಯೂ ವಾಗ್ದಾಳಿ ನಡೆಸಿಲ್ಲ; ಅವರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಶಿವಸೇನೆ ಹಾಗೂ ಅದು ಗೂಂಡಾ ರಾಜ್‌ಗೆ ಪ್ರೋತ್ಸಾಹ ನೀಡುತ್ತಿರುವುದರ ವಿರುದ್ಧ. ಮುಂಬೈ ಪ್ರವೇಶದ ಕೀಲಿಕೈಯನ್ನು ಭಾರತದ ಜನ ಯಾವತ್ತಿಗೂ ಶಿವಸೇನೆಯ ಕೈಗೆ ನೀಡುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು ಭಾರತ ಕಂಡ ಅತ್ಯುತ್ತಮ ರಾಜರಲ್ಲಿ ಒಬ್ಬರು ಎಂದು ಭಾರತೀಯರೆಲ್ಲರೂ ಹೆಮ್ಮೆಪಡುತ್ತಾರೆ. ಅವರು ಭಾರತೀಯ ರಾಷ್ಟ್ರೀಯತೆಯ ಸಂಕೇತವೂ ಹೌದು. ಅವರ ಶೌರ್ಯ ಹಾಗೂ ಭಾರತೀಯ ನಾಗರಿಕತೆಯ ರಕ್ಷಣೆಗೆ ಶತಮಾನಗಳ ಹಿಂದೆ ನೀಡಿದ ಅಮೂಲ್ಯ ಕೊಡುಗೆಗಾಗಿ ಅವರನ್ನು ಪ್ರೀತಿಯಿಂದ ಕಾಣಲಾಗುತ್ತದೆ. ಅವರನ್ನು ತಮ್ಮವರನ್ನಾಗಿಸಿಕೊಳ್ಳಲು ಹಾಗೂ ಅವರನ್ನು ಮರಾಠಿಗರಿಗೆ ಮಾತ್ರ ಸೀಮಿತಗೊಳಿಸಲು ಶಿವಸೇನೆ ನಡೆಸುತ್ತಿರುವ ಯತ್ನಕ್ಕೆ ಪ್ರತಿರೋಧ ಒಡ್ಡಬೇಕು.

ನಟರು, ನಿರ್ದೇಶಕರು ಮತ್ತು ಇತರ ವೃತ್ತಿಪರರಿಗೆ ಮುಂಬೈ ಏನೆಲ್ಲಾ ನೀಡಿದೆ ಎಂಬ ಬಗ್ಗೆಯೂ ಶಿವಸೇನೆಯ ನಾಯಕರು ಮಾತನಾಡುತ್ತಿದ್ದಾರೆ. ಆದರೆ, ಈ ವೃತ್ತಿಪರರೆಲ್ಲ ಮುಂಬೈಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂಬುದನ್ನು ಅವರು ಮರೆಯುತ್ತಿರುವಂತೆ ಕಾಣುತ್ತಿದೆ. ವಾಣಿಜ್ಯ, ವ್ಯಾಪಾರ, ತಯಾರಿಕೆ, ಮನರಂಜನೆ ಸೇರಿದಂತೆ ಬೇರೆ ಬೇರೆ ಉದ್ಯಮ ರಂಗಗಳ ಅತ್ಯುತ್ತಮ ಪ್ರತಿಭೆಗಳು ಈ ನಗರದತ್ತ ಆಕರ್ಷಿತಗೊಂಡ ಕಾರಣದಿಂದಾಗಿ ಮುಂಬೈ ಇಂದಿನ ಮಟ್ಟಕ್ಕೆ ಬೆಳೆಯುವಂತಾಯಿತು. ಈ ವಿಚಾರಗಳ ಬಗ್ಗೆ ಶಿವಸೇನೆಯ ನಾಯಕರು ಆಲೋಚನೆ ನಡೆಸಬೇಕು. ಅವರು ತಮ್ಮ ಸಣ್ಣತನದ ರಾಜಕಾರಣವನ್ನೇ ಮುಂದುವರಿಸಿಕೊಂಡು ಹೋದರೆ, ಇಡೀ ದೇಶವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT