ಬುಧವಾರ, ಫೆಬ್ರವರಿ 1, 2023
27 °C
ಏರುತ್ತಿರುವ ಭೂಉಷ್ಣತೆಗೆ ಜಗತ್ತು ಬೆಚ್ಚಿದೆ, ಪರಿಹಾರಕ್ಕೆ ಕೈಜೋಡಿಸಬೇಕಿದೆ

ಟಿ.ಆರ್‌ ಅನಂತರಾಮು ಅಂಕಣ - ವಿಶ್ಲೇಷಣೆ| ನಮ್ಮ ಭವಿಷ್ಯ ಯಾರ ಕೈಯಲ್ಲಿ?

ಟಿ.ಆರ್.‌ಅನಂತರಾಮು Updated:

ಅಕ್ಷರ ಗಾತ್ರ : | |

ನೊಬೆಲ್‌ ಪ್ರಶಸ್ತಿ ಪ್ರಕಟವಾದಾಗ ಸಾಮಾನ್ಯವಾಗಿ ಅದು ಅಕಡೆಮಿಕ್‌ ವಲಯದಲ್ಲಿ ಹೆಚ್ಚು ಚರ್ಚೆಗೆ ಬರುತ್ತದೆ; ಜನಸಾಮಾನ್ಯರು ಸಂಭ್ರಮಿಸುವುದು ವಿರಳ. ಆದರೆ ಈ ವರ್ಷ ಶರೀರ ವಿಜ್ಞಾನ ವಿಭಾಗದಲ್ಲಿ ಸ್ವೀಡನ್ನಿನ ಸ್ವಾಂತೆ ಪಾಬೋ ಅವರಿಗೆ ನೊಬೆಲ್‌ ಪ್ರಶಸ್ತಿ ಸಂದಿದೆ ಎಂದಾಗ ಅದು ಕುತೂಹಲ ಹುಟ್ಟಿಸಿತ್ತು. ಆತನ ಅಧ್ಯಯನವು ನಿರ್ವಂಶವಾದ ಮನುಷ್ಯನ ಪ್ರಭೇದಗಳ ವಂಶ ವಾಹಿಗಳನ್ನು ಕುರಿತಾಗಿತ್ತು. ಹಿಂದೆ ಮನುಷ್ಯನ ಎಷ್ಟು ಪ್ರಭೇದಗಳಿದ್ದವು, ಅವೆಲ್ಲ ಏನಾದವು ಎಂದು ವಿಕಾಸದ ಎಳೆ ಹಿಡಿದು ನಡೆಸಿದ ಅಧ್ಯಯನ ಅದಾಗಿತ್ತು. ಇದರ ಹಿಂದೆಯೇ ಭೂಮಿಯಿಂದ ಈಗಿನ ಮನುಷ್ಯ ನಿರ್ವಂಶವಾಗಬಹುದೇ ಎಂಬ ಆತಂಕವೂ ಹುಟ್ಟಿತು.


ಟಿ.ಆರ್.‌ಅನಂತರಾಮು

ಪ್ರಭೇದ ಎಂದರೆ ಹೆಚ್ಚು ಸಂಕೀರ್ಣ ಅರ್ಥಕ್ಕೆ ಹೋಗದೆ ಚಿಟ್ಟೆಗಳನ್ನು ಗಮನಿಸಿದರಾಯಿತು. ಅವೆಷ್ಟು ವಿಧದ ಚಿಟ್ಟೆಗಳು ನಿಮ್ಮ ಕಣ್ಣಮುಂದೆ ಹಾದಿಲ್ಲ? ಈ ಒಂದೊಂದು ವಿಧವನ್ನೇ ಪ್ರಭೇದ ಎನ್ನುವುದು. ಜೀವಿ ವಿಜ್ಞಾನಿಗಳ ಲೆಕ್ಕದಲ್ಲಿ ಚಿಟ್ಟೆಗಳಲ್ಲಿ 17,500 ಪ್ರಭೇದಗಳಿವೆ. ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನದಲ್ಲಿ ಸಾವಿರಾರು ಚಿಟ್ಟೆಗಳಿದ್ದರೂ ಅವುಗಳ ಪ್ರಭೇದ ಮಾತ್ರ 48 ಅಷ್ಟೇ. ಇದೇ ತರ್ಕವನ್ನು ಮನುಷ್ಯನಿಗೆ ವಿಸ್ತರಿಸಿದರೆ ಸೋಜಿಗವಾಗುತ್ತದೆ. ಕೇವಲ ಒಂದೇ ಒಂದು ಪ್ರಭೇದ ಉಳಿದಿರುವುದು! ಅದು ಹೋಮೋಸೆಪಿಯನ್ (ಮತಿವಂತ ಮಾನವ). ಬ್ರಿಟಿಷರಂತೆ ಚೀನೀಯರು ಏಕಿಲ್ಲ? ಆಫ್ರಿಕಾದವ ರಂತೆ ಅಮೆರಿಕದವರು ಏಕಿಲ್ಲ? ಮೆಕ್ಸಿಕನ್ನರಂತೆ ಅರಬರು ಏಕಿಲ್ಲ? ಸ್ಪಷ್ಟವಾಗಿ ಇವರನ್ನೆಲ್ಲ ಗುರುತಿಸಬಹುದು. ಇವರ ಬಾಹ್ಯ ಚಹರೆಯಲ್ಲಿ ವ್ಯತ್ಯಾಸವಿದೆ, ಚರ್ಮದ ಬಣ್ಣದಲ್ಲಿ ವ್ಯತ್ಯಾಸವಿದೆ. ಆದರೆ ದೇಹದೊಳಗಿನ ಅಂಗಾಂಗಗಳು ಎಲ್ಲರದ್ದೂ ಒಂದೇ ಪ್ರಮಾಣ. ಏನೇ ಇದ್ದರೂ ಇವರು ಒಂದೇ ಪ್ರಭೇದಕ್ಕೆ ಸೇರಿದವರು. ಜನಾಂಗ (ರೇಸ್‌) ಎನ್ನುವ ಗುಂಪಿಗೆ ಸೇರುತ್ತಾರೆ. ಕವಿ ಅಡಿಗರು ಹೇಳಿದ್ದಾರಲ್ಲ, ‘ನಾವೆಲ್ಲರೂ ಒಂದೆ ಜಾತಿ, ಒಂದೆ ಮತ, ಒಂದೆ ಕುಲ; ನಾವು ಮನುಜರು’. ಇದು ವೈಜ್ಞಾನಿಕ ವಾಗಿಯೂ ಸತ್ಯ. ಪ್ರಶ್ನೆ ಎಂದರೆ ಮನುಷ್ಯನಲ್ಲಿ ಒಂದೇ ಒಂದು ಪ್ರಭೇದ ಉಳಿದದ್ದು ಏಕೆ?

ನಮಗಿಂತ ಹಿಂದೆ ಎಂತೆಂಥ ವಿಚಿತ್ರ ಮಾನವ ಪ್ರಭೇದಗಳಿದ್ದವು. ಹೋಮೋ ಎಂಬ ವಂಶದಲ್ಲೇ ಅಸ್ಟ್ರೆಲೋಪಿತಿಕಸ್, ಹೋಮೋಹ್ಯಾಬಿಲಸ್‌, ಹೋಮೋಎರಕ್ಟಸ್‌, ಹೈಡಲ್‌ಬರ್ಗೆನ್‌ಸಿಸ್‌- ಹೀಗೆ. ಹಿಂದಿನವರ ಪಳೆಯುಳಿಕೆಗಳನ್ನು ಜೋಡಿಸಿದರೆ ವೈವಿಧ್ಯ ಕಾಣಬಹುದು. ವಿಚಿತ್ರವೆಂದರೆ, ಈ ಪ್ರಭೇದಗಳು ಒಟ್ಟೊಟ್ಟಿಗೆ ಜೀವಿಸಿದಂತಿಲ್ಲ. ಕನಿಷ್ಠ ಒಂದೊಂದು ಪ್ರಭೇದ ವಿಕಾಸವಾಗಲು ಐದು ಲಕ್ಷ ವರ್ಷ ಬೇಕೆಂದು ಲೆಕ್ಕಹಾಕಿದ್ದಾರೆ. ಆಧುನಿಕ ಮನುಷ್ಯ ಭೂಮಿಯ ಮೇಲೆ ಸ್ಪಷ್ಟವಾಗಿ ರೂಪುಗೊಂಡಿದ್ದು ಮೂರು ಲಕ್ಷ ವರ್ಷಗಳಿಂದ ಐದು ಲಕ್ಷ ವರ್ಷಗಳ ಹಿಂದೆ. ಆದರೆ ಆ ಹಿಂದಿನ ಮನುಷ್ಯ ಪ್ರಭೇದಗಳು ಏಕೆ ನಾಶವಾಗಿಹೋದವು? ಒಂದೊಂದು ಪ್ರಭೇದದ ಸಂಖ್ಯೆ ಹೆಚ್ಚಾಗಿರಲಿಲ್ಲ. ನಿರ್ದಿಷ್ಟ ಪ್ರದೇಶಕ್ಕಷ್ಟೇ ಸೀಮಿತವಾಗಿ ದ್ದವು. ಪ್ರತಿಬಾರಿ ಹೊಸ ಪ್ರಭೇದ ಹುಟ್ಟಿದಾಗ, ಹಿಂದಿನವು ಹಿಂದಕ್ಕೆ ಸರಿದವು, ಆವಾಸಕ್ಕಾಗಿ, ಆಹಾರಕ್ಕಾಗಿ ಸ್ಪರ್ಧೆ ಇತ್ತು. ಆಧುನಿಕ ಮನುಷ್ಯ ಎಲ್ಲರನ್ನೂ ಮಟ್ಟಹಾಕಿ ಮೆಟ್ಟಿನಿಂತು ಜಗತ್ತಿನ ಎಲ್ಲ ಭಾಗದಲ್ಲೂ ತನ್ನ ಸಾಮ್ರಾಜ್ಯ ವಿಸ್ತರಿಸುತ್ತ ಹೋದ. ಸಹಾರಾದ ಮರುಭೂಮಿಯ ಶಾಖಕ್ಕೂ ಹೊಂದಿಕೊಂಡ, ಉತ್ತರಧ್ರುವದ ಅತಿಶೈತ್ಯಕ್ಕೂ ಹೊಂದಿಕೊಂಡ. ಈ ಹೊಂದಾಣಿಕೆಯೇ ಬದುಕುಳಿಯುವ ಸಾಮರ್ಥ್ಯವನ್ನು ಗಳಿಸಿಕೊಟ್ಟಿತು.

ಈಗಿನ ಮಾನವ ಮುಂದೆ ಹೇಗೆ ವಿಕಾಸವಾಗಬಹುದು ಎಂಬುದನ್ನು ಭವಿಷ್ಯವಾದಿಗಳಿಗೆ ಬಿಡೋಣ. ಬದಲಾದ ಹವಾಗುಣ, ಇಡೀ ಜೀವಿ ವಿಕಾಸದಲ್ಲಿ ಮನುಷ್ಯನೂ ಸೇರಿದಂತೆ ಬದಲಾವಣೆ ತಂದಿದೆ. ಅದರಲ್ಲೂ ಸಸ್ಯ ಸಂಪತ್ತಿನ ಬದಲಾವಣೆ ಹೊಸ ಪ್ರಭೇದಗಳಿಗೆ ಅವಕಾಶ ಕೊಟ್ಟಿದೆ. ಎಸ್ಕಿಮೋಗಳು, ಅಂಡಮಾನಿನ ದಟ್ಟ ಕಾಡಿನಲ್ಲಿ ವಾಸಿಸುತ್ತಿರುವ, ನಾಗರಿಕತೆಯನ್ನೇ ಕಾಣದ ಜರವಾ ಕಾಡುವಾಸಿಗಳಿಗೆ ಸ್ಥಳ ಬದಲಾವಣೆಯೇ ಇಲ್ಲ. ಆಹಾರ ಪದ್ಧತಿಯಲ್ಲೂ ವ್ಯತ್ಯಯವಿಲ್ಲ, ಸ್ಪರ್ಧೆಯೂ ಇಲ್ಲ. ಅವರು ವಿಕಾಸವಾಗಿ ಬೇರೆ ಪ್ರಭೇದಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇಲ್ಲ. ಇಪ್ಪತ್ತು ಲಕ್ಷ ವರ್ಷಗಳ ಹಿಂದೆ ಮನುಷ್ಯ ಬಲು ತೀವ್ರವಾದ ಹವಾಗುಣ ಬದಲಾವಣೆ ಎದುರಿಸಬೇಕಾಯಿತು. ಪ್ರಮುಖವಾಗಿ ಸಸ್ಯ ಪ್ರಭೇದಗಳು ನಾಶವಾದವು, ಪ್ರಾಣಿಗಳನ್ನು ಕೊಲ್ಲಲು ಬೇಟೆಗೆ ಇಳಿದ, ಕಲ್ಲಿನಿಂದ ಆಯುಧ ತಯಾರಿಸಿದ. ಹಿಂದಿನ ಪ್ರಭೇದ
ಗಳಿಗಿಂತ ಹೆಚ್ಚು ಬುದ್ಧಿಯನ್ನು ಬಳಸಬೇಕಾಯಿತು. ಮಿದುಳು ವಿಕಾಸವಾಗಿ ಹೆಚ್ಚು ಸಮರ್ಥವಾಯಿತು.

ಈಗಿನ ಸಮಸ್ಯೆ ಏನು? ಇಡೀ ಭೂಮಂಡಲದಿಂದ ಮನುಷ್ಯ ಏಕಾಏಕಿ ನಿರ್ಗಮಿಸಬಹುದೆ– ಆರೂವರೆ ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳು ನಿರ್ಗಮಿಸಿದಂತೆ? ಜೀವಿ ವಿಜ್ಞಾನಿಗಳು ಇಂಥ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಒಂದುವೇಳೆ ಕ್ಷುದ್ರಗ್ರಹಗಳು ಅಪ್ಪಳಿಸುವ ಸಾಧ್ಯತೆಗಳು ಇದ್ದರೆ, ಅವುಗಳ ಕಕ್ಷೆಯನ್ನೇ ಬದಲಿಸುವ ತಾಂತ್ರಿಕ ನೈಪುಣ್ಯ ಈಗ ಸಾಧಿತವಾಗಿದೆ. ಅಂದರೆ ಆಕಾಶಕಾಯಗಳು ಅಪ್ಪಳಿಸಿ ಮನುಷ್ಯನನ್ನು ನಿರ್ವಂಶ ಮಾಡಲಾರವು. ಈಗಿನದು ಸಂಪೂರ್ಣವಾಗಿ ಬೇರೆಯದೇ ಆದ ಸಮಸ್ಯೆ. ಅದು ನಾವು ಚರಿತ್ರೆಯಿಂದ ಪಾಠ ಕಲಿಯದ ಸಮಸ್ಯೆ. ಬದಲಾದ ಹವಾಗುಣವು ಸಿಂಧೂ ಸಂಸ್ಕೃತಿಯನ್ನೇ ನಾಶ ಮಾಡಿತು ಎಂಬುದು ಒಂದು ವಾದ. ಜನಸಂಖ್ಯೆ ಹೆಚ್ಚಾದಾಗ ಆಹಾರದ ಪೂರೈಕೆಯೂ ಹೆಚ್ಚಬೇಕೆಂಬುದು ಸರಳ ತರ್ಕ. ಇಲ್ಲೇ ಬದುಕುಳಿಯುವ ತಂತ್ರಕ್ಕೆ ಪೆಟ್ಟಾಗುವುದು. ನಮ್ಮ ಸಂಪನ್ಮೂಲಗಳು ಇನ್ನೆಷ್ಟು ಕಾಲ ಬರುತ್ತವೆ ಎಂಬ ದೂರಾಲೋಚನೆ ನಮಗಿದ್ದಂತಿಲ್ಲ. ಸೋಮಾಲಿಯ ದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವವರ ಸಂಖ್ಯೆ ನೆನೆದಾಗ ಗಾಬರಿಯಾಗುತ್ತದೆ. ಇಡೀ ದೇಶಕ್ಕೆ ದೇಶವೇ ಅಪೌಷ್ಟಿಕತೆಯಿಂದ ನರಳಿದರೆ ಅಲ್ಲಿ ಮುಂದೆ ದುರ್ಬಲ ಸಂತಾನಕ್ಕೆ ಅವಕಾಶವಾಗುತ್ತದೆ. ಅಂಥ ಸಂದರ್ಭದಲ್ಲಿ ಬದುಕುಳಿಯುವ ಸಾಧ್ಯತೆ ಎಷ್ಟು?

ಈಗ ತಂತ್ರಜ್ಞಾನ ಎಷ್ಟು ಪ್ರಬಲವಾಗಿದೆ ಎಂದರೆ, ಜೀವಿ ವಿಕಾಸವನ್ನೇ ಬದಲಿಸುವಷ್ಟು ಶಕ್ತವಾಗಿದೆ. ಜೀನ್‌ ಎಡಿಟಿಂಗ್‌ ಎಂಬ ಕಲ್ಪನೆ ಸಂಪೂರ್ಣವಾಗಿ ರಾಜಕೀಯ ಮತ್ತು ನೈತಿಕ ಬಂಧದಿಂದ ಹೊರಬರುವುದಾದರೆ, ಮುಂದಿನ ಪೀಳಿಗೆಗಳನ್ನು ಆನುವಂಶೀಯ ಕಾಯಿಲೆಗಳು ಪೀಡಿಸಲಾರವು. ಬ್ಯಾಕ್ಟೀರಿಯ ವೈರಸ್‌ಗಳ ಹಾವಳಿ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಹಾಗಿದ್ದೂ ಮನುಷ್ಯ ಸಂತತಿ ಸಂಪೂರ್ಣವಾಗಿ ನಾಶವಾಗಿಲ್ಲ. ಇತ್ತೀಚೆಗೆ ಲ್ಯಾನ್‌ಸೆಟ್‌ ವೈದ್ಯಕೀಯ ಪತ್ರಿಕೆ ವರದಿ ಮಾಡಿದಂತೆ, 2019ರಲ್ಲಿ ಭಾರತ ಒಂದರಲ್ಲೇ ಏಳು ಲಕ್ಷ ಮಂದಿಯನ್ನು ಕೊಂದದ್ದು ಕೇವಲ ಐದು ಪ್ರಭೇದದ ಬ್ಯಾಕ್ಟೀರಿಯಾಗಳು. ಆದರೆ ಇಡೀ ಜಗತ್ತಿನ ಎಲ್ಲ ಜೀವಿಗಳನ್ನೂ ಏಕಕಾಲಕ್ಕೆ ಇವು ಕೊಲ್ಲುವ ಸಾಧ್ಯತೆ ಬಿಲ್‌ಕುಲ್‌ ಇಲ್ಲ. ಮನುಷ್ಯನಿಗೆ ಅತಿ ದೊಡ್ಡ ಅನುಕೂಲವೆಂದರೆ, ಭೂಮಂಡಲದಲ್ಲಿ ಎಲ್ಲ ಪರಿಸರಕ್ಕೂ ಹೊಂದಿಕೊಂಡು ಸಂತಾನ ಬೆಳೆಸಿದ್ದಾನೆ. ಟಿಬೆಟಿಯನ್ನರನ್ನೇ ಗಮನಿಸಿ, ಅತಿ ಎತ್ತರದ ಭಾಗದಲ್ಲಿ ವಾಯುಗೋಳದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ. ಆದರೂ ಅದಕ್ಕೆ ಹೊಂದಿಕೊಂಡಿದ್ದಾರೆ. ಹಾಗಿಲ್ಲದಿದರೆ ಉನ್ನತ ಪ್ರದೇಶಗಳಲ್ಲಿ ಬದುಕುಳಿಯಲು ಸಾಧ್ಯವೇ ಇರುತ್ತಿರಲಿಲ್ಲ. ಆದರೆ ಈಗಿನ ಸಮಸ್ಯೆಗೆ ಬೇರೊಂದು ಕರಾಳ ಮುಖವಿದೆ. ಹವಾಗುಣ ಬದಲಾವಣೆ ಎಂದರೆ ಇಡೀ ಭೂಮಿಯ ಯಾವ ಭಾಗವನ್ನೂ ಬಿಡುವುದಿಲ್ಲ. ಸಮುದ್ರ, ಭೂಮಿ, ನದಿ, ಹಿಮನದಿ ಎಲ್ಲವೂ ಬದಲಾದ ಹವಾಗುಣಕ್ಕೆ ಸ್ಪಂದಿಸುತ್ತವೆ. ಇದೇ ಕಳವಳ ತಂದಿರುವ ಸಂಗತಿ. ಏರುತ್ತಿರುವ ಭೂಉಷ್ಣತೆಗೆ ಜಗತ್ತು ಬೆಚ್ಚಿದೆ

ನೈಸರ್ಗಿಕ ವಿಕೋಪಗಳು ಅಂದರೆ ಜ್ವಾಲಾಮುಖಿ, ಭೂಕಂಪ, ನೆರೆ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿಯು ಸ್ಥಳೀಯವಾಗಿ ಒಂದಷ್ಟು ಜನರನ್ನು ಹೊಸಕಿ ಹಾಕಬಹುದು. ಆದರೆ ಮನುಷ್ಯ ಇವುಗಳನ್ನೆಲ್ಲ ದಾಟಿಯೇ ಮುಂದೆ ಸಾಗಿರುವುದು. 2015ರಲ್ಲಿ ಆದ ಪ್ಯಾರಿಸ್‌ ಒಪ್ಪಂದ ಅದೇ ಎಚ್ಚರಿಕೆಯನ್ನು ಪುನರಾ ವರ್ತಿಸುತ್ತಿದೆ, ಈಗ ಇರುವುದಕ್ಕಿಂತ ಉಷ್ಣತೆ ಕೇವಲ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿದರೂ ಸಾಕು, ಇಡೀ ಭೂಮಂಡಲ ದಲ್ಲಿ ಹಂತಹಂತವಾಗಿ ಜೀವಿಗಳು ಕಣ್ಮರೆಯಾಗುವ ಸಾಧ್ಯತೆಗಳಿವೆ. ಕಲ್ಲಿದ್ದಲು, ತೈಲ ಮುಂತಾದ ಇಂಧನಗಳ ದಹನವನ್ನು ಕಡಿಮೆ ಮಾಡಿ ಎಂದು ಆ ಒಪ್ಪಂದ ಹೇಳುತ್ತಿದೆ. ನಮ್ಮ ಅಳಿವು ಉಳಿವು ಯಾರ ಕೈಯಲ್ಲಿದೆ ಎಂದರೆ, ‘ನಮ್ಮ ಕೈಯಲ್ಲೇ’ ಎಂಬ ಉತ್ತರ ಸ್ಪಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು