ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ ಯುದ್ಧಾಸ್ತ್ರವೇ, ಛೆ!

ವಿಜ್ಞಾನದಲ್ಲಿ ಬೇಡವೆಂದರೂ ರಾಜಕೀಯ ತಾನಾಗಿ ಬೆರೆತು ಪ್ರಧಾನಿಯನ್ನೂ ತಟ್ಟುತ್ತದೆ
Last Updated 9 ಮೇ 2019, 19:06 IST
ಅಕ್ಷರ ಗಾತ್ರ

ಜೀವಾಣುಯುದ್ಧದ ಪರಿಣಾಮ ಹೇಗಿರುತ್ತದೆ ಎಂಬುದನ್ನು ನೋಡುವುದಾದರೆ ಅರಲಗೋಡಿಗೆ ಬನ್ನಿ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಅಂಚಿನ ಗ್ರಾಮಪಂಚಾಯ್ತಿ ಇದು. ಮಂಗನ ಕಾಯಿಲೆಯ ನಾಭಿಕೇಂದ್ರ ಇದು. ಈ ಊರಲ್ಲಿ ಇದುವರೆಗೆ 22 ಜನರು ಪ್ರಾಣ ಬಿಟ್ಟಿದ್ದಾರೆ. ಕಾಯಿಲೆಗೆ ಸಿಕ್ಕು ಬದುಕಿ ಉಳಿದವರೂ ಹಾಸಿಗೆ ಬಿಟ್ಟೇಳಲಾರರು. ಸತ್ತ ಮಂಗಗಳಿಗಂತೂ ಲೆಕ್ಕವೇ ಇಲ್ಲ. ಸಾವಿರ ದಾಟಿರಬಹುದು ಎನ್ನಲಾಗುತ್ತಿದೆ.

ಅಡಿಕೆ ಫಸಲು ಉದುರಿವೆ, ಹೆಕ್ಕುವವರಿಲ್ಲ. ಕಾಳುಮೆಣಸಿನ ಫಸಲೂ ದಕ್ಕಲಿಲ್ಲ. ಭತ್ತದ ಕೊಯ್ಲು ಮಾಡಿ ಬಣವೆ ಹಾಕಿದ್ದರೂ ಅತ್ತ ಹೋಗುವವರಿಲ್ಲ; ಬಣವೆಯಲ್ಲೇ ಮಂಗ ಸತ್ತಿದೆ. ಕೂಲಿಗಳೂ ಬರುವುದಿಲ್ಲ. ರೋಗಾಣು ದಾಳಿಯ ಭೀತಿಯಿಂದ ಅನೇಕ ಕುಟುಂಬಗಳು ಊರು ಬಿಟ್ಟು ದೂರದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿವೆ. ನಾಯಿ, ಬೆಕ್ಕು, ಕೋಳಿ ಹುಂಜಗಳು ಅನಾಥವಾಗಿವೆ. ಬಾಳೆ, ಪಪಾಯಾ, ಮಗೆಸೌತೆ ಮತ್ತಿತರ ಫಸಲನ್ನು ಕಾಯಲು ಯಾರೂ ಇಲ್ಲದ್ದರಿಂದ ಮಂಗಗಳ ದಾಳಿ ಇನ್ನೂ ಹೆಚ್ಚಾಗಿದೆ. ಒಂದೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಷ್ಟೊಂದು ಅನರ್ಥವಾಗಿದ್ದು, ಮಂಗನ ಕಾಯಿಲೆ ಇಷ್ಟೊಂದು ಹಾವಳಿ ಎಬ್ಬಿಸಿದ್ದು ಬೇರೆಲ್ಲೂ ಇಲ್ಲ.

ಒಂದು ಸಮುದಾಯಕ್ಕೆ ಮಾನಸಿಕ, ದೈಹಿಕ ಜರ್ಝರಿತ ಕೊಟ್ಟು, ಆರ್ಥಿಕ ನಷ್ಟ ಉಂಟು ಮಾಡಿ, ಪೈರುಫಸಲು ಬಿಟ್ಟು ಜನರೆಲ್ಲ ಊರಿನಿಂದ ಕಾಲ್ತೆಗೆಯುವಂತೆ ಮಾಡುವುದೇ ದಾಳಿಯ ಉದ್ದೇಶವಾದರೆ ಕೆಎಫ್‍ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಒಂದು ಸಮರ್ಥ ಜೀವಾಣು ಯುದ್ಧಾಸ್ತ್ರವೇ ಆದೀತು. ಇತರೆಲ್ಲ ಯುದ್ಧಾಸ್ತ್ರಗಳೂ ಮನೆಮಠ, ಜಾನುವಾರು, ತೋಟಗದ್ದೆಗಳನ್ನು ಧ್ವಂಸ ಮಾಡುತ್ತವೆ. ಈ ವೈರಾಣು ಅದೇನನ್ನೂ ಮಾಡುವುದಿಲ್ಲ. ಅದು ಮನುಷ್ಯನಿಂದ ಮನುಷ್ಯನಿಗೆ ಹರಡುವ ಅಥವಾ ಆಸ್ಪತ್ರೆಗಳ ಮೂಲಕ ಹಬ್ಬುವ ಕಾಯಿಲೆಯೂ ಅಲ್ಲ. ಮಂಗ ಮತ್ತು ರೈತ ಈ ಎರಡು ‘ನಿರುಪಯುಕ್ತ’ ಜೀವಿಗಳನ್ನು ಮಾತ್ರ ಹೈರಾಣು ಮಾಡುತ್ತದೆ. ದಾಳಿ ಮುಗಿದ ಮೇಲೆ ಸೂಕ್ತ ಲಸಿಕೆ ಹಾಕಿಕೊಂಡ ಶತ್ರುಗಳು ಅಲ್ಲಿಗೆ ಬಂದು ಎಲ್ಲ ಸೊತ್ತಿನ ಯಜಮಾನಿಕೆ ಪಡೆಯಬಹುದು.

ವಾಸ್ತವದಲ್ಲಿ ಹೀಗಾಗಿರಬಹುದು ಎಂದು ಊಹಿಸುವುದೂ ತಪ್ಪಾದೀತು. ಇಷ್ಟಕ್ಕೂ ಮಲೆನಾಡಿನಂಥ ನತದೃಷ್ಟ ನಿಸರ್ಗವನ್ನು ಆಕ್ರಮಿಸಿಕೊಳ್ಳಲು ಯಾರು ಬಯಸುತ್ತಾರೆ? ಅಲ್ಲಿನವರು ತಾವಾಗಿ ಊರುಗಳನ್ನು ಖಾಲಿ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟೊಂದು ಸಮಸ್ಯೆಗಳು ಅಲ್ಲಿವೆ. ಬೆಳೆಗೆ ನಾನಾ ಕಾಯಿಲೆಗಳು, ಫಸಲಿಗೆ ಬೆಲೆಯಿಲ್ಲ, ಕೂಲಿಗಳು ಸಿಗುವುದಿಲ್ಲ. ಸಂಚಾರ ಸಂಪರ್ಕ, ಅನಾರೋಗ್ಯ, ಈಗೀಗಂತೂ ನೀರಿನದೂ ಸಮಸ್ಯೆ ಇದೆ. ವೈರಿ ದೇಶಗಳನ್ನು ಬಿಡಿ, ಧಾರ್ಮಿಕ ಉಗ್ರರೂ ನಕ್ಸಲ್‍ಗಳೂ ಇಂಥದ್ದೊಂದು ಜೀವಾಸ್ತ್ರವನ್ನು ಬಳಸಲಿಕ್ಕಿಲ್ಲ. ಅದರ ಬದಲು, ಈ ಅಸ್ತ್ರ ತಮಗೆ ಬೇಕೆಂದು ಮಂಗನ ಹಾವಳಿಯಿಂದ ತೀರ ಕಂಗೆಟ್ಟ ಸಹ್ಯಾದ್ರಿ ನಿವಾಸಿಗಳೇ ವಿಜ್ಞಾನಿಗಳನ್ನು ಕೇಳಬಹುದು. ಆಗಲೂ ‘ಅದಕ್ಕೆ ಮೊದಲು ನಮಗೆ ಸರಿಯಾದ ಲಸಿಕೆ ತಯಾರಿಸಿ ಕೊಡಿ’ ಎಂತಲೇ ಕೇಳಬಹುದು.

ಲಸಿಕೆ ಯಾಕೆ ತಯಾರಾಗುತ್ತಿಲ್ಲ? ಆ ಪ್ರಶ್ನೆಗೆ ಉತ್ತರ ಹೇಗೂ ಇರಲಿ, ಮೊದಲು ಯುದ್ಧಾಸ್ತ್ರದ ಬಗ್ಗೆ ತುಸು ನೋಡೋಣ. ಕೆಎಫ್‍ಡಿಯನ್ನು ಮೂಲತಃ ಯುದ್ಧಾಸ್ತ್ರಕ್ಕಾಗಿ ವಿಜ್ಞಾನಿಗಳೇ ರೂಪಿಸಿದ್ದಾರೆ ಎಂಬ ಆಪಾದನೆ ತುಂಬ ಹಿಂದೆಯೇ ಬಂದಿತ್ತು. ಪುಣೆಯ ವೈರಾಣು ಸಂಶೋಧನ ಸಂಸ್ಥೆಯ ವಿಜ್ಞಾನಿಗಳು ರಹಸ್ಯವಾಗಿ ಬ್ರಿಟಿಷ್ ವಿಜ್ಞಾನಿಗಳ ಜೊತೆ ಈ ಕೆಲಸದಲ್ಲಿ ಕೈಜೋಡಿಸಿದ್ದಾರೆ ಎಂಬ ಗುಲ್ಲೆದ್ದಿತ್ತು. ವೈರಾಣು ಸ್ಯಾಂಪಲ್‍ಗಳನ್ನು ಪುಣೆಯಿಂದ ಬ್ರಿಟನ್ನಿಗೆ ಸಾಗಿಸಲಾಗಿದೆ, ‘ತನಿಖೆ ಆಗಬೇಕು’ ಎಂದು ಮುಂಬೈ ಹೈಕೋರ್ಟಿನಲ್ಲಿ 1998ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೂ ದಾಖಲಾಗಿತ್ತು. ಸೂಕ್ತ ಸಾಕ್ಷ್ಯಗಳಿಲ್ಲದೆ ಖಟ್ಲೆ ಬಿದ್ದು ಹೋಗಿತ್ತು. ತಾರ್ಕಿಕವಾಗಿಯೂ ಈ ಮೊಕದ್ದಮೆ ಅಸಂಗತವೇ ಸರಿ. ಏಕೆಂದರೆ, ನಮ್ಮದೊಂದು ಉಗ್ರ ವೈರಾಣುವನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಿದರೆ, ಆ ದೇಶದವರು ಹೆದರಬೇಕೆ ವಿನಾ ನಾವೇಕೆ ಚಿಂತೆ ಪಡಬೇಕು? ಅದೇನು ಚಿನ್ನವೆ, ಶಿಲ್ಪವೆ, ಹುಲಿಯುಗುರೆ?

ಆದರೂ ಸಂಶಯದ ಹೊಗೆ ಅಡಗಿಲ್ಲ. ಏಕೆಂದರೆ, ‘ಕೆಎಫ್‍ಡಿಯನ್ನು ಯುದ್ಧಾಸ್ತ್ರವನ್ನಾಗಿ ರೂಪಿಸಲು ಸಾಧ್ಯ’ ಎಂಬುದರ ಕುರಿತು ವೈಜ್ಞಾನಿಕ ಪ್ರಬಂಧಗಳು ಬೇಕಷ್ಟಿವೆ. ಅಮೆರಿಕದ ಭೂಸೇನೆಯೇ ಕೆಎಫ್‍ಡಿ ಸಂಶೋಧನೆಗೆ ಹಣ ನೀಡಿದ ದಾಖಲೆಗಳಿವೆ. ಪಕ್ಷಿತಜ್ಞ ಸಲೀಂ ಅಲಿಯವರೇ ಅದರಲ್ಲಿ ಸಿಲುಕಿ 1968ರಲ್ಲಿ ದೊಡ್ಡ ವಿವಾದವೂ ಆಗಿತ್ತು. ಆಗಿದ್ದಿಷ್ಟೆ: ದೇಶದಿಂದ ದೇಶಕ್ಕೆ ವಲಸೆ ಹೋಗುವ ಪಕ್ಷಿಗಳನ್ನು ಜೀವಾಣು ಅಸ್ತ್ರಗಳಂತೆ ಬಳಸಲು ಸಾಧ್ಯವೇ ಎಂಬುದನ್ನು ಪರೀಕ್ಷಿಸಲು ಅಮೆರಿಕದ ಮಿಲಿಟರಿ ಬಯಸಿತ್ತು. ಪಕ್ಷಿಗಳ ವಲಸೆ ವೈಖರಿಯ ಅಧ್ಯಯನಕ್ಕೆ ಅದು ಹಣ ನೀಡಲು ಮುಂದೆ ಬಂತು. ಸಲೀಂ ಅಲಿಯವರಿಗೆ ಅಧ್ಯಯನಕ್ಕೆ ಸಹಾಯಧನ ಬೇಕಿತ್ತಷ್ಟೇ ವಿನಾ ಅದರ ಫಲಿತಾಂಶವನ್ನು ಯಾರು ಹೇಗೆ ಬಳಸುತ್ತಾರೆ ಎಂಬುದರ ಚಿಂತೆ ಇರಲಿಲ್ಲ. ಆ ಹಣದಿಂದ ಅವರು ವಲಸೆ ಪಕ್ಷಿಗಳ ಕಾಲಿಗೆ ಬಳೆ ತೊಡಿಸಿ ಹಾರಿಬಿಟ್ಟು, ಮರುವರ್ಷ ಮತ್ತೊಮ್ಮೆ ಅವು ಇಲ್ಲಿಗೆ ಬಂದವೇ ಎಂದು ನೋಡಬಲ್ಲ ಶಿಷ್ಯರ ಒಂದು ಪಡೆಯನ್ನೇ ಸೃಷ್ಟಿಸಿದರು. ಸೋವಿಯತ್ ರಷ್ಯದಲ್ಲಿ ಆಗಾಗ ಕಾಣಿಸಿಕೊಳ್ಳುವ ಮಿದುಳು ಜ್ವರಕ್ಕೂ ನಮ್ಮ ಕೆಎಫ್‍ಡಿಗೂ ತುಂಬ ಹೋಲಿಕೆ ಇತ್ತು. ಆ ರೋಗಾಣುವಾಹಕ ಉಣ್ಣಿಗಳೇ ಪಕ್ಷಿಗಳ ಮೂಲಕ ಗುಡವಿ, ಸೊರಬ- ಸಾಗರದ ಕಡೆ ಹಬ್ಬಿರಬಹುದೆ ಎಂಬ ಪ್ರಶ್ನೆ ಎದ್ದಾಗ, ಸಲೀಂ ಅಲಿ ಅದರ ಪರೀಕ್ಷೆಗೆ ತಮ್ಮ ನೆಚ್ಚಿನ ಶಿಷ್ಯ ಪಿ.ಕೆ. ರಾಜಗೋಪಾಲನ್ ಎಂಬವರನ್ನು ಕಳಿಸಿದರು.

ಈ ಯುವ ವಿಜ್ಞಾನಿ 1960ರ ದಶಕದಲ್ಲಿ ಸೊರಬಕ್ಕೆ ಬಂದರು. ಸೈಬೀರಿಯಾ ಕಡೆಯಿಂದ ಬರುವ ಅದೆಷ್ಟೊ ಪಕ್ಷಿಗಳನ್ನು ಹಿಡಿದು ಪರೀಕ್ಷೆ ಮಾಡಿದರು. ಯಾವ ಹಕ್ಕಿಯಲ್ಲೂ ಉಣ್ಣಿಗಳು ಸಿಗಲಿಲ್ಲ. ಹಾಗಾಗಿ ಇಲ್ಲಿನ ಉಣ್ಣಿಗಳು, ಅದರೊಳಗಿನ ವೈರಸ್‍ಗಳು ಇಲ್ಲಿನವೇ ಹೌದು ಎಂದು ತೀರ್ಮಾನಿಸಿ ಡಾಕ್ಟರೇಟ್ ಪಡೆದರು. ಆದರೆ ಇವರ ಸಂಶೋಧನೆಗೆ ಅಮೆರಿಕದ ಮಿಲಿಟರಿಯ ಸಹಾಯಧನ ಬಳಸಿದ್ದು ದೊಡ್ಡ ರಾದ್ಧಾಂತವೇ ಆಯಿತು. ಸೋವಿಯತ್ ರಷ್ಯ ಮತ್ತು ಅಮೆರಿಕ ಎರಡರೊಂದಿಗೆ ಹದ ಬಾಂಧವ್ಯ ಬಯಸಿದ್ದ ನೆಹರೂ ಇಕ್ಕಟ್ಟಿಗೆ ಸಿಲುಕಿದರು. ಆನಂತರವೇ ಸಂಶೋಧನೆಗೆ ವಿದೇಶೀ ಧನಸಹಾಯ ಪಡೆಯುವವರಿಗೆ ಕಟ್ಟುನಿಟ್ಟಿನ ನಿಬಂಧನೆಗಳು ಜಾರಿಗೆ ಬಂದವು.

ಈಗಲೂ ಅಮೆರಿಕದ ರಕ್ಷಣಾ ಸಂಶೋಧನಾ ಪ್ರಾಧಿಕಾರ (DARPA ದರ್ಪ) ಎಲ್ಲಿ, ಹೇಗೆ ನುಸುಳುತ್ತದೆ ಹೇಳುವಂತಿಲ್ಲ. ಸದ್ಯ ಅದು ಬಿಳಿನೊಣ, ಹಿಟ್ಟು ತಿಗಣೆಗಳಂಥ ಕೀಟಗಳ ಮೂಲಕವೇ ಅಸ್ವಸ್ಥ ಬೆಳೆಗಳಿಗೆ ಕೃಷಿ ಔಷಧಗಳ ಚುಚ್ಚುಮದ್ದನ್ನು ನೀಡುವ ಹೊಸ ವಿಧಾನಕ್ಕೆ ಧನಸಹಾಯ ಮಾಡುತ್ತಿದೆ. ಅದಕ್ಕೆಂದೇ ‘ಕೀಟಮಿತ್ರ’ ಕುಲಾಂತರಿ ವೈರಾಣುಗಳು ಸೃಷ್ಟಿಯಾಗಿದ್ದು ‘ಅದು ಜೈವಿಕ ಅಸ್ತ್ರದ ಹೊಸರೂಪ’ ಎಂದು ಐರೋಪ್ಯ ವಿಜ್ಞಾನಿಗಳು ಆಕ್ಷೇಪಣೆ ಎತ್ತಿದ್ದಾರೆ.

ಅರಲಗೋಡಿಗೆ ಮತ್ತೆ ಹೋಗೋಣ: ಅಲ್ಲಿಗೆ ದಾಳಿಯಿಟ್ಟ ರೋಗಗ್ರಸ್ತ ಕೋತಿಗಳ ಕತೆ ಹೇಗೂ ಇರಲಿ, ಸಂತ್ರಸ್ತರಿಗೆ ನೆರವು ನೀಡಲು ಧಾವಿಸಿದ ಸಹೃದಯರ ಪಡೆಯನ್ನು ನಾವಿಲ್ಲಿ ನೆನೆಯಬೇಕು. ದಕ್ಷ ಅಧಿಕಾರಿಯೆಂದು ಹಿಂದೆಯೇ ಸಮ್ಮಾನ ಪಡೆದಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ ಅದೇ ಊರಲ್ಲಿ ವಾಸ್ತವ್ಯ ಹೂಡಿ ಸರ್ಕಾರಿ ವ್ಯವಸ್ಥೆಯನ್ನು ಬಲಪಡಿಸಿದ್ದು; ರೋಗಿಗಳ ನೆರವಿಗಾಗಿ ಚುನಾಯಿತ ಪ್ರತಿನಿಧಿಗಳಾದ ಹಾಲಪ್ಪ, ರಾಜಪ್ಪ ಶ್ರಮಿಸಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಮೋಹನ್ ಅಹರ್ನಿಶಿ ಡ್ಯೂಟಿ ಮಾಡಿದ್ದು, ಸಾಗರದ ವೃಕ್ಷಲಕ್ಷ ಸಂಸ್ಥೆ ಹಾಗೂ ಶೇಡ್ತಿಕೆರೆಯ ವಿಜ್ಞಾನ ಸಂಘದ ಮಿತ್ರರು ಚುನಾವಣೆಯ ವೈಷಮ್ಯವನ್ನೂ ಬದಿಗಿಟ್ಟು ತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ, ಜಾನುವಾರುಗಳನ್ನು ವರದಾಶ್ರಮಕ್ಕೆ ಸಾಗಿಸಲು ನೆರವಾಗಿದ್ದು- ಇವೆಲ್ಲವೂ ನಮ್ಮ ಗ್ರಾಮೀಣ ಸಮಾಜದ ಹೆಮ್ಮೆಯ ಸಾಧನೆಗಳು.

ಕ್ಯಾಸನೂರು ರೋಗಾಣು- ಅದು ಯುದ್ಧಾಸ್ತ್ರವಂತೂ ಆಗಿರಲಿಕ್ಕಿಲ್ಲ. ಆದರೆ ಯುದ್ಧದೋಪಾದಿಯಲ್ಲಿ ಜನರನ್ನು ಅದು ಸಂಘಟಿಸಿದ್ದಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT